ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿಗಳು ಛಿದ್ರವಾಗಿವೆ, ಹೊಸ ಕನಸು ಮೊಳೆಯುತ್ತಿವೆ...

Last Updated 31 ಜನವರಿ 2015, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಲರವ. ‘ಇಕ್ರಲಾ ವದೀರ್ಲಾ’ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ದನಿ ಮೊಳಗಿಸಿದ ಸಿದ್ಧಲಿಂಗಯ್ಯ ಈ ಸಮ್ಮೇಳನದ ಅಧ್ಯಕ್ಷರು. ‘ಸಾಪ್ತಾಹಿಕ ಪುರವಣಿ’ ನಡೆಸಿದ ವಿಶೇಷ ಸಂದರ್ಶನದಲ್ಲಿ, ಸಿದ್ಧಲಿಂಗಯ್ಯನವರ ಕನ್ನಡ ಚಿಂತನೆಗಳು ಹಾಗೂ ಸಮ್ಮೇಳನ ಅಧ್ಯಕ್ಷರಾಗಿ ಅವರ ನಿರೀಕ್ಷೆಗಳು ವ್ಯಕ್ತವಾಗಿವೆ.

* ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನಿರಾಕರಿಸಿದಾಗ ದೇವನೂರ ಮಹಾದೇವ ಅವರು ಕನ್ನಡದ ಉಳಿವಿಗಾಗಿ ಎತ್ತಿದ ಪ್ರಶ್ನೆಗಳಿಗೆ ನಿಮ್ಮ ಪ್ರತಿಕ್ರಿಯೆ ಏನು?
ಮಹಾದೇವ ಅವರು ಎತ್ತಿರುವ ಪ್ರಶ್ನೆಗಳು ಸಮಂಜಸವಾಗಿವೆ. ಪ್ರಾಥಮಿಕ ಶಿಕ್ಷಣ ಮಾಧ್ಯಮ ಮಾತೃಭಾಷೆಯಲ್ಲೇ ಇರಬೇಕು ಎಂಬ ಅವರ ಅಭಿಪ್ರಾಯ, ಎಲ್ಲಾ ಶಿಕ್ಷಣ ತಜ್ಞರ ಅಭಿಪ್ರಾಯವೂ  ಆಗಿದೆ. ಶಿಕ್ಷಣ ಮತ್ತು ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂಥ ಈ ಪ್ರಶ್ನೆಗಳನ್ನು ಅವರು ಸಮ್ಮೇಳನದ ಅಧ್ಯಕ್ಷತೆಯನ್ನು ಒಪ್ಪಿಕೊಂಡು ಲಕ್ಷಾಂತರ ಕನ್ನಡಿಗರ ಮುಂದೆ ಇಟ್ಟಿದ್ದರೆ ಅವರ ಪ್ರಶ್ನೆಗಳಿಗೆ ದೊಡ್ಡ ಬಲ ಬರುತ್ತಿತ್ತು. ಅವರು ಯಾವ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೋ ಅದೇ ವಿಚಾರಗಳನ್ನು  ನಾನು ಸಮ್ಮೇಳನದ ಅಧ್ಯಕ್ಷ ಪೀಠದಿಂದ ಪ್ರಧಾನವಾಗಿ ಪ್ರತಿಪಾದಿಸುತ್ತೇನೆ.

* ರಾಜ್ಯದಲ್ಲಿ ದಲಿತ ತಾತ್ವಿಕತೆಯನ್ನು ರೂಪಿಸಿದ ಪ್ರಮುಖರಲ್ಲಿ ಒಬ್ಬರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಅವಕಾಶ ಮೊದಲ ಬಾರಿಗೆ ದೊರಕಿದೆ. ಈ ಅವಕಾಶ ನಿಮಗೇ ಲಭಿಸಿದ್ದಕ್ಕೆ ಏನನ್ನಿಸುತ್ತದೆ?
ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವುದರಲ್ಲಿ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರಿಗೆ ಹಾಗೂ ಕಸಾಪ ಕಾರ್ಯಕಾರಿ ಸಮಿತಿಗೆ ಧನ್ಯವಾದ ಹೇಳುತ್ತೇನೆ.
ಎಂಬತ್ತು ಸಮ್ಮೇಳನಗಳನ್ನು ನಡೆಸಿದ ಪರಿಷತ್ತಿನ ಅಧ್ಯಕ್ಷರಿಗೆ ಇದರ ಬಗ್ಗೆ ಚಿಂತನೆ ಮೂಡದೇ ಇರಲು ಹಲವಾರು ಕಾರಣಗಳಿರಬಹುದು. ಆದರೆ ಹಾಲಂಬಿ ಅವರು ತೋರಿದ ಸಾಮಾಜಿಕ ಕಾಳಜಿ, ದಿಟ್ಟತನ ಮೆಚ್ಚತಕ್ಕದ್ದು.

‘‘ದಲಿತ – ಬಂಡಾಯ ಮನೋಧರ್ಮ ಇರುವ ಅನೇಕ ತರುಣರು ಯಾವುದೇ ಹಣೆಪಟ್ಟಿ ಇಲ್ಲದೆಯೂ ಅದ್ಭುತವಾಗಿ ಬರವಣಿಗೆ ಮಾಡುತ್ತಿದ್ದಾರೆ. ಅವರು ಸಂಘಟನೆಗಿಂತ ಸಾಹಿತ್ಯದ ಕಡೆ ಹೆಚ್ಚು ಗಮನ ಕೊಡುತ್ತಿರುವುದು ಆರೋಗ್ಯಕರ ಲಕ್ಷಣ. ಸಂಘಟನೆಯ ಸದಸ್ಯನಾದ ಮಾತ್ರಕ್ಕೆ ಲೇಖಕ ಆಗುವುದಿಲ್ಲ.’’

* ಈ ಸಲ ದಲಿತರನ್ನೇ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸುವುದಾಗಿ ಕಸಾಪ ಅಧ್ಯಕ್ಷರು ಬಹಿರಂಗವಾಗಿಯೇ    ಹೇಳಿದ್ದರು. ಆದಕಾರಣ ಈ ಬಾರಿಯ ಅಧ್ಯಕ್ಷ ಆಯ್ಕೆಯ ಮಾನದಂಡಗಳಲ್ಲಿ ‘ಕೋಟಾ’ ಅಂಶವೇ ಪ್ರಮುಖವಾಯಿತೆ?
ಈ ಸಲದ ಅಧ್ಯಕ್ಷತೆಯನ್ನು ಕೊಡುವಾಗ ಪ್ರತಿಭೆ, ಸಾಧನೆಯನ್ನೇ ಮಾನ ದಂಡ ವಾಗಿ ಇಟ್ಟುಕೊಳ್ಳಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷರೇ ಹಲವಾರು ಕಡೆ ಹೇಳಿದ್ದಾರೆ. ಸಾಧನೆಯನ್ನು ಮಾನದಂಡವಾಗಿ ಇಟ್ಟುಕೊಂಡೇ, ತೀರಾ ಕೆಳವರ್ಗದವರಿಗೆ ಸಿಗದಿದ್ದ ಅವಕಾಶವನ್ನು ಕಲ್ಪಿಸಿದ್ದೇವೆ ಅನ್ನುವುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಈ ಸಮ್ಮೇಳನದ ಅಧ್ಯಕ್ಷತೆಯನ್ನು ನಾನು ಸಂತೋಷದಿಂದಲೇ ಒಪ್ಪಿಕೊಂಡಿದ್ದೇನೆ.

* ವಿಧಾನ ಪರಿಷತ್‌ ಸದಸ್ಯತ್ವದಿಂದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವರೆಗಿನ ಹಲವು ಮಹತ್ವದ ಸ್ಥಾನಮಾನಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಸಂದರ್ಭಗಳಲ್ಲಿ ಮಹಾದೇವ ಅವರು ಒಲ್ಲೆ ಅಂದದ್ದೆಲ್ಲ ನಿಮಗೆ ಒಲಿದಿದೆಯಲ್ಲ...?
ಮಹಾದೇವ ಅವರ ಬಗ್ಗೆ ನನಗೆ ವಿಶೇಷವಾದ ಅಭಿಮಾನ ಇದೆ. ಅವರದು ಪ್ರೀತಿಯ ವ್ಯಕ್ತಿತ್ವ.   ಹೊಣೆಗಾರಿಕೆಯ ಸ್ಥಾನಗಳನ್ನು ಅವರು ಬಡಪಟ್ಟಿಗೆ ಒಪ್ಪಿಕೊಳ್ಳುವುದಿಲ್ಲ. ಆದರೆ, ಸಮಾಜ ಅಥವಾ ಸರ್ಕಾರ ಇಲ್ಲಿಯವರೆಗೆ ನನಗೆ ವಹಿಸಿದ ಯಾವುದೇ ಗುರುತರ ಜವಾಬ್ದಾರಿಯನ್ನು ನಾನು  ನಿರಾಕರಿಸಿಲ್ಲ.

ಅದನ್ನು ಒಪ್ಪಿಕೊಂಡು ಆ ಸ್ಥಾನದ ಗೌರವಕ್ಕೆ ಚ್ಯುತಿ ಬರದಂತೆ, ನಾನು ನಂಬಿಕೊಂಡು ಬಂದ ವಿಚಾರಧಾರೆಯನ್ನು, ಆಶಯಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡಲು ಪ್ರಯತ್ನಿಸಿದ್ದೇನೆ. ದೇವನೂರ ಅವರು ಸ್ಥಾನಮಾನಗಳಿಂದ ಹೊರಗಿದ್ದು ಯಾವ ವಿಚಾರಗಳನ್ನು ಹೇಳಿದ್ದಾರೋ, ಹೇಳುತ್ತಿದ್ದಾರೋ ಆ ವಿಚಾರಗಳನ್ನು ವ್ಯವಸ್ಥೆ ಒಳಗಿದ್ದು ಹೇಳುವ, ಅನುಷ್ಠಾನಕ್ಕೆ ಪ್ರಯತ್ನಿಸುವ ರೀತಿ ನನ್ನದು.

* ಸಾಹಿತ್ಯ ಮತ್ತು ರಾಜಕಾರಣದ ನಡುವಣ ಸಂಬಂಧ ಹೇಗಿರಬೇಕು?
ಸಾಹಿತ್ಯ ಮತ್ತು ರಾಜಕಾರಣದ ನಡುವೆ ದೊಡ್ಡ ರೀತಿಯ ವ್ಯತ್ಯಾಸ ಕಾಣುವುದಿಲ್ಲ. ಸಾಹಿತಿಗಳು ಕನಸು ಕಾಣುತ್ತಾರೆ. ಆಡಳಿತಾರೂಢ ರಾಜಕಾರಣಿಗಳಿಗೆ ಅದನ್ನು ನನಸು ಮಾಡುವ ಶಕ್ತಿ ಇದೆ.

ನಾನು ಬಹಿರಂಗ ಸಭೆಗಳಲ್ಲಿ, ಬೀದಿಗಳಲ್ಲಿ, ಮೆರವಣಿಗೆಗಳಲ್ಲಿ ಹೋರಾಟದ ಭಾಗವಾಗಿ  ಯಾವ ವಿಚಾರಗಳನ್ನು ಹೇಳುತ್ತಿದ್ದೆನೋ ಅದೇ ವಿಚಾರಗಳನ್ನು ವಿಧಾನ ಪರಿಷತ್‌ ಸದಸ್ಯನಾಗಿ ಸದನದ ಒಳಗೆ  ಮಂಡಿಸಿದ್ದೇನೆ. ಪ್ರಗತಿಪರವಾದ ಹಲವು ಕಾಯ್ದೆಗಳು ಜಾರಿಯಾಗಲು ಕಾರಣನಾಗಿದ್ದೇನೆ. ದಲಿತರು, ಬಡವರಿಗೆ ಸಂಬಂಧಿಸಿದ ವಿಷಯದಲ್ಲಿ ಹಾಗೂ ಕನ್ನಡದ ಪರವಾಗಿ ಸದನದಲ್ಲಿ ದನಿ ಎತ್ತಿದ್ದೇನೆ. ನಾನು ಸದಸ್ಯನಾಗಿದ್ದ 12 ವರ್ಷಗಳ ಅವಧಿಯಲ್ಲಿ ಸರ್ಕಾರದಿಂದ ಒಂದು ಉತ್ತರವೂ ಇಂಗ್ಲಿಷ್‌ನಲ್ಲಿ ಬರದಂತೆ ನೋಡಿಕೊಂಡಿದ್ದೇನೆ. ಇದಕ್ಕೆ ಎಂ.ಸಿ. ನಾಣಯ್ಯ, ಕೆ.ಎಚ್‌. ಶ್ರೀನಿವಾಸ್‌, ಡಿ.ಎಚ್‌. ಶಂಕರಮೂರ್ತಿ, ಎಂ.ಆರ್‌. ತಂಗಾ, ಬಿ.ಆರ್‌. ಪಾಟೀಲ್‌, ವಿ.ಆರ್‌. ಸುದರ್ಶನ್‌ ಮತ್ತಿತರ ಹಿರಿಯ ಸದಸ್ಯರು ಹೃದಯ ತುಂಬಿ ಬೆಂಬಲ ನೀಡಿದರು.

* ಸಾಹಿತಿಯಾದವರು ರಾಜಕೀಯದಲ್ಲಿ ಎಷ್ಟು ಮುಂದಕ್ಕೆ ಹೋಗಬಹುದು?
ಅಧಿಕಾರಸ್ಥರಲ್ಲಿ ಜನಪರ ಕಾಳಜಿಯ ಪ್ರಮಾಣ ಬಲವಾಗಿರುವತನಕ, ರಾಜಕಾರಣ ವನ್ನು ಬದಲಾವಣೆಯ ಸಾಧನ ಎಂದು ತಿಳಿದವರು ಸಕ್ರಿಯವಾಗಿರಬಹುದು. ಆದರೆ ಕಾಳಜಿಯ ಪ್ರಮಾಣ ಕಡಿಮೆ ಆದಷ್ಟೂ ಬಡವರ ಪರವಾದ ರಾಜಕಾರಣ ದುರ್ಬಲವಾಗುತ್ತದೆ. ಆದ್ದರಿಂದ ಅಧಿಕಾರಸ್ಥರಲ್ಲಿ ಜನಪರ ಕಾಳಜಿ ಸದಾ ಜಾಗೃತವಾಗಿರುವಂತೆ ಸಮಾಜ ಎಚ್ಚರ ವಹಿಸಬೇಕು.

ನಮ್ಮ ಮುಖಂಡರಲ್ಲಿ ಅನೇಕರು ಒಳ್ಳೆಯ ಕೆಲಸ ಮಾಡಿದ್ದಾರೆ. ರಾಮಕೃಷ್ಣ ಹೆಗಡೆ ಅವರು ನಜೀರ್‌ ಸಾಬ್‌ ಮೂಲಕ ಇಡೀ ರಾಜ್ಯಕ್ಕೆ ನೀರು ಕೊಟ್ಟರು. ಅಧಿಕಾರ ವಿಕೇಂದ್ರೀಕರಣ ಸಾಧಿಸಿದರು. ದೇವೇಗೌಡರು ಬಡವರ ಪರವಾದ ಅನೇಕ ಕೆಲಸಗಳನ್ನು ಮಾಡಿದರು. ಯಡಿಯೂರಪ್ಪ ‘ಭಾಗ್ಯಲಕ್ಷ್ಮಿ’ ಅಂಥ ಯೋಜನೆ ತಂದರು. ಕುಮಾರಸ್ವಾಮಿ ಅವರು ಕನ್ನಡಕ್ಕೆ ಬೆಂಬಲ ಕೊಟ್ಟರು.

ಸಿದ್ದರಾಮಯ್ಯ ಅವರು ಹಿಂದುಳಿದವರ ಹಾಗೂ ಶೋಷಿತರ ಪರವಾಗಿ ದೃಢವಾದ ಕಾಳಜಿ ಇಟ್ಟುಕೊಂಡಿದ್ದಾರೆ. ಈ ಕಾಳಜಿಗಳು ಅನುಷ್ಠಾನಗೊಂಡರೆ ರಾಜಕಾರಣಕ್ಕೆ ಒಂದು ಘನತೆ ಬರುತ್ತದೆ. ಈ ಕಾಳಜಿ ಇರುವವರೆಗೂ ಸಾಹಿತಿ, ರಾಜಕಾರಣದಲ್ಲಿ ಮುಂದು ವರಿಯಬಹುದು. ಅದಕ್ಕೆ ಹಿನ್ನಡೆಯಾದಾಗ ಸಾಹಿತಿಯ ಕಾಳಜಿಗೆ ಕಿಮ್ಮತ್ತು ಉಳಿಯುವುದಿಲ್ಲ. ಅವರ ಮಾತು, ಭಾಷಣಕ್ಕೆ ಸೀಮಿ ತವಾದಂತಾ ಗು ತ್ತದೆ.

* ನೀವು ರಾಜಕಾರಣಕ್ಕೆ ಹೆಚ್ಚು ಸಮಯ ಕೊಟ್ಟಿದ್ದರಿಂದ ಬರವಣಿಗೆ ಮೇಲೆ ಯಾವ ರೀತಿಯ ಪರಿಣಾಮ ಉಂಟಾಯಿತು?
ನಾನು ವಿಧಾನ ಪರಿಷತ್‌ ಸದಸ್ಯನಾದ ಮೇಲೆ ನನ್ನ ಬರವಣಿಗೆಗೆ ಸಮಯ ಕಡಿಮೆಯಾಯಿತು. ಆದರೂ ನಾನು ಬರವಣಿಗೆಯಲ್ಲಿ ಯಾವ ಆಶಯಗಳನ್ನು ಬಿಂಬಿಸುತ್ತಿದ್ದೆನೋ ಅದೇ ಆಶಯಗಳನ್ನು ಪರಿಷತ್‌ನಲ್ಲಿ ಬಿಂಬಿಸಿದೆ. ಒಬ್ಬ ಹೋರಾಟಗಾರನಾಗಿ ನಾನು ಏನು ಹೇಳಿದ್ದೇನೋ ಅದನ್ನೇ ಸದನದ ಒಳಗೆ ಹೇಳಿದ್ದೇನೆ.

ಕೊರಗ ಸಮುದಾಯದ ಗೋಳನ್ನು ಪ್ರಸ್ತಾಪಿಸಿದಾಗ ಆಗ ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ನನ್ನನ್ನು ಕರೆದು, ಆ ಸಮುದಾಯ ಅನುಭವಿಸುತ್ತಿರುವ ಹಿಂಸೆ, ಅವಮಾನಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆದರು. ಪರಿಣಾಮವಾಗಿ ಅಜಲು ನಿಷೇಧ ಕಾಯ್ದೆ ಜಾರಿಯಾಯಿತು. ಇದು ಒಂದು ನಿದರ್ಶನ ಮಾತ್ರ.

* ಶಿಕ್ಷಣ, ಆಧುನಿಕತೆಗಳು ಜಾತಿ ಪ್ರಜ್ಞೆಯನ್ನು ಕಡಿಮೆ ಮಾಡಿವೆಯೇ?
ವ್ಯಕ್ತಿಯ ವ್ಯಕ್ತಿತ್ವ ಜಾತಿರಹಿತ ವ್ಯಕ್ತಿತ್ವ ಆಗುವವರೆಗೂ ಈ ವಿಚಾರದಲ್ಲಿ ಸಾಮಾಜಿಕ ಬದಲಾವಣೆ ತರುವುದು ಕಷ್ಟ. ಜಾತಿ ಪ್ರಜ್ಞೆ ಹೋಗಬೇಕಾದರೆ ಪ್ರತಿಯೊಬ್ಬರೂ ವಿಚಾರವಂತರಾಗಬೇಕು. ಜಾತಿ ವಿರೋಧಿ ಚಳವಳಿಗಳಲ್ಲಿ ಭಾಗವಹಿಸಬೇಕು. ಅಂತರ್ಜಾತಿ ಮದುವೆಗಳಿಗೆ ಪ್ರೋತ್ಸಾಹ ನೀಡಬೇಕು. ಅಂತರ್ಜಾತಿ ವಿವಾಹಿತರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 5ರಷ್ಟು ಮೀಸಲಾತಿ ಒದಗಿಸಬೇಕು.

* ದಲಿತ ಚಳವಳಿ ಕಟ್ಟಿದ ಪ್ರಮುಖರಲ್ಲಿ ನೀವೂ ಒಬ್ಬರು. ಆ ಚಳವಳಿಗೆ ಈಗ ಏನಾಗಿದೆ?
ಚಳವಳಿಗಳು ಛಿದ್ರವಾಗಿವೆ. ಅದಕ್ಕೆ ದಲಿತ ಚಳವಳಿಯೂ ಹೊರತಲ್ಲ. ತುಂಬಾ ಸಂಘಟನೆಗಳು ಹುಟ್ಟಿಕೊಂಡಿವೆ. ಹಲವಾರು ನಾಯಕರಿದ್ದಾರೆ. ಇವರೆಲ್ಲ ಸಮಾನ ಕಾರ್ಯಕ್ರಮದ ಆಧಾರದ ಮೇಲೆ ಒಂದೇ ವೇದಿಕೆಗೆ ಬರಬೇಕು. ಇದನ್ನು ಸಾಧ್ಯವಾಗಿಸಲು ದೇವನೂರ ಅವರು ಮುಂದಾದರೆ ನಾನೂ ಜತೆಗೂಡುತ್ತೇನೆ.

* ಕಸಾಪಕ್ಕೆ ನೂರು ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಅದರ ಕಾರ್ಯ ಸ್ವರೂ ಪದ ಬಗ್ಗೆ ಮರುಚಿಂತನೆ ಅಗತ್ಯವೆ?
ಸಾಹಿತ್ಯ ಸಮ್ಮೇಳನದಲ್ಲಿ ಈ ವರ್ಷ ತೆಗೆದುಕೊಂಡ ನಿರ್ಣಯಗಳ ಸ್ಥಿತಿಗತಿ ಏನಾಯಿತು? ಜಾರಿಯಾದವೇ? ಆಗದಿದ್ದರೆ ಅದಕ್ಕೆ ಎದುರಾಗಿರುವ ತೊಡಕುಗಳೇನು ಎನ್ನುವುದರ ಕುರಿತು ಮುಂದಿನ ಸಮ್ಮೇಳನದಲ್ಲಿ ಒಂದು ಅನುಪಾಲನಾ ವರದಿ ಮಂಡನೆ ಆಗಬೇಕು. ಪರಿಷತ್ತು ಯುವಕರನ್ನು, ಉಪಾಧ್ಯಾಯರನ್ನು ಹೆಚ್ಚು ಹೆಚ್ಚು ಒಳಗೊಳ್ಳಬೇಕು. ಕನ್ನಡದ ಜ್ವಲಂತ ಸಮಸ್ಯೆಗಳ ಬಗ್ಗೆ, ನೆಲ–ಜಲದ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪರಿಷತ್ತು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕು. ಇದಕ್ಕೆ ಸಮ್ಮೇಳನಗಳಿಂದ ಸ್ಫೂರ್ತಿ ಮತ್ತು ಮಾರ್ಗದರ್ಶನ ಸಿಗಬೇಕು.

* ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಕೇಂದ್ರಗಳಲ್ಲಿ ಬೋಧನೆ, ಅಧ್ಯಯನ, ಸಂಶೋಧನೆಗಳು ಮೆರುಗು ಕಳೆದುಕೊಂಡಿವೆಯೇ?
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಜಿ.ಎಸ್‌. ಶಿವರುದ್ರಪ್ಪ ಅವರು ಹಿಂದೆ ವಿದ್ವಾಂಸರ ಪಡೆಯನ್ನೇ ಕಟ್ಟಿದರು. ಅವರಲ್ಲಿ ಎಲ್ಲ ಜಾತಿ–ಜನವರ್ಗದವರು ಇದ್ದರು. ಹಂಪನಾ, ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ, ಚಿದಾನಂದಮೂರ್ತಿ, ಕಂಬಾರ, ಡಿಆರ್‌ಎನ್‌, ಕಿ.ರಂ., ಬರಗೂರು, ಸಿ.ವೀರಣ್ಣ ಮುಂತಾದ ದಿಗ್ಗಜರಿದ್ದರು. ಅವರಿಗೆ ದೊಡ್ಡ ವರ್ಚಸ್ಸಿತ್ತು. ಅವರು ಕರ್ನಾಟಕದಾದ್ಯಂತ ಪರಿಚಿತರಾಗಿದ್ದರು. ಈಗ ಯುವಕರು ಬಂದಿದ್ದಾರೆ. ಅವರಿಗೆ ತಿಳಿದಂತೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬೇರೆ ಕಡೆಯೂ ಅಷ್ಟೇ, ಹೊಸ ನೀರು ಬಂದಿದೆ.

* ರಾಜ್ಯ ಒಡೆಯುವ ಮಾತು ಆಗೀಗ ಪುಟಿದೇಳುತ್ತಿದೆಯಲ್ಲ...
ಇದು ದುರದೃಷ್ಟಕರ. ಏಕೀಕರಣದ ಕೂಗು ಬಂದ ಪ್ರದೇಶದಿಂದಲೇ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಈ ಅಪಸ್ವರ ನಿಲ್ಲಬೇಕಾದರೆ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಸರ್ಕಾರ ಇನ್ನೂ ಹೆಚ್ಚಿನ ಗಮನಹರಿಸಬೇಕು.

* ದಲಿತರ ಏಳಿಗೆಗೆ ಕಲಿಕಾ ಮಾಧ್ಯಮ ಇಂಗ್ಲಿಷ್‌ ಆಗಿರುವುದು ಪೂರಕವಾಗಿ ಒದಗಿಬರಲಿದೆ ಎಂಬ ಮಾತಿದೆ. ಇದನ್ನು ಒಪ್ಪುವಿರಾ?
ಪ್ರಾಥಮಿಕ ಹಂತದವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಹಾಗೂ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿತು ಮುಂದೆ ತಮ್ಮ ಇಷ್ಟವಾದ ಮಾಧ್ಯಮದಲ್ಲಿ ಅಭ್ಯಾಸ ಮಾಡುವ ಅವಕಾಶ ಇದೆ.

ಮಾತೃಭಾಷೆಯನ್ನು ಚೆನ್ನಾಗಿ ತಿಳಿಯದವನು ಇಂಗ್ಲಿಷನ್ನು ತಿಳಿಯಲಾರ. ಮಾತೃಭಾಷೆಯಲ್ಲಿ ಸ್ಪಷ್ಟವಾಗಿ ಯೋಚಿಸಲು ಬಾರದವನು ಇಂಗ್ಲಿಷ್‌ನಲ್ಲಿ ಅದನ್ನು ಸ್ಪಷ್ಟವಾಗಿ ಪ್ರಕಟಿಸಲಾರ. ಮಾತೃಭಾಷಾ ಶಿಕ್ಷಣ ಅಡಿಗಲ್ಲು ಆಗಬೇಕು. ಇದರಿಂದ ದಲಿತರು ಹಾಗೂ ಹಿಂದುಳಿದವರಿಗೇ ಹೆಚ್ಚಿನ ಅನುಕೂಲ. ಅವರಿಗೆ ಕನ್ನಡ ಚೆನ್ನಾಗಿ ಬರುತ್ತದೆ. ಕನ್ನಡ ಚೆನ್ನಾಗಿ ಬರುವವರಿಗೆ ಇಂಗ್ಲಿಷ್‌ ಕೂಡ ಚೆನ್ನಾಗಿ ಬರಲಿಕ್ಕೆ ಸಾಧ್ಯ ಇದೆ. ಎಲ್ಲ ಶಿಕ್ಷಣ ತಜ್ಞರ ಹಾಗೂ ಶಿಕ್ಷಣ ಕುರಿತ ಎಲ್ಲ ಆಯೋಗಗಳ ಅಭಿಪ್ರಾಯ ಇದು. ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು. ಒಳ್ಳೆಯ ಇಂಗ್ಲಿಷನ್ನು ಹೇಳಿಕೊಡಬೇಕು.

* ಚಳವಳಿ ಮೂಲಕ ಸಾಹಿತ್ಯ ಮೂಡಿಬರುವ ಸಾಧ್ಯತೆಗಳು ಕ್ಷೀಣಿಸಿವೆಯೇ?
ದಲಿತ ಹಾಗೂ ಬಂಡಾಯ ಸಾಹಿತ್ಯ, ಸಂಘಟನಾತ್ಮಕವಾಗಿ ಸ್ವಲ್ಪ ದುರ್ಬಲವಾದಂತೆ ಕಾಣುತ್ತವೆ. ಆದರೆ ಈ ಮನೋಧರ್ಮ ಇರುವಂಥ ಅನೇಕ ತರುಣ ಬರಹಗಾರರು ಯಾವುದೇ ಹಣೆಪಟ್ಟಿ ಇಲ್ಲದೆಯೂ ಅದ್ಭುತವಾಗಿ ಬರವಣಿಗೆ ಮಾಡುತ್ತಿದ್ದಾರೆ. ಅವರು ಸಂಘಟನೆಗಿಂತ ಸಾಹಿತ್ಯದ ಕಡೆ ಹೆಚ್ಚು ಗಮನ ಕೊಡುತ್ತಿರುವುದು ಆರೋಗ್ಯಕರ ಲಕ್ಷಣ. ಸಂಘಟನೆಯ ಸದಸ್ಯನಾದ ಮಾತ್ರಕ್ಕೆ ಲೇಖಕ ಆಗುವುದಿಲ್ಲ. ಬರವಣಿಗೆ ಮೂಲಕ ತನ್ನನ್ನು ತಾನು ಸ್ಥಾಪಿಸಿಕೊಳ್ಳಬೇಕು. ಅದು ಆಗುತ್ತಿದೆ. ಒಂದು ರೀತಿಯಲ್ಲಿ ಇದು ಒಳ್ಳೆಯ ಬೆಳವಣಿಗೆ.

* ಚಳವಳಿಯಿಂದಲೇ ಬಂದ ನೀವು ಈಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದೀರಿ. ಚಳವಳಿಗಳ ಸ್ಥಿತಿ ಈಗ ಏನಾಗಿದೆ?
ಚಳವಳಿಗಳು ಪುನಶ್ಚೇತನಗೊಳ್ಳುವ ಕಾಲ ಬಂದಿದೆ. ಜಾಗತೀಕರಣ, ಉದಾರೀಕರಣದ ಬೆಳವಣಿಗೆಗಳಿಂದ ಜನಸಾಮಾನ್ಯರು, ಹಿಂದುಳಿದವರು, ದಲಿತರು ತತ್ತರಿಸಿಹೋಗಿದ್ದಾರೆ. ಜೀವನವೇ ಅತಂತ್ರವಾಗಿದೆ. ಚಳವಳಿಗಳ ಪುನಶ್ಚೇತನಕ್ಕೆ ಪರಿಸ್ಥಿತಿಯೇ ಕಾರಣವಾಗಿದೆ. ಜನರು ನಾಯಕರಿಗಾಗಿ ಕಾಯುವುದಿಲ್ಲ. ಜನಸಾಮಾನ್ಯರಿಂದಲೇ ನಾಯಕರು ಪುಟಿದೇಳುವ ಕಾಲ ಬಂದಿದೆ.

* ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆ ಹೇಗಿದೆ?
ದಲಿತ ಸಾಹಿತ್ಯ ಪರಿಷತ್ತು ಒಳ್ಳೆಯ ಕೆಲಸ ಮಾಡುತ್ತಿದೆ. ಇದು ಬಂಡಾಯ ಸಾಹಿತಿಗಳನ್ನೂ ಒಳ್ಳಗೊಳ್ಳಬೇಕು. ಇವರು ಸಹಧರ್ಮೀಯರು. ದಲಿತೇತರ ವಲಯದಲ್ಲಿ ಪ್ರಗತಿಪರ ಚಿಂತನೆ ಬೆಳೆದಷ್ಟೂ ಅದರಿಂದ ದಲಿತರಿಗೇ ಒಳ್ಳೆಯದು. ಸಮಾಜದ ಒಟ್ಟಾರೆ ಒಳಿತಿನ ದೃಷ್ಟಿಯಿಂದಲೂ ಒಳ್ಳೆಯ ಬೆಳವಣಿಗೆಯಾಗುತ್ತದೆ.

* ಮರ್ಯಾದೆ ಹೆಸರಿನಲ್ಲಿ ಹತ್ಯೆ ಮಾಡುವುದು ಮರ್ಯಾದೆಯೇ?
ಮರ್ಯಾದೆಗೆ ಕುಂದು ಒದಗಿದೆ ಎಂದು ಭಾವಿಸಿ ಅಂತರ್ಜಾತಿ  ವಿವಾಹಿತರಿಗೆ ಹಿಂಸೆ ಕೊಡುವ ಪ್ರವೃತ್ತಿ  ಸರಿಯಲ್ಲ. ಅಂತರ್ಜಾತಿ  ವಿವಾಹವಾಗುವ ತಮ್ಮ ಹೆಣ್ಣು ಮಕ್ಕಳನ್ನು ಪೋಷಕರೇ ಹತ್ಯೆ ಮಾಡುತ್ತಿರುವುದು ಕ್ರೌರ್ಯದ ಪರಮಾವಧಿ. ಮೊದಲು ಹುಡುಗನ ಹತ್ಯೆಗೆ ಯತ್ನಿಸುತ್ತಿದ್ದರು. ಅದೊಂದು ರೀತಿಯ ಕ್ರೌರ್ಯ. ಈಗ ತಮ್ಮ ಮಕ್ಕಳನ್ನೇ ಹತ್ಯೆ ಮಾಡಲು ಹೊರಟಿದ್ದಾರೆ. ಈ ವಿಚಿತ್ರ ಬೆಳವಣಿಗೆ ಇನ್ನೂ ಭಯಾನಕ. ಅಂತರ್ಜಾತಿ  ವಿವಾಹಿತರ ಪರವಾಗಿ ಇಡೀ ಸಮಾಜ ನಿಲ್ಲಬೇಕು.

* ಕನ್ನಡ ಉಳಿಸುವ ಬಗೆ?
ಕನ್ನಡಕ್ಕೆ ಆಡಳಿತದಲ್ಲಿ, ಶಿಕ್ಷಣದಲ್ಲಿ, ನ್ಯಾಯಾಂಗದಲ್ಲಿ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ. ಈ ಬಗ್ಗೆ ಕನ್ನಡಿಗರು ಜಾಗೃತವಾಗಿ ಸತತ ಒತ್ತಡವನ್ನು ಸರ್ಕಾರದ ಮೇಲೆ ತರಬೇಕಾಗಿದೆ. ಎಲ್ಲ ವಲಯಗಳಲ್ಲೂ ಕನ್ನಡದ ಬಳಕೆ ಹೆಚ್ಚಬೇಕು. ಅದಕ್ಕೆ ಬೇಕಾದ ಎಲ್ಲ ಬಗೆಯ ಕ್ರಮಗಳನ್ನೂ ಸರ್ಕಾರ ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT