ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಭೂತವನ್ನು ಬಡಿದೆಬ್ಬಿಸುವ ಹುನ್ನಾರ

Last Updated 28 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕರೀಂನಗರ (ಆಂಧ್ರಪ್ರದೇಶ): ತಮ್ಮ ಅಸ್ಮಿತೆ ಸಾಬೀತುಪಡಿಸಿಕೊಳ್ಳಲು ತೆಲಂಗಾಣ ಜನ ನಡೆಸಿದ ಹೋರಾಟ ಸುದೀರ್ಘವಾದುದು, ನೀಡಿದ ಬಲಿದಾನ­ಗಳು ಲೆಕ್ಕವಿಲ್ಲದಷ್ಟು. ಹೀಗಾಗಿ ‘ನವತೆಲಂಗಾಣ’ಕ್ಕೆ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆಗೆ ರಾಜಕೀಯ­ವಾಗಿ, ಸಾಮಾಜಿಕವಾಗಿ ವಿಶೇಷ ಮಹತ್ವ ಇದೆ.

ಈ ಚುನಾವಣೆ, ಅಭಿವೃದ್ಧಿಯಲ್ಲಿ ಹಿಂದುಳಿದಿರುವ ತೆಲಂಗಾಣದ ಭವಿಷ್ಯದ ದಿಕ್ಸೂಚಿ ಆಗಲಿದೆ. ರಾಜ್ಯವನ್ನು ಮುನ್ನಡೆ­ಸುವ ಮುಂದಿನ ರಾಜಕೀಯ ಹಾದಿಗೂ ದಾರಿದೀಪ ಆಗಲಿದೆ. ಆದರೆ ಪಕ್ಷಗಳ ಹೊಂದಾಣಿಕೆ, ನಾಯಕರ ನೀತಿ–ನಿಲುವುಗಳು ಪ್ರಜ್ಞಾವಂತರನ್ನು ಕಂಗೆಡಿ­ಸಿವೆ. ರೂಢಿಗತ ವರಸೆಗಳನ್ನು, ಅನುಕೂಲ­ಸಿಂಧು ರಾಜಕಾರಣವನ್ನು ಗಟ್ಟಿಗೊಳಿ­ಸುವ ಪ್ರಯತ್ನಗಳಿಗೆ ಎಲ್ಲ ಪಕ್ಷಗಳೂ ನೀರೆರೆಯುತ್ತಿವೆ.

‘ಜಾತಿ ಭೂತದ ಪ್ರಭಾವ ಸೀಮಾಂಧ್ರಕ್ಕೆ ಹೋಲಿಸಿದರೆ ತೆಲಂಗಾಣ ಪ್ರದೇಶದಲ್ಲಿ ತೀರಾ ಕಡಿಮೆ’ ಎಂದು ಹೈದರಾಬಾದ್‌ನಲ್ಲಿ ಉಪನ್ಯಾಸಕ ರಾಗಿ­ರುವ ಮೇಕಲ ಜಯದೇವ್‌ ಹೇಳಿದರು. ಮೆದಕ್‌, ಕರೀಂನಗರ ಭಾಗದಲ್ಲಿ ಸುತ್ತಾ­ಡಿ­ದಾಗ ಅವರು ಪ್ರಸ್ತಾಪಿಸಿದ ಈ ಅಂಶ ಮತ್ತಷ್ಟು ದೃಢವಾಯಿತು. ಅಲ್ಲಿನ ಕುರಿ­ಗಾಹಿಗಳು ಮತ್ತು ರೈತರಲ್ಲಿ ಚುನಾವಣಾ ಬಗ್ಗೆ ಪ್ರಸ್ತಾಪಿಸಿದಾಗ ಪಕ್ಷದ ‘ಚಿಹ್ನೆ’­ಯನ್ನಷ್ಟೇ ಉಲ್ಲೇಖಿಸು­ತ್ತಾರೆ. ಅನೇಕರಿಗೆ ಅಭ್ಯರ್ಥಿಗಳ ಹೆಸರೇ ಗೊತ್ತಿಲ್ಲ. ಜಾತಿ­ವಾದದ ಸೋಂಕು ಮನಸ್ಸನ್ನು ಮಲಿನ­ಗೊಳಿಸುವ ಮಾತಂತೂ ದೂರವೇ.

ಆದರೆ ಜಾತಿ ಭೂತವನ್ನು ಹೇಗಾ­ದರೂ ‘ಬಡಿದೆಬ್ಬಿಸಲೇಬೇಕು’ ಎಂದು ಪಣ ತೊಟ್ಟವರಂತೆ ನೇತಾರರು ಮಾತ­ನಾಡುತ್ತಿದ್ದಾರೆ. ತೆಲಂಗಾಣ ಹೋರಾಟ­ದಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ತಂತ್ರವಾಗಿ ಟಿಆರ್‌ಎಸ್‌ ಅಧ್ಯಕ್ಷ ಕೆ.ಚಂದ್ರಶೇಖರ ರಾವ್‌, ‘ತೆಲಂಗಾಣ ರಾಜ್ಯಕ್ಕೆ ದಲಿತರನ್ನು ಮುಖ್ಯ­ಮಂತ್ರಿ, ಮುಸ್ಲಿಮರನ್ನು ಉಪಮುಖ್ಯ­ಮಂತ್ರಿ ಮಾಡುತ್ತೇನೆ’ ಎಂದು ಸಾರಿದ್ದರು.

ಬದಲಾದ ಮಾತು: ಆದರೆ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದ ಸಾಂವಿ­ಧಾನಿಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಅವರ ಮಾತಿನ ಧಾಟಿ ಬದಲಾ­ಯಿತು. ವಿರೋಧ ಪಕ್ಷಗಳು ಈಗ ಅವರಿಗೆ ‘ದಲಿತ ದ್ರೋಹಿ’ ಹಣೆಪಟ್ಟಿ ಅಂಟಿಸಿವೆ. ಮಗ ಕೆ. ತಾರಕರಾಮ ರಾವ್‌ (ಸಿರಿಸಿಲ್ಲ ವಿಧಾನಸಭಾ ಕ್ಷೇತ್ರ), ಮಗಳು ಕೆ.ಕವಿತಾ (ನಿಜಾಮಾಬಾದ್‌ ಲೋಕಸಭಾ ಕ್ಷೇತ್ರ), ಅಳಿಯ ಟಿ.ಹರೀಶ್‌ ರಾವ್‌ (ಸಿದ್ಧಿಪೇಟ ವಿಧಾನಸಭಾ ಕ್ಷೇತ್ರ) ಅವರಿಗೆ ಟಿಕೆಟ್‌ ನೀಡಿ ಪಕ್ಷವನ್ನು ಕುಟುಂಬ ರಾಜ­ಕಾರಣದ ಪದತಲಕ್ಕೆ ನೂಕಿದ್ದಾರೆ. ‘ಬಂಧು ಮೋಹ ಇಲ್ಲದೇ ಇದ್ದಿದ್ದರೆ ಕೆಸಿಆರ್‌ ವ್ಯಕ್ತಿತ್ವ ಟೀಕೆಗಳಿಗೆ ನಿಲುಕದಷ್ಟು ಎತ್ತರದಲ್ಲಿ ಇರುತ್ತಿತ್ತು’ ಎನ್ನುತ್ತಾರೆ ಅವರದೇ ಪಕ್ಷದ ನಾಯಕರು.

ಕುಟುಂಬ ರಾಜಕಾರಣ ಸೀಮಾಂಧ್ರ­ದಲ್ಲಿ ‘ಪೀಡೆ’ಯಾಗಿ ಪರಿಣಮಿಸಿದೆ. ತೆಲಂಗಾಣದಲ್ಲಿ ಇದು ಆ ಮಟ್ಟಕ್ಕೆ ಹೋಗಿರಲಿಲ್ಲ. ಕೆಸಿಆರ್‌ ಈ ಚುನಾವಣೆ­ಯಲ್ಲಿ ಆ ಹಂತಕ್ಕೆ ಒಯ್ದಿದ್ದಾರೆ. ಮಕ್ಕಳು, ಬಂಧುಗಳು ಮಾತ್ರವಲ್ಲದೆ ಸ್ವತಃ ಅವರೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ.
ತೆಲಂಗಾಣ ಭಾಗದಲ್ಲಿ ಭದ್ರ ನೆಲೆ ಹೊಂದಿದ್ದ, ಬದಲಾದ ಪರಿಸ್ಥಿತಿಯಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ತೆಲುಗು­ದೇಶಂ ಪಕ್ಷ (ಟಿಡಿಪಿ) ತೆಲಂಗಾಣದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೈದರಾ­ಬಾದ್‌ನ ಎಲ್‌.ಬಿ.ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಆರ್‌.ಕೃಷ್ಣಯ್ಯ ಅವರ ಹೆಸರನ್ನು ಪ್ರಕಟಿಸುವ ಮೂಲಕ ಜಾತಿ ದಾಳ ಉರುಳಿಸಿದೆ. ಹಿಂದುಳಿದ ವರ್ಗಗಳ ಹಿತರಕ್ಷಣಾ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣಯ್ಯ, ಚುನಾ­ವಣಾ ಘೋಷಣೆ ಹೊರಬಿದ್ದ ಬಳಿಕ ಟಿಡಿಪಿ ಸೇರಿದವರು.

ಇದರಿಂದ ಪುಳಕಿತರಾದ ಜನಸೇನಾ ಪಕ್ಷದ ನೇತಾರ, ನಟ ಪವನ್‌ ಕಲ್ಯಾಣ್‌ ಹೋದ ಕಡೆಯಲ್ಲೆಲ್ಲ ಟಿಡಿಪಿಯ ಈ ‘ಬದ್ಧತೆ’ಯನ್ನು ಕೊಂಡಾಡುತ್ತಿದ್ದಾರೆ. ‘ನರೇಂದ್ರ ಮೋದಿ ತೆಲಂಗಾಣದ ದುಷ್ಮನ್‌’ ಎಂದು ಕೆಸಿಆರ್‌ ತಮ್ಮ ಭಾಷಣದಲ್ಲಿ ಟೀಕಿಸಿದ್ದರು. ಈ ಟೀಕೆಗೆ ಕೆಂಡಾಮಂಡಲ ಆಗಿರುವ ಪವನ್‌, ‘ಬಿ.ಸಿ. ಪ್ರಧಾನಿ ಅಭ್ಯರ್ಥಿನಿ ತಿಡಿತೇ ತಾಟ ತೀಸ್ತಾ...’ (ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಿ ಅಭ್ಯರ್ಥಿಯನ್ನು ಬೈದರೆ ಚರ್ಮ ಸುಲಿಯುವೆ) ಎಂದು ಗುಡುಗಿದ್ದಾರೆ. ಇಲ್ಲಿ ಪ್ರಧಾನಿ ಅಭ್ಯರ್ಥಿ ಎಂಬುದಕ್ಕಿಂತ ‘ಬಿ.ಸಿ’ ಎನ್ನುವುದಕ್ಕೇ ಒತ್ತು!

ಕಳೆದ ಚುನಾವಣೆ ವೇಳೆ ಇವರ ಅಣ್ಣ ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿ, ಮದರ್‌ ತೆರೇಸಾ ಭಾವಚಿತ್ರ ಮುಂದಿಟ್ಟು­ಕೊಂಡು ಗಾಂಧಿ ತತ್ವ, ತೆರೇಸಾ ಸೇವಾ ಭಾವವೇ ತಮಗೆ ಆದರ್ಶ ಎಂದು ಮತ ಯಾಚಿಸಿದ್ದರು. ಕೊನೆಗೆ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಕೇಂದ್ರ­ದಲ್ಲಿ ಸಚಿವ ಸ್ಥಾನ ದಕ್ಕಿಸಿಕೊಂಡು ಧನ್ಯತೆ ಪಡೆದರು. ಈ ಚುನಾವಣೆಯಲ್ಲಿ ಸೋದರ ಪವನ್‌ ಬಿಜೆಪಿ–ಟಿಡಿಪಿ ಮೈತ್ರಿ­ಕೂಟ ಪರ ಪ್ರಚಾರ ಮಾಡುತ್ತಿದ್ದಾರೆ. ಆದರೆ ತೆಲಂಗಾಣ ಭಾಗದಲ್ಲಿ ಜಾತಿ ಪ್ರಭಾವದಂತೆ, ಸಿನಿಮಾ ಪ್ರಭಾವವೂ ಕಡಿಮೆ.

ಕಾಂಗ್ರೆಸ್‌ ಮುಂದು: ಜಾತಿ ದಾಳ ಉರುಳಿ­ಸುವಲ್ಲಿ ಕಾಂಗ್ರೆಸ್‌ ತನ್ನ ಎದು­ರಾಳಿ­ಗಳಿಗಿಂತ ಒಂದು ಹೆಜ್ಜೆ ಮುಂದಿದೆ. ತೆಲಂಗಾಣದಲ್ಲಿ ಆಧಿಪತ್ಯ ಸಾಧಿಸುವ ಮುಂದಾಲೋಚನೆ ಯಿಂದಲೇ ಈ ಭಾಗದ ದಲಿತ ರಾಜಕಾರಣಿ ದಾಮೋದರ ರಾಜನರಸಿಂಹ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಿ, ಪಕ್ಷದ ತೆಲಂಗಾಣ ಘಟಕದ ಸಾರಥ್ಯವನ್ನು ಹಿಂದುಳಿದ ವರ್ಗಕ್ಕೆ ಸೇರಿದ ಪೊನ್ನಾಲ ಲಕ್ಷ್ಮಯ್ಯ ಅವರಿಗೆ ವಹಿಸಿದೆ. ಆದರೆ ಇವರು ತೆಲಂಗಾಣ ಭಾಗದ ಉದ್ದಕ್ಕೂ ಸುತ್ತಾಡಿ ಉಳಿದ ಅಭ್ಯರ್ಥಿಗಳಿಗೆ ನೆರವಾಗುವುದಿರಲಿ, ತಮ್ಮ ಸ್ವಕ್ಷೇತ್ರದಲ್ಲಿ ದಡ ಸೇರುವುದೇ ಕಡುಕಷ್ಟವಾಗಿ ಪರಿಣಮಿಸಿದೆ. ಆಂದೋಲು ಕ್ಷೇತ್ರದಲ್ಲಿ ದಾಮೋದರ ಅವರಿಗೆ ಟಿಆರ್‌ಎಸ್‌ ಅಭ್ಯರ್ಥಿ, ಹಾಸ್ಯನಟ ಬಾಬು ಮೋಹನ್‌ ಗಟ್ಟಿ ಪೋಟಿ ನೀಡಿದ್ದಾರೆ. ಜನಗಾಂನಿಂದ ಸ್ಪರ್ಧಿಸಿರುವ ಲಕ್ಷ್ಮಯ್ಯ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ.

ಇಷ್ಟಾಗಿಯೂ ಪಕ್ಷಕ್ಕೆ ಬಹುಮತ ಸಿಗುವ ಖಾತರಿ ದೊರೆಯದ ಕಾರ­ಣಕ್ಕೋ ಏನೋ ರಾಹುಲ್‌ ಗಾಂಧಿ ಅವರು ಹೈದರಾಬಾದ್‌ನಲ್ಲಿ ಆಯೋಜಿ­ಸಿದ್ದ ಬಹಿರಂಗ ಸಭೆಯಲ್ಲಿ ‘ತೆಲಂಗಾಣ ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಮಹಿಳೆ ಆಗಬೇಕು ಎಂಬುದು ನನ್ನ ಆಕಾಂಕ್ಷೆ’ ಎಂದು ಹೇಳಿ, ಮಹಿಳಾ ಮತಬುಟ್ಟಿಗೆ ಕೈಹಾಕಿದ್ದಾರೆ. ಆದರೆ ಚುನಾವಣೆಗೆ ಸ್ಪರ್ಧಿಸಲು ಮಾತ್ರ ಅವರ ಪಕ್ಷಕ್ಕೆ ಮಹಿಳೆಯರ ಅಗತ್ಯ ಇಲ್ಲ! ಈ ಮಾತು ಉಳಿದ ಪಕ್ಷಗಳಿಗೂ ಅನ್ವಯಿಸುತ್ತದೆ.

ಜಾತಿ, ಮತ, ಪಂಥಗಳನ್ನು ಪಕ್ಕಕ್ಕಿಟ್ಟು ಹೋರಾಟ ನಡೆಸಿದ ನೆಲ ತೆಲಂಗಾಣ. ವಿಧ್ಯುಕ್ತವಾಗಿ ಇನ್ನೂ ಉದಯಿಸದ ರಾಜ್ಯಕ್ಕೆ ನಡೆಯುತ್ತಿರುವ ಚುನಾವಣೆ­ಯಲ್ಲಿ ಜಾತಿ ನಂಜನ್ನು ಮೆದುಳಿಗೆ ಹತ್ತಿಸಲು ಸರ್ವಪ್ರಯತ್ನಗಳೂ ನಡೆದಿವೆ. ಆದರೆ ಈ ನೆಲದ ಹೋರಾಟದ ಕಾವು ಇನ್ನೂ ಆರಿಲ್ಲ. ಈ ಸಲದ ಚುನಾವಣೆ­ಯಲ್ಲಿ ಅದು ಪ್ರೇರಕ ಸೆಲೆಯಾಗಿ, ಗುಪ್ತಗಾಮಿನಿಯಂತೆ ಕೆಲಸ ಮಾಡುವ ಸಾಧ್ಯತೆಗಳು ಗೋಚರಿಸುತ್ತಿವೆ. ಹೋರಾಟದ ಕಿಚ್ಚು ರಾಜ್ಯದ ಉದ್ದಕ್ಕೂ ಒಂದೇ ರೀತಿ ಕಾವು ಉಳಿಸಿಕೊಂಡಿದೆ ಎಂದು ಹೇಳಲಾಗದಿದ್ದರೂ ಅರ್ಧದಷ್ಟು ಪ್ರದೇಶದಲ್ಲಿ ಅದರ ಬಿಸಿ ಇದೆ. ಕಟ್ಟುವ ಕೆಲಸಕ್ಕೆ ಅದನ್ನು ಸದ್ಬಳಕೆ ಮಾಡ­ಬೇಕಾಗಿದ್ದ ರಾಜಕಾರಣಿಗಳು, ಅಧಿಕಾರ ಲಾಲಸೆಗೆ ದುರ್ಬಳಕೆ ಮಾಡಲು ಮುಂದಾಗಿರುವುದು ವಿಪರ್ಯಾಸ.

ವಿವಿಧ ಪಕ್ಷಗಳ ನಡುವಣ ಹೊಂದಾ­ಣಿ­ಕೆಯಲ್ಲೂ ವಿರೋಧಾಭಾಸಗಳೇ ರಾಚುತ್ತವೆ. ಒಮ್ಮೆ ಬಲಪಂಥೀಯರ ಜತೆ ಮತ್ತೊಮ್ಮೆ ಎಡಪಂಥೀಯರ ಜತೆ ಹೆಜ್ಜೆ ಹಾಕುವ ತತ್ವಗೇಡಿ ನಡೆಗಳೇ ಕಾಣ­ಸಿಗುತ್ತವೆ. ಒಮ್ಮೆ ಕಾಂಗ್ರೆಸ್‌ ಜತೆ ಕೈ­ಜೋಡಿಸಿದ್ದ ಟಿಆರ್‌ಎಸ್‌ ನಂತರ ಟಿಡಿಪಿ ಜತೆಗೂಡಿತು. ಯಾವ ಪ್ರಧಾನ ಪಕ್ಷ­ದೊಂದಿಗೂ ಮೈತ್ರಿ ಇಲ್ಲದೇ ಮೊದಲ ಬಾರಿಗೆ ಸಾಮರ್ಥ್ಯ ಪಣಕ್ಕೆ ಒಡ್ಡಿದೆ. ಕಾಂಗ್ರೆಸ್‌ ಜತೆ ‘ವಿಲೀನ’ದ ನಾಟಕವಾಡು­ತ್ತಲೇ ಬಿಜೆಪಿ ಜತೆ ಹೊಂದಾಣಿಕೆಗೂ ಪ್ರಯತ್ನಿಸಿತ್ತು. ಬಿಜೆಪಿ ವರಿಷ್ಠರಿಗೆ ಟಿಡಿಪಿ ಸಖ್ಯವೇ ಹಿತವಾಗಿ ಕಂಡಿದ್ದರಿಂದ, ಅದು ಕುದುರಲಿಲ್ಲ ಎಂಬ ಮಾತಿದೆ.

ಅನುಕೂಲಸಿಂಧು ಹೊಂದಾಣಿಕೆ­ಯಲ್ಲಿ ಟಿಡಿಪಿ ಒಂದು ಕೈ ಮೇಲೆ ಎಂದೇ ಹೇಳಬಹುದು. ‘ತೃತೀಯ ರಂಗಕ್ಕೂ ಸೈ. ಎನ್‌ಡಿಎಗೂ ಜೈ’ ಎಂಬುದು ಅದರ ಎಡಬಿಡಂಗಿ ನಿಲುವು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಸಿಪಿಐ ನಡುವೆ ಸೀಟು ಹೊಂದಾಣಿಕೆ ಆಗಿದೆ. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಹಾಗೂ ಸಿಪಿಎಂ ನಡುವೆಯೂ ಮೈತ್ರಿ ಮೂಡಿದೆ.

ಈ ಹೊಸ ಹೊಂದಾಣಿಕೆಗಳಿಂದ ಬೇರು ಮಟ್ಟದ ಕಾರ್ಯಕರ್ತರು ದಿಕ್ಕೆಟ್ಟು, ಚೆಲ್ಲಾಪಿಲ್ಲಿಯಾಗಿದ್ದಾರೆ. ತೆಲಂಗಾಣ ‘ಸೆಂಟಿಮೆಂಟ್‌’, ಹೊಸ ಸಮೀಕರಣಗಳು, ನಾಲ್ಕಾರು ಪಕ್ಷಗಳು, ಅವುಗಳ ನಡುವೆ ಮತಗಳ ಹಂಚಿ ಹೋಗುವಿಕೆ, ಹೊಸಬರ ಸ್ಪರ್ಧೆ ಮೊದ­ಲಾದ ಅಂಶಗಳು ಈ ಚುನಾವಣೆಯನ್ನು ಗೋಜಲುಗೊಳಿಸಿವೆ. ಹೆಚ್ಚಿನ ಕ್ಷೇತ್ರಗಳಲ್ಲಿ ಟಿಆರ್‌ಎಸ್‌ ಮತ್ತು ಕಾಂಗ್ರೆಸ್‌ ನಡುವೆ ತುರುಸಿನ ಸ್ಪರ್ಧೆ ಇದೆ ಎಂಬುದಷ್ಟೇ ಈ ಕ್ಷಣಕ್ಕೆ ದಿಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT