ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಬರೆದ ‘ಬ್ಯಾಡಗಿ ಎಪಿಎಂಸಿ’

Last Updated 4 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಹಾವೇರಿ: ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯು (ಎಪಿಎಂಸಿ) ಹೊಸ ಆರ್ಥಿಕ ವರ್ಷದ (2016–17) ವಹಿವಾಟಿನ ಮೊದಲ ದಿನವೇ ದಾಖಲೆ ಬರೆದಿದೆ. 

ಮಾರುಕಟ್ಟೆಯ 68 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ದಿನ 2,00,111 ಚೀಲ (60 ಸಾವಿರ ಕ್ವಿಂಟಲ್‌ಗೂ ಹೆಚ್ಚು) ಮೆಣಸಿನಕಾಯಿ ಆವಕವಾಯಿತು. ಆದರೆ ದರ ಸ್ವಲ್ಪ ಕುಸಿತ ಕಂಡಿದೆ.

ಮಾರುಕಟ್ಟೆಯಲ್ಲಿ ಸೋಮವಾರ ಎಲ್ಲಿ ನೋಡಿದರೂ, ಮೆಣಸಿನಕಾಯಿ ಚೀಲಗಳೇ ಕಂಡುಬಂದವು. ಕೆಲವು ರೈತರು ಚೀಲವನ್ನು ಇಳಿಸಲಾಗದೆ ಲಾರಿಯಲ್ಲೇ ಕಾದು ಕುಳಿತಿದ್ದರು. ಇನ್ನೂ ಕೆಲವರು ಎಪಿಎಂಸಿ ಪ್ರಾಂಗಣದ ರಸ್ತೆಯಲ್ಲೇ ಚೀಲಗಳನ್ನು ಇಳಿಸಿದ್ದರು.

ಬಹೂಪಯೋಗಿ ಮೆಣಸಿನಕಾಯಿ: ಸಾಂಬಾರು ಪದಾರ್ಥವಾಗಿ ಮಾತ್ರವಲ್ಲದೇ ಇಲ್ಲಿನ ಮೆಣಸಿನಕಾಯಿಯಲ್ಲಿ ಎಣ್ಣೆ, ರಾಳ, ಸೌಂದರ್ಯ ವರ್ಧಕ, ಔಷಧಿ ಮತ್ತಿತರ ಅಂಶಗಳು ಹೇರಳವಾಗಿರುವ ಕಾರಣ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದೆ. ಈ ಪೈಕಿ ಬ್ಯಾಡಗಿ ಡಬ್ಬಿ, ಕಡ್ಡಿ ಮತ್ತು ಗುಂಟೂರು ತಳಿಗೆ ಅಧಿಕ ಬೇಡಿಕೆ ಹೆಚ್ಚು.

‘ಬ್ಯಾಡಗಿ ಮಾರುಕಟ್ಟೆಯಲ್ಲಿ ಇ–ಟೆಂಡರಿಂಗ್ ಇದ್ದು, ಅದೇ ದಿನ ಹಣ ಪಾವತಿ ಆಗುತ್ತದೆ. ಅಲ್ಲದೇ, ಪಟ್ಟಣದಲ್ಲಿ 19 ಶೈತ್ಯಾಗಾರಗಳಿವೆ. ವಿದೇಶಿ ಕಂಪೆನಿಗಳೂ ಖರೀದಿಗೆ ಬರುತ್ತಿದ್ದು, ಉಳಿದೆಡೆಗಿಂತ ಇಲ್ಲಿ ಉತ್ತಮ ಬೆಲೆ ಸಿಗುತ್ತಿದೆ’ ಎನ್ನುತ್ತಾರೆ ಆಂಧ್ರಪ್ರದೇಶದ ಉರಕೊಂಡದಿಂದ ಬಂದಿದ್ದ ರೈತ ಹರೀಶ್ಚಂದ್ರ ರೆಡ್ಡಿ.

ಸಿಬ್ಬಂದಿ, ಸೌಕರ್ಯದ ಕೊರತೆ: ರಾಜ್ಯದ ರಾಯಚೂರು, ಧಾರವಾಡ, ಗದಗ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲದೇ ನೆರೆಯ ಆಂಧ್ರಪ್ರದೇಶದಿಂದಲೂ ಮೆಣಸಿನಕಾಯಿ ಆವಕವಾಗುತ್ತಿದ್ದು, ವಹಿವಾಟಿನ ಹಿಂದಿನ ದಿನವೇ ಸಾವಿರಾರು ಲಾರಿಗಳು ಬ್ಯಾಡಗಿಗೆ ಬರುತ್ತವೆ. ಇವುಗಳಿಗೆ ನಿಲ್ಲಲೂ ಇಲ್ಲಿ ಯಾರ್ಡ್ ಇಲ್ಲ.

ರಾಷ್ಟ್ರೀಯ ಹೆದ್ದಾರಿ–4ರ ಮೂಲಕ ಬಂದ ವಾಹನಗಳು ಪಟ್ಟಣದ ಮೂಲಕ ಮಾರುಕಟ್ಟೆ ಪ್ರವೇಶಿಸಲು ಸೂಕ್ತ ರಸ್ತೆಗಳಿಲ್ಲ. ಹೀಗಾಗಿ ವಹಿವಾಟಿನ ದಿನಗಳಾದ ಸೋಮವಾರ ಮತ್ತು ಗುರುವಾರ ಪಟ್ಟಣದಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಆಗುತ್ತಿದೆ.

ಮಾರುಕಟ್ಟೆಯ 78 ಎಕರೆ ಪ್ರಾಂಗಣ ಪ್ರಸ್ತುತ ವಹಿವಾಟಿಗೆ ಸಾಕಾಗುತ್ತಿಲ್ಲ. ಅದನ್ನು ಇನ್ನೂ 50 ಎಕರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಮಾರುಕಟ್ಟೆಯ ಕಾರ್ಯದರ್ಶಿ ಹುದ್ದೆಯೇ ಪ್ರಭಾರ ಆಗಿದ್ದು, ಒಟ್ಟು 23 ಸಿಬ್ಬಂದಿ ಪೈಕಿ 16 ಹುದ್ದೆಗಳು ಖಾಲಿ ಇವೆ.

‘ಮಾರುಕಟ್ಟೆಯ ದಿನ ಇಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾರುಕಟ್ಟೆಯನ್ನು ಅವಲಂಬಿಸಿದ 50 ಸಾವಿರಕ್ಕೂ ಹೆಚ್ಚು ಜನ ಜಮಾಯಿಸುತ್ತಾರೆ. ಇದು ಬ್ಯಾಡಗಿ ಪಟ್ಟಣದ ಜನಸಂಖ್ಯೆಯ (30 ಸಾವಿರ) ಸುಮಾರು ಎರಡು ಪಟ್ಟು. ಇವರಿಗೆ ಬೇಕಾದ ಶೌಚಾಲಯ, ಸಮುದಾಯಭವನ ಮತ್ತಿತರ ಮೂಲಸೌಕರ್ಯವನ್ನು ಸರ್ಕಾರ ಕಲ್ಪಿಸಬೇಕು’ ಎನ್ನುತ್ತಾರೆ ಎಪಿಎಂಸಿ ಸದಸ್ಯ ಜಗದೀಶ ಪಾಟೀಲ.

* * *
ಎಪಿಎಂಸಿ ವಹಿವಾಟು ಗಣನೀಯವಾಗಿ ಹೆಚ್ಚುತ್ತಿದೆ. ದರ ವೀಕ್ಷಿಸಲು ರೈತರಿಗೆ ಅನುಕೂಲವಾಗಲೆಂದು ಪ್ರದರ್ಶನ ಪರದೆ ಹಾಕುವ ಯೋಜನೆ ಇದೆ.

-ಮಹೇಶ ಟಿ.ಎ.,
ಕಾರ್ಯದರ್ಶಿ, ಬ್ಯಾಡಗಿ ಎಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT