ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಧಾರ ಬದಲಿಸಿದ ಬೆಂಗಳೂರು ವಿವಿ

ನಾಲ್ಕು ವರ್ಷದ ಪದವಿ: ಶಿಕ್ಷಣ ತಜ್ಞರ ಸಲಹೆಗೆ ಒಪ್ಪಿಗೆ
Last Updated 30 ಜೂನ್ 2014, 19:48 IST
ಅಕ್ಷರ ಗಾತ್ರ

ರಾಮನಗರ: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ (2014­–15) ಪದವಿ ಕಾಲೇಜುಗಳಲ್ಲಿಯೇ ಮೂರು ವರ್ಷದ ಪದವಿಯ ಜತೆಗೆ ನಾಲ್ಕನೇ ವರ್ಷವೂ ವ್ಯಾಸಂಗ ಮಾಡಿ­ದರೆ ವಿದ್ಯಾರ್ಥಿ ಗಳಿಗೆ ‘ಆನರ್ಸ್‌’ ಗೌರವ ನೀಡಲು ನಿರ್ಧರಿಸಿದ್ದ ಬೆಂಗ­ಳೂರು ವಿಶ್ವವಿದ್ಯಾ­ಲಯ, ಇದೀಗ ತನ್ನ ಈ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.

ದೆಹಲಿ ವಿಶ್ವವಿದ್ಯಾಲಯ ಜಾರಿಗೊಳಿ­ಸಿದ್ದ ನಾಲ್ಕು ವರ್ಷದ ಪದವಿ ಕೋರ್ಸನ್ನು ವಿಶ್ವ­ವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ರದ್ದುಗೊ­ಳಿಸಿದ ಹಿನ್ನೆಲೆಯಲ್ಲಿಯೇ ಬೆಂಗಳೂರು ವಿಶ್ವವಿದ್ಯಾಲಯ ಹಠಾತ್ತನೆ ತನ್ನ ನಿರ್ಧಾರ ಬದಲಿಸಿದೆ.

‘ಯುಜಿಸಿ ಜತೆ ಸಂಘರ್ಷ ಮಾಡಿದ ದೆಹಲಿ ವಿಶ್ವವಿದ್ಯಾಲ ಯವೇ ನಾಲ್ಕು ವರ್ಷದ ಕೋರ್ಸ್‌ ರದ್ದುಗೊಳಿಸಿರು­ವಾಗ, ಬೆಂಗಳೂರು ವಿಶ್ವವಿದ್ಯಾಲಯ ಅದೇ ಮಾದರಿಯನ್ನು ಪದವಿ ಕಾಲೇಜು­ಗಳಲ್ಲಿ ಆರಂಭಿಸಿದರೆ ಮತ್ತೊಂದು ಸಂಘರ್ಷ ಎದುರಾಗ­ಬಹುದು’ ಎಂದು ಕೆಲ ಶಿಕ್ಷಣ ತಜ್ಞರು ಸಲಹೆ, ಸೂಚನೆ ನೀಡಿದ್ದರಿಂದಾಗಿ ವಿಶ್ವವಿದ್ಯಾಲಯ ಮೊದಲಿನ ಪದ್ಧತಿ­ಯನ್ನೇ ಮುಂದುವರಿಸಲು ನಿರ್ಧರಿಸಿದೆ’ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರೊಬ್ಬರು ಮಾಹಿತಿ ನೀಡಿದರು.

ಆದರೆ, ಈ ಶೈಕ್ಷಣಿಕ ಸಾಲಿನಿಂದ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳು ನಿಗದಿತ ವಿಷಯಗಳ ಜತೆಗೆ ಕೆಲ ಪೂರಕ ವಿಷಯಗಳ ಅಧ್ಯಯನ ಮಾಡಬೇಕು ಎಂದು ವಿ.ವಿ ತನ್ನ ವ್ಯಾಪ್ತಿಯ ಪದವಿ ಕಾಲೇಜುಗಳಿಗೆ ಸೂಚಿಸಿದೆ.

ಸಿಬಿಸಿಎಸ್‌ ಜಾರಿ: ಮೊದಲಿನ ಪದ್ಧತಿಯಂತೆಯೇ ಪದವಿ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ಮೂರು ಐಚ್ಛಿಕ ವಿಷಯಗಳು ಮತ್ತು ಎರಡು ಭಾಷಾ ವಿಷಯಗಳನ್ನು ಅಧ್ಯಯನ ಮಾಡುತ್ತಾರೆ. ಜತೆಗೆ ನೂತನವಾಗಿ ಜಾರಿಗೊಳಿಸಿ­ರುವ ‘ಚಾಯ್ಸ್‌ ಬೇಸ್ಡ್‌ ಕ್ರೆಡಿಟ್‌ ಸಿಸ್ಟಮ್‌’ (ಸಿಬಿಸಿಎಸ್‌) ಅಡಿಯಲ್ಲಿ ಮೊದಲ ಸೆಮಿಸ್ಟರ್‌ ಬಿ.ಎ. ಮತ್ತು ಬಿ.ಎಸ್ಸಿ. ವಿದ್ಯಾರ್ಥಿಗಳು ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ವಿಷಯಗಳು ಹಾಗೂ ಬಿ.ಕಾಂ. ಪದವಿಯ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳು ಭಾರತೀಯ ಸಂವಿಧಾನ ಮತ್ತು ಮಾನವ ಹಕ್ಕುಗಳು ವಿಷಯವನ್ನು ಅಧ್ಯಯನ ಮಾಡುತ್ತಾರೆ ಎಂದು ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಪದವಿ ಕಾಲೇಜುಗಳಿಗೆ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಿದೆ.

ಅಲ್ಲದೆ ಬಿ.ಎ. ಮತ್ತು ಬಿ.ಎಸ್ಸಿ. ಪದವಿಯ ಎರಡನೇ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಭಾರತೀಯ ಸಂವಿಧಾನ ಮತ್ತು ಮಾನವ ಹಕ್ಕುಗಳು ವಿಷಯ­ವನ್ನು, ಬಿ.ಕಾಂ ಎರಡನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ ಎಂದು ಸೂಚಿಸಿದೆ.

ರಾಮನಗರ ಜಿಲ್ಲೆಯ ಸುಮಾರು 25 ಪದವಿ ಕಾಲೇಜುಗಳು ಸೇರಿದಂತೆ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿ­ಯಲ್ಲಿನ ಸುಮಾರು 600 ಕಾಲೇಜುಗಳಲ್ಲಿ ‘ಸಿಬಿಸಿಎಸ್‌’ ಪದ್ಧತಿ ಈ ವರ್ಷದಿಂದ ಜಾರಿಗೆ ಬರಲಿದೆ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿ­ಯೊಬ್ಬರು ಮಾಹಿತಿ ನೀಡಿದರು.

ಗೊಂದಲಗಳಿಗೆ ತೆರೆ : ವಿಶ್ವವಿದ್ಯಾಲಯ ಎಲ್ಲ ಪದವಿ ಕಾಲೇಜುಗಳು ಸೋಮವಾರದಿಂದ ಪುನರಾರಂಭವಾಗಿವೆ. ವಿಶ್ವವಿದ್ಯಾಲಯ ಹೊಸದಾಗಿ ಯಾವ ರೀತಿಯ ಕೋರ್ಸ್‌ ಗಳನ್ನು ಜಾರಿಗೊಳಿಸುತ್ತದೆ? ಅದಕ್ಕೆ ಯಾವ ರೀತಿ ಸಿದ್ಧರಾಗಬೇಕು? ದೆಹಲಿ ವಿಶ್ವವಿದ್ಯಾಲಯ ಮತ್ತು ಯುಜಿಸಿ ನಡುವಣ ಜಟಾಪಟಿ ಇಲ್ಲೂ ಸಂಭವಿಸಿದರೆ ಏನು ಮಾಡುವುದು? ಎಂಬ ಇತ್ಯಾದಿ ಗೊಂದಲಗಳು ಕಾಲೇಜು­ಗಳ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿ­ಗಳಲ್ಲಿ ಆವರಿಸಿತ್ತು. ಇದೀಗ ಹಳೆ ಪದ್ಧತಿಯನ್ನೇ ಮುಂದುವರಿಸಿ­ರುವುದು ಅವರ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.

ಕೋರ್ಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ
.‘ಇಲ್ಲಿಯವರೆಗೂ ಜಾರಿಯಿರುವ ಪದವಿ ಕೋರ್ಸ್‌ನಲ್ಲಿ ಯಾವುದೇ ಬದ­ಲಾವಣೆ ಮಾಡಿಲ್ಲ. ಅದನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಜತೆಗೆ ಮೊದಲ ವರ್ಷದ ಎರಡು ಸೆಮಿಸ್ಟರ್‌­ಗಳಲ್ಲಿ ಎರಡೆರಡು ಪೂರಕ ವಿಷಯಗಳನ್ನಷ್ಟೇ ಸೇರಿಸಲಾಗಿದೆ. ಪದವಿ ಕಾಲೇಜುಗಳಲ್ಲಿ ‘ಆನರ್ಸ್‌’ ಪಡೆಯುವ ಚಿಂತನೆಯನ್ನು ಕೈಬಿಡಲಾಗಿದೆ. ಆದರೆ ‘ಆನರ್ಸ್‌’ ಗೌರವ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಈಗಲೂ ಕಲ್ಪಿಸಲಾಗುತ್ತದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ತಿಮ್ಮೇಗೌಡ  ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸ್ನಾತಕ ಪದವಿ ಪೂರೈಸಿದ ವಿದ್ಯಾರ್ಥಿಯು ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಪ್ರವೇಶ ಪಡೆದು, ಒಂದು ವರ್ಷ ಮಾತ್ರ ವ್ಯಾಸಂಗ ಮಾಡಿದರೆ ‘ಆನರ್ಸ್‌’ ಗೌರವ ಕೊಡುವ ಚಿಂತನೆ ಇದೆ. ಎರಡು ವರ್ಷ ಪೂರೈಸಿದವರಿಗೆ ‘ಆನರ್ಸ್‌’ ಗೌರವ ಸಿಗುವುದಿಲ್ಲ, ಬದಲಿಗೆ ಅವರಿಗೆ ಸ್ನಾತಕೋತ್ತರ ಪದವಿಯೇ ದೊರೆಯುತ್ತದೆ’ ಎಂದರು.

‘ಸ್ನಾತಕ ಪದವಿ ಕಾಲೇಜುಗಳಲ್ಲಿಯೇ ಸ್ನಾತಕೋತ್ತರ ಪದವಿ ಕೋರ್ಸ್‌ಗಳೂ ಇದ್ದರೆ, ಅಲ್ಲಿನ ವಿದ್ಯಾರ್ಥಿಗಳಿಗೆ ‘ಆನರ್ಸ್‌’ ಗೌರವ ಪಡೆಯಲು ಅವ­ಕಾಶ ಕಲ್ಪಿಸಲು ಚಿಂತಿಸಲಾಗಿದೆ’ ಎಂದು ಅವರು ಹೇಳಿದರು.  ‘ಮೂರು ವರ್ಷದ ಸ್ನಾತಕ ಪದವಿ­ಯನ್ನು ಪೂರ್ಣಗೊಳಿಸಲಾಗದೆ, ಎರಡು ವರ್ಷ ಪೂರೈಸಿ ವ್ಯಾಸಂಗ ಮೊಟಕುಗೊ­ಳಿಸಿದರೆ ಅವರಿಗೆ ‘ಅಡ್ವಾನ್ಸ್‌ಡ್‌ ಡಿಪ್ಲೊಮಾ’ ಕೊಡಬೇಕು ಎಂಬ ಚಿಂತನೆ ಈಗಲೂ ಮನದಲ್ಲಿದೆ. ಆದರೆ, ಎರಡು ವರ್ಷಕ್ಕೆ ವ್ಯಾಸಂಗ ಮೊಟಕುಗೊಳಿ­ಸುವವರ ಸಂಖ್ಯೆ ಕಡಿಮೆ ಇರುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಬಗ್ಗೆ ಇನ್ನಷ್ಟು ಚರ್ಚೆ ನಡೆಸಲಾಗುವುದು’ ಎಂದು ಅವರು ತಿಳಿಸಿದರು.

‘ಆನರ್ಸ್‌’ ಗೌರವ ನೀಡಲು ವಿರೋಧ
ಪದವಿ ವ್ಯಾಸಂಗ ಬಯಸಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮೂರು ಆಯ್ಕೆಗಳನ್ನು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಯೋಜನೆ ರೂಪಿಸಿತ್ತು. ಎರಡು ವರ್ಷಕ್ಕೆ ಸ್ನಾತಕ ಪದವಿ ಮೊಟಕುಗೊಳಿಸುವವರಿಗೆ ‘ಅಡ್ವಾನ್ಸ್‌ಡ್‌ ಡಿಪ್ಲೊಮಾ’, ಮೂರು ವರ್ಷ ಪೂರೈಸಿದವರಿಗೆ ಪದವಿ ಹಾಗೂ ನಾಲ್ಕನೇ ವರ್ಷವೂ ವ್ಯಾಸಂಗ ಪೂರೈಸಿದವರಿಗೆ ‘ಆನರ್ಸ್‌’ ಗೌರವ ನೀಡಲು ಉದ್ದೇಶಿಸಲಾಗಿತ್ತು.

ಇದಕ್ಕೆ ವಿಶ್ವವಿದ್ಯಾಲಯ ಅಕಾಡೆಮಿಕ್‌ ಕೌನ್ಸಿಲ್‌ ಮತ್ತು ಸಿಂಡಿಕೇಟ್‌ ಸಭೆ ಅನುಮೋದನೆಯೂ ನೀಡಿತ್ತು. ಈ ಸಂಬಂಧ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಪ್ರಾಂಶು­ಪಾಲರ ಸಭೆಯಲ್ಲಿ ವಿಷಯ ಮಂಡಿಸಿ­ದಾಗ, ಕೆಲವರು ಪದವಿ ಕಾಲೇಜಿನಲ್ಲಿ ‘ಆನರ್ಸ್‌’ ಗೌರವ ನೀಡುವ ವಿಚಾರಕ್ಕೆ ಅಸಮ್ಮತಿ ಸೂಚಿಸಿದ್ದರು.

ಪದವಿ ಕಾಲೇಜುಗಳಲ್ಲಿ ನಾಲ್ಕು ವರ್ಷ ವಿದ್ಯಾರ್ಥಿಗಳಿಗೆ ಪಾಠ ಮಾಡ­ಬೇಕು ಎಂದರೆ ಕಾಲೇಜುಗಳಿಗೆ ಹೆಚ್ಚಿನ ಮೂಲ ಸೌಕರ್ಯ ಬೇಕಾಗುತ್ತದೆ. ಬೋಧಕ ಸಿಬ್ಬಂದಿಯೂ ಹೆಚ್ಚು ಬೇಕಾಗುತ್ತದೆ. ಇಲ್ಲದಿದ್ದರೆ ಈಗಿರುವ ಬೋಧಕರ ಕೆಲಸದ ಒತ್ತಡ ಹೆಚ್ಚಿಸ
ಬೇ­ಕಾಗುತ್ತದೆ. ಅದಕ್ಕೆ ಯುಜಿಸಿ ಮತ್ತು ಸರ್ಕಾರ ಅನುಮತಿ ನೀಡಬೇಕಾಗುತ್ತದೆ ಎಂದು ಅಪಸ್ವರ ಎತ್ತಿದ್ದರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT