ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ: ಅವಮಾನ ಮತ್ತು ಸಮಾಧಾನ

ಮುಕ್ತ ಛಂದ
Last Updated 21 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಓದುಗ ಮತ್ತು ಲೇಖಕನ ನಡುವೆ ಕೊಂಡಿಯಂತೆ ಕಾರ್ಯ ಮಾಡಬೇಕಿದ್ದ ಪ್ರಕಾಶಕನು ಇಂದು ಬದಲಾದ ಸನ್ನಿವೇಶದಲ್ಲಿ ‘ಪ್ರಕಾಶನ’ವನ್ನು ‘ಪುಸ್ತಕೋದ್ಯಮ’ವನ್ನಾಗಿ ಸ್ವೀಕರಿಸಿದ್ದಾನೆ. ಉದ್ಯಮವೆಂದ ಮೇಲೆ ಅಲ್ಲೇನಿದ್ದರೂ ಓಡುವ ಕುದುರೆಗಳಿಗೇನೆ ಅಗ್ರಪೂಜೆ. ಹೊಸ ಕುದುರೆಗಳನ್ನು ಪಳಗಿಸುವ, ಪ್ರಯೋಗಿಸುವ ಜರೂರತ್ತು ಇಲ್ಲಿ ಮುಖ್ಯವಾಗುವುದಿಲ್ಲ.

ಹೊಸ ಲೇಖಕನು ತನ್ನ ಕೃತಿಗಳ ಪ್ರಕಾಶನ, ಮಾರಾಟ ಅಥವಾ ಓದುಗರನ್ನು ತಲುಪುವ ಕ್ರಿಯೆಯನ್ನು ತಾನೇ ಮಾಡಬೇಕಲ್ಲದೆ. ಅನ್ಯರನ್ನು ಆಶ್ರಯಿಸುವುದು, ನೆಚ್ಚುವುದು ಮೂರ್ಖತನ ಮತ್ತು ಅಪಮಾನಕರವೆಂಬುದು ನನಗೆ ಇತ್ತೀಚೆಗೆ ಪ್ರಸಿದ್ಧ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಅನುಭವಕ್ಕೆ ಬಂತು.

ಹೆಸರಿಲ್ಲದಿರುವ ಲೇಖಕರ ಮತ್ತು ಪುಸ್ತಕ ಆಯ್ಕೆ ಸಮೀತಿಯ ‘ಸಂಪರ್ಕ’ ಮಾಡಲಾರದವರ ಕೃತಿಗಳು ಗ್ರಂಥಾಲಯವನ್ನು ಸೇರುವುದಿಲ್ಲ, ಅದೃಷ್ಟವಶಾತ್ ಸೇರಿದರೂ ಅವುಗಳೇನು  ಓದುಗರನ್ನು ತಲುಪುವುದಿಲ್ಲ ಎಂದು ನಂಬಿರುವ ನಾನು ಸಾಹಿತ್ಯ ಸಭೆ-ಸಮಾರಂಭಗಳಲ್ಲಿ ಪುಸ್ತಕಗಳನ್ನು ಸಹೃದಯರಿಗೆ ತಲುಪಿಸಬಹುದೆಂದು ತಿಳಿದಿರುವವನು.

ಹಾಗಾಗಿ ಉತ್ಸವವೊಂದರಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದ ನಾನು ನನ್ನದೊಂದು ಕವನ ಸಂಕಲನದ ಪ್ರತಿಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ಪರಿಚಿತರಿಗೆ ಹಂಚಿಕೊಂಡಿದ್ದೆ. ಈ ಕಾರ್ಯಕ್ರಮದ ಕೊನೆಯ ದಿನ ‘ಕನ್ನಡ ಪುಸ್ತಕ ಓದುಗರ ಒಲವುಗಳು’ ಎನ್ನುವ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪ್ರಕಾಶಕ-ಮಾರಾಟಗಾರರೊಬ್ಬರು ‘ಕನ್ನಡ ಪುಸ್ತಕಗಳನ್ನು ಜನ ಓದುತ್ತಿಲ್ಲವೆಂಬುದು ಸುಳ್ಳು, ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕ ಮಳಿಗೆಗಳ ಸಂಖ್ಯೆ ಈಗ ಮೊದಲಿಗಿಂತ ಹೆಚ್ಚಾಗಿದೆ. ಹಾಗೆಯೇ ಮಾರಾಟವೂ  ಹೆಚ್ಚಾಗಿದೆ.

ತಮ್ಮ ಪ್ರಕಾಶನದ ಹೊಸ ಲೇಖಕರೊಬ್ಬರ ಕೃತಿಯೊಂದು ಒಂದೇ ವಾರದಲ್ಲಿ ೨೫೦ ಪ್ರತಿಗಳು ಮಾರಾಟವಾಗಿವೆ’ ಎಂದು ಪುಸ್ತಕೋದ್ಯಮ ಪರವಾದ, ಹೊಸ ಲೇಖಕರ ಬಗ್ಗೆ ಕಳಕಳಿಯ  ಮಾತುಗಳನ್ನಾಡಿದರು. ಇದರಿಂದ ಉತ್ಸಾಹಗೊಂಡು ನಾನು ಗೋಷ್ಠಿ ಮುಗಿದ ಮೇಲೆ ಅವರ ಪುಸ್ತಕ ಮಳಿಗೆಗೆ ಹೋಗಿ ನನ್ನ ಸ್ವಂತ ಪ್ರಕಾಶನದ ಕವನ ಸಂಕಲನವನ್ನು ಅವರ ಕೈಗೆ ಇಟ್ಟು ಇದನ್ನು ನಿಮ್ಮ ಮಳಿಗೆಯಲ್ಲಿ ಇಡಬಹುದೇ? ಎಂದು ಕೇಳಿದೆ.

ಇದರಿಂದವರು ಬೆಂಕಿಯನ್ನೋ, ಅಸ್ಪೃಶ್ಯ ವಸ್ತುವನ್ನೋ ಸೋಕಿದಂತೆ ಕೊಟ್ಟಷ್ಟೇ ವೇಗದಲ್ಲಿ ಪುಸ್ತಕ ನನಗೆ ಮರಳಿಸಿ ಆಗುವುದಿಲ್ಲ ಎಂದುಬಿಟ್ಟರು. ಇಷ್ಟೇ ಹೇಳಿದ್ದರೆ ನನಗೇನು ನೋವೆನಿಸುತ್ತಿರಲಿಲ್ಲ. ಎರಡ್ಹೆಜ್ಜೆ ದಾಟಿ ನಡೆದವನನ್ನು ಕರೆದು–  ‘ನೋಡ್ರೀ ಇಲ್ಲಿ ಬೇಂದ್ರೆಯವರು.. ದೊಡ್ಡ ದೊಡ್ಡ  ಲೇಖಕರೆಲ್ಲವು ಪುಸ್ತಕ ಅದಾವು’ ಎಂದರು. ಅವುಗಳ ಜತೆಗೆ ನಿನ್ನಂಥ ಹೆಸರಿಲ್ಲದವನ ಪುಸ್ತಕಗಳನ್ನಿಡಲು ಆಗುವುದಿಲ್ಲ ಎನ್ನುವಂತೆ ನನ್ನನ್ನು ಕನಿಷ್ಠವಾಗಿ ನೋಡತೊಡಗಿದರು.

‘ನೀವು ಎಷ್ಟು ಓದೀರಿ, ಎಷ್ಟು ಪುಸ್ತಕ ಕೊಂಡೀರಿ..?’ ಅಂತ ಧಾರ್ಷ್ಟ್ಯದಿಂದ ನನ್ನ ಪರೀಕ್ಷೆಗೊಳಪಡಿಸುವರಂತೆ ಪ್ರಶ್ನಿಸತೊಡಗಿದರು. ವೇದಿಕೆಯಲ್ಲಿ ಅವರ ಮಾತಿನ ಧಾಟಿಗೂ ಇಲ್ಲಿನ ಅವರ ವರ್ತನೆಯೂ ಸಂಪೂರ್ಣ ವಿರುದ್ಧವೆನಿಸಿ ನಾನು ಅಕ್ಷರಶಃ  ಅವಾಕ್ಕಾಗಿ ಹೋದೆ! ತುಸು ಸಾವರಿಸಿಕೊಂಡು ‘ನಾನು ಕೆಲವು ಪುಸ್ತಕ ಕೊಂಡೆನ್ರೀ’ ಅಂದೆ. ‘ಹಂಗಾದ್ರೆ ನಿಮ್ಮ ಪುಸ್ತಕಾನೂ ಕೆಲವರು ಕೊಂಡಿರಬಹುದು’ ಅಂದು ಬಿಟ್ಟರು. ಹೆಸರಿಲ್ಲದ ಲೇಖಕನನ್ನು ತುಚ್ಛವಾಗಿ ಕಾಣೂವ ಈ ಮನುಷ್ಯನೊಂದಿಗೆ ಚರ್ಚಿಸಿ, ವಾದಿಸಿ ಪ್ರಯೋಜನವಿಲ್ಲೆಂದು ನಾನು ಅಲ್ಲಿಂದ ಕಾಲ್ತೆಗೆದ.

ಈ ಪ್ರಕಾಶಕ–ಮಾರಾಟಗಾರನ ವರ್ತನೆಯಿಂದ ನಾನು ಸಂಪೂರ್ಣ ಕಂಗಾಲಾಗಿ ನನ್ನಲ್ಲಿ ಕೀಳರಿಮೆ ಕಾಡತೊಡಗಿತು. ಆದರೆ ಇದೇ ಕಾರ್ಯಕ್ರಮದ ಮುಂದಿನ ಗೋಷ್ಠಿಯೊಂದರಲ್ಲಿ  ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಮಾತುಗಳು ಕೊಂಚ ಸಮಾಧಾನ ಮೂಡಿಸಿದವು. ಕವನ ಸಂಕಲನಗಳನ್ನು ಈಗ ಯಾರೂ ಮುದ್ರಿಸಲು ಮುಂದಾಗುವುದಿಲ್ಲ. ನನ್ನ ಪುಸ್ತಕಗಳನ್ನು ನಾನೇ ಗೆಳೆಯರಿಗೆ ಕೊಟ್ಟು ಅವರ ಪುಸ್ತಕಗಳನ್ನು ಪಡೆಯುವ ವಿಧಾನ ರೂಢಿಸಿಕೊಂಡಿರುವುದಾಗಿ ಆ ಹಿರಿಯರು ಹೇಳಿದರು.

ಇದು ಸರಿಯಾದುದೆನಿಸಿ ನಾನೂ ಸಹ ನನ್ನ ಆತ್ಮೀಯ ಲೇಖಕರಿಗೆ ಪುಸ್ತಕ ಕೊಟ್ಟೆ. ಅವರೂ ತಂತಮ್ಮ ಪುಸ್ತಕಗಳನ್ನು ಕೊಟ್ಟರು. ಆ ಪುಸ್ತಕಗಳ ಶೀರ್ಷಿಕೆ ಹೇಗಿವೆಯೆಂದರೆ ಈ ಇಡೀ ಘಟನೆಯ ಸಾಕ್ಷಿ ರೂಪದಂತಿದೆ. ಒಂದು: ‘ಅಪಮಾನಗಳಿಗಿಲ್ಲ ವಿರಾಮ’. ಇನ್ನೊಂದು: ‘ಮಂದ ಬೆಳಕಿನ ಸಾಂತ್ವನ’– ಎಂಥ ಅದ್ಭುತ ಶೀರ್ಷಿಕೆಗಳಿವು! ಒಂದು ಶೀರ್ಷಿಕೆ ಅವಮಾನವನ್ನು ಅನುಭವಿಸಿದವನನ್ನು ಎದೆಗುಂದದಂತೆ ಎಚ್ಚರಿಸಿದರೆ, ಇನ್ನೊಂದು ಮಾತೃ ಹಸ್ತದಿಂದ ಮೈದಡವಿ ಸಾಂತ್ವನ ನೀಡಿತು.

ಈಗಲೂ ನನ್ನನ್ನು ಕಾಡುವ ಪ್ರಶ್ನೆಯೆಂದರೆ– ಕಡೇ ಪಕ್ಷ ನನಗೆ ಪುಸ್ತಕ ಪ್ರಕಟಿಸಲಾದರೂ ಸಾಧ್ಯವಾಗಿದೆ. ಆದರೆ ಸ್ವಂತವಾಗಿ ಪುಸ್ತಕ ಪ್ರಕಟಪಡಿಸಲಾಗದ ಪ್ರತಿಭಾವಂತ ಬರಹಗಾರರ ಪಾಡೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT