ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕಗಳು ಚಾಕೊಲೇಟ್‌ನಂತೆ ಪ್ರಿಯವಾಗಲಿ: ವೆಂಕಟೇಶಮೂರ್ತಿ

Last Updated 23 ಏಪ್ರಿಲ್ 2016, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳಿಗೆ ಪುಸ್ತಕಗಳ ಬಗೆಗಿನ ಭೀತಿಯನ್ನು ಹೋಗಲಾಡಿಸಿ, ಅವುಗಳು ಚಾಕೊಲೇಟ್‌ನಷ್ಟು ಪ್ರಿಯವಾಗುವಂತೆ ಮಾಡಬೇಕು’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.

ಸಾಹಿತ್ಯ ಅಕಾಡೆಮಿಯು ಕರ್ನಾಟಕ ಪ್ರಕಾಶಕರ ಸಂಘ ಮತ್ತು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ  ‘ಮಕ್ಕಳಲ್ಲಿ ಓದು ಬೆಳೆಸುವುದು’ ವಿಷಯ ಕುರಿತು ಅವರು ಮಾತನಾಡಿದರು.

‘ಚೀನಾದಲ್ಲಿ ಮಗು ಊಟ ಮಾಡದಿದ್ದರೆ ತಾಯಿ ನಿನ್ನನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಹೇಳುತ್ತಾಳೆ. ಆದರೆ, ನಮ್ಮಲ್ಲಿ ತಂಟೆ ಮಾಡಿದರೆ ಶಾಲೆಗೆ ಕಳಿಸುತ್ತೇನೆ ಎಂದು ಹೇಳುತ್ತೇವೆ. ಇದರಿಂದ ಮಕ್ಕಳಿಗೆ ಶಾಲೆಯ ಕುರಿತು ಭೀತಿ ಬೆಳೆಯುತ್ತದೆ’ ಎಂದು ಹೇಳಿದರು. ‘ಮನೆಗೆ ಇಂಗ್ಲಿಷ್, ಕನ್ನಡ ಎರಡೂ ಭಾಷೆಯ ದಿನಪತ್ರಿಕೆಗಳು ಬಂದಾಗ ಮಕ್ಕಳು ಇಂಗ್ಲಿಷ್ ಪತ್ರಿಕೆಯನ್ನೇ ಆಯ್ದುಕೊಳ್ಳುತ್ತಾರೆ. ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆ ಆಗಿಲ್ಲ. ಅದರೆ, ಅವರು ಕನ್ನಡ ಪುಸ್ತಗಳನ್ನು ಓದುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಮಕ್ಕಳು ಇಂಗ್ಲಿಷ್ ಪುಸ್ತಕಗಳನ್ನು ದಂಡಿಯಾಗಿ ಓದಲಿ. ಅದರಿಂದ ಅವರ ಜ್ಞಾನದ ಕಿಟಕಿ ತೆರೆಯುತ್ತದೆ. ಆದರೆ, ಶೇಕ್ಸ್‌ಪಿಯರ್ ಸೇರಿದಂತೆ ಜಗತ್ತಿನ ಪ್ರಸಿದ್ಧ ಲೇಖಕರು ಸಹ ಕನ್ನಡ ಮೂಲಕ ಮಕ್ಕಳನ್ನು ತಲುಪಬೇಕು’ ಎಂದರು. ‘ಇಂದಿನ ಮಕ್ಕಳು ಚೆನ್ನಾಗಿ ಭಾವಗೀತೆಗಳನ್ನು ಹಾಡುತ್ತಾರೆ. ಆದರೆ, ಆ ಗೀತೆಗಳನ್ನು ಅವರು ಇಂಗ್ಲಿಷ್‌ನಲ್ಲಿ ಬರೆದುಕೊಂಡು ಹಾಡುತ್ತಾರೆ ಎನ್ನುವುದು ವಿಪರ್ಯಾಸ’ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ‘ಪುಸ್ತಕ ಪ್ರಕಟಣೆ ಕೇವಲ ವ್ಯವಹಾರ ಆಗಬಾರದು. ಅದು ಪುಸ್ತಕ ಪ್ರೀತಿಯನ್ನು ಬೆಳೆಸುವ, ಜ್ಞಾನವನ್ನು ಹರಡುವ ಕೆಲಸ ಆಗಬೇಕು’ ಎಂದರು.

‘ಸಾರ್ವಜನಿಕರಿಂದ ಸಂಗ್ರಹಿಸುವ ಗ್ರಂಥಾಲಯ ಸೆಸ್‌ ಹಣವನ್ನು ಪಾಲಿಕೆ ಸರಿಯಾದ ಸಮಯಕ್ಕೆ ಗ್ರಂಥಾಲಯ ಇಲಾಖೆಗೆ ನೀಡುವುದಿಲ್ಲ. ಸೆಸ್ ಹಣವನ್ನು ಕಟ್ಟುನಿಟ್ಟಾಗಿ ಇಲಾಖೆಗೆ ಸಂದಾಯ ಮಾಡುವಂತೆ ಸರ್ಕಾರ ಆದೇಶ ಹೊರಡಿಸಬೇಕು’ ಎಂದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ‘ಯುವಜನತೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಮಧ್ಯವಯಸ್ಕರು ಮತ್ತು ಹಿರಿಯ ನಾಗರಿಕರು ಹೆಚ್ಚಾಗಿ ಪುಸ್ತಕಗಳನ್ನು ಓದುತ್ತಾರೆ’ ಎಂದರು.

‘ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಮತ್ತು ಕನ್ನಡ ಪುಸ್ತಕಗಳ ಗ್ರಂಥಾಲಯ ಇರಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಬೇಕು’ ಎಂದು ಆಗ್ರಹಿಸಿದರು. ‘ಕಿರಗೂರಿನ ಗಯ್ಯಾಳಿಗಳು ಕಾದಂಬರಿಯನ್ನು ಅಧರಿಸಿ ಸಿನಿಮಾ ಮಾಡಿದ ನಂತರ ಕಾದಂಬರಿಯ ಮೂರು ಸಾವಿರ ಪ್ರತಿಗಳು ಮಾರಾಟವಾದವು. ಹೀಗಾಗಿ ಕನ್ನಡ ಕಥೆ, ಕಾದಂಬರಿಗಳನ್ನು ಆಧರಿಸಿ ಚಲನಚಿತ್ರ, ಧಾರಾವಾಹಿಗಳನ್ನು  ತಯಾರಿಸಬೇಕು. ಆಗ ಸುಲಭವಾಗಿ ಓದುಗರನ್ನು ತಲುಪಲು ಸಾಧ್ಯ’ ಎಂದರು.

ಸಾಹಿತಿ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಚಾಲಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ವಿಶ್ವ ಪುಸ್ತಕ ದಿನಾಚರಣೆ ಕೇವಲ ಆಚರಣೆಯಾಗಬಾರದು. ಅದು ಚಳವಳಿ ಆಗಬೇಕು. ಈ ಬಗ್ಗೆ ರಾಷ್ಟ್ರಮಟ್ಟದ ಚಳವಳಿ ರೂಪಿಸಲು ಅಕಾಡೆಮಿಯ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಲಾಗುವುದು’ ಎಂದರು.

‘ಕನ್ನಡದಲ್ಲೇ ಮಾತಾಡುತ್ತೇವೆ’
‘ಇಂಗ್ಲಿಷ್ ಪತ್ರಿಕೆ ಜತೆಗೆ ಕನ್ನಡ ಪತ್ರಿಕೆ ತರಿಸುತ್ತೇವೆ. ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡುತ್ತೇವೆ. ಮಕ್ಕಳಿಗೆ ಕನ್ನಡದ ಕೃತಿಗಳನ್ನು ಮಾತ್ರ ಕಾಣಿಕೆಯಾಗಿ ನೀಡುತ್ತೇವೆ. ಮನೆಯ ಗ್ರಂಥಾಲಯದಲ್ಲಿ ಕನ್ನಡ ಕೃತಿಗಳು ಇರುವಂತೆ ಮಾಡುತ್ತೇವೆ ಮತ್ತು  ಮಕ್ಕಳನ್ನು  ಕನ್ನಡದ ನಾಟಕಗಳಿಗೆ ಕರೆದೊಯ್ಯುತ್ತೇವೆ ಎಂಬ ಸಂಕಲ್ಪವನ್ನು ಎಲ್ಲ ಪೋಷಕರು ಮಾಡಬೇಕು’ ಎಂದು ವೆಂಕಟೇಶಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT