ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಪು ಮಾರ್ಗದ ಕೊನೆಯ ಮೈಲಿಗಲ್ಲು

Last Updated 28 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಗಾಂಧೀಜಿ ಅವರೊಂದಿಗೆ ಅತ್ಯಂತ ದೀರ್ಘ ಕಾಲ ಸಂಪರ್ಕ ಹೊಂದಿದ್ದ ಕೊನೆಯ ವ್ಯಕ್ತಿ ನಾರಾಯಣ ದೇಸಾಯಿ. ‘ಸಂಪೂರ್ಣ ಕ್ರಾಂತಿ ವಿದ್ಯಾಲಯ’ ಹಾಗೂ ‘ಗಾಂಧಿ ಕತೆ’ಗಳ ಮೂಲಕ ಮಹಾತ್ಮನ ಆದರ್ಶಗಳನ್ನು ಯುವಪೀಳಿಗೆಗೆ ತಲುಪಿಸಲು ಅವರ ಜೀವನ ಮುಡಿಪಾಗಿತ್ತು. ದೇಸಾಯಿ ನಿರ್ಗಮನದೊಂದಿಗೆ (ನಿ: ಮಾರ್ಚ್ 15) ಗಾಂಧಿ ಯುಗದ ಮತ್ತೊಂದು ಕೊಂಡಿ ಕಣ್ಮರೆಯಾಗಿದೆ.

ಮಹಾತ್ಮ ಗಾಂಧೀಜಿ ಅವರ ಆಪ್ತ ಸ್ನೇಹಿತರು ಮತ್ತು ಕಾರ್ಯದರ್ಶಿಗಳಾಗಿದ್ದ ಮಹದೇವ ದೇಸಾಯಿ ಮತ್ತು ದುರ್ಗಾ ದಂಪತಿಗಳ ಏಕೈಕ ಪುತ್ರನಾದ ನಾರಾಯಣ ದೇಸಾಯಿ ಅವರು ಜನಿಸಿದ್ದು 1924ರ ಡಿ. 24ರಂದು, ಗುಜರಾತಿನ ವಲ್ಸಡ್‌ನಲ್ಲಿ. ಸದಾಕಾಲ ಗಾಂಧೀಜಿ ನೆರಳಿನಂತಿದ್ದ ಮಹದೇವ ದೇಸಾಯಿ ತೀರಿಕೊಂಡಿದ್ದು (1942) ಯರವಾಡ ಜೈಲಿನಲ್ಲಿರುವಾಗ– ಗಾಂಧೀಜಿಯವರ ತೊಡೆಯ ಮೇಲೆ. ಹಾಗಾಗಿ ನಾರಾಯಣ ದೇಸಾಯಿ ಅವರ ಬಾಲ್ಯ, ಹದಿಹರಯವೆಲ್ಲ ಕಳೆದದ್ದು ಗಾಂಧೀಜಿ ಅವರ ಆಶ್ರಮಗಳಲ್ಲಿ. ಉಪ್ಪಿನ ಸತ್ಯಾಗ್ರಹದ ನಂತರ ಜೈಲುವಾಸ ಮುಗಿಸಿದ ಗಾಂಧೀಜಿ ಮತ್ತು ಮಹದೇವ ದೇಸಾಯಿ ಸಾಬರಮತಿ ಆಶ್ರಮಕ್ಕೆ ಹಿಂತಿರುಗದೆ ವಾರ್ಧಗೆ ಹೋದಾಗ, ನಾರಾಯಣ ಮತ್ತು ಅವರ ತಾಯಿ 1935ರವರೆಗೂ ಸಾಬರಮತಿಯಲ್ಲೇ ಉಳಿದರು.

ನಾರಾಯಣ ದೇಸಾಯಿ ಅವರು ಸಾಬರಮತಿಯಲ್ಲಿರುವಾಗ ಶಾಲೆಗೆ ಹೋಗಿದ್ದು ಒಂದೇ ಒಂದು ತಿಂಗಳು. ಅದು 11 ವರ್ಷದವರಿದ್ದಾಗ. ಆನಂತರ ತಂದೆಗೆ ಪತ್ರ ಬರೆದು, ‘ನಾನು ಶಾಲೆಗೆ ಹೋಗುವುದಿಲ್ಲ’ ಎಂಬ ನಿರ್ಧಾರವನ್ನು ತಿಳಿಸಿದರು. ಆ ನಿರ್ಧಾರವನ್ನು ತಂದೆಯವರು ವಿರೋಧಿಸಲಿಲ್ಲ, ಬದಲಾಗಿ ಗಾಂಧೀಜಿಯವರ ಅನುಮತಿಯನ್ನು ಪಡೆಯಬೇಕೆಂದು ಹೇಳಿದರು. ತಂದೆ ಹೇಳಿದಂತೆಯೇ ನಾರಾಯಣ ಅವರು ಗಾಂಧೀಜಿಯವರಿಗೆ ಪತ್ರ ಬರೆದಾಗ, ಅನುಮತಿಯನ್ನೂ ಪಡೆದರು. ಆ ಸಮಯದಲ್ಲಿ ಗಾಂಧೀಜಿಯವರು ಸೇವಾಗ್ರಾಮದಲ್ಲಿದ್ದರು. ಸ್ವಲ್ಪ ಸಮಯದ ನಂತರ ಮಹದೇವ ಅವರು ದುರ್ಗ ಹಾಗೂ ನಾರಾಯಣರೊಂದಿಗೆ ಸೇವಾಗ್ರಾಮಕ್ಕೆ  ನೆಲೆಸಲು ಹೋದರು. ಆನಂತರ ತಂದೆ ಹಾಗು ಗಾಂಧೀಜಿಯವರ ಗರಡಿಯಲ್ಲಿ ಅವರ ಶಿಕ್ಷಣ ಮುಂದುವರೆಯಿತು.

ನಾರಾಯಣ ದೇಸಾಯಿ ಅವರನ್ನು ಗಾಂಧೀಜಿಯವರ ‘ನಯಿ ತಾಲೀಮ್’ ಎಂಬ ಹೊಸ ಪ್ರಯೋಗದ ಉತ್ಪನ್ನವೆಂದೇ ಹೇಳಬಹುದು. ಸೇವಾಗ್ರಾಮಕ್ಕೆ ಹೋದ ಕೆಲ ವರ್ಷಗಳ ನಂತರ ಶಿಕ್ಷಣಕ್ಕೆಂದು ಅವರನ್ನು ಬನಾರಸ್ಸಿಗೆ ಕಳಿಸುವ ಸಲಹೆ ಬಂತು. ಆ ಸಂದರ್ಭದಲ್ಲಿ ಅವರು– ‘ನನ್ನ ಉದ್ದೇಶ ರಾಜಕೀಯ ಕಾರ್ಯಕರ್ತರು ಮತ್ತು ರಚನಾತ್ಮಕ ಕೆಲಸಗಾರರ ನಡುವೆ ಸಂಪರ್ಕ ಸಾಧಿಸುವುದು’ ಎಂದು ಸ್ಪಷ್ಟವಾಗಿ ಹೇಳಿದರು. ಆ ಉತ್ತರದಿಂದ ಸಂತೃಪ್ತರಾದ ಗಾಂಧೀಜಿಯವರು ಅವರನ್ನು ಸೇವಾಗ್ರಾಮದಲ್ಲೇ ಉಳಿಸಿಕೊಂಡರು. ಗಾಂಧೀಜಿಯವರ ಕಾರ್ಯದರ್ಶಿಯಾಗಿ ಕೆಲಸ ಮಾಡುವುದು ಅವರ ಶಿಕ್ಷಣದ ಒಂದು ಭಾಗವಾಗಿತ್ತು. ತಮ್ಮ ತಂದೆಯವರ ನಿಧನಾನಂತರ ಅವರು ಪ್ಯಾರೆ ಲಾಲ್ ಅವರೊಂದಿಗೆ ಕೆಲಸ ಮಾಡಿದರು.

ಸ್ವಾತಂತ್ರ್ಯ ಬರುವ ಸ್ವಲ್ಪ ಮೊದಲು ತಾನು ಮಾಡುತ್ತಿರುವ ಕೆಲಸ ಉಪಯುಕ್ತವಾಗಿದ್ದರೂ ಅದು ತನ್ನ ಬೆಳವಣಿಗೆಗೆ ಪೂರಕವಾಗಿಲ್ಲವೆಂದು ಅವರಿಗನ್ನಿಸಿತು. ಅದನ್ನು ಗಾಂಧೀಜಿಯವರಿಗೆ ಹೇಳಿದಾಗ, ನಿಜವಾಗಿಯೂ ಮಾಡಬೇಕೆನಿಸುವುದನ್ನೇ ಮಾಡಬೇಕೆಂದು ಅವರು ಹೇಳಿದರು. ಅಂತೆಯೇ ಗಾಂಧೀಜಿಯವರ ಆಶೀರ್ವಾದದೊಂದಿಗೆ ಅವರು ಹಾಗೂ ಅವರ ಬಾಲ್ಯದ ಗೆಳೆಯ ಮೋಹನ್ ಪಾರಿಖ್ ವೇಡ್ಚಿ ಎನ್ನುವ ಗ್ರಾಮಕ್ಕೆ ಬಂದು ನೆಲೆಸಿದರು. ಗುಜರಾತಿನ ದಕ್ಷಿಣ ಭಾಗದಲ್ಲಿರುವ ವೇಡ್ಚಿ ಆದಿವಾಸಿಗಳು ವಾಸಿಸುವ ಪ್ರದೇಶ. ಅಲ್ಲಿ ‘ನಯೀ ತಾಲೀಮ್’ ತತ್ವಗಳನ್ನು ಆಧರಿಸಿ ಶಾಲೆಯೊಂದನ್ನು ಆರಂಭಿಸಿದರು. ಕೆಲವು ತಿಂಗಳುಗಳ ನಂತರ ನಾರಾಯಣ ಅವರು ಉತ್ತರಾ ಚೌಧರಿಯವರನ್ನು ಮದುವೆಯಾದರು. ಉತ್ತರಾ ಅವರು ಒರಿಸ್ಸಾದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರು; ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಸ್ವತಃ ಜೈಲುವಾಸ ಅನುಭವಿಸಿದ್ದರು.


ವೇಡ್ಚಿ ಶಾಲೆಯನ್ನು ನಡೆಸುವಾಗ ಅಲ್ಲಿನ ಬಹುಪಾಲು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದರು. ಇರುಳು ಕುರುಡುತನದ ತೊಂದರೆಯನ್ನೂ ಅನುಭವಿಸುತ್ತಿದ್ದರು. ಇದರ ಪರಿವೆಯೇ ಅವರಿಗಿರಲಿಲ್ಲ. ಪ್ರತಿ ದಿನ ಒಂದು ಲೋಟ ಹಾಲು ನೀಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಯಿತು. ಅತ್ಯಂತ ಬಡತನದಲ್ಲಿ ವಾಸಿಸುತ್ತಿದ್ದ ಆ ಮಕ್ಕಳಿಗೆ ತೊಡಲು ಉಟ್ಟ ಬಟ್ಟೆಯನ್ನು ಹೊರತುಪಡಿಸಿದರೆ ಮತ್ತೊಂದು ಜೊತೆಯಿರಲಿಲ್ಲ. ಈ ಸಮಸ್ಯೆಗೆ ನಾರಾಯಣ ದೇಸಿ ಅವರು ಮಕ್ಕಳಿಗೆ ನೂಲುವುದನ್ನು ಕಲಿಸಿದರು. ಶಿಕ್ಷಣವು ತಲೆ, ಹೃದಯ ಮತ್ತು ಕೈಗಳ ಸಮನ್ವಯ ಆಗಿರಬೇಕೆಂಬ ನಂಬಿಕೆಯ ಗಾಂಧೀಜಿಯವರ ‘ನಯೀ ತಾಲೀಮ್’ ನಾರಾಯಣ ದೇಸಾಯಿಯವರ ‘ಸಂಪೂರ್ಣ ಕ್ರಾಂತಿ ವಿದ್ಯಾಲಯ’ದಲ್ಲಿ ಸಾಕಾರಗೊಂಡಿತು.

ವಿನೋಬ ಭಾವೆಯವರು 1952ರಲ್ಲಿ ಆರಂಭಿಸಿದ ಭೂಧಾನ ಚಳವಳಿಯ ಕರೆಗೆ ದೇಸಾಯಿಯವರು ಸಂಪೂರ್ಣವಾಗಿ ಸ್ಪಂದಿಸಿದರು. ಗುಜರಾತಿನ ಉದ್ದಗಲಕ್ಕೂ ಸಂಚರಿಸಿ ಬಡ ರೈತರಿಗೆ ಹಂಚಲು ಶ್ರೀಮಂತ ರೈತರಿಂದ ಭೂದಾನ ಕೇಳಿದರು. ವಿನೋಬಾ ಅವರು ಆರಂಭಿಸಿದ ಅಖಿಲ ಭಾರತೀಯ ಶಾಂತಿ ಸೇನೆಯನ್ನು ಸೇರಿಕೊಂಡರಲ್ಲದೆ, 1962ರಿಂದ 1978ರವರೆಗೆ ಅದರ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದರು. ಭೂದಾನ ಚಳವಳಿಯ ಮುಖವಾಣಿಯಾಗಿದ್ದ ‘ಭೂಮಿಪುತ್ರ’ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದರು. ಅಹಮದಬಾದ್, ಬರೋಡ ಮತ್ತು ಭಿವಂಡಿಯಲ್ಲಿ ಕೋಮು ಗಲಭೆಗಳಾದಾಗ ಶಾಂತಿ ಸಮಿತಿಗಳನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಯಪ್ರಕಾಶ ನಾರಾಯಣ್ ಅವರ ಮನವಿಯಂತೆ ‘ತರುಣ ಶಾಂತಿ ಸೇನೆ’ಯ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು.

ನಾರಾಯಣ ದೇಸಾಯಿ ಉತ್ತಮ ಬರಹಗಾರರು ಮತ್ತು ಕವಿಗಳಾಗಿದ್ದರು. ಅವರ ತಂದೆಯ ಜೀವನ ಚರಿತ್ರೆ ‘ಅಗ್ನಿ ಕುಂಡಮ ಉಗೇಲು ಗುಲಾಬ್’ ಕೃತಿ ರಚನೆಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಈ ಕೃತಿಯು ‘ಫೈಯರ್ ಅಂಡ್ ರೋಸ್’ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಗೊಂಡಿದೆ. ಗಾಂಧೀಜಿಯವರೊಂದಿಗೆ ಒಡನಾಡಿದ ಅವರ ಬಾಲ್ಯದ ನೆನಪುಗಳು ಕನ್ನಡವೂ ಸೇರಿದಂತೆ (ಬಾಪೂಜಿಯ ಮಡಿಲಲ್ಲಿ) ಹಲವಾರು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಅನುವಾದವಾಗದೇ ಉಳಿದಿರುವ ಮಹತ್ವದ ಕೃತಿಯೆಂದರೆ, ಹಲವಾರು ಪ್ರಸಿದ್ಧ ವ್ಯಕ್ತಿಗಳ ಜೀವನದ ತುಣುಕುಗಳನ್ನು ಒಳಗೊಂಡ ‘ಮನೆ ಕೇಮ್ ವಿಸಾರಿರೆ’ ಎಂಬ ಪುಸ್ತಕ. ಮೊದಲಿಗೆ ಇದು ‘ಜನ್ಮಭೂಮಿ ಪ್ರವಾಸಿ’ಯಲ್ಲಿ ಸರಣಿಯಾಗಿ ಪ್ರಕಟಗೊಂಡಿತ್ತು.

‘ಮಾರು ಜೀವನ್ ಎಜ್ ಮಾರಿ ವಾಣಿ’ ಎಂಬ ನಾಲ್ಕು ಸಂಪುಟಗಳ ಗಾಂಧೀಜಿಯವರ ಜೀವನ ಚರಿತ್ರೆ ಅವರ ಮಹತ್ವದ ಕೃತಿಯಾಗಿದೆ. ಈ ಕೃತಿಗಾಗಿ ಅವರಿಗೆ ಮೂರ್ತಿದೇವಿ ಪ್ರಶಸ್ತಿ ಲಭಿಸಿದೆ. 2002ರಲ್ಲಿ ಕೋಮುಗಲಭೆಗಳು ಗುಜರಾತನ್ನು ಛಿದ್ರಗೊಳಿಸಿದಾಗ ಬಹಳ ನೊಂದುಕೊಂಡಿದ್ದ ಅವರು, ಗಾಂಧೀಜಿಯವರ ಸಂದೇಶವನ್ನು ಸಾಮಾನ್ಯ ಜನರಿಗೆ ತಲುಪಿಸಿವ ಅಗತ್ಯವಿದೆಯೆಂದು ಬಲವಾಗಿ ನಂಬಿದ್ದರು. ಗಾಂಧೀಜಿಯವರ ಜೀವನವನ್ನು ‘ಗಾಂಧಿ ಕತೆ’ ಎಂಬ ಸಾಂಪ್ರದಾಯಿಕವಾಗಿ ಕಥೆ ಹೇಳುವ ಸ್ವರೂಪದಲ್ಲಿ ಹೇಳುವುದನ್ನು ಆರಂಭಿಸಿದರು. ಮೊದಲಿಗೆ ಗುಜರಾತಿಗಷ್ಟೇ ಸೀಮಿತವಾಗಿದ್ದ ಈ ಕಾರ್ಯಕ್ರಮವು ಜನಪ್ರಿಯಗೊಳ್ಳುತ್ತ ಹೋದಂತೆ, ದೇಶದ ಇತರೆಡೆಗಳಲ್ಲಿ ಹಿಂದಿಯಲ್ಲಿ ಮತ್ತು ದೇಶದ ಹೊರಗೆ ಇಂಗ್ಲಿಷ್‌ನಲ್ಲಿ ಪ್ರಚಲಿತಗೊಂಡಿತು. ಗಾಂಧಿ ಕತೆಯಲ್ಲಿನ ಎಲ್ಲಾ ಹಾಡುಗಳನ್ನು ತಾವೇ ಬರೆದು, ಸ್ಥಳೀಯ ಸ್ವಯಂಸೇವಕರುಗಳಿಗೆ ಹಾಡಲು ತರಬೇತಿ ನೀಡಿದ್ದರು. ಆ ಗಾಯಕರನ್ನು ಗಾಂಧಿ ಕತೆ ಮಾಡುವಲ್ಲೆಲ್ಲ ಕರೆದೊಯ್ಯುತ್ತಿದ್ದರು. ದೇಸಾಯಿ ಅವರು ಒಟ್ಟು 116 ಗಾಂಧಿಕತೆಗಳನ್ನು ಮಾಡಿದ್ದಾರೆ.  ಅವರನ್ನು ‘ಗಾಂಧಿ ಕತೆ’ಯ ಮೂಲಕವೇ ಗುರ್ತಿಸುವವರಿದ್ದಾರೆ. ಗಾಂಧೀಜಿಯವರನ್ನು ಜನ ಸಾಮಾನ್ಯರ ಬಳಿಗೆ ಒಯ್ಯುವ ನಿಟ್ಟಿನಲ್ಲಿ 24 ಕಿರು ಪುಸ್ತಕೆಗಳನ್ನು (ಎಲ್ಲರ ಗಾಂಧಿ) ಪ್ರಕಟಿಸಿದ್ದಾರೆ.

ನಾರಾಯಣ ದೇಸಾಯಿಯವರ ಬಹುಪಾಲು ಕೃತಿಗಳು ಗುಜರಾತಿಯಲ್ಲಿವೆ. ಅವರು ಹಿಂದಿ, ಒರಿಯಾ, ಬೆಂಗಾಲಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಭಾರತೀಯ ಭಾಷೆಗಳ ಹಲವಾರು ಹಾಡುಗಳನ್ನು ಬಲ್ಲವರಾಗಿದ್ದ ಅವರು ಸಂದರ್ಭಕ್ಕನುಸಾರವಾಗಿ ಸ್ವಲ್ಪವೂ ತಪ್ಪಿಲ್ಲದೆ ನೆನಪು ಮಾಡಿಕೊಳ್ಳುತ್ತಿದ್ದರು. ಅತ್ಯಂತ ಶಿಸ್ತಿನವರಾಗಿದ್ದ ಅವರು ದಣಿವರಿಯದೇ ಕೆಲಸ ಮಾಡುತ್ತಿದ್ದರು. ಗಾಂಧೀಜಿಯವರ ಆಶ್ರಮದ ಪ್ರಭಾವದಿಂದಾಗಿ ಚಿಕ್ಕವರಿದ್ದಾಗಲೇ ಶೌಚಾಲಯ ಸ್ವಚ್ಛಗೊಳಿಸುವುದೂ ಸೇರಿದಂತೆ ಎಲ್ಲ ತರದ ದೈಹಿಕ ದುಡಿಮೆಯನ್ನು ಮಾಡುತ್ತಿದ್ದರು.

ಗಾಂಧೀಜಿ ಆರಂಭಿಸಿದ್ದ ಗುಜರಾತ್ ವಿದ್ಯಾಪೀಠಕ್ಕೆ ನಾರಾಯಣ ದೇಸಾಯಿ ಅವರನ್ನು 2007ರಲ್ಲಿ ಕುಲಪತಿಗಳನ್ನಾಗಿ ನೇಮಕ ಮಾಡಲಾಗಿತ್ತು. ಜೀವಮಾನದ ಕೊನೆಯವರೆಗೂ ಹೊಂದಬಹುದಾಗಿದ್ದ ಕುಲಪತಿ ಹುದ್ದೆಗೆ ವಯಸ್ಸಾದ ಕಾರಣ ನೀಡಿ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿದ ಐದು ದಿನಗಳ ನಂತರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿದ್ದ ಅಹಿಂಸೆಯ ಕುರಿತ ಶಿಬಿರದ ಮಧ್ಯದಲ್ಲಿ ಪಾರ್ಶ್ವವಾಯುವಿನಿಂದಾಗಿ ಕೋಮಾ ಸ್ಥಿತಿಗೆ ತಲುಪಿದರು. ಎರಡು ದಿನಗಳ ನಂತರ ಪ್ರಜ್ಞೆ ಮರುಕಳಿಸಿದರೂ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿಲ್ಲ. ವೇಡ್ಚಿಯ ತಮ್ಮ ಮನೆಯಲ್ಲಿ 2015 ಮಾರ್ಚ್ 15ರಂದು ಕೊನೆಯುಸಿರೆಳೆದರು. ಪ್ರಸ್ತುತ ಅವರ ಮಗಳು ಸಂಘಮಿತ್ರ ‘ಸಂಪೂರ್ಣ ಕ್ರಾಂತಿ ವಿದ್ಯಾಲಯ’ವನ್ನು ನಡೆಸುತ್ತಿದ್ದಾರೆ. ಅವರ ಮಗ ನಚಿಕೇತ ಸ್ವತಂತ್ರ ಪತ್ರಕರ್ತರಾಗಿ ಅಹಮದಾಬಾದಿನಲ್ಲಿ ನೆಲೆಸಿದ್ದಾರೆ. ಮತ್ತೊಬ್ಬ ಮಗ ಅಫ್ಲತೂನ್ ಸಾಮಾಜಿಕ ಕಾರ್ಯಕರ್ತರಾಗಿದ್ದು, ವಾರಣಾಸಿಯಲ್ಲಿ ಸಮಾಜವಾದಿ ಜನಪರಿಷದ್ ಜೊತೆ  ಕೆಲಸ ಮಾಡುತ್ತಿದ್ದಾರೆ.

ಪಾಶ್ವವಾಯು ಬಾಧೆಗೆ ಒಳಗಾಗುವವರೆಗೂ ಅವರು ಸದಾ ಕ್ರಿಯಾಶೀಲರಾಗಿ ಕೆಲಸ ಮಾಡಿಕೊಂಡೇ ಇದ್ದರು. ಮುಂಚಿನ ದಿನವೂ ಮರಾಠಿಯಿಂದ ತುಕಾರಾಂ ಅಭಂಗಗಳನ್ನು ಗುಜರಾತಿಗೆ ಅನುವಾದ ಮಾಡಿದ್ದರು. ಮೂರು ಕಾದಂಬರಿಗಳನ್ನು ಬರೆಯಲು ತಯಾರಿ ಮಾಡಿಕೊಂಡಿದ್ದರು.

ನಾರಾಯಣ ದೇಸಾಯಿ ಅವರ ನಿರ್ಗಮನದೊಂದಿಗೆ ಮಹಾತ್ಮ ಗಾಂಧಿ ಯುಗದ ಕೊನೆಯ ಕೊಂಡಿಯೊಂದು ಕಳಚಿಹೋಗಿದೆ. ಗಾಂಧೀಜಿ ಅವರೊಂದಿಗೆ ನಿಕಟವಾದ, ಸುದೀರ್ಘವಾದ ಸಂಪರ್ಕ ಹೊಂದಿದ್ದ ಕೊನೆಯ ವ್ಯಕ್ತಿ ಅವರು. ಬಾಪು, ವಿನೋಬಾ ಮತ್ತು ಜೇಪಿ ಅವರಂತಹ ದಿಗ್ಗಜರುಗಳೊಂದಿಗೆ ಎರಡು ದಶಕಗಳಿಗೂ ಹೆಚ್ಚಿನ ಕಾಲ ಒಡನಾಟವಿದ್ದ ಏಕೈಕ ವ್ಯಕ್ತಿ ತಾನೆಂದು ಅವರು ಆತ್ಮೀಯವಾಗಿ ಹೇಳಿಕೊಳ್ಳುತ್ತಿದ್ದರು. ಕೋಮುವಾದ ಕುರಿತು ಅತ್ಯಂತ ವ್ಯಾಕುಲರಾಗಿದ್ದ ಅವರು ಕೆಲವು ತಿಂಗಳುಗಳ ಹಿಂದೆ ಎಲ್ಲ ಸ್ನೇಹಿತರಿಗೂ ಪತ್ರ ಬರೆದು, ಕೋಮುವಾದವನ್ನು ಎದುರಿಸಲು ಮುಂದಿನ 10 ವರ್ಷಗಳಲ್ಲಿ ಮಾಡಬೇಕಾದ ರಚನಾತ್ಮಕ ಕೆಲಸಗಳತ್ತ ಗಮನಸೆಳೆದಿದ್ದರು. ಕ್ರಿಯಾಶೀಲತೆಯಿಂದ ಶ್ರೀಮಂತವಾಗಿದ್ದ ಅವರ ಸುದೀರ್ಘವಾದ ಬದುಕು ಮಾನವಕುಲದ ಏಳಿಗೆಗೆ ಮೀಸಲಾಗಿತ್ತು. ಎಲ್ಲೆಲ್ಲೂ ಕೊಳ್ಳುಬಾಕತನ ಮತ್ತು ಸ್ವಾರ್ಥ ಕಾಣಿಸುತ್ತಿರುವಾಗ ಅತ್ಯಂತ ಸರಳವಾಗಿ, ಅತಿ ಕಡಿಮೆ ಅಗತ್ಯಗಳೊಂದಿಗೆ ಬದುಕಿದ ಶಾಂತಿಯೋಧ ‘ಗಾಂಧಿ ಕತೆ’ ಎಂಬ ಅಹಿಂಸೆಯ ಅಸ್ತ್ರವನ್ನು ನಮ್ಮ ಪಾಲಿಗೆ ಬಿಟ್ಟು ಮರೆಯಾಗಿದ್ದಾರೆ. 

ಲೇಖಕರು ‘ಸಂಪೂರ್ಣ ಕ್ರಾಂತಿ ವಿದ್ಯಾಲಯ’ದಲ್ಲಿ ನಾರಾಯಣ ದೇಸಾಯಿ ಅವರೊಂದಿಗೆ ದುಡಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT