ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿದೆ ‘ಮುಕ್ತ’ ಆಯಾಮ

Last Updated 26 ಜೂನ್ 2015, 19:30 IST
ಅಕ್ಷರ ಗಾತ್ರ

ಒಂದು ಸ್ಪಷ್ಟೀಕರಣದಿಂದ ಈ ಲೇಖನ ಪ್ರಾರಂಭಿಸುತ್ತೇನೆ. ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆ.ಎಸ್‌.ಒ.ಯು.) ಬೋಧಕವರ್ಗದ ಕಿರಿಯ ಸದಸ್ಯ. ನನ್ನ ಅನುಭವ ಕೇವಲ ಎರಡೂವರೆ ವರ್ಷಗಳದ್ದು. ವಿಶ್ವವಿದ್ಯಾಲಯದಲ್ಲಿ ನಾನು ನಿರ್ವಹಿಸಿರುವ ಜವಾಬ್ದಾರಿಗಳು ಮತ್ತು ನನ್ನ ಸೀಮಿತ ಅನುಭವಗಳ ಆಧಾರದ ಮೇಲೆ ಇಂದು ಕೆ.ಎಸ್‌.ಒ.ಯು. ಎದುರಿಸುತ್ತಿರುವ ಸವಾಲುಗಳ ಬಗ್ಗೆ ನನ್ನ ಅನಿಸಿಕೆಗಳನ್ನು ದಾಖಲಿಸುತ್ತೇನೆ. ನಾನು ವಿಶ್ವವಿದ್ಯಾಲಯದ ವಕ್ತಾರನಲ್ಲ ಮತ್ತು ಇಲ್ಲಿನ ನನ್ನ ಅಭಿಪ್ರಾಯಗಳು ವಿಶ್ವವಿದ್ಯಾಲಯದ ಅಧಿಕೃತ ನಿಲುವಲ್ಲ.

ಕೆ.ಎಸ್‌.ಒ.ಯು.ವಿನ ಶೈಕ್ಷಣಿಕ ಕಾರ್ಯಕ್ರಮಗಳಿಗೆ 2012– 13ರಿಂದ ಮಾನ್ಯತೆಯನ್ನು ಮುಂದುವರಿಸದೇ ಇರುವುದಕ್ಕೆ ಯುಜಿಸಿ  ಮೂರು ಕಾರಣಗಳನ್ನು ನೀಡಿದೆ. ಮೊದಲಿಗೆ, ಕೆ.ಎಸ್‌.ಒ.ಯು. ಖಾಸಗಿ ಸಂಸ್ಥೆಗಳ ಸಹಯೋಗದೊಡನೆ ತನ್ನ ಪ್ರಾದೇಶಿಕ ವ್ಯಾಪ್ತಿಯ ಹೊರಗೆ ದೇಶದಾದ್ಯಂತ ಹಾಗೂ ವಿದೇಶಗಳಲ್ಲಿಯೂ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಎರಡನೆಯದಾಗಿ, ಕೆ.ಎಸ್‌.ಒ.ಯು. ತಾಂತ್ರಿಕ ಮತ್ತು  ವೃತ್ತಿಶಿಕ್ಷಣ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ನಿಯಂತ್ರಕ ಸಂಸ್ಥೆಗಳಿಂದ ಅನುಮತಿ ಪಡೆದಿಲ್ಲ. ಮೂರನೆಯದಾಗಿ, ಕೆ.ಎಸ್‌.ಒ.ಯು. ಯುಜಿಸಿಯ ಮಾನ್ಯತೆ ಇರದ ಆನ್‌ಲೈನ್ ಕಾರ್ಯಕ್ರಮಗಳನ್ನು ದೂರಶಿಕ್ಷಣದ ಪ್ರತ್ಯೇಕ ವಿಧಾನವಾಗಿ ಪ್ರಾರಂಭಿಸಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ, ಯುಜಿಸಿ ಗುರುತಿಸುವ ಉಲ್ಲಂಘನೆಗಳು ಶೈಕ್ಷಣಿಕವಾದವುಗಳಲ್ಲ, ಬದಲಿಗೆ ತಾಂತ್ರಿಕವಾದವು.

ಯುಜಿಸಿಯ ಈ ಸಾರ್ವಜನಿಕ ಸೂಚನೆ ಕೆ.ಎಸ್‌.ಒ.ಯು. ಹಾಗೂ ದೂರಶಿಕ್ಷಣದ ನಿಯಂತ್ರಕ ಸಂಸ್ಥೆಗಳ ನಡುವೆ 2011ರಿಂದ ನಡೆಯುತ್ತಿರುವ ಸಂಘರ್ಷದ ತಾರ್ಕಿಕ ಅಂತ್ಯವೆಂದೇ ಗುರುತಿಸಬೇಕು. ದೂರಶಿಕ್ಷಣ ವ್ಯವಸ್ಥೆಯ ನಿಯಂತ್ರಣದ ಜವಾಬ್ದಾರಿಯು 2013ರ ಮೇ ತಿಂಗಳಿನವರೆಗೆ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ) ಅಂಗವಾಗಿದ್ದ ದೂರಶಿಕ್ಷಣ ಮಂಡಳಿಯ(ಡೆಕ್) ಬಳಿಯಿತ್ತು. 2013ರ ಜೂನ್‌ ನಂತರ ಯುಜಿಸಿಗೆ ಈ ಮಂಡಳಿಯನ್ನು ವರ್ಗಾಯಿಸಿ ದೂರಶಿಕ್ಷಣ ಕಚೇರಿ (ಡಿಇಬಿ) ಎಂಬ ಹೊಸ ನಿಯಂತ್ರಕ ಮಂಡಳಿಯನ್ನು ರಚಿಸಲಾಯಿತು.

ಕಳೆದ ದಶಕದಲ್ಲಿ, ಅದರಲ್ಲೂ 2009ರ ನಂತರ, ದೂರಶಿಕ್ಷಣ ಸಂಸ್ಥೆಗಳ ಪ್ರಾದೇಶಿಕ ವ್ಯಾಪ್ತಿ ಹಾಗೂ ವೃತ್ತಿಶಿಕ್ಷಣ ಕಾರ್ಯಕ್ರಮಗಳನ್ನು ದೂರಶಿಕ್ಷಣ ಮಾಧ್ಯಮದ ಮೂಲಕ ನಡೆಸುವ ಬಗೆಗಿನ ನೀತಿಯೂ ವ್ಯಾಪಕವಾಗಿ ಬದಲಾಗಿದೆ. ಕೆ.ಎಸ್‌.ಒ.ಯು. ಮತ್ತು ನಿಯಂತ್ರಕ ಸಂಸ್ಥೆಗಳ ನಡುವಿನ ಸಂಘರ್ಷವನ್ನು ಈ ಹಿನ್ನೆಲೆಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕು. ಉದಾಹರಣೆಗೆ ಪ್ರಾದೇಶಿಕ ವ್ಯಾಪ್ತಿಯ ಪ್ರಶ್ನೆಯನ್ನೇ ಪರಿಗಣಿಸಿ. 2007ರಲ್ಲಿ ಮೊದಲ ಬಾರಿಗೆ ಕೆ.ಎಸ್‌.ಒ.ಯು. ಕಾರ್ಯಕ್ರಮಗಳಿಗೆ ಮಾನ್ಯತೆ ನೀಡುತ್ತಾ ದೂರಶಿಕ್ಷಣ ಮಂಡಳಿಯು, ಪ್ರಾದೇಶಿಕ ವ್ಯಾಪ್ತಿಯನ್ನು ಕೇವಲ ರಾಜ್ಯಕ್ಕೆ ಸೀಮಿತಗೊಳಿಸಬೇಕೆಂದು ಒತ್ತಾಯಿಸುವುದಿಲ್ಲ ಎಂದು ಹೇಳಿತು.

ಕೆ.ಎಸ್‌.ಒ.ಯು. ತನ್ನ ಕಾಯ್ದೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿತು. ಅಂದರೆ ಕೆ.ಎಸ್‌.ಒ.ಯು. ಕಾಯ್ದೆ ದೇಶದೆಲ್ಲೆಡೆ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ನೀಡಿದರೆ ಹಾಗೆ ಮಾಡಲು ವಿಶ್ವವಿದ್ಯಾಲಯಕ್ಕೆ ಅಧಿಕಾರವಿದೆ ಎಂದರ್ಥ.

2009ರಲ್ಲಿ ಎರಡು ಪ್ರಮುಖ ಬದಲಾವಣೆಗಳಾದವು. ಮೊದಲನೆಯ ಬೆಳವಣಿಗೆ, ಪ್ರೊ. ಯಶಪಾಲ್ ಮತ್ತು ಛತ್ತೀಸ್‌ಗಡ ರಾಜ್ಯ ವ್ಯಾಜ್ಯದಲ್ಲಿ ಸುಪ್ರೀಂಕೋರ್ಟ್‌ ತೀರ್ಪು. ಖಾಸಗಿ ವಿಶ್ವವಿದ್ಯಾಲಯಗಳಿಗೆ ಯುಜಿಸಿಯು ಅನುದಾನ ನೀಡದಿದ್ದರೂ ಅವುಗಳನ್ನು ನಿಯಂತ್ರಿಸುವ ಅಧಿಕಾರ ಹೊಂದಿದೆ ಎಂದು ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿತು. ಜೊತೆಗೆ ಖಾಸಗಿ ವಿ.ವಿ.ಗಳು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳೂ ತಮ್ಮ ನಿಗದಿತ ಪ್ರಾದೇಶಿಕ ವ್ಯಾಪ್ತಿಯನ್ನು ಮೀರಬಾರದು ಎಂದಿತು. ಯುಜಿಸಿಯ ಮಾಜಿ ಅಧ್ಯಕ್ಷ ಪ್ರೊ. ಯಶಪಾಲ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶ, ಕೆಲವೇ ವರ್ಷಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದ ಛತ್ತೀಸ್‌ಗಡದ 110ಕ್ಕೂ ಹೆಚ್ಚು ಖಾಸಗಿ ವಿಶ್ವವಿದ್ಯಾಲಯಗಳು, ದೇಶದಾದ್ಯಂತ ಹರಡಿದ್ದ ಅವುಗಳ ಅಂಗಸಂಸ್ಥೆಗಳನ್ನು ಮುಚ್ಚಿಸುವುದು. ಈ ತೀರ್ಪು ಯುಜಿಸಿಗೆ ಹೊಸ ನಿಯಂತ್ರಕ ಅಧಿಕಾರ ನೀಡಿದ್ದಲ್ಲದೆ ಎಲ್ಲೆಡೆ ಕೇಂದ್ರಗಳನ್ನು ತೆರೆಯುವ ವಿ.ವಿ.ಗಳ ಸ್ವಾತಂತ್ರ್ಯ ಮೊಟಕುಗೊಳಿಸಿತು.

2009ರ ಎರಡನೆಯ ಬೆಳವಣಿಗೆ ಮಾನವ ಸಂಪನ್ಮೂಲ ಸಚಿವಾಲಯದ ನಿರ್ದೇಶನ. ಇದರ ಮೂಲಕ ತಾಂತ್ರಿಕ (ಎಂಜಿನಿಯರಿಂಗ್) ಶೈಕ್ಷಣಿಕ ಕಾರ್ಯಕ್ರಮಗಳನ್ನು ದೂರಶಿಕ್ಷಣ ಮಾಧ್ಯಮದ ಮೂಲಕ ನೀಡಬಾರದು ಮತ್ತು 2009– 10ರ ನಂತರ ಪ್ರವೇಶಾತಿ ನಿಲ್ಲಿಸಬೇಕು ಎಂದು ಆದೇಶಿಸಲಾಯಿತು. ದೂರಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಹಲವಾರು ರಾಜ್ಯ ವಿ.ವಿ.ಗಳು ಮತ್ತು ರಾಜ್ಯ ಮುಕ್ತ ವಿ.ವಿ.ಗಳು  ಇಷ್ಟವಿಲ್ಲದಿದ್ದರೂ ಯುಜಿಸಿ ಮತ್ತು ದೂರಶಿಕ್ಷಣ ಮಂಡಳಿಯ ಒತ್ತಡಕ್ಕೆ ಮಣಿದು ಒಂದೆರಡು ವರ್ಷ ನಿಲ್ಲಿಸಿದವು. ಮತ್ತೆ ಕೆಲವು ಖಾಸಗಿ ಹಾಗೂ ರಾಜ್ಯ ವಿ.ವಿ.ಗಳು ಈಗಲೂ ಯುಜಿಸಿಯನ್ನು ಧಿಕ್ಕರಿಸಿ ಕೆಲವೊಮ್ಮೆ ಬಹಿರಂಗವಾಗಿ ಮತ್ತು ಬಹುಮಟ್ಟಿಗೆ ರಹಸ್ಯವಾಗಿ ದೇಶದೆಲ್ಲೆಡೆ ಎಲ್ಲ ಬಗೆ ಪದವಿಗಳನ್ನೂ ಕೊಡುತ್ತಿವೆ.

ಈ ಹೊಸ ನೀತಿಗಳು ಮತ್ತು ನಿರ್ದೇಶನಗಳನ್ನು ಪ್ರಶ್ನಿಸುತ್ತಾ ಕೆ.ಎಸ್‌.ಒ.ಯು. ಎರಡು ವಾದಗಳನ್ನು ಮುಂದಿಟ್ಟಿತು. ಮೊದಲಿಗೆ, ಕೆ.ಎಸ್‌.ಒ.ಯು. ಕಾಯ್ದೆಯ 3(2) ಅನುಚ್ಛೇದ ತನಗೆ ಪ್ರಾದೇಶಿಕ ವ್ಯಾಪ್ತಿ ಮೀರಲು ಅವಕಾಶ ನೀಡುತ್ತದೆ. ಎರಡನೆಯದಾಗಿ, ದೂರಶಿಕ್ಷಣ ಮಂಡಳಿಯು ಇಗ್ನೊದ ಅಂಗವಾಗಿದೆ. ಹಾಗಾಗಿ, ಕೆ.ಎಸ್‌.ಒ.ಯು.ವಿನ ಪ್ರತಿಸ್ಪರ್ಧಿ ಸಂಸ್ಥೆಯಾದ ಇಗ್ನೊ ನಿಯಂತ್ರಕನಾಗಿಯೂ ಕಾರ್ಯ ನಿರ್ವಹಿಸುವುದು ಸೂಕ್ತವಲ್ಲ ಎಂದು ವಾದಿಸಿ, ಕಾನೂನಿನ ಮೊರೆ ಹೊಕ್ಕಿತು. ಈ ನ್ಯಾಯ ವಿವಾದ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದೆ.

ಶೈಕ್ಷಣಿಕ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ 2012– 13ರ ನಂತರ ಕೆ.ಎಸ್‌.ಒ.ಯು. ಪದೇಪದೇ ಯತ್ನಿಸಿದರೂ ಯುಜಿಸಿ ಸ್ಪಂದಿಸುತ್ತಿಲ್ಲ. ಅದರ ನಿಲುವು ಸರಳವಾಗಿ ಇಷ್ಟೇ: ಕೆ.ಎಸ್‌.ಒ.ಯು. ವೃತ್ತಿಶಿಕ್ಷಣ ಕಾರ್ಯಕ್ರಮಗಳನ್ನು ನಿಲ್ಲಿಸಿ, ತನ್ನ ಪ್ರಾದೇಶಿಕ ವ್ಯಾಪ್ತಿಗೆ ಸೀಮಿತವಾಗದಿದ್ದರೆ ಅದರ ಯಾವುದೇ ಪ್ರಸ್ತಾವವನ್ನೂ ಪರಿಗಣಿಸುವುದಿಲ್ಲ. ಕಳೆದೆರಡು ವರ್ಷಗಳಲ್ಲಿ ಯುಜಿಸಿಯ ಅಧಿಕಾರಿಗಳ ಆಕ್ರಮಣಶೀಲ ಮತ್ತು ಹಗೆತನದ ಮನೋಭಾವವನ್ನು ಕೆ.ಎಸ್‌.ಒ.ಯು.ವಿನ ಶಾಸನಬದ್ಧ ಅಧಿಕಾರಿಗಳು ಮತ್ತು ವೈಯಕ್ತಿಕವಾಗಿ ನಾನೂ ಅನುಭವಿಸಿದ್ದೇವೆ.

ಕೆ.ಎಸ್‌.ಒ.ಯು. ಆಡಳಿತ ವರ್ಗ ಸತತವಾಗಿ ಕಳೆದ ನಾಲ್ಕು ವರ್ಷಗಳಿಂದ ಮಾಡುತ್ತಿರುವ ಮತ್ತೊಂದು ವಾದ ಇದು. ಇದೇ ಬಗೆಯ ಉಲ್ಲಂಘನೆಗಳನ್ನು ಮಾಡುತ್ತಿರುವ ಕೆ.ಎಸ್‌.ಒ.ಯು.ವಿನ ಪ್ರತಿಸ್ಪರ್ಧಿ ವಿ.ವಿ.ಗಳ ಮೇಲೆ ಯುಜಿಸಿಯೂ ಸೇರಿದಂತೆ ಎಲ್ಲ ನಿಯಂತ್ರಕರೂ  ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಉದಾಹರಣೆಗೆ, ಸಿಕ್ಕಿಂ ಮಣಿಪಾಲ್ ವಿ.ವಿ. ಅಥವಾ ವಿನಾಯಕ ಮಿಶನ್ ವಿ.ವಿ.ಯಂತಹ ಖಾಸಗಿ ಸಂಸ್ಥೆಗಳು ಹಾಗೂ ಕರ್ನಾಟಕದ ಒಳಗಿನ ಮತ್ತು ನೆರೆಹೊರೆಯ ರಾಜ್ಯಗಳ ರಾಜ್ಯ ವಿ.ವಿ.ಗಳ ದೂರಶಿಕ್ಷಣ ನಿರ್ದೇಶನಾಲಯಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯನ್ನು ಗೌರವಿಸುತ್ತಿಲ್ಲ.

ಇದು ಯುಜಿಸಿಯಿಂದ ಯಾವುದೇ ಅನುದಾನ ಪಡೆಯದ ಕೆ.ಎಸ್‌.ಒ.ಯು. ತನ್ನ ವ್ಯಾಪ್ತಿಯೊಳಗೆ ಬರುವ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸದೃಢವಾದ ಸಂಸ್ಥೆಯನ್ನು ಕಟ್ಟಲು ಅನುವು ಮಾಡಿಕೊಡುತ್ತಿಲ್ಲ. ಅಷ್ಟೇ ಅಲ್ಲದೆ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹಲವಾರು ವಿ.ವಿ.ಗಳಿಂದ ಅಕ್ರಮವಾಗಿ ಸಂಶೋಧನಾ ಪದವಿ ಸೇರಿದಂತೆ ಎಲ್ಲ ಬಗೆಯ ಪದವಿಗಳೂ ಬಿಕರಿಗೆ ಲಭ್ಯವಿವೆ ಎಂಬ ಮಾತುಗಳು ವ್ಯಾಪಕವಾಗಿಯೇ ಕೇಳಿಬರುತ್ತವೆ. ಅಲ್ಲಿನ ರಾಜ್ಯ ಸರ್ಕಾರಗಳೇ ಪಿಎಚ್‌.ಡಿ ಸೇರಿದಂತೆ ಹಲವು ಪದವಿಗಳನ್ನು ಮಾನ್ಯ ಮಾಡುತ್ತಿಲ್ಲ. ಅಲ್ಲದೆ ಈ ವಿ.ವಿ.ಗಳ ಪೈಕಿ ಕೆಲವರ ಮಾನ್ಯತೆಯೂ ನವೀಕೃತವಾಗಿಲ್ಲ. ಉದಾಹರಣೆಗೆ, ಯುಜಿಸಿಯ ದೂರಶಿಕ್ಷಣ ಕಚೇರಿಯ ಅಂತರ್ಜಾಲ ತಾಣದ ಮಾಹಿತಿಯ ಪ್ರಕಾರ ಸಿಕ್ಕಿಂ ಮಣಿಪಾಲ್ ವಿ.ವಿ. 2011– 12ರ ನಂತರ ಮಾನ್ಯತೆ ನವೀಕರಿಸಿಕೊಂಡಿಲ್ಲ.

ಈ ನಡುವೆ ಸಂಭವಿಸಿರುವ ಗಮನಾರ್ಹ ಬೆಳವಣಿಗೆಯೆಂದರೆ, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದ ಮೇರೆಗೆ 2014ರ ಆಗಸ್‌್ಟನಿಂದ ಕೆ.ಎಸ್‌.ಒ.ಯು. ತನ್ನ ಮೊದಲಿನ ನಿಲುವನ್ನು ಬದಲಿಸಿಕೊಂಡಿದೆ. ರಾಜ್ಯದ ಪ್ರಾದೇಶಿಕ ವ್ಯಾಪ್ತಿಯೊಳಗೆ ವ್ಯವಹರಿಸಲು ಮತ್ತು ವೃತ್ತಿಶಿಕ್ಷಣ ಕಾರ್ಯಕ್ರಮಗಳನ್ನು ಮುಚ್ಚಲು ನಿರ್ಣಯಿಸಿದೆ. ಆದರೂ ಮಾನ್ಯತೆ ನವೀಕರಣಕ್ಕೆ ಆಗಸ್ಟ್ 2014ರ  ನಿರ್ಣಯದ ನಂತರ ಕೆ.ಎಸ್‌.ಒ.ಯು. ಮಾಡಿದ ಮನವಿಯನ್ನು ಯುಜಿಸಿ ತಳ್ಳಿಹಾಕಿದೆ.

ಬಹುಶಃ  ಇಂದು ಇರುವ ಒಂದು ತೊಡಕೆಂದರೆ ಈಗಾಗಲೇ ನೋಂದಾಯಿತರಾಗಿರುವ ವಿದ್ಯಾರ್ಥಿಗಳಿಗೆ ಕೋರ್ಸ್ ಮುಗಿಸಲು ಹೇಗೆ ಅವಕಾಶ  ಮಾಡಿಕೊಡಬೇಕೆಂಬುದು. ಈ ಪ್ರಶ್ನೆ ಸಹ ಉದ್ಭವಿಸುವುದು ಕೆ.ಎಸ್‌.ಒ.ಯು.ವಿನ ನೇರ ವಿದ್ಯಾರ್ಥಿಗಳ ಸಂದರ್ಭದಲ್ಲಲ್ಲ, ಬದಲಿಗೆ ಕರ್ನಾಟಕದ ಆಚೆಗಿನ ಮತ್ತು ವೃತ್ತಿಪರ ಕಾರ್ಯಕ್ರಮಗಳ ವಿದ್ಯಾರ್ಥಿಗಳಿಗೆ. ಅವರ ಪದವಿಗಳಿಗೆ ಯುಜಿಸಿ ಮಾನ್ಯತೆ ಮೊದಲಿನಿಂದಲೂ ಇರಲಿಲ್ಲ. ಹಾಗಾಗಿ ಈಗ ಯುಜಿಸಿ ಮಾನ್ಯತೆ ನೀಡಬೇಕಿಲ್ಲ. ಕೆ.ಎಸ್‌.ಒ.ಯು. ಈ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೂಪದಲ್ಲಿ ಮುಚ್ಚುವುದಕ್ಕೆ ಯುಜಿಸಿ ಅನುವು ಮಾಡಿಕೊಡಬೇಕಿತ್ತು. ಬದಲಿಗೆ 2014ರ ಆಗಸ್ಟ್ ನಂತರದಲ್ಲಿ ಯುಜಿಸಿ ಹೊಸ ಆರೋಪಗಳನ್ನು ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದೆ.

ಉದಾಹರಣೆಗೆ, ಸಾಂಪ್ರದಾಯಿಕ ಮಾದರಿಯಲ್ಲೇ ನಡೆಯುವ ಎಂ.ಫಿಲ್. ಮತ್ತು ಪಿಎಚ್.ಡಿ. ಪದವಿಗಳನ್ನು ದೂರಶಿಕ್ಷಣದ ಮಾದರಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸುತ್ತಾ, ಅವುಗಳನ್ನು ಮುಚ್ಚುವಂತೆ ನಿರ್ದೇಶನ ನೀಡಿದೆ. ಇದನ್ನೆಲ್ಲ ಗಮನಿಸಿದಾಗ ಯುಜಿಸಿಯ ಉದ್ದೇಶ ಕೆ.ಎಸ್‌.ಒ.ಯು.ವಿನ ಸೊಕ್ಕಡಗಿಸಿ, ಅದನ್ನು ಇತರರಿಗೆ ಉದಾಹರಣೆಯನ್ನಾಗಿಸುವುದು ಎಂದು ಒಮ್ಮೊಮ್ಮೆ ಅನ್ನಿಸುತ್ತದೆ.

ವಾಸ್ತವವಾಗಿ ಕೆ.ಎಸ್‌.ಒ.ಯು.ವಿನಲ್ಲಿ ನೋಂದಣಿ ಮಾಡಿಕೊಂಡು, ಶಿಕ್ಷಣ ಮತ್ತು ಪದವಿ ಪಡೆದಿರುವ ಕರ್ನಾಟಕದೊಳಗಿನ ವಿದ್ಯಾರ್ಥಿಗಳಿಗೆ ಈಗಿನ ಬೆಳವಣಿಗೆಯಿಂದ ತೊಂದರೆಯಾಗದು. ಇದಲ್ಲದೆ ಈಗ ಕೆ.ಎಸ್‌.ಒ.ಯು. ಯುಜಿಸಿಯ ಎಲ್ಲ ನಿರ್ದೇಶನಗಳನ್ನು ಅನುಸರಿಸುವುದಾಗಿ ಪುನರುಚ್ಚರಿಸಿದೆ. ಹಾಗಾಗಿ ಮತ್ತೆ ಮಾನ್ಯತೆ ಲಭಿಸುವುದು ಸ್ವಾಭಾವಿಕವಾಗಿ ಆಗುವ ತಾಂತ್ರಿಕ ಪ್ರಕ್ರಿಯೆ. ಆದರೆ ವೃತ್ತಿಶಿಕ್ಷಣದ ವಿದ್ಯಾರ್ಥಿಗಳ  ವಿಚಾರದಲ್ಲಿ,  ಮೇಲೆ ಗುರುತಿಸಿದಂತೆ ಯುಜಿಸಿ ಮನ್ನಣೆ ಪಡೆಯುವ ಅಥವಾ ದೊರಕುವ ಪ್ರಶ್ನೆ ಇಲ್ಲ.

ಪ್ರತಿ ಬಿಕ್ಕಟ್ಟೂ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. 2009ರ ನಂತರದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿದಾಗ, ಕೆ.ಎಸ್‌.ಒ.ಯು. ತನ್ನ ಕಾಯ್ದೆಯನ್ನೂ  ಯುಜಿಸಿ ನಿಯಮಾವಳಿಗಳ ಚೌಕಟ್ಟಿನೊಳಗೆ ವ್ಯಾಖ್ಯಾನಿಸುವುದು ಸೂಕ್ತ. ರಾಜ್ಯ ಸರ್ಕಾರವೂ ಇದೇ ನಿಲುವನ್ನು 2014ರ ಆಗಸ್‌್ಟನಿಂದ ತಳೆದಿದೆ. ಯುಜಿಸಿ ಸಹ ಕೆ.ಎಸ್‌.ಒ.ಯು. ಕಾಯ್ದೆಯಲ್ಲಿ ತನ್ನ ನಿಯಮಗಳ ವಿರುದ್ಧ ವರ್ತಿಸಲು ಅವಕಾಶ ಮಾಡಿಕೊಡುವ ಅನುಚ್ಛೇದಗಳನ್ನು ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿದೆ. ಜೊತೆಗೆ ಎಲ್ಲೆಡೆ ಅಧ್ಯಯನ ಕೇಂದ್ರಗಳನ್ನು ತೆಗೆಯುವುದು, ಖಾಸಗಿ ಸಹಯೋಗದಿಂದ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುವುದು ವಿಶ್ವವಿದ್ಯಾಲಯದ ಕಾರ್ಯಕ್ಷಮತೆ ಮತ್ತು ಶೈಕ್ಷಣಿಕ ವಾತಾವರಣವನ್ನು ಪೋಷಿಸುವ ದೃಷ್ಟಿಯಿಂದ ಒಳ್ಳೆಯದಲ್ಲವೇನೊ ಎಂಬ ಅರಿವು ಕೆ.ಎಸ್‌.ಒ.ಯು. ಒಳಗೆ ಕೆಲವರಲ್ಲಾದರೂ ಮೂಡಿದೆ.

ಕೆ.ಎಸ್‌.ಒ.ಯು.ಗೆ ಹೊಸ ಆಯಾಮ ನೀಡಲು ಇರುವ ಅಡಚಣೆಗಳ ನಿವಾರಣೆಯಾಗಬೇಕಿದೆ. ಕರ್ನಾಟಕವು ಕೆ.ಎಸ್‌.ಒ.ಯು.ವಿನ ವ್ಯಾಪ್ತಿ ಎನ್ನುವುದಾದರೆ, ಇದರೊಳಗೆ ಈಗ ಕಾರ್ಯ ನಿರ್ವಹಿಸುತ್ತಿರುವ ಹೊರ ರಾಜ್ಯಗಳ ದೂರಶಿಕ್ಷಣ ಸಂಸ್ಥೆಗಳನ್ನು ನಿರ್ಬಂಧಿಸುವ ಮತ್ತು ರಾಜ್ಯದ ವಿ.ವಿ.ಗಳ ದೂರಶಿಕ್ಷಣ ನಿರ್ದೇಶನಾಲಯಗಳು ತಮ್ಮ ವಿ.ವಿ.ಯ ವ್ಯಾಪ್ತಿಯೊಳಗೆ ಮಾತ್ರ ಕಾರ್ಯ ನಿರ್ವಹಿಸುವಂತೆ ಮಾಡುವ ಹೊಣೆಗಾರಿಕೆ ರಾಜ್ಯ ಸರ್ಕಾರ ಮತ್ತು ಯುಜಿಸಿಗಳೆರಡರ ಮೇಲೂ ಇದೆ. ಇದಾಗದಿದ್ದರೆ ಕೆ.ಎಸ್‌.ಒ.ಯು.ಗೆ ಕೈಕಾಲು ಕಟ್ಟಿ ಸ್ಪರ್ಧಿಸಲು ಹೇಳಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT