ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಗತ ಇಂಟರ್ನೆಟ್!

ಅಕ್ಷರ ಗಾತ್ರ

‘ಬಳಸಿದರೆ ಪೊಲೀಸರ ಕೈಗೆ ಸಿಕ್ಕಿಬೀಳದಷ್ಟು ಅಸಲಿಯಾಗಿರುವ ಮಲೇಷ್ಯಾದ ಪಾಸ್ ಪೋರ್ಟ್ ಬೇಕು, ಸಹಾಯ ಮಾಡಿ’ ಎಂದು

ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕಿದರೆ ತಕ್ಷಣವೇ ನಿಮ್ಮ ಪ್ರಸಿದ್ಧಿಯ ಅಥವಾ ಕುಪ್ರಸಿದ್ಧಿಯ ಮಟ್ಟಕ್ಕೆ ಅನುಗುಣವಾಗಿ ಸುಮಾರು ಒಂದು ಒಂದೂವರೆ ಗಂಟೆಯಿಂದ ಆರಂಭಿಸಿ ಒಂದೆರಡು ದಿನಗಳೊಳಗೆ ಪೊಲೀಸರು ನಿಮ್ಮನ್ನು ಬಂಧಿಸುತ್ತಾರೆ.

ಒಂದು ವೇಳೆ ಇದೇ ವಿನಂತಿಯನ್ನು Tor ಬ್ರೌಸರ್ ಬಳಸಿ ಸಿಲ್ಕ್ ರೋಡ್ನ ಫೋರಂನಲ್ಲಿ ಪ್ರಕಟಿಸಿದರೆ ಇಷ್ಟೇ ಹೊತ್ತಿನಲ್ಲಿ ನಿಮಗೆ ಬೇಕಿರುವ ನಕಲಿ ಪಾಸ್‌ಪೋರ್ಟ್ ದೊರೆಯುವ ಸಾಧ್ಯತೆಯೇ ಹೆಚ್ಚು.

ಇದು ಸೈಬರ್ ಪ್ರಪಂಚದ ಅಧೋಲೋಕ. ಸಿಲ್ಕ್‌ರೋಡ್ ಈ ಭೂಗತ ಜಗತ್ತಿನ ಮಾರುಕಟ್ಟೆಯಷ್ಟೇ. ಇಂಥ ಇನ್ನೂ ಹಲವು ಮಾರುಕಟ್ಟೆಗಳು ಇಲ್ಲಿವೆ. ಆದರೆ ಸದ್ಯಕ್ಕೆ ಹೊರಜಗತ್ತಿನ ಕಾನೂನಿನ ಕಣ್ಣಿಗೆ ಸಿಕ್ಕಿಬಿದ್ದದ್ದು ಸಿಲ್ಕ್‌ರೋಡ್ ಮಾತ್ರ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಸೈಬರ್ ಜಗತ್ತಿನ ಭೂಗತ ಮಾರುಕಟ್ಟೆ ಸಿಲ್ಕ್ ರೋಡ್ನ ಮೇಲೆ ದಾಳಿ ಮಾಡಿ ಅದನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ಒಂದೇ ತಿಂಗಳಿನಲ್ಲಿ ಸಿಲ್ಕ್ ರೋಡ್ 2.0 ಎಂಬ ಹೆಸರಿನಲ್ಲಿ ಈ ಮಾರುಕಟ್ಟೆ ತನ್ನ ಚಟುವಟಿಕೆಯನ್ನು ಮತ್ತೆ ಆರಂಭಿಸಿತು. ಅಲ್ಲೀಗ ಹಿಂದಿನಂತೆಯೇ ನಿಷೇಧಿತ ಮಾದಕ ವಸ್ತುಗಳು, ನಕಲಿ ಪಾಸ್‌ಪೋರ್ಟ್ಗಳು, ಶಿಶುಕಾಮದ ವಿಡಿಯೊಗಳು, ಕದ್ದು ತಂದ ಐಫೋನ್, ಕಳವು ಮಾಡಿರುವ ಬಂಗಾರ ಹೀಗೆ ಹೊರಜಗತ್ತಿನಲ್ಲಿ ನಿಷಿದ್ಧವಾದ ಎಲ್ಲವೂ ಖರೀದಿಸಲು ಸಿಗುತ್ತವೆ.

ಆನ್ಲೈನ್ ಖರೀದಿ ಎಂದಾಕ್ಷಣ ಹಣ ಪಾವತಿಸಲು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಬೇಕಲ್ಲ. ಅಲ್ಲಿಗೆ ಇದು ಕಾನೂನಿನ ಕಣ್ಣಿಗೆ ಸಿಗದ ವ್ಯವಹಾರ ಹೇಗಾಗುತ್ತದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿರಬಹುದು. ಅದಕ್ಕೆ ಸೈಬರ್ ಜಗತ್ತು ಬಹಳ ಹಿಂದೆಯೇ ಉತ್ತರ ಕಂಡುಕೊಂಡಿದೆ. ಅದುವೇ ಬಿಟ್‌ಕಾಯಿನ್ ಎಂಬ ವರ್ಚುವಲ್ ಕರೆನ್ಸಿ.

ಸಿಲ್ಕ್ ರೋಡ್‌ನಲ್ಲಿ ನಡೆಸುವ ಎಲ್ಲಾ ಖರೀದಿಗಳಿಗೂ ಬಿಟ್‌ಕಾಯಿನ್ ಬಳಸಬಹುದು. ದುಡ್ಡು ಕೊಡುವುದು ಯಾರು ಪಡೆಯುವವರು ಯಾರು ಎಂಬುದು ಯಾರಿಗೂ ತಿಳಿಯದಂತೆ ಇದರಲ್ಲಿ ವ್ಯವಹರಿಸಬಹುದು.

ಇಳಿದಷ್ಟೂ ಆಳ...
ಇಂಟರ್ನೆಟ್ ಪ್ರಪಂಚದೊಳಗೊಂದು ಭೂಗತ ಲೋಕವಿರುವುದು ಹೊಸ ವಿಚಾರವೇನೂ ಅಲ್ಲ. ಇಂಟರ್ನೆಟ್‌ನ ಆರಂಭದ ದಿನಗಳಲ್ಲಿ ಅದನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ಕಾನೂನುಗಳು ಯಾವ ದೇಶದಲ್ಲೂ ಇರಲಿಲ್ಲ.

ಎಲ್ಲದಕ್ಕಿಂತ ಹೆಚ್ಚಾಗಿ ಜಾಲದೊಳಗೆ ವಿಹರಿಸುವವರ ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನವಿನ್ನೂ ಈಗಿನಷ್ಟು ಅಭಿವೃದ್ಧಿಗೊಂಡಿರಲಿಲ್ಲ. ಶಿಷ್ಟತೆಗಳು ರೂಢಿಗೆ ಬಂದಿರಲಿಲ್ಲ. ಇದನ್ನೇ ಬಳಸಿಕೊಂಡು ಇಂಟರ್ನೆಟ್ ಆರಂಭದ ದಿನಗಳಲ್ಲಿ ಈಗ ಭೂಗತವಾಗಿರುವುದೆಲ್ಲಾ ಬಹಿರಂಗವಾಗಿಯೇ ಇತ್ತು. ನಿಧಾನವಾಗಿ ಕಾನೂನುಗಳು ಬಿಗಿಯಾದವು, ತಂತ್ರಜ್ಞಾನದ ಸ್ವರೂಪ ಬದಲಾಗುತ್ತಾ ಹೋದಂತೆ ಕಾನೂನುಬಾಹಿರ ಚಟುವಟಿಕೆಗಳೆಲ್ಲವೂ ಇಂಟರ್ನೆಟ್ ಮೇಲ್ಪದರದಿಂದ ಕಾಣೆಯಾದವು.

ಸೈಬರ್ ಜಗತ್ತಿನ ಭೂಗತ ವ್ಯವಹಾರ ಹಾಗೂ ನಿಜ ಜಗತ್ತಿನ ಭೂಗತ ವ್ಯವಹಾರಗಳ ಮಧ್ಯೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‌ಫರ್‌ನಂಥ ಅಧಿಕೃತ ವ್ಯವಹಾರದಷ್ಟೇ ದಕ್ಷತೆ ಮತ್ತು ವಿಶ್ವಾಸಾರ್ಹತೆಯಲ್ಲಿ ಹವಾಲ ವ್ಯವಹಾರವೂ ನಡೆಯುತ್ತದೆ.

ಇದನ್ನು ಇಂಟರ್ನೆಟ್ ಜಗತ್ತಿಗೆ ಅನ್ವಯಿಸಿ ಹೇಳುವುದಾದರೆ ಅಮೆಜಾನ್‌ನ ವಿಶ್ವಾಸಾರ್ಹತೆಯನ್ನೇ ಸಿಲ್ಕ್ ರೋಡ್‌ನಂಥ ವ್ಯವಸ್ಥೆಯೂ ಉಳಿಸಿಕೊಂಡಿದೆ. ಇಲ್ಲಿ ಮಾರಾಟಗಾರರು ಮತ್ತು ಗಿರಾಕಿಗಳ ನಡುವೆ ಸಂಬಂಧ ಕುದುರುವುದು ಹೇಗೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಇದಕ್ಕೆ ಉತ್ತರ ನಮ್ಮ ನಿಜ ಜಗತ್ತಿನ ಸಭೂಗತ ವ್ಯವಹಾರದಲ್ಲಿಯೇ ಇದೆ.

ಹವಾಲ ಬಳಸಿ ಹಣಕಳುಹಿಸಲು ತೀರ್ಮಾನಿಸಿದರೆ ಅದರ ಮಾರ್ಗಗಳು ಎಲ್ಲರೆದರೂ ತೆರೆದುಕೊಳ್ಳುತ್ತವೆ. ಸಿಲ್ಕ್ ರೋಡ್ ಕೂಡಾ ಅಷ್ಟೇ ಬಳಸಬೇಕೆನ್ನುವವರಿಗೆ ಅದು ಲಭ್ಯ. ಅದಕ್ಕೆ ಬೇಕಿರುವುದು ಒಂದು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್, ಅಂತರ್ಜಾಲ ಸಂಪರ್ಕ ಮತ್ತು ಅಗತ್ಯವಿರುವಷ್ಟು ಬಿಟ್‌ಕಾಯಿನ್‌ಗಳು ಮಾತ್ರ.

ಅದೃಶ್ಯ ಹೆಜ್ಜೆಗುರುತು!
ಎಡ್ವರ್ಡ್ ಸ್ನೋಡೆನ್ ಬಹಿರಂಗ ಪಡಿಸಿದ ಮಾಹಿತಿಗಳು ತಿಳಿಸುತ್ತಿರುವಂತೆ ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ ಅಂತರ್ಜಾಲ ಮತ್ತು ದೂರವಾಣಿ ವ್ಯವಹಾರಗಳನ್ನೆಲ್ಲಾ ದಾಖಲಿಸುತ್ತಿದೆ. ಭಾರತಕ್ಕೆ ಬಂದರೆ ಸಿಎಂಎಸ್ ಅಥವಾ ಅದರ ಹೊಸ ಹೆಸರಾಗಿರುವ ‘ನೇತ್ರ’ ಇದೇ ಕೆಲಸ ಮಾಡುತ್ತದೆ.

ಅಂತರ್ಜಾಲದಲ್ಲಿ ನಡೆಯುವ ಪ್ರತೀ ವ್ಯವಹಾರವೂ ದಾಖಲಾಗುತ್ತಿರುವ ಹೊತ್ತಿನಲ್ಲಿ ಅದರ ಕಣ್ಣಿಗೆ ಬೀಳದಂತೆ ವ್ಯವಹರಿಸಲು ಸಾಧ್ಯವಾದದ್ದು ಹೇಗೆ? ಈ ಪ್ರಶ್ನೆ ಜಗತ್ತಿನ ಎಲ್ಲಾ ದೇಶಗಳ ಪೊಲೀಸ್ ವ್ಯವಸ್ಥೆ ಮತ್ತು ಭದ್ರತಾ ಏಜೆನ್ಸಿಗಳನ್ನೂ ಕಾಡುತ್ತಿದೆ. ಅದರ ಅರ್ಥ ಈ ಭೂಗತ ಜಗತ್ತು ಹೇಗೆ ಅಸ್ತಿತ್ವದಲ್ಲಿದೆ ಎಂದು ಅವರಿಗೆ ಅರ್ಥವಾಗಿಲ್ಲ ಎಂದಲ್ಲ. ಆದರೆ ಇದನ್ನು ನಿಯಂತ್ರಿಸುವುದು ಹೇಗೆಂದು ಅವುಗಳಿಗೆ ತಿಳಿಯುತ್ತಿಲ್ಲ. ಖಾಸಗಿ ಗುಟ್ಟುಗಳನ್ನು ಇಟ್ಟುಕೊಳ್ಳುವುದು ಅಪರಾಧವಲ್ಲ.

ಬಹಳ ವೈಯಕ್ತಿಕವಾಗಿರುವ ಈ ಗುಟ್ಟುಗಳನ್ನು ಇಟ್ಟುಕೊಳ್ಳುವುದಕ್ಕಾಗಿ ತಂತ್ರಜ್ಞಾನ ಬಳಸುವುದೂ ಅಪರಾಧವಲ್ಲ. ಇಂಟರ್ನೆಟ್ನಲ್ಲಿ ನಾವು ನಡೆಸುವ ವಿಹಾರಗಳು ಹೆಜ್ಜೆ ಗುರುತುಗಳನ್ನು ಉಳಿಸುತ್ತದೆ ಎಂಬುದು ಅರಿವಾದುದರ ಹಿಂದೆಯೇ ಅವುಗಳನ್ನು ಅಳಿಸಿಬಿಡುವ ಅಥವಾ ಈ ಹೆಜ್ಜೆಗುರುತುಗಳನ್ನು ಮೂಡಿಸದೆಯೇ ವಿಹರಿಸುವ ತಂತ್ರಜ್ಞಾನದ ಆವಿಷ್ಕಾರವೂ ಆಯಿತು.

ಅದರಲ್ಲೊಂದು Tor ಅಥವಾ ಟಾರ್. ಇದನ್ನು ಯಾರು ಬೇಕಾದರೂ ತಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳಬಹುದು. ಫೈರ್‌ಫಾಕ್ಸ್ ಬಳಕೆದಾರರಾಗಿದ್ದರೆ ತಮ್ಮ ಬ್ರೌಸರ್‌ಗೆ ಟಾರ್ ಬಟನ್ ಅಳವಡಿಸಿಕೊಂಡರೆ ಸಾಕು. ಇಲ್ಲವಾದರೆ ಟಾರ್ ಅಳವಡಿಸಲಾಗಿರುವ ಬ್ರೌಸರ್ ಪ್ಯಾಕೇಜ್ ಕೂಡಾ ಮುಕ್ತವಾಗಿ ದೊರೆಯುತ್ತದೆ. ಇದಕ್ಕೆ ಹಣ ಕೊಡಬೇಕಾಗಿಯೂ ಇಲ್ಲ.

ಒಮ್ಮೆ ಟಾರ್ ಬ್ರೌಸರ್ ಡೌನ್‌ಲೋಡ್ ಮಾಡಿ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಅನುಸ್ಥಾಪಿಸಿದರೆ ಮುಂದಿರುವುದು ಟಾರ್ ಮಾದರಿಯಲ್ಲಿ ಇಂಟರ್ನೆಟ್ನಲ್ಲಿ ಜಾಲಾಡುವ ಕೆಲಸ ಮಾತ್ರ. ಇದಕ್ಕೆ ತಜ್ಞತೆಯ ಅಗತ್ಯವಿಲ್ಲವಾದರೂ ಸ್ವಲ್ಪ ಮಟ್ಟಿಗೆ ಕಂಪ್ಯೂಟರ್ ಜ್ಞಾನದ ಅಗತ್ಯವಿದೆ. ಟಾರ್ ಬ್ರೌಸಿಂಗ್‌ಗೆ ಅಗತ್ಯವಿರುವ ವ್ಯವಸ್ಥೆಯನ್ನು ಮಾಡಿಕೊಂಡು ಇಂಟರ್ನೆಟ್ ಪ್ರವೇಶಿಸಿದವರನ್ನು ಹಿಂಬಾಲಿಸುವುದು ಅಥವಾ ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚುವುದು ಬಹಳ ಕಷ್ಟ.

ಇದನ್ನೇ ಬಳಸಿಕೊಂಡು ಸಿಲ್ಕ್ ರೋಡ್‌ನಂಥ ಭೂಗತ ಮಾರುಕಟ್ಟೆ ತನ್ನ ವ್ಯವಹಾರಗಳನ್ನು ನಡೆಸುತ್ತದೆ. ಖರೀದಿಗೆ ಬಳಸುವ ಬಿಟ್‌ಕಾಯಿನ್ ತನ್ನ ಸ್ವರೂಪದಲ್ಲಿಯೇ ಸಾಕಷ್ಟು ಅನಾಮಿಕತೆಯನ್ನು ಉಳಿಸಿಕೊಂಡಿದೆ. ಹಾಗಾಗಿ ವ್ಯವಹಾರ ಸಂಪೂರ್ಣ ‘ಸುರಕ್ಷಿತ’.

ಇಷ್ಟೆಲ್ಲಾ ‘ಸುರಕ್ಷಿತ’ವಾಗಿ ವ್ಯವಹರಿಸುವ ಸಿಲ್ಕ್‌ರೋಡ್‌ನ ಮೇಲೆ ಎಫ್‌ಬಿಐ ದಾಳಿ ನಡೆಸಲು ಸಾಧ್ಯವಾಯಿತು ಎಂಬುದನ್ನು ಮರೆಯುವಂತಿಲ್ಲ. ಈ ದಾಳಿ ಎಫ್‌ಬಿಐ ತಾಂತ್ರಿಕವಾಗಿ ಉನ್ನತ ಮಟ್ಟಕ್ಕೇರಿದ್ದನ್ನು ಸೂಚಿಸುತ್ತಿದೆ. ಆದರೆ ಅಷ್ಟೇ ವೇಗದಲ್ಲಿ ಸೈಬರ್ ಭೂಗತ ಜಗತ್ತು ಕೂಡಾ ತನ್ನ ತಂತ್ರಜ್ಞಾನವನ್ನು ಸುಧಾರಿಸಿಕೊಂಡಿದ್ದಕ್ಕೆ ಸಾಕ್ಷಿಯಾಗಿ ಸಿಲ್ಕ್ ರೋಡ್ 2.0 ಕೂಡಾ ನಮ್ಮ ಮುಂದಿದೆ.
ಗೂಂಡಾಗಿರಿಯ ಹೊಸರೂಪ

ಇಷ್ಟಕ್ಕೂ ಇಂಟರ್ನೆಟ್ನ ಆಳಕ್ಕಿಳಿದಾಗ ಸಿಗುವುದು ಕೇವಲ ಭೂಗತ ಜಗತ್ತು ಮಾತ್ರ ಅಲ್ಲ ಎಂಬ ಅಂಶವೂ ನಮಗೆ ತಿಳಿದಿರಬೇಕು. ಇಂಟರ್ನೆಟ್ ನ ಆರಂಭದ ದಿನಗಳಲ್ಲಿ ಅದೊಂದು ಜ್ಞಾನ ಸಂಗ್ರಹ, ಜ್ಞಾನ ಪ್ರಸಾರ ಮತ್ತು ಜ್ಞಾನ ಸೃಷ್ಟಿಯ ಪರಿಕರ ಎಂಬುದಕ್ಕಿಂತ ಹೆಚ್ಚಾಗಿ ಅಶ್ಲೀಲ ಸಾಹಿತ್ಯ ಮತ್ತು ವಿಡಿಯೋಗಳ ಸಂಗ್ರಹ ಎಂಬ ಅರ್ಥದಲ್ಲಿಯೇ ಚರ್ಚೆಗಳು ನಡೆಯುತ್ತಿದ್ದವು.

ಎಷ್ಟರಮಟ್ಟಿಗೆಂದರೆ ಇಂಟರ್ನೆಟ್ ಬಳಕೆಯನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತಂತೆ ಕಾರ್ಯಾಗಾರಗಳನ್ನು ನಡೆಸುವ ಮಟ್ಟಕ್ಕೂ ಈ ಭಯ ವ್ಯಾಪಿಸಿತ್ತು. ಈ ಭಯ ನಿವಾರಣೆಯಾಗಲು ಕೆಲ ಕಾಲ ಬೇಕಾಯಿತು. ಬಹುಶಃ ಅಂದು ಇಂಟರ್ನೆಟ್ ನಡೆಸಬಹುದಾದ ‘ಸಾಂಸ್ಕೃತಿಕ ದಾಳಿ’ಯ ಭೀತಿಗೆ ಒಳಗಾಗಿದ್ದವರೇ ಇಂದು ಇಂಟರ್ನೆಟ್ ಬಳಸಿಕೊಂಡು ಇತರರನ್ನು ಭಯಪಡಿಸುವಷ್ಟು ಬೆಳೆದು ನಿಂತಿದ್ದಾರೆ.

ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ವಿವಿಧ ಧಾರ್ಮಿಕ ಮತ್ತು ರಾಜಕೀಯ ಮೂಲಭೂತವಾದಿ ಸಂಘಟನೆಗಳು. ಇಂದು ಸೋಷಿಯಲ್ ಮೀಡಿಯಾ ಗೂಂಡಾಗಿರಿಯ ಮುಂಚೂಣಿ ಯಲ್ಲಿರುವುದೇ ಈ ಸಂಘಟನೆಗಳ ಸದಸ್ಯರು.

2013ರ ಅಕ್ಟೋಬರ್ ತಿಂಗಳಲ್ಲಿ ಸಿಲ್ಕ್‌ರೋಡ್‌ನ ಪ್ರವರ್ತಕರಲ್ಲಿ ಒಬ್ಬನೆಂದು ಹೇಳಲಾದ ರಾಸ್ ವಿಲಿಯಂ ಉಲ್ಬ್ರಿಕ್ಟ್‌ನನ್ನು ಎಫ್‌ಬಿಐ ಬಂಧಿಸಿತು. ಆದರೆ ಈತನನ್ನು ಬಳಸಿಕೊಂಡು ಸೈಬರ್ ಭೂಗತ ಜಗತ್ತನ್ನು ಮಟ್ಟ ಹಾಕುವುದಕ್ಕೇನೂ ಸಾಧ್ಯವಾಗಲಿಲ್ಲ.

ಸದ್ಯದ ಸ್ಥಿತಿಯನ್ನು ಒಬ್ಬ ಅಥವಾ ಹತ್ತು ಮಂದಿಯನ್ನು ಬಂಧಿಸಿದರೂ ಇಂಥದ್ದೊಂದು ವ್ಯವಸ್ಥೆಯನ್ನು ಸಂಪೂರ್ಣ ಮಟ್ಟ ಹಾಕುವುದು ಸುಲಭವೇನೂ ಇಲ್ಲ. ಇದಕ್ಕೆ ಮುಖ್ಯಕಾರಣ ಇಂಟರ್ನೆಟ್ನ ಮೂಲ ಲಕ್ಷಣವೇ ವಿಶ್ವವ್ಯಾಪಕತ್ವ. ವರ್ಚುವಲ್ ಜಗತ್ತಿನಲ್ಲಿರುವ ಮಾರುಕಟ್ಟೆಯನ್ನು ವಿಶ್ವದ ಯಾವ ಮೂಲೆಯಲ್ಲಿ ಬೇಕಾದರೂ ಕುಳಿತು ನಿಯಂತ್ರಿಸಬಹುದು. ಅದಕ್ಕಿಂತ ಹೆಚ್ಚಾಗಿ ಟಾರ್ ತಂತ್ರಜ್ಞಾನ ಬಳಕೆದಾರ ಮತ್ತು ನಿಯಂತ್ರಕನ ನಡುವಣ ಸಂಪರ್ಕದ ಕೊಂಡಿಯನ್ನು ಎಲ್ಲಿಯೂ ಬಿಟ್ಟುಕೊಡುವುದಿಲ್ಲ.

ಒಂದು ವೇಳೆ ಪತ್ತೆ ಹಚ್ಚಲು ಸಾಧ್ಯವಾದರೂ ದೂರದೇಶದಲ್ಲಿ ಆರೋಪಿ ಕುಳಿತಿದ್ದರೆ ಬಂಧನ ಮತ್ತಷ್ಟು ಕಷ್ಟವಾಗುತ್ತದೆ. ನಿಜ ಜಗತ್ತಿನ ಭೂಗತ ದೊರೆಗಳನ್ನು ಬಂಧಿಸುವುದಕ್ಕೇ ನೂರೆಂಟು ಕಾನೂನಿನ ತೊಂದರೆಗಳಿರುವ ಈ ಜಗತ್ತಿನಲ್ಲಿ ಇಂಟರ್‌ನೆಟ್ ಭೂಗತ ಜಗತ್ತನ್ನು ಮಟ್ಟ ಹಾಕುವುದು ಸುಲಭದ ಸಂಗತಿಯಲ್ಲ ಎಂಬುದಂತೂ ನಿಜ.

ಬಿಟ್ ಕಾಯಿನ್

ಇದು ಜಾಲ ಜಗತ್ತಿನಲ್ಲಿ ಚಲಾವಣೆಯಲ್ಲಿರುವ ನಾಣ್ಯ. ಇದನ್ನೊಂದು ಮುಕ್ತ ತಂತ್ರಾಂಶವಾಗಿ ಆವಿಷ್ಕರಿಸಿದ್ದು ಸಟೋಷಿ ನಕಮೊಟೊ. ಇದು ಈತನ ನಿಜ ಹೆಸರಲ್ಲ. ನಮ್ಮ ಕರೆನ್ಸಿಗಳನ್ನು ರಿಸರ್ವ್ ಬ್ಯಾಂಕ್ ನಿಯಮಗಳ ಮೂಲಕ ನಿಯಂತ್ರಿಸಿದಂತೆ ಈ ನಾಣ್ಯವನ್ನು ಛಾಪಿಸುವುದು ಮತ್ತು ದುಡ್ಡಿನಂತೆ ವಿನಿಮಯಕ್ಕೆ ಬಳಸುವುದನ್ನು ಕ್ರಿಪ್ಟೋಗ್ರಫಿ ಬಳಸಿ ನಿಯಂತ್ರಿಸಲಾಗುತ್ತದೆ.

ಈ ನಾಣ್ಯಗಳನ್ನು ಬಿಟ್‌ಕಾಯಿನ್ ಮೈನಿಂಗ್ ಪ್ರಕ್ರಿಯೆಯಲ್ಲಿ ಛಾಪಿಸಲಾಗುತ್ತದೆ ಅಥವಾ ಸೃಷ್ಟಿಸಲಾಗುತ್ತದೆ. ಆನ್‌ಲೈನ್ ವ್ಯವಹಾರಗಳಿಗೆ ಇದು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸುವುದಕ್ಕಿಂತ ಇದನ್ನು ಬಳಸುವುದು ಸುಲಭ. ಭಾರತದಲ್ಲಿ ಬಿಟ್‌ಕಾಯಿನ್ ವ್ಯವಹಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚೀನಾ ಕೂಡಾ ಇದೇ ಹಾದಿಯನ್ನು ತುಳಿದಿದೆ. ಸಿಲ್ಕ್ ರೋಡ್ ಭೂಗತ ಮಾರುಕಟ್ಟೆಯ ಮೇಲೆ ಎಫ್‌ಬಿಐ ದಾಳಿ ನಡೆಸಿದ ಮೇಲೆ ಅಮೆರಿಕ ಕೂಡಾ ಇದರ ಚಲಾವಣೆಯನ್ನು ನಿಲ್ಲಿಸುವುದರ ಬಗ್ಗೆ ಚಿಂತಿಸುತ್ತಿದೆ. ಇದರ ಜೊತೆಗೆ ಬಿಟ್‌ಕಾಯಿನ್ ಚಲಾವಣೆಯನ್ನು ಅಧಿಕೃತಗೊಳಿಸುವ ಕ್ರಿಯೆಯೂ ಚಾಲನೆಯಲ್ಲಿದೆ.

ಟಾರ್ ಬ್ರೌಸಿಂಗ್
ಈ ತಂತ್ರಜ್ಞಾನ ಮೊದಲು ರೂಪುಗೊಂಡದ್ದು ಸರ್ಕಾರಿ ಸಂವಹನವನ್ನು ಸುರಕ್ಷಿತ ಗೊಳಿಸುವ ದೃಷ್ಟಿಯಿಂದ. ಮೊದಲಿಗೆ ಇದನ್ನು ಅಮೆರಿಕದ ನೌಕಾಪಡೆಗಾಗಿ ಬಳಸಲಾಗಿತ್ತು. ಈಗ ಇದು ಸಾರ್ವಜನಿಕ ಬಳಕೆಗೆ ಲಭ್ಯವಿದೆ. ಇಂಟರ್ನೆಟ್ನಲ್ಲಿ ಖಾಸಗಿತನವನ್ನು ಉಳಿಸಿಕೊಳ್ಳಲು ಬಯಸುವ ಎಲ್ಲರೂ ಇದನ್ನು ಬಳಸುತ್ತಿದ್ದಾರೆ.

ಮುಕ್ತ ತಂತ್ರಾಂಶ ಉತ್ಸಾಹಿಗಳಿಂದಾಗಿ ಸಾಕಷ್ಟು ಅಭಿವೃದ್ಧಿಯೂ ಆಗಿದೆ. ಟಾರ್ ಪ್ರಾಜೆಕ್ಟ್‌ನ ವೆಬ್‌ಸೈಟ್ ನೀಡುವ ಮಾಹಿತಿಯಂತೆ ಇದು ವರ್ಚುವಲ್ ಸುರಂಗಗಳ ಜಾಲವೊಂದರ ಮೂಲಕ ಇಂಟರ್ನೆಟ್ ನೋಡುವ ಅವಕಾಶವನ್ನು ಬಳಕೆದಾರರಿಗೆ ಒದಗಿಸುತ್ತದೆ.

ಸರಳವಾಗಿ ಹೇಳುವುದಾದರೆ ಟಾರ್ ತಂತ್ರಜ್ಞಾನ ಬಳಸಿ ನೀವು ಬ್ರೌಸ್ ಮಾಡುವ ನೀವು ಸಂಪರ್ಕಿಸುತ್ತಿರುವ ಮಾಹಿತಿ ಮೂಲವನ್ನು ಅನೇಕ ಮಧ್ಯವರ್ತಿಗಳ ಪ್ರತಿಫಲನವನ್ನು ಹಾದು ತಲುಪುತ್ತದೆ.

ನಿಮಗೆ ಬರುವ ಮಾಹಿತಿಯೂ ಇಂಥದ್ದೇ ಒಂದು ಮಾರ್ಗದಲ್ಲಿ ನಿಮ್ಮ ಕಂಪ್ಯೂಟರನ್ನು ತಲುಪುತ್ತದೆ. ಈ ಪ್ರಕ್ರಿಯೆಯಲ್ಲಿ ಆರಂಭ ಮತ್ತು ಅಂತ್ಯಗಳು ಗೊತ್ತಾಗದಂಥ ಜಾಲ ವ್ಯವಸ್ಥೆಯೊಂದು ರೂಪುಗೊಂಡಿರುತ್ತದೆ. ಈಗಿರುವ ತಂತ್ರಜ್ಞಾನವನ್ನು ಬಳಸಿ ನಿಮ್ಮ ಕಂಪ್ಯೂಟರ್ ಯಾವ ಕಂಪ್ಯೂಟರನ್ನು ಸಂಪರ್ಕಿಸಿತ್ತು ಎಂಬುದನ್ನು ನೋಡಿದರೆ ಏನೂ ಅರ್ಥವಾಗುವುದೇ ಇಲ್ಲ.

ಹೆಚ್ಚು ಕಡಿಮೆ ನಿಜ ಪ್ರಪಂಚದ ಭೂಗತ ಲೋಕ ವ್ಯವಹರಿಸುವಂಥ ವಿಧಾನವಿದು. ನಿರ್ದಿಷ್ಟ ಸರಕೊಂದನ್ನು ಖರೀದಿಸುವವನು ಮಾರಾಟ ಮಾಡುವವರ ಮಧ್ಯೆ ಇರುವ ಅನೇಕ ಸಂಪರ್ಕ ಕೊಂಡಿಗಳಿರುತ್ತವೆ. ಒಂದು ಕೊಂಡಿಗೆ ಮತ್ತೊಂದರ ಬಗ್ಗೆ ಅಥವಾ ಸಾಗಿಸುವ ಸರಕಿನ ಬಗ್ಗೆ ಯಾವ ಮಾಹಿತಿಯೂ ಇರುವುದಿಲ್ಲ.

ಅದೃಶ್ಯ ವೆಬ್
ಗೂಗಲ್ ಅಥವಾ ಅಂಥ ಯಾವುದೇ ಮುಖ್ಯವಾಹಿನಿಯ ಸರ್ಚ್ ಎಂಜಿನ್‌ಗಳು ಶೋಧನೆಗೆ ಸಿಲುಕದೇ ಇರುವ ಮಾಹಿತಿ ಭಾರೀ ದೊಡ್ಡ ಪ್ರಮಾಣದಲ್ಲಿದೆ. ಇದರ ಪ್ರಮಾಣ ಸರ್ಚ್ ಎಂಜಿನ್‌ಗಳ ಕಣ್ಣಿಗೆ ಸಿಗುವ ಮಾಹಿತಿಯ 500 ಪಟ್ಟು ಇದೆ ಎಂದು ಅಂದಾಜಿಸಲಾಗಿದೆ. ಹೀಗಾಗುವುದುಕ್ಕೆ ಕಾರಣಗಳು ಹಲವು. ಇವುಗಳನ್ನು ಮುಖ್ಯವಾಗಿ ಎರಡು ಬಗೆಯಲ್ಲಿ ವಿಂಗಡಿಸಬಹುದು. ಮೊದಲನೆಯದ್ದು ತಂತ್ರಜ್ಞಾನದ ಅಶಿಷ್ಟತೆ. ಅಂದರೆ ಸರ್ಚ್ ಎಂಜಿನ್‌ಗಳು ಬಳಸುವ ಶಿಷ್ಟತೆಗಿಂತ ಭಿನ್ನವಾದ ಶಿಷ್ಟತೆಗಳನ್ನು ಬಳಸಿ ಮಾಹಿತಿಯನ್ನು ಸಂಗ್ರಹಿಸುವುದು.

ಎರಡನೆಯದ್ದು ಪ್ರಜ್ಞಾಪೂರ್ವಕವಾಗಿ ಮಾಹಿತಿಯನ್ನು ಸರ್ಚ್ ಎಂಜಿನ್ ಕಣ್ಣಿಗೆ ಬೀಳದಂತೆ ಇಡುವುದು. ವಿಶಿಷ್ಟ ಶಿಷ್ಟತೆಗಳನ್ನೂ ಹಲವು ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ಬಳಸಿರುವುದುಂಟು. ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ಗೂಗಲ್ ಬಳಸಿ ಹುಡಕಲು ಸಾಧ್ಯವಿಲ್ಲದಂತೆ ಮಾಡಲಾಗಿರುತ್ತದೆ. ಇದರಲ್ಲಿ ಖಾಸಗಿತನದ ಪ್ರಶ್ನೆ ಇರುವುದರಿಂದ ಸರ್ಚ್ ಎಂಜಿನ್‌ನಿಂದ ಮರೆ ಮಾಡಿರುತ್ತಾರೆ. ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ತಮ್ಮಲ್ಲಿರುವ ಭಾರೀ ಮುಕ್ತ ಮಾಹಿತಿಯನ್ನೂ ಸರ್ಚ್ ಎಂಜಿನ್‌ನಿಂದ ಮರೆಮಾಡಿರುವ ಉದಾಹರಣೆಗಳೂ ಇವೆ. ಇದಕ್ಕೆ ಮುಖ್ಯಕಾರಣ ಈ ಮಾಹಿತಿಯ ಸುರಕ್ಷಿತ ನಿರ್ವಹಣೆ.

ಸರ್ಚ್ ಎಂಜಿನ್‌ನ ಇವುಗಳನ್ನು ಇಂಡೆಕ್ಸ್ ಮಾಡಿದರೆ ಇವನ್ನು ಬಳಸಲು ಬರುವವ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಹೆಚ್ಚಿದರೆ ಈ ಬಳಕೆದಾರರನ್ನು ನಿರ್ವಹಿಸುವುದು ಈ ಸಂಸ್ಥೆಗಳಿಗೆ ಕಷ್ಟವಾಗುತ್ತದೆ. ಹೀಗೆ ಹಲವು ಕಾರಣಗಳಿಗಾಗಿ ಸರ್ಚ್ ಎಂಜಿನ್ ಗೆ ಸಿಗದ ಮಾಹಿತಿ ಪ್ರಮಾಣ ಎಷ್ಟು ಎಂಬುದು ಗೊತ್ತೇ? ಸದ್ಯ ಗೂಗಲ್ ಎಂಟು ನೂರು ಕೋಟಿ ಪುಟಗಳಷ್ಟು ಮಾಹಿತಿಯನ್ನು ಜಾಲಾಡುತ್ತದೆ. ಇಂಥ ಇನ್ನೂ ಅನೇಕ ಸರ್ಚ್ ಎಂಜಿನ್‌ಗಳಿವೆ. ಇವೆಲ್ಲವಕ್ಕೂ ಸಿಗುವ ಮಾಹಿತಿಯ 500 ಪಟ್ಟು ಹೆಚ್ಚು ಮಾಹಿತಿ ಎಷ್ಟೆಂಬುದನ್ನು ಊಹಿಸಿಕೊಳ್ಳಿ. ಅಷ್ಟೊಂದು ಮಾಹಿತಿ ಅಂತರ್ಜಾಲದಲ್ಲಿ ಅದೃಶ್ಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT