ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡ ಒಡಲಿಗೆ ನೀರಿನ ಬರದ ಬರೆ

ಸ್ತಬ್ಧವಾದ ನದಿಗಳ ಹರಿವು, ತಳ ಕಂಡಿರುವ ಹೊಳೆ, ಕೆರೆ, ಬಾವಿಗಳು
Last Updated 22 ಏಪ್ರಿಲ್ 2016, 20:15 IST
ಅಕ್ಷರ ಗಾತ್ರ

ಶಿರಸಿ: ಕಾಡಿನ ಮಡಿಲಲ್ಲಿ ಹರವಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ ಬಿರು ಬಿಸಿಲಿನ ತಾಪಕ್ಕೆ ಅಕ್ಷರಶಃ ನಲುಗಿದೆ. ಸ್ತಬ್ಧವಾದ ನದಿಗಳ ಹರಿವು, ತಳ ಕಂಡಿರುವ ಹೊಳೆ, ಕೆರೆ, ಬಾವಿಗಳು ಜಿಲ್ಲೆಯಲ್ಲಿ ಜಲಕ್ಷಾಮ ಉಲ್ಬಣಿಸುವ ಮುನ್ಸೂಚನೆ ನೀಡುತ್ತಿವೆ.

ಇದು 5 ಕರಾವಳಿ ತಾಲ್ಲೂಕುಗಳು, 4 ಮಲೆನಾಡಿನ ತಾಲ್ಲೂಕುಗಳು ಹಾಗೂ 2 ಅರೆ ಬಯಲು ಸೀಮೆಯ ತಾಲ್ಲೂಕುಗಳನ್ನು ಹೊಂದಿರುವ ವಿಶಿಷ್ಟ ಜಿಲ್ಲೆ. ಇಲ್ಲಿನ ಭೂಭಾಗದಲ್ಲಿ ಅರಣ್ಯದ್ದೇ ಸಿಂಹಪಾಲು. ಜನವಸತಿ ಪ್ರದೇಶ ಶೇ 30ರಷ್ಟು ಮಾತ್ರ. ಕಡಲ ತಡಿಯಲ್ಲಿ, ಅರಣ್ಯದ ಅಂಚಿನಲ್ಲಿ ಬದುಕಿನ ನೆಲೆ ಕಂಡುಕೊಂಡಿರುವ ಜಿಲ್ಲೆಯ ಜನರು ಈ ಬಾರಿಯ ಬರಕ್ಕೆ ಹೆದರಿದ್ದಾರೆ. ಅಂಗಡಿ, ಹೋಟೆಲ್, ಕಚೇರಿ, ಪಂಚಾಯ್ತಿ ಕಟ್ಟೆ ಎಲ್ಲೆಲ್ಲೂ ಈಗ ನೀರಿನದೇ ಮಾತುಕತೆ. ಹಳ್ಳಿಗಳಲ್ಲಂತೂ ನೀರಿನ ರಾಜಕೀಯ ಬಿಸಿಲಿನ ತಾಪಕ್ಕಿಂತ ಹೆಚ್ಚು ತೀಕ್ಷ್ಣವಾಗತೊಡಗಿದೆ.

ನೀರಿನ ಕತೆ 1: ‘ಸಮಸ್ಯೆ ಬಗೆಹರಿಯುವುದು ಯಾರಿಗೂ ಬೇಕಾಗಿಲ್ರಿ. ಹಾಳಾದ ಬೋರ್‌ವೆಲ್ ರಿಪೇರಿ ಮಾಡೋರಿಲ್ಲ. ಮತ್ತೆ ಎಲ್ಲಿ ನೀರದೆ ಎಂದು ಹುಡುಕಲಿಕ್ಕೆ ಹೋಗ್ತಾರೆ. ಮುಂದಾಲೋಚನೆ ಇಲ್ದೆ ಕಾಮಗಾರಿ ಮಾಡಿ ಸರ್ಕಾರಿ ದುಡ್ಡು ಖರ್ಚು ಮಾಡ್ತಾರೆ. ನೀರಿನ ಸಮಸ್ಯೆ ಪರಿಹಾರವಾದರೆ ಊರಲ್ಲಿ ರಾಜಕೀಯ ಉಳಿದುಕೊಳ್ಳುವುದಿಲ್ಲ. ಹೀಗಾಗಿ ಬೇಸಿಗೆಯಲ್ಲಿ ನೀರಿನ ನಾಟಕ ಶುರುವಾಗುತ್ತದೆ’ ಎಂದು ಹೋಟೆಲ್ ಮುಂದೆ ನಿಂತಿದ್ದ ದನಕ್ಕೆ ಬಕೆಟ್‌ನಲ್ಲಿ ನೀರಿಡುತ್ತ ಹೇಳುತ್ತಿದ್ದರು ಅಪ್ಪಟ ಮಲೆನಾಡಿನ ತಾಲ್ಲೂಕಾಗಿರುವ ಯಲ್ಲಾಪುರ ಕೃಷ್ಣಗದ್ದೆಯ ಅಕ್ಬರ್ ಶೇಖ್.

‘ಬೋರ್‌ ನೀರನ್ನು ದನವೂ ಕುಡಿಯುವುದಿಲ್ಲ. ಜಂಗು ನೀರಿನ ವಾಸನೆ ಬಹುಶಃ ಅದಕ್ಕೆ ಸೇರುವುದಿಲ್ಲ. ಬೋರ್ ಬಳಕೆಯಲ್ಲಿದ್ದರೆ ಮಾತ್ರ ಚಲೋ ನೀರು ಬರ್ತದೆ’ ಎಂದು ಗೊಣಗಿಕೊಳ್ಳುತ್ತಲೇ ಒಳಗೆ ಬರುತ್ತಿದ್ದ ಅವರ ಜೊತೆ ಶೇಖ್ ಇಸ್ಮಾಯಿಲ್ ಬೆಳಗೇರಿ ಮಾತಿಗಿಳಿದರು.

‘ಅರಣ್ಯದಲ್ಲಿ ಮತ್ತಿ, ಕಾಡುಜಾತಿ ಮರಗಳು ಇದ್ದರೆ ಊರು ತಂಪು. ಅರಣ್ಯ ಇಲಾಖೆ ಇದ್ದಿದ್ದ ಜಂಗಲ್ ತೆಗೆದು ಸಾಗವಾನಿ, ನೀಲಗಿರಿ, ಅಕೇಸಿಯಾ ಪ್ಲಾಂಟೇಷನ್ ಮಾಡ್ತಿದೆ. 15 ವರ್ಷದ ಈಚೆಗೆ ಸಾಗವಾನಿ ಇಡೀ ಕಾಡನ್ನು ಆವರಿಸಿದೆ. ಇದರಿಂದ ಇಲಾಖೆಗೆ ಕಟ್ಟಿಗೆ ಸಿಗಬಹುದು. ಆದರೆ ಊರಲ್ಲಿ ಉಷ್ಣತೆ ಅಧಿಕವಾಗುತ್ತದೆ. ಮಳೆ ಕಮ್ಮಿ ಸೆಖೆ ಜಾಸ್ತಿ. ಇದರಿಂದಲೇ ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಿದೆ’ ಎಂದು ಶೇಖ್ ಸಾಹೇಬ್ರು ನೆಲಮೂಲದ ಜ್ಞಾನದಿಂದ ವಿಶ್ಲೇಷಿಸುತ್ತಿದ್ದರು.   

ಹೀರುವ ಬೋರ್‌ವೆಲ್: ‘ಎರಡು ದಶಕದ ಈಚೆಗೆ ಬಂದಿರುವ ಬೋರ್‌ವೆಲ್, ಮಗು ತಾಯಿಯ ಎದೆಹಾಲು ಹೀರುವಂತೆ ಭೂಮಿಯ ಅಂತರ್ಜಲವನ್ನೆಲ್ಲ ಎಳೆದುಬಿಟ್ಟಿದೆ. ಹೀಗಾಗಿ ಊರ ಕೆರೆ, ಬಾವಿಗಳೆಲ್ಲ ಬರಿದಾಗುತ್ತಿವೆ. ಹಿಂದೆ ಮನೆಯಲ್ಲಿ ಮಕ್ಕಳು ಜಾಸ್ತಿ ಇರುತ್ತಿದ್ದರು. ಆದರೆ ನೀರಿನ ಕೊರತೆ ಇರಲಿಲ್ಲ. ಈಗ ಮಕ್ಕಳು ಕಡಿಮೆ ನೀರಿಗೆ ಬರ’. ಇದು 76ರ ಹಿರಿಯ ಶೇಖ್ ಇಸ್ಮಾಯಿಲ್ ಅವರ ಮಳೆ ಮಾತಿನ ಕತೆ.

ನೀರಿನ ಕತೆ 2: ಬಯಲುನಾಡಿನ ಹವಾಮಾನ ಇರುವ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ಉದ್ಯೋಗ ಅರಸಿ ಹೊರ ಜಿಲ್ಲೆಗಳಿಗೆ ಗುಳೆ ಹೋಗಿವೆ. ‘ಕೃಷಿ ಮಾಡಲು ನೀರಿಲ್ಲ. ಊರಲ್ಲಿ ಕೆಲಸವಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ, ಬಾವಿ ಹೂಳೆತ್ತುವ ಕೆಲಸ ಆಗಿದ್ದರೆ ಊರಲ್ಲಿ ಉದ್ಯೋಗವೂ ಇರುತ್ತಿತ್ತು. ಜಲಮೂಲ ಭದ್ರವೂ ಆಗುತ್ತಿತ್ತು. ಆಡಳಿತ ನಡೆಸುವವರಿಗೆ ಈ ಯೋಚನೆ ಬರಬೇಕಲ್ಲ’ ಎನ್ನುತ್ತಾರೆ ಯುವ ಮುಖಂಡ ಸಂತೊಳ್ಳಿಯ ಯುವರಾಜ ಗೌಡ್ರು. ಇದೇ ಹೋಬಳಿಯಲ್ಲಿ ಸುಮಾರು ₹ 6 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ಎರಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ಅರ್ಧದಷ್ಟು ಗ್ರಾಮಗಳು ತೊಟ್ಟು ನೀರೂ ಕಂಡಿಲ್ಲ. ‘ಹಳ್ಳಿಗರ ಗೋಳು ತಪ್ಪಿದ್ದಲ್ಲ ಬಿಡಿ’ ಎಂದು ಎನ್ನುವಾಗ ಅವರ ಮಾತಿನಲ್ಲಿ ನಿರಾಸೆ ಇತ್ತು.

ಕಡಲ ತಡಿಯಲ್ಲಿ ನೀರಿಲ್ಲ: ರಭಸದ ಮಳೆಯಾಗುವ ಕಡಲ ತಡಿಯಲ್ಲಿರುವ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲ್ಲೂಕುಗಳ ನಿವಾಸಿಗಳಿಗೂ ಬರದ ಕಾವು ತಟ್ಟಿದೆ. ಹಳ್ಳಿ ರಸ್ತೆಗಳಲ್ಲಿ ಟ್ಯಾಂಕರ್ ಓಡಾಡುವ ಸದ್ದು ಜೋರಾಗಿದೆ. ‘ಕುಡಿಯುವ ನೀರು ಉಳ್ಳವರ ಪಾಲಾಗಿದೆ. ಗುತ್ತಿಗೆದಾರರೇ ನೀರಿನ ಮಾಲೀಕರಾಗಿದ್ದಾರೆ. ಅವರು ತಂದುಕೊಟ್ಟಾಗ ದಿನಕ್ಕೆ ಸಿಗುವ 5 ಕೊಡ ನೀರು ಮಾತ್ರ ನಮ್ಮ ಪಾಲು ಅದು’ ಎಂದು ಅಸಹಾಯಕರಾಗಿ ಹೇಳಿದವರು ಹೊನ್ನಾವರದ ಸುಬ್ಬಾ ಗೌಡ.

ರೀಮಿ ಗೌಡತಿ ತ್ಯಾಗ: ‘ಕೇರಿಯ ಎದುರಿನಿಂದ ಹಾದು ಹೋಗಿರುವ ಮರಾಕಲ್ ಯೋಜನೆಯ ನೀರಿನ ಪೈಪ್‌ ತಿರುಗಿಸಿ ಸಂಪರ್ಕ ಕೊಟ್ಟಿದ್ದರೆ ನಮ್ಮ ಮೂಲೆಕೇರಿಯ 90ರಷ್ಟು ಮನೆಗಳ ದಶಕಗಳ ನೀರಿನ ಬವಣೆ ಶಾಶ್ವತವಾಗಿ ಪರಿಹಾರವಾಗುತ್ತಿತ್ತು. ನಮಗೆ ಹೊಳೆಯುವ ಸರಳ ಉಪಾಯ ಆಡಳಿತಗಾರರಿಗೆ ತಿಳಿಯದೇ? ನೀರಿಗಾಗಿ ಪ್ರತಿಭಟಿಸುತ್ತಿದ್ದ ರೀಮಿ ಗೌಡ ಕುಸಿದು ಬಿದ್ದು ಮೃತಪಟ್ಟ ಮೇಲೆ ಎಚ್ಚೆತ್ತುಕೊಂಡ ಅಧಿಕಾರಿಗಳು ಈಗ ದಿನವೂ ನಮ್ಮ ಊರಿಗೆ ಟ್ಯಾಂಕರ್‌ ನೀರು ಕೊಡುತ್ತಾರೆ ಎಂದರು’ ಗೋಕರ್ಣ ಮೂಲೆಕೇರಿಯ ಲಕ್ಷ್ಮಿ ಗೌಡ.

ನೀರಿನ ಕತೆ 3: ಕಡವಿನಕಟ್ಟೆ ನದಿ, ಶರಾಬಿ ಹೊಳೆ, ಸಾರದ ಹೊಳೆ, ವೆಂಕ್ಟಾಪುರ ನದಿಯಿಂದ ಸುತ್ತುವರಿದಿರುವ ಭಟ್ಕಳದಲ್ಲಿ ಒಳಚರಂಡಿ ಯೋಜನೆ ನಗರದ ಬಾವಿಗಳ ನೀರನ್ನು ಕಲುಷಿತಗೊಳಿಸಿದೆ. ಬಾವಿಯಲ್ಲಿ ನೀರಿದ್ದರೂ ಕುಡಿಯಲು ಅಯೋಗ್ಯ.

ಹಳ್ಳಿಯಲ್ಲಿ ಕಣ್ಣು ಹಾಯಿಸಿದಷ್ಟು ದೂರವೂ ಜಲರಾಶಿ. ಆದರೆ ಕುಡಿಯವ ನೀರಿಗೆ ತತ್ವಾರ. ಬಾವಿ ತೋಡಿದರೆ ಉಪ್ಪು ನೀರು ಬರುವ ಸಸಿಹಿತ್ತಲ ಗ್ರಾಮದ ಜನರು ಸಿಹಿ ನೀರು ತರಲು ನಿತ್ಯ 5 ಕಿ.ಮೀ ನಡೆಯುತ್ತಾರೆ. ಪ್ರವಾಸಿ ಕ್ಷೇತ್ರ ಮುರ್ಡೇಶ್ವರದಲ್ಲಿ ನೀರು ದುಡ್ಡಿದ್ದವರ ಸೊತ್ತು. ಕಾಂಚಾಣದ ಪ್ರಭಾವ ಬಡವರಿಗೆ ನೀರಿನ ಬರವನ್ನು ಸೃಷ್ಟಿಸಿದೆ ಎನ್ನುತ್ತಿದ್ದರು ಜನತಾ ಕಾಲೊನಿಯ ನಿವಾಸಿಗಳು.

ಜಲಮೂಲ ನಿರ್ವಹಣೆಯ ನಿರ್ಲಕ್ಷ್ಯ, ಹೊಸ ಬೋರ್‌ವೆಲ್‌ ಸ್ಥಳಗಳ ಹುಡುಕಾಟ, ನೀರಿನಲ್ಲಿ ತೂರಿಕೊಂಡ ರಾಜಕೀಯ, ವಸತಿ ಬಡಾವಣೆಗಳ ವಿಸ್ತರಣೆ, ನೀರಿನ ಸಮಸ್ಯೆ ಸೃಷ್ಟಿಸುತ್ತಿವೆ. ಜಿಲ್ಲೆಯಲ್ಲಿ ಒಂದೆಡೆ ನೀರಿನ ಚರ್ಚೆ ಇನ್ನೊಂದೆಡೆ ಅಭಿವೃದ್ಧಿ ಶರವೇಗದಲ್ಲಿ ಓಡುತ್ತಿದೆ. ಕರಾವಳಿಯಲ್ಲಿ ಗುಡ್ಡ ಕೊರೆಯುವ ಬೃಹತ್ ಯಂತ್ರಗಳು, ಉರಿ ಬಿಸಿಲನ್ನು ಲೆಕ್ಕಿಸದೇ ಕೆಲಸ ಮಾಡುವ ಕೆಲಸಗಾರರು ಚತುಷ್ಪಥ ಹೆದ್ದಾರಿ ನಿರ್ಮಾಣದಲ್ಲಿ ನಿರತರಾಗಿದ್ದಾರೆ. ಇದೇ ರಸ್ತೆಯ ಬದಿಯಲ್ಲಿಯೇ, ನೀರಿನ ಕೊಡ ಹೊತ್ತು ಮೈಲುಗಟ್ಟಲೇ ನಡೆದುಕೊಂಡು ಹೋಗುವ ಮಹಿಳೆಯರೂ ಕಾಣಸಿಗುತ್ತಾರೆ.
*
ಬಡವಾದ ನದಿಗಳು
ಮಲೆನಾಡಿನ ತಾಪಮಾನ ಕರಾವಳಿಯ ಉಷ್ಣತೆಯನ್ನು ಹಿಂದಿಕ್ಕಿದೆ. ಮಲೆನಾಡಿನಲ್ಲಿ ಗರಿಷ್ಠ 38.5 ಡಿಗ್ರಿ ಉಷ್ಣತೆ ದಾಖಲಾಗಿದೆ. ಜಿಲ್ಲೆಯಲ್ಲಿ ಹರಿಯುವ ಬೇಡ್ತಿ, ವರದಾ, ಅಘನಾಶಿನಿ, ಕಾಳಿ, ಶಾಲ್ಮಲಾ ನದಿಗಳು ಬಡವಾಗಿವೆ.

ಪಾಠ ಕಲಿತಿಲ್ಲ: ‘ಸರ್ಕಾರ ಕಳೆದ 30 ವರ್ಷಗಳಿಂದ ನೀರಿನ ಯೋಜನೆ ರೂಪಿಸುತ್ತಿದೆ. ಪ್ರತೀ ಗ್ರಾಮದಲ್ಲಿ ನೀರಿನ ಕಾಮಗಾರಿಗಳಿವೆ. ಆದರೆ ಇವು ಪ್ರಯೋಗದ ಮಾದರಿಗಳಂತೆ ಕಾಣುತ್ತಿವೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರೂ ನೀರಿನ ಯೋಜನೆಗಳ ನೈಜ ವಿಶ್ಲೇಷಣೆ ನಡೆದಿಲ್ಲ. ಉದಾಹರಣೆಗೆ, ಪ್ರಾದೇಶಿಕ ಭಿನ್ನತೆ ಇಲ್ಲದೇ ಇಡೀ ರಾಜ್ಯದಲ್ಲಿ ಏಕಪ್ರಕಾರದಲ್ಲಿ ಅನುಷ್ಠಾನಗೊಳ್ಳುವ ಕಾಲುವೆಗೆ ಕಟ್ಟುವ ಕೊರಕಲು ತಡೆ ಮಲೆನಾಡಿನಲ್ಲಿ ವಿಫಲಗೊಳ್ಳುತ್ತವೆ. ಸೋಲಿನಿಂದ ನಾವು ಪಾಠ ಕಲಿಯದ ಪರಿಣಾಮ ಸಮಸ್ಯೆ ಎದುರಿಸುವಂತಾಗಿದೆ. ನೀರು ಹಿಡಿದಿಡುವ ಕೆರೆಗಳ ರಚನೆಗೆ ಒತ್ತು ನೀಡಬೇಕು. ಬಿದ್ದ ಮಳೆ ನೀರನ್ನು ಬಿದ್ದಲ್ಲಿ ಇಂಗಿಸುವ ಕಾರ್ಯಕ್ಕೆ ಪ್ರಾಧಾನ್ಯತೆ ಸಿಗಬೇಕು ಎನ್ನುತ್ತಾರೆ ಜಲತಜ್ಞ ಶಿವಾನಂದ ಕಳವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT