ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಗೆ ಹೂವಿನಂಥ ಮಲಶೆಟ್ಟರು

Last Updated 12 ಜುಲೈ 2014, 19:30 IST
ಅಕ್ಷರ ಗಾತ್ರ

ಹಿರಿಯರ ಬಗ್ಗೆ ಗೌರವ ಹಾಗೂ ಕಿರಿಯರ ಬಗ್ಗೆ ಅಪಾರ ವಾತ್ಸಲ್ಯ ಹೊಂದಿದ್ದ ಬಸವರಾಜ ಮಲಶೆಟ್ಟರು ಕನ್ನಡ ಜಾನಪದ ಪ್ರಜ್ಞೆ ರೂಪಿಸಿದ ಪ್ರತಿನಿಧಿಯಂತೆ ಕಾಣಿಸುತ್ತಿದ್ದವರು. ಹಾಸ್ಯ ಮನೋಧರ್ಮದ, ದೇಸೀ ಮಾತುಗಳನ್ನಾಡುತ್ತಿದ್ದ, ಅಪ್ಪಟ ಕನ್ನಡದ ಜಾನಪದ ಜೀವ ಅವರದು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ 1947ರಲ್ಲಿ ಜನಿಸಿದ ಅವರು, ಚಿಕ್ಕಂದಿನಿಂದಲೂ ತಂದೆಯ ಬಯಲಾಟವನ್ನು ನೋಡುತ್ತಲೇ ಗೀ ಗೀ ಪದಗಳನ್ನು ಕೇಳುತ್ತಲೇ ಬೆಳೆದವರು.

ಸಹಜವಾಗಿ ಅವರಿಗೂ ಕಲೆಯ ಗೀಳು ಬೆಳೆಯಿತು. ಸ್ನಾತಕೋತ್ತರ ವ್ಯಾಸಂಗದ ಸಂದರ್ಭದಲ್ಲಿ ಬಸವರಾಜ ಹೂಗಾರ ಮತ್ತು ಬಸಮ್ಮ ಈಶ್ವರಪ್ಪರ ಸಹಪಾಠಿಯಾಗಿ ದೇವೇಂದ್ರಕುಮಾರ ಹಕಾರೆಯವರೊಂದಿಗೆ ಇಡೀ ರಾತ್ರಿ ಸಂಗೀತ ಸಭೆಯನ್ನು ನಡೆಸುತ್ತಿದ್ದರಂತೆ! ನಂತರದಲ್ಲಿ ಹೊಸಪೇಟೆಯ ವೀರಶೈವ ವಿದ್ಯಾವರ್ಧಕ ಸಂಘದ ವಿಜಯನಗರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕವಾಗಿ, ಪ್ರಾಚಾರ್ಯರಾಗಿ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಸೇವೆಯ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಖ್ಯಾತ ಗಮಕ ಕವಿ, ನಟರೂ ಆಗಿದ್ದ, ಜೋಳದರಾಶಿ ದೊಡ್ಡನಗೌಡರು ಹಾಗೂ ಚಿಗಟೇರಿಯ ಖ್ಯಾತ ಜಾನಪದ ತಜ್ಞರಾದ ಮುದೇನೂರು ಸಂಗಣ್ಣ ಇವರ ಸಂಪರ್ಕ ಬೆಳೆದಿದ್ದು, ‘ನನ್ನ ಪುಣ್ಯವೇ ಸರಿ’ ಎಂದು ಮಲಶೆಟ್ಟರು ಆಗಾಗ ಹೇಳುತ್ತಿದ್ದರು.

ತಂದೆಯ ಕಣ್ಗಾವಲಿನಲ್ಲಿ ಜನಪದ ರಂಗಭೂಮಿಗೆ, ಬಯಲಾಟಕ್ಕೆ ಪ್ರವೇಶಿಸಿದ ಮಲಶೆಟ್ಟರು ಅತೀವ ಆಸಕ್ತಿಯಿಂದ ‘ಉತ್ತರ ಕರ್ನಾಟಕದ ಬಯಲಾಟಗಳು’ ಎಂಬ ವಿಷಯದಲ್ಲಿ ಅಧ್ಯಯನ ಮಾಡಿ ಪಿಎಚ್.ಡಿ ಪದವಿಯನ್ನು ಪಡೆದರು. ಜನಪದ ರಂಗಭೂಮಿಯಲ್ಲಿ ದುಡಿದ ಮತ್ತು ದುಡಿಯುತ್ತಿರುವವರ ಬಗ್ಗೆ ಅವರಿಗೆ ಅಕ್ಕರಾಸ್ಥೆಯಿತ್ತು.

ಮಲಶೆಟ್ಟರ ಆಧುನಿಕ ಮನೋಭಾವವನ್ನು ಅವರ ಸಂಪರ್ಕಕ್ಕೆ ಬಂದವರೆಲ್ಲರೂ ಬಲ್ಲರು. ಅವರು ತಮ್ಮ ಪತ್ನಿ ಶಾರದಾ ಅವರನ್ನು ಬ್ಯೂಟಿಪಾರ್ಲರ್ ತರಬೇತಿ ಪಡೆಯಲು ಅಂದಿನ ದಿನಗಳಲ್ಲಿ ಪೂನಾಕ್ಕೆ ಕಳುಹಿಸಿದ್ದರು. ಒಂದು ಕಾಲದಲ್ಲಿ ‘ರೂಪಾಲಯ ಬ್ಯೂಟಿಪಾರ್ಲರ್’ ಹೊಸಪೇಟೆಯಲ್ಲಿ ಹೆಸರುವಾಸಿಯಾಗಿತ್ತು. ಎಷ್ಟೋ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಿದ ಈ ಮೇಷ್ಟ್ರು, ಯಾರಿಗೇ ಅನಾರೋಗ್ಯವಿರಲಿ, ತೊಂದರೆ ಇರಲಿ, ಅವರ ಕಷ್ಟ ಕೇಳಿ, ಕೈಲಾದಮಟ್ಟಿಗೆ ಸಹಾಯ ಹಸ್ತ ನೀಡಿದವರು.

ಸದಾ ಹೊಸತನಕ್ಕೆ ಹಂಬಲಿಸಿದ ಮಲಶೆಟ್ಟರಯ, ಹವ್ಯಾಸಿ ರಂಗಭೂಮಿಯಲ್ಲಿ ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿ ಹೆಸರಾದವರು. ಶ್ರೀಕೃಷ್ಣಪಾರಿಜಾತದ ನೂರಾರು ಪ್ರಯೋಗಗಳನ್ನು ಪ್ರದರ್ಶಿಸಿದ್ದಾರೆ. ’ಮಲಶೆಟ್ಟರೆಂದರೆ ಶ್ರೀಕೃಷ್ಣ ಪಾರಿಜಾತ, ’ಶ್ರೀಕೃಷ್ಣಪಾರಿಜಾತವೆಂದರೆ ಮಲಶೆಟ್ಟರು’, ಎನ್ನುವಷ್ಟರಮಟ್ಟಿಗೆ ಕರ್ನಾಟಕದಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ದೆಹಲಿಯಲ್ಲೂ ಪಾರಿಜಾತ ಪ್ರದರ್ಶನ ಮಾಡಿದ್ದಾರೆ. ಹೊಸಪೇಟೆಯಲ್ಲಿ ನಾಟಕ ಚಳವಳಿ ಬೆಳೆಯಲು ಕಾರಣಕರ್ತರಾಗಿದ್ದ ಅವರು, ಬಹಳಷ್ಟು ನಾಟಕೋತ್ಸವಗಳು, ವಿಚಾರ ಸಂಕಿರಣಗಳ ರೂವಾರಿಯಾಗಿದ್ದರು. 

‘ಪ್ರಾಚೀನ ಕರ್ನಾಟಕದಲ್ಲಿ ನಾಟಕ ಪರಂಪರೆ’, ‘ಇಜಿಯಣ್ಣನ ಹಾಡು’, ‘ಉತ್ತರ ಕರ್ನಾಟಕದ ಜನಪದ ವಾದ್ಯಗಳು’, ‘ಕರಿಕಲ್ಲಪ್ಪ ಕವಿಯ ಗೀ ಗೀ ಪದಗಳು’, ‘ಜೋಳದರಾಶಿ ದೊಡ್ಡನಗೌಡ’, ‘ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರೀ’, ‘ಅಗಡಿ ಸಂಗಣ್ಣ’, ‘ಚಂದ್ರಶೇಖರ ಕಂಬಾರ’ ಮುಂತಾದವು ಅವರ ಕೃತಿಗಳು.

‘ಗಿರಿಜಾಕಲ್ಯಾಣ’ ಬಯಲಾಟದ ಪ್ರದರ್ಶನ ಅವಧಿ ಕಡಿಮೆ ಮಾಡಿದ್ದ ಮಲಶೆಟ್ಟರು, ಸ್ವತಃ ತರಬೇತಿ ನೀಡಿ, ಭಾಗವತರಾಗಿ ಹಲವಾರು ಪ್ರದರ್ಶನವನ್ನು ಮಾಡಿಸಿದ್ದರು. ಶಿವರಾಮ ಕಾರಂತರು ಯಕ್ಷಗಾನಕ್ಕೆ ಕಾಯಕಲ್ಪ ನೀಡಿದಂತೆ, ಶೆಟ್ಟರು ಜಾನಪದ ಬಯಲಾಟಗಳಿಗೆ ಹೊಸ ಸ್ಪರ್ಶ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಆದರೆ ಅವರ ಪ್ರಯತ್ನಗಳು ನಿರೀಕ್ಷೆಯ ಮಟ್ಟಕ್ಕೆ ಸಾಕಾರಗೊಳ್ಳಲಿಲ್ಲ.
ನಿವೃತ್ತಿ ಎನ್ನುವುದು ಸ್ವತಂತ್ರವಾಗಿ ಓಡಾಡಲು ನನಗೆ ಅನುಕೂಲ ಕಲ್ಪಿಸಿದೆ ಎಂದು ಹೇಳುತ್ತಿದ್ದ ಅವರು– ರಂಗಾಯಣ, ಸಾಣೇಹಳ್ಳಿ, ಕೊಟ್ಟೂರು ಎಂದು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದರು. ವಚನ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ಶರಣ ಸಾಹಿತ್ಯದ ಬಗ್ಗೆ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಅಮೆರಿಕದಲ್ಲಿನ ಮಗಳು ಪಲ್ಲವಿಯ ಮನೆಗೆ ಪತ್ನಿ ಶಾರಕ್ಕರ ಜೊತೆ ಹೋಗಿ ಬಂದಿದ್ದರು. ಮೊಮ್ಮಗಳು ಗೌರಿಯ ‘ಕಲ್ಲುಸೂಪ್’ ಮಕ್ಕಳ ನಾಟಕದ (ನಮ್ಮಜ್ಜಿ ಅಕ್ಕಿ ಬಸಮ್ಮ ಅಡುಗೆ ಮಾಡುತ್ತಿದ್ದ ಕಲ್ಲೊಗ್ಗರಣೆ ಸಾರು) ಬಗ್ಗೆ ಮೈಸೂರಿನ ನಮ್ಮ ಮನೆಯಲ್ಲಿ ಮಾತಾಡಿ ಹೋಗಿದ್ದರು. ಅದು ನಮ್ಮ ಮತ್ತು ಅವರ ಕೊನೆಯ ಭೇಟಿಯಾಗಿತ್ತು ಎಂದು ನಿರೀಕ್ಷಿಸಿಯೂ ಇರಲಿಲ್ಲ. ಅನಾರೋಗ್ಯದಿಂದ ಕೆಲವೇ ದಿನಗಳಲ್ಲಿ ನಮ್ಮನ್ನೆಲ್ಲಾ ಬಿಟ್ಟು ಹೋದರು. ಯಾವ ಹೆಣ್ಣು ಮಗಳನ್ನೇ ಮಾತಾಡಿಸಲಿ ‘ಅವ್ವಾ’ ಎಂದೇ ಸಂಭೋದಿಸುತ್ತಿದ್ದರು. ಮಲ್ಲಿಗೆ ಹೂವ್ವಿನಂಥ ಮಲಶೆಟ್ಟರು ನಮ್ಮೊಂದಿಗೆ ಇಲ್ಲ ಎನ್ನುವುದೇ ಜಾನಪದ ಬಳಗಕ್ಕೆ ದುಃಖದ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT