ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸಿ ಬಳಿದದ್ದು ಮುಖಕ್ಕಲ್ಲ ದೇಶದ ಗೌರವ, ಸಹಿಷ್ಣುತೆಗೆ

Last Updated 13 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮುಂಬೈಯಲ್ಲಿ ಶಿವಸೇನಾದ ಕೆಲ ಕಾರ್ಯಕರ್ತರು ಹೆಸರಾಂತ ಲೇಖಕ, ಅಂಕಣಕಾರ ಸುಧೀಂದ್ರ ಕುಲಕರ್ಣಿ ಅವರ ಮೇಲೆ ಮಸಿ ಸುರಿದು ಮತ್ತೊಮ್ಮೆ ಕಿಡಿಗೇಡಿತನ ಪ್ರದರ್ಶಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಪಾಕಿಸ್ತಾನದ ಖ್ಯಾತ ಗಜಲ್ ಗಾಯಕ ಗುಲಾಂ ಅಲಿ ಅವರ ಕಾರ್ಯಕ್ರಮವನ್ನು ಮುಂಬೈಯಲ್ಲಿ ನಡೆಸಲು ಕೂಡ ಶಿವಸೇನಾ ಬಿಟ್ಟಿರಲಿಲ್ಲ.

ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮ್ಮದ್ ಕಸೂರಿ ಬರೆದ ‘ನೈದರ್ ಎ ಹಾಕ್  ನಾರ್ ಎ ಡೋವ್; ಆ್ಯನ್ ಇನ್‌ಸೈಡರ್ಸ್ ಅಕೌಂಟ್ ಆಫ್ ಪಾಕಿಸ್ತಾನ್ಸ್ ಫಾರಿನ್ ಪಾಲಿಸಿ’ ಪುಸ್ತಕದ ಬಿಡುಗಡೆ ಕಾರ್ಯಕ್ರಮವನ್ನು ಕುಲಕರ್ಣಿ ಆಯೋಜಿಸಿದ್ದರು. ಅದನ್ನು ರದ್ದು ಮಾಡಬೇಕು ಎಂಬ ಶಿವಸೇನಾ ಬೇಡಿಕೆಗೆ ಮಣಿದಿರಲಿಲ್ಲ. ಮಸಿ ಬಳಿದ ನಂತರವೂ ಅದೇ ಸ್ಥಿತಿಯಲ್ಲಿಯೇ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಪುಂಡರಿಗೆ ತಕ್ಕ ಪ್ರತ್ಯುತ್ತರ ಕೊಟ್ಟಿದ್ದಾರೆ.

ನಂತರ ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ನಡೆದಿದೆ. ‘ಹಿಂದೆ ನಡೆದ ತಪ್ಪುಗಳನ್ನು ಸರಿಪಡಿಸುವುದು ನಮ್ಮ ಕರ್ತವ್ಯ. ಚರ್ಚೆಯಿಂದ ಮಾತ್ರ ಹೊಸ ಇತಿಹಾಸ ನಿರ್ಮಿಸಬಹುದು’ ಎಂಬ ಅವರ ಮಾತು ಸರಿಯಾದುದು. ಈ ವಿಷಯ ಇಲ್ಲಿಗೇ ಅಂತ್ಯವಾಗಬಾರದು. ವ್ಯಕ್ತಿಯ ಮೇಲೆ ಈ ಬಗೆಯ ಆಕ್ರಮಣಗಳು ಆಧುನಿಕ ಭಾರತದ ಅಡಿಪಾಯ ಹಾಗೂ ತತ್ವಗಳಿಗೆ ಧಕ್ಕೆ ತರುವಂತಹದ್ದು. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಅವಶ್ಯ. ಶಿವಸೇನಾ, ಈ ಹಿಂದೆ ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸಿದ ಪಕ್ಷ. ಈಗಲೂ ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳಲ್ಲಿ ಭಾಗಿಯಾಗಿದೆ.

ಮಹಾರಾಷ್ಟ್ರದಲ್ಲಿ ಮೈತ್ರಿ ರಾಜಕಾರಣದಲ್ಲಿ ಇರಿಸುಮುರಿಸು ಇದೆ. ಹೀಗಾಗಿ ಬಿಜೆಪಿಗೆ ಸಮಸ್ಯೆ ಸೃಷ್ಟಿಸಲಾಗುತ್ತಿದೆ ಎಂಬ ವ್ಯಾಖ್ಯಾನವೂ ಇದೆ. ತಮ್ಮದೇ ಮೈತ್ರಿಕೂಟದ ಪಾಲುದಾರ ಪಕ್ಷವೊಂದು ಬೆದರಿಕೆ ಒಡ್ಡಿದರೂ ಅದನ್ನು ಲೆಕ್ಕಿಸದೆ ಪುಸ್ತಕ ಬಿಡುಗಡೆಗೆ ಬಿಗಿ ಭದ್ರತೆ ಒದಗಿಸುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಹಾನಿಯನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ. ಇದು ಅಗತ್ಯವೂ ಆಗಿತ್ತು. ಇಲ್ಲದಿದ್ದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೂ ಕಳಂಕ ಉಂಟಾಗುತ್ತಿತ್ತು.

ಮಸಿ ಬಳಿಯುವುದು ಪ್ರತಿಭಟನೆಯ ವಿಧಾನ ಎಂಬ ಶಿವಸೇನಾ ವಾದದಲ್ಲಿ ಯಾವುದೇ ಹುರುಳಿಲ್ಲ. ಇನ್ನೊಬ್ಬರ ಮುಖಕ್ಕೆ ಮಸಿ ಬಳಿಯಲು, ಆ ಮೂಲಕ ಅವಮಾನಿಸಿ ಮಾನಸಿಕ ಹಿಂಸೆ ಕೊಡಲು ಯಾರಿಗೂ ಅಧಿಕಾರ ಇಲ್ಲ. ಅದು ಪ್ರಜಾಸತ್ತಾತ್ಮಕ ವಿಧಾನವೂ ಅಲ್ಲ. ಅದು ಅಸಹನೆಯ ಸಂಕೇತ. ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಅವರೂ ಈ ವರ್ತನೆಯನ್ನು ಖಂಡಿಸಿದ್ದಾರೆ. ‘ದೇಶದಲ್ಲಿ ಅಸಹನೆ ಹೆಚ್ಚುತ್ತಿದೆ’ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಹಾಗೆ ನೊಡಿದರೆ ಸುಧೀಂದ್ರ ಕುಲಕರ್ಣಿ ಅವರೂ ಒಂದು ಕಾಲದಲ್ಲಿ ಬಿಜೆಪಿ ಬಳಗದಲ್ಲಿ, ಚಿಂತಕರ ಚಾವಡಿಯಲ್ಲಿಯೇ ಇದ್ದವರು. ಅಡ್ವಾಣಿಯವರಿಗೆ ಪರಮಾಪ್ತರು. ಅವರ ಮೇಲೂ ಮುಗಿ ಬಿದ್ದಿರುವುದನ್ನು ನೋಡಿದರೆ ಶಿವಸೇನಾಗೆ ಕಾನೂನಿನಲ್ಲಿ, ತಾನೇ ಪ್ರತಿಪಾದಿಸುವ ಹಿಂದೂ ಧರ್ಮದ ಉದಾತ್ತ ಪರಂಪರೆಯಲ್ಲಿ ನಂಬಿಕೆ ಇದ್ದಂತೆ ಕಾಣುವುದಿಲ್ಲ. ಭಿನ್ನಾಭಿಪ್ರಾಯವನ್ನು ಸಹಿಸಿಕೊಳ್ಳುವುದು ಜನತಂತ್ರ ವ್ಯವಸ್ಥೆಯ ಮೂಲ ಲಕ್ಷಣಗಳಲ್ಲೊಂದು.

ಅದಕ್ಕೆ ಶಿವಸೇನಾ ಇರಲಿ ಅಥವಾ ಇನ್ಯಾರೇ ಇರಲಿ ಗೌರವ ಕೊಡಲೇಬೇಕು. ನಮ್ಮ ರಾಜ್ಯವೂ ಸೇರಿದಂತೆ ದೇಶದ ಅನೇಕ ಕಡೆ ಈ ಹಿಂದೆಯೂ ಮಸಿ ಬಳಿದ ಪ್ರಕರಣಗಳು ನಡೆದಿದ್ದವು. ಕೆಲವೊಂದು ಸಂಘಟನೆಗಳು ಇದರಲ್ಲಿ ಭಾಗಿಯಾಗಿದ್ದವು. ಇವೆಲ್ಲಕ್ಕಿಂತ ಕುಲಕರ್ಣಿ ಪ್ರಕರಣ ಹೆಚ್ಚು ಗಮನ ಸೆಳೆದಿದೆ. ಸಮಾಜದ ಸಾಕ್ಷಿಪ್ರಜ್ಞೆಗೆ ಹೆಚ್ಚು ಗಾಸಿ ಮಾಡಿದೆ. ಇಂಥವು ಪದೇಪದೇ ನಡೆಯುವುದು ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಇಂತಹ ಘಟನೆಗಳನ್ನು ತೀವ್ರ ಮಾತುಗಳಲ್ಲಿ ಖಂಡಿಸಬೇಕು. ಪ್ರತಿಗಾಮಿ ಶಕ್ತಿಗಳ ವಿರುದ್ಧದ ಹೋರಾಟ ತೀವ್ರವಾಗುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT