ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲವಿ ಅಣೆಕಟ್ಟೆ ಮೇಲೆ ಚುನಾವಣೆ ಪಟ್ಟಾಂಗ!

Last Updated 27 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ (ಬಳ್ಳಾರಿ): ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನ ಕಳೆದಿತ್ತು. ಇಳಿ ಹೊತ್ತು ಇಣುಕುತ್ತಿತ್ತು. ಅಣೆ­ಕಟ್ಟೆಯ ಮೂಲೆಯಲ್ಲಿ ರೈತರೊಬ್ಬರು ಕುಳಿತಿದ್ದರು. ‘ಏನ್‌ ಯಜಮಾನ್ರೆ ಸುಮ್ಮನೆ ಕುಳಿತು ಬಿಟ್ಟಿರಿ’ ಎಂದು ಕೇಳಿದರೆ ‘ಇಲ್ಲಿ ಕಡಲಿ ಹಾಕೇಂನ್ರಿ. ಅದನ್ನ ಕಾಯ್ತಾ ಕುಂತೇನ್ರಿ’ ಎಂದರು.

‘ಎಲ್ಲದಾವ್ರಿ ಕಡಲೆ’ ಎಂದು ಕೇಳಿದರೆ ಜಲಾಶಯದಲ್ಲಿ ನೀರು ನಿಲ್ಲುವ ಜಾಗ ತೋರಿಸಿದರು. ಹೌದು ಜಲಾಶಯದಲ್ಲಿ ನೀರಿಲ್ಲ. ಈ ಬಾರಿ ಮಾತ್ರ ಅಲ್ಲ. ಕಳೆದ 8–10 ವರ್ಷಗಳಿಂದಲೂ ನೀರಿಲ್ಲ. ಇಡೀ ಜಲಾಶಯ ಬಟಾಬಯಲು. ಅಲ್ಲಿಯೇ ರೈತರು ಕಡಲೆ ಬೆಳೆಯುತ್ತಾರೆ. ಹೀಗೆ ಜಲಾಶಯದೊಳಗೆ ಕಡಲೆ ಬೆಳೆದರೆ ಸರ್ಕಾರದವರು ಏನ್‌ ಕೇಳಂಗಿಲ್ಲವಾ ಎಂದು ಕೇಳಿದರೆ, ‘ಅವರೇನ್‌ ಕೇಳ್ತಾರ್ರೀ. ನಿಮ್‌ನಿಮ್ಮೊಳಗೆ ಜಗಳಾ ಮಾಡಬ್ಯಾಡಿ. ವ್ಯಾಜ್ಯ ನಮ್ಮ ಬುಡಕ್ಕ ತರಬ್ಯಾಡರಿ. ನೀವ್‌ ಏನ್‌ ಬೇಕಾದರೂ ಮಾಡಕೋರಿ ಅಂತಾರ್ರೀ’ ಎಂದರು ಆ ರೈತ.

ಮಾಲವಿ ಜಲಾಶಯ 1972­ರಲ್ಲಿಯೇ ನಿರ್ಮಾಣವಾಗಿದೆ. ಗಡಿಮಾ­ಕುಂಟೆ ಕೆರೆಯಿಂದ ನೀರು ತರುವ ಉದ್ದೇಶ ಇತ್ತು. ಸುಮಾರು 7500 ಎಕರೆ ಪ್ರದೇಶಕ್ಕೆ ನೀರಾವರಿ ಮಾಡುವ ಗುರಿ ಇತ್ತು. ಆದರೆ ಅದ್ಯಾವುದೂ ಇನ್ನೂ ಆಗಿಲ್ಲ. ಪ್ರತಿ ಚುನಾವಣೆ­ಯಲ್ಲಿಯೂ ಈ ಜಲಾಶಯಕ್ಕೆ ನೀರು ತುಂಬಿಸುವ ವಿಷಯವನ್ನು ಅಭ್ಯರ್ಥಿಗಳು ಹೇಳುತ್ತಾರೆ. ಆದರೆ ಜಲಾಶಯ ನಿರಂತರ-­ವಾಗಿ ತುಂಬುವ ಕನಸು ಮಾತ್ರ ಇನ್ನೂ ನನಸಾಗಿಲ್ಲ.

ಹೀಗೆ ನಮ್ಮ ಮಾತು ಲೋಕಸಭಾ ಚುನಾವಣೆ ಕಡೆ ಹೊರಳಿತು. ‘ಏನ್‌ ಚುನಾವಣೆ ಹ್ಯಾಂಗದೆ?’ ಎಂದು ಕೇಳಿದರೆ ‘ಇಷ್ಟು ಲಗೂನೆ ಹ್ಯಾಂಗ್‌ ಗೊತ್ತಾ­ಗುತ್ತರಿ. ವೋಟ್‌ ಹಾಕಾಕ ಎರಡ್‌  ದಿನ ಇರೋವಾಗ ಎಲ್ಲ ನಿರ್ಣಯ ಆಗುತ್ತರಿ’ ಎಂದರು ಅವರು.

‘ಆಗ ಹ್ಯಾಂಗ್‌ ನಿರ್ಣಯ ಮಾಡ್ತೀರಿ’ ಎಂದು ಕೇಳಿದ್ದಕ್ಕೆ ‘ಯಾರ್‌ ಹೆಚ್ಚಿಗೆ ಕೊಡ್ತಾರೋ ಅವರಿಗ್‌ ವೋಟ್‌ ಹಾಕ್ತೀವ್ರೀ’ ಎಂದರು. ಕಳೆದ ಬಾರಿ ಯಾರ್ಯಾರು ಎಷ್ಟೆಷ್ಟು ಕೊಟ್ಟಿದ್ದರು ಎಂದಿದ್ದಕ್ಕೆ ‘ಹೋದ ಸಲಾ  ಬಿಜೆಪಿ­ನವರು ನೂರು ಕೊಟ್ಟರ್ರೀ, ಜೆಡಿಎಸ್‌­ನೋರು 200 ಕೊಟ್ಟರ್ರೀ. ನಾವೆಲ್ಲಾ ಜೆಡಿಎಸ್‌ಗೆ ಹಾಕಿದೆವ್ರೀ’ ಎಂದು ಉತ್ತರಿಸಿದರು. ಈ ಬಾರಿ ಯಾರಿಗೆ ಹಾಕುತ್ತೀರಿ ಎಂದು ಕೇಳಿದಾಗ ‘ಇದು ದೊಡ್ಡ ಚುನಾವಣೆಯಲ್ರೀ’ ಎಂದು ಮುಸಿಮುಸಿ ನಕ್ಕರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೂಡ್ಲಿಗಿ, ಕೊಟ್ಟೂರು, ಹಗರಿ­ಬೊಮನಹಳ್ಳಿ, ಹೊಸಪೇಟೆ ಮುಂತಾದ ಕಡೆ ನೀರಿನ ಸಮಸ್ಯೆ ವಿಪರೀತ ಇದೆ. ಅಂತರ್ಜಲ ಬತ್ತಿ ಹೋಗಿದೆ. ಬಿ.ಟಿ ಹತ್ತಿ ಕೈಕೊಟ್ಟಿದೆ. ಹಳ್ಳಗಳೆಲ್ಲಾ ಹೊಲಗಳಾ­ಗಿವೆ. ಉತ್ತಿದ ಬಿ.ಟಿ ಹತ್ತಿ ಗಿಡ ಭರಪೂರ ಎತ್ತರಕ್ಕೆ ಬೆಳೆದರೂ ಹೂವು ಬಿಡಲಿಲ್ಲ. ಕಾಯಿ ಕಟ್ಟಲಿಲ್ಲ. ಸರ್ಕಾರವೂ ಪರಿಹಾರ ನೀಡಲಿಲ್ಲ. ಕಂಪೆನಿಯವರೂ ಪರಿಹಾರ ಕೊಡಲಿಲ್ಲ. ಈ ಸಿಟ್ಟು ಅಲ್ಲಿನ ರೈತರ ಮುಖಗಳಲ್ಲಿ ದುಮುಗುಡುತ್ತಿದೆ.

‘ಇವರೇನು ಭಾಳ ಉಪಕಾರ ಮಾಡೋದು ಬ್ಯಾಡ್ರಿ.  ಮಾಲವಿ ಜಲಾ­ಶಯ ತುಂಬಿಸಿ ವರ್ಷಕ್ಕೆ ಒಮ್ಮೆ ನಾಲೆ ಒಳಗ ನೀರು ಬಿಟ್ಟರ ಸಾಕರಿ. ಭೂಮಿ­ಯೊಳಗೆ ನೀರು ತುಂಬಿಕೊಂಡು ನಮ್ಮ ಬದುಕು ಬಂಗಾರ ಆಗ್ತದರಿ’ ಎಂದು ಆ ರೈತರು ಕನಸು ಬಿಚ್ಚಿದರು.

ಇದಕ್ಕೂ ಮೊದಲು ಹಗರಿಬೊಮ್ಮನ­ಹಳ್ಳಿಯಲ್ಲಿ ಸಿಕ್ಕಿದ್ದ ಇಟಗಿ ಕಲ್ಲೇಶಪ್ಪ ಅವರೂ ಇದೇ ಮಾತನ್ನು ಹೇಳಿದ್ದರು. ಈ ಕ್ಷೇತ್ರದಲ್ಲಿ ಸಮಸ್ಯೆಗಳು ಬೇಕಾದಷ್ಟು ಇವೆ. ಆದರೆ ಅವುಗಳ ಮೇಲೆ ಯಾವಾ­ಗಲೂ ಚುನಾವಣೆ ನಡೆಯುವುದಿಲ್ಲ. ಈಗ ಹಣ ಮತ್ತು ಜಾತಿಯ ಮೇಲೆಯೇ ಚುನಾವಣೆ ನಡೆಯುತ್ತದೆ ಎಂದು ಖಡಾಖಂಡಿತವಾಗಿ ಹೇಳಿದ್ದರು.

ಕೊಟ್ಟೂರಿನ ಕೊಟ್ಟೂರಪ್ಪ ಕೂಡ ಕ್ಷೇತ್ರದ ರಾಜಕೀಯ ಮತ್ತು ಜಾತಿಯ ವಿಶ್ಲೇಷಣೆಯನ್ನೇ ಮಾಡಿದ್ದರು. ‘ಈಗ ನೋಡ್ರಿ. ಕೇಂದ್ರದಲ್ಲಿ ಬಿಜೆಪಿ ಬರುತ್ತೆ ಎಂಬ ಆಶಾಭಾವನೆ ಇದೆ. ಹಾಗಿರು­ವಾಗ ನಾವ್ಯಾಕೆ ನಮ್ಮ ಮತವನ್ನು ಬೇರೆ­ಯ­ವರಿಗೆ ಹಾಕಿ ವ್ಯರ್ಥ ಮಾಡಬೇಕು. ಕಾಂಗ್ರೆಸ್‌ನವರೇನು ಸಾಚಾನಾ? ಅವರೂ 60 ವರ್ಷ ದೇಶ ಆಳಿಲ್ಲವಾ? ಅವರು ಏನೇನು ಮಾಡಿದ್ದಾರೆ ಎನ್ನೋದು ಗೊತ್ತಿಲ್ವಾ? ಈಗ ಮೋದಿ ಏನೋ ಮಾಡ್ತೀನಿ ಅಂತಾರೆ. ಅವರಿಗೂ ಒಂದು ಚಾನ್ಸ್ ಕೊಟ್ಟು ನೋಡೋಣ’ ಎಂದು ಮಾತನ್ನು ಹದಗೆಟ್ಟ ರಾಜಕೀಯದತ್ತ ತಿರುಗಿಸಿದರು.

‘ಹೌದು ಶ್ರೀರಾಮುಲು ಬೆನ್ನ ಮೇಲೆ ಸಾಕಷ್ಟು ಆರೋಪ ಹೊತ್ತು­ಕೊಂಡಿ­ದ್ದಾರೆ. ಹೊಸ ಪಕ್ಷ ಕಟ್ಟಿ ಈಗ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಅವರ ಮೇಲೆ ಎಷ್ಟೇ ಆರೋಪ ಇರಲಿ. ಅವರು ಜನರಿಗೆ ಸಿಗ್ತಾರೆ. ಸಾಮಾನ್ಯ ಜನರ ಕಷ್ಟ ಸುಖ ಕೇಳುತ್ತಾರೆ’ ಎಂಬ ಅಭಿಪ್ರಾಯ ಅವ­ರದ್ದು. ಆದರೆ ಇದಕ್ಕೆ ಕಡ್ಲಿ ವೀರಭದ್ರಪ್ಪ ಅವರ ವಿರೋಧ ಇದೆ. ‘ವಿದ್ಯಾವಂತರಿಗೆ ಬೇಸರ ಇದೆ. ಅವರು ಮತಗಟ್ಟೆಗೆ ಬಂದು ಮತ ಚಲಾಯಿಸಿದರೆ ಶ್ರೀರಾಮುಲುಗೆ ಕಷ್ಟ’ ಎಂಬ ಭಾವನೆ ಅವರದ್ದು.

ಅವರ ದೃಷ್ಟಿಯಲ್ಲಿ ಕಳೆದ ಬಾರಿ ಬಿಜೆಪಿ ಅಲೆ ಇತ್ತು. ಈ ಬಾರಿ ಬಿಜೆಪಿ ಅಲೆ ಇಲ್ಲ. ಬಿಜೆಪಿ ಅಲೆ ಮತ್ತು ಮೋದಿ ಅಲೆ ಎರಡೂ ಬೇರೆ ಬೇರೆ. ಕಳೆದ ಬಾರಿ ಇದ್ದಿದ್ದು ನಮ್ಮದೇ ಕರ್ನಾಟಕದ ಮುಖಂಡನ ಅಲೆ. ಈ ಬಾರಿ ಹಾಗಲ್ಲ. ಗುಜರಾತ್‌ ಮೋದಿ ಅಲೆ. ಅದು ಅಷ್ಟು ಕೆಲಸ ಮಾಡಲಿಕ್ಕಿಲ್ಲ ಎಂಬ ವಾದ ಮಂಡಿಸಿದರು.

ಸಾಯೊ– ಹುಟ್ಟೋ ವೋಟ್‌:  ಹಗರಿ­ಬೊಮ್ಮನಹಳ್ಳಿಯ ಅಕ್ಕಿ ತೋಟೇಶ್‌ ಇನ್ನೂ ಭಿನ್ನವಾದ ವಾದ ಮಂಡಿಸಿದರು. ‘ಸಾಯೋ ವೋಟ್‌ ಎಲ್ಲಾ ಕಾಂಗ್ರೆಸ್‌­ನದು. ಹುಟ್ಟೋ ವೋಟ್‌ ಎಲ್ಲಾ ಬಿಜೆಪಿದು’ ಎಂದು ಒಗಟಾಗಿ ಹೇಳಿದರು. ಕೊಂಚ ಒಗಟು ಬಿಡಿಸಿ ಎಂದರೆ, ‘ವಯಸ್ಸಾದವರು ಕಾಂಗ್ರೆಸ್‌ ಪರ. ಹೊಸ ಹುಡುಗರು ಬಿಜೆಪಿ ಪರ’ ಎಂದರು. ‘ಸಮಸ್ಯೆಗೇನು ಬಹಳ ಇದೆ. ಒಂದೋ ಎರಡೋ ಸಮಸ್ಯೆಯಾದರೆ ಅವರೂ ಪರಿಹಾರ ಮಾಡ್ತೀನಿ ಅನ್ನಬಹುದು. ಹಗಲೆಲ್ಲಾ ಸಮಸ್ಯೇನೇ ಆದರೆ ಅವರೂ ಏನ್‌ ಮಾಡ್ತಾರೆ?’ ಎಂಬ ರಾಜಕಾರಣಿಗಳ ಅಸಹಾಯಕತೆ ಬಿಚ್ಚಿಟ್ಟರು.

ಕೊಟ್ಟೂರಿನ ಆನಂದ್‌ ಮಾತ್ರ ಈವರೆಗೆ ಸುಮ್ಮನಿದ್ದವರು ಒಮ್ಮೆಲೇ ‘ಸಮಸ್ಯೆ ಪರಿಹಾರಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ನಾವು ಕೇವಲ ಮತಹಾಕುವ ಯಂತ್ರಗಳಾಗಿದ್ದೇವೆ’ ಎಂದು ಚರ್ಚೆಗೆ ಮಂಗಳ ಹಾಡಿದರು.

ಹಳಿ ಇದೆ ರೈಲಿಲ್ಲ!
ಹಗರಿಬೊಮ್ಮನಹಳ್ಳಿಯಲ್ಲಿ ರೈಲ್ವೆ ಹಳಿ ಇದೆ. ರೈಲು ಬರುವುದಿಲ್ಲ. ಜಲಾಶಯ ಇದೆ. ನೀರಿಲ್ಲ. ಹಗರಿಬೊಮ್ಮನಹಳ್ಳಿ ತಾಲ್ಲೂಕು ಕೇಂದ್ರ. ಜನಸಂಖ್ಯೆ 30 ಸಾವಿರಕ್ಕೂ ಹೆಚ್ಚು. ಆದರೆ ಇನ್ನೂ ಅದು ಗ್ರಾಮ ಪಂಚಾಯ್ತಿ (ಇಡೀ ರಾಜ್ಯದಲ್ಲಿ ಪಟ್ಟಣ ಪಂಚಾಯ್ತಿ ಹೊಂದಿಲ್ಲದ ಏಕೈಕ ತಾಲ್ಲೂಕು ಕೇಂದ್ರ). ಹಗರಿಬೊಮ್ಮನಹಳ್ಳಿಯೇ ಗ್ರಾಮ ಪಂಚಾಯ್ತಿಯಾದರೂ ಈ ಪಟ್ಟಣ ಇರೋದು ಚಿಂತರಪಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ.

ಬ್ರಿಟಿಷರ ಕಾಲದಲ್ಲಿಯೇ ಇಲ್ಲಿಗೆ ರೈಲು ಬಂದಿತ್ತು. 90ರ ದಶಕದವರೆಗೂ ರೈಲು ಓಡಾಟ ಇತ್ತು. ಮೀಟರ್‌ಗೇಜ್‌ ಈಗ ಬ್ರಾಡ್‌ಗೇಜ್‌ ಆಗಿದೆ. ಆದರೂ ರೈಲು ಮಾತ್ರ ಬರಲ್ಲ.

ಹಗರಿಬೊಮ್ಮನಹಳ್ಳಿಯಲ್ಲಿ ಪಟ್ಟಣ ಪಂಚಾಯ್ತಿಗಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಆದರೆ ಇನ್ನೂ ಅಲ್ಲಿ ಗ್ರಾಮ ಪಂಚಾಯ್ತಿಯೇ ಉಳಿದುಕೊಂಡಿದೆ. ಹಗರಿಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 14 ಸದಸ್ಯರಿದ್ದರೆ ಪಕ್ಕದ ಚಿಂತರಪಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 55 ಸದಸ್ಯರಿದ್ದಾರೆ.

ನಾನು ಅಲ್ಲಿ ಕೂರಲ್ಲ!
ಬಳ್ಳಾರಿ ಭಾಗದಲ್ಲಿ ಚನ್ನಬಸವನಗೌಡರು ಗೌರವಾನ್ವಿತ ರಾಜಕಾರಣಿ­ಯಾಗಿ­ದ್ದರು. ಉತ್ತಮ ಕೆಲಸ ಮಾಡಿದ್ದರು. ಅವರು ನಿಧನರಾದ ನಂತರ ಜೆ.ಎಚ್‌.­ಪಟೇಲ್‌ ಅವರು ಹಗರಿಬೊಮ್ಮನಹಳ್ಳಿಯಲ್ಲಿರುವ ಅವರ ಮನೆಗೆ ಬಂದರು. ಚನ್ನಬಸವನಗೌಡರು ಬಳಸಿದ್ದ ಕುರ್ಚಿ, ಸೋಫಾ ಎಲ್ಲ ಮನೆಯಲ್ಲಿ ಇದ್ದವು. ಮನೆಯವರು ಪಟೇಲರಿಗೆ ಅದರ ಮೇಲೆ ಕುಳಿತುಕೊಳ್ಳಲು ಹೇಳಿದರು. ಆಗ ಪಟೇಲರು ‘ಅಯ್ಯೋ ಅದು ಆ ಮಹಾನುಭಾವ ಕುಳಿತ ಆಸನ. ಅದರ ಮೇಲೆ ನಾವೆಲ್ಲಾ ಕುಳಿತುಕೊಳ್ಳಬಾರದು. ನಾವೋ ರಾತ್ರಿ ಕಾಲದಲ್ಲಿ ಏನೇನೋ ಮಾಡಿರುತ್ತೇವೆ. ಅದರ ಮೇಲೆ ಕುಳಿತುಕೊಳ್ಳುವ ನೈತಿಕತೆ ಕಳೆದುಕೊಂಡಿದ್ದೇವೆ’ ಎಂದರಂತೆ.

ಇಟಗಿ ಕಲ್ಲೇಶಪ್ಪ ಈ ಇಬ್ಬರು ರಾಜಕಾರಣಿಗಳನ್ನು ನೆನಪಿಸಿಕೊಂಡು ಈಗ ಅಂತಹ ರಾಜಕಾರಣಿಗಳು ಅಪರೂಪ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT