ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕೆ ಬೇಕು ಭಾಷಾ ಕಲಿಕೆ?

Last Updated 19 ಏಪ್ರಿಲ್ 2016, 19:42 IST
ಅಕ್ಷರ ಗಾತ್ರ

ಭಾಷಾ ಕಲಿಕೆಗೆ ಮಾರಕವಾದ ಯುಜಿಸಿಯ ಹೊಸ ಆಯ್ಕೆ ಆಧಾರಿತ ಗುಣಾಂಕ ಪದ್ಧತಿಯ (Choice Based Credit System– ಸಿಬಿಸಿಎಸ್‌) ನ್ಯೂನತೆಗಳನ್ನು ಗುರುತಿಸಿ ಡಾ. ಅಜಕ್ಕಳ ಗಿರೀಶ ಭಟ್ ಅವರು ಬರೆದ ಅಭಿಪ್ರಾಯಗಳು (ಸಂಗತ, ಏ. 16) ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಇಂದಿನ ಪರಿಸ್ಥಿತಿಯಲ್ಲಿ ಯಾವುದೇ ಪದವಿಗೆ ಭಾಷಾ ಪರೀಕ್ಷೆಯಲ್ಲಿ ಪಾಸಾದರೆ ಸಾಕು. ಅದಕ್ಕಿಂತ ಹೆಚ್ಚಿನ ಭಾಷಾ ಕಲಿಕೆ ಯಾರಿಗೆ ಬೇಕು? ಎಂಜಿನಿಯರ್ ಆಗುವವರಿಗೆ ಬೇಡ. ವೈದ್ಯರಾಗುವವರಿಗೆ ಬೇಡ. ಸ್ವ ಉದ್ಯೋಗ ಮಾಡುವವರಿಗೆ ಬೇಡ. ಕಚೇರಿಗಳಲ್ಲಿ ಗುಮಾಸ್ತರಾಗುವವರಿಗೆ ಬೇಡ.

ಮಾಲ್‌ಗಳಲ್ಲಿ ಸೇಲ್ಸ್ ಬಾಯ್‌ ಅಥವಾ ಸೇಲ್ಸ್ ಗರ್ಲ್‌ ಆಗಲು ಬೇಡ. ಆ ಕೆಲಸಕ್ಕೆ ಅಷ್ಟಿಷ್ಟು ಇಂಗ್ಲಿಷ್ ಗೊತ್ತಿದ್ದರೆ ಸಾಕು, ಮತ್ತು ಅದೇ ಬೇಕು. ಏಕೆಂದರೆ ಮಾಲ್ ಮಾಲೀಕರು ಗಿರಾಕಿಗಳೊಡನೆ ಇಂಗ್ಲಿಷ್‌ನಲ್ಲೇ ಮಾತನಾಡಲು ಹೇಳಿರುತ್ತಾರೆ.

ಮನೆಯಲ್ಲಿ ಹೌಸ್ ವೈಫ್ ಎಂದು ನೆಲೆಯಾದ ಅಮ್ಮಂದಿರಿಗೆ ಕನ್ನಡ ಭಾಷಾ ಅಧ್ಯಯನ ಬೇಡ. ಏಕೆಂದರೆ ಅವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳಿಸುವವರಾಗಿರುತ್ತಾರೆ. ಮಕ್ಕಳೊಡನೆ ಕನ್ನಡ ಮಾತನಾಡುವುದನ್ನು ಆದಷ್ಟೂ ತಪ್ಪಿಸುವುದು ಅಗತ್ಯ ಎಂದು ತಿಳಿದಿರುತ್ತಾರೆ.

ಏಕೆಂದರೆ ಅಮ್ಮನ ಕನ್ನಡದ ಪ್ರಭಾವದಲ್ಲಿ ಆ ಮಕ್ಕಳು ಇಂಗ್ಲಿಷನ್ನು ಸರಿಯಾಗಿ ಕಲಿಯದಿದ್ದರೆ ಅಂತಹ ಶಾಲೆಗಳಿಗೆ ಕಳಿಸಿ ಏನು ಫಲ? ಇನ್ನು, ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುವವರಿಗೆ, ಎಲೆಕ್ಟ್ರಿಕಲ್ಸ್‌ನವರಿಗೆ, ಪ್ಲಂಬಿಂಗ್‌ನವರಿಗೆ, ಆಸ್ಪತ್ರೆಗಳಲ್ಲಿ ದುಡಿಯುವವರಿಗೆ, ಕೂಲಿ ಕಾರ್ಮಿಕರಿಗೆ ಮುಂತಾಗಿ ಎಲ್ಲರಿಗೂ ಕೈಯಲ್ಲೊಂದು ಮೊಬೈಲ್, ಅದರಲ್ಲೊಂದಿಷ್ಟು ರೆಕಾರ್ಡ್ ಮಾಡಿದ ಮ್ಯೂಸಿಕ್ ಇದ್ದರೆ ಕೆಲಸ ಸರಾಗ. ಅಂದ ಮೇಲೆ ಭಾಷೆ, ಸಾಹಿತ್ಯ ಇವೆಲ್ಲಾ ಯಾಕೆ ಬೇಕು?

ಇದು ಮೇಲ್ನೋಟಕ್ಕೆ ಕಾಣುವ ಸಮಸ್ಯೆ. ಆಳದಲ್ಲಿರುವ ಸತ್ಯವೇ ಬೇರೆ. ಪ್ರಾಥಮಿಕ ಹಂತದಿಂದಲೇ ಭಾಷಾ ಕಲಿಕೆ ಆಕರ್ಷಕವಾಗಿಲ್ಲ. ಒಮ್ಮೆ ಕನ್ನಡದ ವಿದ್ವಾಂಸರು ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳನ್ನು ತೆರೆದು ನೋಡಲಿ.

ಅವರು ಪುಸ್ತಕ ಪ್ರಕಟಣೆ, ಪುರಸ್ಕಾರ, ಸಮ್ಮಾನ, ಅಕಾಡೆಮಿ ಪ್ರಶಸ್ತಿಗಳ ಹಿಂದೆ ಬಿದ್ದು ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸಿ ಉಂಟಾಗಿರುವ ಶೂನ್ಯವನ್ನು ಕಾಣಲಿ. ವಿದ್ಯಾರ್ಥಿಗಳು ಸಾಹಿತ್ಯದಿಂದ ವಿಮುಖರಾಗಿರುವುದಕ್ಕೆ ತಮ್ಮ ಕೊಡುಗೆಯೂ ಇದೆ ಎಂಬುದನ್ನು ಮನಗಾಣಲಿ.

ಏಕೆಂದರೆ ಒಂದನೇ ತರಗತಿಯಿಂದಲೇ ಭಾಷಾ ಪಠ್ಯಗಳ ಕಲಿಸುವಿಕೆಯ ವಿಧಾನವನ್ನು ಗಮನಿಸಿ. ಆ ವಿಧಾನವು ಪರಿಸರ ವಿಜ್ಞಾನವನ್ನು ಕಲಿಸುವುದಕ್ಕಿಂತ ಭಿನ್ನವಾಗಿದೆಯೇ ಎಂದು ಪರಿಶೀಲಿಸಿ. ಅಂದರೆ ಪಾಠದಲ್ಲಿರುವ ವಿಷಯವನ್ನು ಕಲಿಸುತ್ತಾರೆ ಮತ್ತು ಅದರ ಮೇಲೆ ಪರೀಕ್ಷೆ ನಡೆಸುತ್ತಾರೆ.

ಬೇಕಿದ್ದರೆ ಪರೀಕ್ಷೆಯಲ್ಲಿ ತಾವು ಕೇಳಲಿರುವ ಪ್ರಶ್ನೆಗಳನ್ನೂ ತಿಳಿಸಿಬಿಡುತ್ತಾರೆ. ಅಂಕಗಳ ಆಧಾರದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಅಳೆಯುತ್ತಾರೆ. ಹೆಚ್ಚಾಗಿ ಅಂಕಗಳು ನೂರಕ್ಕೆ ಹತ್ತಿರವೇ ಬಂದಿರುತ್ತವೆ. ಹಾಗಾಗಿ ಮಕ್ಕಳು ಭಾಷೆಯಲ್ಲಿ ಉತ್ತಮ ಸಾಮರ್ಥ್ಯ ಹೊಂದಿದ್ದಾರೆಂದೇ ಅರ್ಥ.

ಆದರೆ ಪಠ್ಯದ ಆಶಯವನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ವಿಷಯವನ್ನು ಹೇಳುವಲ್ಲಿ ಭಾಷೆಯನ್ನು ಹೇಗೆ ಉಪಯೋಗಿಸಲಾಗಿದೆ ಎಂದು ಕಲಿಸುವುದಿಲ್ಲ. ಸ್ವತಃ ಭಾಷೆಯನ್ನು ವಿಷಯದ ಸಂವಹನಕ್ಕೆ ಹೇಗೆ ಉಪಯೋಗಿಸ ಬಹುದೆಂಬುದನ್ನು ಉದಾಹರಣೆ ಸಹಿತ ಕಲಿಸುವುದಿಲ್ಲ. ಅರ್ಥಾತ್ ಪ್ರಾಯೋಗಿಕವಾಗಿ ಭಾಷೆಯ ಪ್ರಯೋಜನವನ್ನು ಮಗುವಿನ ಅರಿವಿಗೆ ತರುವುದಿಲ್ಲ.

ಪರಿಣಾಮವಾಗಿ ಮಗುವಿಗೆ ಭಾಷೆ ಒಂದು ಶಬ್ದಗಳ ಆಟದ ಸಂಗತಿಯಾಗುವುದಿಲ್ಲ. ಅದರಲ್ಲೇನೂ ಆನಂದ ಸಿಗುವುದಿಲ್ಲ. ಇನ್ನು, ಅನೇಕ ಶಿಕ್ಷಕರಿಗೆ ಪಾಠದ ಚೌಕಟ್ಟನ್ನು ಮೀರಿ ಭಾಷೆಯನ್ನು ಕಲಿಸುವುದಕ್ಕೂ ಗೊತ್ತಿರುವುದಿಲ್ಲ. ಏಕೆಂದರೆ ಅವರು ಕಲಿತದ್ದೇ ಹಾಗೆ. ಅದನ್ನೇ ಅವರು ಮಕ್ಕಳಿಗೂ ಬೋಧಿಸುತ್ತಾರೆ.

ಶಿಕ್ಷಕರಿಗೇ ಒಂದು ಪ್ರಬಂಧ ಬರೆಯುವ ಕೌಶಲವಿರುವುದಿಲ್ಲ. ಸೃಜನಶೀಲ ಚಿಂತನೆಯ ಅಭ್ಯಾಸವೇ ಅವರಿಗೆ ಗೊತ್ತಿರುವುದಿಲ್ಲ. ಭಾಷೆ ಬರಬೇಕಿದ್ದರೆ ಅದೆಲ್ಲಾ ಬೇಕಲ್ಲವೇ? ಭಾಷೆಯ ಕಲಿಕೆಗೆ ಸ್ಪಷ್ಟವಾದ ಹಂತಗಳೆಂದರೆ ಆಲಿಸುವುದು, ಮಾತಾಡುವುದು, ಓದುವುದು ಮತ್ತು ಬರೆಯುವುದನ್ನು ಅಭ್ಯಾಸ ಮಾಡುವುದು.

ಈಗ ಶಾಲೆಗಳಲ್ಲಿ ಬಾಲವಾಡಿ ಅಥವಾ ಎಲ್.ಕೆ.ಜಿ.ಯಿಂದಲೇ ಬರೆಯುವ ಹೊರೆ ಹೊರಿಸಿಬಿಡುತ್ತಾರೆ. ಅಂದರೆ ಕೊನೆಗೆ ಮಾಡಬೇಕಾದ್ದನ್ನು ಮೊದಲೇ ಮಾಡುತ್ತಾರೆ. ಕಾಪಿ ಬರೆಯುವಷ್ಟು ಬೋರಾಗುವ ಕೆಲಸ ಮಗುವಿಗೆ ಯಾವುದಿದೆ ಹೇಳಿ? ಇದರಿಂದಾಗಿ ಅಕ್ಷರಗಳೂ ಹಾಳು. ಆದರೆ ಶಾಲೆ ಕಾಲೇಜುಗಳ ಕನ್ನಡ ಭಾಷಾ ಶಿಕ್ಷಕರೂ ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೇ ಕಳಿಸುತ್ತಾರೆ.

ನಾನು ಅಂತಹವರಲ್ಲಿ ಈ ಬಗ್ಗೆ ಕೇಳಿದ್ದೂ ಇದೆ. ಅದಕ್ಕೆ ಅವರು ಭಾಷೆ ಕಲಿತೇನು ಮಾಡುವುದು? ಮಕ್ಕಳಿಗೆ ಜೀವನದ ದಾರಿ ತೋರಿಸಬೇಕಲ್ಲ ಎಂಬ ಕೊರಗನ್ನು ವ್ಯಕ್ತಪಡಿಸುತ್ತಾರೆ. ಬಹುಶಃ ಯುಜಿಸಿ ಕೂಡಾ ಈ ದಿಸೆಯಲ್ಲೇ ಯೋಚಿಸಿ ತನ್ನ ಸಿಬಿಸಿಎಸ್‌ ಪದ್ಧತಿಯಲ್ಲಿ ಇಂತಹ ಕೊರಗಿಗೆ ಉತ್ತರವನ್ನು ನೀಡಿರಬೇಕು. ಅಂದರೆ ಭಾಷೆಯ ಅಧ್ಯಯನ ಮತ್ತು ಸಾಹಿತ್ಯದ ಓದಿಗೆ ತಿಲಾಂಜಲಿ ಕೊಟ್ಟದ್ದಿರಬೇಕು.   

ಭಾಷೆಯನ್ನು ಬಳಸುವ ಕೌಶಲ ಬರುವುದು ಸಾಹಿತ್ಯದ ಓದಿನಲ್ಲಿ.  ಇಂದಿನ ಭಾಷಾ ಪಠ್ಯಗಳು ಅಂತಹ ಸತ್ವ ಹೊಂದಿಲ್ಲ. ಒಂದು ವೇಳೆ ಒಂದಿಷ್ಟು ಸಾಹಿತ್ಯವಿದ್ದರೂ ಅದನ್ನು ಕಲಿಸುವ ಶಿಕ್ಷಕರು ಮೂಲ ಸಾಹಿತ್ಯವನ್ನು ಓದಿರುವುದೇ ಇಲ್ಲ.

‘ನಾಗರ ಹಾವೇ ಹಾವೊಳು ಹೂವೆ’ ಪದ್ಯ ಕಲಿಸುವ ಟೀಚರ್, ಪಂಜೆ ಮಂಗೇಶರಾಯರ ಬಗ್ಗೆ ಮಕ್ಕಳಿಗೆ ಏನೂ ಹೇಳುವುದಿಲ್ಲ. ‘ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ’ ಪದ್ಯ ಕಲಿಸುವಾಗ ಜಿ.ಪಿ.ರಾಜರತ್ನಂ ಕುರಿತು ಹೇಳಲು ಏನನ್ನೂ ಓದಿಕೊಂಡಿರುವುದಿಲ್ಲ. ಶಾಂತಿ ನಿಕೇತನದ ಪಾಠಕ್ಕೆ ಪೂರಕವಾಗಿ ವಿವರಿಸಲು ಕವಿ ರವೀಂದ್ರರ ಬಗ್ಗೆ ಗೂಗಲ್‌ನಲ್ಲಿಯೂ ನೋಡಿರುವುದಿಲ್ಲ.

ಮುಖ್ಯವಾಗಿ ಹೀಗೊಂದು ವಿಸ್ತಾರವಾದ ಓದು ಬೇಕೆಂದೇ ಟೀಚರ್‌ಗಳಿಗೆ ಗೊತ್ತಿರುವುದಿಲ್ಲ. ವಿದ್ಯಾರ್ಥಿಗಳಿಗೆ ಸಾಹಿತಿಗಳ ಕೊಡುಗೆಗಳ ಮಹತ್ವವೂ ತಿಳಿಯುವುದಿಲ್ಲ. ಒಟ್ಟಾರೆಯಾಗಿ ಮಕ್ಕಳಿಗೆ ಪಠ್ಯಪೂರಕವಾಗಿ ಓದಬೇಕಾದ ವಿಷಯಗಳಿವೆ ಎಂಬುದೇ ಅರಿವಿಗೆ ಬರುವುದಿಲ್ಲ. ಈ ಕೊರತೆ ತೀವ್ರವಾಗಿ ಕಾಣುವುದು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ.

ಇಂದಿನ ದಿನಗಳಲ್ಲಿ ಶಿಕ್ಷಣದ ಮೌಲ್ಯಮಾಪನವೆಲ್ಲ ಆ ಶಾಲೆಗಳ ಸುತ್ತ ಗಿರಕಿ ಹೊಡೆಯುತ್ತಿರುತ್ತದೆ. ಹಾಗಾಗಿಯೇ ಯುಜಿಸಿ ಕೂಡಾ ಇಂತಹ ಒಂದು ಭಾಷಾ ವಿರಹಿತ ವ್ಯವಸ್ಥೆಯ ಹೇರಿಕೆಗೆ ಮುಂದಾಗಿರಬೇಕು.

ಈ ವಿಚಾರದಲ್ಲಿ ಸಾಹಿತ್ಯ ಪರಿಷತ್ತಾಗಲಿ, ಕನ್ನಡ ವಿಶ್ವವಿದ್ಯಾಲಯವಾಗಲಿ, ಕನ್ನಡ ಸಾಹಿತಿಗಳಾಗಲಿ,  ಸರ್ಕಾರವಾಗಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಲಿ, ನ್ಯಾಯಾಲಯಗಳಾಗಲಿ ಏನಾದರೂ ಮಾಡಬಹುದೆಂಬ ವಿಶ್ವಾಸ ನನಗಿಲ್ಲ. 

ನನ್ನಿಂದಾದಷ್ಟು ನಾನು ಮಾಡಿಯೇನು ಎಂದು ಮಿಂಚು ಹುಳ ಸೂರ್ಯನಲ್ಲಿ ಹೇಳಿದಂತೆ, ಇಂದಿನ ದಿನಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅನುದಾನ ರಹಿತವಾಗಿ ಶಾಲೆಗಳನ್ನು ನಡೆಸುತ್ತಿರುವ ನನ್ನಂತಹ ಹುಚ್ಚರು ಅಲ್ಲಲ್ಲಿ ಇದ್ದಾರೆ. ಅವರು ಮಾಡಿಯಾರು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT