ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೂ ಬೇಡವಾಯಿತೇ ಸವಿಗನ್ನಡ?

Last Updated 30 ಅಕ್ಟೋಬರ್ 2014, 15:25 IST
ಅಕ್ಷರ ಗಾತ್ರ

‘ಗಾಂಧೀಜಿ ಹುಟ್ಟಿದ ದಿನಾಂಕ ಯಾವುದು?’ ‘ವಿವೇಕಾನಂದರು ಜನಿಸಿದ್ದು ಯಾವಾಗ?’
ಈ ಪ್ರಶ್ನೆಗಳನ್ನು  ಕೇಳಿದಾಕ್ಷಣ ಉತ್ತರ ಹೇಳಲು ಯಾರಿಗೂ ಮಾಹಿತಿ ಇರಲೇ­ಬೇಕೆಂದಿಲ್ಲ ಬಿಡಿ. ಆದರೆ ಶಿಕ್ಷಕರಿಗಾದರೂ ತಿಳಿದಿರ­ಬೇಕೆಂಬುದು ಶಿಕ್ಷಣ ಮಂತ್ರಿಗಳ ನಿರೀಕ್ಷೆ. ಉತ್ತರ ಗೊತ್ತಿಲ್ಲದೆ ತಬ್ಬಿಬ್ಬಾದ ಶಿಕ್ಷಕರು ಮಾಧ್ಯಮಗಳ ಮುಂದೆ ತತ್ತರಿಸಿದ್ದು ಇತ್ತೀಚಿನ ಸುದ್ದಿ. ಇದರಿಂದ ಏನಾಯಿತು? ಸಚಿವರು ಜಾಣರಿದ್ದಾರೆ, ಆದರೆ ಶಿಕ್ಷಕರು ಪ್ರಯೋಜನಕ್ಕಿಲ್ಲ ಎಂಬ ಸಂದೇಶ ಹರಿ­ದಾಡಿತು.

ಪರಿಣಾಮದಲ್ಲಿ ಏನೂ ಸುಧಾರಣೆ­ಯಾಗಿಲ್ಲ. ಬದಲಾಗಿ ಮಂತ್ರಿಗಳು ಶಿಕ್ಷಕರನ್ನು ಗಟ್ಟಿಯಾಗಿ ಬೈದದ್ದು ಹಾಗೂ ಶಿಕ್ಷಕರು ತಮ್ಮ ತಮ್ಮೊಳಗೆ ಮಂತ್ರಿ­ಗಳನ್ನು ಗುಟ್ಟಾಗಿ ಬೈದದ್ದಷ್ಟೇ ನಡೆಯಿತು. ಆದರೆ ಎಲ್ಲಿಯಾದರೂ ಶಿಕ್ಷಕರು ಕಲಿಯುವುದಕ್ಕೆ ಹೊರಟಿದ್ದಾರಾದರೆ ನಿಜಕ್ಕೂ ಅದು ಗುಣಾತ್ಮಕ ಬೆಳವಣಿಗೆ. ಹಾಗೆಂದು ಎಲ್ಲರ ಬಗ್ಗೆ ಅಂತಹ ನಿರೀಕ್ಷೆ ಇರಿಸಿಕೊಳ್ಳುವುದು ಅತಿ­ಯೆನಿಸೀತು.

ಇಲ್ಲಿ ನಮ್ಮ ಮುಂದಿರುವ ಪ್ರಶ್ನೆಯೆಂದರೆ ಗಾಂಧೀಜಿಗೂ ವಿವೇಕಾನಂದರಿಗೂ ಕನ್ನಡಕ್ಕೂ ಏನು ಸಂಬಂಧ? ತಾವು ಮೊದಲು ಕೇಳಿದ ಪ್ರಶ್ನೆಯನ್ನೇ ಸಚಿವರು ಒಂದಿಷ್ಟು ಮುಂದುವರಿ­ಸು­ತ್ತಿ­ದ್ದರೆ ಅದೊಂದು ಪಾಠವಾಗುತ್ತಿತ್ತು. ಏಕೆಂದರೆ ಬಹಳ ಮುಖ್ಯವಾದ ಸಂಬಂಧ ಇದೆ. ವಿವೇಕಾ­ನಂದರು ಹೇಳಿದರು: ಅಜ್ಞಾನ ಮತ್ತು ಮೂಢ­ನಂಬಿಕೆಗಳೇ ನಮ್ಮ ಹಿಂದುಳಿದಿರುವಿಕೆಗೆ ಕಾರಣ. ಅವನ್ನು ಹೋಗಲಾಡಿಸಲು ಪ್ರತಿ­ಯೊಬ್ಬರಲ್ಲೂ ಹುದುಗಿರುವ ಚೈತನ್ಯವನ್ನು ಹೊರಗೆಳೆಯುವ ಶಿಕ್ಷಣದ ಪ್ರಕ್ರಿಯೆ ದೇಶವ್ಯಾಪಿ­ಯಾಗಿ ಆಗಬೇಕು.

ಗಾಂಧೀಜಿಯವರು ಮೂಲ ಶಿಕ್ಷಣದ ಪ್ರತಿ­ಪಾದಕರು. ಅದು ಪ್ರಾದೇಶಿಕ ಭಾಷೆಗಳಲ್ಲೇ ಆಗ­ಬೇಕು. ನಮ್ಮ ನಮ್ಮ ಭಾಷೆಯಲ್ಲಿ ಜ್ಞಾನ ಸಂಪಾ­-ದನೆ ಆಗುವುದಿಲ್ಲ ಎನ್ನುತ್ತ ಅದು ಇಂಗ್ಲಿಷ್ ನಿಂದ ಆಗಬೇಕೆಂಬುದು ದಾಸ್ಯದ ಸಂಕೇತ. ಈ ಮಾನ­ಸಿಕ ದೌರ್ಬಲ್ಯದಿಂದ  ಹೊರಗೆ ಬನ್ನಿ ಎಂದರು. ಈ ಸಂಗತಿ ಶಿಕ್ಷಕರಿಗೆ ಗೊತ್ತಿದೆಯೇ ಎಂಬುದು ಮುಖ್ಯ. ಅವರಿಗೆ ಗೊತ್ತು ಮಾಡಬೇಕಾದ ಶಿಕ್ಷಣ ಇಲಾಖೆಗಾದರೂ ಗೊತ್ತಿದೆಯೆ? ಕರ್ನಾಟಕ­ದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಭಾಷೆ­ಯಲ್ಲೇ ಕಲಿಸಿ ಉತ್ತಮವಾಗಿ ಇಂಗ್ಲಿಷನ್ನೂ ಕಲಿಸಿದರೆ ನಮ್ಮ ಮಕ್ಕಳು ಬದುಕಿನಲ್ಲಿ ಸೋಲು­ವುದಿಲ್ಲ ಎಂದು ಹೇಳಲು ವಿವೇಕಾನಂದರ ಮತ್ತು ಗಾಂಧೀ­ಜಿ­ಯವರ ಸಂದೇಶ ಸಾಕು.

ಈ ಸಂದೇಶದ ಬಗ್ಗೆ ತಿಳಿಯದೆ ಹುಟ್ಟಿದ ದಿನಾಂಕದ ಬಗ್ಗೆ ಕೇಳಿ ಏನು ಸುಖ?
ಜ್ಞಾನದ ಬೆಳಕನ್ನು ಪಡೆಯಲು ಭಾಷೆಯೇ ಮೂಲ. ಪ್ರತಿಯೊಂದು ಸಮಾಜದಲ್ಲಿ ಪ್ರಾದೇ­ಶಿಕ ಭಾಷೆಯು ಅನೇಕ ಸ್ತರಗಳಲ್ಲಿ ಕಾರ್ಯಾ­ತ್ಮಕ­ವಾಗಿರುತ್ತದೆ. ನಮ್ಮ ಕನ್ನಡವೂ ಹಾಗೇ. ಅದು ಜನರ ಆಡುಮಾತಿನಲ್ಲಿರುತ್ತದೆ, ವ್ಯವಹಾರ­ದಲ್ಲಿ­ರುತ್ತದೆ, ಸಮಾಚಾರದ ಸಂಭಾಷಣೆ­ಯಲ್ಲಿರು­ತ್ತದೆ, ಪತ್ರೋತ್ತರ­ಗಳಲ್ಲಿ­ರುತ್ತದೆ, ಪ್ರೇಮಿಗಳ ಸಲ್ಲಾ­ಪದಲ್ಲಿರುತ್ತದೆ, ಹೃದಯದ ಭಾವನೆ­ಗಳನ್ನು ಪ್ರಕಟಿಸುವು­ದರಲ್ಲಿರುತ್ತದೆ, ಗಂಟೆಗಟ್ಟಲೆ ಮೊಬೈಲಿನಲ್ಲಿ ಮಾತಾಡುವ ಪ್ರೇಮಿಗಳ ಸಂಭಾ­ಷಣೆಯಲ್ಲಿ ಹರಿದಾಡುತ್ತದೆ, ಬಸ್ಸು-–ರೈಲು ಪ್ರಯಾಣದಲ್ಲಿ ಮತ್ತು ಪಾರ್ಕ್‌ಗಳಲ್ಲಿರುತ್ತದೆ, ಕಲಾ ಕಾರ್ಯಕ್ರಮಗಳಲ್ಲಿರುತ್ತದೆ, ಸಮ್ಮೇಳನ­ಗಳ ಪ್ರಶ್ನೋತ್ತರಗಳಲ್ಲಿರುತ್ತದೆ, ಸಾಹಿತ್ಯದ ಪ್ರಬಂಧ ಮಂಡನೆಯಲ್ಲಿರುತ್ತದೆ, ನಮಗೆ ಅಹಿತ ಮಾಡಿದವರನ್ನು ಬೈಯುವುದರಲ್ಲಿರುತ್ತದೆ, ಹಾಳು ಹರಟೆಯಲ್ಲಿರುತ್ತದೆ, ಸುಮ್ಮಸುಮ್ಮನೆ ಹೊಗಳುವುದರಲ್ಲಿರುತ್ತದೆ, ಲೇಖನ ಕತೆ ಕವನ  ಕಾವ್ಯ ಪ್ರಬಂಧ ಕಾದಂಬರಿಗಳಲ್ಲಿರುತ್ತದೆ, ನಾಟಕ-ಯಕ್ಷಗಾನಗಳಲ್ಲಿರುತ್ತದೆ.

ಅಂತೂ ಅದು ಪುನರ್ ಸೃಷ್ಟಿಯಾಗುತ್ತ ತನ್ನ ಕಸುವನ್ನು ಬೆಳೆಸಿಕೊಂಡು ಹೋಗಬೇಕಾಗುತ್ತದೆ. ಆದರೆ ಕನ್ನಡದ ಮಟ್ಟಿಗೆ ಅದು ಆಗುತ್ತದೆಯಾ? ಅಥವಾ ಅದು ಕೆಲವೇ ಸರಳ ಸ್ತರಗಳಲ್ಲಿ ಮಾತ್ರ ಬಳಕೆಯಲ್ಲಿ ಉಳಿದು ಸಾಹಿತ್ಯ ನಿರ್ಮಾಣ­ದಂತಹ ಸಾಂದ್ರ ಸ್ತರಗಳಲ್ಲಿ ಆರಿ ಹೋಗುತ್ತಿ­ದೆಯೇ?  ಇಂದಿನ ಶಿಕ್ಷಣ ವ್ಯವ­ಸ್ಥೆಯು ಭಾಷೆಯ ಪೋಷಣೆಗೆ ಪೂರಕವಾಗಿ­ದೆಯೇ? ಇದು ಪ್ರಶ್ನೆ. ಒಂದು ವಿಪರ್ಯಾಸ ಹೀಗಿದೆ. ಪ್ರಾಥಮಿಕ ಹಂತದಲ್ಲಿ ಹೆತ್ತವರ ಇಚ್ಛೆಯಂತೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಮಕ್ಕಳೂ ಕಾಲೇಜು ಹಂತದ ಕಲಾ ವಿಭಾಗಕ್ಕೆ ಸೇರಿದಾಗ ಕನ್ನಡ ಮಾಧ್ಯಮಕ್ಕೆ ಒಲವು ತೋರಿಸುತ್ತಾರೆ.

ಏಕೆಂದರೆ ಇತಿಹಾಸ, ಸಮಾಜಶಾಸ್ತ್ರ, ಅರ್ಥ­ಶಾಸ್ತ್ರ ಮುಂತಾದ ಪಠ್ಯಗಳು ಕನ್ನಡದಲ್ಲಿ ಚೆನ್ನಾಗಿ ಅರ್ಥವಾಗುತ್ತವೆ. ವಿಷಯಗಳ ಚರ್ಚೆಗೆ ಕನ್ನಡವೇ ಸುಲಭವಾಗುತ್ತದೆ. ಅವರಿಗೆ ಕನ್ನಡ­ದಲ್ಲಿ ಪ್ರಕಟವಾದ ಪುಸ್ತಕಗಳು ಬೇಕು. ಪರೀಕ್ಷೆ­ಯಲ್ಲಿ ಉತ್ತರಗಳನ್ನು ಕನ್ನಡದಲ್ಲೇ ಬರೆಯು­ತ್ತಾರೆ. ಆದರೆ ಇವರ ಬರವಣಿಗೆ ಸುಲಭದಲ್ಲಿ ಅರ್ಥವಾಗುವ ಮಟ್ಟದಲ್ಲಿರುವುದಿಲ್ಲ. ಅವರು ಕನ್ನಡದಲ್ಲಿ ಸರಿಯಾಗಿ ಒತ್ತಕ್ಷರಗಳನ್ನು ಬಳಸಿ ಬರೆಯಲಾರರು. ಇನ್ನೂ ವಿಷಾದನೀಯ ಸಂಗತಿ­ಯೆಂದರೆ ಇವರು ಯಾವುದಾದರೊಂದು ಸಿದ್ಧ ಪಠ್ಯದ ಹೊರಗೆ ಹೋಗಲಾರರು.  ಅವರಿಗೆ ಪಠ್ಯ ಪೂರಕವಾಗಿ ಸಾಹಿತ್ಯಿಕ ಓದಿನಲ್ಲಿ ಆಸಕ್ತಿ ಇಲ್ಲ.

ಕನ್ನಡದ ಪತ್ರಿಕೆಗಳಲ್ಲಿ ಹಾಗೂ ನಿಯತಕಾಲಿಕೆ­ಗಳಲ್ಲಿ ಪ್ರಕಟವಾಗುವ ಲೇಖನಗಳತ್ತ ಕಣ್ಣು ಹಾಯಿಸುವುದೂ ಇಲ್ಲ. ‘ಅದು ಪರೀಕ್ಷೆಗೆ ಇದೆಯಾ ಹಾಗಿದ್ದರೆ ಓದುತ್ತೇನೆ’ ಎಂಬಷ್ಟು ಚೌಕಾಸಿ. ಪರೀಕ್ಷೆಯಲ್ಲಿ ಬರೆದ ಉತ್ತರಗಳನ್ನು ನೋಡಿ­ದರೆ ಏನು ಹೇಳಲು ಬಯಸಿದ್ದಾರೆ ಎಂಬುದೇ ತಿಳಿಯದಂತಹ ವಾಕ್ಯಗಳ ರಚನೆ. ಅಂಕ­ಗಳನ್ನು ನೀಡಲು ತಿಣುಕಾಡುವ ಮೌಲ್ಯ­ಮಾಪ­ಕರು ಕೊನೆಗೂ ತೇರ್ಗಡೆಯಾಗುವಷ್ಟು ಅಂಕ ನೀಡಿ ಕೈತೊಳೆದುಕೊಳ್ಳುತ್ತಾರೆ. ಹೀಗೆ ತೇರ್ಗಡೆ­ಯಾದ ವಿದ್ಯಾರ್ಥಿಗಳು ಬಿ.ಎ., ಬಿ.ಎಡ್., ಎಂ.ಎ., ಎಂ.ಎಸ್.ಡಬ್ಲ್ಯೂ. ಎಂ.ಬಿ.ಎ. ಇತ್ಯಾದಿ ಕಲಿತು ಉದ್ಯೋಗಕ್ಕೆ ಸೇರುತ್ತಾರೆ.

ಕಚೇರಿ ಕೆಲಸ­ಗಳನ್ನು ಹೇಗಾದರೂ ನಿಭಾಯಿಸಬಲ್ಲ ಇವರು ಶಿಕ್ಷಕರಾದಾಗ ಪಾಠವನ್ನು ವಿವರಿಸುವು­ದಕ್ಕಿಂತ ನೋಟ್ಸ್ ಕೊಡುವುದೇ ಹೆಚ್ಚಾಗುತ್ತದೆ. ಏಕೆಂದರೆ ಇವರು ಮಕ್ಕಳ ತಪ್ಪುಗಳನ್ನು ತಿದ್ದಲಾಗದ ಅಸಮ­ರ್ಥರಾಗಿರುತ್ತಾರೆ. ಅದರಿಂದಾಗಿ ಅಂಕ­ಗಳನ್ನು ಕೊಡುವುದರಲ್ಲಿ ಉದಾರವಾಗಿರುತ್ತಾರೆ. ಪರಿಶ್ರಮ ಇಲ್ಲದೆ ಸಿಗುವ ಅಂಕಗಳಿಗೆ ವಿದ್ಯಾರ್ಥಿ­ಗಳೂ ಮಾರುಹೋಗುತ್ತಾರೆ. ಇದರಿಂದ ಶಿಕ್ಷ­ಣವೂ ಭಾಷೆಯೂ ಸೊರಗುತ್ತದೆ. ಹೀಗೆ ಉಂಟಾ­ಗುವ ಭಾಷಾ ಪ್ರೌಢಿಮೆಯ ಕೊರ­ತೆಯು ಶಿಕ್ಷಣದ ಗುಣಮಟ್ಟವನ್ನೇ ಇಳಿಸುತ್ತದೆ. 
ಇನ್ನೊಂದು ವಿಪರ್ಯಾಸ ಹೀಗಿದೆ.

ನಮ್ಮ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸುವ ಹೆಜ್ಜೆ­ಯಾಗಿ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾ­ಯಿತು. ಅದನ್ನು ಮಾಡುವಾಗ ಅದು ಸಿ.ಬಿ.­ಎಸ್.ಇ. ಮಾದರಿಯಲ್ಲಿ ರೂಪಿಸಿರುವುದಾಗಿ ಗುಲ್ಲು ಹಬ್ಬಿತ್ತು. ಅವುಗಳಲ್ಲಿ ಸಾಕಷ್ಟು ತಪ್ಪುಗಳು ನುಸುಳಿದ್ದವೆಂಬುದನ್ನು ಸದ್ಯ ಬದಿಗಿಡೋಣ. ಅವು­ಗಳ ಬಗ್ಗೆ ಬಂದ ಪತ್ರಗಳನ್ನು ಕಾರಣಾಂತರ­ಗ­ಳಿಂದ ನಿರ್ಲಕ್ಷಿಸಲಾಯಿತು. ಅದು ಬಿಡಿ, ಕನ್ನಡದ ಕತೆ ಏನು? ಹೊಸ ಪಠ್ಯದ ತರಬೇತಿ ಕಾರ್ಯ­ಕ್ರಮದ ಸಂಗತಿ ಹೀಗಿದೆ. ಒಬ್ಬ ಸ್ನಾತ­ಕೋತ್ತರ ಪದವೀಧರ ಸಂಪನ್ಮೂಲ ವ್ಯಕ್ತಿಯಾಗಿ ಎಂಟನೇ ತರಗತಿಯ ಪಠ್ಯದ ಪಾಠಗಳ ಬಗ್ಗೆ ತರಬೇತಿ ನೀಡಿದರು. ಶಿಕ್ಷಕರಿಗೆ ಆರಂಭದಲ್ಲಿದ್ದ ಉತ್ಸಾಹ ಮತ್ತು ಕುತೂಹಲ­ಗಳು ಇಳಿಯುತ್ತ ಹೋದುವು.

ಕೊನೆಗೆ ಒಬ್ಬ ಶಿಕ್ಷಕಿ ಕೇಳಿದರು: ‘ವ್ಯಾಕರಣ ಕಲಿಸುವುದು ಹೇಗೆ ಸರ್?’ ಅವರು ನೀಡಿದ ಉತ್ತರ ಚೆನ್ನಾಗಿತ್ತಂತೆ. ‘ನಿಮಗೆ ಗೊತ್ತಿದ್ದರೆ ಕಲಿಸ­ಬಹುದು. ನನಗೆ ವ್ಯಾಕರಣದಲ್ಲಿ ಆಸಕ್ತಿ ಇಲ್ಲ. ಭಾಷೆ ಸರಿ ಇದ್ದರೆ ಮತ್ತೆ ವ್ಯಾಕರಣ ಯಾಕೆ?’ ‘ಸರ್, ಆದರೆ ಅದು ಪರೀಕ್ಷೆಗೆ ಉಂಟಲ್ಲಾ?’ ‘ಅದಕ್ಕೇ ನಾನು ಹೇಳುವುದು ಕಲಿಸುವುದು ಒಳ್ಳೆ­ಯದು’. ‘ಸರ್, ತಾವು ಅದರ ತರಬೇತಿ ನೀಡುವು­ದಿಲ್ಲವೇ?’ ‘ವ್ಯಾಕರಣಕ್ಕೆ ತರಬೇತಿ ಯಾಕೆ? ಅದು ಒಂದು ರೀತಿಯಲ್ಲಿ ನೋಡಿದರೆ ಶಾಸ್ತ್ರ. ಅದನ್ನು ನಿಮ್ಮಷ್ಟಕ್ಕೇ ಮಾಡಿಕೊಳ್ಳಬಹುದು.

ನನ್ನದು ಪಠ್ಯಗಳಲ್ಲಿರುವ ಸೃಜನಶೀಲತೆಯ ಚಿಂತನೆ ಅಷ್ಟೆ’. ಮುಂದೆ ಈ ಪ್ರಶ್ನೆ ಕೇಳಿದ ಶಿಕ್ಷಕಿಯೇ ವ್ಯಾಕ­ರಣ ಭಾಗದ ವಿವರಣೆ ನೀಡಿದರು. ಆದರೆ ಇಲ್ಲಿಯ ವಿರೋಧಾಭಾಸದ ಸಂಗತಿ ಏನೆಂದರೆ ಕನ್ನಡ ವ್ಯಾಕರಣವನ್ನು ಉಳಿದವರು ನಿರ್ಲಕ್ಷಿಸಿ­ದರೆ ಏನೂ ಮಾಡಲಾಗದು. ಆದರೆ ಕನ್ನಡ­ದ­ವರೇ ಅಲಕ್ಷಿಸಿದರೆ ಹೇಗೆ? ಇನ್ನು ಒಂದು ತಲೆ­ಮಾರಿನಲ್ಲಿ ಶಾಸ್ತ್ರವೆಂಬ ಲೇವಡಿಯೊಂದಿಗೆ ಕನ್ನಡ ವ್ಯಾಕರಣದ ಕಲಿಕೆಯ ಪಾಡೇನು?

ಈಗ ನಮ್ಮ ಶಿಕ್ಷಣ ಒಂದೆಡೆ ಸ್ಥಗಿತಗೊಂಡಿದೆ. ಮಹಾತ್ಮರ ಜನ್ಮ ದಿನಾಂಕ ತಿಳಿದಿರುವುದೇ ಜ್ಞಾನ­ವಾಗಿದೆ. ಅವರು ಯಾವುದಕ್ಕಾಗಿ ಮಹಾತ್ಮರು? ಅವರ ಕೊಡುಗೆಗಳೇನು? ಈ ಕುರಿತಾದ ವಿಶ್ಲೇ­ಷಣಾತ್ಮಕ ಅರಿವು ಮುಖ್ಯವಾಗಿ ಉಳಿದಿಲ್ಲ. ಏಕೆಂದರೆ ಭಾಷೆಯ ಮೂಲಕ ಮಾತಾಡು­ವುದಕ್ಕೆ ಗೊತ್ತಿಲ್ಲ. ಇದು ಶಿಕ್ಷಣ ಇಲಾಖೆಗೂ ಬೇಕಾಗಿಲ್ಲ. ಅದು ಶಿಕ್ಷಕರ ಸಂಬಳ ಬಟವಾಡೆ ಮಾಡುವ, ನಿವೃತ್ತಿಗೆ ಹತ್ತಿರವಾದವರ ದಾಖಲೆ­ಗಳನ್ನು ಹೊಂದಿ­­ಸುವ, ಸರ್ಕಾರಿ ಅನುದಾನ­ಗಳನ್ನು ವಿತರಿ­ಸುವ ಹಾಗೂ ಸರ್ಕಾರೇತರ ಶಾಲೆಗಳ ಮಾನ್ಯತೆ­ಯನ್ನು ನಿರ್ಧರಿಸುವ ಒಂದು ಅಧಿಕಾರಶಾಹಿ ಕಚೇರಿ.

ಶಾಲೆಗಳ ಶಿಕ್ಷಣದ ಗುಣಮಟ್ಟದ ಹೊಣೆ ಶಿಕ್ಷಣ ಇಲಾಖೆಗೆ ಇಲ್ಲ. ಇದೆಯೆಂದು ಯಾರಾ­ದರೂ ತಿಳಿದಿದ್ದರೆ ಅದು ತಾತ್ವಿಕವಾಗಿ ಮಾತ್ರ ಸರಿ, ಪ್ರಾಯೋಗಿಕವಾಗಿ ಸರಿಯಲ್ಲ. ಏಕೆಂದರೆ ಶಿಕ್ಷಣ ಇಲಾಖೆಯು ವಿವೇಕಾನಂದರಿಗೂ ಬದ್ಧವಾಗಿಲ್ಲ, ಗಾಂಧೀಜಿಗೂ ನಿಷ್ಠವಾಗಿಲ್ಲ. ಈ ನಿಷ್ಠೆ ಮತ್ತು ಕಾಳಜಿ ಇರುವವರಿಗೆ ಅಲ್ಲಿ ಬೆಲೆ ಇಲ್ಲ. ಹಾಗಾ­ಗಿಯೇ ಶಿಕ್ಷಣ ಇಲಾಖೆಯ ಮೂಗಿನ ಕೆಳಗೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡು­ತ್ತೇವೆಂದು ಛಾಪಾ ಕಾಗದದಲ್ಲಿ ಬರೆದುಕೊಟ್ಟ ಶಾಲೆಗಳೂ ಆಂಗ್ಲಮಾಧ್ಯಮದಲ್ಲಿ ರಾಜಾ­ರೋಷ­ವಾಗಿ ತರ­ಗತಿ­ಗಳನ್ನು ನಡೆಸುತ್ತವೆ.

ಕಾರಣ­ವೇನೆಂದರೆ ಇಂತಹ ಶಾಲೆಗಳಿಗೇ ಮಂತ್ರಿ­ಗಳೂ, ಶಾಸಕರೂ, ಸರ್ಕಾರಿ ಅಧಿಕಾರಿಗಳೂ, ಕನ್ನಡ ಪರ ಹೋರಾ­ಟದ ಸಂಘಟನೆಗಳ ಪದಾಧಿಕಾರಿಗಳೂ, ಸಾಹಿತಿ­ಗಳೂ ತಮ್ಮ ಮಕ್ಕಳನ್ನು ಕಳಿಸುತ್ತಾರೆ. ಹಾಗಾಗಿ ಅಂತಹ ಶಾಲೆಗಳಿಗೆ ಸಾಮಾಜಿಕ ಪ್ರತಿಷ್ಠೆಯೂ ದೊರೆ­ಯುತ್ತದೆ. ಅವುಗಳಿಗೆ ಮಾನ್ಯತೆ­ಯನ್ನೂ ಸುಲಭ­ದಲ್ಲಿ ಎಲ್ಲಾ ಕಾನೂನು­ಗಳನ್ನು ಬದಿಗೊತ್ತಿ ನೀಡಲಾಗುತ್ತದೆ. ಅಂದ ಮೇಲೆ ಅವರನ್ನು ತಡೆ ಹಿಡಿಯುವವರು ಯಾರು? ಇನ್ನು ಗಾಂಧೀಜಿ ಮತ್ತು ವಿವೇಕಾನಂದರ ಜನ್ಮ ದಿನಾಂಕವು ಶಿಕ್ಷಕರಿಗೆ ಗೊತ್ತಿದ್ದೂ ಪ್ರಯೋಜನ­ವೇನು?

ಅಷ್ಟೂ ಗೊತ್ತಿಲ್ಲವೆಂದು ಶಿಕ್ಷಕರ ಕೈ ಕಾಲು ಕಂಪಿಸುವಂತೆ ಮಾಡಿದರೂ ಅದು ಶಿಕ್ಷಣ ಇಲಾಖೆಯ ಜವಾಬ್ದಾರಿಯೂ ಆಗಿದೆಯೆಂಬು­ದನ್ನು ಶಿಕ್ಷಣ ಸಚಿವರು ಸೂಚಿಸು­ವುದಿಲ್ಲ! ಹಾಗಾಗಿ ಶಿಕ್ಷಣ ಇಲಾಖೆಯ ಉನ್ನತಾಧಿ­ಕಾರಿ­ಗಳು ತಾವು ಜನರಿಗೆ ಯಾವುದೇ ಉತ್ತರದಾ­ಯಿತ್ವ ಹೊಂದಿಲ್ಲವೆಂದು ತೋರುವ ದಾರ್ಷ್ಟ್ಯ ತೋರುತ್ತಿದ್ದಾರೆ. ಸರ್ಕಾರದಲ್ಲಿ ಅಧಿಕಾರಕ್ಕೆ ಬಂದ ಪಕ್ಷದವರಿಗೆ ಎದುರಿನಿಂದ ನಿಷ್ಠರಾಗಿದ್ದಲ್ಲಿಗೆ ಅವರ ಸ್ಥಾನ ಭದ್ರವಾಗುತ್ತದೆ. ಹಾಗಾಗಿ ಕನ್ನಡ ಮಾಧ್ಯಮದ ಅನುಮತಿ ಇರುವ ಶಾಲೆಗಳು ಇಂಗ್ಲಿಷ್‌ನಲ್ಲಿ ತರಗತಿ ನಡೆಸಿದರೆ ಇಲಾಖೆ ಪ್ರಶ್ನಿಸು­ವುದಿಲ್ಲ. ಅದನ್ನು ಶಿಕ್ಷಣ ಸಚಿವರೂ ವಿಚಾರಿಸುವು­ದಿಲ್ಲ. ಅಂದಮೇಲೆ ಇದು ಕನ್ನಡಕ್ಕೆ ಕಾಲವಲ್ಲ. ಛೇ!
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT