ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಯೆಂಬ ಕತೆಗಾರ

Last Updated 23 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ಹ್ಯಾಮ್ಲೆಟ್‌’. ಶೇಕ್ಸ್‌ಪಿಯರ್‌ನ ಈ ಪ್ರಸಿದ್ಧ ನಾಟಕದ ಹೆಸರು ಕೇಳದವರೇ ಇಲ್ಲ ಎನ್ನುವಷ್ಟು ಜನಪ್ರಿಯತೆ ಇದಕ್ಕಿದೆ. ಅನುಮಾನ– ವಂಚನೆ, ಸತ್ಯದ ಹಲವು ಆವೃತ್ತಿಗಳ ನಡುವಿನ ಆಳವಾದ ಜಿಜ್ಞಾಸೆ, ಅಸ್ತಿತ್ವದ ಪ್ರಶ್ನೆ, ಕಟುವಾಸ್ತವವನ್ನು ಎದುರಿಸುವಲ್ಲಿ ಎದುರಾಗುವ ದ್ವಂದ್ವಗಳು ಎಷ್ಟೆಲ್ಲ ಸಂಗತಿಗಳನ್ನು ಹೊಂದಿರುವ ಈ ನಾಟಕಕ್ಕೆ 450 ವರ್ಷ ಎಂಬುದು ಬರೀ ಕಾಲದ ಲೆಕ್ಕಾಚಾರವಾಗಿಯಷ್ಟೇ ಕಾಣುತ್ತದೆ. ಈ ದಿನಮಾನದ ಗಣಿತವನ್ನೆಲ್ಲ ಮೀರಿ ರಂಗದ ಮೇಲೆ ಇಂದಿಗೂ ಹೊಸತುಗೊಳ್ಳುತ್ತಲೇ ಇರುವ ಅಪೂರ್ವ ರಂಗಕಾವ್ಯ ‘ಹ್ಯಾಮ್ಲೆಟ್‌’.

ಈ ನಾಟಕದ ಹೊಸ ಆವೃತ್ತಿಯೊಂದು ಇತ್ತೀಚೆಗೆ ರಂಗಶಂಕರದಲ್ಲಿ ಪ್ರದರ್ಶಿತವಾಯಿತು. ಶೇಕ್ಸ್‌ಪಿಯರ್‌ನ ಹುಟ್ಟುನೆಲವಾದ ಇಂಗ್ಲೆಂಡ್‌ನ ಗ್ಲೋಬ್‌ ಥಿಯೇಟರ್‌ ಇದನ್ನು ಪ್ರದರ್ಶಿಸಿತು. ‘ದ ಹ್ಯಾಮ್ಲೆಟ್‌ ಗ್ಲೋಬ್‌ ಟು ಗ್ಲೋಬ್‌’ ಎಂಬ ಹೆಸರಿನಲ್ಲಿ ಜಗತ್ತಿನ ವಿವಿಧ ದೇಶಗಳಿಗೆ ತೆರಳಿ ಹ್ಯಾಮ್ಲೆಟ್‌ ನಾಟಕವನ್ನು ಪ್ರದರ್ಶಿಸುತ್ತಿರುವ ಈ ತಂಡವು ಕಳೆದ ಎರಡು ದಿನಗಳ ಕಾಲ ನಗರದ ರಂಗಶಂಕರದಲ್ಲಿ ಬೀಡು ಬಿಟ್ಟು ಮೂರು ಪ್ರದರ್ಶನಗಳನ್ನು ನೀಡಿತು.

ಹಲವು ಕಾರಣಗಳಿಂದ ರಂಗಪ್ರಿಯರ ಮನಸ್ಸಿನಲ್ಲಿ ಉಳಿದುಕೊಳ್ಳುವ ಈ ಪ್ರಯೋಗವನ್ನು ಥಿಯೇಟರ್‌ ಗ್ಲೋಬ್‌ನ ಕಲಾ ನಿರ್ದೇಶಕ ಡೊಮಿನಿಕ್‌ ಡ್ರೂಮ್‌ಗೂಲ್‌ ನಿರ್ದೇಶಿಸಿದ್ದಾರೆ.

ಎರಡು ದಿನ ರಂಗಶಂಕರದಲ್ಲಿ ಪ್ರಸ್ತುತಗೊಂಡ ‘ಹ್ಯಾಮ್ಲೆಟ್‌’ ನಾಟಕದ ಪ್ರತಿ ಪ್ರದರ್ಶನವೂ ಒಂದೇ ನಾಟಕದ ಬೇರೆ ಬೇರೆ ಆವೃತ್ತಿ ಎನ್ನುವಷ್ಟು ಭಿನ್ನತೆಯನ್ನೂ ಅನನ್ಯತೆಯನ್ನೂ ಕಾಯ್ದುಕೊಂಡಿದ್ದವು ಎನ್ನುವುದು ಎರಡೂ ದಿನಗಳ ಎಲ್ಲ ಪ್ರದರ್ಶನಗಳನ್ನೂ ವೀಕ್ಷಿಸಿದವರ ಅಂಬೋಣ.

‘ಪ್ರತಿ ಪ್ರದರ್ಶನದಲ್ಲಿಯೂ ನಾಟಕದ ಪ್ರಮುಖ ಪಾತ್ರಗಳ ಪಾತ್ರಧಾರಿಗಳು ಅದಲು ಬದಲಾಗುತ್ತಾರೆ. ಪ್ರತಿ ನಟರೂ ಅವರದೇ ಆದ ರೀತಿಯಲ್ಲಿ ಆ ಪಾತ್ರವನ್ನು ಕಟ್ಟಿಕೊಡುವುದರಿಂದ ಈ ಅನನ್ಯತೆ ಸಾಧ್ಯವಾಗಿದೆ’ ಎನ್ನುತ್ತಾರೆ ಗ್ಲೋಬ್‌ ತಂಡದ ಸದಸ್ಯರು.

ಶೇಕ್ಸ್‌ಪಿಯರ್‌ನ ಮೂಲ ಪಠ್ಯವನ್ನೇ ಇಟ್ಟುಕೊಂಡು ಆಧುನಿಕ ಸಂವೇದನೆಯೊಂದಿಗೆ ಮಿಳಿತಗೊಳಿಸಿ ಹೊಸರೂಪದಲ್ಲಿ ಕಟ್ಟಿದ್ದು ಈ ನಾಟಕದ ವಿಶೇಷ. ಹದವಾದ ಸಂಗೀತ, ಸರಳ ರಂಗಸಜ್ಜಿಕೆ, ಪ್ರಬುದ್ಧ ಅಭಿನಯ ಹೀಗೆ ಇಷ್ಟಪಡಲೇಬೇಕಾದಂತಹ ಹಲವು ಅಂಶಗಳು ನಾಟಕದಲ್ಲಿದ್ದವು.

ಈ ನಾಟಕದ ನಾಯಕ ‘ಹ್ಯಾಮ್ಲೆಟ್‌’. ಅತ್ಯಂತ ಸಂಕೀರ್ಣವಾದ ಈ ಪಾತ್ರವನ್ನು ನಿರ್ವಹಿಸಿದವರು ಲ್ಯಾಡಿ ಎಮೆರುವಾ.
ಲ್ಯಾಡಿ ನೈಜೀರಿಯಾ ಮೂಲದವರು. 10ನೇ ವಯಸ್ಸಿನಲ್ಲಿ ಬೋರ್ಡಿಂಗ್‌ ಸ್ಕೂಲ್‌ಗೆ ಸೇರಿಕೊಳ್ಳುವುದರ ಮೂಲಕ ಇಂಗ್ಲೆಂಡ್‌ಗೆ ಪದಾರ್ಪಣೆ ಮಾಡಿದ ಅವರು, ಬ್ರಿಸ್ಟಲ್‌ ಯುನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದರು. ನಂತರ ಲಂಡನ್‌ ಅಕಾಡೆಮಿ ಆಫ್‌ ಮ್ಯೂಸಿಕ್‌ ಅಂಡ್‌ ಡ್ರಾಮೆಟಿಕ್‌ ಆರ್ಟ್ (ಲಾಮ್ಡಾ)ನಲ್ಲಿಯೂ  ಪದವಿ ಪಡೆದಿದ್ದಾರೆ. ತನ್ನದೇ ಆದ ನಿರ್ಮಾಣ ಸಂಸ್ಥೆಯನ್ನೂ ಹೊಂದಿರುವ ಲ್ಯಾಡಿ, ಮೂರು ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ‘ಹ್ಯಾಮ್ಲೆಟ್‌’ ನಾಟಕದ ನಾಯಕನ ಪಾತ್ರವನ್ನು ನಿರ್ವಹಿಸಿದ ರೀತಿಯಿಂದ ಗಮನಸೆಳೆದ ಲ್ಯಾಡಿ, ಕಿರುಸಮಯದಲ್ಲಿ ಮಾತಿಗೆ ಸಿಕ್ಕಾಗ...

* ‘ದ ಹ್ಯಾಮ್ಲೆಟ್‌ ಗ್ಲೋಬ್‌ ಟು ಗ್ಲೋಬ್‌’ ಯೋಜನೆಯ ಬಗ್ಗೆ ಹೇಳಿ...
2012ರಲ್ಲಿ ಥಿಯೇಟರ್‌ ಗ್ಲೋಬ್‌ನ ಕಲಾ ನಿರ್ದೇಶಕ ಡೊಮಿನಿಕ್‌ ಡ್ರೂಮ್‌ಗೂಲ್‌ ನೇತೃತ್ವದಲ್ಲಿ ಶೇಕ್ಸ್‌ಪಿಯರ್‌ ನಾಟಕಗಳ ಉತ್ಸವವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಭಾರತವೂ ಸೇರಿದಂತೆ ಜಗತ್ತಿನ 37 ದೇಶಗಳನ್ನು ಆಹ್ವಾನಿಸಲಾಗಿತ್ತು. ಆ ದೇಶಗಳು ಬೇರೆ ಬೇರೆ ಭಾಷೆಗಳಲ್ಲಿ ಶೇಕ್ಸ್‌ಪಿಯರ್‌ನ ನಾಟಕಗಳನ್ನು ಪ್ರದರ್ಶಿಸಿದ್ದವು. ಈ ಉತ್ಸವಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯೇ ಹೊಸ ಪ್ರಯೋಗಕ್ಕೆ ಸ್ಫೂರ್ತಿಯಾಯಿತು.

2014ರಲ್ಲಿ ಶೇಕ್ಸ್‌ಪಿಯರ್‌ನ 450ನೇ ಜನ್ಮ ವರ್ಷಾಚರಣೆಯನ್ನು ಎಲ್ಲ ದೇಶಗಳಲ್ಲಿಯೂ ಆಚರಿಸಲು ಗ್ಲೋಬ್‌ ಥಿಯೇಟರ್‌ ಯೋಜಿಸಿತು. ಅದಕ್ಕಾಗಿ ‘ಹ್ಯಾಮ್ಲೆಟ್‌’ ನಾಟಕವನ್ನು ಪ್ರದರ್ಶನಕ್ಕೆ ಸಿದ್ಧಪಡಿಸಿತು. ಒಂದು ತಂಡ ಕಟ್ಟಿ ಜಗತ್ತಿನಾದ್ಯಂತ ಸಂಚರಿಸಿ ಆ ನಾಟಕವನ್ನು ಪ್ರದರ್ಶಿಸಲು ನಿರ್ಧರಿಸಿತು. ಆ ಯೋಜನೆಯೇ ‘ದ ಹ್ಯಾಮ್ಲೆಟ್‌ ಗ್ಲೋಬ್ ಟು ಗ್ಲೋಬ್‌’.

2014ರಲ್ಲಿ ಪ್ರಾರಂಭಗೊಂಡ ಈ ಪರ್ಯಟನೆಯಲ್ಲಿ ಅಮೆರಿಕ, ಯುರೋಪ್‌, ಆಫ್ರಿಕಾ, ಏಷ್ಯಾದ ಬಹುತೇಕ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿದ್ದೇವೆ. ಇದು ನಾವು ಪ್ರದರ್ಶಿಸುತ್ತಿರುವ 149ನೇ ವೇದಿಕೆ.

* ಹ್ಯಾಮ್ಲೆಟ್‌ ಪಾತ್ರದ ಬಗ್ಗೆ ಹೇಳಿ..
ಹ್ಯಾಮ್ಲೆಟ್‌ ತುಂಬ ಜನಪ್ರಿಯ ಪಾತ್ರ. ಈ ನಾಟಕವೇ ತುಂಬ ಖ್ಯಾತ, ಉತ್ಕೃಷ್ಟ ನಾಟಕ. ಇಂಗ್ಲಿಷ್‌ ರಂಗಭೂಮಿಯಲ್ಲಿಯೇ ಹ್ಯಾಮ್ಲೆಟ್‌ ತುಂಬ ಶಕ್ತ ಪಾತ್ರ.

ಇದು ನನ್ನ ಇಷ್ಟದ ನಾಟಕವೂ ಹೌದು. ಸತ್ಯ ಮತ್ತು ನಾವು ನಿಜವೆಂದು ತಿಳಿದ ಸಂಗತಿಗಳ ನಡುವಿನ ಜಿಜ್ಞಾಸೆ, ರಾಜಕೀಯ ಇನ್ನೂ ಎಷ್ಟೋ ವಿಷಯಗಳನ್ನು ಹ್ಯಾಮ್ಲೆಟ್‌ ಪಾತ್ರ ಅಭಿವ್ಯಕ್ತಿಗೊಳಿಸುತ್ತದೆ.

* ನಿರಂತರವಾದ ಪ್ರವಾಸ– ಅದೇ ನಾಟಕ, ಅದದೇ ಪಾತ್ರಗಳನ್ನು ನಟಿಸುವುದು ಏಕತಾನತೆ ಅನ್ನಿಸುವುದಿಲ್ಲವೇ?
ನಮ್ಮ ತಂಡದಲ್ಲಿ ಪಾತ್ರಧಾರಿ ಬದಲಾಗುತ್ತಿರುತ್ತಾನೆ. ಉದಾಹರಣೆಗೆ, ಹ್ಯಾಮ್ಲೆಟ್‌ ಪಾತ್ರಗಳನ್ನು ಮೂವರು ನಿರ್ವಹಿಸುತ್ತೇವೆ. ಒಂದೊಂದು ಪ್ರದರ್ಶನಕ್ಕೆ ಒಬ್ಬೊಬ್ಬ ನಟರು ಹ್ಯಾಮ್ಲೆಟ್‌ ಪಾತ್ರವಾಗುತ್ತಾರೆ. ಇದರಿಂದ ಏಕತಾನತೆ ತಪ್ಪುತ್ತದೆ.

ನಿರಂತರ ಪ್ರವಾಸದ ನಡುವೆಯೂ ಉತ್ಸಾಹವನ್ನು ಉಳಿಸಿಕೊಳ್ಳುವುದು ಕಷ್ಟ. ಆದರೆ ಪ್ರತಿ ದೇಶದಲ್ಲಿ ಪ್ರದರ್ಶಿಸುವಾಗಲೂ ಈ ಅವಕಾಶ, ಪ್ರೇಕ್ಷಕವರ್ಗ ಇನ್ನೆಂದೂ ಸಿಗುವುದಿಲ್ಲ. ಆದ್ದರಿಂದ ಈ ಅವಕಾಶದಲ್ಲಿಯೇ ನಮ್ಮತನವನ್ನು ನಾವು ಸಾಬೀತುಪಡಿಸಿಕೊಳ್ಳಬೇಕು ಎಂದು ನೆನಪಿನಲ್ಲಿಟ್ಟುಕೊಳ್ಳುತ್ತೇವೆ.

* ಜನರ ಸ್ಪಂದನ ಹೇಗಿತ್ತು?
ನಿಜವಾಗಿಯೂ ಅದ್ಭುತವಾಗಿತ್ತು. ಎಲ್ಲ ಕಡೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾಟಕದ ಆರಂಭದಲ್ಲಿ ತಮ್ಮ ತಮ್ಮೊಳಗೆ ಗುಸುಗುಸು ಎನ್ನುತ್ತಿದ್ದ ಪ್ರೇಕ್ಷಕರನ್ನು ಸುಮ್ಮನಾಗಿಸಿ ನಾಟಕದತ್ತ ಗಮನ ಸೆಳೆಯುವ ಸವಾಲು ನಮ್ಮ ಮೇಲಿರುತ್ತಿತ್ತು. ಅದನ್ನು ನಾವು ಸಮರ್ಥವಾಗಿ ನಿರ್ವಹಿಸಿದೆವು ಕೂಡ.

* ನೀವು ರಂಗಭೂಮಿಗೆ ಇಳಿದಿದ್ದು ಯಾವಾಗ?
ನೈಜೀರಿಯಾದಲ್ಲಿ ಓದಿದ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿ ನಾಟಕವೊಂದರ ಕೊನೆಯ ಭಾಗವನ್ನು ಆ ಮಕ್ಕಳಿಗೆ ಅಭಿನಯಿಸಿ ತೋರಿಸಿದೆವು. ಅವರ ಖುಷಿ, ಪ್ರತಿಕ್ರಿಯೆ ಕಂಡು ಇದೇ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎನ್ನುವ ನನ್ನ ಆಸೆ ಗಟ್ಟಿಯಾಯಿತು.
ಹತ್ತು ವರ್ಷದವನಿದ್ದಾಗಲೇ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಸೆ ಕಂಡವನು ನಾನು. ಆದರೆ ಉನ್ನತ ಶಿಕ್ಷಣ ಮುಗಿಸಿ ಕಳೆದ ಆರು ವರ್ಷದಿಂದ ರಂಗಭೂಮಿಯಲ್ಲಿ ತೊಡಗಿಕೊಂಡೆ.

* ಬೆಂಗಳೂರಿನಲ್ಲಿ ಅನುಭವ ಹೇಗಿತ್ತು?
ಈ ನಗರ ತುಂಬ ಚೆನ್ನಾಗಿದೆ. ಇಲ್ಲಿನ ಅನೇಕ ಜಾಗಗಳನ್ನು ನೋಡುತ್ತ ನೋಡುತ್ತ ನನ್ನ ದೇಶ ನೈಜೀರಿಯಾದ ಬೀದಿಗಳು ನೆನಪಾದವು.

* ರಂಗಭೂಮಿಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?
ರಂಗಭೂಮಿ... ವಾವ್‌... ಅದು  ನನ್ನ ಪಾಲಿಗೆ ಕತೆಗಾರ.. ಜೀವನಗಾಥೆ ಅರುಹುವ ಕತೆಗಾರ... 


***
ಕಾಲೇಜು ಕ್ಯಾಂಪಸ್ ಬಣ್ಣಗಳು ಬದುಕಿನಲ್ಲಿ ನೆನಪಿನಂಗಳದಿಂದ ಮಾಸುವುದೇ ಇಲ್ಲ. ಇಂಥ ಬಣ್ಣದ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನುಡಿ ಅಥವಾ ಬರಹ ತಂತ್ರಾಂಶದಲ್ಲಿರಲಿ.  ಬರಹದೊಂದಿಗೆ ನಿಮ್ಮ ಪೂರ್ಣ ವಿಳಾಸ, ಸಂಪರ್ಕ ಸಂಖ್ಯೆ ಮುಂತಾದ ವಿವರ ಇರಲಿ. ಇ-ಮೇಲ್: metropv@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT