ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ತಾರತಮ್ಯಕ್ಕೆ ಸವಾಲೆಸೆದ ಗಟ್ಟಿಗಿತ್ತಿ

Last Updated 9 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಬರೋಬ್ಬರಿ 75 ವರ್ಷಗಳ ಸುದೀರ್ಘ ಸ್ನೇಹ ನಮ್ಮದು. ತನ್ನ ನಿರ್ಗಮನದೊಂದಿಗೆ ಪಾರ್ವತಿ ಅದಕ್ಕೀಗ ಪೂರ್ಣ ವಿರಾಮವನ್ನೇ ಹಾಕಿಬಿಟ್ಟಳಲ್ಲ? ಗೆಳತಿಯನ್ನು ಕಳೆದುಕೊಂಡ ಈ ಗಳಿಗೆಯಲ್ಲಿ ನೆನಪುಗಳ ಮಳೆಯೇ ಹುಯ್ಯುತಿದೆ. ಮನವೆಲ್ಲ ಒದ್ದೆಯಾಗಿದೆ. ಹೌದು, ಪಾರ್ವತಿ ಇಲ್ಲದ ಈ ಹೊತ್ತಿನಲ್ಲಿ ಶೂನ್ಯಭಾವ ಕೂಡ ಕಾಡುತ್ತಿದೆ.

ಅದು 1940ರ ದಶಕ. ನಮ್ಮ ‘ಛಾಯಾ ಕಲಾವಿದರು’ ರಂಗತಂಡದಿಂದ ಪರ್ವತವಾಣಿ ವಿರಚಿತ ‘ಬಹದ್ದೂರ್‌ ಗಂಡು’ ನಾಟಕ ಅಭಿನಯದ ಸಂದರ್ಭ. 12 ವರ್ಷದ ನಾನು, ಆ ನಾಟಕದಲ್ಲಿ ನಾಯಕಿಯಾಗಿದ್ದೆ. ಹಗಲೆಲ್ಲ ನಡೆಯುತ್ತಿದ್ದ ರಂಗತಾಲೀಮಿಗೆ ಸಹೋದರ ಸೂರಿಯೊಂದಿಗೆ ಬರುತ್ತಿದ್ದ ಪಾರ್ವತಿ ಆಗಿನ್ನೂ ಪುಟ್ಟಿ. ನಾಟಕ ನಡೆಯುವಾಗ ಅಂದದ ಫ್ರಾಕ್‌ ತೊಟ್ಟು ಗ್ರೀನ್‌ ರೂಮ್‌ನಲ್ಲಿ ದಿಢೀರ್‌ ಎಂದು ಪ್ರತ್ಯಕ್ಷ ಆಗುತ್ತಿದ್ದಳು. ಅರಳು ಹುರಿದ ಹಾಗೆ ಪಟಪಟ ಅಂತ ಮಾತನಾಡುತ್ತಿದ್ದಳು. ಆ ದಿನಗಳಿಂದಲೇ ಅವಳಿಗೂ ನನಗೂ ಒಡನಾಟ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಪಾರ್ವತಿಗೆ (ಜನನ: 1934ರ ಫೆಬ್ರುವರಿ 3; ತಂದೆ: ಶ್ರೀನಿವಾಸರಾವ್‌, ತಾಯಿ: ಮಹಾಲಕ್ಷ್ಮಮ್ಮ) ಬರವಣಿಗೆ ಕೌಶಲ ಜನ್ಮಜಾತವಾಗಿ ಸಿದ್ಧಿಸಿತ್ತು. ಆಚಾರ್ಯ ಪಾಠಶಾಲೆಯಲ್ಲಿ ಓದುತ್ತಿದ್ದಾಗ ‘ಲಾಲ್‌ಬಾಗ್‌’ ಕುರಿತು ಪ್ರಬಂಧ ಬರೆದು ಅಧ್ಯಾಪಕಿಯಿಂದ ಬೆನ್ನು ತಟ್ಟಿಸಿಕೊಂಡವಳು ಆಕೆ.

ಹೈಸ್ಕೂಲ್‌ನಿಂದ ಮುಂದಕ್ಕೆ ಓದಲು ಆಗದಿದ್ದಾಗ ಸುಮ್ಮನೆ ಕೂರದ ಆಕೆ, ಬಾಹ್ಯ ವಿದ್ಯಾರ್ಥಿನಿಯಾಗಿ ಕಾಶಿ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ಎಂ.ಎ ಪದವಿ ಪಡೆದಳು. ಕನ್ನಡ ಸಾಹಿತ್ಯ ಪರಿಷತ್ತಿನ ‘ಜಾಣ’ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಯಾಗಿ ಜಾಣೆ ಎನಿಸಿಕೊಂಡಳು.

ಹಿಂದಿ ಕಥೆಯೊಂದನ್ನು ಪಾರ್ವತಿ ಕನ್ನಡಕ್ಕೆ ಅನುವಾದ ಮಾಡಿದಾಗ ಆ ಕಥೆ ನಿರಂಜನ ಅವರ ಕೈಗೆ ಸಿಕ್ಕಿ ಮೆಚ್ಚಿಕೊಂಡರು. ಕೃಷ್ಣ ಚಂದರ್‌ ಅವರ ‘ಪರಾಜಯ’ ಕಾದಂಬರಿಯನ್ನು ಅವಳ ಕೈಗಿತ್ತು ಅನುವಾದಿಸಲು ಹೇಳಿದರು. ಆಕೆ ನಿಷ್ಠೆಯಿಂದ ಅನುವಾದಿಸಿದ ಆ ಕಾದಂಬರಿ ‘ಚಿತ್ರಗುಪ್ತ’ದಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಅವಳ ಸಾಹಿತ್ಯದ ವಿಜಯಯಾತ್ರೆಗೆ ‘ಪರಾಜಯ’ವೇ ಬುನಾದಿಯಾಯಿತು.

ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ಸ್ತ್ರೀಸಮಾನತೆಗೆ ಕೂಗು ಎತ್ತುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ, ಲಿಂಗ ತಾರತಮ್ಯದ ವಿರುದ್ಧ ಆಗಿನ ದಿನಗಳಲ್ಲೇ ಪಾರ್ವತಿ ಪ್ರತಿಭಟನಾ ಮನೋಭಾವ ಪ್ರದರ್ಶಿಸಿದ್ದಳು. ಹೆಣ್ಣು ಪ್ರಗತಿಪರವಾಗಿ ಬೆಳೆಯಬೇಕಾದರೆ ಉದ್ಯೋಗ ಹಿಡಿಯಬೇಕು ಎಂಬುದು ಅವಳ ದಿಟ್ಟ ವಾದವಾಗಿತ್ತು.

ಹಿಂದಿ ಭಾಷೆಯ ಮೇಲೆ ಹಿಡಿತ ಹೊಂದಿದ್ದ ಆಕೆ ರಾಷ್ಟ್ರೀಯ ಬಾನುಲಿ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಲು 1958ರಲ್ಲಿ ಅನುವಾದಕಿಯಾಗಿ ಆಕಾಶವಾಣಿಯಲ್ಲಿ ಕೆಲಸಕ್ಕೆ ಸೇರಿದಳು. ಪಾರ್ವತಿ ಅವರ ಅಪ್ಪ–ಅಮ್ಮ ತುಂಬಾ ಉದಾರವಾದಿಗಳಾಗಿದ್ದರು. ಮಗಳು ಉದ್ಯೋಗಕ್ಕೆ ಸೇರುತ್ತೇನೆ ಎಂದಾಗ ಬೇಡ ಅನ್ನಲಿಲ್ಲ. ಆಕೆ ಭಾಷೆಯನ್ನಷ್ಟೇ ಅನುವಾದಿಸಲಿಲ್ಲ. ಭಾವವನ್ನೂ ಕನ್ನಡದಲ್ಲಿ ಕಟ್ಟಿಕೊಟ್ಟಳು.

ನಾನೂ ಆಕಾಶವಾಣಿಗೆ ಸೇರಲು ಉತ್ಸುಕಳಾಗಿದ್ದೆ. ಆದರೆ, ಮನೆಯಲ್ಲಿ ಅದಕ್ಕೆ ಅವಕಾಶ ಸಿಗಲಿಲ್ಲ. ಮದುವೆಯಾದ ಮೇಲೆ  ಕದ್ದುಮುಚ್ಚಿ ಅರ್ಜಿ ಹಾಕಿ ಉದ್ಯೋಗ ಗಿಟ್ಟಿಸಿದೆ. ಹೀಗಾಗಿ ನಾನು ಕೆಲಸಕ್ಕೆ ಸೇರಿದ್ದು ಪಾರ್ವತಿಗಿಂತ ನಾಲ್ಕು ವರ್ಷಗಳಷ್ಟು ತಡವಾಗಿ. ಅರವತ್ತರ ದಶಕದಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆಕೆ ಹಿಂದಿ ನಾಟಕಗಳನ್ನು ಕನ್ನಡಕ್ಕೆ ತರುತ್ತಿದ್ದಳು. ನಾನು, ಎ.ಎಸ್‌.ಮೂರ್ತಿ, ನೀಲಕಂಠರಾವ್‌ ಮೊದಲಾದವರು ಅಭಿನಯಿಸುತ್ತಿದ್ದೆವು.

ಕೃಷಿರಂಗಕ್ಕೆ ಬೇಕಾದ ಕಿರುನಾಟಕಗಳನ್ನು ನಮ್ಮ ಪಾರ್ವತಿ ಥಟ್‌ ಅಂತ ರಚಿಸಿ ಕೊಡುತ್ತಿದ್ದಳು. ನೇರ ಪ್ರಸಾರ ಆಗುತ್ತಿದ್ದ ಈ ನಾಟಕಗಳಲ್ಲಿ ಅವಳೂ ಪಾತ್ರ ನಿರ್ವಹಿಸುತ್ತಿದ್ದಳು. ಆಗ ನೇರ ಪ್ರಸಾರದ ಕಾರ್ಯಕ್ರಮಗಳೇ ಹೆಚ್ಚಿರುತ್ತಿದ್ದವು. ತಡವರಿಸದೆ ಸಂಭಾಷಣೆ ಹೇಳುತ್ತಿದ್ದೆವು. ರಾತ್ರಿ 10ರ ಬಳಿಕ ಕಾರ್ಯಕ್ರಮ ಮುಗಿದಾಗ ನಮ್ಮನ್ನು ಕಾರಿನಲ್ಲಿ ಮನೆಗೆ ಕರೆದೊಯ್ಯಲಾಗುತ್ತಿತ್ತು.

ಪಾರ್ವತಿಯೇ ರಚಿಸಿದ್ದ ‘ಕಥಾ ತರಂಗ’ ಬಾನುಲಿ ನಾಟಕ ಅತ್ಯಂತ ಜನಪ್ರಿಯವಾಗಿತ್ತು. ಆಕೆ ನಡೆಸಿಕೊಡುತ್ತಿದ್ದ ‘ಬಾಲ ಜಗತ್ತು’ ಸಹ ಹೆಸರು ಮಾಡಿತ್ತು. ಪರ್ವತವಾಣಿ ಅವರು ಸೃಷ್ಟಿಸಿದ ಸ್ತ್ರೀಪಾತ್ರಗಳು ಅವಳಿಗೆ ತುಂಬಾ ಇಷ್ಟವಾಗಿದ್ದವು. ಆ ಪಾತ್ರಗಳ ಕುರಿತಾಗಿಯೇ ಆಕೆ ಲೇಖನ ಬರೆದಳು. ಕಚೇರಿಯಲ್ಲಿ ಯಾರಾದರೂ ಹೆಣ್ಣು ಮಕ್ಕಳ ವಿಷಯವಾಗಿ ಗಾಸಿಪ್‌ ಹರಡಿದರೆ ಕೆಂಡಾಮಂಡಲ ಆಗುತ್ತಿದ್ದಳು. ಮಹಿಳೆಯರ ಪರ ವಹಿಸಿಕೊಂಡು ಗಟ್ಟಿಯಾಗಿ ನಿಲ್ಲುತ್ತಿದ್ದಳು.

ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಅಧ್ಯಕ್ಷೆ ಸ್ಥಾನದ ಗೌರವವೂ ಪಾರ್ವತಿಗೆ ಒಲಿದುಬಂತು. ಆಕಾಶವಾಣಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸ್ಥಾನವನ್ನೂ ಆಕೆ ಅಲಂಕರಿಸಿದ್ದಳು. ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಅವಳು ದುಡಿದಳು. ನೂರಾರು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಳು. ಎಂಬತ್ತರ ಗಡಿ ದಾಟಿದ ನಾನೂ ಅವಳೂ ‘70ರ ವಯಸ್ಸು, 20ರ ಮನಸ್ಸು’ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗಿಯಾದ ನೆನಪು ಇನ್ನೂ ಹಸಿರಾಗಿದೆ.

ನನಗೂ ಅವಳಿಗೂ ಭಿನ್ನತೆ ಇದ್ದುದು ಸಮಯ ಪರಿಪಾಲನೆ ವಿಷಯದಲ್ಲಿ. ಕಾರ್ಯಕ್ರಮದ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚೆ ನಾನು ಸಿದ್ಧವಾಗಿ ಅವಳ ಮನೆಗೆ ಹೋದರೆ ‘ಏಕೆ ಸಭಾಂಗಣದ ಕಸಗುಡಿಸಿ ಸಿದ್ಧಗೊಳಿಸಲು ನಮಗೇ ಹೇಳಿದ್ದಾರೇನು’ ಎಂದು ಕಾಲೆಳೆಯುತ್ತಿದ್ದಳು. ಯಾವುದೇ ಸಮಾರಂಭವಿದ್ದರೂ ತುಂಬಾ ತಡವಾಗಿ ಸಿದ್ಧವಾಗುತ್ತಿದ್ದಳು. ಸಾವಿನ ವಿಷಯದಲ್ಲಿ ಮಾತ್ರ ಏಕೆ ಇಷ್ಟು ಆತುರ ತೋರಿದಳು?

ಪಾರ್ವತಿ ಇನ್ನಿಲ್ಲ
ಬೆಂಗಳೂರು: ಹಿರಿಯ ಲೇಖಕಿ ಎಚ್‌.ಎಸ್‌. ಪಾರ್ವತಿ (82) ಇಲ್ಲಿನ ಶಾಸ್ತ್ರಿನಗರದ ತಮ್ಮ ನಿವಾಸದಲ್ಲಿ ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು. ಅವರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಅಮೆರಿಕದಲ್ಲಿರುವ ಅವರ ಮಗ ಎಂ.ಎಸ್‌. ರವಿ ಮಂಗಳವಾರ ರಾತ್ರಿ ನಗರಕ್ಕೆ ಬರಲಿದ್ದಾರೆ. ಬನಶಂಕರಿನಗರದ ಚಿತಾಗಾರದಲ್ಲಿ ಬುಧವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT