ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಗದ್ದಲದ ನಷ್ಟ ಬರೋಬ್ಬರಿ ರೂ 716 ಕೋಟಿ!

Last Updated 27 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದಾನೊಂದು ಕಾಲ­ದಲ್ಲಿ ಏಸೊಂದು ಮುದವಿತ್ತಾ...’ ಎಂದು ನೆನಪಿಸಿ­ಕೊಂಡು, ಈಗ ಹಾಗಿಲ್ಲ­ವಲ್ಲ ಎಂದು ಬೇಸರ ಮಾಡಿ­ಕೊಳ್ಳು­ವುದರಲ್ಲಿ ಅರ್ಥವಿದೆ! ದೇಶದ ಲೋಕ­ಸಭಾ ಕಲಾಪಗಳು ಸಾಗುತ್ತಿರುವ ದಾರಿಯನ್ನು ಗಮನಿಸಿದರೆ, ಈ ಸಾಲು­ಗಳಿಗೆ ಮತ್ತಷ್ಟು ಮಹತ್ವ ಬರುತ್ತದೆ. ಪ್ರಥಮ ಲೋಕ­ಸಭೆ ಹಾಗೂ ಈಗಿನ ಲೋಕಸಭೆ ಕಂಡಿರುವ ಬದಲಾವಣೆ ಅಷ್ಟು ಬೃಹತ್‌ ಆಗಿದೆ. ಈ ಬಾರಿಯ ಲೋಕಸಭೆಯಲ್ಲಿ ನಡೆದ ಗದ್ದಲ­ಗ­ಳಿಂದಾಗಿ ದೇಶಕ್ಕಾದ ನಷ್ಟ ₨ 715.92 ಕೋಟಿ!

ಮೊದಲ ಲೋಕಸಭೆಯಿಂದ ಆರಂ­ಭಿಸಿ 15ನೆಯ ಲೋಕಸಭೆವರೆಗೆ (ಹಾಲಿ ಲೋಕಸಭೆ) ಯಾವ ಸಂದರ್ಭದಲ್ಲಿ ಎಷ್ಟು ಚರ್ಚೆಗಳು ನಡೆ­ದಿವೆ, ಎಷ್ಟು ಬಾರಿ ಸಂಸತ್‌ ಕಲಾಪಗಳು ಗದ್ದಲ–ಗೌಜಿಗೆ ಬಲಿಯಾಗಿವೆ, ಅದರಿಂದ ದೇಶಕ್ಕೆ ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ಬೆಂಗ­ಳೂರಿನ ‘ರಿಜೋರ್ಸ್‌ ಸಂಶೋ­ಧನಾ ಪ್ರತಿಷ್ಠಾನ’ (ಆರ್‌ಎಸ್‌ಎಫ್‌) ಅಧ್ಯಯನ ನಡೆಸಿದೆ. ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

ಮೊದಲ ಲೋಕಸಭೆ: ದೇಶದ ಮೊದಲ ಲೋಕಸಭೆ 15 ಬಾರಿ ಕಲಾಪ ನಡೆ­ಸಿತ್ತು. ಒಟ್ಟು 3,784 ಗಂಟೆಗಳ ಕಾಲ ವಿವಿಧ ವಿಷಯಗಳ ಕುರಿತು  ಚರ್ಚಿ­ಸಿತ್ತು. ಅದು ಪಂಡಿತ್‌ ಜವಾಹರ­ಲಾಲ್‌ ನೆಹರೂ ಅವರು ಪ್ರಧಾನಿಯಾಗಿದ್ದ ಕಾಲ. ಆದರೆ, ಈ ಬಾರಿಯ ಲೋಕಸಭೆ (ಯುಪಿಎ–2 ಸರ್ಕಾರದ ಅವಧಿ) ಕೇವಲ 1,335.01 ಗಂಟೆಗಳ ಕಾಲ ಕಲಾಪ ನಡೆಸಿದೆ. ಮೊದಲ ಲೋಕ­ಸಭೆಗೆ ಹೋಲಿಸಿದರೆ, ಈ ಬಾರಿಯ ಲೋಕಸಭಾ ಕಲಾಪದ ಅವಧಿ ಶೇಕಡ 65ರಷ್ಟು ಕಡಿಮೆಯಾಗಿದೆ.

‘ಪ್ರಜಾಪ್ರಭುತ್ವದಲ್ಲಿ ಪಾಲ್ಗೊ­ಳ್ಳು­ವಿಕೆಯ ವಿಚಾರ­ದಲ್ಲಿ ಇಂದಿನ ಸಂಸದರು ಉತ್ಸಾಹ ಕಳೆದು­ಕೊಳ್ಳುತ್ತಿದ್ದಾರೆ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಆರಂಭದಲ್ಲಿ ಸಂಸ­ದೀಯ ಚರ್ಚೆಗಳು ವಿಸ್ತೃತ­ವಾಗಿ ನಡೆಯುತ್ತಿದ್ದವು’ ಎಂದು ಆರ್‌ಎಸ್‌ಎಫ್‌ ನಿರ್ದೇಶಕ ಕೆ.ವಿ. ನರೇಂದ್ರ ಅವರು ವರದಿಯಲ್ಲಿ ಉಲ್ಲೇಖಿ­ಸಿ­ದ್ದಾರೆ. ಸ್ವಾತಂತ್ರ್ಯ ದೊರೆತ ಆರಂಭದ 30 ವರ್ಷಗಳಲ್ಲಿ ನಡೆದ ಸಂಸ­ದೀಯ ಚರ್ಚೆಗಳ ಅವಧಿಗೆ ಹೋಲಿಸಿದರೆ, ಈ ಬಾರಿಯ ಲೋಕ­ಸಭೆ­ಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆದ ಅವಧಿಯಲ್ಲಿ ಶೇ 68ರಷ್ಟು ಕುಸಿತ ಕಂಡು­ಬಂದಿದೆ ಎಂದು ವರದಿ ಹೇಳಿದೆ.

ಮೊದಮೊದಲು ಸಂಸತ್ತು ಪ್ರತಿದಿನ ಸರಾಸರಿ 6 ತಾಸು, 19 ನಿಮಿಷಗಳ ಕಾಲ ಕಲಾಪ ನಡೆ­ಸುತ್ತಿತ್ತು. ಆದರೆ ಅದು ಈಗ ಸರಾಸರಿ 2 ತಾಸು, 53 ನಿಮಿಷಕ್ಕೆ ಇಳಿದಿದೆ.
ಈ ಬಾರಿಯ ಲೋಕಸಭೆ ಮೊದಲ ಬಾರಿ ಕಲಾಪ ನಡೆಸಿದಾಗ, (2009ರ ಜೂನ್‌ 1ರಿಂದ 9ರವರೆಗೆ) ಒಂದೇ ಒಂದು ನಿಮಿಷ ಕೂಡ ವ್ಯರ್ಥ­ವಾಗಲಿಲ್ಲ. ಆದರೆ 2010ರ ನವೆಂಬರ್‌ 9ರಿಂದ ಡಿಸೆಂಬರ್‌ 13ರವರೆಗೆ ನಡೆದ ಕಲಾಪ­ದಲ್ಲಿ 124 ಗಂಟೆಗಳ ಅವಧಿ ಗದ್ದಲ­ದಲ್ಲೇ ಮುಗಿದು­ಹೋಯಿತು. 15ನೇ ಲೋಕಸಭೆ ಒಟ್ಟು 824 ತಾಸು, 51 ನಿಮಿಷಗಳನ್ನು ಗದ್ದಲದಲ್ಲೇ ಕಳೆದು­ಕೊಂಡಿದೆ ಎಂದು ವರದಿ ಹೇಳುತ್ತದೆ.

‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ­ಕೂಟ (ಎನ್‌ಡಿಎ) ಸರ್ಕಾರ ಮತ್ತು ಯುಪಿಎ–1ರ ಅವಧಿಗೆ ಹೋಲಿಸಿದರೆ, ಯುಪಿಎ–2ರ ಅವಧಿ­ಯಲ್ಲಿ ಸಂಸತ್‌ ಕಲಾಪಗಳು ಗದ್ದಲಕ್ಕೆ ಬಲಿಯಾದ ಪ್ರಮಾಣ ಶೇ 175ರಷ್ಟು ಹೆಚ್ಚಾ­ಗಿದೆ. ನಮ್ಮ ರಾಜಕಾರಣಿಗಳು ರಾಜಕಾ­ರಣದ ಮೂಲ ಶಿಷ್ಟಾಚಾರ, ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ತಾವು ಜವಾಬ್ದಾರರಾಗಿರಬೇಕು ಎಂಬ ಅಂಶ­ಗಳನ್ನೂ ಮರೆತಿದ್ದಾರೆ’ ಎಂದು ವರದಿ­ಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಕಾರಣಗಳು ಯಾವವು?: 15ನೇ ಲೋಕಸಭೆ­ಯಲ್ಲಿ ಅತಿ ಹೆಚ್ಚು ಗದ್ದಲ ಸೃಷ್ಟಿಸಿದ ಕೆಲವು ವಿಚಾರ­ಗಳನ್ನು ವರದಿ ಪಟ್ಟಿಮಾಡಿದೆ. ಅದರಲ್ಲಿ, ಆಂಧ್ರ­ಪ್ರದೇಶ ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ಸೃಷ್ಟಿಸುವ ವಿಚಾರ ಮೊದಲ ಸ್ಥಾನ ಪಡೆದುಕೊಂಡಿದೆ.

ತೆಲುಗುದೇಶಂ ಪಕ್ಷ ಲೋಕಸಭೆ­ಯಲ್ಲಿ ತೆಲಂಗಾಣ ವಿಚಾರ ಪ್ರಸ್ತಾಪಿಸಿ, ಗದ್ದಲ ಎಬ್ಬಿಸಿತು. ಇದರಿಂದಾಗಿ ಲೋಕ­ಸಭೆಯಲ್ಲಿ 90 ತಾಸು ಯಾವುದೇ ಚರ್ಚೆ ನಡೆಯಲಿಲ್ಲ. ಇಷ್ಟೇ ಅಲ್ಲ, ತೆಲಂಗಾಣ ರಾಜ್ಯ ರಚನೆಯ ಪರ ಇರುವ­ವರು ಮತ್ತು ವಿರೋಧಿಸುವ­ವರು ಯೋಜಿತ, ವಿಸ್ತೃತ ಚರ್ಚೆಯನ್ನೇ ನಡೆಸಲಿಲ್ಲ.

15ನೇ ಲೋಕಸಭೆಯ 15ನೇ ಕಲಾಪದಲ್ಲಿ ಇನ್ನೂ ಕೆಲವು ವಿಷಯ­ಗಳು ಸಂಸತ್‌ ಕಲಾಪ­ವನ್ನು ಹಾಳು­ಗೆಡವಿದವು. ವಿಶ್ವ ಹಿಂದೂ ಪರಿ­ಷತ್ತು ಅಯೋಧ್ಯೆಯಲ್ಲಿ ನಡೆಸಿದ ಕೋಶಿ ಯಾತ್ರೆ ಕುರಿತು ಪ್ರಸ್ತಾಪಿಸಿ ಸಮಾಜ­ವಾದಿ ಪಕ್ಷ ಕಲಾಪ ಹಾಳುಗೆಡವಿತು. ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ವಿಚಾರದಲ್ಲಿ ಬಿಜೆಪಿ ಕಲಾಪಕ್ಕೆ ಅಡ್ಡಿ ಉಂಟುಮಾಡಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧರ ಮೇಲೆ ಪಾಕಿಸ್ತಾನದ ಸೈನಿಕರು ನಡೆಸಿದ ಆಕ್ರ­ಮಣ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಮತ್ತಿ­ತರ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದವು.

ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಸರ್ಕಾರಿ ಉದ್ಯೋಗ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ವಿರೋಧ ಪಕ್ಷಗಳು ಗದ್ದಲ ಉಂಟುಮಾಡಿದವು ಎಂದು ವರದಿ ಹೇಳುತ್ತದೆ.

ತುರ್ತು ಸ್ಥಿತಿ: ದಿ ಬೆಸ್ಟ್‌!
ಬೆಂಗಳೂರು:ಸ್ವಾತಂತ್ರ್ಯಾನಂತರ ಇದುವ­ರೆಗಿನ ಲೋಕಸಭೆಗಳ ಪೈಕಿ, ತುರ್ತು ಪರಿಸ್ಥಿತಿ ಘೋಷಣೆ­ಯಾ­ದಾಗ ಇದ್ದ ಲೋಕಸಭೆ ಅತ್ಯಂತ ಹೆಚ್ಚಿನ ಸಮಯವನ್ನು ಚರ್ಚೆ­ಗಳಿಗೆ ಮೀಸಲಿಟ್ಟಿತ್ತು ಎಂದು ವರದಿ ಉಲ್ಲೇಖಿಸಿದೆ.

ಇಂದಿರಾ ಗಾಂಧಿಯವರು ಪ್ರಧಾನಿ­­ಯಾಗಿದ್ದಾಗ 1975ರಿಂದ 1977ರ ನಡುವೆ 21 ತಿಂಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿ ಇತ್ತು. ಆಗ ಐದನೆಯ ಲೋಕಸಭೆ ಅಸ್ತಿತ್ವ­ದಲ್ಲಿತ್ತು. ಇದು 4071 ಗಂಟೆಗಳ ಕಾಲ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದೆ. ದೇಶದ ಲೋಕಸಭೆ­ಗಳ ಇತಿಹಾಸದಲ್ಲಿ ಇಷ್ಟು ದೊಡ್ಡ ಅವಧಿಯ ಚರ್ಚೆ­ಗಳು ನಡೆದಿದ್ದು ಇದೊಂದರಲ್ಲಿ ಮಾತ್ರ! ನೆಹರೂ ಅವರು ಪ್ರಧಾನಿ­ಯಾಗಿದ್ದಾಗಲೂ ಇಷ್ಟೊಂದು ಅವಧಿಗೆ ಸಂಸತ್ತಿನಲ್ಲಿ ಚರ್ಚೆಗಳು ನಡೆದಿಲ್ಲ.

ಸಂಸತ್ತಿನ ಖರ್ಚು...
2009ರಿಂದ ಇದುವರೆಗೆ ಸಂಸತ್‌ ಕಲಾಪಗಳನ್ನು ನಡೆಸಲು ಆಗಿರುವ ಖರ್ಚು ಬರೋಬ್ಬರಿ ₨ 22 ಸಾವಿರ ಕೋಟಿ ಎಂದು ಆರ್‌ಎಸ್‌ಎಫ್‌ ವರದಿ ಹೇಳಿದೆ.ಲೋಕಸಭಾ ಅಧಿವೇಶನದ ಪ್ರತಿ ನಿಮಿಷಕ್ಕೆ ₨ 86.79 ಲಕ್ಷ ಖರ್ಚಾಗುತ್ತದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಟಿವಿ ಪ್ರಸಾರ ಮತ್ತು ಸಂಸತ್ತಿನಲ್ಲಿ ಗದ್ದಲ
ಬೆಂಗಳೂರು:ಕೆಲವು ಸಂಸದರು ಸಂಸತ್‌ ಕಲಾಪದ ವೇಳೆ ಪುಂಡರಂತೆ ವರ್ತಿಸುವಲ್ಲಿ ಟಿ.ವಿ. ಮೂಲಕ ಆಗುವ ಕಲಾಪದ ನೇರ ಪ್ರಸಾರವೂ ಕಾರಣ ಎಂದು ವರದಿ ಅಭಿಪ್ರಾಯಪಟ್ಟಿದೆ.

ಕಲಾಪವನ್ನು ಹಳಿತಪ್ಪಿಸುವ ಏಕೈಕ ಉದ್ದೇಶದಿಂದ ಸಂಸದರೊಬ್ಬರು ನಡೆಸುವ ಪುಂಡಾಟಿಕೆ, ಅವರಿಗೆ ತಕ್ಷಣದ ಪ್ರಸಿದ್ಧಿ ತಂದುಕೊಡುತ್ತದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಇಂಥ ಸಂಸದರು ತಮ್ಮ ಕ್ಷೇತ್ರಗಳಲ್ಲಿ ಹೀರೋಗಳಾಗಿ ಬಿಂಬಿತರಾಗುತ್ತಾರೆ. ಬದ್ಧತೆಯಿಂದ ಕೆಲಸ ಮಾಡುವ ಸಂಸದರಿಗೆ ದೊರೆಯದ ಪ್ರಚಾರ, ಗದ್ದಲ ಎಬ್ಬಿಸುವ ಸಂಸದರಿಗೆ ದೊರೆಯುತ್ತದೆ. ಸಂಸತ್‌ ಕಲಾಪ ಹಳಿ ತಪ್ಪಲು ಇದು ಒಂದು ಪ್ರಮುಖ ಕಾರಣ ಎಂದು ವರದಿ ಹೇಳಿದೆ.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT