ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಂಪುಟ: ಪುನರ್‌ ಮುದ್ರಣ ಆತುರ ಬೇಡ

ಚರ್ಚೆ
ಅಕ್ಷರ ಗಾತ್ರ

‘ವಚನ ಸಂಪುಟ: ವಿಳಂಬ ಬೇಡ’ ಎಂಬ ಎಸ್. ವಿದ್ಯಾಶಂಕರ ಅವರ ಪತ್ರಕ್ಕೆ ಪ್ರತಿಕ್ರಿಯೆ (ವಾ.ವಾ., ಜೂ. 30).
ಕರ್ನಾಟಕ ಸರ್ಕಾರದ, ಕನ್ನಡ ಸಂಸ್ಕೃತಿ ಇಲಾಖೆಯ ೧೫ ಸಂಪುಟಗಳಲ್ಲಿ ಪ್ರಕಟವಾದ ‘ಸಮಗ್ರ ವಚನ ಸಂಪುಟ’ ಒಂದು ಸ್ತುತ್ಯ ಕಾರ್ಯ.

ಅವು ಪುನರ್ ಮುದ್ರಣಗೊಳ್ಳಬೇಕಾದುದು ಅವಶ್ಯಕವೇ. ಆದರೆ ಪುನರ್‌ಮುದ್ರಣ ಮಾಡುವ ಸಂದರ್ಭದಲ್ಲಿ ಅದರಲ್ಲಿನ ದೋಷಗಳನ್ನು ಸರಿಪಡಿಸುವುದು ಅನಿವಾರ್ಯ. ಮುಖ್ಯವಾಗಿ ಅದರಲ್ಲಿ ಸೇರಿರುವ ‘ಕೂಟ’ (ಸುಳ್ಳು) ವಚನ­ಗಳನ್ನು ತೆಗೆದುಹಾಕಬೇಕು.

ಉದಾ: ೧) ಶಿವಶರಣ ಶಂಕರ ದಾಸಿಮಯ್ಯ­ನನ್ನು ಕುರಿತು ಪಿಎಚ್‌.ಡಿ ಸಂಶೋಧನಾಧ್ಯಯನ ಮಾಡಿದ ಡಾ. ಅನ್ನಪೂರ್ಣ ಎಂ. ಜಾಲವಾದಿ ಅವರು ತಮ್ಮ ಸಂಶೋಧನಾ ಪ್ರಬಂಧದಲ್ಲಿ ‘ಶಂಕರ ದಾಸಿಮಯ್ಯನ ಹೆಸರಿನಲ್ಲಿ ದೊರೆತ ಐದು ವಚನಗಳನ್ನು ಕೂಡ ಬಹಳಷ್ಟು ವಿದ್ವಾಂಸರು ಪ್ರಕ್ಷಿಪ್ತವಾದವುಗಳೇ (ಅಂದರೆ ಅನಂತರ ಬೇರಾರೋ ಅವನ ಹೆಸರಿನಲ್ಲಿ ಬರೆದು ಸೇರಿಸಿರುವುದು) ಎಂಬ ನಿರ್ಣಯಕ್ಕೆ ಬಂದಿ­ದ್ದಾರೆ’. (ನೋಡಿ: ‘ಶಂಕರ ದಾಸಿಮಯ್ಯ ಪುರಾಣ ಒಂದು ಅಧ್ಯಯನ’; ೧೯೯೯; ಪುಟ : ೩೬)

೨) ಆದ್ಯ ವಚನಕಾರನಾದ ದೇವರ ದಾಸಿ­ಮಯ್ಯನ ಹೆಂಡತಿ ಶಿವಶರಣೆ ‘ದುಗ್ಗಳೆ’ ಬಸವಾದಿ ಪ್ರಮಥರನನ್ನು ಸ್ತುತಿಸಿದ್ದಾಳೆ ಎಂದು ಹೇಳುವ ವಚನ  ‘ಕೂಟ ವಚನ­ಗಳಲ್ಲಿ ಒಂದು ಎಂಬುದು ಸ್ಪಷ್ಟ’ ಎಂದು ವಿದ್ವಾಂಸ ಡಾ.ಎಲ್.ಬಸವ­ರಾಜು ಅವರು ಸ್ಪಷ್ಟಪಡಿಸಿ­ದ್ದಾರೆ (ನೋಡಿ: ‘ದೇವರ ದಾಸಿಮ­ಯ್ಯನ ವಚನ­ಗಳು’; ಪುಟ : ೩೮).  ಹೀಗಿದ್ದೂ ಈ ವಚನ­ಗಳನ್ನು ಸಮಗ್ರ ವಚನ ಸಂಪುಟಗಳಲ್ಲಿ ಸೇರಿಸ­ಲಾಗಿದೆ. ಇಂಥ ಉದಾಹರ­ಣೆಗಳನ್ನು ಸಾಕಷ್ಟು ಬೆಳೆಸ ಬಹುದಾಗಿದೆ.

ಅಲ್ಲದೆ ಸಂಪಾದನೆಯ ಸಂದರ್ಭದಲ್ಲಿ ತೆಗೆದು­ಕೊಂಡ ನಿರ್ಧಾರಗಳು ಕೂಡ ಸಮಂಜಸವೆನಿಸು­ವು­ದಿಲ್ಲ ಎಂಬುದು ಅವರ ಮಾತುಗಳಿಂದಲೇ ತಿಳಿದುಬರುತ್ತದೆ. ಉದಾ: ‘ಈ ಮೂರು ಮುದ್ರಿಕೆಯ ವಚನಕಾರರು ಯಾರೂ ಇಲ್ಲದಿರು­ವುದ­ರಿಂದ, ಇವುಗಳನ್ನು ಹಡಪದ ಅಪ್ಪಣ್ಣನ ವಚನಗಳೆಂದು ಪರಿಗಣಿಸಲಾಗಿದೆ’. (ನೋಡಿ : ‘ಸಮಗ್ರ ವಚನ ಸಂಪುಟ’; ೪; ಪುಟ : xxxiii).

ಇದಲ್ಲದೇ ಸಂಪಾದಕ ಮಂಡಳಿಯಲ್ಲಿ ಸಮನ್ವ­ಯ­ತೆಯ ಕೊರತೆಯೂ ಎದ್ದು ಕಾಣುತ್ತದೆ. ಡಾ. ವೀರಣ್ಣ ರಾಜೂರ ಅವರು ಸಂಪಾದಿಸಿದ ಅಕ್ಕಮಹಾದೇವಿಯ ವಚನವೊಂದನ್ನು ಡಾ. ವಿದ್ಯಾಶಂಕರ ರವರು ಕೋಟಾ ಎನ್ನುತ್ತಾರೆ. ಅದಕ್ಕೆ ರಾಜೂರರವರು ಅದು ಸಾಚಾ ಎಂದು ಸಮರ್ಥಿಸಿಕೊಳ್ಳುತ್ತಾರೆ. ಈ ಕುರಿತು ಪತ್ರಿಕೆಯಲ್ಲಿ ನಡೆದ ಅನೇಕ ವಾದವಿವಾದ­ಗಳನ್ನು ಗಮನಿಸ­ಬಹುದು.
              
ವಚನ ವಾಙ್ಮಯ­ವನ್ನು ಸಂಪಾದಿಸುವಲ್ಲಿ ಎಷ್ಟು ಜಾಗ್ರತೆಯಿಂದ ಇದ್ದರೂ ಸಾಲದು. ಇದಕ್ಕೆ ಉದಾಹರಣೆಯಾಗಿ  ಹಿಂದಿನ ತಲೆಮಾರಿನ ಹಿರಿಯ ವಿದ್ವಾಂಸ  ಬಿ. ಶಿವಮೂರ್ತಿ ಶಾಸ್ತ್ರಿ ಹಾಗೂ ಡಾ. ಆರ್.ಸಿ. ಹಿರೇಮಠ ಅವರು ಹೇಳುವ ಈ ಕೆಳಗಿನ ಮಾತುಗಳನ್ನು ಅವಲೋಕಿಸಬಹುದು:  ‘ವಚನ ಗ್ರಂಥಗಳ­ಲ್ಲಿಯೂ ಕವಿಗಳ ಕೈವಾಡ ನಡೆ­ದಿದೆ... ವಿಜಯನಗರದ ಕಾಲದ ಲಿಂಗವಂತ ಕವಿಗಳು ಪುರಾಣ ಕಥೆಗಳಲ್ಲಿ ಮಾರ್ಪಾಟು ಮಾಡಿ ಕೊಂಡಿದ್ದಾರೆ... ಈಚಿನ ಶೂನ್ಯ ಸಂಪಾದನೆಕಾರರು ತಮ್ಮ ಮನಬಂದಂತೆ ಬದಲಾವಣೆಯನ್ನು ಕೂಡ ಮಾಡಿದ್ದಾರೆ’! (ನೋಡಿ: ‘ಶಿವಾನುಭವ’; ಅಕ್ಟೋಬರ್ ೧೯೩೭; ಪುಟ: ೨೭–-೨೮). 

‘ಎಲ್ಲಕ್ಕೂ ಮೇಲಾಗಿ ಒಂದೇ ಕಟ್ಟಿನಲ್ಲಿ ಒಂದು ವಚನ ಒಂದು ಸನ್ನಿವೇಶದಲ್ಲಿ ಒಬ್ಬರ ಅಂಕಿತದಲ್ಲಿದ್ದು, ಮುಂದೆ ಅದೇ ಕಟ್ಟಿನ ಬೇರೆ ಭಾಗದ ಬೇರೆ ಸನ್ನಿವೇಶದಲ್ಲಿ ಬೇರೊಬ್ಬರ ಅಂಕಿತದಲ್ಲಿ ಬಂದ ವಿಚಿತ್ರ ಉದಾಹರಣೆಯೂ ಉಂಟು. ಆದುದರಿಂದಲೇ ವಚನ ವಾಙ್ಮಯದ ಸಂಸ್ಕರಣ ಕಾರ್ಯದಲ್ಲಿ ಈ ಸಮಸ್ಯೆಯನ್ನು ಬಹು ಜಾಗರೂಕತೆಯಿಂದ ಬಿಡಿಸಬೇಕಾಗುತ್ತದೆ’ (‘ಶ್ರೀ ಸಿದ್ದರಾಮೇಶ್ವರ ವಚನಗಳು’, ೧೯೬೮; ಪುಟ: ೩೪). ಆದರೆ ಈ ಬಗೆಯ ಜಾಗರೂಕತೆ ಇಲ್ಲಿ ಕಾಣದಿರುವುದು ವಿಷಾದನೀಯ.

ಜೊತೆಗೆ ಒಬ್ಬರೇ ಹೆಚ್ಚಿನ ಸಂಖ್ಯೆಯ ಸಂಪುಟ­ಗಳನ್ನು ಸಂಪಾ­ದಿಸಿ­ರುವುದರಿಂದ ಕಾರ್ಯ­ಬಾಹು­ಳ್ಯದ ಒತ್ತಡದ ಕಾರಣ­ದಿಂದಾ­ಗಿಯೂ ಹೀಗಾಗಿರ­ಬಹುದು. ಉದಾ: ಡಾ. ವೀರಣ್ಣ ರಾಜೂರ ಅವರು ೫ ಸಂಪುಟಗಳನ್ನು ಒಬ್ಬರೇ ಸಂಪಾದಿಸಿ­ದ್ದಾರೆ. ಒಬ್ಬರಿಂದಲೇ ಐದು ಸಂಪುಟಗಳನ್ನು ಸಂಪಾದನೆ ಮಾಡಿಸುವ ಬದಲು, ಬೇರೆಯವ­ರಿಗೂ ಅವಕಾಶ ನೀಡಬಹುದಾಗಿತ್ತಲ್ಲವೇ?

ಅದೇನೇ ಇದ್ದರೂ ಈ ಸಂಪುಟಗಳಲ್ಲಿ  ಉಳಿದುಕೊಂಡ ದೋಷಗಳನ್ನು ಪುನಃ ಪರಿ­ಶೀಲಿಸಲು ಒಂದು ತಜ್ಞರ ಸಮಿತಿಯನ್ನು ನೇಮಿಸಬೇಕು. ಅವುಗಳನ್ನು  ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಇವುಗಳನ್ನು ಪುನಃ ಮುದ್ರಿಸಬೇಕು. ಇಲ್ಲವಾದಲ್ಲಿ ಈಗಾಗಲೇ ಅನುಮಾನವನ್ನು ಮೂಡಿಸುತ್ತಿರುವ ಈ ಪ್ರಕಟಣೆಗಳು ಮುಂದೊಂದು ದಿನ ಗಂಭೀರವಾದ ಸಂಶೋಧ­ನೆಗೆ ಆಕರ ಗ್ರಂಥಗಳಾಗುವುದು ಸಾಧ್ಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT