ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ವಂಚಿತ ಅಲೆಮಾರಿ ಮಕ್ಕಳು

ಮರದ ತುಂಡುಗಳ ನಡುವೆ ಜೀವನಪಾಠ
Last Updated 21 ಏಪ್ರಿಲ್ 2014, 19:42 IST
ಅಕ್ಷರ ಗಾತ್ರ

ರಾಮನಗರ: ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿ ಇದ್ದರೂ ಈ ಮಕ್ಕಳು ಇನ್ನೂ ಶಾಲೆಯನ್ನು ಕಂಡಿಲ್ಲ. ಅಕ್ಷರದ ಓನಾ­ಮವೇ ಇವಕ್ಕೆ ಗೊತ್ತಿಲ್ಲ. ಈ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರೂ ಮನಸ್ಸು ಮಾಡಿಲ್ಲ, ಶಿಕ್ಷಣ ಇಲಾಖೆ­ಯವರು ಈ ಮಕ್ಕಳನ್ನು ಶಾಲೆಯತ್ತ ಕರೆತರುವ ಪ್ರಯತ್ನ ಮಾಡಿಲ್ಲ. ಪರಿ­ಣಾಮ ಶಿಕ್ಷಣದಿಂದ ವಂಚಿತರಾಗಿ, ಪೋಷ­ಕರೊಂದಿಗೆ ದುಡಿಮೆಯ ಜತೆ­ಯಲ್ಲಿ ಜೀವನ ತೂಗಿಸಬೇಕಾದ ದುಸ್ಥಿತಿ ಈ ಮಕ್ಕಳದ್ದು...

ಗುಜರಾತಿನಿಂದ ರಾಮನಗರಕ್ಕೆ ವಲಸೆ ಬಂದಿರುವ ರಾಜು ಪರಿವಾ­ರದಲ್ಲಿ 16ಕ್ಕೂ ಹೆಚ್ಚು ಕುಟುಂಬಗಳಿವೆ. ಬೆಂಗಳೂರು– ಮೈಸೂರು ಹೆದ್ದಾರಿಯ ಬದಿಯಲ್ಲಿ ಕ್ರಿಕೆಟ್ ಬ್ಯಾಟ್‌ಗಳನ್ನು ತಯಾರಿಸುವ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುವುದು ಇವರ ಕಾಯಕ.
ಈ ಕುಟುಂಬಗಳಲ್ಲಿ ನಾಲ್ಕು ಹಸು­ಗೂಳು ಹಾಗೂ 10–2 ವರ್ಷದ­ವರೆಗಿನ 15ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ ಇವರಿಗೆಲ್ಲಾ ಶಿಕ್ಷಣ ಮರೀ-ಚಿಕೆಯಾಗಿದೆ.

ಜಿಲ್ಲಾ ಕೇಂದ್ರದಲ್ಲಿಯೇ ಎರಡು ವರ್ಷದಿಂದ ಈ 16 ಕುಟುಂಬಗಳು ಕ್ಯಾಂಪ್‌ ಹಾಕಿಕೊಂಡು ಬ್ಯಾಟ್‌ ತಯಾ­ರಿಸುವ ದುಡಿಮೆಯಲ್ಲಿ ತೊಡಗಿ­ದ್ದರೂ, ಶಿಕ್ಷಣ ಇಲಾಖೆಯ ಅಥವಾ ಜಿಲ್ಲಾಡ­ಳಿತದ ಗಮನಕ್ಕೆ ಬಾರದಿರುವುದು ವಿಪರ್ಯಾಸವೇ ಸರಿ. ಪೋಷಕರೊಂದಿಗೆ ಇರುವ ಈ ಮಕ್ಕಳು ಶಾಲೆಯನ್ನು ಒಮ್ಮೆಯೂ ಕಂಡಿಲ್ಲ. ಬದಲಿಗೆ ಇವರೆಲ್ಲಾ ಮರದ ತುಂಡುಗಳೊಂದಿಗೆ ತಮ್ಮ ಜೀವ­ನ­ಪಾಠವನ್ನು ಕಲಿಯುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ತಂದೆ, ತಾಯಿಗೆ ನೆರವಾಗಿ, ಬ್ಯಾಟ್‌ಗಳನ್ನು ತಯಾ­ರಿಸುತ್ತಾ ತಮ್ಮ ಅಮೂಲ್ಯ ಬಾಲ್ಯವನ್ನು ಇವರು ಮರೆತಿದ್ದಾರೆ.

ಕಡ್ಡಾಯ ಶಿಕ್ಷಣ ಕಾಯಿದೆಯಡಿ 14 ವರ್ಷ­ದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣ ನೀಡಬೇಕಿದೆ. ಪ್ರತಿ ವರ್ಷವೂ ಯಾವುದೇ ಮಕ್ಕಳು ಶಾಲೆ­ಯಿಂದ ದೂರ ಉಳಿಯಬಾರದು ಎಂದು ಸಮೀಕ್ಷೆ ಕೂಡ ನಡೆಸ­ಲಾಗು­ತ್ತದೆ. ಆದರೆ ಇಲ್ಲಿರುವ 20ಕ್ಕೂ ಹೆಚ್ಚು ಮಕ್ಕಳು ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ !

ಮರದ ಹೊಟ್ಟಿನ ಧೂಳಿನೊಂದಿಗೆ ಬೆಳೆಯು­ತ್ತಿರುವ ಮಕ್ಕಳಿಗೆ ಇಲ್ಲಿ ಸೂಕ್ತ ಆರೈಕೆ ಮತ್ತು ರಕ್ಷಣೆಯೂ ಇಲ್ಲವಾಗಿದೆ.
ಈ ಬಗ್ಗೆ ಈ ಕುಟುಂಬಗಳ ಒಬ್ಬ ಸದಸ್ಯ ಮುಖೇಶ್‌ ಪ್ರತಿಕ್ರಿಯಿಸಿ, ‘ಸರ್ಕಾರದಿಂದ ಮಕ್ಕಳ ಶಿಕ್ಷಣ, ರಕ್ಷಣೆ ಕುರಿತ ಸವಲತ್ತು, ಕಾನೂನುಗಳ ಬಗ್ಗೆ ನಮಗೆ ಗೊತ್ತಿಲ್ಲ. ಯಾರೂ ನಮ್ಮನ್ನು ಸಂಪರ್ಕಿಸಿಯೂ ಇಲ್ಲ’ ಎಂದು ಅವರು ತಿಳಿಸಿದರು.

ಎಲ್ಲೆಲ್ಲಿ ಕ್ಯಾಂಪ್‌ ?:  ಬೆಂಗಳೂರು– -ಮೈಸೂರು ಹೆದ್ದಾರಿಯ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಬಳಿ 10 ಕುಟುಂಬಗಳು ಹಾಗೂ ಅರ್ಚಕ­ರ­ಹಳ್ಳಿಯ ಬಳಿ ಸಣ್ಣ ಗುಡಿಸಲುಗಳನ್ನು ಇನ್ನುಳಿದ ಕುಟುಂಬಗಳು ಬ್ಯಾಟ್‌ ತಯಾರಿಸುವ ಉದ್ಯೋಗ ಮಾಡಿ­ಕೊಂಡಿವೆ.

35 ಕುಟುಂಬಗಳ ಉದ್ಯೋಗ...
ಪುರುಷರು, ಮಹಿಳೆಯರು ಮತ್ತು ಮಕ್ಕಳು ಕೂಡಿ ತಯಾರಿಸುವ ಬ್ಯಾಟ್‌­ಗಳು ಕನಿಷ್ಠ 60ರಿಂದ ಗರಿಷ್ಠ 200 ರೂಪಾಯಿವರೆಗೆ ಮಾರಾಟವಾಗುತ್ತಿವೆ. 35 ವರ್ಷದಿಂದ ಈ ಕುಟುಂಬಗಳು ಇದೇ ಉದ್ಯೋಗವನ್ನು ರೂಢಿಸಿಕೊಂಡು ಬಂದಿದ್ದು, ಅಲೆಮಾರಿ ಜೀವನ ನಡೆಸಿಕೊಂಡು ಸಾಗಿವೆ.

ಬ್ಯಾಟ್‌ಗಳೇ ಅಲ್ಲದೆ ವಿಕೆಟ್‌, ಸ್ಟಂಪ್‌ಗಳನ್ನು ತಯಾರಿಸುವ ಇವರಿಗೆ ವಾರದ ರಜೆ ದಿನಗಳಲ್ಲಿ ಉತ್ತಮ ವ್ಯಾಪಾರವಾಗುತ್ತದೆ. ಅಲ್ಲದೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆಯುವ ಜಾತ್ರೆ ಮತ್ತು ಉತ್ಸವಗಳಲ್ಲಿಯೂ ಇವರು ಬ್ಯಾಟ್‌ಗಳನ್ನು ಮಾರಾಟ ಮಾಡುತ್ತಾರೆ. ದಸರಾ, ಬೇಸಿಗೆ ರಜೆ ಬಂದರೆ ಹೆಚ್ಚಿನ ಬ್ಯಾಟ್‌ಗಳು ಮಾರಾಟವಾಗುತ್ತವೆ. ಬೆಂಗಳೂರಿನ ಮಾರುಕಟ್ಟೆಗೂ ಬ್ಯಾಟ್‌­ಗಳನ್ನು ಕಳುಹಿಸಲಾಗುತ್ತದೆ ಎಂದು ಬ್ಯಾಟ್‌ ತಯಾರಿಕ ರಾಜು ಪ್ರತಿಕ್ರಿಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT