ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಘೋತ್ತಮ ಹೊ.ಬ., ಮೈಸೂರು

ಚರ್ಚೆ
Last Updated 23 ಅಕ್ಟೋಬರ್ 2015, 5:21 IST
ಅಕ್ಷರ ಗಾತ್ರ

ಮೇಟಿ ಮಲ್ಲಿಕಾರ್ಜುನ ಅವರು ಫೇಸ್‌ಬುಕ್ ಕುರಿತು ಚರ್ಚಿಸುವಾಗ (ಸಂಗತ, ಅ. 19 ) ಬಹಳ ಭಾವನಾತ್ಮಕವಾಗಿಯೂ,  ಬಿಡುಬೀಸಾಗಿಯೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರ ಕೆಲ ವಿಚಾರಗಳನ್ನು ಒಪ್ಪುತ್ತಲೇ ಅನೇಕ ವಾಸ್ತವ ಸಂಗತಿಗಳನ್ನು ಇಲ್ಲಿ ಹೇಳಬೇಕಿದೆ. ಫೇಸ್‌ಬುಕ್ ಚಟುವಟಿಕೆ ಒಂದು ಸಂವಹನ ಪ್ರಕ್ರಿಯೆಯೇ ಅಲ್ಲ ಎಂದಿದ್ದಾರೆ. ನಾವು ನಿರೀಕ್ಷಿಸುವ ಸಂವಹನ ನಡೆಯುತ್ತಿಲ್ಲ ಎಂದಮಾತ್ರಕ್ಕೆ ಅದೊಂದು ಸಂವಹನ ಪ್ರಕ್ರಿಯೆಯೇ ಅಲ್ಲ ಎನ್ನುವುದು ಸರಿಯಲ್ಲ. ಸಂವಹನದ ವಿದ್ಯಾರ್ಥಿಗಳಾರೂ ಇದನ್ನು ಒಪ್ಪಲಾರರು.

ವಾಸ್ತವದಲ್ಲಿ ಫೇಸ್‌ಬುಕ್ ಚಟುವಟಿಕೆ ಅಪ್ಪಟ ಸಂವಹನ ಪ್ರಕ್ರಿಯೆ. ಅದು ನಿರ್ವಾತದಲ್ಲಾಗುತ್ತಿದೆಯೇ ಅಥವಾ ಚೈತನ್ಯಶೀಲ ಪರಿಸರದಲ್ಲಿ ಆಗುತ್ತಿದೆಯೇ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರಕ್ರಿಯೆಯೊಂದು ನಡೆಯುತ್ತಿದೆ ಎಂಬುದೇ ಮುಖ್ಯ. ಸಂವಹನದ ಗುಣಮಟ್ಟದ ಮೌಲ್ಯಮಾಪನ ನಂತರದ ಮಾತು.

ಹಾಗೆ ನೋಡಿದರೆ ಫೇಸ್‌ಬುಕ್ ಹುಟ್ಟಿದ್ದೇ ಸಮುದಾಯದ ಮಧ್ಯೆ. ನವಮಾಧ್ಯಮ ತಜ್ಞ ಪ್ರೊ.ಕೆ.ಎಂ.ಶ್ರೀವಾಸ್ತವ ಅವರು ಹೇಳುವಂತೆ ‘ಮೊದಲು ಹಾರ್ವರ್ಡ್ ವಿದ್ಯಾರ್ಥಿಗಳ ಹುಮ್ಮಸ್ಸಿನ ಫಲವಾಗಿ ಮೈದಳೆದ ಫೇಸ್‌ಬುಕ್ ನಂತರ ಪಕ್ಕದ ಶಾಲೆಗಳನ್ನು ಆವರಿಸಿಕೊಂಡಿತು. ಬಳಿಕ ಕೆಲ ವ್ಯವಹಾರಗಳಿಗೆ, ನಿಧಾನಕ್ಕೆ ಎಲ್ಲರ ಬುದ್ಧಿಭಾವಗಳಿಗೆ ಲಗ್ಗೆ ಇಟ್ಟಿತು’.

ಸಮೂಹ ಮಾಧ್ಯಮದ ಹೊರತಾಗಿಯೂ ಬಹುದೊಡ್ಡ ಅಭಿವ್ಯಕ್ತಿಯೊಂದು ಸಾಧ್ಯವಾಗಿದೆ. ಇತ್ತೀಚೆಗೆ ಈಜಿಪ್ಟ್, ಟ್ಯುನೀಷಿಯಾ ಮುಂತಾದೆಡೆ ಆಳುವವರನ್ನೇ ಅಲುಗಾಡಿಸಿದ ಕ್ರಾಂತಿಗೆ ಕಾರಣವಾಗಿದ್ದು ಫೇಸ್‌ಬುಕ್. ಕಲಬುರ್ಗಿಯವರಂಥ ಹಿರಿಯರ ಹತ್ಯೆಯನ್ನು ಕನ್ನಡ ಬಾರದ, ಭಾರತದ ಬಹುತ್ವ ಗೊತ್ತಿರದ ದೂರ ದೇಶದ ವ್ಯಕ್ತಿಗಳು ಫೇಸ್‌ಬುಕ್ಕಿನಂಥ ಹೊಸ ಮಾಧ್ಯಮದ ಮೂಲಕ ಖಂಡಿಸುತ್ತಿರುವುದು ಕೂಡ ನಿರ್ವಾತದ ನೆಲೆಯಲ್ಲಿ ಅಲ್ಲವೇ? ಇಂಥ ವಿದ್ಯಮಾನಗಳನ್ನು ಕೇವಲ ನಿರಾಶಾವಾದದೊಂದಿಗೆ ನೋಡಲಾಗದು.

ಇರಲಿ, ನಿರ್ವಾತ ಸೃಷ್ಟಿಯಾಗಿದೆ ಎಂದೇ ಇಟ್ಟುಕೊಳ್ಳೋಣ. ಅದಕ್ಕೆ ಫೇಸ್‌ಬುಕ್ ಮಾತ್ರ ಕಾರಣವೇ? ಖಂಡಿತಾ ಅಲ್ಲ. ಹಾಗೆ ನೋಡಿದರೆ ವ್ಯಕ್ತಿಗತ ಅನ್ನುವಂಥ ಆಧುನಿಕ ಸಮಾಜ ಎಂದು ಸೃಷ್ಟಿಯಾಯಿತೋ ಅಂದೇ ಈ ನಿರ್ವಾತವೂ ಹುಟ್ಟಿದೆ. ಇಂಥ ನಿರ್ವಾತ ಬೇರೆ ಬೇರೆ ಪರಿಭಾಷೆಗಳಲ್ಲಿ ಈಗಾಗಲೇ ಚರ್ಚಿತವಾಗಿದೆ. ಅಂದರೆ ಸಾಮಾಜಿಕ ಜಾಲತಾಣಗಳು ಹುಟ್ಟುವ ಮೊದಲೂ ಸಾಮಾಜಿಕ ನಂಟು ರಹಿತತೆ ಇತ್ತು. ಈ ನಿರ್ವಾತದಲ್ಲಿರುವ ಮನುಷ್ಯ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸತೊಡಗಿದ ಅಷ್ಟೇ.

ಫೇಸ್‌ಬುಕ್ ಅನ್ನು ಗೋಡೆ ಬರಹಕ್ಕೆ ಹೋಲಿಸು ವುದರ ಔಚಿತ್ಯವೇನು? ಗೋಡೆ ಬರಹಗಳಿಗಿರುವ ಮೌಲ್ಯ ಫೇಸ್‌ಬುಕ್‌ಗೆ ಇದೆಯೇ ಎಂದು ಪ್ರಶ್ನಿಸುವುದಾದರೆ ‘ಎಲ್ಲ ಬಗೆಯ’ ಗೋಡೆ ಬರಹಗಳ ಮೌಲ್ಯ ಎಂಥದ್ದು? ಅಲ್ಲಿಯೂ ಒಳಿತು– ಕೆಡುಕು ಎರಡೂ ಇವೆ. ಒಂದು ವೇಳೆ ಗೋಡೆಯ ಮೇಲೆ ಜಗತ್ತಿನ ಎಲ್ಲರೂ ಪ್ರತಿಕ್ರಿಯಿಸುವಂತಿದ್ದರೆ ಅದರ ಸ್ಥಿತಿ ಫೇಸ್‌ಬುಕ್‌ಗಿಂತ ಭಿನ್ನವಾಗಿ ಇರುತ್ತಿರಲಿಲ್ಲ! ಕಾಳಿನ ರಾಶಿ ಹೆಚ್ಚಾದಂತೆ ಜೊಳ್ಳು, ದೂಳಿನ ಪ್ರಮಾಣವೂ ಹೆಚ್ಚಿರುತ್ತದೆ. ಹಾಗಾಗಿ ಕಾಳನ್ನು ಆಯ್ದುಕೊಳ್ಳಬೇಕೇ ವಿನಾ ಜೊಳ್ಳು, ದೂಳನ್ನಲ್ಲ.

ನಮಗಾಗುವ ಸಂಕಟಕ್ಕೆ ವೆಂಕಟನನ್ನು ದೂಷಿಸುವುದು ಎಷ್ಟು ಸರಿ? ಸಿಡಿಮದ್ದು ಕಂಡುಹಿಡಿದ ವ್ಯಕ್ತಿಗೆ ಅದು ಮನುಷ್ಯರನ್ನೇ ಸುಡಬಲ್ಲದು ಎನ್ನುವುದು
ಹೇಗೆ ಗೊತ್ತಿರಲಿಲ್ಲವೋ ಹಾಗೆಯೇ ಫೇಸ್‌ಬುಕ್ ಸೃಷ್ಟಿಸಿದವರ ಅಸಹಾಯಕತೆ ಕೂಡ.  ಎಷ್ಟೆಲ್ಲ ಕಾನೂನುಗಳು, ಅಂತರ ರಾಷ್ಟ್ರೀಯ ಒಪ್ಪಂದಗಳು, ಆಣೆ ಪ್ರಮಾಣಗಳಂಥ ಸ್ವನಿಯಂತ್ರಣ ಸಾಧ್ಯವಾದರೂ ಸಿಡಿತಲೆಗಳ ಆರ್ಭಟ  ನಿಂತಿದೆಯೇ? ಮನುಕುಲವನ್ನೇ ಹೊಸಕಿ ಹಾಕಬಲ್ಲ ಬಾಂಬುಗಳ ಕತೆಯೇ ಹೀಗಿರುವಾಗ ಫೇಸ್‌ಬುಕ್‌ ನಿಯಂತ್ರಿಸುವ ಮಾನದಂಡಗಳಿಲ್ಲ ಎಂದು ಹಳಹಳಿಸುವುದು ಎಷ್ಟು ಸರಿ? ನಿಯಂತ್ರಣ ಹೇರಿದರೂ ಫೇಸ್‌ಬುಕ್‌ ಬದಲಿಗೆ ಮತ್ತೊಂದು ಸಾಮಾಜಿಕ ಜಾಲತಾಣ ಸೃಷ್ಟಿಯಾಗಬಹುದು. ‘ಒಳಿತೇ ಕೆಡುಕು ಕೆಡುಕೇ ಒಳಿತು’ ಎನ್ನುವಂಥ ಕಾಲಕ್ಕೆ ಔಷಧ ಕಂಡುಹಿಡಿಯಬೇಕೆ ಹೊರತು ಫೇಸ್‌ಬುಕ್ಕಿಗಲ್ಲ.

ಎಲ್ಲ ಅಭಿವ್ಯಕ್ತಿ ಮಾಧ್ಯಮಗಳು ಬಂದಾಗಲೂ ಇಂಥದ್ದೊಂದು ಹಳಹಳಿಕೆ ಇದ್ದೇ ಇದೆ. ನಾಟಕ ನೋಡುವುದೇ ಕೆಟ್ಟದ್ದು ಎಂದು ಭಾವಿಸಿದ್ದವರಿಗೆ ಸಿನಿಮಾ ಘೋರವಾಗಿ ಕಂಡಿತು. ಟಿ.ವಿ. ನೋಡುವ ಮಕ್ಕಳಂತೂ ಮಡಿವಂತರ ಕಣ್ಣಲ್ಲಿ ಈಗಲೂ ತಪ್ಪಿತಸ್ಥರೇ. ಮೊಬೈಲ್ ಬಂದ ಮೇಲೆ ಎಲ್ಲ ಹಾಳಾಯಿತು ಎನ್ನುವವರು ಇದ್ದಾರೆ. ತಮ್ಮ ಮಕ್ಕಳು ಇಂಟರ್‌ನೆಟ್‌ನಲ್ಲಿ ಏನು ಬ್ರೌಸ್ ಮಾಡುತ್ತಿರಬಹುದು ಎಂಬ ಆತಂಕ ಹೆತ್ತವರಿಗೆ.

ಒಂದು ಹಳೆಯ ಘಟನೆ: 1938ರ ಅಕ್ಟೋಬರ್ 30ರಂದು ಎಚ್.ಜಿ.ವೇಲ್ಸ್‌ ಅವರ  ರೇಡಿಯೊ ನಾಟಕ ಪ್ರಸಾರವಾಗುತ್ತಿತ್ತು. ನಾಟಕದ ಭಾಗವಾಗಿಯೇ ಸುದ್ದಿಯೊಂದು ಬಿತ್ತರವಾಯಿತು. ಅದು ಮಂಗಳ ಗ್ರಹದ ಜೀವಿಗಳು ದಾಳಿ ಮಾಡುತ್ತಾರೆ ಎಂಬ ಸುದ್ದಿ. ನಾಟಕ ಕೇಳುತ್ತಿದ್ದವರಲ್ಲಿ ಹತ್ತು ಲಕ್ಷ ಜನ ದಿಗ್ಭ್ರಾಂತರಾದರು, ದಿಕ್ಕಾಪಾಲಾದರು.

ಆದರೆ ಅದೇ ನಾಟಕವನ್ನು ಕೇಳುತ್ತಿದ್ದ  ಕೋಟಿಗೂ ಹೆಚ್ಚು ಮಂದಿ ಪಲಾಯನ ಮಾಡಲಿಲ್ಲ. ಓಡಿ ಹೋದವರಿಗಿಂತಲೂ ದೊಡ್ಡ ಸಂಖ್ಯೆಯ ಜನರಿಗೆ ಗೊತ್ತಿತ್ತು- ಆ ಸುದ್ದಿ ನಟನೆಯ ಭಾಗ ಮಾತ್ರ ಎಂದು. ಅದನ್ನೇ ಆಧರಿಸಿ ಹೊಸ ಬಗೆಯ ಸಂವಹನದ ಸಿದ್ಧಾಂತಗಳು ಹುಟ್ಟಿಕೊಂಡವು. ಇರಲಿ, ಆ ಘಟನೆಯಲ್ಲಿ ಓಡಿಹೋದವರ ಬಗ್ಗೆ  ಮಾತ್ರ ಅಲ್ಲ, ದಾಳಿಯನ್ನು ನಿರ್ಲಕ್ಷಿಸಿದವರ ಬಗ್ಗೆಯೂ ನಾವೀಗ ಗಮನಿಸಬೇಕಿದೆ. 

ಮೂಗರ್ಜಿ ಬರೆಯುವ ಕಾಲದಲ್ಲಿಯೂ, ಇ– ಮೇಲ್ ಮಾತ್ರ ಮೆರೆಯುತ್ತಿದ್ದಾಗಲೂ, ಮೆಸೆಂಜರ್‌ನಂಥ ಚಾಟಿಂಗ್ ಅವಕಾಶಗಳಿದ್ದಾಗಲೂ ಮುಖಹೇಡಿಗಳು ಇದ್ದರು. ಫೇಸ್‌ಬುಕ್‌ ಒಳಗೂ ಇದ್ದಾರೆ. ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬಂತೆ ಅನಿಷ್ಟವನ್ನೇ ಜಪಿಸುವ ಫೇಸ್‌ಬುಕ್ಕಿನ ಮುಖಹೀನರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬದಲಿಗೆ ಎಷ್ಟು ಸಾಧ್ಯವೋ ಅಷ್ಟು ಒಳಿತನ್ನು ಹಂಚೋಣ, ಒಳಿತನ್ನೇ ಬಾಳೋಣ.

ದೇವನೂರ ಮಹಾದೇವ ಅವರ ಪುಟ್ಟಗೌರಿ ನವಿಲಿನ ಚಿತ್ರ ಬಿಡಿಸುವುದು, ಕುವೆಂಪು ಅವರ ಸೀತೆ ಗೋಡೆಯ ಮೇಲೆ ಬರೆಯುವುದು ನಿಂತೇ ಹೋಗಿದೆ ಎಂದು ಕೊರಗಬೇಕಿಲ್ಲ. ಅವರೀಗ ಗೋಡೆ ಬದಲು ಬೇರೆಯ ಭಿತ್ತಿಯನ್ನು ಆಯ್ಕೆ ಮಾಡಿಕೊಂಡಿರಬಹುದು. ಆ ಭಿತ್ತಿ ಫೇಸ್‌ಬುಕ್ಕೇ ಆಗಿರಬಹುದು. ಸೃಜನಶೀಲ ಕಣ್ಣಿನ ಎದುರು ಆ ನವಿಲು ಈಗಾಗಲೇ ಕುಣಿಯುತ್ತಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT