ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಮಂಗಳಾರತಿ

ಗಾರ್ಮೆಂಟ್ಸ್‌ ಮಹಿಳೆಯರ ಮೇಲೆ ಲಾಠಿ: ಹೈಕೋರ್ಟ್ ಛೀಮಾರಿ
Last Updated 23 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇಲಾಖೆಯ ಕೊರತೆ ಮತ್ತು ಹುಳುಕುಗಳನ್ನು ಸರ್ಕಾರದ ಗಮನಕ್ಕೆ ತರುವಷ್ಟು ತಾಕತ್ತು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಇಲ್ಲ. ಹೀಗಾಗಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಮಂಗಳಾರತಿ ಎತ್ತಿದೆ.

ಪೊಲೀಸ್‌ ಇಲಾಖೆಯ ಖಾಲಿ ಹುದ್ದೆಗಳ ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎ.ಎನ್‌.ವೇಣುಗೋಪಾಲಗೌಡ ಅವರ ನ್ಯಾಯಪೀಠ ಶನಿವಾರ ಸರ್ಕಾರಕ್ಕೆ ಛೀಮಾರಿ ಹಾಕಿತು.

‘ಇದೇ 18, 19ರಂದು ನಗರದಲ್ಲಿ ನಡೆದ ಗಾರ್ಮೆಂಟ್ಸ್‌ ಕಾರ್ಖಾನೆಗಳ ಕಾರ್ಮಿಕರ ಪ್ರತಿಭಟನೆ ವೇಳೆ ಪುರುಷ ಪೊಲೀಸರು ಮಹಿಳೆಯರ ಮೇಲೆ ನಡೆಸಿದ ಲಾಠಿ ಪ್ರಹಾರ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಇದೊಂದು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಕಾಣುತ್ತಿದೆ’ ಎಂದು ನ್ಯಾಯಮೂರ್ತಿಗಳು ಶಂಕೆ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಗುಪ್ತಚರ ಇಲಾಖೆ ಸತ್ತಿದ್ದು, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಿದೆ. ಗಾರ್ಮೆಂಟ್ಸ್‌ ಕಾರ್ಮಿಕರ ಪ್ರತಿಭಟನೆಯ ಹಿಂದಿನ ಶಕ್ತಿ ಯಾವುದು ಎಂಬುದನ್ನು ಪತ್ತೆ ಹಚ್ಚಲು  ಪೊಲೀಸರಿಗೆ ಈ ತನಕ ಆಗಿಲ್ಲ. ಶಕ್ತಿಯುತ ಪೊಲೀಸ್ ಪಡೆ ಇಲ್ಲದಿರುವುದೇ ಇದಕ್ಕೆ ಕಾರಣ’ ಎಂದು ಅಭಿಪ್ರಾಯಪಟ್ಟರು.

ಆಗ ಹೆಚ್ಚುವರಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿಜಯಕುಮಾರ್‌ ಮಜಗೆ ಅವರು, ‘ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಂಕಿ ಅಂಶಗಳ ಮೂಲಕ ಪ್ರಮಾಣ ಪತ್ರ ಸಲ್ಲಿಸಿದರು. ಆದರೆ ಪೀಠ ಈ ಪ್ರಮಾಣ ಪತ್ರವನ್ನು ಸಾರಾಸಗಟಾಗಿ ತಳ್ಳಿ ಹಾಕಿತು.

ಸುಳ್ಳು ಅಂಕಿ: ‘ನೀವು ನೀಡುತ್ತಿರುವ ಅಂಕಿ ಅಂಶಗಳೆಲ್ಲಾ ಲೊಳಲೊಟ್ಟೆ. ಇದಕ್ಕೆಲ್ಲಾ ನಿಮ್ಮಿಂದ ಜವಾಬು ನಿರೀಕ್ಷಿಸಲು ಆಗುವುದಿಲ್ಲ.  ಹೋಗಿ ಅಡ್ವೊಕೇಟ್‌ ಜನರಲ್‌ ಅವರನ್ನೇ ಕರೆತನ್ನಿ. ಈ ವಿಷಯದಲ್ಲಿ ಕೋರ್ಟ್‌ ನಿಮ್ಮ ಮಾತಿಗೆ ಮಣಿಯುವುದಿಲ್ಲ’ ಎಂದು ನ್ಯಾಯಮೂರ್ತಿಗಳು ಝಾಡಿಸಿದರು.

‘ಯಾವುದೇ ಗಲಾಟೆ, ಗಲಭೆಗಳು ನಡೆದರೆ ಅವುಗಳು ಜನರ ಮನಸ್ಸಿನಲ್ಲಿ ಒಂದೆರಡು ದಿನಗಳು ಇರುತ್ತವೆ ಎಂದು ಈ ಸರ್ಕಾರ ಭಾವಿಸಿದಂತಿದೆ. ಬಹುಶಃ ಈ ಸರ್ಕಾರಕ್ಕೆ ಸಾರ್ವಜನಿಕರ ಪ್ರಾಣ, ಆಸ್ತಿ, ಸ್ವಾತಂತ್ರ್ಯಗಳನ್ನು ರಕ್ಷಿಸುವ ಇರಾದೆ ಕಿಂಚಿತ್ತೂ ಇದ್ದಂತಿಲ್ಲ’ ಎಂದು ಚುಚ್ಚಿದರು.

‘ಪ್ರತಿಭಟನೆ ರಾಜಕೀಯ ಪ್ರೇರಿತವಲ್ಲ’
‘ಭವಿಷ್ಯ ನಿಧಿ ಕುರಿತ ಹೊಸ ನೀತಿ ವಿರೋಧಿಸಿ ನಡೆಸಿದ ಪ್ರತಿಭಟನೆ ರಾಜಕೀಯ ಪ್ರೇರಿತವೂ ಅಲ್ಲ. ಇದರ ಹಿಂದೆ ಯಾವುದೇ ಪಿತೂರಿಯೂ ಇಲ್ಲ. ಮಹಿಳಾ ನೌಕರರು ಹಲವು ವರ್ಷಗಳಿಂದ ಅನುಭವಿಸುತ್ತಿದ್ದ ನೋವು, ಅನ್ಯಾಯ, ಶೋಷಣೆಗಳ ವಿರುದ್ಧ ಸಿಡಿದೆದ್ದು ಬೀದಿಗಿಳಿದು ಪ್ರತಿಭಟನೆ ನಡೆಸಿದರು’.  ಗಾರ್ಮೆಂಟ್ಸ್‌ ಕಾರ್ಖಾನೆಗಳ ನೌಕರರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಭಟನೆ ಹಿಂದಿನ ಕಾರಣವನ್ನು ವಿಶ್ಲೇಷಿಸಿದ್ದು ಹೀಗೆ.

ಗಾರ್ಮೆಂಟ್ಸ್‌ ಅಂಡ್‌ ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ನ ಅಧ್ಯಕ್ಷೆ ಆರ್‌.ಪ್ರತಿಭಾ ಮಾತನಾಡಿ, ‘ಏ. 18, 19ರಂದು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಯಾವುದೋ ಪಕ್ಷದ ಕುಮ್ಮಕ್ಕು ಹಾಗೂ ಪಿತೂರಿಯಿಂದ ಪ್ರತಿಭಟನೆ ನಡೆಯಿತು ಎಂಬ ಭಾವನೆ ಇದೆ. ಅದು ಸುಳ್ಳು’ ಎಂದು ಸ್ಪಷ್ಟಪಡಿಸಿದರು.

‘ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರ ಮೇಲೆ ಮೊಕದ್ದಮೆ ದಾಖಲು ಮಾಡಲಾಗುತ್ತಿದೆ. ಇದಕ್ಕೆ ತಡೆ ನೀಡಬೇಕು. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ಆಯೋಗ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು  ಸರ್ಕಾರವೇ ಭರಿಸಬೇಕು. ಗಾರ್ಮೆಂಟ್ಸ್‌ ನೌಕರರಿಗೆ ₹ 15 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಒಟ್ಟಾರೆ 156 ಮಹಿಳೆಯರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಇದೆ. ಎರಡೂ ದಿನಗಳ ಪ್ರತಿಭಟನೆಯಲ್ಲಿ ಗಾಯಗೊಂಡ ಮಹಿಳೆಯರ ನಿಖರ ಮಾಹಿತಿ ದೊರೆತಿಲ್ಲ’ ಎಂದರು. ‘ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಕೆಲಸಕ್ಕೆ ತಡವಾಗಿ ಬಂದರೆ ಗೇಟ್‌ನ ಹೊರಭಾಗದಲ್ಲಿ ನಿಲ್ಲಿಸಲಾಗುತ್ತದೆ. ನಿಗದಿತ ಗುರಿ ತಲುಪದಿದ್ದರೆ ಮೇಲಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ’ ಎಂದರು.

ಸಂಘಟನೆಯ ಸಲಹೆಗಾರ ಕೆ.ಆರ್‌. ಜಯರಾಮ್‌ ಮಾತನಾಡಿ, ‘ಗಾರ್ಮೆಂಟ್ಸ್‌ ನೌಕರರ ಸಮಸ್ಯೆಗಳ ಬಗ್ಗೆ ಪ್ರಜಾವಾಣಿ ಪತ್ರಿಕೆಗೆ ಅಭಿಪ್ರಾಯ ತಿಳಿಸಿರುವವರನ್ನು ಕೆಲಸದಿಂದ ತೆಗೆಯುವುದಾಗಿ ಕಾರ್ಖಾನೆ ಮಾಲೀಕರು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಕೆಲವೆಡೆ ಬಲವಂತವಾಗಿ ಮಹಿಳಾ ಕಾರ್ಮಿಕರಿಂದ ರಾತ್ರಿ 8 ಗಂಟೆ ವರೆಗೆ ದುಡಿಸಿಕೊಳ್ಳಲಾಗಿದೆ’ ಎಂದು ದೂರಿದರು.

ಯೂನಿಯನ್‌ನ ಸದಸ್ಯೆ ನಿರ್ಮಲಾ, ‘ಪ್ರತಿಭಟನೆ ವೇಳೆ ಪೊಲೀಸರು ಮಹಿಳೆಯರ ಸೀರೆ ಎಳೆದಾಡಿದ್ದಲ್ಲದೆ, ಲಾಠಿಯಿಂದ ಹೊಡೆದರು. ಪೊಲೀಸರು ತೋರಿಸಲಿಲ್ಲ. ಪೊಲೀಸರ ದೌರ್ಜನ್ಯದ ಬಗ್ಗೆ ಸೂಕ್ತ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT