ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ: ನನ್ನ ಬರೆಯುವ ಅನುಭವದಲ್ಲಿ

ಪುಟ ಬಂಗಾರ
Last Updated 29 ಮಾರ್ಚ್ 2014, 19:30 IST
ಅಕ್ಷರ ಗಾತ್ರ

 ಒಬ್ಬ ಲೇಖಕನಾಗಿ ನನಗೆ ಆಸ್ಥೆಯಿದ್ದದ್ದು ಮನುಷ್ಯನನ್ನು ಅವನ ಮೂಲಕ ಬದುಕನ್ನು ಅರಿಯುವುದರಲ್ಲಿ. ಮನುಷ್ಯನನ್ನು ಅರಿಯುವುದಕ್ಕೆ ನಮಗೆ ಲಭ್ಯವಿದ್ದ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದಾಗಿದೆ ಮಾತ್ರವಲ್ಲ, ಇತರ ಮಾಧ್ಯಮಗಳಿಗೆ ಇಲ್ಲದ ಕೆಲವು ಶಕ್ತಿಗಳು ಸಾಹಿತ್ಯಕ್ಕೆ ಮಾತ್ರ ಇವೆ ಎನ್ನುವುದು ನನ್ನ ತಿಳಿವಳಿಕೆಯಾಗಿದೆ. ಭರವಸೆಯಾಗಿದೆ. ಸಾಹಿತ್ಯದ ಆಸ್ಥೆಗೆ ಒಳಪಡುವ ಮನುಷ್ಯ ಇತರ ಮಾಧ್ಯಮಗಳಲ್ಲಿ ಆಗುವ ಹಾಗೆ, ಬರೇ ಪರಿಕಲ್ಪಿತನಾದವನಲ್ಲ, ನಮ್ಮ ಅನುಭವಕ್ಕೆ ಬಂದವನು. ಬರಬಲ್ಲವನು.

ಈ ಜಗತ್ತು ಬರಿಯ ಜೈವಿಕ–ಸಾಮಾಜಿಕ ಸಮಸ್ಯೆಗಳಿಂದ ಇಲ್ಲವೇ ಸಾಮಾಜಿಕ–ಸಾಂಸ್ಕೃತಿಕ ಸಮಸ್ಯೆಗಳಿಂದ ಪೀಡಿತವಾದದ್ದಲ್ಲ. ಬದಲಾಗಿ ಮನುಷ್ಯನ ಅಸ್ತಿತ್ವಕ್ಕೇ ಮೂಲಭೂತವಾದ ಸಾವು, ಬೇನೆ, ಯಾತನೆ, ಎಲ್ಲಕ್ಕೂ ಮಿಗಿಲಾಗಿ ಕೇಡು (evil) ಮೊದಲಾದ ಅಸ್ತಿತ್ವಕ ಸಮಸ್ಯೆಗಳಿಂದಲೂ ಬಾಧಿತವಾಗಿದೆ. ಈ ಎಲ್ಲ ಸಮಸ್ಯೆಗಳೂ ಸಾಹಿತ್ಯದ ವಸ್ತುವಾಗಲು ಯೋಗ್ಯವಾಗಿವೆ: ಯಾಕೆಂದರೆ ಇವೆಲ್ಲವೂ ನಮ್ಮ ಅನುಭವದ ಒಳ ತಿರುಳಾಗಿವೆ. ಒತ್ತಿ ಹೇಳಬಯಸುವ ಸಂಗತಿಯೆಂದರೆ ಮಾನವ ಜೀವನವನ್ನು ಅರಿಯಲು ಅವಶ್ಯವಿದ್ದ ಚೌಕಟ್ಟುಗಳಲ್ಲಿ ಸಮಾಜವೂ ಒಂದು ಚೌಕಟ್ಟು– ಆದರೆ ಏಕ ಮಾತ್ರ ಚೌಕಟ್ಟು ಅಲ್ಲ.

ಇರವಿನೊಡನೆಯ ಮನುಷ್ಯನ ಮುಖಾಮುಖಿಯನ್ನು ಇಡಿಯಾಗಿ ಗ್ರಹಿಸುವ ಬಲ ಯಾವುದೇ ಒಂದು ಮಾಧ್ಯಮಕ್ಕೂ ಇಲ್ಲ. ಹಾಗೆಂದೇ ಇಷ್ಟೆಲ್ಲ ಮಾಧ್ಯಮಗಳು ಹುಟ್ಟಿಕೊಂಡಿವೆ: ಕಲೆ ಮತ್ತು ಸಾಹಿತ್ಯ; ವಿಜ್ಞಾನ–ದರ್ಶನ; ಧರ್ಮ–ಪುರಾಣ, ಇವೆಲ್ಲ ಅಸ್ತಿತ್ವಕ್ಕೆ ಬಂದದ್ದು ನಮ್ಮ ಇರವಿಗೆ ಅಷ್ಟೊಂದು ಆಯಾಮಗಳು ಇವೆಯಾದ್ದರಿಂದ. ಪ್ರತಿಯೊಂದು ಮಾಧ್ಯಮ ಮನಸ್ಸಿನ ಶಕ್ತಿಶಾಲಿ ಇಂದ್ರಿಯವಾಗಿ ಕೆಲಸ ಮಾಡುತ್ತ ತನ್ನ ಪ್ರತಿಭೆಗೆ ಮೀಸಲಾದ ಇರುವಿನ ಮಗ್ಗುಲನ್ನು ಗ್ರಹಿಸುತ್ತದೆ.  ಒಂದು ಮಾಧ್ಯಮ ಇನ್ನೊಂದು ಮಾಧ್ಯಮಕ್ಕೆ ಸೇರಿದ ಕಾರ್ಯವನ್ನು ಕಸಿದುಕೊಳ್ಳುವುದಿಲ್ಲ. ಕಣ್ಣಿಗೆ ಸಾಧ್ಯವಿದ್ದದ್ದು ಮೂಗಿಗೂ ಹೇಗೆ ಸಾಧ್ಯವಿದ್ದೀತು? ಸಾಧ್ಯವಿದ್ದಿದ್ದರೆ ನಮಗೇಕೆ ಕಣ್ಣು ಇರುತ್ತಿತ್ತು?

ಸ್ವಲ್ಪದರಲ್ಲಿ ಕತೆ ಕಾದಂಬರಿ ಕೂಡ ಮನುಷ್ಯನನ್ನು ಅವನ ಮೂಲಕ ಬದುಕನ್ನು ಅರಿಯುವ ಅನನ್ಯ ಮಾಧ್ಯಮವಾಗಿದೆ. ಉಳಿದ ಮಾಧ್ಯಮಗಳ ಮೂಲಕ– ಉದಾಹರಣೆಗೆ ತತ್ತ್ವಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ, ಇತಿಹಾಸ, ಪತ್ರಿಕೆಗಳ ಮುಖಾಂತರ– ಮೊದಲೇ ತಿಳಿದದ್ದನ್ನು, ತಿಳಕೊಂಡದ್ದನ್ನು ಲೇಖಕ ಕತೆ ಕಾದಂಬರಿಗಳಲ್ಲಿ ಹಾಕುವುದಿಲ್ಲ. ಕತೆ, ಕಾದಂಬರಿಗಳನ್ನು ಬರೆಯುವ ಮೂಲಕವೇ ಹೊಸತನ್ನು ಗ್ರಹಿಸುತ್ತಾನೆ. ಕಂಡುಹಿಡಿಯುತ್ತಾನೆ. ಗೊತ್ತಿದ್ದುದನ್ನೇ ಹೇಳಲು ಕತೆಯೇ ಬೇಕೆಂದಿಲ್ಲ.

ಬೇರೆ ಯಾವ ಮಾಧ್ಯಮಕ್ಕೂ ದಕ್ಕದ ಬದುಕಿನ ಮಗ್ಗುಲುಗಳನ್ನು ಗ್ರಹಿಸುವ ತಾಕತ್ತು ಕಥೆಗೆ ಇದೆ ಎನ್ನುವುದರಲ್ಲೇ ಅದರ ವೈಶಿಷ್ಟ್ಯ ಹಾಗೂ ವಿಶೇಷತೆಗಳಿವೆ. ವಿಂಗಡತೆಯಿದೆ. ಕಥೆ ಇತರ ಮಾಧ್ಯಮಗಳ ಎರವಲು ಪ್ರಾಪ್ತಿಯಲ್ಲ; ಸ್ವತಂತ್ರ ಅಸ್ತಿತ್ವವುಳ್ಳದ್ದು. ಕ್ರಿಯಾ ಕ್ಷೇತ್ರ ಕಾರ್ಯಕ್ಷಮತೆ ಉಳ್ಳದ್ದು. ಕಥೆಯ ಕಾರ್ಯಕ್ಷಮತೆ ಅದಕ್ಕಿರುವ ನಿರ್ದಿಷ್ಟ ಆಕಾರಕ್ಕೆ ಚಿರಋಣಿಯಾಗಿದೆ. ಹಕ್ಕಿಗೆ ಗಾಳಿಯಲ್ಲಿ ಹಾರುವ ಕ್ಷಮತೆ ಬಂದದ್ದು ಅದಕ್ಕಿರುವ ನಿರ್ದಿಷ್ಟ ಆಕಾರದಿಂದಾಗಿ. ಹಾಗೆಂದೇ ಆಕಾಶದಲ್ಲಿ ಉಡ್ಡಾಣಗೈಯುವ ವಿಮಾನಕ್ಕೆ ಹಕ್ಕಿಯ ಆಕಾರವಿದೆ. ಮೀನಿಗೆ ನೀರಿನಲ್ಲಿ ಈಜುವ ಕ್ಷಮತೆ ಬಂದದ್ದು ಅದಕ್ಕಿರುವ ನಿರ್ದಿಷ್ಟ ಆಕಾರದಿಂದಾಗಿ. ಹಾಗೆಂದೇ ನೀರಿನಲ್ಲಿ ಸಾಗುವ ದೋಣಿಗೆ ಮೀನಿನ ಆಕಾರವಿದೆ.
***
ಎರಡು ವರ್ಷಗಳ ಹಿಂದೆ ನಾನು ವಯಸ್ಸಿನ ಎಂಬತ್ತನ್ನು ದಾಟಿದೆ. ಈ ಘಟನೆ ನನ್ನ ಬರವಣಿಗೆಯ ಮೇಲೆ ತಕರಾರು ಮಾಡುವಂತ ಪರಿಣಾಮ ಮಾಡಿಲ್ಲ. ಬರೆಯುವ ಉಮೇದು, ಇನ್ನೂ ಬರೆದೇನು ಎನ್ನುವ ಧೈರ್ಯ ಈಗಲೂ ಗಟ್ಟಿಯಾಗೇ ಉಳಿದಿವೆ. ಸಾಹಿತ್ಯ ರಚನೆ ಇಂದಿಗೂ ನಾನು ಉತ್ಸಾಹದಿಂದ ತೊಡಗಿಸಿಕೊಳ್ಳುವ ಚಟುವಟಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಬರೆದ ನಾಲ್ಕು ಕತೆಗಳನ್ನು ಲಕ್ಷ್ಯಕ್ಕೆ ತೆಗೆದುಕೊಂಡಾಗ ನನ್ನ ಕಥಾಲೇಖನ ಈಗ ಹೊಸತೇ ಒಂದು ಹಂತಕ್ಕೆ ಕಾಲಿರಿಸುತ್ತಿದ್ದ ಅನುಮಾನವಾಗಿ ಪುಲಕಿತನಾಗಿದ್ದೇನೆ.

ಈ ಕತೆಗಳು ಕೂಡ ಎಂದಿನ ಹಾಗೇ ಮಬ್ಬುಗತ್ತಲೆ ಕವಿದಿರುವ ಹೊತ್ತಿನಲ್ಲಿ ಆರಂಭಗೊಂಡು ಬಿಸಿಲು ಬೆಳಗುವ ಹೊತ್ತಿಗೆ ಕೊನೆ ಮುಟ್ಟುತ್ತವೆ. ನನ್ನ ಬಹಳಷ್ಟು ಕತೆಗಳಲ್ಲಿ ಆಗುವಂತೆ ಪ್ರತಿಮೆಗಳ ನಕ್ಷತ್ರ ಕಾಂತಿಯಲ್ಲಿ ಸೃಜನ ಪ್ರಕ್ರಿಯೆಯ ಹಾದಿ ಬೆಳಗಿಕೊಳ್ಳುವ ಪರಿ ಈ ಕತೆಗಳಲ್ಲೂ ಮುಂದುವರೆದಿದೆ. ಆದರೆ ಈ ಪ್ರತಿಮೆಗಳ ಪ್ರಭಾವಕ್ಕೆ ಒಳಪಡುವ ಬದುಕಿನ ಮಗ್ಗುಲುಗಳು ಹೊಸತಾಗಿವೆ. ಈ ಪ್ರತಿಮೆಗಳಲ್ಲಿ ಕತೆಯಾಗಲೇಬೇಕು ಎನ್ನುವ ಒತ್ತಾಯವಿಲ್ಲ. ಕತೆ ಹುಟ್ಟಿದ್ದೇ ಆದರೆ ಅದು ಹೀಗೇ ಇರಬೇಕು ಎನ್ನುವ ಹಟವಿಲ್ಲ. ಸಣ್ಣ ಸಣ್ಣ ವಾಕ್ಯಗಳುಳ್ಳ ಗದ್ಯ ಸರಳವಾಗಿದೆ. ವಿವರಗಳ ದಟ್ಟಣೆಯಿಲ್ಲದ ಬರವಣಿಗೆ ವಿಶ್ರಾಂತವಾಗಿದೆ. ನಿರ್ಧಾಸ್ತವಾಗಿದೆ. ಈ ಬದಲಿಗೆ ನನ್ನ ಇಳಿವಯಸ್ಸು ಕಾರಣವಾಗಿರಬಹುದೇ? ಅಥವಾ ವಯಸ್ಸಿಗೆ ಸಹಜವಾದ ಸಮಚಿತ್ತದ ದೃಷ್ಟಿ ಕಾರಣವಾಗಿರಬಹುದೇ? ನಿಮ್ಮ ಊಹೆ ನನ್ನದೂ ಕೂಡ.

ಊಹೆಯನ್ನು ಸದ್ಯ ಬದಿಗಿರಿಸಿ ಮಾಡಹುದಾದ ಸರಳ ಹೇಳಿಕೆಯೆಂದರೆ: ಸುಮಾರು ಅರವತ್ತು ವರ್ಷಗಳ ಹಿಂದೆ ಮನಸ್ಸು ಅತ್ಯಂತ ಸೃಜನಶೀಲ ಸ್ಥಿತಿಯಲ್ಲಿದ್ದ ಹೊತ್ತಿನಲ್ಲಿ, ತನ್ನಷ್ಟಕ್ಕೇ ಉಲ್ಲಾಸಗೊಂಡಿರುವ ಗಳಿಗೆಯಲ್ಲಿ ಕತೆಯೊಂದು ಹುಟ್ಟಿಕೊಂಡಿತು. ಹುಟ್ಟುವಾಗಲೇ ಹಲವು ಕತೆಗೆ ಜನ್ಮಕ್ಕೆ ಕಾರಣವಾಗುವ ಸಂಕಲ್ಪ ಮಾಡಿಕೊಂಡೇ ಬಂದಿತ್ತು ಎನ್ನುವ ಹಾಗೆ ಒಂದು ಕತೆ ಇನ್ನೊಂದಕ್ಕೆ ಪ್ರೇರಣೆಯಾಗುತ್ತ ‘ಚಿತ್ತಾಲ ಸಾಹಿತ್ಯ’ವಾಗಿ ಬೆಳೆಯಿತು. ಹೀಗೆ ಬೆಳೆಯುತ್ತಿದ್ದ ಕಾಲದಲ್ಲೇ ಸಾಹಿತ್ಯದಲ್ಲಿ ಒದಗುವ ಸೃಜನ ಪ್ರಕ್ರಿಯೆಯ ಸ್ವರೂಪದ ಬಗೆಗಿನ ನನ್ನ ಕುತೂಹಲ ಇಲ್ಲಿಯ ವಿಚಾರಗಳಿಗೆ ಮೂಲವಾಯಿತು! ಅಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT