ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗಲಿದೆಯೇ 60 ಮರಗಳಿಗೆ ಜೀವಭಿಕ್ಷೆ?

ಮರುನಾಟಿ: ಬಿಎಂಆರ್‌ಸಿಎಲ್‌ಗೆ ಬಿಬಿಎಂಪಿ ಪ್ರಸ್ತಾಪ
Last Updated 13 ಜೂನ್ 2016, 0:29 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಯ ಕಾಮಗಾರಿಗಾಗಿ ಕಡಿಯಲು ಉದ್ದೇಶಿಸಿರುವ ಮರಗಳ ಪೈಕಿ ಒಂದಷ್ಟನ್ನಾದರೂ ಉಳಿಸುವ ಸಲುವಾಗಿ ಮರಗಳ ಮರುನಾಟಿ ಮಾಡಬೇಕು ಎಂಬ ಪ್ರಸ್ತಾಪವನ್ನು  ಬಿಬಿಎಂಪಿ ಅರಣ್ಯ ವಿಭಾಗವು ಬೆಂಗಳೂರು ಮೆಟ್ರೊ ರೈಲು ನಿಗಮದ  (ಬಿಎಂಆರ್‌ಸಿಎಲ್‌)   ಮುಂದಿಟ್ಟಿದೆ.

ಎರಡನೇ ಹಂತದ ಯೋಜನೆಯ ಕಾಮಗಾರಿ ಸಲುವಾಗಿ ಕನಕಪುರ ಮೆಟ್ರೊ ಕ್ಯಾಷ್‌  ಆ್ಯಂಡ್‌ ಕ್ಯಾರಿ ಮಾಲ್‌ನಿಂದ ತಲಘಟ್ಟಪುರ ಪೊಲೀಸ್‌ ಠಾಣೆವರೆಗೆ 190 ಮರಗಳನ್ನು   ಹಾಗೂ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ 123 ಮರಗಳನ್ನು ಕಡಿಯಬೇಕಾಗುತ್ತದೆ. 

ಭಾರೀ ವಿರೋಧ: ಇಷ್ಟೊಂದು ಸಂಖ್ಯೆಯಲ್ಲಿ ಮರ ಕಡಿಯುವುದಕ್ಕೆ ಪರಿಸರ ಹೋರಾಟಗಾರರಿಂದ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಬಿಬಿಎಂಪಿ ಉಪಅರಣ್ಯ ಸಂರಕ್ಷಣಾಧಿಕಾರಿಗೆ ಇ–ಮೇಲ್‌ ಮೂಲಕ 238 ಆಕ್ಷೇಪಗಳು ಸಲ್ಲಿಕೆಯಾಗಿದ್ದವು.  ಮರಗಳನ್ನು ಕಡಿಯುವುದರಿಂದ ವಾತಾವರಣ ಮತ್ತಷ್ಟು ಹದಗೆಡುತ್ತದೆ. ತಾಪಮಾನ ಹೆಚ್ಚಳಕ್ಕೂ ಇದು ಕಾರಣವಾಗಲಿದೆ ಎಂದು  ಕೆಲವರು ಆಕ್ಷೇಪಿಸಿದ್ದರು.

ಮರಗಳನ್ನು ಕಡಿಯುವ ಬದಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು. ನೆಲದ ಮೇಲಿನ ಮಾರ್ಗದ ಬದಲು ಸುರಂಗ ನಿರ್ಮಿಸಬೇಕು ಎಂದೂ ಕೆಲವರು ಸಲಹೆ ನೀಡಿದ್ದರು. 

‘ಮರಗಳನ್ನು ಕಡಿಯುವುದಕ್ಕೆ ಪರಿಸರ ಹೋರಾಟಗಾರರಿಂದ ವಿರೋಧ ವ್ಯಕ್ತವಾಗಿದ್ದರಿಂದ, ಕಾಮಗಾರಿಗೆ  ಅಡ್ಡಿ ಯಾಗುವ ಎಲ್ಲ ಮರಗಳನ್ನು ಕಡಿಯುವ ಬದಲು ಒಂದಷ್ಟು ಮರಗಳನ್ನು ಮರುನಾಟಿ ಮಾಡುವಂತೆ ನಿಗಮಕ್ಕೆ ಸೂಚಿಸಿದ್ದೇವೆ. ತೀರಾ ಹಳೆಯ ಹಾಗೂ ಸ್ಥಳಾಂತರಕ್ಕೆ ಸಾಧ್ಯವಿಲ್ಲದ ಮರಗಳನ್ನು ಮಾತ್ರ ಕಡಿಯುವಂತೆ ಹೇಳಿದ್ದೇವೆ’ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕನಕಪುರ ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ ಮಾಲ್‌ನಿಂದ ತಲಘಟ್ಟಪುರ ಪೊಲೀಸ್‌ ಠಾಣೆಯವರೆಗೆ ಕಡಿಯಲು ಗುರುತಿಸಿದ್ದ 190 ಮರಗಳ ಪೈಕಿ 48 ಮರಗಳನ್ನು ಸ್ಥಳಾಂತರಿಸಲು ಗುರುತಿಸಿದ್ದೇವೆ. ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮಾರ್ಗದಲ್ಲಿ 123 ಮರಗಳ ಪೈಕಿ 12 ಮರಗಳನ್ನು ಸ್ಥಳಾಂತರಿಸಲು ಗುರುತಿಸಿದ್ದೇವೆ. ಇದಕ್ಕೆ  ನಿಗಮದವರೂ ತಾತ್ವಿಕವಾಗಿ ಒಪ್ಪಿದ್ದಾರೆ.  ಮರಗಳನ್ನು ಸ್ಥಳಾಂತರ ಮಾಡಿ ಮರುನಾಟಿ ಮಾಡುವ ಸಂಪೂರ್ಣ ವೆಚ್ಚವನ್ನು ಮೆಟ್ರೊ ನಿಗಮವೇ ಭರಿಸಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

ಮರು ನಾಟಿ– ಮರುಚಿಂತನೆ: ‘ಕಾಮಗಾರಿಗಾಗಿ ಮರಗಳನ್ನು ಕಡಿಯುವುದಕ್ಕೆ ನಮಗೂ ಮನಸ್ಸಿಲ್ಲ.  ಮರಗಳನ್ನು ಸ್ಥಳಾಂತರಿಸಿ ಮರುನಾಟಿ ಮಾಡುವುದಕ್ಕೆ ನಿಗಮವು ಸಿದ್ಧವಾಗಿದೆ.  ಒಂದು ಮರವನ್ನು ಸ್ಥಳಾಂತರಿಸಿ ಮತ್ತೆ ನೆಡಲು ₹ 25 ಸಾವಿರದಿಂದ ₹ 30 ಸಾವಿರದವರೆಗೆ ವೆಚ್ಚವಾಗುತ್ತದೆ. ಮರಗಳನ್ನು ಬುಡಸಮೇತ ಕೀಳುವಾಗ ಸ್ಥಳದಲ್ಲಿರುವ ಪಾದಚಾರಿ ಮಾರ್ಗ ಮತ್ತಿತರ ಸಂರಚನೆಗಳಿಗೂ ಹಾನಿ ಉಂಟಾಗುತ್ತದೆ.  ಅವುಗಳನ್ನೂ ದುರಸ್ತಿಗೊಳಿಸಬೇಕು. ಮರವನ್ನು ಮತ್ತೆ ನೆಡುವುದಕ್ಕೂ ಸೂಕ್ತ ಸ್ಥಳಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮರು ನಾಟಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ’ ಎನ್ನುತ್ತಾರೆ ಮೆಟ್ರೊ ನಿಗಮದ ವಕ್ತಾರ ವಸಂತರಾವ್‌.

‘ನಾವು ಜನನಿಬಿಡವಾದ, ದಿನವಿಡೀ ವಾಹನ ಸಂಚಾರವಿರುವ ಪ್ರದೇಶಗಳಲ್ಲಿರುವ ಮರಗಳನ್ನು ಸ್ಥಳಾಂತರಿಸಬೇಕಾಗಿದೆ. ಇದರಿಂದ ಜನಜೀವನದ ಮೇಲಾಗುವ ಪರಿಣಾಮವನ್ನೂ ಪರಿಗಣಿಸಬೇಕಾಗುತ್ತದೆ’ ಎಂದರು.

‘ಒಂದು ಮರದ ಮರು ನಾಟಿಗೆ ಮಾಡುವ ವೆಚ್ಚದಲ್ಲಿ ನಾವು 10 ಹೊಸ ಸಸಿಗಳನ್ನು ನೆಡಬಹುದು. 10 ಅಡಿಗಳಿಗಿಂತ ಹೆಚ್ಚು ಎತ್ತರಕ್ಕೆ ಬೆಳೆದ ಸಸಿಗಳನ್ನು ನೆಟ್ಟರೆ ಎರಡು ಮೂರು ವರ್ಷಗಳಲ್ಲಿ ಅವುಗಳು ನೆರಳು ನೀಡುವಷ್ಟು ಎತ್ತರಕ್ಕೆ ಬೆಳೆಯುತ್ತವೆ. ಮರು ನಾಟಿ ಮಾಡಿದ ಮರಗಳು ಬದುಕುವ ಖಾತರಿಯೂ ಕಡಿಮೆ’ ಎಂದು ಅವರು ವಿವರಿಸಿದರು.

‘ಮರಗಳ ಮರುನಾಟಿ ಒಳ್ಳೆಯದೇ. ಆದರೆ, ಮೆಟ್ರೊ ನಿಗಮವು ಇದನ್ನು ಮಾಡುತ್ತದೆ ಎಂಬ ನಂಬಿಕೆ ಇಲ್ಲ. ಮೊದಲ ಹಂತದ ಕಾಮಗಾರಿಗಾಗಿ ಕಡಿದಿರುವ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಡುವ ಕಾರ್ಯವನ್ನೇ ನಿಗಮವು ಸರಿಯಾಗಿ ಮಾಡಿಲ್ಲ’ ಎಂದು ದೂರುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಟಿ.ವಿ. ರಾಮಚಂದ್ರ .

ಮೆಟ್ರೊ ಮೊದಲ ಹಂತದ ಕಾಮಗಾರಿ ಸಲುವಾಗಿ 2,100 ಮರಗಳನ್ನು  ಕಡಿಯಲಾಗಿತ್ತು. ಇದಕ್ಕೆ ಪ್ರತಿಯಾಗಿ ಬಿಬಿಎಂಪಿ, ಬಿಡಿಎ ಹಾಗೂ ಅರಣ್ಯ ಇಲಾಖೆ ವತಿಯಿಂದ ನಗರದಲ್ಲಿ  15 ಸಾವಿರ ಸಸಿಗಳನ್ನು ನೆಡಲಾಗಿದೆ. ಇವುಗಳ ನಿರ್ವಹಣೆಗೆ ಬಿಎಂಆರ್‌ಸಿಎಲ್‌ ₹ 75 ಲಕ್ಷವನ್ನು ಭರಿಸಿದೆ ಎಂಬ ವಿವರಗಳನ್ನು ನಿಗಮವು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

‘ಈ ಹಿಂದೆಯೇ ಇದ್ದ ಸಸಿಗಳನ್ನೂ ನಿಗಮವೇ ಬೆಳೆಸಿದೆ ಎಂದು ಬಿಂಬಿಸಲಾಗಿದೆ. ಬೈಯಪ್ಪನಹಳ್ಳಿಯಲ್ಲಿ ನಿಗಮದ ಸ್ವಾಧೀನದಲ್ಲೇ 12 ಎಕರೆಗೂ ಅಧಿಕ ಜಾಗವಿದೆ. ಅಲ್ಲೇ ಅವರು ಸಾಕಷ್ಟು ಹಸಿರು ಬೆಳೆಸುವುದಕ್ಕೆ ಅವಕಾಶ ಇತ್ತು’ ಎನ್ನುತ್ತಾರೆ  ರಾಮಚಂದ್ರ.

ಕಾಮಗಾರಿ ವಿಳಂಬ: ಮರ ಕಡಿಯುವುದಕ್ಕೆ ಅನುಮತಿ ಪಡೆಯಲು ನಿಗಮವು ಮೂರು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ.   ಇನ್ನೂ ಅನುಮತಿ ಸಿಕ್ಕಿಲ್ಲ. ಇದರಿಂದ ಎರಡನೇ ಹಂತದ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂಬ ದೂರು ಇದೆ. 

ಯಾವುದಾದರೂ ಅಭಿವೃದ್ಧಿ ಕಾಮಗಾರಿಗೆ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಲು ಅನುಮತಿ ನೀಡುವ ಬಗ್ಗೆ ಪಾಲಿಕೆಯ ವೃಕ್ಷಾಧಿಕಾರಿಯೊಬ್ಬರೇ ನಿರ್ಣಯ ಕೈಗೊಳ್ಳುವಂತಿಲ್ಲ. ವೃಕ್ಷ ಸಮಿತಿ ಜನಾಭಿಪ್ರಾಯ ಸಂಗ್ರಹಿಸಿ ಇದಕ್ಕೆ ಒಪ್ಪಿಗೆ ನೀಡಬೇಕಾಗುತ್ತದೆ. ಬಿಬಿಎಂಪಿ ವ್ಯಾಪ್ತಿಗೆ  ಕಳೆದ ವಾರವಷ್ಟೇ ಹೊಸ ವೃಕ್ಷ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಇನ್ನಷ್ಟೇ ಸಭೆ ಸೇರಬೇಕಿದೆ.

‘ಪರಿಸರ ಅಧಿಕಾರಿ ನೇಮಿಸಿಕೊಳ್ಳಲಿ ’
‘ಬೆಂಗಳೂರಿನ ಅಭಿವೃದ್ಧಿಗೆ ಮೆಟ್ರೊದಂತಹ  ದೊಡ್ಡ ಮಟ್ಟದ ಯೋಜನೆಯ ವಿನ್ಯಾಸ ರೂಪಿಸಿ ಅನುಷ್ಠಾನಗೊಳಿಸುವ ಸಂಸ್ಥೆಯಲ್ಲಿ ಪರಿಸರ ಕಾಳಜಿ ವಹಿಸುವುದಕ್ಕೆ ಒಬ್ಬ ಅಧಿಕಾರಿಯೂ ಇಲ್ಲ.  ಇದರಿಂದಲೇ ನಿಗಮಕ್ಕೆ ಪರಿಸರದ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ತಿಳಿಯುತ್ತದೆ.  ನಿಗಮವು ಪರಿಸರ ಅಧಿಕಾರಿಯನ್ನು ಮೊದಲು ನೇಮಿಸಿಕೊಳ್ಳಲಿ’ ಎಂದು ಬಿಬಿಎಂಪಿ ವೃಕ್ಷ ಸಮಿತಿಯ ಸದಸ್ಯರೂ ಆಗಿರುವ ಟಿ.ವಿ. ರಾಮಚಂದ್ರ ಒತ್ತಾಯಿಸಿದರು.

ಕಡಿದ ಮರ, ನೆಟ್ಟ ಇಡಗಳ ಲೆಕ್ಕ
* 2,100 ಮೊದಲ ಹಂತದಲ್ಲಿ ಕಡಿಯಲಾದ ಮರಗಳು
* 15 ಸಾವಿರ ಪ್ರತಿಯಾಗಿ ನಗರದಲ್ಲಿ ನೆಟ್ಟ ಗಿಡಗಳು
* 313 2ನೇ ಹಂತದಲ್ಲಿ ಕಡಿಯಲು ಉದ್ದೇಶಿಸಿರುವ ಮರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT