ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥೈರ್ಯ ಕುಗ್ಗಿಸಲು ‘ಲಾಬಿ’

Last Updated 26 ಜೂನ್ 2015, 19:30 IST
ಅಕ್ಷರ ಗಾತ್ರ

ಕೆ.ಎಸ್‌.ಒ.ಯು. ಕುಲಪತಿ ಡಾ. ಎಂ.ಜಿ.ಕೃಷ್ಣನ್ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ:
* ಭಾರೀ ಸುದ್ದಿಯಲ್ಲಿದ್ದೀರಿ, ಏನಾಗ್ತಾ ಇದೆ?
ನೋಡಿ, ಯಾವ ವಿಶ್ವವಿದ್ಯಾಲಯಗಳೂ ‘ಪ್ರಾದೇಶಿಕ ವ್ಯಾಪ್ತಿ ನೀತಿ’ಯನ್ನು ಪಾಲಿಸುತ್ತಿಲ್ಲ. ಕೆ.ಎಸ್.ಒ.ಯು. ಕಾಯ್ದೆಯಡಿ ಹೊರ ರಾಜ್ಯಗಳಲ್ಲಿ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು, ಕೋರ್ಸ್ ನಡೆಸಲು ಅವಕಾಶ ಇದೆ. ಆಂಧ್ರ ಪ್ರದೇಶದ ಗೀತಂ ವಿ.ವಿ, ತಮಿಳುನಾಡಿನ ಅಣ್ಣಾಮಲೈ ವಿ.ವಿ, ಭಾರತೀದಾಸನ್‌, ಅಳಗಪ್ಪನ್‌ ವಿ.ವಿ.ಗಳಂತಹ ‘ದೈತ್ಯ’ ವಿ.ವಿ.ಗಳು ಸೇರಿದಂತೆ ಬಹಳಷ್ಟು ಮುಕ್ತ ವಿಶ್ವವಿದ್ಯಾಲಯಗಳು ವಿವಿಧ ರಾಜ್ಯಗಳಲ್ಲಿ ಕಾರ್ಯಚಟುವಟಿಕೆ ಹೊಂದಿವೆ. ಪ್ರಾದೇಶಿಕ ವ್ಯಾಪ್ತಿ ಮತ್ತಿತರ ಕಾರಣ ನೀಡಿ ವಿ.ವಿ.ಗಳ ಕಾರ್ಯಚಟುವಟಿಕೆಯಲ್ಲಿ ಯುಜಿಸಿ ಹಸ್ತಕ್ಷೇಪ ಮಾಡುವಂತಿಲ್ಲ. ಹೀಗಿದ್ದರೂ, ಅವರಿಗೆ ನಮ್ಮ ಬಗ್ಗೆ ಅದೇನು ಪ್ರೀತಿಯೋ ಗೊತ್ತಿಲ್ಲ. ಎಲ್ಲರನ್ನೂ ಬಿಟ್ಟು ಕೆ.ಎಸ್.ಒ.ಯು. ವಿರುದ್ಧ ಮಾತ್ರ ಕ್ರಮಕ್ಕೆ ಮುಂದಾಗಿದ್ದಾರೆ.

* ಹಿಂದೆಯೇ ನೋಟಿಸ್ ಕೊಟ್ಟಿದ್ದರಂತಲ್ಲ?
ಪತ್ರಗಳ ಮೂಲಕ ತಿಳಿಸಿದ್ದರು. ಅದಕ್ಕೆ ಪ್ರತಿಯಾಗಿ ಪತ್ರಗಳ ಮೂಲಕವೇ ಸಮಜಾಯಿಷಿ ನೀಡಿ ಸಮರ್ಥಿಸಿಕೊಂಡಿದ್ದೇವೆ. ಯುಜಿಸಿ ಹಾಗೂ ಶಿಕ್ಷಣ ಇಲಾಖೆಯ ಆದೇಶದಂತೆ ಕೆ.ಎಸ್‌.ಒ.ಯು.ನಲ್ಲಿ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ, ಎಂ.ಫಿಲ್‌ ಕೋರ್ಸ್‌ಗಳನ್ನು 2014ರಲ್ಲೇ ಸ್ಥಗಿತಗೊಳಿಸಿದ್ದೇವೆ. ಪಿಎಚ್‌.ಡಿ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ವಿ.ವಿ ಮಾದರಿ ಅನುಸರಿಸುತ್ತಿರುವುದು ಮತ್ತು ವ್ಯಾಪ್ತಿ ವಿಚಾರದಲ್ಲಿ ಕೆ.ಎಸ್.ಒ.ಯು. ಅಧಿನಿಯಮದಡಿ ಕಾರ್ಯ ನಿರ್ವಹಿಸುತ್ತಿರುವ ಕುರಿತು ಗಮನಕ್ಕೆ ತರಲಾಗಿದೆ. ಹೀಗಿರುವಾಗ ಏಕಾಏಕಿ ಕ್ರಮಕ್ಕೆ ಮುಂದಾಗಿದ್ದು ಸರಿಯಲ್ಲ. ಸಮಿತಿ ರಚಿಸಿ, ವರದಿ ತರಿಸಿಕೊಳ್ಳಬಹುದಿತ್ತು. ಸಮರ್ಥಿಸಿಕೊಳ್ಳಲು ನಮಗೂ ಅವಕಾಶ ನೀಡಬೇಕಿತ್ತು.

* ನಿಮ್ಮ ವಿ.ವಿ.ಯನ್ನೇ ಗುರಿಯಾಗಿಸಿಕೊಂಡಿದ್ದರ ಬಗ್ಗೆ ಅನುಮಾನಗಳಿವೆಯೇ?
ಬಹಳಷ್ಟು ವಿಚಾರಗಳನ್ನು ಮುಕ್ತವಾಗಿ ಹೇಳಲಾಗದು. ಐದಾರು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಈಗ ಕೆ.ಎಸ್‌.ಒ.ಯು.  ಬಳಿ ಹಣ ಇದೆ. ಬೃಹತ್ ಕಟ್ಟಡಗಳಿವೆ. ಇವು ಕಣ್ಣಿಗೆ ಬಿದ್ದಿರಬಹುದು. ನಾವು ನವೀಕರಣ ಮತ್ತಿತರ ವಿಚಾರದಲ್ಲಿ ಸೌಜನ್ಯಕ್ಕೂ ‘ಓಸಿ’ ಹೊಡೆಯೋದಿಲ್ಲ. ಹಾಗಾಗಿ, ನಮಗೆ ಪಾಠ ಕಲಿಸಬೇಕು ಎಂದು ಈ ನಿರ್ಧಾರ ತಳೆದಿರಬಹುದೇನೋ. ಜತೆಗೆ, ನಮ್ಮ ಸಂಸ್ಥೆಯ ವಿಶ್ವಾಸಾರ್ಹತೆ, ಆಕರ್ಷಣೆ ಹೆಚ್ಚುತ್ತಿರುವುದನ್ನು ಸಹಿಸಲಾಗುತ್ತಿಲ್ಲ. ನಮ್ಮ ಸ್ಥೈರ್ಯ ಕುಗ್ಗಿಸಲು ವಿಶೇಷವಾಗಿ ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಉತ್ತರ ಭಾರತೀಯ ‘ಲಾಬಿ’ಯ ಕೈವಾಡವೂ ಇರಬಹುದೇನೋ ಎಂದು ಅನಿಸುತ್ತದೆ.

* ಇಲ್ಲಿ ದಿಕ್ಕು ತಪ್ಪಿರೋದು ಯಾರು?
ಕೆ.ಎಸ್‌.ಒ.ಯು. ದಿಕ್ಕು ತಪ್ಪಿದೆ ಎಂದು ಯುಜಿಸಿ ಹೇಳುತ್ತಿದೆ. ದಿಕ್ಕು ತಪ್ಪಿರೋದು ಯುಜಿಸಿಯೇ ಎಂದು ನಾವು ಸಾಕ್ಷಿ ಸಮೇತ ಹೇಳುತ್ತಿದ್ದೇವೆ. ಹಾಗೆ ನೋಡಿದರೆ ಯುಜಿಸಿಯಿಂದ ಒಂದು ರೂಪಾಯಿಯೂ ನಮಗೆ ಬರೋದಿಲ್ಲ. ಹಾಗಿರುವಾಗ ನಿಯಂತ್ರಣ ಏಕೆ? ಅಕಾಡೆಮಿಕ್ ವಿಚಾರದಲ್ಲಿ ಅವರ ಮಾತು ಕೇಳಬಹುದು. ಉಳಿದಂತೆ ನಾವು ನಮ್ಮ ಕಾಯ್ದೆಯಂತೆ ನಡೆದುಕೊಳ್ಳುತ್ತೇವೆ. ಮಾನ್ಯತೆ ಮುಂದುವರಿಸಿರುವ ಕುರಿತು ಯುಜಿಸಿ ಜಂಟಿ ಕಾರ್ಯದರ್ಶಿ ರೇಣುಬಾತ್ರ ಅವರು ಇದೇ ಜೂನ್‌ 2ರಂದು ಪತ್ರ ಬರೆದರೆ, ಜೂನ್‌ 16ರಂದು ಕೋರ್ಸ್‌ಗಳ ಮಾನ್ಯತೆ ರದ್ದುಪಡಿಸಿ ಯುಜಿಸಿ ಕಾರ್ಯದರ್ಶಿ ಜಸ್ಪಾಲ್‌ ಎಸ್‌. ಸಂಧು ಆದೇಶ ಹೊರಡಿಸುತ್ತಾರೆ. ಮಾನ್ಯತೆ ನವೀಕರಣದ ವಿಚಾರದಲ್ಲಿ ಯುಜಿಸಿಯಲ್ಲೇ ಗೊಂದಲ ಇದೆ.

*  ಮಾನ್ಯತೆ ರದ್ದು ಆದೇಶ ರಾಜಕೀಯ ಪ್ರೇರಿತವೇ?
ಇಲ್ಲ, ಈ ವಿಚಾರದಲ್ಲಿ ರಾಜಕೀಯ ಇದ್ದಂತಿಲ್ಲ. ಬರೇ ವೈಯಕ್ತಿಕ. ಕೆ.ಎಸ್.ರಂಗಪ್ಪ ಅವರ ಬಗ್ಗೆ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಅವರಿಗೆ ಮೊದಲಿಂದಲೂ ಆಗಿಬರೋದಿಲ್ಲ. ಇನ್ನು ಕೆ.ಎಸ್‌.ಒ.ಯು.  ವ್ಯವಸ್ಥಾಪನಾ ಮಂಡಲಿ ಸದಸ್ಯರೂ ಆದ, ವಿಧಾನ ಪರಿಷತ್‌ ಸದಸ್ಯ ಗೋ.ಮಧುಸೂದನ್ ಅವರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ಕೆ.ಎಸ್‌.ಒ.ಯು.ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಅವರು ಕೋರಿದ್ದಾರೆ. ಸಾವಿರ ಕೋಟಿ ಎಂದರೆ ಸಾಮಾನ್ಯವೇ? ಕಲ್ಪಿಸಿಕೊಳ್ಳಲೂ ಆಗದು. ಈ ವಿಚಾರದಲ್ಲಿ ಅವರ ಬಗ್ಗೆ ನನಗೆ ಸಿಟ್ಟು ಬರೋದಿಲ್ಲ; ಅವರ ಅಜ್ಞಾನದ ಬಗ್ಗೆ ಮರುಕ ಹುಟ್ಟುತ್ತದೆ.

* ಮಾನ್ಯತೆ ರದ್ದು ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಏನನ್ನು ನಿರೀಕ್ಷಿಸಿದ್ದೀರಿ?
ಕೆ.ಎಸ್.ಒ.ಯು. ವೈವಿಧ್ಯ ಸಂಸ್ಕೃತಿಯ ತವರಿನಂತಿದೆ. ಇಲ್ಲಿ ಶಿಕ್ಷಣ ಪಡೆಯಬಯಸುವವರಲ್ಲಿ ಶೇ 90ರಷ್ಟು ಮಂದಿ ಗ್ರಾಮೀಣ ತಳಸಮುದಾಯದವರು. ಅದರಲ್ಲೂ ಶೇ 60ಕ್ಕಿಂತ ಹೆಚ್ಚು ಮಂದಿ ಮಹಿಳೆಯರೇ ಆಗಿದ್ದಾರೆ. ವಿವಿಧ ನೌಕರಿಗಳಲ್ಲಿ ದುಡಿಯುತ್ತಿರುವ ವರ್ಗದವರೇ ಹೆಚ್ಚು. ಹೀಗಿರುವಾಗ ಕೆ.ಎಸ್‌.ಒ.ಯು.  ಹಿತಾಸಕ್ತಿಯನ್ನು ಕಾಪಾಡಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ. ಪ್ರಾದೇಶಿಕ ವ್ಯಾಪ್ತಿ ಮಿತಿ ವಿಚಾರದಲ್ಲಿ ಈಗ ಉದ್ಭವವಾಗಿರುವ ಗೊಂದಲಗಳಿಗೆ 1992ರ ಕೆ.ಎಸ್‌.ಒ.ಯು.  ಕಾಯ್ದೆಯಲ್ಲಿರುವ ದೋಷ ಕಾರಣ. ಪ್ರಾದೇಶಿಕ ಮಿತಿ ಕುರಿತ ಕಾಯ್ದೆ ತಿದ್ದುಪಡಿ ಮಾಡುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇನೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಶಾಸಕಾಂಗ ಮುಂದಾಗಬೇಕಿದೆ.

*  ಮುಕ್ತ ವಿ.ವಿ.ಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ನಿಮಗೆ ಅನಿಸಿಲ್ಲವೇ?
ನಿಜ, ಎಲ್ಲೆಡೆ ಇರುವಂತೆ ಇಲ್ಲಿಯೂ ಜಾತಿ, ಹಣಬಲದ ಆಧಿಪತ್ಯವಿದೆ. ನಾನು ಬೆಂಗಳೂರು ವಿ.ವಿ.ಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ್ದೇನೆ. ಅಲ್ಲೂ ಜಾತಿ ರಾಜಕಾರಣ ಇತ್ತು. ಈ ವಿ.ವಿ.ಯಲ್ಲಿ ಅದು ಇನ್ನೂ ಭಯಂಕರವಾಗಿ ವಿಜೃಂಭಿಸುತ್ತಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದಲೂ ವಿ.ವಿ. ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ. ಬಹಳಷ್ಟು ಮಂದಿಗೆ ಜವಾಬ್ದಾರಿ ಬೇಕಿಲ್ಲ. ದುಡ್ಡು ಮುಖ್ಯವಾಗಿದೆ. ಇದು ದುರಂತ.

* ಕೆ.ಎಸ್.ಒ.ಯು. ಪ್ರಮಾಣಪತ್ರಗಳಿಗೆ ಕೆಲವೆಡೆ ಮಾನ್ಯತೆ ನೀಡುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆಯೇ?
ಇಲ್ಲಿ ಪದವಿ ಪಡೆದವರು ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ಎಲ್ಲೆಡೆ ನೆಲೆ ಕಂಡುಕೊಂಡಿದ್ದಾರೆ. ಮಾನ್ಯತೆ ನೀಡದಿರುವ ದೂರುಗಳು ನಮಗೆ ಬಂದಿಲ್ಲ. ಎಲ್ಐಸಿ ಮಾನ್ಯತೆ ನೀಡಿಲ್ಲ ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ನಾನೂ ಓದಿದೆ. ಆದರೆ, ಅಂತಹ ಯಾವುದೇ ನಿರ್ದಿಷ್ಟ ದೂರು ಬಂದಿಲ್ಲ. ಹಾಗೆ ನೋಡಿದರೆ, ಈ ಪ್ರಮಾಣಪತ್ರಗಳು ಉದ್ಯೋಗ ಹಿಡಿಯಲು ಅಲ್ಲ. ಕೇವಲ ಜ್ಞಾನಾಭಿವೃದ್ಧಿಗೆ ಮಾತ್ರ. ಉದ್ಯೋಗ ಗಿಟ್ಟಿಸಲು ಡಿಗ್ರಿ, ಅಂಕಗಳಷ್ಟೇ ಅಲ್ಲ; ಪರ್ಫಾಮ್ ಮಾಡೋದು ಮುಖ್ಯ.

* ನ್ಯಾ. ಕೆ.ಭಕ್ತವತ್ಸಲ ನೇತೃತ್ವದ ಸತ್ಯ ಶೋಧನಾ ಸಮಿತಿ ವಿಚಾರಣೆ ಹೇಗೆ ನಡೆದಿದೆ?
ಮುಕ್ತ ವಿ.ವಿ.ಯಲ್ಲಿನ ಅವ್ಯವಹಾರಗಳ ಬಗೆಗಿನ ದೂರು ಸಂಬಂಧ ನ್ಯಾ. ಭಕ್ತವತ್ಸಲ ಸಮಿತಿ ವಿಚಾರಣೆಗೆ ಮೈಸೂರಿಗೆ ಬಂದಿದೆ. ನಾನು, ಕೆ.ಎಸ್‌.ಒ.ಯು. ನ ಹಿಂದಿನ ಕುಲಪತಿ ಪ್ರೊ. ಕೆ.ಎಸ್‌.ರಂಗಪ್ಪ, ಕುಲಸಚಿವ (ಆಡಳಿತ) ಪ್ರೊ. ಪಿ.ಎಸ್‌.ನಾಯಕ್ ಹಾಗೂ ವಿಶ್ರಾಂತ ಕುಲಸಚಿವ ವಿಶ್ವನಾಥ್ ಅವರು ಹಾಜರಾಗಿ ಹೇಳಿಕೆ ನೀಡಿದ್ದೇವೆ. ವಿಚಾರಣೆ ಹಂತದಲ್ಲಿರುವುದರಿಂದ ಆ ಬಗ್ಗೆ ಹೆಚ್ಚು ಹೇಳಲಾರೆ.

* ಆತಂಕಗೊಂಡಿರುವ ವಿದ್ಯಾರ್ಥಿ ಸಮೂಹಕ್ಕೆ ಏನು ಹೇಳುತ್ತೀರಿ?
ಯುಜಿಸಿ ಆದೇಶದ ವಿರುದ್ಧ ವಿದ್ಯಾರ್ಥಿಗಳ ಪರವಾಗಿ ಕೆಲ ಸಂಘಟನೆಯವರು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹಾಕಲು ಮುಂದಾಗಿದ್ದಾರೆ. ಕೆ.ಎಸ್.ಒ.ಯು.  ಸಹ ಯುಜಿಸಿಯ ಮನವೊಲಿಸುವ ಜತೆಜತೆಗೇ ನ್ಯಾಯಾಲಯದ ಮೊರೆ ಹೋಗಲಿದೆ. ವಿ.ವಿ. ಅಧಿಕಾರಿಗಳು ದೆಹಲಿಗೆ ತೆರಳಿ ಯುಜಿಸಿ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಅಗತ್ಯವಾದರೆ ನಾನೂ ಹೋಗುತ್ತೇನೆ. ಹಿಂದೆ ಇದ್ದ ಡಿಸ್ಟೆಂಟ್ ಎಜುಕೇಷನ್ ಕೌನ್ಸಿಲ್ (ಡಿಇಸಿ) 2011ರಲ್ಲಿ ಇದೇ ರೀತಿಯ ಆದೇಶ ಹೊರಡಿಸಿತ್ತು. ಆಗಲೂ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿತ್ತು. ಹಾಗಾಗಿ, ಆತಂಕಪಡುವ ಅಗತ್ಯ ಇಲ್ಲ. ಈ ನಡುವೆ ರಾಜ್ಯ ಸರ್ಕಾರದ ಮಧ್ಯಪ್ರವೇಶದಿಂದ ಪ್ರಕರಣ ಸುಖಾಂತ್ಯವಾಗುವ ನಿರೀಕ್ಷೆ ಇಟ್ಟುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT