ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ ಸ್ವರ್ಗ–ನರಕ: ಬಡವರ ಶೋಷಣೆಗೆ ಅಸ್ತ್ರ ’

Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವರ ಕಡೆಯಿಂದ ಜನರ ಕಡೆಗೆ ತಿರುಗಿಸಿದ ಪವಾಡವೇ ಭಕ್ತಿ ಚಳವಳಿ. ವಚನ­ಕಾರರು ಈ ಲೋಕದ ಬದುಕಿನ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದರು’ ಎಂದು ಹಿರಿಯ ಸಾಹಿತಿ ಡಾ.ಜಿ.ಎಸ್‌. ಸಿದ್ಧಲಿಂಗಯ್ಯ ವಿಶ್ಲೇಷಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತಿನ ಆಶ್ರಯ­ದಲ್ಲಿ ನಗರದಲ್ಲಿ ಶನಿವಾರ ನಡೆದ ‘ಹನ್ನೆರಡನೆಯ ಶತಮಾನದ ವಚನ ಚಳವಳಿಯ ಗುರಿ–ಪರ್ಯಾಯ ಸಂಸ್ಕೃತಿ’ ರಾಜ್ಯ ಮಟ್ಟದ ಚಿಂತನ ಸಮಾವೇಶದಲ್ಲಿ ‘ಸ್ವರ್ಗ, ನರಕ ಹಾಗೂ ಕರ್ಮ ಸಿದ್ಧಾಂತದ ನಿರಾಕರಣೆ’ ಗೋಷ್ಠಿಯಲ್ಲಿ ಅವರು ವಿಚಾರ ಮಂಡಿಸಿದರು.

‘ವಚನಕಾರರ ಧರ್ಮ ಸರಳವಾದ ಧರ್ಮ. 12ನೇ ಶತಮಾನದಲ್ಲಿ 80 ವರ್ಷಗಳ ಕಾಲ ಈ ಚಿಂತನೆ ಇತ್ತು. ವಚನ ಚಳವಳಿಕಾರರು ಇನ್ನಷ್ಟು ಕಾಲ ಇದ್ದರೆ ವಿಶ್ವಕ್ಕೆ ದೊಡ್ಡ ಬೆಳಕಿನ ಚಿಂತನೆ ನೀಡು­ತ್ತಿದ್ದರು’ ಎಂದು ಅವರು ಅಭಿಪ್ರಾಯಪಟ್ಟರು.

‘ವಚನ ಚಳವಳಿ ಕರ್ಮ ಸಿದ್ಧಾಂತವನ್ನು ನಿರಾಕರಿ­ಸಿತು. ಇಲ್ಲಿ ಹಿಂದಿನ ಜನ್ಮ, ಮುಂದಿನ ಜನ್ಮ ಇಲ್ಲ. ಇದೊಂದು ಕ್ರಾಂತಿಕಾರಕ ನಿರ್ಧಾರ. ವಚನ ಚಳವಳಿ ನೈತಿಕ ನೆಲೆಗಟ್ಟಿನ ಮೇಲೆ ನಿಂತಿತ್ತು. ಇವತ್ತು ನೈತಿಕ ನೆಲೆಗಟ್ಟು ಇಲ್ಲದ ಕಾರಣ ಕಾಯಕ ಕೈಲಾಸ ಆಗಿಲ್ಲ’ ಎಂದು ವಿಷಾದಿಸಿದರು.

ಪ್ರಾಧ್ಯಾಪಕ ಸಿ.ಪಿ.ನಾಗರಾಜ್‌, ‘ಬದುಕಿನ ಸುಖ ದುಃಖಕ್ಕೆ ಆಚಾರ, ಅನಾಚಾರವೇ ಕಾರಣ. ಇಂದು ಸ್ವರ್ಗ–ನರಕ ಎಂಬ ಅಸ್ತ್ರದ ಮೂಲಕ ಬಡಜನರ ಶೋಷಣೆ ಮಾಡಿ ಅವರು ತಲೆ ಎತ್ತದಂತೆ ಮಾಡ­ಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಧ್ಯಾಪಕ ಡಾ.ಯತೀಶ್ವರ, ‘ಒಂದು ಕಡೆ ಸಮಾಜ ಪ್ರಗತಿಪರ ನೆಲೆಗಟ್ಟಿನಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಇನ್ನೊಂದು ಕಡೆಯಲ್ಲಿ ಭವ್ಯ ದೇಗುಲಗಳನ್ನು ನಿರ್ಮಾಣ ಮಾಡಿ ಸ್ವರ್ಗ, ನರಕದ ಪರಿಕಲ್ಪನೆಯನ್ನು ಮೂಡಿಸಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಲಿಂಗಾಯತರಲ್ಲೂ ಅಸ್ಪೃಶ್ಯತೆ: ಸಾಹಿತಿ ರಂಜಾನ್‌ ದರ್ಗಾ ಮಾತನಾಡಿ, ‘ಎಲ್ಲ ಧರ್ಮಗಳಿಗೆ ಕರ್ಮ ಸಿದ್ಧಾಂತದ ಬೆಂಬಲ ಇದೆ. ಆದರೆ, ವ್ಯಕ್ತಿಯನ್ನು ಸರ್ವ ಸ್ವತಂತ್ರಗೊಳಿಸುವ ಏಕೈಕ ಧರ್ಮ ಬಸವ ಧರ್ಮ. ಇದೊಂದು ವೈಜ್ಞಾನಿಕ ಧರ್ಮ’ ಎಂದರು.

‘ಲಿಂಗಾಯತರಲ್ಲೂ ಅಸ್ಪೃಶ್ಯತೆಯ ಆಚರಣೆ ಇದೆ. ರಕ್ತ ಸಂಬಂಧ ಬೆಳೆಸಲು ಒಳಜಾತಿಗಳನ್ನೇ ಹುಡುಕ­ಲಾಗುತ್ತದೆ. ಇಂತಹ ಮನೋಭಾವ ಹೋಗ­ಬೇಕು’ ಎಂದು ಅವರು ಅಭಿಪ್ರಾಯ­ಪಟ್ಟರು.

‘ವೇದ, ಶಾಸ್ತ್ರ, ಆಗಮ, ಪುಣ್ಯ ಕ್ಷೇತ್ರಗಳ ನಿರಾಕರಣೆ’ ಗೋಷ್ಠಿಯಲ್ಲಿ ವಿಷಯ ಮಂಡಿಸಿದ ಲೇಖಕ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ‘ವೇದ, ಆಗಮಗಳ ಬಗ್ಗೆ ಪ್ರತಿ ವಚನಕಾರರ ಪ್ರತಿಕ್ರಿಯೆ­ಯೊಳಗೆ ಸೌಮ್ಯ ವೈಚಾರಿಕ ಪ್ರತಿಕ್ರಿಯೆ ಇದೆ, ವ್ಯಗ್ರವಾಗಿ ಆಡಿದ ನುಡಿಗಳು ಇವೆ. ಇವುಗಳ ಬಗ್ಗೆ ಅವರು ಪ್ರತಿಭಟನೆಯ, ಪ್ರತಿರೋಧದ ಶಕ್ತಿ ತೋರಿದರು’ ಎಂದರು.

‘ಬಸವಣ್ಣ ಆತ್ಮವಿಮರ್ಶೆ ಹಾಗೂ ಸಮಷ್ಠಿ ವಿಮರ್ಶೆ ಮಾಡಿಕೊಂಡೇ ಬೆಳೆದರು. ಇಂತಹ ನಿಷ್ಠುರವಾದ ವಿಮರ್ಶೆ ಬೇರೆ ಯಾವ ವಚನ­ಕಾರರಲ್ಲಿ ಕಾಣುವುದಿಲ್ಲ. ಇದರ ಹಿಂದೆ ದೊಡ್ಡ ಅನುಭವ ಕೋಶ ಹಾಗೂ ಜೀವನದ ಗಾಥೆ ಇದೆ’ ಎಂದರು.

‘ಪುಣ್ಯ ಕ್ಷೇತ್ರಗಳು ಇಂದು ಕಸದ ತೊಟ್ಟಿಗಳು ಆಗಿವೆ. ಅಲ್ಲಿ ಮಲದ ವಾಸನೆ ಬರುತ್ತಿದೆ. ಈ ಕ್ಷೇತ್ರಗಳು ಈಗ ಮಾನಸಿಕ ಹಾಗೂ ದೈಹಿಕ ಕಸ ಹಾಕುವ ಕೊಂಪೆಗಳಾಗಿ ಪರಿವರ್ತನೆ ಹೊಂದಿವೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಲೇಖಕ ಡಾ.ಬಸವರಾಜ ಸಬರದ, ‘ತರಗತಿ­ಗಳಲ್ಲಿ ಕಲಿಯುವಂತಹುದು ವೇದ ಹಾಗೂ ಆಗಮ ಶಾಸ್ತ್ರಗಳು. ಆದರೆ, ಅರಿವು ನಮ್ಮ ಒಳಗಡೆಯೇ ಇದೆ ಎಂದು ಜನರಿಗೆ ಅರಿವು ಮೂಡಿಸಿದವರು ಶರಣರು. ಅವರು ಅನುಭವವನ್ನು ಅನುಭಾವ­ವನ್ನಾಗಿ ಮಾಡಿದರು. ಅವರು ಬಹುಸಂಸ್ಕೃತಿಯನ್ನು ಬೆಳೆಸಿದರು. ಮೌಢ್ಯವನ್ನು ವಿರೋಧಿಸಿದರು’ ಎಂದರು.

ಪ್ರಾಧ್ಯಾಪಕ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ‘ವಚನಕಾರರು ಸಂಸ್ಕೃತದ ಲೌಕಿಕ ಸಾಹಿತ್ಯವನ್ನು ವಿರೋಧಿಸಿದರು. ತೀರ್ಥಕ್ಷೇತ್ರಗಳು ಜನರ ಆಲೋಚನಾ ಕ್ರಮವನ್ನು ಕುಂಠಿತಗೊಳಿಸುತ್ತವೆ ಎಂದು ಪ್ರತಿಪಾದಿಸಿದರು’ ಎಂದರು.

ಜ್ಯೋತಿಷ ವ್ಯಾಪಾರ
ವಚನ ಚಳವಳಿಗಳ ಗೋಷ್ಠಿ­ಗಳಲ್ಲಿ ಜ್ಯೋತಿಷಿ­ಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಡಾ.ಜಿ.ಎಸ್‌.ಸಿದ್ಧಲಿಂಗಯ್ಯ ಮಾತನಾಡಿ, ‘ಜ್ಯೋತಿಷ ಇವತ್ತು ವ್ಯಾಪಾರದ ಕೆಲಸ ಆಗಿದೆ.  ಜ್ಯೋತಿಷಿ­ಗಳು ಒಂದೂವರೆ ಗಂಟೆಗೆ ₨20 ಲಕ್ಷ ನೀಡಿ ಟಿ.ವಿ.ಚಾನೆಲ್‌­ಗಳಲ್ಲಿ ಕಾರ್ಯಕ್ರಮ ನೀಡುತ್ತಾರೆ. ಆ ಸಮಯದ ಜಾಹೀರಾತು ಲಾಭ ಸಹ ಅವರಿಗೆ ದೊರಕುತ್ತದೆ’ ಎಂದರು.

‘ಜ್ಯೋತಿಷ ಪ್ರಚಾರ ಮಾಡ­ಬೇಕು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ಜ್ಯೋತಿಷ­ವನ್ನು ಹೋರಾಟದ ಮೂಲಕ ನಿಯಂತ್ರಿಸ­ಬೇಕು’ ಎಂದು ಸಭಿಕ­ರೊಬ್ಬರು ವಿನಂತಿಸಿದರು.

ಸಿದ್ಧಲಿಂಗಯ್ಯ ಪ್ರತಿಕ್ರಿಯಿಸಿ, ‘ಇತ್ತೀಚಿನ ದಿನಗಳಲ್ಲಿ ಕಾನೂನು­ಗಳನ್ನು ಗಮನಿಸಿದರೆ ಕಾನೂನುಗಳ ಬಗ್ಗೆ ಹೆಚ್ಚು ವಿಶ್ವಾಸ ಇಡುವಂತಿಲ್ಲ’ ಎಂದರು.
ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ‘ಟಿ.ವಿ.ಗಳಲ್ಲಿ ಮೂಢ­ನಂಬಿಕೆ ಬಿತ್ತುವ ಕೆಲಸ ವ್ಯಾಪಕವಾಗಿ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT