ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕಾಡೆಮಿ ರತ್ನ ಅಂದರೆ ಪ್ರಶಸ್ತಿಗಿಂತ ದೊಡ್ಡದಾ?’

Last Updated 23 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರು: ‘ಹೌದಾ! ದೆಹಲಿಯ ಯಾವುದೋ ಪ್ರಶಸ್ತಿ ಬಂದಿದೆಯೆಂದು ಮನೆಯಲ್ಲಿ ಹೇಳಿದರು. ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯವರು ಪ್ರಶಸ್ತಿ ಕೊಡುತ್ತಾರೆನ್ನುವುದು ಗೊತ್ತು. ಅಕಾಡೆಮಿ ಫೆಲೋಶಿಪ್‌ ಅಂದರೆ ಪ್ರಶಸ್ತಿಗಿಂತ ದೊಡ್ಡದಾ?’ ಎಂದು ಅಚ್ಚರಿಯಿಂದಲೇ ಪ್ರಶ್ನಿಸಿದರು ನಗರದ ಹಿರಿಯ ಸಂಗೀತ ವಿದ್ವಾಂಸ ರಾ. ಸತ್ಯನಾರಾಯಣ.

ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯು ಅವರನ್ನು ಅತ್ಯುನ್ನತ ಗೌರವವಾದ ಫೆಲೋಶಿಪ್‌ಗೆ (ಅಕಾಡೆಮಿ ರತ್ನ) ಆಯ್ಕೆ ಮಾಡಿದೆ.
ಈ ಸಂದರ್ಭದಲ್ಲಿ ‘ಪ್ರಜಾವಾಣಿ’ ಮಾತನಾಡಿಸಿದಾಗ ಅನುಭವಗಳನ್ನು  ಬಿಚ್ಚಿಟ್ಟರು.

‘ನನ್ನಂಥವನಿಗೆ ಪ್ರಶಸ್ತಿ ಕೊಟ್ಟರಲ್ಲ. ಈ ಸಂದರ್ಭದಲ್ಲಿ ತಾಯಿ ವರಲಕ್ಷ್ಮಿ ನೆನಪಾಗುತ್ತಾಳೆ. ನನಗೆ ಸಂಗೀತ ಒಲಿದಿದ್ದು ತಾಯಿಯಿಂದ.
ಆಕೆಗೆ ಆಗ ಸಂಗೀತದಲ್ಲಿ ಪ್ರಸಿದ್ಧರಾಗಿದ್ದ ಸುಂದರಶಾಸ್ತ್ರಿಗಳು ಎಂಬ ಮೇಷ್ಟ್ರು ಸಿಕ್ಕಿದ್ದರು. ಅವರಿಂದ ಕರ್ನಾಟಕಿ ಸಂಗೀತ ಕಲಿತಳು. ಆಕೆಯಿಂದ ನಾನು ಕಲಿತೆ. ತಂದೆ ಬಿ. ರಾಮಯ್ಯ. ಅರಮನೆಯಲ್ಲಿದ್ದರು. ಮಹಾರಾಜರಿಗೆ ಉಡುಪು ಹಾಗೂ ಆಹಾರ ಸರಬರಾಜು ಮಾಡುತ್ತಿದ್ದ ಬಿಡದಿ ಎಂಬ ಇಲಾಖೆಯಲ್ಲಿ ಮುಖ್ಯ ಗುಮಾಸ್ತರಾಗಿದ್ದರು. ಅವರಿಂದ ಅರಮನೆಯ ಶಿಷ್ಟಾಚಾರಗಳು ಪರಿಚಯವಾದವು’.

‘ನನ್ನ ಇಬ್ಬರು ಅಣ್ಣಂದಿರಾದ ರಾ. ಚಂದ್ರಶೇಖರಯ್ಯ ಹಾಗೂ ರಾ. ಸೀತಾರಾಮಯ್ಯ ಒಟ್ಟಿಗೇ ಹಾಡುತ್ತಿದ್ದರು. ಮೈಸೂರಲ್ಲಿ ಒಮ್ಮೆ
ಸಂಗೀತ ಕಾರ್ಯಕ್ರಮ ನೀಡಿದ ನಂತರ ಅವರಿಗೆ ‘ಮೈಸೂರು ಬ್ರದರ್ಸ್‌’ ಎಂದೇ ಕರೆದರು. ಅವರೊಂದಿಗೆ ಅರಮನೆಯಲ್ಲಿ ಸಂಗೀತ ಕಛೇರಿ ನೀಡಿದ್ದು ಇನ್ನೂ ನೆನಪಿದೆ. ಇದರೊಂದಿಗೆ ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿ ಕೇಳುವುದೇ ಸೊಗಸು. ನನ್ನ ತಮ್ಮ ವಿಶ್ವೇಶ್ವರನ್‌ ವೀಣೆ ನುಡಿಸುತ್ತಿದ್ದ. ಹೀಗೆ ಸಂಗೀತದ ಮನೆತನ ನಮ್ಮದು’.

‘ಮನೆಯಲ್ಲಿ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ನಾನೇ ಸಾಮಾನ್ಯ ಸಂಗೀತಗಾರ. ತಕ್ಕಮಟ್ಟಿಗೆ ಹಾಡುತ್ತಿದ್ದೆ. ಇದರಿಂದ ಕೀಳರಿಮೆ ಕಾಡುತ್ತಿತ್ತು. ಹೀಗಾಗಿ, ಹಾಡುವುದು ಕಡಿಮೆ ಮಾಡಿ ಓದುವುದು ಹೆಚ್ಚು ಮಾಡಿದೆ. ಆಮೇಲೆ ಸಂಗೀತ ಕುರಿತು ಪಾಠ ಮಾಡಿದೆ.
ಸಂಗೀತ ಕುರಿತು 20 ಸಾವಿರ ಪುಟಗಳಷ್ಟು ಬರೆದಿರುವೆ. 13ನೇ ಶತಮಾನದಲ್ಲಿ ಶಾರ್ಕ್‌ದೇವ ‘ಸಂಗೀತ ರತ್ನಾಕರ’ ಎಂಬ ಗ್ರಂಥ ಬರೆದ. ಅದರ ಕುರಿತು ವ್ಯಾಖ್ಯಾನವನ್ನು ಬರೆದು ಅದೇ ಹೆಸರಿನಲ್ಲಿ ಪ್ರಕಟಿಸಿದೆ. ಈ ಕೃತಿಗೆ ಮೈಸೂರು ವಿಶ್ವವಿದ್ಯಾನಿಲಯ 1976ರಲ್ಲಿ ಡಿಲಿಟ್‌ ನೀಡಿ ಗೌರವಿಸಿತು’.

ಇನ್ನೊಂದು ಮಹತ್ವದ ಕೃತಿ ವೀಣಾ ಲಕ್ಷಣ ವಿಮರ್ಶೆ. ಇದರಲ್ಲಿ ನೂರಾರು ಶ್ಲೋಕಗಳಿದ್ದು, ವ್ಯಾಖ್ಯಾನ ಬರೆದಿರುವೆ. 400 ಪುಟಗಳ ಈ ಕೃತಿ ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿತ್ತು. ಇದರೊಂದಿಗೆ ‘ನೃತ್ಯ ಸ್ಟಡಿ ಇನ್‌ ಇಂಡಿಯನ್‌ ಡ್ಯಾನ್ಸ್’, ‘ಭರತನಾಟ್ಯ ಎ ಕ್ರಿಟಿಕಲ್‌ ಸ್ಟಡಿ’, ‘ನರ್ತನ ನಿರ್ಣಯ’ ಎಂಬ ಕೃತಿ 3 ಸಂಪುಟಗಳಲ್ಲಿ ಪ್ರಕಟಗೊಂಡಿದೆ.

ಇವು ಇಂಗ್ಲಿಷಿನಲ್ಲಿ ಪ್ರಕಟಗೊಂಡ ಕೃತಿಗಳು. ನರ್ತನ ನಿರ್ಣಯ ಸಂಪುಟಗಳಿಗೆ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ
ಫೆಲೋಶಿಪ್‌ ಸಿಕ್ಕಿತ್ತು. ಮೈಸೂರಿನ ನಾಲ್ವರು ಸಂಗೀತರಾಜರು ಕೃತಿ ಕೂಡಾ ಪ್ರಮುಖವಾದುದು.


‘ಈಗ 86 ವಯಸ್ಸು. ಮಾತಂಗ ಎಂಬ ಮುನಿ ತಂತ್ರಶಾಸ್ತ್ರ ಕುರಿತು ಶ್ರೀವಿದ್ಯಾ ಎಂಬ ಕೃತಿ ಬರೆದಿದ್ದು, ಅದನ್ನು ಓದುತ್ತಿದ್ದೇನೆ. ಅದರ ಕುರಿತು ಕೃತಿ ಪ್ರಕಟಿಸಬೇಕು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, ಚೆನ್ನೈನ ಸಂಗೀತ ಕಲಾನಿಧಿ ಸೇರಿದಂತೆ ಇನ್ನೂ ಮೊದಲಾದ ಪ್ರಶಸ್ತಿಗಳು ಬಂದಿವೆ. ಈಗ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ರತ್ನ ಎಂದು ಕೇಳಲು ಎಷ್ಟು ಚೆಂದ...’! ಎನ್ನುತ್ತ ಮಾತು ಮುಗಿಸಿದರು.

ವೀಣೆ ಶೇಷಣ್ಣಗೆ ಪ್ರಶಸ್ತಿ ಸಮರ್ಪಣೆ
ಬೆಂಗಳೂರು: ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಸಂಗೀತ ತಜ್ಞ ಮತ್ತು ವಿಮರ್ಶಕ ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ ಅವರು ವಿಖ್ಯಾತ ವೀಣಾವಾದಕರಾಗಿದ್ದ ವೀಣೆ ಶೇಷಣ್ಣನವರ ಮರಿಮಗ. ತುಮಕೂರು ವಿಶ್ವವಿದ್ಯಾಲಯ ನೀಡಿದ ಗೌರವ ಪ್ರೊಫೆಸರ್‌ಶಿಪ್‌ಗೂ  ಪಾತ್ರರಾಗಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ ವಿಮರ್ಶಕ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ಕೇಂದ್ರ ಅಕಾಡೆಮಿ ಈ ಬಾರಿ ನೀಡಿರುವ ಪ್ರಶಸ್ತಿಗೆ ಕರ್ನಾಟಕದಿಂದ ಆಯ್ಕೆಯಾಗಿರುವವರು ಇವರೊಬ್ಬರೇ.

ಈ ಕುರಿತು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡ ಪ್ರೊ. ಸುಬ್ರಹ್ಮಣ್ಯ ಅವರು, ‘ನನ್ನ ಕಿರುಸೇವೆಗೆ ಈ ಪ್ರಶಸ್ತಿ ಸಂದಿರುವುದು ಸಂತಸ ಮೂಡಿಸಿದೆ. ಈ ಗೌರವವನ್ನು ನಾನು ವೀಣೆ ಶೇಷಣ್ಣ ಅವರಿಗೆ ಸಮರ್ಪಿಸುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT