ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಲೋಚನೆಗಳನ್ನು ಬಿತ್ತುವುದೇ ರಂಗಭೂಮಿ ಶಕ್ತಿ’

Last Updated 4 ಡಿಸೆಂಬರ್ 2015, 19:35 IST
ಅಕ್ಷರ ಗಾತ್ರ

ಸೈಯದ್ ಜಮೀಲ್ ಅಹ್ಮದ್, ಬಾಂಗ್ಲಾದೇಶದ ರಂಗಭೂಮಿ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ವಿದ್ವಾಂಸ, ರಂಗಭೂಮಿ ನಿರ್ದೇಶಕ, ಢಾಕಾ ವಿಶ್ವವಿದ್ಯಾಲಯದ ರಂಗಭೂಮಿ ಮತ್ತು ಸಂಗೀತ ವಿಭಾಗದ ಸಂಸ್ಥಾಪಕ ಅಧ್ಯಕ್ಷರಾಗಿರುವ ಸೈಯದ್ ಅವರು ಬಾಂಗ್ಲಾದ ಸಾಂಪ್ರದಾಯಿಕ ರಂಗಭೂಮಿಯಲ್ಲಿ ಕ್ರಿಯಾಶೀಲ ಪ್ರಯೋಗಗಳಿಗೆ ಹೆಸರಾದವರು. ಇತ್ತೀಚೆಗೆ ನಗರದ ರಂಗಶಂಕರಕ್ಕೆ ಬಂದಿದ್ದ ಅವರು ತಮ್ಮ ಅನುಭವಗಳನ್ನು ಸುಮಲತಾ ಎನ್‌. ಅವರೊಂದಿಗೆ ಹಂಚಿಕೊಂಡರು.

* ನಿಮ್ಮ ದೃಷ್ಟಿಯಲ್ಲಿ ‘ರಂಗಭೂಮಿ’ ಎಂದರೆ ಏನು?
ನನಗೆ ರಂಗಭೂಮಿ ಎಲ್ಲವನ್ನೂ ತುಂಬಿಕೊಂಡ ಕಣಜ. ಅದು ‘ಪ್ಯಾಷನ್’. ಜೀವನದ ಬಗ್ಗೆ ಅರಿವು ಮೂಡಿಸುವ ಒಂದು ದಾರಿ. ನನಗೆ ಮಾತನಾಡುವುದು, ಜೀವಿಸುವುದು ಎಲ್ಲವನ್ನೂ ಕಲಿಸಿಕೊಟ್ಟಿದ್ದು  ರಂಗಭೂಮಿಯೇ. ನಾನು ಕ್ರಿಯಾಶೀಲವಾಗಿ ಬದುಕುತ್ತಿರುವುದಕ್ಕೂ ಇದೇ ಕಾರಣ. ಬದುಕಿಗೆ ಅಗತ್ಯವಾಗಿರುವ ಕ್ರಿಯಾಶೀಲತೆ ಮತ್ತು ಕಲ್ಪನಾಶಕ್ತಿಯನ್ನು  ಕಲಿಸಿಕೊಟ್ಟಿರುವುದೇ ರಂಗಭೂಮಿ.

* ನಿಮ್ಮ ರಂಗಭೂಮಿ ಪಯಣದ ಬಗ್ಗೆ ಹೇಳಿ...
ಸ್ವಾತಂತ್ರ್ಯ ಸಮರ ನಡೆಯುತ್ತಿದ್ದ ದಿನಗಳವು. ನನಗಿನ್ನೂ ಹದಿನಾರು ವರ್ಷ ಇದ್ದಿರಬಹುದು. ಎಲ್ಲೆಲ್ಲೂ ಪ್ರಕ್ಷುಬ್ಧ ವಾತಾವರಣ, ಚಡಪಡಿಕೆ ನಮ್ಮ ಪೀಳಿಗೆಯಲ್ಲಿ ತುಂಬಿಹೋಗಿತ್ತು. ಸಮರಗಳು ಎದೆಯಲ್ಲಿ ದೊಡ್ಡ ಗಾಯವನ್ನೇ ಮಾಡಿದ್ದವು. ಇದರಿಂದ ಹೊರಬರುವ ದಾರಿಯ ಹುಡುಕಾಟದಲ್ಲಿದ್ದೆ. ಅಕಸ್ಮಾತ್ ಒಮ್ಮೆ ನಾಟಕವೊಂದನ್ನು ನೋಡಿದೆ.

  ಸಮಸ್ಯೆಯ ಸೂಕ್ಷ್ಮ ಅಭಿವ್ಯಕ್ತಿ ಆಕರ್ಷಕವಾಗಿ ಕಂಡಿತು. ರಂಗಭೂಮಿ ಕ್ರಿಯಾಶೀಲ ಮಾತ್ರವಲ್ಲ, ಅರ್ಥಪೂರ್ಣವಾಗಿಯೂ ಕಂಡಿತು. ನನ್ನ ಅಭಿವ್ಯಕ್ತಿಗೆ ರಂಗಭೂಮಿ ಜೀವಂತ ಮಾಧ್ಯಮ ಎನ್ನಿಸಿತು. ಇಂಟರ್‌ಮೀಡಿಯೇಟ್ ಮುಗಿಯುತ್ತಿದ್ದಂತೆ ಇಂಗ್ಲಿಷ್ ಸಾಹಿತ್ಯವನ್ನು ಆರಿಸಿಕೊಂಡೆ. ಆಗ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಕಲಿಯುವ ಅವಕಾಶ ದೊರೆಯಿತು. ಇಲ್ಲಿ ಮೂರು ವರ್ಷ ಕಲಿತೆ. ಅಲ್ಲಿಂದ ಪಯಣ ಶುರುವಾಯಿತು.

* ನೀವು ಬಿ.ವಿ.ಕಾರಂತರೊಂದಿಗೆ ಕೆಲಸ ಮಾಡಿದ್ದೀರಿ. ಆ ನೆನಪುಗಳನ್ನು ಹಂಚಿಕೊಳ್ಳಿ.
ಇಬ್ರಾಹಿಂ ಅಲ್ಕಾಜಿ ಹಾಗೂ  ಬಿ.ವಿ. ಕಾರಂತರ ಮಾರ್ಗದರ್ಶನ ಸಿಕ್ಕಿದ್ದು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ. ಬಿ.ವಿ. ಕಾರಂತರು ಉತ್ಸಾಹೀ ಕಲಾವಿದ. ಯಾವುದೇ ವಿಷಯವನ್ನು ಮನಸ್ಸಿನಿಂದ ಮಾತನಾಡುತ್ತಿದ್ದರು. ಸಾಂಪ್ರದಾಯಿಕ ರಂಗಭೂಮಿ ಕುರಿತು ನನ್ನ ಮೇಲೆ ತುಂಬಾ ಪ್ರಭಾವ ಬೀರಿದವರು ಅವರು. ಈ ವಿಷಯದಲ್ಲಿ ನನ್ನ ಕಣ್ಣು ತೆರೆಸಿದರು. ಈ ಕ್ಷೇತ್ರದಲ್ಲಿ ಎಷ್ಟು ವೈವಿಧ್ಯವಿದೆ ಎಂದು ಅನುಭವಕ್ಕೆ ತಂದವರೂ ಅವರೇ. ಅವರು ಇಲ್ಲದೇ ಇದ್ದಿದ್ದರೆ ನಾನು ಸಾಂಪ್ರದಾಯಿಕ ರಂಗಭೂಮಿಯೆಡೆಗೆ ಹೋಗುತ್ತಿರಲಿಲ್ಲ. 

* ಸಾಮಾಜಿಕ ಸಮಸ್ಯೆ, ತಲ್ಲಣಗಳಿಗೆ ಬಾಂಗ್ಲಾದೇಶದ ರಂಗಭೂಮಿ ಸ್ಪಂದನ ಹೇಗಿದೆ?
ಇಲ್ಲಿನ ರಂಗಭೂಮಿ ಎಲ್ಲಾ ಸಂದರ್ಭಗಳಲ್ಲೂ ಸಮಸ್ಯೆಗಳಿಗೆ ಸ್ಪಂದಿಸಿದೆ. 1970–80ರ ದಶಕದಲ್ಲಿದ್ದ  ವರ್ಗ ಸಮಸ್ಯೆಯಿಂದ ಹಿಡಿದು ಈಗಿನ ಅಂತರರಾಷ್ಟ್ರೀಯ ಮಟ್ಟದಲ್ಲಿನ ಅಸ್ತಿತ್ವ ಸಮಸ್ಯೆ, ಸ್ತ್ರೀವಾದದವರೆಗೂ ರಂಗಭೂಮಿ ಸಾಕಷ್ಟು ಪ್ರಶ್ನೆಗಳನ್ನು ಎತ್ತಿ ತೋರಿಸಿದೆ. ಸಾಮಾಜಿಕವಾಗಿ ನಾವು ಪ್ರಸ್ತುತವಾಗಿದ್ದೇವೆ. ಅದನ್ನು ಜನರೂ ಗುರುತಿಸಿದ್ದಾರೆ. ಬಾಂಗ್ಲಾದೇಶದಲ್ಲಿ ರಂಗಭೂಮಿಯಲ್ಲಿ ತೊಡಗಿಕೊಂಡಿರುವವರು ಜಾತ್ಯತೀತರಾಗಿಯೇ ಯೋಚಿಸುವವರು. ಭಾಷೆ ಮತ್ತು ಸಂಸ್ಕೃತಿ ಅಸ್ತಿತ್ವಕ್ಕೆ ಪ್ರಾಮುಖ್ಯ. ಧರ್ಮಕ್ಕೆ ನಂತರದ ಆದ್ಯತೆ.  ಇತಿಹಾಸ, ಸಮಕಾಲೀನ, ವಿದೇಶಿ ನಾಟಕಗಳೂ ಇಲ್ಲಿ ಇವೆ. 

* ಬಾಂಗ್ಲಾ ರಂಗಭೂಮಿಯಲ್ಲಿನ ಇತ್ತೀಚೆಗಿನ ಒಲವುಗಳ ಬಗ್ಗೆ ಹೇಳಿ?
ನಿರೂಪಣೆಯಲ್ಲಿ ಬದಲಾವಣೆಯಾಗಿದೆ. ಸಂಭಾಷಣೆಯನ್ನು ಹೇಳುವುದಷ್ಟೇ ಪಾತ್ರವಲ್ಲ. ಅದರ ಒಳ ಹೊರಗನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಶೈಲಿಯಲ್ಲಿ ಬದಲಾವಣೆಗಳಾಗಿವೆ. ಪಾತ್ರವೇ ಸೂತ್ರಧಾರಿಯೂ ಆಗಿರುತ್ತದೆ.  ಸ್ತ್ರೀವಾದಕ್ಕೆ ಸಂಬಂಧಿಸಿದಂತೆ ಹೆಚ್ಚು ನಾಟಕಗಳು ಬರುತ್ತಿರುವುದು ಹೊಸ ಬೆಳವಣಿಗೆ. ಆದಿವಾಸಿಗಳ ಕುರಿತು ಪ್ರಸ್ತುತ  ಸಾಕಷ್ಟು ರಂಗ ಪ್ರಯೋಗಗಳು ನಡೆಯುತ್ತಿವೆ.

* ರಂಗಭೂಮಿಗೆ ಇರುವ ಶಕ್ತಿ ಏನು?
ರಂಗಭೂಮಿಯಿಂದ ಸಮಾಜ ಬದಲಾಗುತ್ತದೋ ಇಲ್ಲವೋ ಆದರೆ ಸಮಸ್ಯೆಯನ್ನು ಗುರುತಿಸುವ ಕೆಲಸವಂತೂ ನಡೆಯುತ್ತದೆ. ಸಮಸ್ಯೆ ಪರಿಹಾರಕ್ಕೆ ದಾರಿ ಹುಡುಕುವ ಆಲೋಚನೆಯನ್ನು ಬಿತ್ತಬಲ್ಲದು. ಪರಿಹಾರ ಕಂಡುಕೊಳ್ಳಲು ಉತ್ತೇಜಿಸಬಹುದು. ಅದೇ ರಂಗಭೂಮಿಯ ಶಕ್ತಿ.

* ರಂಗಭೂಮಿ ಕುರಿತಂತೆ ವಿವಿಧ ದೇಶಗಳನ್ನು ಸುತ್ತಿದ್ದೀರಿ. ಎಲ್ಲಾ ರಂಗಭೂಮಿಯಲ್ಲೂ ನೀವು ಕಂಡಿರುವ ಸಾಮಾನ್ಯ ಅಂಶ ಯಾವುದು?
ವ್ಯಕ್ತಿಯೊಬ್ಬನಿಗೆ ಸಾಮಾನ್ಯ ಅಂಗರಚನೆ ಇದ್ದಂತೆ ರಂಗಭೂಮಿಗೂ ಕೆಲವು ಮೂಲ ರೂಪುರೇಷೆಗಳಿವೆ. ಆದರೆ ಅವುಗಳನ್ನು ಹೇಗೆ ಭಿನ್ನ ನೆಲೆಗಳಲ್ಲಿ ಅಭಿವ್ಯಕ್ತಿಸುತ್ತಿದ್ದಾರೆ ಎಂಬುದರಲ್ಲಿ ವ್ಯತ್ಯಾಸವಿದೆ. ರಂಗಭೂಮಿ ಆಯಾ ದೇಶದ ಸಾಮಾಜಿಕ, ರಾಜಕೀಯ ಅಂಶಗಳನ್ನು ಒಳಗೊಂಡಿರುವುದು ಸಾಮಾನ್ಯ ಅಂಶ ಎನ್ನಬಹುದು. ಇಲ್ಲಿ ನಡೆಯುವ ಘಟನೆಗಳು ಅಲ್ಲೂ ಇರುತ್ತವೆ. ಅವುಗಳ ಅಭಿವ್ಯಕ್ತಿಯಲ್ಲಿ ಭಿನ್ನತೆ ಇರಬಹುದು. ರಂಗಭೂಮಿಯಲ್ಲಿರುವ ಒಂದು ಸಾಮಾನ್ಯ ಅಂಶ ಎಂದರೆ ಕಲಾವಿದರು ಎಲ್ಲಾ ಕಡೆಯೂ ರಂಗಭೂಮಿ ಬಗ್ಗೆ ಅತಿ ಆಸಕ್ತಿ ಹೊಂದಿರುವುದು. ಹಣವಿಲ್ಲದಿದ್ದರೂ ರಂಗಭೂಮಿಗೆಂದೇ ತಮ್ಮ ಸಮಯ ಮೀಸಲಿಡುವ ರಂಗಕರ್ಮಿಗಳು ಎಲ್ಲಾ ಕಡೆಯೂ ಇದ್ದಾರೆ.

* ಈಗಿನ ರಂಗಭೂಮಿ ಎದುರಿಸುತ್ತಿರುವ ಸವಾಲುಗಳೇನು?
ಜೀವನಕ್ಕೆ ಹಣ ಸಂಪಾದಿಸುವುದು ಇಲ್ಲಿ ಸವಾಲು. ಸಾಮಾಜಿಕ ಸಂಗತಿಗಳನ್ನು ಸೂಕ್ಷ್ಮವಾಗಿ ಮುಟ್ಟಿಸುವುದು ಒಂದು ಸವಾಲು. ನಿಮ್ಮ ಮನಸ್ಸಿಗೆ ಇಷ್ಟಬಂದಿದ್ದನ್ನು ಕ್ರಿಯಾಶೀಲವಾಗಿ ಮಾಡಲು, ಇಲ್ಲಿನ ನಿಮ್ಮ ಕನಸನ್ನು ಸಾಕಾರಗೊಳಿಸಲು ಹಣ ಬೇಕು. ಹಾಗಿದ್ದ ಪಕ್ಷದಲ್ಲಿ ಇಷ್ಟವಿಲ್ಲದೆ ನಿಮ್ಮನ್ನು ಹಣಕ್ಕೆ ಮಾರಿಕೊಳ್ಳುವ ಅಗತ್ಯ ಬರುವುದಿಲ್ಲ.

* ರಂಗಭೂಮಿ ಶಿಕ್ಷಣದ ಪ್ರಾಮುಖ್ಯವೇನು?
ರಂಗಶಿಕ್ಷಣ ಇಂದಿನ ಅಗತ್ಯ. ರಂಗಶಿಕ್ಷಣ ಪಡೆಯುವುದಷ್ಟೇ ಅಲ್ಲ, ಶಿಕ್ಷಣ ಪಡೆದವರಿಗೆ ಇಲ್ಲೇ ಕೆಲಸ ಮಾಡಲು ಸಾಧ್ಯವಾಗುವಂಥ ವಾತಾವರಣವೂ ಬೇಕು. ಆದರೆ ಸಾಹಿತ್ಯ ಕಲಿತ ಮಾತ್ರಕ್ಕೆ ಕವಿಯಾಗಬೇಕು ಎಂದೇನಿಲ್ಲ. ಅದು ಒಂದು ಶಿಸ್ತು. ಸಾಹಿತ್ಯದಿಂದ ಜೀವನವನ್ನು ಶಿಸ್ತುಬದ್ಧವಾಗಿ ಅರ್ಥೈಸಿಕೊಳ್ಳಲು ಸಾಧ್ಯವೆಂದಾದರೆ, ರಂಗ ಶಿಕ್ಷಣಕ್ಕೂ ಇದು  ಅನ್ವಯಿಸುತ್ತದೆ. ರಂಗ ಶಿಕ್ಷಣ ಪಡೆದು ನೀವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಬಹುದು. ಆದರೆ ಒಳಗಿನಿಂದ ನಿಮ್ಮನ್ನು ಪ್ರಬುದ್ಧಗೊಳಿಸಬೇಕು.

ನೀವು ಇನ್ನೊಬ್ಬರ ದೃಷ್ಟಿಕೋನವನ್ನು, ಅಭಿಪ್ರಾಯವನ್ನು ಗೌರವದಿಂದ ಕಾಣುತ್ತೀರಿ ಎಂದಾದರೆ ಶಿಕ್ಷಣ ಸಾರ್ಥಕವಾದಂತೆ. ಆದರೆ ಒಂದು ನಾಟಕ ನಡೆಯುತ್ತದೆ ಎಂದಾದರೆ ಅಲ್ಲಿಗೆ ಜನರು ಬರಲು ಮೂಲ ಸೌಕರ್ಯಗಳೂ ಬೇಕಲ್ಲವೇ, ಅವುಗಳ ನಿರ್ವಹಣೆಯೂ ಶಿಸ್ತುಬದ್ಧವಾಗಿರಬೇಕಲ್ಲವೇ? ಅದಕ್ಕೆ ಶಿಕ್ಷಣ ಅಗತ್ಯ. ಎಲ್ಲಾ ವಿಶ್ವವಿದ್ಯಾಲಯಗಳು ಈ ನಿಟ್ಟಿನಲ್ಲಿ ಆಲೋಚಿಸಬೇಕು.

* ಭಾರತೀಯ ರಂಗಭೂಮಿ ಕುರಿತು ನಿಮ್ಮ ಅಭಿಮತವೇನು?
ವೈವಿಧ್ಯಗಳನ್ನು ತುಂಬಿಕೊಂಡಿದೆ ಇಲ್ಲಿನ ರಂಗಭೂಮಿ. ಇಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ  ಸಾಕಷ್ಟು ಭಿನ್ನತೆಯಿದೆ. ಆದರೆ ಈ ಭಿನ್ನತೆಗಳನ್ನು ಒಪ್ಪಿಕೊಂಡಿರುವುದರಲ್ಲಿ ಭಾರತದ ಶಕ್ತಿ ಇದೆ. ಭಿನ್ನ ಅಭಿಪ್ರಾಯ, ಆಲೋಚನೆಗಳನ್ನು ಗೌರವದಿಂದ ಒಪ್ಪಿಕೊಂಡು ಅನುಸರಿಸುತ್ತಿರುವುದು ಧನಾತ್ಮಕ ಅಂಶ. ಸಾಂಪ್ರದಾಯಿಕ, ಪಾಶ್ಚಾತ್ಯ, ಪ್ರೊಸೇನಿಯಂ, ನಾನ್ ಪ್ರೊಸೇನಿಯಂಗಳಲ್ಲಿ ಹಲವು ರೀತಿಯ ಪ್ರಯೋಗಗಳು ನಡೆಯುತ್ತಿವೆ.

* ರಂಗಭೂಮಿಯಲ್ಲಿ ಯುವಜನರ ಒಳಗೊಳ್ಳುವಿಕೆ ಹೇಗಿದೆ?
ಉತ್ತಮ ರೀತಿ ಇದೆ. ಯುವಜನತೆ ನಾಟಕಗಳೆಡೆಗೆ ಹಿಂದೆಂದಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮುಖ ಮಾಡುತ್ತಿದ್ದಾರೆ. ಕೆಲವರು ಇಲ್ಲಿ ಉಳಿದರೆ, ಇನ್ನೂ ಕೆಲವರು ಸಿನಿಮಾಗಳೆಡೆಗೆ ಹೋಗುತ್ತಾರೆ. ಆದರೆ ಎಲ್ಲಿಯವರೆಗೂ ಒಂದು ಕಲೆ ಇನ್ನೊಂದು ಕಲೆಯನ್ನು ಗೌರವಿಸುತ್ತದೋ, ಎಲ್ಲಿಯವರೆಗೆ ಒಂದು ಕಲೆಯನ್ನು ಇನ್ನೊಂದು ಕಲೆ ಕೊಲೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಮಿಶ್ರ ಆಲೋಚನೆಗಳಿರುವುದು ಒಳ್ಳೆಯದೇ. ಈ ವಿಷಯದಲ್ಲಿ ಭಾರತ ಧನಾತ್ಮಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT