ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈಗೂಡದ ಗಾಂಧಿ ಮಹಾಕಾವ್ಯ ರಚನೆ’

Last Updated 25 ಜನವರಿ 2014, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ತಿಂಗಳಷ್ಟೇ ಕಣ್ಮರೆಯಾದ ಹಿರಿಯ ಸಾಹಿತಿ ಜಿ.ಎಸ್‌. ಶಿವರುದ್ರಪ್ಪ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಶನಿವಾರ ಬಲು ವಿಶಿಷ್ಟವಾಗಿ ಶ್ರದ್ಧಾಂಜಲಿ ಅರ್ಪಿಸಿತು.

ಕಲಾವಿದರು ಜಿಎಸ್‌ಎಸ್‌ ಅವರು ಬರೆದ ಗೀತೆಗಳನ್ನು ಹಾಡಿದರೆ, ಶಿಷ್ಯ­ಬಳಗ ಒಡನಾಟದ ಆತ್ಮೀಯ ಕ್ಷಣಗಳನ್ನು ಮೆಲುಕು ಹಾಕುವ ಮೂಲಕ ನುಡಿ ನಮನ ಸಲ್ಲಿಸಿತು. ಕೊನೆಗೆ ಪ್ರದರ್ಶಿಸಲಾದ ಜಿಎಸ್‌ಎಸ್‌ ಬದುಕು ಮತ್ತು ಬರಹಗಳನ್ನು ಪ್ರತಿಬಿಂಬಿಸುವ ಸಾಕ್ಷ್ಯ­ಚಿತ್ರದಲ್ಲಿ ಸ್ವತಃ ‘ಹಣತೆ ಕವಿ’ಯೇ ತಮ್ಮ ಕಾವ್ಯವನ್ನು ವಾಚನ ಮಾಡಿದರು!

ಆರು ದಶಕಗಳ ಒಡನಾಡಿಯಾಗಿದ್ದ ಪ್ರೊ.ಕೆ.ಜಿ.ನಾಗ­ರಾಜಪ್ಪ, ‘ಜಿಎಸ್‌ಎಸ್‌ ಅವರ ಎಲ್ಲ ಬರಹಗಳಿಗೂ ಮೊದಲ ಓದುಗ ನಾನು’ ಎಂದು ಹೆಮ್ಮೆಯಿಂದ ಹೇಳಿದರು.

‘ಮೈಸೂರಿನಲ್ಲಿ ವಿದ್ಯಾರ್ಥಿ ಜೀವನ ಪೂರೈಸಿ ಸ್ವತಃ ಮೇಷ್ಟ್ರಾ­ದರೂ ತೀ.ನಂ. ಶ್ರೀಕಂಠಯ್ಯ ಅವರು ಕಾವ್ಯ ಮೀಮಾಂಸೆ ಪಾಠ ಮಾಡುವಾಗ ಜಿಎಸ್‌ಎಸ್‌ ನಮ್ಮೊಡನೆ ತರಗತಿಯಲ್ಲಿ ಕುಳಿತು ಆಲಿಸುತ್ತಿದ್ದರು’ ಎಂದು ನೆನೆದರು.

‘ಸಿನಿಮಾ ನಟ–ನಟಿಯರ ಕುರಿತು ಈಗಿನ ದಿನಗಳಲ್ಲಿ ಗಾಸಿಪ್‌­ಗಳು ಹುಟ್ಟಿಕೊಳ್ಳುವಂತೆ ಆಗ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ಸಾಹಿತಿಗಳ ಮೇಲೆ ಗಾಸಿಪ್‌ಗಳು ಕೇಳಿ ಬರು­ತ್ತಿದ್ದವು. ಜಿಎಸ್‌ಎಸ್‌ ಕೂಡ ಅದಕ್ಕೆ ಹೊರತಾಗಿರಲಿಲ್ಲ. ಆದರೆ, ವಿವರಗಳಿಗೆ ನಾನು ಹೋಗುವುದಿಲ್ಲ’ ಎಂದು ನಾಗರಾಜಪ್ಪ ಹೇಳಿದರು.

‘ಮೇಲ್ಜಾತಿಗೆ ಸೇರಿದ ಪ್ರಾಧ್ಯಾಪಕರ ತಂಡ ಜಿಎಸ್‌ಎಸ್‌ ಅವರನ್ನು ತುಳಿಯಲು ಯತ್ನಿಸಿತು. ಮಠ–ಮಾನ್ಯಗಳು, ರಾಜಕಾರಣಿಗಳ ಬೆಂಬಲ ಸಹ ಅವರಿಗೆ ಇರಲಿಲ್ಲ. ಶಿಷ್ಯರನ್ನೇ ಅವರ ವಿರುದ್ಧ ಎತ್ತಿ ಕಟ್ಟ­ಲಾಯಿತು. ವಸ್ತುನಿಷ್ಠ ವಿಮರ್ಶೆ ಬರೆದಿ­ದ್ದಕ್ಕೆ ನವ್ಯದವರೂ ವಿರುದ್ಧ­ವಾದರು’ ಎಂದು ಮೆಲುಕು ಹಾಕಿದರು.

‘ಗಾಂಧಿ ಕುರಿತು ಮಹಾ-­ಕಾವ್ಯ ರಚಿಸುವ ಅವರ ಆಸೆ ಕೈಗೂಡಲಿಲ್ಲ’ ಎಂದು ವ್ಯಥೆಪಟ್ಟರು.ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ, ‘ಹೃದಯದ ಆರ್ದ್ರ ಧ್ವನಿಗೆ ಮಾತು ಕೊಟ್ಟ ಕವಿ ಜಿಎಸ್‌ಎಸ್‌’ ಎಂದು ಬಣ್ಣಿಸಿ­ದರು.‘ಎಲ್ಲೋ ಮಗು ಅಳುವ’ ಸದ್ದನ್ನು ಕೇಳಿಸಿಕೊಂಡ ಅವರು, ‘ಕಾಣದ ಕಡಲಿಗೆ ಹಂಬಲಿ­ಸಿದೆ ಮನ’ ಎನ್ನುವ ಮೂಲಕ ತಾಯಿಯ ಮಮತೆಯನ್ನೂ ಬಯಸಿದವರು’ ಎಂದು ಹೇಳಿದರು.

‘ಜಿಎಸ್‌ಎಸ್‌ ಕಾವ್ಯದಲ್ಲಿ ಭಾವ ಪ್ರಕಾಶವೇ ಮುಖ್ಯ­ವಾಗಿದೆ’ ಎಂದ ಅವರು, ‘ಕಂಬನಿಯೇ ತೀರ್ಥ, ನಿಟ್ಟುಸಿರೇ ಧೂಪ ಎನ್ನುವಷ್ಟು ಅವರ ಕಾವ್ಯ ಮುಗ್ಧ. ಆದರೆ, ಅವರ ಗದ್ಯ ಅತ್ಯಂತ ನಿಖರವಾದುದು, ನಿಷ್ಠುರ­ವಾದುದು’ ಎಂದು ವಿಶ್ಲೇಷಿಸಿದರು.

ಸಾಹಿತಿ ಶೂದ್ರ ಶ್ರೀನಿವಾಸ, ‘ನನ್ನ ಹೆಸರಿನ ಆರಂಭದಲ್ಲಿ ಶೂದ್ರ ಹೆಸರು ಸೇರಿಕೊಳ್ಳಲು ಜಿಎಸ್‌ಎಸ್‌ ಅವರೇ ಕಾರಣ. ನನ್ನ ಸಾಹಿತ್ಯದ ಅರಿವಿನಲ್ಲಿ ಅವರ ಪಾತ್ರ ಆಳವಾಗಿದೆ’ ಎಂದು ನೆನೆದರು.

ಕವಯತ್ರಿ ಎಂ.ಆರ್‌. ಕಮಲ, ‘ಎಂ.ಎ ಓದುವಾಗ ನಮ್ಮದು ಕಪಿ­ಚೇಷ್ಟೆ ಗುಂಪಾಗಿತ್ತು. ಮಹಾನ್‌ ತರಲೆಗಳಾದ ನಮ್ಮ ಸ್ವಾತಂತ್ರ್ಯಕ್ಕೆ ಜಿಎಸ್‌ಎಸ್‌ ಮೇಷ್ಟ್ರು ಯಾವ ಅಡ್ಡಿ­ಯನ್ನೂ ಉಂಟು ಮಾಡಲಿಲ್ಲ’ ಎಂದು ಸ್ಮರಿಸಿದರು.

‘ಒಮ್ಮೆ ಅಗ್ರಹಾರ ಕೃಷ್ಣಮೂರ್ತಿ ಕ್ಷಮೆ ಕೇಳಿ ಪತ್ರ ಬರೆದರು. ಅದಕ್ಕೆ ಜಿಎಸ್‌ಎಸ್‌, ಎಲ್ಲ ಭಾವನೆಗಳಿಗೆ ಸಭ್ಯತೆ­ಯಿಂದ ಇಸ್ತ್ರಿ ಹೊಡೆದ ವರ್ತನೆ ನನಗೆ ಇಷ್ಟವಾಗುವುದಿಲ್ಲ. ಅಲ್ಲದೆ, ನೀವು ಮಾಡಿದ ತರಲೆ ಸಹ ನನಗೆ ನೆನಪಿಲ್ಲ ಎಂಬ ಉತ್ತರ ನೀಡಿದ್ದರು’ ಎಂದು ಹೇಳಿದರು.

‘ಚಿತ್ರಾಂಗದ ಖಂಡಕಾವ್ಯದ ಪಾಠ ಮಾಡುವಾಗ ಮೇಷ್ಟ್ರು ನನಗೆ ಗೇಲಿ ಮಾಡಿದ್ದನ್ನು ನಾನು  ಮರೆತಿಲ್ಲ’ ಎಂದು ಮತ್ತೊಂದು ನೆನಪು ಹೆಕ್ಕಿ ತೆಗೆದರು.
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ಅವರ ತಂಡದವರು ಜಿಎಸ್‌ಎಸ್‌ ಅವರ ಗೀತೆಗಳನ್ನು ಹಾಡಿದರು.ಹಿರಿಯ ವಿದ್ವಾಂಸ ಪ್ರೊ.ಎಂ.­ಎಚ್‌. ಕೃಷ್ಣಯ್ಯ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದ ಜಿಎಸ್‌ಎಸ್‌ ಕುರಿತ ಸಾಕ್ಷ್ಯಚಿತ್ರವನ್ನೂ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT