ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿ.ವಿ ಮಾಧ್ಯಮದಿಂದ ಭಾರತೀಯ ಸಂಸ್ಕೃತಿ ನಾಶ’

ಮನೆಯಂಗಳದಲ್ಲಿ ಮಾತುಕತೆ
Last Updated 23 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಟಿವಿ ಮಾಧ್ಯಮವು ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ’ ಎಂದು ರಂಗಕರ್ಮಿ ಕೆ.ವಿ.ಅಕ್ಷರ ವಿಷಾದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಸ್ಕೃತಿ ಕಟ್ಟುವ ಕೆಲಸವನ್ನು ಟಿವಿ ಮಾಧ್ಯಮ ಮುರಿಯುತ್ತಿದೆ.  ಚಿಂತಕರು ಮತ್ತು ವಿಚಾರವಂತರು ಟಿವಿಯನ್ನು ಅರ್ಥಮಾಡಿಕೊಂಡಿಲ್ಲ. ಅದರಲ್ಲಿ ಬರುವ ಜಾಹೀರಾತು ನಮಗೆ ಅನಗತ್ಯವಾದ ವಸ್ತುಗಳನ್ನು ಅಗತ್ಯವೆಂಬಂತೆ ಬಿಂಬಿಸಿ ನಮ್ಮಲ್ಲಿ ಕೊಳ್ಳುವ ಭಾವವನ್ನು ಮೂಡಿಸುತ್ತಿದೆ. ಜಾಗತೀಕರಣ ಹಾರ್ಡ್‌ವೇರ್, ಟಿವಿ ಮಾಧ್ಯಮ ಸಾಫ್ಟ್‌ವೇರ್‌ ಆಗಿದೆ. ಇಂದು ಸುಮಾರು 3,000 ಚಾನೆಲ್‌ಗಳು ಲಭ್ಯವಿವೆ’ ಎಂದು ಹೇಳಿದರು.

ಎಂಜಿನಿಯರ್‌ ಆಗುವಾಸೆ: ‘ನನಗೆ  ಮೊದಲು ರಂಗಭೂಮಿಯಲ್ಲಿ ಆಸಕ್ತಿಯಿರಲಿಲ್ಲ. ವಿಜ್ಞಾನ­ವನ್ನು ಅಧ್ಯಯನ ಮಾಡಿ, ಸುರತ್ಕಲ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದಬೇಕೆಂಬ ಆಸೆಯಿತ್ತು. ನನ್ನ ಆಸೆಗೆ ತಂದೆ ಎಂದಿಗೂ ಅಡ್ಡಿಪಡಿಸಿರಲಿಲ್ಲ’ ಎಂದರು.

‘70ರ ದಶಕದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯಿತ್ತು. ಅದು ರಾಜಕೀಯ ಪ್ರಜ್ಞೆ ಬೆಳೆಯುತ್ತಿದ್ದ ಕಾಲ. ವಿಜ್ಞಾನದ ಅಧ್ಯಯನಕ್ಕಿಂತ ರಂಗಭೂಮಿಯಲ್ಲಿ ತೊಡಗಿಸಿಕೊಂಡರೆ ಸಮಾಜ ಕಟ್ಟಬಹುದು ಎಂಬ ಭಾವನೆ ನನ್ನಲ್ಲಿ ಮೊಳೆಯಿತು. ಇದರಿಂದ ನನ್ನ ಆಸಕ್ತಿ ರಂಗಭೂಮಿಯತ್ತ ಬೆಳೆಯಿತು’ ಎಂದು ತಾವು ರಂಗಭೂಮಿಗೆ ಬಂದ ಬಗೆಯನ್ನು ಹಂಚಿಕೊಂಡರು.

ರಂಗಭೂಮಿ ಆಯ್ಕೆಯಲ್ಲಿ ಗೊಂದಲ: ‘ನಾನು ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡಾದ ಎರಡು ಮಾದರಿಗಳಿದ್ದವು. ಒಂದು ಬಿ.ವಿ.ಕಾರಂತ ಅವರ ಮನಮೋಹಕವಾದ, ಆಕರ್ಷಕವಾದ ಮತ್ತು ಪ್ರೇಕ್ಷಕರಿಗೆ ಮ್ಯಾಜಿಕ್‌ ಮಾಡುವ ರಂಗಭೂಮಿ. ಅದು ಕಲೆಗಾಗಿ ಕಲೆ ಎಂಬಂಥ ಮಾದರಿ.

ಆ ನಂತರ ಬಂದ ಪ್ರಸನ್ನ ಅವರು ಸಮಾಜಕ್ಕಾಗಿ ರಂಗಭೂಮಿ ಎಂದು ರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗವನ್ನು ಆರಂಭಿಸಿದರು. ರಂಗಭೂಮಿಗೆ ಸಾಮಾಜಿಕ ಬದ್ಧತೆಯಿರಬೇಕು ಎಂಬುದನ್ನು ಪ್ರಸನ್ನ ಬಿಂಬಿಸಿದರು. ಆದರೆ, ಇವೆರಡು ಮಾದರಿಗಳಿಗಿಂತ ಭಿನ್ನವಾದ ಮತ್ತೊಂದು ಮಾರ್ಗವನ್ನು ಕಂಡುಕೊಳ್ಳುವ ಒತ್ತಡ ನನ್ನಲ್ಲಿ ಹೆಚ್ಚಾಗಿತ್ತು’ ಎಂದರು.

‘ನಾಟಕಕಾರ ಪೀಟರ್‌ ಹೇಳಿದಂತೆ, ರಂಗಭೂಮಿ ಒಂದು ಪ್ರವೃತ್ತಿ. ಅತ್ಯುತ್ತಮ ರಂಗಭೂಮಿ ಎಂದರೆ ಅದು ಸೆಕ್ಸ್‌ ಇದ್ದ ಹಾಗೆ. ರಂಗಭೂಮಿಯು ಒಟ್ಟೊಟ್ಟಿಗೆ ಸಮಾಜ ಮತ್ತು ಕಲೆಯನ್ನು ತನ್ನೊಳಗೆ ಇಟ್ಟುಕೊಳ್ಳಬೇಕು. ಅಂತಹ ರಂಗಭೂಮಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ. ರಂಗಭೂಮಿಯನ್ನು ಸಾಂಸ್ಥಿಕ ರೂಪದಲ್ಲಿ ಕಟ್ಟಬೇಕು ಎಂಬ ಸತ್ಯ ಹೊಳೆಯಿತು’ ಎಂದು ಹೇಳಿದರು.

‘ಯಕ್ಷಗಾನ ಮೇಳದ ಪ್ರಭಾವದಿಂದ ನೀನಾಸಂ ತಿರುಗಾಟದ ನಾಟಕ ತಂಡವನ್ನು ಕಟ್ಟಿದೆ. ನಾಟಕ ಎಂದರೆ ಅದು ನಿತ್ಯವೂ ಕಲೆಯನ್ನು ಕಟ್ಟವ ಕಾಯಕ. ರಂಗಭೂಮಿಯನ್ನು  ಕಟ್ಟುವುದೆಂದರೆ, ಸಮಾಜವನ್ನು ಕಟ್ಟುವುದೇ ಆಗಿದೆ’ ಎಂದು ನುಡಿದರು.

ಸಂಸ್ಕೃತಿ ಕಟ್ಟುವ ಕೆಲಸ: ‘ನೀನಾಸಂ ತಿರುಗಾಟದ ನಂತರ ಮುಂದೇನು ಎಂಬ ಪ್ರಶ್ನೆ ಮೂಡಿತು. ಆಗ, ಕನ್ನಡ ರಂಗಭೂಮಿಯನ್ನು ಕಟ್ಟುವುದಷ್ಟೇ ಅಲ್ಲ, ಸಂಸ್ಕೃತಿಯನ್ನೂ ಕಂಡುಕೊಳ್ಳಬೇಕು ಎಂದು ಅನಿಸಿತು. ಸಂಸ್ಕೃತಿ ಎಂದರೆ, ನಾವು ನಮ್ಮ ಬದುಕಿಗೆ ಅರ್ಥ ಕಲ್ಪಿಸಿಕೊಂಡು ಒಂದಕ್ಕೊಂದು ಹೆಣೆಯುವ ಸಂಸ್ಕೃತಿ. ರಂಗಭೂಮಿ, ಚಿತ್ರಕಲೆ, ಸಂಗೀತ, ಸಾಹಿತ್ಯ, ನೃತ್ಯ ಹೀಗೆ ವಿವಿಧ ಕಲಾ ಪ್ರಕಾರಗಳ ನಡುವಿನ ಸಂವಹನ ಮತ್ತು ಬಂಧವನ್ನು ಗಟ್ಟಿಗೊಳಿಸುವುದೇ ಸಂಸ್ಕೃತಿಯನ್ನು ಕಟ್ಟುವ ಕೆಲಸ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT