ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಲಿ-ಕಲಿ’: ಮುದ್ರಣ ದೋಷಕ್ಕೆ ಬಲಿ

ರೆಕ್ಕೆ ಮೂಡದ ಮೀನು-, ಗುಹೆ ಸೇರದ ಸಿಂಹ
Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ಶಿರಾ: ಸರ್ಕಾರಿ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಮೂರನೇ ತರಗತಿವರೆಗಿನ ‘ನಲಿ-ಕಲಿ’ ಪಠ್ಯಕ್ರಮ ಸರಣಿಯಲ್ಲಿ ಅನೇಕ ತಪ್ಪುಗಳು ನುಸು­ಳಿದ್ದು, ಇದು ಮಕ್ಕಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.

‘ನಲಿ -ಕಲಿ’ ಕಲಿಕಾ ವಿಧಾನವನ್ನು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾತ್ರ ಅನುಸರಿಸಲಾಗುತ್ತಿದೆ. ಈ ವಿಧಾನ­ದಲ್ಲಿ ಅಭ್ಯಾಸ ಪುಸ್ತಕ, ಕಾರ್ಡ್ ಹಾಗೂ ಪ್ರಗತಿ ನೋಟವೆಂಬ ಪರಸ್ಪರ ಸಂಬಂಧವುಳ್ಳ ಪಠ್ಯಕ್ರಮ ಅಳವಡಿಸ­ಲಾಗಿದೆ. ಇದರಲ್ಲಿ ಮೈಲಿಗಲ್ಲು -ಮೆಟ್ಟಿಲು ಎಂಬ ಹಂತಗಳಿದ್ದು, ಮೊದ­ಲಿಗೆ ಕಾರ್ಡ್‌ನಲ್ಲಿರುವ ಮೆಟ್ಟಿಲು­ಗ­ಳನ್ನು ಕಲಿತು ನಂತರ ಕ್ರಮವಾಗಿ ಅಭ್ಯಾಸ ಪುಸ್ತಕದ ಮೆಟ್ಟಿಲುಗಳನ್ನು ಕಲಿಯಬೇಕಾಗುತ್ತದೆ.

ಹೀಗೆ ಪ್ರತಿಯೊಂದು ಮೆಟ್ಟಿಲು­ಗಳನ್ನು ಕಲಿತ ನಂತರ ಮಕ್ಕಳು ತಮ್ಮ ಕಲಿಕಾ ಮಟ್ಟವನ್ನು ‘ಪ್ರಗತಿ ನೋಟ’­ದಲ್ಲಿ ಗುರುತಿಸುತ್ತಾರೆ. ಅಂದರೆ ಅಭ್ಯಾಸ ಪುಸ್ತಕ, ಕಾರ್ಡ್ ಹಾಗೂ ಪ್ರಗತಿ ನೋಟಕ್ಕೆ ಪರಸ್ಪರ ಸಂಬಂಧ­ವಿದ್ದು, ಮಕ್ಕಳ ಕಲಿಕೆಗೆ ಇವು ಒಂದ­ಕ್ಕೊಂದು ಪೂರಕವಾಗಿವೆ.

ಆದರೆ, 2014–-15ನೇ ಸಾಲಿನಲ್ಲಿ ಶಾಲೆಗಳಿಗೆ ಸರಬರಾಜಾಗಿರುವ ‘ನಲಿ- ಕಲಿ’ ಪಠ್ಯ ಸರಣಿಯಲ್ಲಿ ಅನೇಕ
ತಪ್ಪು­ಗಳಿದ್ದು, ಅಭ್ಯಾಸ ಪುಸ್ತಕ, ಕಾರ್ಡ್ ಹಾಗೂ ಪ್ರಗತಿ ನೋಟಗಳು ಒಂದ­ಕ್ಕೊಂದು ತಾಳೆ ಹೊಂದದೆ ಮಕ್ಕಳು, ಶಿಕ್ಷಕರು ಗೊಂದಲ­ ಗೊಂಡಿ­ದ್ದಾರೆ.

ಮೂರನೇ ತರಗತಿಯ ಗಣಿತ ಅಭ್ಯಾಸ ಪುಸ್ತಕದ 2ನೇ ಮೈಲಿ 42ನೇ ಮೆಟ್ಟಿಲಿನಲ್ಲಿ ‘ಸಿಂಹಕ್ಕೆ ತನ್ನ ಗುಹೆ ಸೇರಲು ದಾರಿ ತೋರಿಸು’ ಎಂಬ ಚಟು­ವ­ಟಿಕೆ ಇದೆ. ಇದರಲ್ಲಿ ಕೊಟ್ಟಿ­ರುವ ಸಂಖ್ಯೆ­ಗಳನ್ನು ಅನುಕ್ರಮವಾಗಿ ಏರಿಕೆ ಕ್ರಮದಲ್ಲಿ ಗೆರೆ ಎಳೆದು ಜೋಡಿಸಿ ಸಿಂಹಕ್ಕೆ ಗುಹೆಯನ್ನು ತಲುಪಲು ಸಹಾಯ ಮಾಡಬೇಕು. ಆದರೆ ಇಲ್ಲಿ ಕೊಟ್ಟಿ­ರುವ ಸಂಖ್ಯೆಗಳು ತಪ್ಪಾಗಿರುವ ಕಾರಣ ಸಿಂಹ ಗುಹೆ ಸೇರುವುದೇ ಇಲ್ಲ. ಇದೇ ಚಟುವಟಿಕೆ ಕಳೆದ ವರ್ಷವೂ ಇತ್ತು, ಅಲ್ಲಿ ಸಿಂಹ ಗುಹೆ ಸೇರುತಿತ್ತು. ಈ ಬಾರಿ ಮುದ್ರಣ ದೋಷವೇ ಸಿಂಹ ಗುಹೆ ಸೇರದಿರಲು ಕಾರಣ ಎಂದು ಶಿಕ್ಷಕರು ಹೇಳುತ್ತಾರೆ.

ಮೂರನೇ ತರಗತಿ ಗಣಿತದ 12ನೇ ಮೈಲಿ­ಗಲ್ಲು 194ನೇ ಮೆಟ್ಟಿಲಿನಲ್ಲಿ ಕೊಟ್ಟಿ­­ರುವ ಚಟುವಟಿಕೆಯಲ್ಲಿ ಭಾಗಾ­ಕಾರ ಲೆಕ್ಕದ ಭಾಗಲಬ್ದ ಸಂಖ್ಯೆಗಳನ್ನು ಅನು­­­­ಸರಿಸಿ ‘ನಾನು ಯಾರು?’ ಎಂಬ ಚಿತ್ರಕ್ಕೆ ಬಣ್ಣ ತುಂಬಬೇಕು. ಆದರೆ ಭಾಗ­ಲಬ್ದ ಸಂಖ್ಯೆಗಳನ್ನು ಅನುಸರಿಸಿ ಬಣ್ಣ ತುಂಬಿ­­ದರೆ ಮೀನಿನ ಚಿತ್ರ ಅಸ್ಪಷ್ಟವಾಗಿ ಮೂಡು­ತ್ತದೆ. ಮೀನಿನ ರೆಕ್ಕೆಗೆ ಬಣ್ಣ ತುಂಬುವ ಸಂಖ್ಯೆಗಳು ತಪ್ಪಾಗಿ ಮುದ್ರಿತ­ವಾಗಿ ಮೀನಿಗೆ ರೆಕ್ಕೆಗಳೇ ಇಲ್ಲ­ವಾಗುತ್ತವೆ.

ಎರಡನೇ ತರಗತಿಯ 7ನೇ ಮೈಲಿ­ಗಲ್ಲಿನ 146ನೇ ಕಾರ್ಡಿನಲ್ಲಿ ಕೋಳಿಗಳ ಜೊತೆ ಮರಿಗಳಿರುವ ಚಿತ್ರ ಇದೆ. ಪ್ರಗತಿ ನೋಟದಲ್ಲಿ ಹುಂಜದ ಚಿತ್ರವಿದೆ. ಈ ಚಟುವಟಿಕೆಯಲ್ಲಿ ಹುಂಜ ಭಾಗಕಾರ ಲೆಕ್ಕದ ಸೂಚಕವಾದರೆ ಕೋಳಿ ಮತ್ತು ಮರಿಗಳು ಬೇರೊಂದು ಸೂಚಕವಾಗಿರು­ತ್ತವೆ. ಆದರೆ, ಪರಸ್ಪರ ತಾಳೆಯಾಗದೆ ಮಕ್ಕಳಿಗೆ ಗೊಂದಲ­ವುಂಟಾಗುತ್ತದೆ. ಇದೇ ತರಗತಿಯ ಇನ್ನೊಂದು ಕಾರ್ಡಿ­ನಲ್ಲಿ ಏರೋಪ್ಲೇನ್ ಚಿಟ್ಟೆ ಇದ್ದು, ಪ್ರಗತಿ­ನೋಟದಲ್ಲಿ ಮಿಡತೆ ಚಿಟ್ಟೆ. ಇದೂ ತಾಳೆ ಆಗುವುದಿಲ್ಲ.

ಒಂದನೇ ತರಗತಿ 1ನೇ ಮೈಲಿಗಲ್ಲಿನ 44ನೇ ಕಾರ್ಡಿನಲ್ಲಿ ಬಿಟ್ಟ ಸಂಖ್ಯೆಗಳನ್ನು ಬರೆಯಲು ಸೂಚಿಸಿದ್ದು, ಕ್ರಮವಾಗಿ 1,2,3,4,5 ಬರೆಯಬೇಕು. ಆದರೆ 5 ಬರುವ ಸ್ಥಾನದಲ್ಲಿ 3 ಮುದ್ರಣ­ವಾ­ಗಿದೆ. ಹೀಗಾಗಿ ಒಂದನೇ ತರಗತಿ ಮಕ್ಕಳು ಅಂಕಿಗಳನ್ನು ತಪ್ಪಾಗಿ 1, 2, 5, 4, 3 ಎಂದು ತಪ್ಪಾಗಿ ಕಲಿಯಲು ಆ ಕಾರ್ಡ್ ಕಾರಣವಾಗುತ್ತದೆ.

‘ನಲಿ-ಕಲಿ’ಯ 1, 2 ಮತ್ತು 3ನೇ ತರ­ಗತಿ­ಯಲ್ಲಿ ಸಾಕಷ್ಟು ತಪ್ಪುಗಳು ಇದ್ದು, ಅನೇಕ ತಪ್ಪುಗಳು ಇನ್ನೂ ಶಿಕ್ಷಕರ ಗಮನಕ್ಕೆ ಬಂದಿಲ್ಲ. ‘ಬೋಧಿಸುತ್ತಾ ಹೋದಂತೆ ಮತ್ತಷ್ಟು ತಪ್ಪುಗಳು ಪತ್ತೆ­ಯಾಗುವ ಸಾಧ್ಯತೆ ಇದೆ’ ಎಂದು ಶಿಕ್ಷಕಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT