ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾಪ್ರಭುತ್ವದ ಪೋಷಾಕಿನಲ್ಲಿ ಸರ್ವಾಧಿಕಾರ’

Last Updated 16 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವಿದ್ಯಾಗಿರಿ (ಮೂಡುಬಿದಿರೆ): ‘ಪ್ರಜಾ­ಪ್ರಭು­ತ್ವದ ಪೋಷಾಕಿನಲ್ಲಿ ಸರ್ವಾಧಿ­ಕಾರ ತಲೆ ಎತ್ತಿ ದೇಶವನ್ನು ವಿನಾಶದತ್ತ ಕೊಂಡೊಯ್ಯುವ ಪ್ರಯತ್ನ ನಡೆಯು­ತ್ತಿದೆ. ಈ ಆತಂಕ ನಿಜವಾಗಬಾರದು ಎಂದಾದರೆ ಜನಪರ ಹೋರಾಟ­ ಆರಂಭವಾಗಲೇಬೇಕು’ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ಇಲ್ಲಿ ನಡೆಯುತ್ತಿರುವ ಆಳ್ವಾಸ್‌ ನುಡಿಸಿರಿಯ ಮೂರನೇ ದಿನವಾದ ಭಾನುವಾರ ‘ರಾಜಕಾರಣ: ವರ್ತಮಾ­ನದ ತಲ್ಲಣಗಳು’ ಎಂಬ ವಿಷಯದ ಮೇಲೆ ಅವರು ವಿಶೇಷ ಉಪನ್ಯಾಸ ನೀಡಿದರು. ‘ಅಮೆರಿಕದಲ್ಲಿ ಮಾರ್ಟಿನ್‌ ಲೂಥರ್‌ ಕಿಂಗ್‌ ಕಪ್ಪು ಜನಾಂಗದ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯವನ್ನು ಪ್ರತಿಭಟಿಸಿ ಯಶಸ್ವಿಯಾದುದು ಇಂತಹ ಜನಪರ ಹೋರಾಟದಿಂದಲೇ. ಈಗ ನಮ್ಮಲ್ಲೂ ಅಂತಹ ಹೋರಾಟ ರೂಪು­ಗೊಳ್ಳಬೇಕಾದ ಅಗತ್ಯ ಎದುರಾಗುವ ಲಕ್ಷಣ ಕಾಣಿಸುತ್ತಿದೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ‘ಅಭಿವೃದ್ಧಿ’ ಎಂಬ ಪದವನ್ನು ಅತಿಯಾಗಿ ಬಳಸ­ಲಾ­ಗುತ್ತಿದೆ. ಇದು ಅಭಿವೃದ್ಧಿಯಲ್ಲ, ಅತಿ ಹುಚ್ಚು. ಇದು ನಮ್ಮ ಸ್ವಾರ್ಥ ಸಾಧ­ನೆಗೆ, ನಮ್ಮ ದೇಶದ ಸ್ವಾಭಿಮಾನ ಕೊಲ್ಲಲು ಮಾಡಿದ ಸಂಚಿನಂತೆಯೇ ಕಾಣಿ­ಸುತ್ತಿದೆ. ಇದರಿಂದ ದೇಶದ ಏಕತೆಗೆ ಧಕ್ಕೆ ಒದಗುವ ಅಪಾಯ ಇದೆ. ಏಕತೆ ಅತಿ­ಯಾದಾಗ ವಿವಿಧತೆ ಕಳೆದು­ಕೊಳ್ಳುತ್ತ ಹೋಗುತ್ತದೆ. ನಮಗೆ ಬೇಕಿ­ರು­ವುದು ಗಾಂಧಿ ದೃಷ್ಟಿಯ ಅಭಿವೃದ್ಧಿ’ ಎಂದರು.

‘ಕಪ್ಪು ಹಣ ವಾಪಸ್‌ ತರುತ್ತೇವೆ ಎಂಬುದು ದೊಡ್ಡ ವಿಪರ್ಯಾಸ. ಕಪ್ಪು ಹಣದ ಜನಕರೇ ಕಾರ್ಪೊರೆಟ್‌ ಸಂಸ್ಥೆ­ಗಳು. ಅವರ ಕೃಪಾಕಟಾಕ್ಷದಿಂದ ಚುನಾ­ವಣೆಯಲ್ಲಿ ಗೆದ್ದು ಬಂದ ನಾವು ಅವರ ಹಿಡಿತದಿಂದ ಬಿಡಿಸಿಕೊಳ್ಳುವುದು ಉಂಟೇ. ರಾಜಕೀಯದಲ್ಲಿ ಕಪ್ಪು ಹಣ ಎಂಬುದೊಂದು ದೊಡ್ಡ ದ್ವಂದ್ವ. ಇದರ ವಿರುದ್ಧ ನಮ್ಮಲ್ಲಿ ಮಾನಸಿಕ ತಲ್ಲಣ ಕೆಲಸ ಮಾಡಬೇಕಾಗಿದೆ’ ಎಂದರು. 

‘1916ರಲ್ಲಿ ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಗಾಂಧಿ ಅವರು ಅಭಿ­ವೃದ್ಧಿಯ ತಾರತಮ್ಯದ ಬಗ್ಗೆ ಮಾತೆತ್ತಿ­ದಾಗ ಅವರ ಮಾತನ್ನು ತಡೆಹಿಡಿ­ಯ­ಲಾಯಿತು. ಈಗಲೂ ಅಂತಹದೇ ಪರಿಸ್ಥಿತಿ ದೇಶದಲ್ಲಿ ಇದೆ’ ಎಂದರು.

ಲೋಭ: ‘ರಾಜಕಾರಣ ಎಂದ ತಕ್ಷಣ ‘ದುಡ್ಡು‘, ‘ಲೋಭ’ ಎಂಬ ಮಾತೂ ಜತೆ­ಯಾಗುತ್ತದೆ. ಈ ಲೋಭ ಎಂಬುದು ಕಾರ್ಲ್‌ ಮಾರ್ಕ್ಸ್‌ ಅವರಿಗೆ ಹೋರಾಟದ ಹುಟ್ಟಿಗೆ ಕಾರಣವಾ­ಗಿತ್ತು, ಗಾಂಧಿ ಪಾಲಿಗೆ ಲೋಭ ಎಂಬುದು ರೋಗಕ್ಕೆ ಕಾರಣ ಎಂಬುದಾ­ಗಿತ್ತು. ಆದರೆ ಇಂದಿನ ರಾಜಕಾರಣಿ­ಗಳಿಗೆ ಲೋಭ ಎಂಬುದು ರಾಜಕೀಯ ಅಸ್ತಿತ್ವಕ್ಕೆ ಇರುವ ದಾರಿಯಾಗಿದೆ. ಈ ವಿಷ ವರ್ತುಲದಿಂದ ರಾಜಕಾರಣಿ ಹೊರಬರುವುದು ಸಾಧ್ಯವೇ ಇಲ್ಲ’ ಎಂದು ವಿಶ್ಲೇಷಿಸಿದರು.

‘ನಿರಾಶೆಯಲ್ಲೂ ಕರ್ತವ್ಯ ಮರೆಯ­ಬಾರದು ಎಂಬುದು ಲೋಹಿಯಾ ಅವರ ಸಲಹೆ. ಪ್ರಸ್ತುತ ರಾಜಕೀಯಕ್ಕೆ ಅವರ ಮಾತೇ ಅತ್ಯಂತ ಸೂಕ್ತವಾ­ದುದು. ಭಗವದ್ಗೀತೆ ಸಹ ವಿಷಾದದಿಂದ ಪ್ರಸಾದ ಸಿಗುತ್ತದೆ ಎಂಬ ಸಂದೇಶ ಸಾರಿದೆ. ರಾಜಕೀಯದಲ್ಲೂ ಅಷ್ಟೇ, ಅಂತಹ ಶುಭ ದಿನಕ್ಕೆ ಇಂದಿನ ವಿಷಾದ ನಾಂದಿಯಾಗುತ್ತದೆ ಎಂಬ ಆಶಾ­ಭಾವನೆ ನನ್ನದು’ ಎಂದು ಅವರು  ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT