ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಳೆನಾಡಿನಲ್ಲೂ’ ಕುಡಿವ ನೀರಿಗೆ ಬಲು ಕಷ್ಟ

Last Updated 23 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಸಕಲೇಶಪುರ: ಸುತ್ತಲೂ ದಟ್ಟ ಕಾಡಿದೆ. ವಾರ್ಷಿಕ ಸರಾಸರಿ  2 ಸಾವಿರ ಮಿ.ಮೀ. ಮಳೆ ಸುರಿಯುತ್ತದೆ. ಅಕ್ಕಪಕ್ಕದಲ್ಲಿ ಹೇಮಾವತಿ ಜಲಾಶಯಕ್ಕೆ ನೀರು ಸಾಗಿಸುವ ಹಳ್ಳಗಳಿವೆ. ಆದರೂ ಸುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ. ಒರತೆ ನೀರಿಗಾಗಿ ಹಪಹಪಿ. ಗದ್ದೆಬಯಲಿನ ಹೊಂಡಗಳಲ್ಲಿ ಒರತೆ ನೀರಿಗಾಗಿ ಅಲೆಯುವ ಪರಿಸ್ಥಿತಿ...!

ಇದು ತಾಲ್ಲೂಕಿನ ಐಗೂರು, ದೊಡ್ಡಕಲ್ಲೂರು, ಚಿಕ್ಕಕಲ್ಲೂರು, ಕುಂಬರಗೇರಿ ಸುತ್ತಲಿನ ಕಾಡಂಚಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸ್ಥಿತಿ. ಈ ಪರಿಸ್ಥಿತಿ ತಾಲ್ಲೂಕಿನ ಉಳಿದ ಭಾಗದ ಹಳ್ಳಿಗಳಲ್ಲೂ ಹೀಗೆ ಇದೆ. ಈ ಹಳ್ಳಿಗಳಲ್ಲಿ ಪ್ರತಿ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ಕುಡಿಯುವ ನೀರಿಗೆ ಹೀಗೇ ತತ್ವಾರ. ಇಲ್ಲಿ ಮಳೆಗಾಲದಲ್ಲಿ ಬೇಡವೆನ್ನುವಷ್ಟು ಮಳೆ ಸುರಿಯುತ್ತದೆ. ಆದರೆ, ಬೇಸಿಗೆಯಲ್ಲಿ ಹನಿ ನೀರು ಸಿಕ್ಕಿದರೆ ಅದೇ ದೊಡ್ಡ ಪುಣ್ಯ.

ದೊಡ್ಡಕಲ್ಲೂರು ಗ್ರಾಮದಲ್ಲಿ ಸುಮಾರು 150 ಮನೆಗಳು, 500 ಜನಸಂಖ್ಯೆ ಇದೆ. ಕುಡಿಯುವ ನೀರಿಗೆ ಒಂದು ತೆರೆದ ಬಾವಿ ಇದೆ. ಬಳಕೆಯ ನೀರಿಗಾಗಿ ಎರಡು ಕೊಳವೆ ಬಾವಿಗಳಿವೆ. ತೆರೆದ ಬಾವಿಯಲ್ಲಿ ಎರಡು ಅಡಿ ನೀರಿದೆ. ಇದೇ ಬಾವಿಯಿಂದ ಪಂಚಾಯ್ತಿಯವರು ವಾರಕ್ಕೊಮ್ಮೆ ಮುಕ್ಕಾಲುಗಂಟೆ ನೀರು ಪೂರೈಸುತ್ತಾರೆ. ಎರಡು ಕೊಳವೆ ಬಾವಿಗಳ ಪೈಕಿ ಒಂದು ಬತ್ತಿದೆ. ಸದ್ಯ ಈ ಗ್ರಾಮಸ್ಥರಿಗೆ ಮುಕ್ಕಾಲು ಕಿಲೋ ಮೀಟರ್ ದೂರದ ಗದ್ದೆಯ ಹೊಂಡಗಳ ಒರತೆಯೇ ನೀರಿನ ಆಸರೆ.

ನೀರಿನ ಸಂಕಷ್ಟ ಹೇಳತೀರದು
‘ನಿತ್ಯ ನೀರಿಗಾಗಿ ನಾಲ್ಕೈದು ಗಂಟೆ ತೆಗೆದಿಡಬೇಕು. ಒಲೆ ಮೇಲೆ ಅನ್ನಕ್ಕೆ ಇಟ್ಟು ಹೋದರೆ, ಅನ್ನ ಬೇಯುವ ಹೊತ್ತಿಗೆ ಒಂದು ಬಿಂದಿಗೆ ನೀರು ತರುತ್ತೇನೆ’ ಗೃಹಿಣಿ ವೇದಾ ಗ್ರಾಮದ ನೀರಿನ ಸಮಸ್ಯೆ ತೆರೆದಿಡುತ್ತಾರೆ. ‘ನನಗೆ ವಯಸ್ಸಾಗಿದೆ. ಮಗ ಪಟ್ಟಣದಲ್ಲಿ ಉದ್ಯೋಗದಲ್ಲಿದ್ದಾನೆ. ಗಂಡನಿಗೆ ಆರೋಗ್ಯ ಸರಿಯಲ್ಲ. ನಾನೇ ನೀರು ತರಬೇಕು. ನನ್ನದು ಪರವಾಗಿಲ್ಲ, ಬಿಡಿ. 88 ವರ್ಷದ ರಾಜಕ್ಕಯ್ಯ ಅವರೂ ಹೀಗೆ ನೀರು ಹೊತ್ತು ಸುಸ್ತಾಗಿದ್ದಾರೆ. ನಮ್ ನೀರಿನ ಕಷ್ಟ ಹೇಳತೀರದು’ ಎಂದು ನೀರು ಹೊರುವ ಮಹಿಳೆಯರ ಕಷ್ಟವನ್ನೂ ಹಂಚಿಕೊಳ್ಳುತ್ತಾರೆ.

‘ಹಬ್ಬಗಳಲ್ಲಿ ಮನೆಯ ದೂಳು ತೆಗೆಯುವುದನ್ನು ಬಿಟ್ಟಿದ್ದೇವೆ. ದೂಳು ತೆಗೆದರೆ ಮನೆ ಸ್ವಚ್ಛ ಮಾಡಬೇಕು. ನೀರು ಹೆಚ್ಚು ಬೇಕು. ಅದಕ್ಕೆ ಮಳೆಗಾಲಕ್ಕಾಗಿ ಕಾಯುತ್ತೇವೆ’ ಎನ್ನುತ್ತಾರೆ ಗೃಹಿಣಿ ನೇತ್ರಾ.

ನೀರು ಪೂರೈಸುವ ಬಾವಿ ನೋಡಿ...!
‘ಇದೇ ನಮ್ಮೂರಿಗೆಲ್ಲ ನೀರು ಪೂರೈಸುವ ಬಾವಿ’ – ಬಿಂದಿಗೆ ಹಿಡಿದು ಗದ್ದೆಯ ಬಯಲಿಗೆ ನೀರು ತರಲು ಹೊರಟಿದ್ದ ಪ್ರಸನ್ನ, ಹಳ್ಳದಲ್ಲಿ ಪಂಚಾಯ್ತಿಯವರು ತೆಗೆಸಿರುವ ಬಾವಿ ತೋರಿಸಿದರು. ತಳದಲ್ಲಿ ಸ್ವಲ್ಪ ನೀರು ಕಂಡಿತು. ‘ಪಕ್ಕದ ಬಾವಿಯಲ್ಲೂ ನೀರಿದೆ. ನೀರು ಶುಚಿಯಾಗಿಲ್ಲ’ ಎನ್ನುತ್ತಾ, ಆ ಬಾವಿಯ ನೀರನ್ನೂ ಮೊಗೆದು ತೋರಿಸಿದರು. ‘ಇದು ಹ್ಯಾಂಡ್ ಪಂಪ್. ಒತ್ತಿದರೆ ನೀರು ಬರೋದಿಲ್ಲ’ ಎನ್ನುತ್ತಾ  ಬೋರ್ ಒತ್ತಿ ತೋರಿಸಿದರು.

ಸುತ್ತಮುತ್ತಲಿನ ಪ್ರದೇಶದಲ್ಲಿ 400 ಅಡಿ ಕೊರೆದರೂ ನೀರಿಲ್ಲ. ಮೂರು ಕೊಳವೆ ಬಾವಿ ಕೊರೆಸಿದರೆ, ಒಂದರಲ್ಲಿ ಮಾತ್ರ ನೀರು ಬರುತ್ತದೆ.  ಹೀಗಾಗಿ ಸಮಸ್ಯೆ ಗಂಭೀರವಾಗಿದೆ.

ಮಕ್ಕಳು, ನೆಂಟರು ಬರುವುದಿಲ್ಲ :  ಬೇಸಿಗೆಯಲ್ಲಿ ಒರತೆ ನೀರಿನ ಆಸರೆ ಪಡೆಯುವ ಈ ಗ್ರಾಮದವರು, ಮಳೆಗಾಲದಲ್ಲಿ ಮನೆಯ ಸೂರಿನ ಮೇಲಿನ ಮಳೆ ನೀರು ಹಿಡಿದು ಕುಡಿಯುತ್ತಾರೆ. ‘ಮಳೆಗಾಲದಲ್ಲೂ ನಮ್ಮ ಸ್ಥಿತಿ ಭಿನ್ನವಾಗೇನಿರಲ್ಲ’ ಎನ್ನುತ್ತಾರೆ ನೇತ್ರಾ.

ನೀರಿನ ಸಮಸ್ಯೆ ಈ ಕುಟುಂಬಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಕಾಡುತ್ತಿದೆ. ನೀರಿನ ಸಮಸ್ಯೆಯಿಂದಾಗಿ ಆಸುಪಾಸಿನ ಗ್ರಾಮದ ಕೆಲವರು ಮಕ್ಕಳನ್ನು ಪಟ್ಟಣದ ವಸತಿ ಶಾಲೆಗಳಿಗೆ ಸೇರಿಸಿದ್ದಾರೆ. ಮನೆಯಲ್ಲಿ ನಡೆಯುತ್ತಿದ್ದ ಶುಭಕಾರ್ಯಗಳೀಗ ಪಟ್ಟಣದ ಸಮುದಾಯ ಭವನಗಳಿಗೆ ವರ್ಗವಾಗಿವೆ.

‘ನೀರಿನ ಸಮಸ್ಯೆಯಿಂದಾಗಿ ಈ ಬಾರಿ ಬೇಸಿಗೆಯಲ್ಲಿ ಮಕ್ಕಳು, ಮೊಮ್ಮಕಳು ಊರಿಗೆ ಬಂದಿಲ್ಲ. ನೆಂಟರಿಷ್ಟರನ್ನು ಕರೆಯೋದಕ್ಕೆ ಕೂಡ ಯೋಚನೆ ಮಾಡುವಂತಾಗಿದೆ’ ಎನ್ನುತ್ತಾರೆ ವೇದಾ.

ಎಲ್ಲೆಡೆಯೂ ನೀರಿಗೆ ಹೀಗೆ ಸಂಕಷ್ಟ: ತಾಲ್ಲೂಕಿನಲ್ಲಿರುವ ಕಾಫಿ ತೋಟಗಳಲ್ಲಿ ಬೆಳೆಗಾಗಿ ತೆಗೆಸಿರುವ ಕೊಳವೆಬಾವಿ, ಕೆರೆ, ಕಟ್ಟೆಗಳು ಅವರಿಗೆ ಆಶ್ರಯ ನೀಡುತ್ತವೆ. ಸಮಸ್ಯೆ ಏನಿದ್ದರೂ ಸಣ್ಣ ಹಿಡುವಳಿ ರೈತರು ಮತ್ತು ಕಾರ್ಮಿಕರು ಹೆಚ್ಚಾಗಿರುವ ಗ್ರಾಮಗಳಿಗೆ ಮಾತ್ರ. ಇಂಥ ಕುಟುಂಬಗಳಿರುವ  ಸಕಲೇಶಪುರ ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲೂ ಕುಡಿಯುವ ನೀರಿನ ಪರಿಸ್ಥಿತಿ ಹೆಚ್ಚೂ ಕಡಿಮೆ ಹೀಗೇ ಇದೆ. ಈ ವರ್ಷ ಕುಡಿಯುವ ನೀರಿನ ಪರಿಸ್ಥಿತಿ ಬಿಗಡಾಯಿಸಿದ್ದರಿಂದ, ಬ್ಯಾಕರಹಳ್ಳಿ  ಪಂಚಾಯ್ತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ನೀರು ಪೂರೈಸಿದ್ದಾರೆ.

ಹೆತ್ತೂರು ಹೋಬಳಿ ಮದ್ನಾಪುರ, ವೆಂಕಟಹಳ್ಳಿ, ಒಳಲಹಳ್ಳಿ, ಯಳಸೂರು ಹೋಬಳಿಯ ಎಡಕೇರಿ, ಹತ್ತಿಹಳ್ಳಿ, ಆಚಂಗಿ, ಅರಕೆರೆಯಲ್ಲೂ ಕುಡಿಯುವ ನೀರಿಗೆ ಹಾಹಾಕಾರವಿದೆ.

ಹಾನುಬಾಳು ಪಂಚಾಯ್ತಿಯಲ್ಲಿ 8 ಗ್ರಾಮಗಳಿವೆ. ಎಲ್ಲ ಕಡೆ ಹೀಗೆ ಇದೆ ನೀರಿನ ಸಮಸ್ಯೆ. ಅಚ್ಚರಡಿಯಲ್ಲಿನ ಹೇಮಾವತಿ ನದಿಯಲ್ಲಿಯೇ ನೀರು ಕಡಿಮೆಯಾಗಿದೆ.  ಅಂತರ್ಜಲ ಕುಸಿದಿದೆ. ಕಾಫಿ ತೋಟಗಳ ರಕ್ಷಣೆಗೆ ನೀರಿನ ಬಳಕೆ ಅನಿವಾರ್ಯ.

ಹೀಗಾಗಿ ಬಳಕೆ ಹೆಚ್ಚಾಗುತ್ತದೆ. ದಶಕಗಳ ಹಿಂದೆ ಸರ್ಕಾರ ‘ಅಗ್ನಿಗುಡ್ಡ ಜಲಾಶಯ ಯೋಜನೆ (ಗುರುತ್ವಾಕರ್ಷಣೆ ಮೂಲಕ ಕುಡಿಯುವ ನೀರು ಪೂರೈಕೆ) ರೂಪಿಸಿದೆ. ಆ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡರೆ, ಹಾನುಬಾಳು ಪಂಚಾಯ್ತಿಗೆ ಕುಡಿಯುವ ನೀರು ಪೂರೈಸಬಹುದು’ ಎನ್ನುತ್ತಾರೆ  ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವತ್ಸಲಾ.

ನೀರಿನ ಸಮಸ್ಯೆಗೆ ಕಾರಣವೇನು : ಮಲೆನಾಡಿನಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಹಳ ಹಳೆಯದು. ಅಕಾಲಿಕ ಮಳೆ ಸುರಿಯಲಾರಂಭಿಸಿದ ಮೇಲೆ 15 ವರ್ಷಗಳಿಂದ ಈಚೆಗೆ ಸಮಸ್ಯೆ ಗಂಭೀರವಾಗಿದೆ. ಮೊದಲು ಮೂರು ತಿಂಗಳು ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಇತ್ತು. ಈಗ ಆರು ತಿಂಗಳಿಗೆ ವಿಸ್ತರಿಸಿದೆ. ಇನ್ನೂ ಹೆಚ್ಚಾಗುವ ಆತಂಕ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ಈ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಸುಸ್ಥಿರ ಯೋಜನೆಗಳು ರೂಪಗೊಂಡಂತೆ ಕಾಣುವುದಿಲ್ಲ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಹೊರತುಪಡಿಸಿ, ಬೇರೆ ಅಧಿಕಾರಿಗಳು ಮಲೆನಾಡಿನ ಇಂಥ ಕುಗ್ರಾಮಗಳಿಗೆ ಭೇಟಿ ನೀಡುವುದು ತೀರಾ ಕಡಿಮೆ. ‘ಅಷ್ಟೊಂದು ಮಳೆ ಬೀಳುತ್ತದೆ. ಅಲ್ಲಿ ನೀರಿಗೆಲ್ಲಿ ಬರವಿರುತ್ತದೆ ಎಂದು ಅಂದುಕೊಳ್ಳುವವರೇ ಹೆಚ್ಚು’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

‘ಮಲೆನಾಡಿನಲ್ಲಿನ ಕೆರೆ–ಕಟ್ಟೆಗಳ ಹೂಳೆತ್ತಿದರೆ ಸಾಕು. ಕುಡಿಯುವ ನೀರಿನ ಸಮಸ್ಯೆಗೆ ಒಂದಷ್ಟು ಪರಿಹಾರ ದೊರೆಯುತ್ತದೆ. ನಮ್ಮ ಗ್ರಾಮದ ಸುತ್ತ ಕೆರೆಗಳಿವೆ. ಆದರೆ ಹೂಳೆತ್ತಿ, ಅವುಗಳನ್ನು ಸುಸ್ಥಿತಿಯಲ್ಲಿಟ್ಟಿಲ್ಲ ಎನ್ನುತ್ತಾರೆ ಐಗೂರಿನ ಕೃಷಿಕ ಆನಂದ್.  ‘ಇವತ್ತಿಗೂ ಸರಿಯಾಗಿ ಯೋಜನೆ ರೂಪಿಸಿದರೆ, ಗುರುತ್ವಾಕರ್ಷಣೆ ಮೂಲಕ ಒರತೆಯ ನೀರನ್ನೇ ಬಳಸಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದು’ ಎನ್ನುತ್ತಾರೆ ಅವರು.

‘ತಾಲ್ಲೂಕಿನಲ್ಲಿ ಮಳೆ ಪ್ರಮಾಣದಲ್ಲಿ ಏರುಪೇರಾಗಿಲ್ಲ. 50 ವರ್ಷಗಳಲ್ಲಿ ಎರಡು ಬಾರಿ ಮಾತ್ರ ಮಳೆ ಕಡಿಮೆಯಾಗಿದೆ. ಆದರೆ ತಿಂಗಳು ಸುರಿಯುವ ಮಳೆ ಎರಡೇ ದಿನದಲ್ಲಿ ಸುರಿಯುತ್ತದೆ. ಹೀಗಾಗಿ ಬೆಳೆ ಹಾಳಾಗುತ್ತದೆ’ ಎನ್ನುತ್ತಾ 60 ವರ್ಷಗಳ ಮಳೆ ಪ್ರಮಾಣವನ್ನು ಸಾಕ್ಷಿಗಿಡುತ್ತಾರೆ ಯಡೇಹಳ್ಳಿ ಪ್ರಗತಿಪರ ಕೃಷಿಕ ವೈ.ಸಿ.ರುದ್ರಪ್ಪ.

‘ಮೊದಲು ಕೃಷಿಕರಷ್ಟೇ ತೋಟ ಮಾಡುತ್ತಿದ್ದರು. ಈಗ ಲಾಭ ಬರುತ್ತದೆ ಎಂದು ಬ್ಯಾಂಕ್ ಮ್ಯಾನೇಜರ್, ನಿವೃತ್ತ ಅಧಿಕಾರಿಗಳು, ಕಂಪೆನಿಗಳು ಎಲ್ಲರೂ ಕೃಷಿಗೆ ಇಳಿದಿದ್ದಾರೆ.

ತೋಟಗಳ ಸಂಖ್ಯೆ ಹೆಚ್ಚಾಗಿದೆ. ಹಣವಿದೆ ಎಂದು ಎಲ್ಲಿಂದಲೋ ನೀರು ತಂದು ತೋಟ ಮಾಡುತ್ತಾರೆ.  ಭೂಮಿ, ಮಳೆ ಸುರಿಯುವ ಪ್ರಮಾಣ, ಮಳೆ ನೀರು ಇಂಗಿಸುವುದು ಯಾವುದೂ ಹೆಚ್ಚಾಗಿಲ್ಲ. ಆದರೆ ನೀರಿನ ಬಳಕೆ ಮಾತ್ರ ಹೆಚ್ಚಾಗಿದೆ.  ಹಾಗಾಗಿ ಮಲೆನಾಡಿನಲ್ಲೂ ಅಂತರ್ಜಲ ಪಾತಾಳಕ್ಕಿಳಿದಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

ಸಮಸ್ಯೆ ಕಲಿಸಿರುವ ಜಲಜಾಗೃತಿ !: ‘ಹಾನುಬಾಳು ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಬೋರ್‌ವೆಲ್‌ನಲ್ಲಿರುವ ನೀರನ್ನು ಎರಡು ದಿನಕ್ಕೊಮ್ಮೆ ಕೊಡುತ್ತಿದ್ದೇವೆ. ಒಂದು ಗಂಟೆ ನೀರು ಬಿಡುವ ಜಾಗಕ್ಕೆ ಅರ್ಧಗಂಟೆ ಕೊಡುತ್ತಿದ್ದೇವೆ. ಜನರೇ ನೀರಿನ ಸಮಸ್ಯೆ ಅರಿತು ಅನುಸರಿಸಿಕೊಳ್ಳುತ್ತಿದ್ದಾರೆ’ ಎಂದು ಪಿಡಿಒ ವತ್ಸಲಾ ಹೇಳುತ್ತಾರೆ.

‘ನೀರಿನ ಸಮಸ್ಯೆ ಅರಿತಿದ್ದೇವೆ. ನೀರನ್ನು ಒಗ್ಗರಣೆಗೆ ಹಾಕುವ ಎಣ್ಣೆಯಂತೆ ಬಳಸುತ್ತಿದ್ದೇವೆ. ಅತಿಥಿಗಳಿಗೆ, ಮಕ್ಕಳಿಗೆ ನೀರಿನ ಕಷ್ಟದ ಬಗ್ಗೆ ಹೇಳಿದ್ದೇವೆ. ಒಂದು ಲೋಟ ನೀರು ವ್ಯರ್ಥ ಮಾಡುವುದಿಲ್ಲ’ ಎನ್ನುತ್ತಾ ಮಲೆನಾಡಿಗರಲ್ಲಿ ಮೂಡಿರುವ ಜಲ ಕಾಳಜಿ ಬಗ್ಗೆ ನೇತ್ರಾ ಉಲ್ಲೇಖಿಸುತ್ತಾರೆ.

ಕೊಳವೆಬಾವಿಯಿಂದ ಕೆರೆಗೆ ನೀರು..!
ಕಾಫಿ ಇಳುವರಿ ಬರಲು ಸಕಾಲಕ್ಕೆ ಮಳೆಯಾಗಬೇಕು. ಹೂವು ಅರಳುವ ಸಮಯದಲ್ಲಿ ‘ಹೂಮಳೆ’ ಬಾರದಿದ್ದರೆ, ಕೃತಕ ಮಳೆ ಸುರಿಸಬೇಕು. ಇದಕ್ಕೆ ಒಂದೆರಡು ಇಂಚು ನೀರು ಸಾಲುವುದಿಲ್ಲ. ಅದಕ್ಕಾಗಿ ಕೊಳವೆಬಾವಿ ಕೊರೆಸುತ್ತಾರೆ. ಸಿಗುವ 2–3 ಇಂಚು ನೀರನ್ನು ಕೆರೆಗೆ ತುಂಬಿಸುತ್ತಾರೆ. ಕೆರೆಗಳಿಗೆ 10–15 ಎಚ್‌ಪಿ ಮೋಟಾರ್‌ಗಳನ್ನಿಟ್ಟು ಕಾಫಿ ಬೆಳೆಗೆ ನೀರು ಹಾಯಿಸುತ್ತಾರೆ. ಮಲೆನಾಡಿನಲ್ಲಿ ಸುರಿದ ಮಳೆ ಇಂಗದೇ ಇಳಿಜಾರಿನಲ್ಲಿ ಓಡುತ್ತದೆ. ಹೀಗೆ ಅಂತರ್ಜಲ ಬರಿದು ಮಾಡಿದರೆ, ಸ್ವಾಭಾವಿಕ ಹಳ್ಳಗಳಾದರೂ ಹೇಗೆ ಬದುಕುತ್ತವೆ ಎಂದು  ಕೃಷಿಕ ವೈ.ಸಿ.ರುದ್ರಪ್ಪ ವಿಷಾದದಿಂದ ಪ್ರಶ್ನಿಸುತ್ತಾರೆ.

‘ನಮ್ಮ ತೋಟಗಳಲ್ಲಿ ತೊಟ್ಟಿಲುಗುಂಡಿಗಳಿವೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ಇಂಗಿ, ತೋಟದ ಕೆಳಗಿನ ಕೆರೆಯಲ್ಲಿ ಸಂಗ್ರಹವಾಗುತ್ತದೆ. ಬೇಸಿಗೆಯವರೆಗೂ ನೀರಿನ ಒರತೆ ನಿರಂತರವಾಗಿರುತ್ತದೆ. ಇಂಥ ಸಣ್ಣ ಜಲಸಂರಕ್ಷಣಾ ವಿಧಾನಗಳನ್ನು ಅನುಸರಿಸಿದರೆ, ಮಲೆನಾಡಿನ ಗ್ರಾಮಗಳಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’ ಎನ್ನುವುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT