ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿರೋದಿಸುವವರಿದ್ದಾರೆಂದು ಅಂಜಿ ಕುಳಿತುಕೊಳ್ಳಬೇಕಾಗಿಲ್ಲ’

Last Updated 25 ಜನವರಿ 2014, 19:30 IST
ಅಕ್ಷರ ಗಾತ್ರ

ಹಿರಿಯ ಭಾಷಾ ಶಾಸ್ತ್ರಜ್ಞ ಡಾ. ಡಿ.ಎನ್. ಶಂಕರ ಭಟ್ (1935-) ಜಗತ್ತಿನ ಹತ್ತಾರು ಭಾಷೆಗಳೊಡನೆ ಒಡನಾಟ ನಡೆಸಿ ಮೂರ್ನಾಲ್ಕು ದಶಕಗಳಿಂದ ಸಂಶೋಧನೆಯಲ್ಲಿ ತೊಡಗಿಕೊಂಡವರು; 3೦ಕ್ಕೂ ಹೆಚ್ಚು ಪುಸ್ತಕ, 150ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದವರು. ಈಚೆಗೆ ಕನ್ನಡ ನಾಡು ಅವರನ್ನು ಪಂಪ ಪ್ರಶಸ್ತಿಯಿಂದ ಗೌರವಿಸಿದ ಸಂದರ್ಭದಲ್ಲಿ ಅವರ ವಿಚಾರಗಳನ್ನು ಪರಿಚಯಿಸುವ ಉದ್ದೇಶವಿಟ್ಟುಕೊಂಡು ಈ ಕಿರುಸಂದರ್ಶನ ನಡೆಸಲಾಗಿದೆ.

ಡಾ. ಭಟ್ ಅವರ ಗಹನ ವಿದ್ವತ್ತಿನ ಬಗ್ಗೆ ಮತ್ತು ಅವರ ಋಷಿಸದೃಶ ವ್ಯಕ್ತಿತ್ವದ ಬಗ್ಗೆ ಗೌರವ -ಪ್ರೀತಿಯಿರುವ ನನಗೆ ಅವರು ಕನ್ನಡಕ್ಕೆ ಸೂಚಿಸುವ ಮಾರ್ಪಾಡುಗಳ ಬಗ್ಗೆ ಭಿನ್ನಮತವಿದೆ. ಹಾಗಾಗಿಯೇ ಅವರ ಮಾತುಗಳು ಅವರ ಕನ್ನಡದಲ್ಲೂ ಮತ್ತು ನನ್ನ ಪ್ರಶ್ನೆಗಳು ನನ್ನ ಕನ್ನಡದಲ್ಲೂ ಇವೆ.

* ಹಲವಾರು ದಶಕಗಳ ಕಾಲ ನೀವು ನಡೆಸಿದ ಭಾಷಾಸಂಶೋಧನೆಗಳಲ್ಲಿ ಅತ್ಯಂತ ಪ್ರಮುಖವೆಂದು ನಿಮಗನ್ನಿಸುವುದು ಯಾವುದು?
ಜಗತ್ತಿನಲ್ಲಿ ಬಳಕೆಯಲ್ಲಿರುವ ನುಡಿಗಳು ಯಾವ ಅಂಶದಲ್ಲಿ ಒಂದರಿಂದೊಂದು ಬೇರಾಗಿರಬಲ್ಲುವು ಎಂಬ ವಿಶಯದಲ್ಲಿ ನಾನು ನಡೆಸಿರುವ ಅರಕೆ (ಸಂಶೋದನೆ)ಗಳು ತುಂಬಾ ಮುಕ್ಯವಾದುವೆಂದು ನನಗೆ ಅನಿಸುತ್ತದೆ. ಎತ್ತುಗೆಗಾಗಿ, ಆಬ್ಜೆಕ್ಟ್ ಇರುವ ಮತ್ತು ಇಲ್ಲದ ಎಸಕ (ಕ್ರಿಯಾ)ಪದಗಳ ನಡುವಿನ ವ್ಯತ್ಯಾಸ, ಮತ್ತು ಸಬ್ಜೆಕ್ಟ್ ಮತ್ತು ಆಬ್ಜೆಕ್ಟ್‌ಗಳ ನಡುವಿನ ವ್ಯತ್ಯಾಸ ಎಲ್ಲಾ ನುಡಿಗಳ ವ್ಯಾಕರಣಗಳಿಗೂ ಮುಕ್ಯವಾದುವೆಂದು ಹೆಚ್ಚಿನ ನುಡಿಯರಿಗರೂ ನಂಬಿದ್ದರು.

ಆದರೆ, ಕನ್ನಡದಲ್ಲಿ ಈ ವ್ಯತ್ಯಾಸಗಳಿಗಿಂತಲೂ ಹತೋಟಿಯಲ್ಲಿರುವ ಮತ್ತು ಇಲ್ಲದಿರುವ ಎಸಕಗಳ ನಡುವಿನ ವ್ಯತ್ಯಾಸವೇ ಮುಕ್ಯವಾದುದು, ಮತ್ತು ಈ ಕಾರಣಕ್ಕಾಗಿ ಅದರ ಕೆಲವು ಸೊಲ್ಲು(ವಾಕ್ಯ)ಗಳಲ್ಲಿ ಸಬ್ಜೆಕ್ಟ್ ಯಾವುದು ಎಂಬುದನ್ನು ಕಚಿತವಾಗಿ ಹೇಳಲು ಬರುವುದಿಲ್ಲ ಎಂಬುದನ್ನು ತೋರಿಸಿ­ಕೊಡುವ ಮೂಲಕ ಮೇಲಿನ ನಂಬಿಕೆಯನ್ನು ಅಲ್ಲಗಳೆದಿದ್ದೇನೆ.

ಕನ್ನಡ, ಇಂಗ್ಲಿಶ್, ಸಂಸ್ಕ್ರುತ ಮೊದಲಾದ ಹಲವು ನುಡಿಗಳಲ್ಲಿ ಬಳಕೆಯಲ್ಲಿರುವ ಯಾರು, ಯಾಕೆ, ಎಲ್ಲಿ, ಎಶ್ಟು ಎಂಬಂತಹ ಕೆಲವು ಪದಗಳನ್ನು ಪ್ರಶ್ನ ಪದಗಳೆಂದು ಕರೆಯಲಾಗುತ್ತದೆ; ಆದರೆ, ಹೀಗೆ ಕರೆಯುವುದರಿಂದ ಅವುಗಳ ವ್ಯಾಕರಣಗಳಲ್ಲಿ ಕೆಲವು ಬಿಡಿಸಲಾಗದ ತೊಡಕುಗಳು ಕಾಣಿಸಿಕೊಳ್ಳುತ್ತವೆ.

ಇದಕ್ಕೆ ಬದಲು, ಇಂತಹ ಪದಗಳನ್ನೆಲ್ಲ ಅನಿಶ್ಚಿತತೆಯನ್ನು ತಿಳಿಸುವ ಪದಗಳು ಎಂದು ಹೇಳಿದಲ್ಲಿ, ಈ ತೊಡಕುಗಳೆಲ್ಲ ಇಲ್ಲವಾಗುತ್ತವೆ. ಈ ನುಡಿ­ಗಳಿಗಿಂತ ಬೇರಾಗಿರುವ ಬೇರೆ ಕೆಲವು ನುಡಿಗಳಲ್ಲಿ ಪ್ರಶ್ನೆಯ ಹುರುಳಿರುವಂತಹ ಪದಗಳೇ ಇವೆ, ಮತ್ತು ಅವುಗಳ ಬಳಕೆ ಮೇಲಿನ ನುಡಿಗಳಲ್ಲಿ ಬರುವ ‘ಪ್ರಶ್ನ’ ಪದಗಳ ಬಳಕೆಗಿಂತ ತೀರ ಬೇರಾಗಿದೆ. ಇದು ನುಡಿಗಳ ನಡುವೆ ನಾನು ಕಂಡುಹಿಡಿದಿರುವ ಇನ್ನೊಂದು ಬಗೆಯ ವ್ಯತ್ಯಾಸ.

* ಕನ್ನಡ ನುಡಿ, ಬರಹ ಮತ್ತು ವ್ಯಾಕರಣಗಳಿಗೆ ಸಂಬಂಧಿಸಿದಂತೆ ಆಗಬೇಕೆಂದು ನೀವು ಸೂಚಿಸುವ ಮಾರ್ಪಾಡುಗಳಲ್ಲಿ ಅತಿ ಮುಖ್ಯವಾದ ಅಂಶಗಳೇನು?
ಕನ್ನಡಕ್ಕೆ ಅದರದೇ ಆದ ಒಂದು ವ್ಯಾಕರಣವಿದೆ, ಮತ್ತು ಅದು ಕೇಶಿರಾಜನ ಕಾಲದಿಂದಲೂ ಬಳಕೆಯಲ್ಲಿರುವ ಮತ್ತು ಇವತ್ತಿಗೂ ಶಾಲೆ-–ಕಾಲೇಜುಗಳಲ್ಲಿ ಕಲಿಸುತ್ತಿರುವ ಕನ್ನಡ ವ್ಯಾಕರಣಕ್ಕಿಂತ ತೀರ ಬೇರಾಗಿದೆ. ಅದು ಎಂತಹದು ಎಂಬುದನ್ನು ತಿಳಿದುಕೊಂಡು, ಆ ವ್ಯಾಕರಣವನ್ನು ಕನ್ನಡ ಬರಹದ ಕಲಿಕೆ ಮತ್ತು ಬಳಕೆಗಳಲ್ಲಿ ಬಳಸುವಂತಾಗಬೇಕು ಎಂಬುದು ನಾನು ಬಯಸುವ ಒಂದು ಮಾರ್‍ಪಾಡು.

ಇವತ್ತು ಕನ್ನಡ ಬರಹಗಳಲ್ಲಿ ತುಂಬಾ ಹೆಚ್ಚು ಸಂಸ್ಕ್ರುತ ಎರವಲುಗಳನ್ನು ಬಳಸಲಾಗುತ್ತಿದೆ; ಅರಿಮೆಯ (ವಿಜ್ನಾನದ) ಬರಹಗಳಲ್ಲಿ ಬಳಸುವ ಹೆಚ್ಚಿನ ಪಾರಿಬಾಶಿಕ ಪದಗಳೂ ಸಂಸ್ಕ್ರುತದವಾಗಿವೆ. ಕನ್ನಡ ಬರಹಗಾರರಿಗೆ ಕನ್ನಡ ಪದಗಳ ಕುರಿತಾಗಿ ಕೀಳರಿಮೆಯಿರುವುದೇ ಇದಕ್ಕೆ ಕಾರಣ. ಈ ಕೀಳರಿಮೆ ಹೋಗಬೇಕು, ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬರಹಗಳಲ್ಲಿ ಬಳಸುವ ಮೂಲಕ ಅವಕ್ಕೂ ಕನ್ನಡಿಗರ ಮಾತಿಗೂ ನಡುವಿರುವ ಅಂತರವನ್ನು ಕಡಿಮೆ ಮಾಡಬೇಕು ಎಂಬುದು ನಾನು ಬಯಸುವ ಇನ್ನೊಂದು ಮುಕ್ಯ ಮಾರ್‍ಪಾಡು.

ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಸಂಸ್ಕ್ರುತದಲ್ಲಿರುವ ಹಾಗೆ ಉಲಿಯದಿದ್ದರೂ ಹಾಗೆಯೇ ಬರೆಯಬೇಕು ಎಂಬ ಕಟ್ಟುಪಾಡನ್ನು ಹಿಂದಿನಿಂದಲೂ ಕನ್ನಡ ಬರಹಗಾರರು ಅನುಸರಿಸುತ್ತಾ ಬಂದಿದ್ದಾರೆ, ಮತ್ತು ಇದಕ್ಕಾಗಿ ಕನ್ನಡ ಬರಹದಲ್ಲಿ ಹತ್ತಿಪ್ಪತ್ತು ಕನ್ನಡಕ್ಕೆ ಬೇಡದ ಬರಿಗೆ(ಅಕ್ಶರ)­ಗಳನ್ನು ಬಳಸುತ್ತಾ ಬಂದಿದ್ದಾರೆ. ಇದುವರೆಗೆ ಕೆಲವೇ ಕೆಲವು ಮಂದಿ ಮೇಲ್ವರ್ಗದ ಜನರು ಮಾತ್ರ ಬರಹವನ್ನು ಬಳಸುತ್ತಿದ್ದರು.

ಆದರೆ ಇವತ್ತು ಎಲ್ಲಾ ಕನ್ನಡಿಗರೂ ಬರಹವನ್ನು ಬಳಸುವಂತಾಗಬೇಕಾಗಿದೆ. ಹಾಗಾಗಿ, ಕನ್ನಡದ ಮಟ್ಟಿಗೆ ಬೇಕಿಲ್ಲದ, ಮತ್ತು ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ತೊಡಕಾಗಿರುವ ಈ ಕಟ್ಟಲೆಯನ್ನು ಬಿಟ್ಟುಕೊಡಬೇಕಾಗಿದೆ. ಹೀಗೆ ಮಾಡಿದಲ್ಲಿ, ಕನ್ನಡ ಬರಹಕ್ಕೆ ಒಟ್ಟು ೩೧ ಬರಿಗೆಗಳು ಸಾಕಾಗುತ್ತವೆ, ಮತ್ತು ಈ ಬರಿಗೆಗಳಿಗೂ ಉಲಿಗಳಿಗೂ ನಡುವೆ ನೇರವಾದ ಸಂಬಂದ ಏರ್‍ಪಡುವುದರಿಂದ ಅವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಳುವಾಗುತ್ತದೆ. ಇದು ನಾನು ಬಯಸುವ ಮೂರನೆಯ ಮುಕ್ಯ ಮಾರ್‍ಪಾಡು.

* ಮೇಲ್ಕಂಡ ಮಾರ್ಪಾಡುಗಳನ್ನು ಮಾಡಬೇಕೆಂದು ನೀವು ಸೂಚಿಸಿರುವುದು ಯಾರಿಗೆ - ಸರಕಾರಕ್ಕೋ? ಬಳಸುವ ಜನವರ್ಗಕ್ಕೋ? ಲೇಖಕ- –ವಿದ್ವಾಂಸರಿಗೋ?
ಈ ಮಾರ್‍ಪಾಡುಗಳಲ್ಲಿ ಮೊದಲನೆಯದನ್ನು ಕನ್ನಡ ವ್ಯಾಕರಣದಲ್ಲಿ ಅರಕೆ (ಸಂಶೋದನೆ)ಯನ್ನು ನಡೆಸಬಲ್ಲವರು ಮಾಡಬೇಕಾಗುತ್ತದೆ. ಕನ್ನಡದ್ದೇ ಆದ ವ್ಯಾಕರಣ ಎಂತಹದು ಎಂಬುದನ್ನು ವಿವರಿಸುವ ಒಂದು ಹೊತ್ತಗೆಯೊಂದನ್ನು ನಾನು ೨೦೦೯ರಿಂದ ಬರೆಯುತ್ತಿದ್ದೇನೆ. ಅದರ ನಾಲ್ಕು ತುಂಡುಗಳು ಈಗಾಗಲೇ ಅಚ್ಚಾಗಿ ಹೊರಬಂದಿವೆ. ಇನ್ನೂ ಅಯ್ದಾರು ತುಂಡುಗಳನ್ನು ಬರೆಯುವ ಮೂಲಕ ಇದನ್ನು ಪೂರ್‍ತಿಗೊಳಿಸಬೇಕೆಂಬುದು ನನ್ನ ಹಾರಯ್ಕೆ.

ಉಳಿದೆರಡು ಮಾರ್‍ಪಾಡುಗಳನ್ನು ಕನ್ನಡದ ಬರಹಗಾರರಲ್ಲಿ ಯಾರಿಗೆ ಬೇಕಿದ್ದರೂ ನಡೆಸಲು ಬರುತ್ತದೆ. ಕಳೆದ ಏಳೆಂಟು ವರ್‍ಶಗಳಲ್ಲಿ ನಾನೂ ಇದನ್ನು ನಡೆಸುತ್ತಿದ್ದೇನೆ. ೨೦೦೫ರಿಂದೀಚೆಗೆ ನಾನು ಬರೆದ ಮತ್ತು ಅಚ್ಚುಹಾಕಿಸಿದ ಎಲ್ಲಾ ಹೊತ್ತಗೆ ಮತ್ತು ಬರಹಗಳಲ್ಲೂ ಸಂಸ್ಕ್ರುತ ಎರವಲುಗಳ ಎಣಿಕೆಯನ್ನು ಸಾಕಶ್ಟು ಕಡಿಮೆ ಮಾಡಿದ್ದೇನೆ, ಮತ್ತು ಕನ್ನಡಕ್ಕೆ ಬೇಕಿಲ್ಲದ ಹೆಚ್ಚಿನ ಬರಿಗೆಗಳನ್ನು ದೂರ ಇರಿಸಿದ್ದೇನೆ.

ಇತ್ತೀಚೆಗೆ ನಾನು ಬಯಸುವ ಈ ಎರಡು ಮಾರ್‍ಪಾಡುಗಳು ನಿಜಕ್ಕೂ ಕನ್ನಡ ಬರಹಕ್ಕೆ ಬೇಕಾಗಿವೆ­ಯೆಂದು ಮನವರಿಕೆಯಾಗಿರುವ ಸುಮಾರು ತೊಂಬತ್ತ­ಕ್ಕಿಂತಲೂ ಹೆಚ್ಚು ಮಂದಿ ಬರಹಗಾರರು ಹೊನಲು ಎಂಬ ಮಿಂಬಲೆತಾಣದಲ್ಲಿ (www.honalu.net)­ ಈ ಮಾರ್‍ಪಾಡುಗಳನ್ನು ಬಳಸಿರುವ ಬರಹಗಳನ್ನು ಬರೆಯುತ್ತಿದ್ದಾರೆ.

ಬೇರೆಯೂ ಕೆಲವು ಮಂದಿ ಗೆಳೆಯರು ಪ್ರಕಟವಾಗಿರುವ ತಮ್ಮ ಪುಸ್ತಕಗಳಲ್ಲಿ ಈ ಮಾರ್‍ಪಾಡುಗಳನ್ನು ಮಾಡಿಕೊಂಡಿದ್ದಾರೆ. ಈ ರೀತಿ ಹೆಚ್ಚು ಹೆಚ್ಚು ಮಂದಿ ಈ ಮಾರ್‍ಪಾಡುಗಳನ್ನು ತಮ್ಮ ಬರಹಗಳಲ್ಲಿ ಬಳಸತೊಡಗಿದಲ್ಲಿ ಸರಕಾರವೂ ಅದಕ್ಕೆ ಮನ್ನಣೆ ಕೊಡದಿರ­ಲಾರದು. ಇದಲ್ಲವೇ ಮಂದಿಯಾಳ್ವಿಕೆ (ಪ್ರಜಾಪ್ರಬುತ್ವ)?

* ಕನ್ನಡಕ್ಕೆ ಭೌತಿಕವಾಗಿ -ಸಾಂಸ್ಕೃತಿಕವಾಗಿ ದೂರದಲ್ಲಿರುವ ಇಂಗ್ಲಿಷಿಗಿಂತ ಸಂಸ್ಕೃತವನ್ನೇ ನೀವು ಹೆಚ್ಚು ವಿರೋಧಿಸುವಂತೆ ಕಾಣುತ್ತದೆಯಲ್ಲ, ಯಾತಕ್ಕೆ?
ಸಂಸ್ಕ್ರುತದ ಕುರಿತಾಗಿ ನನಗೆ ಯಾವ ವಿರೋದವೂ ಇಲ್ಲ. ಕನ್ನಡ ಬರಹದ ಮೇಲೆ, ವ್ಯಾಕರಣದ ಮೇಲೆ, ಮತ್ತು ಪದನೆರಕೆ(ಕೋಶ)ಯ ಮೇಲೆ ಕನ್ನಡದ ಅರಿವಿಗರು (ವಿದ್ವಾಂಸರು) ಸಂಸ್ಕ್ರುತದ ದೊಡ್ಡದೊಂದು ಹೊರೆಯನ್ನೇ ಹೊರಿಸಿದ್ದಾರೆ. ಈ ಹೊರೆಯನ್ನು ತೆಗೆದುಹಾಕದಿದ್ದರೆ ಕನ್ನಡ ಬರಹ ಎಲ್ಲಾ ಕನ್ನಡಿಗರನ್ನೂ ತಲಪುವ ಹಾಗೆ ಮಾಡುವ ಕೆಲಸ ಹಿಂದೆ ಬೀಳುತ್ತದೆ.

ಈ ಹೊರೆ ಎಶ್ಟು ದೊಡ್ಡದು ಎಂಬುದನ್ನು ತಿಳಿಯಲು ಕನ್ನಡ ಸಾಹಿತ್ಯ ಪರಿಶತ್ತು ಪ್ರಕಟಿಸಿರುವ ದಪ್ಪವಾದ ಏಳು ಸಂಪುಟಗಳ ಕನ್ನಡ ನಿಗಂಟನ್ನು ನೋಡಬಹುದು. ಇದರಲ್ಲಿ ಕೊಟ್ಟಿರುವ ಪದಗಳಲ್ಲಿ ಸುಮಾರು ನೂರಕ್ಕೆ ಎಪ್ಪತ್ತಯ್ದರಶ್ಟು ಪದಗಳೂ ಸಂಸ್ಕ್ರುತ ಪದಗಳು! ಇವೆಲ್ಲವೂ ಹೇಗೆ ಕನ್ನಡ ಪದಗಳಾಗುತ್ತವೆ? ನೂರಾರು ವರ್‍ಶಗಳಶ್ಟು ಹಿಂದೆ ಯಾರೋ ಒಬ್ಬ ಕವಿ ತನ್ನ ಕಾವ್ಯದಲ್ಲಿ ನೂರಾರು ಸಂಸ್ಕ್ರುತ ಪದಗಳನ್ನು ಬಳಸಿರುವನಾದರೆ, ಅವೆಲ್ಲವೂ ಈ ‘ಕನ್ನಡ’ ನಿಗಂಟಿನೊಳಗೆ ಸೇರಿಕೊಳ್ಳುತ್ತವೆ. ಆದರೆ, ಸಾವಿರಾರು ಕನ್ನಡಿಗರು ತಮ್ಮ ದಿನನಿತ್ಯದ ಬದುಕಿನಲ್ಲಿ ಬಳಸುತ್ತಿರುವ ನೂರಾರು ಕನ್ನಡದವೇ ಆದ ಪದಗಳು ಈ ನಿಗಂಟಿನಿಂದ ಹೊರಗೆಯೇ ಉಳಿದಿರುತ್ತವೆ. ಇಂತಹ ನಿಗಂಟನ್ನು ನಾನಂತೂ ಕನ್ನಡ ನಿಗಂಟೆಂದು ಕರೆಯಲಾರೆನು.

ನನ್ನ ಅನಿಸಿಕೆಯೇನೆಂದರೆ, ಈ ನಿಗಂಟಿನಲ್ಲಿ ಬರುವ ಪದಗಳಲ್ಲಿ ಸುಮಾರು ಅರೆವಾಶಿಯಶ್ಟನ್ನೂ ತೆಗೆದುಹಾಕಬೇಕು. ಇದಲ್ಲದೆ, ಕನ್ನಡಿಗರ ಮಾತಿನ ಮತ್ತು ಬದುಕಿನ ಅಂಗವಾಗಿರುವ ಮತ್ತು ಕನ್ನಡದವೇ ಆಗಿರುವ ಪದಗಳೆಲ್ಲವೂ ಕನ್ನಡ ನಿಗಂಟಿನಲ್ಲಿ ಜಾಗ ಪಡೆಯಬೇಕು. ಕನ್ನಡದ ಬೇಸಾಯಗಾರರು, ಕುಂಬಾರರು, ನೇಕಾರರು, ಕಮ್ಮಾರರು, ಬೆಸ್ತರು ಮತ್ತು ಇಂತಹವೇ ಬೇರೆ ಹಲವು ಕೆಲಸಗಳಲ್ಲಿ ತೊಡಗಿಕೊಂಡಿರುವವರು ಸಾವಿರಾರು ಕನ್ನಡದವೇ ಆದ ಪದಗಳನ್ನು ಬಳಸುತ್ತಿದ್ದಾರೆ. ಇವನ್ನೆಲ್ಲ ಹೊರಗಿಟ್ಟಿರುವ ನಿಗಂಟು ಕನ್ನಡದ ನಿಗಂಟಾಗಲಾರದು.

* ನಿಮ್ಮ ಸಂಶೋಧನ ಸಲಹೆಗಳಿಗೆ ಅಷ್ಟಿಷ್ಟು ಸಹಮತ ಇರುವಂತೆ ವ್ಯಾಪಕ ವಿರೋಧವೂ ಇರುವುದಕ್ಕೆ ನಿಮ್ಮ ಪ್ರತಿಕ್ರಿಯೆಯೇನು?
ಯಾವ ಬಗೆಯ ಮಾರ್‍ಪಾಡನ್ನು ತರಬೇಕೆಂದಿದ್ದರೂ ಅದನ್ನು ವಿರೋದಿಸುವವರು ಇದ್ದೇ ಇರುತ್ತಾರೆ. ಇವರಲ್ಲಿ ಹೆಚ್ಚಿನವರೂ ನಾವು ತರಬೇಕೆಂದಿರುವ ಮಾರ್‍ಪಾಡುಗಳು ನಿಜಕ್ಕೂ ಎಂತಹವು, ಅವುಗಳಿಂದೊದಗುವ ಪ್ರಯೋಜನ­ಗಳು ಮತ್ತು ತೊಡಕುಗಳು ಎಂತಹವು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ ವಿರೋದಿಸುತ್ತಾರೆ. ಇದನ್ನು ತಿಳಿದುಕೊಂಡ ಬಳಿಕ ಅವರಲ್ಲಿ ಹೆಚ್ಚಿನವರೂ ಆಮೇಲೆ ಈ ಮಾರ್‍ಪಾಡುಗಳನ್ನು ಜೋರಾಗಿಯೇ ಬೆಂಬಲಿಸಲು ತೊಡಗುತ್ತಾರೆ.

ಹಾಗಾಗಿ, ವಿರೋದಿಸುವವರಿದ್ದಾರೆಂದು ನಾವೇನೂ ಅಂಜಿ ಕುಳಿತು­ಕೊಳ್ಳ­­ಬೇಕಾಗಿಲ್ಲ. ಕನ್ನಡ ಬರಹದಲ್ಲಿ ನಾವು ನಡೆಸಬೇಕಾ­ಗಿ­ರುವ ಈ ಮಾರ್‍ಪಾಡುಗಳು ಕನ್ನಡದ ಮತ್ತು ಕನ್ನಡಿಗರ ಏಳಿಗೆಗೆ ನೆರವಾಗಬಲ್ಲುವೆಂಬ ಗಟ್ಟಿ ನಂಬಿಕೆ ನಮ್ಮಲ್ಲಿರುವುದ­­ರಿಂದ, ಇವತ್ತಲ್ಲದಿದ್ದರೆ ನಾಳೆಯಾದರೂ ಈ ಮಾರ್‍ಪಾಡುಗಳು ನಡೆದೇ ನಡೆಯುತ್ತವೆಯೆಂದು ಹೇಳಬಲ್ಲೆವು.

* ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚುತ್ತಿರುವ ಇವತ್ತಿನ ಸಂದರ್ಭದಲ್ಲಿ ನೀವು ಸೂಚಿಸುವ ಮಾರ್ಗಗಳು ಎಷ್ಟು ಉಪಯುಕ್ತ?
ಎಲ್ಲಾ ಕನ್ನಡಿಗರಿಗೂ ಕನ್ನಡವೇ ಕಲಿಕೆನುಡಿ (ಶಿಕ್ಶಣ ಮಾದ್ಯಮ) ಆಗಬೇಕೆಂಬುದು ನನ್ನ ನಿಲುವು. ಬಡವರಿಗೆ ಒಂದು ಬಗೆಯ ಶಾಲೆ, ಮತ್ತು ಬಲ್ಲಿದರಿಗೆ ಇನ್ನೊಂದು ಬಗೆಯ ಶಾಲೆ ಎಂಬ ವ್ಯತ್ಯಾಸ ಇರಲೇ ಕೂಡದೆಂಬುದು ಇದಕ್ಕೆ ಒಂದು ಕಾರಣವಾದರೆ, ಎಲ್ಲಾ ವರ್ಗದ ಮಕ್ಕಳಿಗೂ ತಾಯ್ನುಡಿಯೇ ಅತ್ಯುತ್ತಮವಾದ ಕಲಿಕೆನುಡಿ ಎಂಬುದನ್ನು ಎಲ್ಲಾ ಅರಕೆಗಳೂ ತೋರಿಸಿಕೊಟ್ಟಿವೆ ಎಂಬುದು ಇನ್ನೊಂದು ಕಾರಣ.

ಕೆಲವೇ ಕೆಲವು ಮಂದಿಗೆ ಹಣ ಮಾಡಲು ನೆರವಾಗುವಂತೆ ಕನ್ನಡ ಮಕ್ಕಳ ಮೇಲೆ ಇಂಗ್ಲಿಶ್ ಕಲಿಕೆನುಡಿಯನ್ನು ಹೇರುವುದು ಇಲ್ಲವೇ ಮಕ್ಕಳ ತಾಯಿ­ತಂದೆ­­­ಯರು ಅದಕ್ಕೆ ಹಾತೊರೆಯುವಂತೆ ಮಾಡುವುದು ಸರಿಯಲ್ಲ. ಇಂಗ್ಲಿಶ್ ನುಡಿಯನ್ನು ಒಂದು ನುಡಿಯಾಗಿ ಕಲಿಸುವುದಕ್ಕೂ ಅದನ್ನು ಕಲಿಕೆನುಡಿಯಾಗಿ ಬಳಸುವುದಕ್ಕೂ ನಡುವೆ ದೊಡ್ಡ ವ್ಯತ್ಯಾಸ ಇದೆ ಎಂಬುದು ಮಕ್ಕಳ ತಾಯಿತಂದೆಯರಿಗೆ ಮನವರಿಕೆಯಾಗುವಂತೆ ಮಾಡಬೇಕಾಗಿದೆ.

* ಪ್ರಶಸ್ತಿ-ಸನ್ಮಾನ ಸಮಾರಂಭಗಳು ಹಾಗಿರಲಿ, ಭಾಷಣ-ವಿಚಾರ ಸಂಕಿರಣಗಳಿಗೂ ನೀವು ಹೋಗಬಯಸುವುದಿಲ್ಲ. ಯಾತಕ್ಕೆ?
ನನ್ನ ಅರಕೆಗೆ ಸಂಬಂದಿಸಿರುವ ವಿಶಯದಲ್ಲಿ ಅಂತಹ ಹಲವು ಕೂಟಗಳಿಗೆ ನಾನು ಹಿಂದೆ ಹೋಗಿದ್ದೆ. ಆದರೆ, ನಮ್ಮ ದೇಶದಲ್ಲಿ ನಡೆಯುವ ಇಂತಹ ಹೆಚ್ಚಿನ ಕೂಟಗಳೂ ನನಗೆ ಯಾವ ನೆರವನ್ನೂ ನೀಡಿಲ್ಲ. ಹಾಗಾಗಿ, ಸುಮಾರು ಹದಿನಯ್ದು-ಇಪ್ಪತ್ತು ವರ್‍ಶಗಳಿಂದ ನಾನು ಇಂತಹ ಎಲ್ಲಾ ಕೂಟಗಳಿಂದಲೂ ದೂರವೇ ಉಳಿದಿದ್ದೇನೆ, ಮತ್ತು ನನ್ನ ಎಲ್ಲಾ ಸಮಯವನ್ನೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿ­ದ್ದೇನೆ. ಇದರಿಂದಾಗಿ ನನಗೆ ಅರಕೆಯನ್ನು ನಡೆಸಲು ಹೆಚ್ಚು ಸಮಯ ದೊರೆಯುತ್ತಿದ್ದು, ಅದನ್ನು ಹೆಚ್ಚು ಆಳವಾಗಿ ಮತ್ತು ವಿಸ್ತಾರವಾಗಿ ನಡೆಸಲು ಸಾದ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT