ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯ ಆಧಾರಿತ ಸಿನಿಮಾ ಸವಾಲಿನ ಕೆಲಸ’

ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅಭಿಪ್ರಾಯ
Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕತ್ತಲೆಂದರೆ ಕತ್ತಲು. ಕಣ್ಣಿಗೆ ಕಣ್ಣು ತಾಗಿ­ಸಿದರೂ ಕಾಣದಂಥ ಕತ್ತಲು ಎಂಬ ವಾಕ್ಯವು ಶಿವರಾಮ ಕಾರಂತರ ಕಾದಂಬರಿ ಜೋಮನ ದುಡಿಯಲ್ಲಿದೆ. ಇದೊಂದು ತುಂಬಾ ಸುಂದರವಾದ ವಾಕ್ಯ. ಆದರೆ ಈ ವಾಕ್ಯ ನೀಡುವ ಚಿತ್ರಣವನ್ನು ಸಿನಿಮಾದ ಮೂಲಕ ಬಿಂಬಿಸುವುದು ಅಸಾಧ್ಯ’

–ಇದೇ ಸಾಹಿತ್ಯ ಹಾಗೂ ಸಿನಿಮಾದ ನಡುವೆ ಇರುವ ಕಂದರ ಎಂದು ಹೇಳಿದ್ದು ನಿರ್ದೇಶಕ ಗಿರೀಶ್‌ ಕಾಸರವಳ್ಳಿ.
ರೆೇನ್‌ಟ್ರೀ ಮೀಡಿಯಾ ನಗರದ ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಕಲಾ ಕೇಂದ್ರದಲ್ಲಿ ಆಯೋಜಿ­ಸಿರುವ ‘ದಿ ಬೆಸ್ಟ್‌ ಆಫ್‌ ಬೆಂಗಳೂರು ಇನೋವೇಷನ್‌ ಅಂಡ್‌ ಸಸ್ಟೈನಬಿಲಿಟಿ’ ಉತ್ಸವದ ಅಂಗವಾಗಿ ಗುರು­ವಾರ ಸಂಜೆ ನಡೆದ ‘ಸಾಹಿತ್ಯ ಹಾಗೂ ಸಿನಿಮಾ ಕುರಿತ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿನಿಮಾದಲ್ಲಿ ಕತ್ತಲೆಯನ್ನು ನಿರ್ಮಿಸಲು ಸಾಧ್ಯವೇ ಇಲ್ಲ. ಏಕೆಂದರೆ ಕತ್ತಲು ಇದೆ ಎಂದು ನಿಮಗೆ ತಿಳಿಸಲು ಬೆಳಕು ಬೇಕು. ಬೆಳಕಿನ ಮೂಲಕ ನಾವು ಸಿನಿಮಾದಲ್ಲಿ ಕತ್ತಲು ಸೃಷ್ಟಿಸುತ್ತೇವೆ. ಬೆಳಕಿನ ವೈವಿಧ್ಯದ ಮೂಲಕ ಬೆಳಿಗ್ಗೆ, ಮಧ್ಯಾಹ್ನ ಸಂಜೆ ಎಂಬು­ದನ್ನು ತೋರಿ­ಸುತ್ತೇವೆ’ ಎಂದು ಅವರು ವಿವರಿಸಿದರು.

‘ಸಿನಿಮಾವನ್ನು ಸಮಯದ ಮಿತಿ­ಯಲ್ಲಿ ನಿರ್ಮಿಸ­ಬೇಕಾಗುತ್ತದೆ. ದೃಶ್ಯದ ಪರಿಕಲ್ಪನೆ ಇರಬೇಕಾಗುತ್ತದೆ. ಸಾಹಿ­ತ್ಯದಲ್ಲಿ ಪದಗಳು ಮಾತ್ರ. ಆದರೆ ಸಿನಿ­ಮಾದಲ್ಲಿ ಬಣ್ಣ, ಭಾವನೆ, ತಂತ್ರಜ್ಞಾನ, ಜೀವವಿದೆ. ಸಾಹಿತ್ಯ ಕೃತಿಯನ್ನು ಆಧಾರಿಸಿ ಸಿನಿಮಾ ಮಾಡುವುದು ಸವಾಲಿನ ಕೆಲಸ. ಸಿನಿಮಾ ಎಂದರೆ ನಿರ್ದೇಶಕನ ಕಲಾ ಸೃಷ್ಟಿ’ ಎಂದು ಕಾಸರವಳ್ಳಿ ತಿಳಿಸಿದರು.

ಗುಲಾಬಿ ಟಾಕೀಸ್‌ ಹಾಗೂ ದ್ವೀಪ ಸಿನಿಮಾದ ದೃಶ್ಯ ತೋರಿಸುವ ಮೂಲಕ ಅವರು ಸಾಹಿತ್ಯ ಹಾಗೂ ಸಿನಿಮಾದ ನಡುವಿನ ವ್ಯತ್ಯಾಸವನ್ನು ಬಿಡಿ­ಸಿಡಲು ಪ್ರಯತ್ನಿಸಿದರು.

ಸಾಹಿತ್ಯದಲ್ಲಿ ಸಾಧ್ಯವಾಗದ್ದನ್ನು ಸಿನಿಮಾದ ಮೂಲಕ ತೆರೆದಿಡಬಹುದು ಎಂಬುದನ್ನು ಅವರು ಗುಲಾಬಿ ಟಾಕೀಸ್‌ನಲ್ಲಿ ಬರುವ ನೇತ್ರ ಹಾಗೂ ಗುಲಾಬಿ ನಡುವಿನ ಸಂಭಾಷಣೆಯ ದೃಶ್ಯವನ್ನು ತೋರಿಸಿ ವಿವರಿಸಿದರು.

‘ಪೂರ್ಣಚಂದ್ರ ತೇಜಸ್ವಿ ಅವರು ತಬರನ ಕಥೆಯನ್ನು ವರದಿ ಮಾಡಿದಂತೆ ಬರೆದಿದ್ದಾರೆ. ಮಾಡಿದ್ದರಂತೆ, ತಂದಿದ್ದರಂತೆ ಎಂದು ಭೂತಕಾಲದಲ್ಲಿ ವಿವರಿಸುತ್ತಾ ಹೋಗುತ್ತಾರೆ. ಆದರೆ ಸಿನಿಮಾದಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ’ ಎಂದು ಕಾಸರವಳ್ಳಿ ಅವರು ಪ್ರತಿಪಾದಿಸಿದರು.

ಸಂವಾದ ನಡೆಸಿಕೊಟ್ಟ ನಿರ್ದೇಶಕ ಪ್ರಕಾಶ್‌ ಬೆಳವಾಡಿ, ‘ದೇವರ ನಂತರ ನಿರ್ದೇಶಕನಿಗೆ ಹೆಚ್ಚು ಶಕ್ತಿ’ ಎಂದು ತಮಾಷೆ ಮಾಡಿದರು.

ಇದಕ್ಕೂ ಮೊದಲು ವಾರ್ತಾ  ಸಚಿವ ರೋಷನ್‌ ಬೇಗ್‌ ಉತ್ಸವಕ್ಕೆ ಚಾಲನೆ ನೀಡಿದರು.
ಈ ಉತ್ಸವದಲ್ಲಿ ನಗರದ ಬೆಳವಣಿಗೆ, ಸಾಧನೆ­ಯನ್ನು ಬಿಂಬಿಸಲಾಗಿದೆ.   ಸರ್ಕಾರದ ಸಾಧನೆಗಳನ್ನು ತಿಳಿಸುವ ಮಾಹಿತಿ ಪ್ರದರ್ಶನ, ಸಕಾಲ ಸೇವೆಯ ವಿವರ ಹಾಗೂ ಬಿಎಂಟಿಸಿಯ ಹಾಪ್‌ ಆನ್‌ ಹಾಪ್‌ ಆಫ್‌ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವ ಕೌಂಟರ್‌ ತೆರೆಯಲಾಗಿದೆ.

ಆರೋಗ್ಯ, ತಂತ್ರಜ್ಞಾನದ ಹೊಸ ಅನ್ವೇಷಣೆಗಳ ಬಗ್ಗೆ ಮಾಹಿತಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT