ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಸಾಕ್ಷಿಯನ್ನು ನುಂಗಿದ ಜಾತೀಯತೆ

Last Updated 28 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಅಹಿಂದ ತನ್ನ ಸಾಧ್ಯತೆಗಳನ್ನು ಪ್ರಕಟ­ಪಡಿಸಿದಾಗ ಈವರೆಗಿನ  ಪ್ರಮುಖ ರಾಜಕೀಯ ಹುರಿಯಾಳುಗಳಾದ  ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳನ್ನು ಪಕ್ಕಕ್ಕೆ ಸರಿಸಲು ಸಾಧ್ಯ­ವಾಗಿದ್ದು ದಿಟ.

ಅಹಿಂದದಿಂದ ಹೊರಗುಳಿದ ಒಕ್ಕಲಿಗ  ಲಿಂಗಾಯತ ಮತ್ತು ಬ್ರಾಹ್ಮಣ ಜಾತಿ­ಗಳು ಚಾರಿತ್ರಿಕವಾಗಿ ಎಸಗಿರುವ ನ್ಯಾಯ ಅನ್ಯಾಯಗಳ ಆತ್ಮಾವಲೋಕನ ಮಾಡಿಕೊಳ್ಳ­ಬೇಕಾದ ಅಗತ್ಯ ಇಂದು ಒದಗಿಬಂದಿದೆ. ಅಹಿಂದ  ಕೇವಲ ರಾಜಕೀಯ ಬಲಾಬಲದ ಪ್ರಶ್ನೆಯಾಗದೆ ಹೊಸ ಸಾಮಾಜಿಕ ಮೌಲ್ಯ ಮತ್ತು ಬದುಕಿನ ಮಾರ್ಗಗಳನ್ನು ಹುಟ್ಟುಹಾಕಬೇಕಾಗಿದೆ. ಇಲ್ಲ­ವಾದಲ್ಲಿ ಪ್ರಬಲ ಕೋಮುಗಳು ಕಟ್ಟಿಕೊಂಡ ಜಾತಿ ಬಲಾಢ್ಯದ ವರ್ತನೆಗಳನ್ನೇ ಅಧಿಕಾರಕ್ಕೆ ಬರುವ ಎಲ್ಲಾ ಜಾತಿಗಳು ರೂಢಿಸಿಕೊಳ್ಳುತ್ತವೆ.

ಭಾರತದಲ್ಲಿ ಬ್ರಾಹ್ಮಣ್ಯದಿಂದ ಜಾತಿ ವ್ಯವಸ್ಥೆ ನೆಲಗಟ್ಟಿದೆ ಎಂಬ ದೂರು ಆ ಸಮುದಾಯಕ್ಕೆ ಅಂಟಿದ ಶಾಪವೇ ಆಗಿದೆ. ಚರಿತ್ರೆಯುದ್ದಕ್ಕೂ ಬ್ರಾಹ್ಮಣ್ಯದ ಜಿಡ್ಡುತನ, ಜಾತಿ ಕಾರಣದ ಅವಕಾಶ ರಾಜಕಾರಣ, ಸ್ವಾರ್ಥ, ಮೇಲು ಕೀಳು, ಮಡಿ ಮೈಲಿಗೆಯ ಭಾವನೆಗಳು– ಇವೆಲ್ಲಾ ಶತಮಾನಗಳಿಂದ ಟೀಕೆಗೆ ಒಳಗಾಗಿವೆ. ಚರಿತ್ರೆಯುದ್ದಕ್ಕೂ ಬ್ರಾಹ್ಮಣ ವಿರೋಧಿ ನೆಲೆ­ಯಲ್ಲಿ ಹೋರಾಟಗಳು, ಚಳವಳಿಗಳು ನಡೆದೇ ಇವೆ. ಈ ಎಲ್ಲಾ ಟೀಕೆಗಳ ನಂತರವೂ  ದೇಶದ ಸಂಪತ್ತು ಮತ್ತು ಅಧಿಕಾರದ ಮೇಲಿನ ಬ್ರಾಹ್ಮಣರ ಹಿಡಿತ ಸಡಿಲಗೊಂಡಿಲ್ಲ. ಅದರ ಜೊತೆಗೆ ಆತ್ಮ ವಿಮರ್ಶೆಯಲ್ಲಿ ತೊಡಗಿದ ಬೌದ್ಧಿಕ ವರ್ಗ ತನ್ನ ಸಮುದಾಯದ ಒಳಗಿನ ಹುಳುಕುಗಳನ್ನು ಎತ್ತಿ ಹಿಡಿದು ಅದರ ಸುಧಾರಣಾ ಪ್ರಯತ್ನಗಳನ್ನು ನಡೆಸಿದೆ. ಉದಾ­ಹರಣೆಯಾಗಿ ಸುಮಾರು ಎರಡು ಶತಮಾನಗಳ ಹಿಂದೆ ಸತಿ ಪದ್ಧತಿ, ಮೂರ್ತಿ ಪೂಜೆಗಳ ಬಗ್ಗೆ ಬ್ರಹ್ಮ ಸಮಾಜದ ಖಂಡನೆ ಆತ್ಮಾವ­ಲೋಕನದಲ್ಲಿ ಹುಟ್ಟಿದ ಹೋರಾಟಗಳೇ ಆಗಿವೆ.

ಆತ್ಮ ವಿಮರ್ಶೆ ಮಾಡಿಕೊಳ್ಳಲಾರದ ಸಮುದಾಯ­ಗಳಿಗೆ ಅವು ಎಸಗಿರಬಹುದಾದ ಅಪರಾಧದ ಎಚ್ಚರವೂ ಇರುವುದಿಲ್ಲ. ದಲಿತ ಚಳವಳಿ ಜಾತಿ ವ್ಯವಸ್ಥೆಯನ್ನು ಜಾಡಿಸಿದಾಗ ಅದರ ಹಿಂದೆ ತೂಗಾಡುವ ಪ್ರೇತರೂಪಗಳಲ್ಲಿ ಭೂ ಜಮೀನುದಾರರೂ ಕಾಣಿಸಿಕೊಳ್ಳುತ್ತಾರೆ. ಇಡೀ ಭಾರತವನ್ನು ಕುರಿತು ಹೇಳುವಾಗ ಭೂ ಜಮೀನುದಾರ ವರ್ಗವೆಂಬ ಸಾರ್ವತ್ರಿಕವಾದ ಪದವೊಂದನ್ನು ಬಳಸಿದರೂ ಇಲ್ಲಿ ಇದು ಕರ್ನಾಟಕದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಅನ್ವಯಿಸುತ್ತದೆ. ಗೌಡ, ಹೆಗ್ಗಡೆ, ಭಂಟ, ಪಟೇಲ, ರೆಡ್ಡಿ ಇತ್ಯಾದಿ ಜಾತಿಸೂಚಕ ನಾಮಧೇಯಗಳಿಂದ ಕರೆಸಿ ಕೊಳ್ಳುವವರು ಭೂ ಒಡೆತನ ಹೊಂದಿರುವ ಜಾತಿ­ಗಳು. ಲಿಂಗಾಯತರಲ್ಲಿ ಬಹು ಸಂಖ್ಯಾತರು ರೈತರೇ . ಆದರೂ ಉಳಿದ ಹಲವು ಕಸುಬಿನ ಮೂಲದಿಂದ ಬಂದವರೂ ಇದ್ದಾರೆ. ಆದರೂ ಅದು ಒಂದು ಜಾತಿಯಾಗಿ ಕಾಣಿಸಿಕೊಳ್ಳುವುದ­ರಿಂದಲೇ ರಾಜಕೀಯ ಶಕ್ತಿಯಾಗಿ ಅಧಿಕಾರಕ್ಕೆ ಬರಲು ಕಾರಣವಾಗಿದೆ ಎನ್ನುವುದರಲ್ಲಿ ಅನು­ಮಾನವಿಲ್ಲ.

ಹಾಗಾಗಿಯೇ ಕರ್ನಾಟಕದಲ್ಲಿ ಇಪ್ಪತ್ತ ಮೂರು  ಜನ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳಲ್ಲಿ ಹೆಚ್ಚು ಮಂದಿ ಲಿಂಗಾಯತರು ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಹನ್ನೆರಡನೆ ಶತಮಾನದ ವಚನ ಚಳವಳಿ ಸಮಾಜದ ಅಂಕು ಡೊಂಕುಗಳನ್ನು ವಿಮರ್ಶೆಗೆ ಒಳಪಡಿಸಿತು. ಆದರೆ ಜಾತಿಯ ಕಡೆಗೆ ದಾಪುಗಾಲು ಹಾಕಿದಾಗ ವೈಚಾರಿಕ ಪ್ರಶ್ನೆಗಳು ಗಾಳಿಕೋಲುಗಳಾದವು. ಉಳಿದ ಸಮುದಾಯಗಳನ್ನು ಮೀರಿ ಏರು­ನಡೆದಂತೆ ಜಾತಿ ವ್ಯವಸ್ಥೆಯ ವಕ್ರತೆಗಳನ್ನು ತನ್ನದಾಗಿಸಿಕೊಂಡಿತು. ತಲೆಯೆತ್ತಿದ ಮಠಗಳು ಜಾತಿ ರಾಜಕಾರಣಕ್ಕೆ ಹಿಡಿದ ಕೊಡೆಗಳಾದವು.

ಒಕ್ಕಲುತನವೇ ಜಾತಿ ಸೂಚಕವಾಗಿ ಕರೆಸಿ­ಕೊಳ್ಳುವ ಒಕ್ಕಲಿಗರು ಹಳ್ಳಿಯ ಮಟ್ಟದ ಜಾತಿ ವ್ಯವಸ್ಥೆಯ ಸ್ಥಿರೀಕರಣಕ್ಕೆ ಪಾಲುದಾರ­ರಾದ­ದ್ದನ್ನು ತನ್ನ ಚರಿತ್ರೆಯ ಆತ್ಮಸಾಕ್ಷಿಯಲ್ಲಿ ಕಂಡು­ಕೊಳ್ಳಬೇಕಾಗಿದೆ. ಭೂಮಿ ಮೇಲಿನ ಒಡೆತನ­ವನ್ನು ಸಾಧಿಸಿದ ಕಾರಣಕ್ಕೆ ಒಕ್ಕಲಿಗರು ಉಳಿದ ಸಮುದಾಯಗಳನ್ನು ತನ್ನ ಅಡಿಯಲ್ಲಿರಿಸಿ­ಕೊಂಡು ಅವರೆಲ್ಲರ ದುಡಿಮೆಯ ಲಾಭವನ್ನು ಪಡೆದುಕೊಳ್ಳುತ್ತಾ ಬಂದಿದೆ. ಅದರ ಭಾಗವಾಗಿ ಅಸ್ಪೃಶ್ಯತೆಯನ್ನು ಗೊಬ್ಬರನೀರು ಹಾಕಿ ಕಾಪಾಡಿಕೊಂಡು ಬಂದಿದೆ. ತಮ್ಮ ಜಾತಿಯ ಸಂಖ್ಯಾ ಬಾಹುಳ್ಯದ ಲಾಭ ಪಡೆದು  ಉಳಿದ  ಸಮುದಾಯಗಳ ಭೂಮಿಯನ್ನು ಕಬಳಿಸುವ ಕೆಲಸ ಶತಮಾನಗಳಿಂದ ನಡೆದಿದೆ.

ಆ ಊರಿನ ಮಟ್ಟಕ್ಕೆ ಯಾರು ಸಣ್ಣ ಪುಟ್ಟ ಜಾತಿಗಳಾಗು­ತ್ತಾರೊ ಅವರ ಭೂಮಿಗಳು ಸಾಲಕ್ಕೆ ಅಡ­ವಿಟ್ಟೋ, ಬಡತನಕ್ಕೆ ಮಾರಬೇಕಾದ ಅನಿವಾರ್ಯ­ತೆ­­ಯನ್ನು ಬಳಸಿಕೊಂಡೋ; ಹತ್ತು ಹಲವು ನೆಪಗಳನ್ನು ಹೇಳುತ್ತಾ ಸುತ್ತಮುತ್ತಲ ಭೂಮಿಯನ್ನು ವಶಪಡಿಸಿಕೊಳ್ಳುತ್ತಾ ಬಂದಿವೆ. ಅದರ ವಿರುದ್ಧ ದನಿ ಎತ್ತುವ ಸ್ಥಿತಿ ಹಿಂದುಳಿದ ಜಾತಿಗಳಿಗಿರದೇ ಹೋದದ್ದು ಕಟುಸತ್ಯ. ಹಾಗೆ ದನಿ ಎತ್ತಿದವರ ಮೇಲೆ ತೋರಿದ ದರ್ಪವನ್ನು ಊಳಿಗಮಾನ್ಯ ವ್ಯವಸ್ಥೆಯ ವಿಕಾರ ರೂಪ­ವೆಂದು ಅರ್ಥವಾಗಲು ಮಾರ್ಕ್ಸ್‌ವಾದ, ಸಮಾಜ­ವಾದದಂತಹ ಚಿಂತನೆಗಳು ನೆರ­ವಾದವು. ಭೂ ಒಡೆತನದ ಕಾರಣದಿಂದಾಗಿ ರೂಪುಗೊಂಡ ಮೇಲು ಕೀಳಿನ ಭಾವನೆ ಇದು ಎಂದು ತೋರಿಸಿಕೊಡಲು ಆಧುನಿಕವಾದ ಚಿಂತನೆಗಳಿಗೆ ಸಾಧ್ಯವಾಗಿದೆ. ಆದರೆ ಆ ದಿಕ್ಕಿನಲ್ಲಿ ಬದಲಾವಣೆ ಸಾಧ್ಯವಾಗಲಿಲ್ಲ.

ಇಪ್ಪತ್ತನೆ ಶತಮಾನದಲ್ಲಿ ಊಳಿಗಮಾನ್ಯ ವ್ಯವಸ್ಥೆಯನ್ನು ವಿರೋಧಿಸಿ ಮಾತನಾಡ ತೊಡಗಿ­ದಾಗ ಜಾತಿನೆಲೆಯ ಭಾರತ ಸಮಾಜಕ್ಕೆ ಅದು ಸರಿಯಾಗಿ ಅರ್ಥವಾಗಲು ಸಾಧ್ಯವಿರಲಿಲ್ಲ. ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರ ನಾಯಕರಿಗೆ ಅರ್ಥವಾದರೂ ಭೂಮಿ ಇಲ್ಲದ­ವರ ಪರವಾಗಿ ಮಾತನಾಡಲು ಅವರಿಗಿನ್ನೂ ಬೇಕಾಗಿರಲಿಲ್ಲ. ಬ್ರಿಟಿಷ್ ವಿರೋಧವನ್ನು ಮುಖ್ಯ ಗುರಿಯಾಗಿಸಿಕೊಂಡ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಅಸಮತೋಲನಗಳ ಕಡೆ ಗಮನ ಹರಿಸಲಿಲ್ಲ. ಗಾಂಧೀಜಿ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಕಟ್ಟಿಕೊಂಡರು. ಜಾತಿ ವ್ಯವಸ್ಥೆ­ಯಲ್ಲಿ ಶ್ರಮ ವಿಭಜನೆಯ ತತ್ವ ಅಡಗಿದೆ­ಯೆಂದು ಪುರಾತನ ವಾದವನ್ನೇ ನಂಬಿದರು. ಜಾತಿ ಎನ್ನುವುದು ಶೋಷಣೆಯ ನೆಲೆಯಲ್ಲಿ ಗಟ್ಟಿಗೊಂಡ ಸಾಮಾಜಿಕ ರಚನೆ ಎಂದು ಮನಗಾಣಲಿಲ್ಲ.

ಶೋಷಿತ ಸಮುದಾಯದ ಪರವಾಗಿ ದನಿ ಎತ್ತಿದ ಬಾಬಾ ಸಾಹೇಬರಿಗೆ ಹಳ್ಳಿಗಳು ಜಾತಿ ಸಂಪ್ರದಾಯಗಳಿಂದ ಕೊಳೆತು ನಾರುವ ಕೂಪಗಳಾಗಿ ಕಂಡವು. ಸ್ವಾತಂತ್ರ್ಯಾನಂತರದ ಭಾರತ  ಪ್ರಜಾಪ್ರಭುತ್ವ­ವನ್ನು ಒಪ್ಪಿಕೊಳ್ಳಲಾಗಿ ಬಹುಸಂಖ್ಯಾತರ ದನಿಗೆ ಶಕ್ತಿನೀಡಿತು. ಸಹಜವಾಗಿ ಮೊದಲ ಹಂತದಲ್ಲಿ ಪ್ರಬಲ ಹಾಗೂ ಬಹು ಸಂಖ್ಯಾತ ಕೋಮಿನವರು ರಾಜಕೀಯ ಚುಕ್ಕಾಣಿ ಹಿಡಿದರು. ಸಂವಿಧಾನ ಬಯಸಿದ ಸಮಾಜವಾದಿ ನೆಲೆಯ ಚಿಂತನೆಯ ಒತ್ತಾಸೆಗಳು ಆಗಾಗ ಪುಟಿದೆದ್ದು ಜೀತ ಪದ್ಧತಿ ನಿಷೇಧ ಕಾಯಿದೆ, ಭೂ ಒಡೆತನದ ಮೇಲಿನ ನಿರ್ಬಂಧ, ಉಳುವವನೆ ಭೂ ಒಡೆಯ ಈ ಕಾಯಿದೆಗಳು ಬಂದಾಗ ಭೂ ಮಾಲೀಕ ಜಾತಿಗಳಿಗೆ ಇರುಸು ಮುರುಸೇ ಆಯಿತು.

ಭೂ ಹಂಚಿಕೆಯ ಮೂಲಕ ಸಮ ಸಮಾಜದ ಆದರ್ಶ ಮಾತ್ರ ಹಳೆಯ ಕನಸಾಗಿ ಹಾಗೆ ಮರೆತು ಹೋಯಿತು. ಈ ನಿಟ್ಟಿನಲ್ಲಿ ಕಾಗೋಡಿನಲ್ಲಿ ನಡೆದ ಭೂ ಹೋರಾಟ ಸಮಾಜವಾದಿ ಹೋರಾಟದ ಒಂದು  ಪ್ರಯೋಗ­ವಾಯಿತು. ವಿನೋಬಾ ಭಾವೆಯವರ ಭೂದಾನ ಚಳವಳಿ ದೊಡ್ಡ ಜಮೀನ್ದಾರರಿಗೆ ವರದಾನವೇ ಆಯಿತು. ಇಂತಹ ಹಲವು ಪ್ರಯತ್ನ­ಗಳ ಫಲವಾಗಿ ಆದಿವಾಸಿಗಳು, ದಲಿತರು, ಅಲೆಮಾರಿಗಳಿಗೆ ಸರ್ಕಾರ ಭೂ ಹಂಚುವ ಯೋಜನೆಗಳನ್ನು ರೂಪಿಸಿದೆ. ಇವೆಲ್ಲಾ ಸಣ್ಣ ಪ್ರಮಾಣದಲ್ಲಾದರೂ ಅಭಿ­ನಂದನೀಯವಾದ ಪ್ರಯತ್ನವೆಂದೇ ಹೇಳಬೇಕು.

ಕರ್ನಾಟಕದಲ್ಲಿ ಆರಂಭವಾದ ರೈತ ಸಂಘ ತನ್ನ ಹೋರಾಟದಲ್ಲಿ  ಭೂ ಹಂಚಿಕೆಯನ್ನು ಮಖ್ಯ ಪ್ರಶ್ನೆಯಾಗಿ ಇರಿಸಿಕೊಳ್ಳಲೇ ಇಲ್ಲ. ರೈತರ ಹಿತ ಕಾಪಾಡುವುದು ಅದರ ಉದ್ದೇಶ­ವಾಯಿತು. ಅಲ್ಲಿ ಜಾತಿ ತಾರತಮ್ಯದ ಪ್ರಶ್ನೆ ಮುಂದಾಗಲಿಲ್ಲ. ಗಾಂಧೀ ಮಾದರಿ ಆದರ್ಶ ಹಳ್ಳಿಗಳನ್ನು ಬಯಸಿತು. ಅಂದರೆ ಭೂಮಿಯುಳ್ಳ ರೈತರ ಸಮಸ್ಯೆ ಮುಖ್ಯವಾಯಿತೇ ಹೊರತು ಭೂ ಹೀನರ ಸಮಸ್ಯೆಗೆ ಪರಿಹಾರ ಕಾಣಲಿಲ್ಲ. ಪ್ರಾಂತ್ಯ ರೈತ ಸಂಘ ಕೃಷಿ ಕೂಲಿ ಕಾರ್ಮಿಕರ ಪರವಾಗಿ ನಿಲ್ಲುತ್ತದೆ. ಅಲ್ಲೂ ಜಾತಿ ಹಿನ್ನೆಲೆಯ ತಾರ­ತಮ್ಯದ ಪ್ರಶ್ನೆ ಹಾಗೆ ಉಳಿಯುತ್ತದೆ. ಕೂಲಿ- ದುಡಿಮೆ ಈ ಸಂಬಂಧವಾದ ವಿಚಾರಗಳು ಚರ್ಚಿತವಾಗುತ್ತವೆ, ಪರಿಹಾರಗಳನ್ನೂ ಕೆಲ­ಹಂತಕ್ಕೆ ಪಡೆಯಲು ಸಾಧ್ಯವಾಗಿದೆ. ಈ ಎಲ್ಲಾ ಹೋರಾಟಗಳು, ಚಿಂತನೆಗಳು, ಸುಧಾರಣೆಗಳು ಜಾತಿ ಹಿನ್ನೆಲೆಯ ಶೋಷಣೆಯನ್ನು  ಸಣ್ಣ ಪ್ರಮಾಣದಲ್ಲಾದರೂ ಕಡಿಮೆಯಾಗಿಸಿದೆ ನಿಜ. ಆದರೆ ಶತಮಾನಗಳಿಂದ ಮಾಡಿದ ಗಾಯಗಳನ್ನು ಸುಲಭವಾಗಿ ಅಳಿಸಿಹಾಕಲು ಸಾಧ್ಯವಾಗಿಲ್ಲ.

ದುರಂತವೆಂದರೆ ಹಳ್ಳಿಯಿಂದ ಹೊರ ಬಂದೂ ತಮ್ಮ ಜಾತಿಯ ಮೂಲ ಗುಣವನ್ನು ಬಿಟ್ಟು ಕೊಡಲಾಗದೆ ಅದನ್ನು ರಾಜಕೀಯ ಗುರುತಾಗಿಸಿಕೊಳ್ಳಲಾಗುತ್ತದೆ. ಇದು ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಪ್ರಸಕ್ತ­ದಲ್ಲಿ ನಮ್ಮ ಮುಂದಿರುವ ಸವಾಲು ಇದೇ ಆಗಿದೆ.

ಕರ್ನಾಟಕದ ರಾಜಕೀಯದಲ್ಲಿ ಒಕ್ಕಲಿಗ ಜಾತಿ ಐಡೆಂಟಿಟಿಯನ್ನು ಲಾಭಮಾಡಿಕೊಳ್ಳಲು ಜೆಡಿಎಸ್‌ಗೆ ಸಾಧ್ಯವಾಯಿತು. ಹಾಗೆಯೇ ದೇವೇಗೌಡರು ಅಥವಾ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಸಮಯದಲ್ಲಿ ಅವರ ನಾಮಾಂಕಿತದ ಬಲವನ್ನು ಜಾತಿಯ ಜನ ತಮ್ಮ ಮಟ್ಟದ ರಾಜಕೀಯಕ್ಕೆ ಬಳಸಿಕೊಳ್ಳಲು ಹಿಂದೆ­ಬೀಳಲಿಲ್ಲ. ಉಳಿದವರು ಒಕ್ಕಲಿಗರ ಈ ನಡೆಗೆ ರೋಸಿಹೋಗಿ ಮೊದಲೇ ಒಕ್ಕಲಿಗರು ಅದರ ಜೊತೆಗೆ ಅಧಕಾರವೂ ಸೇರಿದರೆ...ಹೀಗೆ ಮಾತ­ನಾಡಿಕೊಳ್ಳುವುದು ಸಾಮಾನ್ಯವಾದ ವಿಷಯ­ವಾಗಿದೆ. ಇದು ಜಾತಿ ಹಿನ್ನೆಲೆಯ ಸ್ವಭಾವಕ್ಕೆ ಹಿಡಿದ ಕನ್ನಡಿಯಾಗದಂತೆ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.

ಮೊನ್ನೆಯಷ್ಟೆ ಡಿಕೆ ಶಿವಕುಮಾರ್ ಒಕ್ಕಲಿಗರ ಸಂಘವನ್ನು ಉದ್ದೇಶಿಸಿ ಮಾತನಾಡುತ್ತಾ ಜಾತಿ ಪ್ರತಿನಿಧಿಯಾಗಿ ತನ್ನಲ್ಲಿ ನಾಯಕತ್ವವನ್ನು ಕಾಣಲು ಬಯಸುವುದು; ಇಂತಹ ಚರ್ಚೆಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತದೆ. ಒಕ್ಕಲಿಗರ ಸಂಘದ ಹುಟ್ಟಿನ ಉದ್ದೇಶಗಳೇ ಮರೆತು ಹೋಗಿವೆ. ೧೯೦೬ರ ಹೊತ್ತಿಗೆ  ಹಿಂದುಳಿದ ಕೃಷಿಕ ಸಮುದಾಯದ ಶೈಕ್ಷಣಿಕ ಬೆಳವಣಿಗೆಗಾಗಿ ಹುಟ್ಟಿದ ಸಂಸ್ಥೆ. ಇದು ಮೈಸೂರು ಪ್ರಾಂತ್ಯದಲ್ಲಿ ನಡೆದ ಹಿಂದುಳಿದ ಚಳವಳಿಯಲ್ಲಿ ಅದರ ಪಾತ್ರ ಬಹು ಮುಖ್ಯವಾಗಿತ್ತು. ಅದು ಇತ್ತೀಚಿನ ದಿನಗಳಲ್ಲಿ ಪಡೆಯುತ್ತಿರುವ ರಾಜಕೀಯ ಸ್ವರೂಪ ಯಾವುದೇ ಜಾತಿ ಸಂಘಟನೆಗಳ ಸಾಲಿಗೆ ಬಂದು ನಿಲ್ಲುತ್ತದೆ, ಮತ್ತು ಚುನಾವಣಾ ರಾಜಕೀಯ­ದಲ್ಲಿ ಜಾತಿ ಧ್ರುವೀಕರಣಕ್ಕೆ ಬಳಕೆ­ಯಾಗುವ ಎಲ್ಲಾ ಲಕ್ಷಣಗಳೂ ಕಾಣತೊಡಗಿವೆ.

ಭೂ ಒಡೆತನ ಅದು ಎರಡು ಎಕರೆಯಾಗಲೀ ಎರಡು ಸಾವಿರವಾಗಲೀ ಆತ್ಮವಿಶ್ವಾಸ ಆತ್ಮಾಭಿಮಾನವನ್ನು ಮೀರಿ ಅಹಮಿಕೆಯನ್ನು ಹುಟ್ಟುಹಾಕುತ್ತದೆ. ಅದರಲ್ಲೂ ಭೂಮಿ ಇಲ್ಲದ ಜಾತಿಯ ಜನರೆದುರು ಬುಸುಗುಡುತ್ತದೆ. ಭೂಮಿ ಬಂಡವಾಳವಾಗಿ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಗಳನ್ನು ಪಡೆದಾಗಲು ಆಡು ಭಾಷೆ ಮತ್ತು ಆಂಗಿಕ ಅಭಿವ್ಯಕ್ತಿಗಳಲ್ಲಿ ಜಾತಿಯ ಮೂಲ ನಡೆಗಳೇನೋ ಎನ್ನುವಂತೆ ಪ್ರಕಟ­ಗೊಳ್ಳುತ್ತವೆ. ಇಂತಹ ನಡೆಯನ್ನು ಸೆರೆ ಹಿಡಿಯುವಲ್ಲಿ ತೆಲುಗು ಸಿನಿಮಾಗಳು ಹೆಚ್ಚು ಯಶಸ್ವಿಯಾಗಿವೆ.

ಹಳೆಪಾಳೆಗಾರಿ ಮೌಲ್ಯ­ಗಳನ್ನೇ ಆದರ್ಶವೆಂದು ಭಾವಿಸುತ್ತಾ ಹುಸಿ ಪ್ರತಿಷ್ಠೆಗಾಗಿ ಸಮುದಾಯ ನರಳುತ್ತದೆ. ಆದರೆ ಆ ನಡೆಗಳು ಪ್ರಜಾಪ್ರಭುತ್ವಕ್ಕೆ ವಿರೋಧಿಯಾದ ನಡೆಗಳೆಂಬುದೂ ಅದರ ಅರಿವಿಗೆ ಬರದೆ ಹೋಗುತ್ತದೆ. ಈಗಾಗಲೇ ಶಿಕ್ಷಣವನ್ನು ಪಡೆದು, ನಗರಗಳಲ್ಲಿ ನೆಲೆನಿಂತು ಎರಡು ಮೂರನೆ ಪೀಳಿಗೆಯಾದರೂ ಇನ್ನೂ ಅಸಹಾಯಕ ಸಮುದಾಯ­ಗಳ ಮೇಲೆ ದೌರ್ಜನ್ಯ ಎಸಗುವ ಹಂತದಲ್ಲಿ ಉಳಿಯುವುದು ಸಾಂಸ್ಕೃತಿಕ ದಾರಿದ್ರ್ಯವೇ ಆಗುತ್ತದೆ.

ಧಾರ್ಮಿಕ ಸಂಸ್ಥೆಗಳು ಸಾಂಸ್ಕೃತಿಕ ಮೌಲ್ಯ­ಗಳನ್ನು ರೂಪಿಸಬೇಕಾದ ಸಾಂಪ್ರದಾಯಿಕ ಜವಾಬ್ದಾರಿಯನ್ನು ಹೊರುತ್ತವೆ. ಆದರೆ ಶೂದ್ರ ಸಮುದಾಯಗಳು ಕಟ್ಟಿಕೊಳ್ಳುವ ಮಠಗಳು ಬಾಹ್ಮಣ ಇಲ್ಲವೆ ವೀರಶೈವ ಮಠಗಳನ್ನು ಅನುಸರಿಸುತ್ತಾ ಅವರ ಸಮಾನವಾಗಿ ನಿಲ್ಲುವ ಪೈಪೋಟಿಗೆ ಬೀಳುತ್ತವೆ. ಆದಿ ಚುಂಚನಗಿರಿ ಮಠ ಆರಂಭದಲ್ಲಿ ಜಾತಿಯ ಬಲಾಬಲವನ್ನು ಗಟ್ಟಿ­ಗೊಳಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಬಾಲಗಂಗಾಧರ ನಾಥ ಸ್ವಾಮೀಜಿಯವರು ಅದನ್ನು ಆರ್ಥಿಕವಾಗಿ ಬಲಪಡಿಸಿದ್ದು ಜಾತಿಯ ಪ್ರಾತಿನಿಧಿಕ ಸ್ಥಾನಕ್ಕೆ ಕೊಂಡೊಯ್ಯಲು ಹಿಂದೆ ಬೀಳಲಿಲ್ಲ. ಯಾವಜಾತಿಗೂ ಸೇರದ ಮೂಲ­ದಲ್ಲಿ  ನಾಥಪಂಥಕ್ಕೆ ಸೇರಿದ ಆದಿಚುಂಚನಗಿರಿ ಮಠ ಒಕ್ಕಲಿಗರ ಮಠವಾಗಿ ಉಳಿದ ಸಮುದಾಯ­ಗಳ ಅಸ್ತಿತ್ವವನ್ನು ಕಿತ್ತು ಕೊಂಡುದು-  ಚರಿತ್ರೆ ಮೌನವಾದರೂ ಆತ್ಮಸಾಕ್ಷಿ ಮೌನವಾಗಬಲ್ಲದೆ?

ಹಿಂದುಳಿದ ಸಮುದಾಯಗಳು ತಮ್ಮ ಜಾತಿಯ ಐಡೆಂಟಿಟಿಯನ್ನು ಹುಡುಕುತ್ತಾ  ಪುರಾಣ, ಚರಿತ್ರೆ ಸಾಹಿತ್ಯದಲ್ಲೆಲ್ಲಾ ಐಕಾನ್‌­ಗಳನ್ನು ಹುಡುಕಿಕೊಳ್ಳುತ್ತವೆ. ಆ ಪೈಪೋಟಿ­ಯಲ್ಲಿ ಒಕ್ಕಲಿಗರು ಹಿಂದೆ ಬೀಳಲಿಲ್ಲ. ಬೆಂಗಳೂರು ಕೆಂಪೇಗೌಡರನ್ನು ಸಾಂಸ್ಕೃತಿಕ ನಾಯಕನೆಂದು ಕರೆಯಲಾಗಿ  ಹೆಸರು ಎಲ್ಲೆಲ್ಲೂ ರಾರಾಜಿಸತೊಡಗಿತು. ನಗರ ಬಡಾವಣೆ, ರಸ್ತೆ, ಬಸ್ ನಿಲ್ದಾಣ ಕಡೆಗೆ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡರ ಹೆಸರನ್ನು ಹಚ್ಚುವಾಗ ಜಾತಿ ಬಲದ ರಾಜಕಾರಣ ಕೆಲಸಮಾಡುತ್ತದೆ. ಜಾತಿಯ ಜನರ ‘ಈಗೊ’ ತೃಪ್ತಿಪಡಿಸಲು ಸರ್ಕಾರ ಕಂಡುಕೊಳ್ಳುವ ಸುಲಭದ ತಂತ್ರವೂ ಆಗುತ್ತದೆ.

ದೊಡ್ಡ ವಿಪರ್ಯಾಸ ವೆಂದರೆ ಕುವೆಂಪು ಹೆಸರು ಜಾತಿ ಸೂಚಕವಾಗಿ ಬಳಕೆಯಾಗುತ್ತಿದ್ದು, ಜಾತಿ ಸಂಘಟನೆಗೆ ಅನಿಕೇತನ, ವಿಶ್ವಮಾನವ ಎಂಬ ಹೆಸರುಗಳನ್ನು ಇರಿಸುವ ವಿರೋದಾಭಾಸಗಳು ನಡೆದಿವೆ. ತಮ್ಮ ಜಾತಿಯ ನಾಯಕ ಗೆದ್ದಾಗ ಅಬ್ಬರಿ­ಸುವ, ತಮ್ಮ ಜಾತಿಯ ಅಹಮಿಕೆಯಿಂದಾಗಿ ಅಸಹಾಯಕ ಸಮುದಾಯಗಳ ಮೇಲೆ ಎಸಗಿರುವ ದೌರ್ಜನ್ಯ, ಮರ್ಯಾದಾ ಹತ್ಯೆ, ದಲಿತರ ಮೇಲಿನ ಕ್ರೌರ್ಯಗಳಂತಹ ಲಜ್ಜೆಗೇಡಿ­ತನದ ನಡೆಯನ್ನು ಆತ್ಮ ವಿಮರ್ಶೆ­ಗೊಳಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT