ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ ಸಮುದ್ರದ ಆಳರಸರು, ತುಂಡರಸರು

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಕಳೆದ ವಾರ ಟೋಕಿಯೊದಲ್ಲಿ ಒಂದು ವಿಶಿಷ್ಟ ಹಬ್ಬಕ್ಕೆ ಕಳೆ ಕಟ್ಟಿತ್ತು. ನೂರಾರು ಮಂದಿ ಶಾಸಕರು, ಅಧಿಕಾರಿಗಳು ಮತ್ತು ಗುತ್ತಿಗೆ­ದಾ­­ರರು ಜಪಾನೀ ಸಂಸತ್ತಿನ ಸಮೀಪದ ಸಭಾಂ­ಗ­ಣದಲ್ಲಿ ಡೋಲು, ನಗಾರಿಗಳ ನಡುವೆ ಸಮ­ರ­ನೃತ್ಯ ಮಾಡಿದರು. ಬಟ್ಟಲಲ್ಲಿ, ಬೋಗು­ಣಿಯಲ್ಲಿ ಅಂದವಾಗಿ ಜೋಡಿಸಿಟ್ಟ ತಿಮಿಂಗಿಲ ಮಾಂಸವನ್ನು ಕಡ್ಡಿಗಳಲ್ಲಿ ಎತ್ತಿ ಎತ್ತಿ ತಿಂದರು. ‘ಏನೇ ಬರಲಿ ಒಗ್ಗಟ್ಟಿರಲಿ’ ಎಂಬರ್ಥದ ಘೋಷಣೆ ಕೂಗಿದರು. ಎಂಥದ್ದೇ ವಿರೋಧ ಯಾರಿಂದಲೇ ಬಂದರೂ ತಾವಂತೂ ತಿಮಿಂಗಿಲ ಮಾಂಸವನ್ನು ತಿಂದೇ ತಿನ್ನುತ್ತೇವೆಂದು ಘೋಷಿಸಿದರು.

ಮೇಲ್ನೋಟಕ್ಕೆ ಹಬ್ಬದ ಆಚರಣೆಯಂತೆ ಕಂಡರೂ ಅಸಲಿಯಾಗಿ ಅದು ಯುದ್ಧ­ಘೋಷಣೆಯೇ ಆಗಿತ್ತು. ತಿಮಿಂಗಿಲ ಬೇಟೆಗೆ ಕಟ್ಟು­ನಿಟ್ಟು ನಿಷೇಧ ಹಾಕಬೇಕೆಂದು ಅಂತರ­ರಾಷ್ಟ್ರೀಯ ನ್ಯಾಯಾಲಯ ಈಚೆಗಷ್ಟೆ (ಏಪ್ರಿಲ್ ೧ರಂದು) ತೀರ್ಪು ನೀಡಿತ್ತು. ಜಗತ್ತಿನ ಬಹುತೇಕ ಎಲ್ಲ ದೇಶಗಳ ಜೀವಸ್ನೇಹಿ ಜನರು ಈ ನಿರ್ಣಯ­ವನ್ನು ಸ್ವಾಗತಿಸಿದ್ದರು. ‘ಗ್ರೀನ್‌ಪೀಸ್’ ಮತ್ತು ‘ಸಾಗರ ಕುರಿಗಾರರ ಸಂಘ’ಗಳು ಹಬ್ಬ ಆಚರಿಸಿ­ದ್ದವು. ಅದರಿಂದ ಜಪಾನೀಯರಿಗೆ ಕೋಪ ಬಂದಿತ್ತು. ಯಾರೇನೇ ಹೇಳಿದರೂ ತಿಮಿಂಗಿಲ­ಗಳನ್ನು ಕೊಂದೇ ಕೊಲ್ಲುತ್ತೇವೆ, ತಿಂದೇ ತಿನ್ನುತ್ತೇವೆ ಎಂದು ತೊಡೆತಟ್ಟಿ ಹೇಳಿದರು.

ತಿಮಿಂಗಿಲಗಳ ಸಾಮೂಹಿಕ ಬೇಟೆಗೆ ೧೯೮೨ರಲ್ಲೇ ನಿಷೇಧ ಹಾಕಲಾಗಿದೆ. ಆದರೆ ವೈಜ್ಞಾನಿಕ ಸಂಶೋಧನೆಯ ಹೆಸರಿನಲ್ಲಿ ಕೆಲಮಟ್ಟಿಗೆ ಬೇಟೆಗೆ ಅವಕಾಶ ಮಾಡಿಕೊಡ­ಲಾಗಿದೆ. ಎಸ್ಕಿಮೊ ಮತ್ತಿತರ ಕೆಲವು ಬುಡಕಟ್ಟು ಜನರ ಸ್ವಂತ ಊಟಕ್ಕಾಗಿ ತಿಮಿಂಗಿಲ ಬೇಟೆಗೆ ಅವಕಾಶವಿದೆ. ಇನ್ನುಳಿದಂತೆ ಯಾರೂ ತಿಮಿಂಗಿ­ಲ­ಗಳನ್ನು ಬೇಟೆಯಾಡುವಂತಿಲ್ಲ. ಜಪಾನೀ­ಯರು ಮಾತ್ರ ವಿಜ್ಞಾನ ಸಂಶೋಧನೆಯ ಹೆಸರಿನಲ್ಲಿ ಪ್ರತಿ ವರ್ಷವೂ ಸಾವಿರಾರು ತಿಮಿಂಗಿಲ­ಗಳನ್ನು ಬೇಟೆಯಾಡಿ ಮಾಂಸವನ್ನು ಶೇಖರಿಸಿ ಮಾರುತ್ತಿದ್ದಾರೆ. ಕಳೆದ ನೂರಿಪ್ಪತ್ತು ವರ್ಷಗಳಿಂದ ತಿಮಿಂಗಿಲ ಬೇಟೆಯನ್ನೇ ಒಂದು ಉದ್ಯಮದಂತೆ ಪೋಷಿಸಿಕೊಂಡು ಬಂದ ದೇಶ ಅದು.

ಅಂಥ ಅಮಾನವೀಯ ಕೃತ್ಯವನ್ನು ನಿಲ್ಲಿಸಬೇಕೆಂದು ಎಲ್ಲ ದೇಶಗಳ, ಅಷ್ಟೇಕೆ ಸ್ವತಃ ಜಪಾನಿನದೇ ಅನೇಕ ಸಂಘ ಸಂಸ್ಥೆಗಳು ಒತ್ತಾಯ ಮಾಡುತ್ತಲೇ ಬಂದಿದ್ದವು. ಆದರೂ ಜಪಾನ್‌­ಅಂಥ ಒತ್ತಡವನ್ನೆಲ್ಲ ಹೇಗೋ ನಿಭಾಯಿಸುತ್ತ ಅಂತರರಾಷ್ಟ್ರೀಯ ತಿಮಿಂಗಿಲ ಆಯೋಗದ ಎದುರು ಎಂತೆಂಥದೊ ಬಗೆಯ ಒತ್ತಡಗಳನ್ನು ಸೃಷ್ಟಿಸಿ ಪ್ರತಿ ವರ್ಷವೂ ತಿಮಿಂಗಿಲ ಬೇಟೆಗೆ ಲೈಸೆನ್ಸ್ ಪಡೆಯುತ್ತಿತ್ತು. ಶಸ್ತ್ರಾಸ್ತ್ರಸಜ್ಜಿತ ಹಡಗುಗಳನ್ನು ವಿಜೃಂಭಣೆಯಿಂದ ತನ್ನ ಭೌಗೋಲಿಕ ಗಡಿಯನ್ನು ದಾಟಿಸಿ, ಅಂತರ­ರಾಷ್ಟ್ರೀಯ ಶರಧಿಗಳಲ್ಲೂ ಓಡಾಡುತ್ತ ಅಂಟಾರ್ಕ್‌­ಟಿಕಾ ಖಂಡದ ಸುತ್ತಲೂ ತಿಮಿಂಗಿಲ­ಗಳನ್ನು ಅಟ್ಟಾಡಿಸಿ ಕೊಲ್ಲುತ್ತಿತ್ತು.

ತಿಮಿಂಗಿಲಗಳು ಭಾರೀ ಗಾತ್ರದ ಪ್ರಾಣಿಗಳಾ­ದರೂ ಅವುಗಳನ್ನು ಸಭ್ಯದೈತ್ಯ ಎಂತಲೇ ಕರೆಯು­ತ್ತಾರೆ. ಮನುಷ್ಯರಿಗೆ ಅಥವಾ ಹಡಗುಗಳಿಗೆ ಅವು ತೊಂದರೆ ಕೊಡುವುದಿಲ್ಲ.  ತಮ್ಮ ಪಾಡಿಗೆ ತಾವು ಆಳ ಸಮುದ್ರದಲ್ಲಿ ಬದುಕಿರುತ್ತವೆ. ಮೂಲತಃ ಅವು ಸಮುದ್ರಜೀವಿಗಳೇ ಆಗಿರಲಿಲ್ಲ. ಐದಾರು ಕೋಟಿ ವರ್ಷಗಳ ಹಿಂದೆ ಸಮುದ್ರದ ಅಂಚಿನಲ್ಲಿ ಜೀವಿಸುತ್ತಿದ್ದ ಕರಡಿಗಾತ್ರದ ಸ್ತನಿ ಜೀವಿಗಳು ಸಮುದ್ರಕ್ಕೆ ಇಳಿದು ಮೀನು ತಿನ್ನಲು ಕಲಿತವು. ಕ್ರಮೇಣ ಸಮುದ್ರದಲ್ಲೇ ಬದುಕುವುದನ್ನು ಕಲಿತವು. ಅವುಗಳ ಮುಂಗಾಲುಗಳೇ ರೆಕ್ಕೆ­ಗಳಾದವು. ಹಿಂಗಾಲುಗಳು ಕಣ್ಮರೆಯಾದವು. ಬಾಲವೇ ಚುಕ್ಕಾಣಿಯಾಗಿ ಬದಲಾಯಿತು. ಮೂಗಿನ ರಂಧ್ರ ಕ್ರಮೇಣ ಮೇಲಕ್ಕೆ ಸರಿಯುತ್ತ ನೆತ್ತಿಗೆ ಬಂತು. ನೆಲದ ಮೇಲಿನ ಜೀವಿಗಳ ಹಾಗೆ ತಿಮಿಂಗಿಲಗಳೂ ಮೂಗಿನ ರಂಧ್ರದಿಂದಲೇ ಉಸಿರಾಡು­ತ್ತವೆ. ಮರಿಗಳನ್ನು ಈಯುತ್ತವೆ. ಮೊಲೆ ಊಡಿಸುತ್ತವೆ. ಅವುಗಳ ಹಾಲಿನಲ್ಲಿ ಕೊಬ್ಬಿನ ಪ್ರಮಾಣ ತೀರಾ ತೀರಾ ಹೆಚ್ಚಿಗೆ ಇರುವುದರಿಂದ ಅದು ನಮ್ಮ ಟೂತ್‌ಪೇಸ್ಟ್ ಥರಾ ಹೊರಕ್ಕೆ ಬರುತ್ತದೆ, ಆ ಮಾತು ಬೇರೆ. ಭೂಮಂಡಲದ ಅತ್ಯಂತ ದೊಡ್ಡ ಗಾತ್ರದ ಜೀವಿಗಳೆನಿಸಿದ ‘ನೀಲಿ ತಿಮಿಂಗಿಲ’ಗಳಲ್ಲಿ ಬಾಣಂತಿ ಪ್ರತಿ ದಿನ ೫೦೦ ಲೀಟರ್ ಹಾಲನ್ನು ಹೊರ ಸೂಸುತ್ತದೆ.

ತಿಮಿಂಗಿಲಗಳು ತಮ್ಮದೇ ವಿಧಾನದಲ್ಲಿ ಸದಾಕಾಲ ಸಮುದ್ರ ಮಥನ ಮಾಡುತ್ತಿರುತ್ತವೆ. ಆಳ ಸಮುದ್ರದಲ್ಲಿರುವ ಪೋಷಕಾಂಶಗಳನ್ನು ಮೇಲಕ್ಕೆ ಎತ್ತಿ ವಿತರಿಸುತ್ತವೆ. ಧ್ರುವ ಪ್ರದೇಶದ ತಂಪು ನೀರಲ್ಲಿ ಮಡುಗಟ್ಟಿದ್ದ ಪೋಷಕ ದ್ರವ್ಯಗಳನ್ನು ಬೆಚ್ಚಗಿನ ಸಮುದ್ರಕ್ಕೆ ಸಾಗಿಸುತ್ತಿ­ರು­ತ್ತವೆ. ಅವುಗಳ ಸಂಖ್ಯೆ ಕಡಿಮೆಯಾದಷ್ಟೂ ಸಾಗರದ ಹಾಗೂ ಭೂಮಂಡಲದ ಜೀವಸಮ­ತೋಲಕ್ಕೆ ಅಪಾಯ ಹೆಚ್ಚುತ್ತಲೇ ಹೋಗುತ್ತದೆ. ಅದು ಈಚೀಚೆಗಷ್ಟೆ ಅರಿವಿಗೆ ಬರುತ್ತಿದೆ. ಹಿಂದೆಲ್ಲ ಅಷ್ಟು ದೊಡ್ಡ ಪ್ರಾಣಿಯನ್ನು ಕೊಲ್ಲು­ವುದೇ ಮನುಷ್ಯನ ಪಾಲಿಗೆ ಒಂದು ರೋಚಕ ಸವಾಲಾಗಿತ್ತು. ರಕ್ತದ ಮಡುವನ್ನು ನೋಡಿ­ದಷ್ಟೂ ರಕ್ತಪಿಪಾಸುತನಕ್ಕೆ ಪಾಶವೀ ಗುಣಕ್ಕೆ ಪ್ರೇರಣೆ ಸಿಗುತ್ತಿತ್ತು. ವರ್ಷಕ್ಕೆ ಹತ್ತೋ ಇಪ್ಪತ್ತೋ ತಿಮಿಂಗಿಲಗಳನ್ನು ಹರಸಾಹಸದಿಂದ ಬೇಟೆ­ಯಾಡಿ, ಬೆಟ್ಟದಷ್ಟು ಮಾಂಸವನ್ನು ಹಿಮದಲ್ಲಿ ಹೂತಿಟ್ಟು ಆರಾರು ತಿಂಗಳು ಹಬ್ಬದೂಟ ಮಾಡುತ್ತಿದ್ದರು.

ಕ್ರಮೇಣ ಡೀಸೆಲ್ ಹಡಗು­ಗಳು, ಯಾಂತ್ರಿಕ ಯುದ್ಧ ಪರಿಕರಗಳು, ಶೀತಲ ಪೆಟ್ಟಿಗೆಯ ವ್ಯವಸ್ಥೆ ಬಂದಮೇಲೆ ಭುಜಬಲ ಪರಾಕ್ರಮಿಗಳ ತೆವಲು ಮತ್ತು ದುರಾಸೆ ಎರಡಕ್ಕೂ ಕುಮ್ಮಕ್ಕು ಸಿಕ್ಕಂತಾಯಿತು. ಸಮುದ್ರ­ವನ್ನೇ ನೋಡದವರಿಗೂ ತಿಮಿಂಗಿಲ ಮಾಂಸದ ರುಚಿ ಹತ್ತಿಸಿ, ಅದನ್ನೊಂದು ಲಾಭದ ಉದ್ದಿಮೆ­ಯನ್ನಾಗಿ ಬೆಳೆಸಲಾಯಿತು. ನಾರ್ವೆ, ಐಸ್‌­ಲ್ಯಾಂಡ್, ಗ್ರೀನ್‌ಲ್ಯಾಂಡ್, ದಕ್ಷಿಣ ಕೊರಿಯಾ ಜಪಾನ್ ಮುಂತಾದ ದೇಶಗಳ ಸಾಹಸಿಗಳು ಪೈಪೋಟಿಯಲ್ಲಿ ಕಳೆದ ನೂರು ವರ್ಷಗಳಲ್ಲಿ ಸುಮಾರು ೨೦ ಲಕ್ಷ ತಿಮಿಂಗಿಲಗಳನ್ನು ಕೊಂದು ಹಾಕಿದರು. ತಿಮಿಂಗಿಲ ಬೇಟೆಗೆಂದು ಹಡಗಿನ ರೂಪದ ಮಾಂಸದ ಫ್ಯಾಕ್ಟರಿಗಳೇ ಸಿದ್ಧವಾದವು. ಬೇಟೆಯನ್ನು ದೂರದಿಂದಲೇ ಗುರುತಿಸಬಲ್ಲ ಶಬ್ಧವೇದಿ ಸೋನಾರ್‌ಗಳು, ಅತಿ ವೇಗದಲ್ಲಿ ಬೇಟೆಯನ್ನು ಬೆನ್ನಟ್ಟುವ ಜಲಾಂತರ್ಗಾಮಿ ರಾಕೆಟ್‌ಗಳು,  ಬಾಂಬರ್‌ಗಳು, ವಿಶಾಲ ವಿಸ್ತೀರ್ಣದ ಬಲೆಗಳು, ಬಲೆಗಳನ್ನು ದಶದಿಕ್ಕಿಗೆ ಏಕಕಾಲಕ್ಕೆ ಹರಡಬಲ್ಲ ಸಿಡಿಮದ್ದುಗಳು, ವಿದ್ಯುತ್ ಶಾಕ್ ಕೊಡುವ ಭರ್ಜಿಗಳು, ಸ್ಫೋಟಕ ಸಿಡಿತಲೆಗಳನ್ನು ಹೊತ್ತ ಹಾರ್ಪೂನ್‌ಗಳು ಬಳಕೆಗೆ ಬಂದವು. ಗೂನು ತಿಮಿಂಗಿಲ, ನೀಲಿ ತಿಮಿಂಗಿ (ಬ್ಲೂ ವ್ಹೇಲ್), ಪೈಲಟ್ ವ್ಹೇಲ್, ಮಿಂಕಿ ವೇಲ್, ಬಲೂಗಾ ವ್ಹೇಲ್, ಕಿಲ್ಲರ್ ವ್ಹೇಲ್, ಸ್ಪರ್ಮ್‌ವ್ಹೇಲ್ ಮುಂತಾದ ಹತ್ತೂ ಪ್ರಭೇದಗಳ ದೈತ್ಯಪ್ರಾಣಿಗಳು ಚೋಟುದ್ದ ಮನುಷ್ಯನ ಬಾಣಲೆಗೆ ಪುತಪುತ ಬೀಳ­ತೊಡಗಿದವು.

ಯಂತ್ರಯುಗದ ಸ್ವಾರಸ್ಯ ಏನೆಂದರೆ, ಅದು ಮುಗ್ಧ ಜೀವಿಗಳ ಮಾರಣ ಹೋಮಕ್ಕೆ ಕಾರಣ­ವಾದಂತೆಯೇ ಅವುಗಳ ಸಂರಕ್ಷಣೆಗೂ ನೆರವಿನ ಹಸ್ತ ಚಾಚುತ್ತದೆ. ತಿಮಿಂಗಿಲ ಬೇಟೆಗೆ ಅಂತರ­ರಾಷ್ಟ್ರೀಯ ಮಟ್ಟದಲ್ಲಿ ನಿಷೇಧ ಹಾಕಲಾಯಿ­ತಾದರೂ ಅಂಥ ನಿಷೇಧ ಕಾರ್ಯರೂಪಕ್ಕೆ ಬರುವಂತೆ ನಿಗಾ ಇಡಬೇಕಾದವರು ಮಾತ್ರ ಯಾರೂ ಇಲ್ಲ. ಅದಕ್ಕೇ ಗ್ರೀನ್‌ಪೀಸ್ ಪರಿಸರ ರಕ್ಷಣಾ ಸಂಘಟನೆಯ ಯೋಧರು ಅಂಥ ತಾಂತ್ರಿ­ಕತೆ­ಯನ್ನೇ ಬಳಸಿ ತಿಮಿಂಗಿಲ ಬೇಟೆಗೆ ಅಡ್ಡಿ­ಪಡಿಸತೊಡಗಿದರು. ಬೇಟೆಗಾರರ ಹಡಗು ಮತ್ತು ತಿಮಿಂಗಿಲಿನ ನಡುವೆ ಇವರ ಚುರುಕಿನ ದೋಣಿಗಳು ಸಾಗಿಹೋಗಿ ಬೇಟೆಗೆ ಅಡ್ಡಗಾಲು ಹಾಕತೊಡಗಿದವು. ತಿಮಿಂಗಿಲ ಬಳಿ ಹುಸಿ ಬಾಂಬ್‌­ಗಳನ್ನು ಸ್ಫೋಟಿಸಿ ಅವು ಭಯದಿಂದ ದೂರ ಸಾಗುವಂತೆ ಮಾಡುವುದು ಇವರ ಒಂದು­ ತಂತ್ರವಾಗಿತ್ತು.

ಆದರೆ ಇಂಥ ಅಹಿಂಸಾ­ತ್ಮಕ ಸತ್ಯಾಗ್ರಹದಿಂದ ಅಷ್ಟೇನೂ ಪ್ರಯೋಜನ ಕಾಣದಾದಾಗ ಕೆಲವು ಉತ್ಸಾಹಿಗಳು ‘ಸೀಶೆ­ಫರ್ಡ್ ಸಂರಕ್ಷಣಾ ಸಂಘ’ ಎಂಬ ಪ್ರತ್ಯೇಕ ಪಡೆಯನ್ನು ಆರಂಭಿಸಿದರು. ಬೇಟೆಹಡಗುಗಳ ತಳಕ್ಕೇ ನುಗ್ಗಿ ಹೋಗಿ ಅಲ್ಲಿ ಸ್ಫೋಟಕ ಸಾಮಗ್ರಿ­ಯನ್ನು ಅಂಟಿಸಿ ಬಂದು ಇಡೀ ಹಡಗೇ ನಿಧಾನಕ್ಕೆ ಮುಳುಗುವಂತೆ ಮಾಡುವುದು, ಮಹಾ ದುಗಂಧ ಬೀರುವ ಬ್ಯೂಟಿರಿಕ್ ಆಸಿಡ್ ಬಾಂಬ್‌­ಗಳನ್ನು ಹಡಗಿನ ಮೇಲೆ ಸ್ಫೋಟಿಸುವುದು, ಬಿಚ್ಚಿಟ್ಟ ಬಲೆಗಳನ್ನು ಕತ್ತರಿಸಿ ಹಾಕುವುದು ಇವೇ ಮುಂತಾದ ಉಗ್ರ ಕಾರ್ಯಾಚರಣೆಗಳು ಜಾರಿಗೆ ಬಂದವು. ಅಂಥ ಸಾಹಸ ಕೃತ್ಯಗಳು ಡಿಸ್ಕವರಿ ಮತ್ತು ಅನಿಮಲ್ ಪ್ಲಾನೆಟ್ ವಾಹಿನಿಗಳ ಮೂಲಕ ಜಗತ್ತಿಗೆ ಗೊತ್ತಾಗುವಂತೆ ಮಾಡು­ವುದು, ಆ ಮೂಲಕ ಜನ ಮನ್ನಣೆ ಗಳಿಸುವುದು, ಆ ಮೂಲಕ ಧನ ಸಂಗ್ರಹ ಮಾಡಿ ಇನ್ನಷ್ಟು ತಾಂತ್ರಿಕ ಸಾಮಗ್ರಿಗಳನ್ನು ಖರೀದಿಸಿ ತಿಮಿಂಗಿಲ­ಗಳ ರಕ್ಷಣೆ ಮಾಡುವುದು ಇದು ಈ ಸಾಹಸಿಗಳ ಕಾರ್ಯಸೂಚಿ. 

ಜಪಾನೀಯರ ಕಾರ್ಯಸೂಚಿಯೂ ರಹಸ್ಯ­ದ್ದೇನಲ್ಲ. ಅಕ್ಕಿ ಮತ್ತು ಮೀನು ನಿತ್ಯದ ಆಹಾರ­ವಾಗಿರುವ ಅವರಿಗೆ ಎರಡನೆಯ ಮಹಾ­ಯುದ್ಧದ ಭಾರೀ ಏಟಿನ ನಂತರ ಆಹಾರ ಸ್ವಾವಲಂಬನೆಯ ಪ್ರಶ್ನೆ ಗಂಭೀರವಾಗಿತ್ತು. ಇನ್ನು ಮುಂದೆ ಎಂಥದ್ದೇ ಅಂತರ ರಾಷ್ಟ್ರೀಯ ಬಿಕ್ಕಟ್ಟಿನಲ್ಲೂ ಆಹಾರದ ವಿಷಯದಲ್ಲಿ ಬೇರೆ­ಯವ­ರತ್ತ ಕೈಚಾಚಬಾರದೆಂಬ ನಿಲುವು ಅದ­ರದ್ದು. ಆದ್ದರಿಂದಲೇ ಯಾವ ಸಂದರ್ಭದಲ್ಲೂ ಜಪಾನ್ ದೇಶ  ಅಕ್ಕಿಯನ್ನು ಬೇರೆ ದೇಶಗಳಿಂದ ತರಿಸಿಕೊಳ್ಳುವುದಿಲ್ಲ. ಯಾವ ಸಂದರ್ಭದಲ್ಲೂ ಭತ್ತದ ಬೆಳೆಯ ವಿಸ್ತೀರ್ಣ ಕಡಿಮೆ ಆಗಲು ಬಿಡುವುದಿಲ್ಲ. ಅದೇ ರೀತಿ ಮೀನುಮಾಂಸದ ವಿಷಯದಲ್ಲೂ ಅಚಲ ನಿಲುವು ಅದರದ್ದು. ಅದಕ್ಕೇ ‘ವೈಜ್ಞಾನಿಕ ಸಂಶೋಧನೆ’ಯ ಹೆಸರಿ­ನಲ್ಲಾ­ದರೂ ಸರಿ, ತಿಮಿಂಗಿಲ ಬೇಟೆಯನ್ನು ಮುಂದುವರೆಸಬೇಕು.

ಕಳೆದ ಒಂದಿಡೀ ದಶಕದಲ್ಲಿ ಜಪಾನೀಯರು ೩೬೦೦ ಮಿಂಕೀ ತಿಮಿಂಗಿಲಗಳ ಹತ್ಯೆ ನಡೆಸಿ ಎರಡೇ ಎರಡು ಸಂಶೋಧನಾ ಪ್ರಬಂಧ ಬರೆ­ದಿ­ದ್ದಾರೆ. ಈ ಪಿಳ್ಳೆನೆಪದ ಸಂಶೋಧನೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಇಷ್ಟಕ್ಕೂ ಸಂಶೋ­ಧನೆ ಮಾಡಲೇ ಬೇಕಿದ್ದರೆ ತಿಮಿಂಗಿಲ­ಗಳನ್ನು ಕೊಲ್ಲ­ಬೇಕೆಂದೇನೂ ಇಲ್ಲ. ಈಚೀಚೆಗೆ ರಿಮೋಟ್ ಕಂಟ್ರೋಲ್ ಸೂಜಿಗಳನ್ನು ರವಾನಿಸಿ ತಿಮಿಂಗಿಲ­ಗಳ ರಕ್ತ ತಪಾಸಣೆ ಮಾಡಬಹುದು. ತೇಲುವ ಸೆಗ­ಣಿಯಲ್ಲೇ ಡಿಎನ್‌ಎ ಮಾದರಿಯನ್ನು ಸಂಗ್ರ­ಹಿಸಿ ಅಧ್ಯಯನ ಮಾಡಬಹುದು. ವರ್ಷಕ್ಕೆ ಒಂದು ಸಾವಿರಕ್ಕೂ ಹೆಚ್ಚು ತಿಮಿಂಗಿಲಗಳು ಭೂಮಿಯ ಬೇರೆ ಬೇರೆ ಖಂಡಗಳಲ್ಲಿ ನೆಲಕ್ಕೆ ಮೈಚಾಚಿ ಸಾಯುತ್ತಿರುತ್ತವೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜಲವಾಸಿ ಸ್ತನಿಗಳು (ಡಾಲ್ಫಿನ್‌ಗಳು, ಪ್ರೊಪಾಯಿಸ್‌ಗಳು, ತಿಮಿಂಗಿಲಗಳು) ಜಲ­ಮಾಲಿ­­ನ್ಯ­ದಿಂದಾಗಿ, ಪ್ಲಾಸ್ಟಿಕ್ ಮಾಲಿನ್ಯ­
ದಿಂ­ದಾಗಿ, ಯುದ್ಧನೌಕೆಗಳ ಕವಾಯಿತಿನಿಂದಾಗಿ ಸಾಯು­ತ್ತಿವೆ. ಬೇಡ ಬೇಡವೆಂದರೂ ಅನಿ­ವಾರ್ಯ­­ವಾಗಿ ಬಲೆಯೊಳಗೆ ಸಿಕ್ಕು ಜೀವ ಕಳೆದು­ಕೊಳ್ಳುತ್ತಿವೆ. ಅವುಗಳನ್ನೇ ಹಿಡಿದು ವೈಜ್ಞಾನಿಕ ಅಧ್ಯಯನ ಮಾಡಬಹುದು. ಸಂಶೋಧನೆಯ ಹೆಸರಿ­ನಲ್ಲಿ ಪ್ರತ್ಯೇಕ ಕೊಲ್ಲಬೇಕಾದ ಅಗತ್ಯವೇ ಇಲ್ಲ.

ಸಾಗರಲೋಕದ ಈ ಅದ್ಭುತ ಜೀವಿಗಳ ಬಗೆಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ನಿಜ. ಇವು­ಗಳ ಸಾಮಾಜಿಕ ಬದುಕು ಕೌತುಕಮ­ಯ­ವಾ­ಗಿದೆ. ಅವು ಹಾಡು ಹಾಡುತ್ತವೆ, ಪರಸ್ಪರ ಮಾತಾ­­ಡುತ್ತವೆ, ಮರಿಗಳನ್ನು ಹೆರುವಾಗ ಆ ಸಮಾ­ಜದ ನೂರಾರು ಮಾತೆಯರು ಗರ್ಭಿಣಿ­ಯನ್ನು ಸುತ್ತುವರೆದು ರಮಿಸುತ್ತವೆ. ಮರಿ ಮುಳು­­­ಗದ ಹಾಗೆ ಬೆನ್ನಮೇಲೆ ಹೊತ್ತು ತೇಲಿಸು­ತ್ತವೆ. ಮೊಲೆಯೂಡಿಸಲು ನೆರವಾಗುತ್ತವೆ. ಪಕ್ಷಿ­ಗಳ ಹಾಗೆ ಅವೂ ಪ್ರತಿವರ್ಷ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ಕಡೆ ಹತ್ತಾರು ಸಾವಿರ ಕಿಲೊ­ಮೀಟರ್ ವಲಸೆ ಹೋಗುತ್ತವೆ. ಹಾಗೆ ಹೋಗು­ವಾಗ ಹೇಗೋ ದಾರಿ ತಪ್ಪಿ ಕಡಲಂಚಿಗೆ ಬಂದು ಸಾವಿರಾರು ಸಂಖ್ಯೆಯಲ್ಲಿ ಪ್ರಾಣತ್ಯಾಗ ಮಾಡು­ವುದು ಈಗಲೂ ವಿಜ್ಞಾನಕ್ಕೆ ನಿಗೂಢ ವಿಸ್ಮ­ಯವೇ ಆಗಿದೆ. ಅಷ್ಟುದ್ದ ಅರಬ್ಬೀ ಸಮು­ದ್ರದ ಕರಾವಳಿ ಇದ್ದರೂ ಕರ್ನಾಟಕದ ಕಡ­ಲಂಚಿಗೇ ಅವು ಪದೇ ಪದೇ ಬಂದು ಪ್ರಾಣ ಬಿಡಲು ಕಾರಣ ಏನೆಂಬುದು ಗೊತ್ತಾಗಬೇಕಿದೆ. ಹನಿ­­ಮೂನ್ ಮಾಡಲು ಅವು ನೇತ್ರಾಣಿ ಗುಡ್ಡದ ಬಳಿಗೇ ಏಕೆ ಬರುತ್ತವೆ ಎಂಬುದು ಗೊತ್ತಾಗ­ಬೇಕಿದೆ.

ಅದಕ್ಕಿಂತ ಮುಖ್ಯವಾಗಿ, ತಿಮಿಂಗಿಲಗಳ ಬಗ್ಗೆ ಮನುಷ್ಯ-ಮನುಷ್ಯರಲ್ಲೇ ಈ ಮುಖಾ­ಮುಖಿ ಏಕೆ? ಅವುಗಳನ್ನು ಕೊಲ್ಲಬೇಕೆಂಬ ಹಠ ಮತ್ತು ಹೇಗಾದರೂ ಮಾಡಿ ಅವುಗಳನ್ನು ರಕ್ಷಿಸ­ಬೇಕೆಂಬ ತುಡಿತ ಈ ಎರಡೂ ಮನುಷ್ಯ­ನೆಂಬ ಒಂದೇ ಪ್ರಭೇದದ ಪ್ರಾಣಿಯಲ್ಲಿ ಮೊಳೆತಿ­ದ್ದೇಕೆ ಎಂಬು­­ದರ ರಹಸ್ಯ ಗೊತ್ತಾಗಬೇಕಿದೆ.
 
ನಿಮ್ಮ ಅನಿ
ಸಿಕೆ ತಿಳಿಸಿ: editpagefeedback@prajavani.co

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT