ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ: ರಾಜ್ಯದಲ್ಲಿ ಗುಣಮಟ್ಟ ಯಾಕಿಲ್ಲ?

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಕಳೆದ ವಾರದ ರಾಜ್ಯ ಮಂತ್ರಿಮಂಡಳದ ಪುನಾರಚನೆಯ ನಂತರ ಉನ್ನತ ಶಿಕ್ಷಣ ಇಲಾಖೆಗೆ ಹೊಸ ಸಚಿವರು ಬಂದಿದ್ದಾರೆ. ಇದೇ ಖಾತೆಯನ್ನು ವಿಶೇಷವಾಗಿ ಕೇಳಿ ಪಡೆದಿದ್ದಾರೆ ಎಂಬ ಸುದ್ದಿಯೂ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನೂತನ ಸಚಿವರು ಉನ್ನತ ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಿದರೆ ಅವರಿಗೆ ಕಾಣಬಹುದಾದ ವಾಸ್ತವವಾದರೂ ಏನು? ರಾಜ್ಯದ ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಗುಣಮಟ, ಕಾರ್ಯವೈಖರಿಗಳನ್ನು ಅಳೆಯುವುದಾದರೂ ಹೇಗೆ? ಜಾಗತಿಕವಾಗಿ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಅಳೆಯಲು ಶ್ರೇಯಾಂಕ (ರ‍್ಯಾಂಕಿಂಗ್) ಕ್ರಮಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಹೆಚ್ಚಾಗಿ ಅಮೆರಿಕ ಹಾಗೂ ಇಂಗ್ಲೆಂಡಿನ ವಿಶ್ವವಿದ್ಯಾಲಯಗಳೇ ಮುಂಚೂಣಿಯಲ್ಲಿ ಇರುವ ಈ ಪಟ್ಟಿಯಲ್ಲಿ ಆಗಾಗ ಏಷ್ಯಾದ ಕೆಲವು ಸಂಸ್ಥೆಗಳು ಕಾಣಿಸಿಕೊಳ್ಳುತ್ತವೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಪಂಚದ ಮೊದಲ ಇನ್ನೂರು ಸಂಸ್ಥೆಗಳ ಪಟ್ಟಿಯಲ್ಲಿ ಬರಲಾಗುತ್ತಿಲ್ಲ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯೂ ನಡೆದಿದೆ. ಕೆಲವು ಶಿಕ್ಷಣ ತಜ್ಞರು ಶ್ರೇಯಾಂಕ ಪಟ್ಟಿಯನ್ನು ಸಿದ್ಧಪಡಿಸುವ ಮಾನದಂಡಗಳನ್ನು ಪ್ರಶ್ನಿಸುತ್ತ, ಐಐಟಿಗಳು ಇಲ್ಲವೆ ಭಾರತೀಯ ವಿಜ್ಞಾನ ಸಂಸ್ಥೆಗಳಂತಹ ಸಂಸ್ಥೆಗಳ ನಿಜಸತ್ವವನ್ನು ಪಶ್ಚಿಮದಲ್ಲಿ ಸಿದ್ಧವಾಗುವ ಕ್ರಮಪಟ್ಟಿಗಳು ಗುರುತಿಸುತ್ತಿಲ್ಲ ಎಂದೂ ವಾದಿಸಿದ್ದಾರೆ.

ಇದನ್ನು ಹುರುಳಿಲ್ಲದ ವಾದ ಎನ್ನಲಾಗುವುದಿಲ್ಲ.ಹೀಗಾಗಿಯೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯು.ಜಿ.ಸಿ) ತನ್ನದೇ ಆದ ಶ್ರೇಯಾಂಕ ಕ್ರಮಪಟ್ಟಿಯನ್ನು ತಯಾರಿಸಲು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟನ್ನು (ಎನ್.ಐ.ಆರ್.ಎಫ್‌) ಸಿದ್ಧಪಡಿಸಿತು. 2016ರಲ್ಲಿ ಮೊದಲ ಶ್ರೇಯಾಂಕ ಪಟ್ಟಿಯನ್ನೂ ಪ್ರಕಟಿಸಿತು. ಕರ್ನಾಟಕದಲ್ಲಿಯೂ 2014ರಿಂದಲೂ ಇಂತಹ ರಾಜ್ಯ ವ್ಯಾಪ್ತಿಯ ಚೌಕಟ್ಟನ್ನು ಸಿದ್ಧಪಡಿಸಲು ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಚರ್ಚೆಗಳೂ ನಡೆದಿವೆ. ಈ ಪ್ರಯತ್ನಕ್ಕೆ ಚಾಲನೆ ನೀಡುತ್ತ ಅಂದಿನ ಉನ್ನತ ಶಿಕ್ಷಣ ಸಚಿವರು ಮೊದಲ 200ರ ಪಟ್ಟಿಯಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳು ಇರುವಂತೆ ಮಾಡಲು ಇಂತಹ ಶ್ರೇಯಾಂಕ ಕ್ರಮಪಟ್ಟಿಯೊಂದು ಅಗತ್ಯವೆಂದು ವಾದಿಸಿದರು. 

ವಿಶ್ವಮಟ್ಟದ ಸಂಸ್ಥೆಗಳನ್ನು ಕಟ್ಟಲು ನಮ್ಮ ಮೂಲಭೌತ ಸೌಕರ್ಯಗಳಲ್ಲಾಗಲಿ ಇಲ್ಲವೆ ಆಡಳಿತಾತ್ಮಕ ವ್ಯವಸ್ಥೆಗಳಲ್ಲಿ ಇರಬಹುದಾದ ಲೋಪದೋಷಗಳನ್ನು ಅರಿಯಬೇಕು. ಅವುಗಳನ್ನು ಸರಿಪಡಿಸಿಕೊಳ್ಳುವುದರ ಮೂಲಕ ಜಾಗತಿಕ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯ ಎನ್ನುವ ತರ್ಕ ಅವರದು. ಈ ಉದ್ದೇಶದಿಂದಲೇ ಎರಡು ಖಾಸಗಿ ಸಂಸ್ಥೆಗಳು ಸಿದ್ಧಪಡಿಸಿದ್ದ ಶ್ರೇಯಾಂಕ ಚೌಕಟ್ಟನ್ನು ಉನ್ನತ ಶಿಕ್ಷಣ ಪರಿಷತ್ತಿನ ಸಭೆಗಳಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಆದರೆ ಇದರ ಆಧಾರದಲ್ಲಿ ಶ್ರೇಯಾಂಕ ಪಟ್ಟಿ ತಯಾರಾಗಿಲ್ಲ. ನನಗನ್ನಿಸುವಂತೆ ನಾವು ಎದುರಿಸುತ್ತಿರುವ ಸಮಸ್ಯೆ ಜಾಗತಿಕ ಇಲ್ಲವೆ ರಾಷ್ಟ್ರೀಯ ಶ್ರೇಯಾಂಕ ಕ್ರಮಪಟ್ಟಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಿಲ್ಲ ಎನ್ನುವುದಲ್ಲ.

ಯಾವುದೇ ಮಾನದಂಡವನ್ನು ಬಳಸಿ ನೋಡಿದರೂ ಸರಿಯೆ, ನಮ್ಮ ವಿಶ್ವವಿದ್ಯಾಲಯಗಳು ಮತ್ತು ಅವುಗಳ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು ಕನಿಷ್ಠ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ ಎನ್ನುವುದು ನಾವು ಎದುರಿಸಬೇಕಾಗಿರುವ ಸಮಸ್ಯೆ ಹಾಗೂ ವಾಸ್ತವ. ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಅಂತಹ ಒಳ್ಳೆಯ ಸಂಸ್ಥೆಗಳೇನಲ್ಲ ಎನ್ನುವುದು ಯಾರಿಗೂ ಹೊಸ ಸುದ್ದಿಯಲ್ಲ. ಇದನ್ನು ಅರಿಯಲು ಶ್ರೇಯಾಂಕ ಚೌಕಟ್ಟುಗಳ ಅಗತ್ಯವೂ ಇಲ್ಲ. ಹಾಗಾದರೆ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳೇನು? ಮೂಲಭೂತ ಸೌಕರ್ಯಗಳ ಕೊರತೆಯೇ? ಉತ್ತಮ ಗುಣಮಟ್ಟದ ಅಧ್ಯಾಪಕರು ಇಲ್ಲವೇ? ಶೈಕ್ಷಣಿಕೇತರ ಚಟುವಟಿಕೆಗಳಲ್ಲಿಯೇ ಅಧ್ಯಾಪಕರು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆಯೇ? 

ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರಾಸಕ್ತರೇ? ರಾಜಕಾರಣ, ಭ್ರಷ್ಟಾಚಾರ, ಜಾತಿ, ಸ್ವಜನ ಪಕ್ಷಪಾತ ಹೆಚ್ಚಾಗಿದೆಯೇ? ಸಮಾಜಮುಖಿಯಾಗಿ ಕೆಲಸ ಮಾಡಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಗುತ್ತಿಲ್ಲವೇ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರಗಳೂ ಎಲ್ಲರಿಗೂ ತಿಳಿದಿವೆ. ವಿಶ್ವವಿದ್ಯಾಲಯಗಳು ನಮ್ಮ ಕನಸಿನ, ಆದರ್ಶ ಸಮಾಜದ ಸಾಕಾರ ರೂಪವಾಗಿರಬೇಕಿತ್ತೇ ಹೊರತು ನಮ್ಮ ಇಂದಿನ ಸಮಾಜವನ್ನು ಪ್ರತಿಫಲಿಸುವ ಸಂಸ್ಥೆಗಳು ಆಗಬಾರದಿತ್ತು. ಸುಶಿಕ್ಷಿತರೇ ಇರುವ ಸಮುದಾಯದೊಳಗೆ ಸಮಾನತೆಯ, ಪ್ರಜಾಸತ್ತಾತ್ಮಕ ಸಂಸ್ಕೃತಿಯ, ಪಾರದರ್ಶಕತೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಆಗದಿದ್ದರೆ, ಬೇರೆಲ್ಲಿ ಇದು ಸಾಧ್ಯ? ನನ್ನ ಈ ರೆಟಾರಿಕಲ್ ಪ್ರಶ್ನೆಯ ಹಿಂದೆ ಆದರ್ಶವು ಮುಗ್ಧ ಮತ್ತು ಅವಾಸ್ತವಿಕವೆನಿಸಬಹುದು.

ಆದರೆ ಶಿಕ್ಷಣದ ಭರವಸೆ ಈ ಬಗೆಯ ಸಾಮಾಜಿಕ ಸುಧಾರಣೆಯಲ್ಲವೇ? ಅದಿರಲಿ, ವಾಸ್ತವಕ್ಕೆ ವಾಪಸಾಗೋಣ. ಖಾಸಗಿ ವಲಯದ ಉದ್ದಿಮೆದಾರರು ಮತ್ತು ವ್ಯವಸ್ಥಾಪಕರನ್ನು ಕೇಳಿದರೆ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುರಿಗಳನ್ನೇ ಪ್ರಶ್ನಿಸುತ್ತಾರೆ. ಅವರ ಪ್ರಕಾರ, ನಮ್ಮ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದವರು ಹೆಚ್ಚಿನ ತರಬೇತಿಯಿಲ್ಲದೆ ಹೊರಗಿನ ಪ್ರಪಂಚದಲ್ಲಿ ನೌಕರಿ ನಿರ್ವಹಿಸಲಾರರು. ಇದು ಕಲೆ, ವಾಣಿಜ್ಯ, ವಿಜ್ಞಾನ ಹಾಗೂ ತಾಂತ್ರಿಕ ಶಿಕ್ಷಣವನ್ನು ಅಭ್ಯಸಿಸುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯವಾಗುವ ಮಾತು. ರಾಜ್ಯದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಿಂದ ಉತ್ತಮ ರ‍್ಯಾಂಕ್‌ ಗಳಿಸಿ ತೇರ್ಗಡೆಯಾಗುವವರೂ ತರಬೇತಿಯಿಲ್ಲದೆ ಮರುದಿನವೇ ನೌಕರಿ ನಿರ್ವಹಿಸುವ ಸಾಮರ್ಥ್ಯ ಹೊಂದಿರುವುದಿಲ್ಲ.

ಪಠ್ಯಕ್ರಮವನ್ನು ರೂಪಿಸುವಾಗ ಹೊರಗಿನ ಪ್ರಪಂಚದಲ್ಲಾಗುತ್ತಿರುವ ಬದಲಾವಣೆಗಳಿಗೆ ತ್ವರಿತವಾಗಿ ಸ್ಪಂದಿಸುವ ಶಕ್ತಿಯನ್ನು ನಮ್ಮ ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿಗಳು ಹೊಂದಿಲ್ಲ ಎನ್ನುವುದು ವಾಸ್ತವ. ಪಶ್ಚಿಮದ ವಿಶ್ವವಿದ್ಯಾಲಯಗಳಲ್ಲಿ ತಾವು ಕಲಿಸುತ್ತಿರುವ ವಿಷಯಗಳ ಪಠ್ಯಕ್ರಮವನ್ನು, ಪರೀಕ್ಷಾ ಪದ್ಧತಿಯನ್ನು ನಿರ್ಧರಿಸುವ ಸ್ವಾಯತ್ತತೆ ಅಧ್ಯಾಪಕರುಗಳಿಗೇ ಇರುತ್ತದೆ. ಆ ಮೂಲಕ ಹೆಚ್ಚು ತ್ವರಿತವಾಗಿ ಹೊರಗಿನ ಅಗತ್ಯಗಳಿಗೆ ಸ್ಪಂದಿಸಲೂ ವಿಶ್ವವಿದ್ಯಾಲಯಗಳಿಗೆ ಸಾಧ್ಯವಾಗುತ್ತದೆ. ಅಂತಹ ಶಕ್ತಿಯಿರುವವರನ್ನೇ ಅಧ್ಯಾಪಕರಾಗಲು ಆರಿಸಲಾಗುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಇಂತಹ ಸ್ವಾಯತ್ತತೆ ಐಐಟಿ ಹಾಗೂ ಜೆ.ಎನ್.ಯು.ನಂತಹ ಸಂಸ್ಥೆಗಳಲ್ಲಿ ಭಾರತದಲ್ಲಿಯೂ ಇದೆ. 

ನೂತನ ಉನ್ನತ ಶಿಕ್ಷಣ ಸಚಿವರು ಈ ಮೇಲಿನ ವಿಚಾರವನ್ನು ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಪ್ರಸ್ತಾಪಿಸಿದರೆ, ಅಲ್ಲಿ ಒಂದು ಸಿದ್ಧ ಉತ್ತರ ದೊರಕುತ್ತದೆ. ಅದೇನೆಂದರೆ, ವಿಶ್ವವಿದ್ಯಾಲಯಗಳು ಇದುವರೆಗೆ ಜ್ಞಾನವನ್ನು ನೀಡುವುದರ ಕಡೆಗೆ ಗಮನ ಹರಿಸಿದ್ದವು, ಇನ್ನು ಮುಂದೆ ಅವು ಕೌಶಲಗಳನ್ನು ಕಲಿಸುವೆಡೆಗೆ ಕಾರ್ಯಪ್ರವೃತ್ತವಾಗಬೇಕು. ಇದೊಂದು ಸೊಗಸಾಗಿ ಕಾಣುವ ಸೂತ್ರ ನಿರೂಪಣೆ. ಹಾಗಾಗಿ ಕೌಶಲಗಳನ್ನು ಕಲಿಸುವ ಹಲವಾರು ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದ್ಯತೆಯ ಕಾರ್ಯಕ್ರಮಗಳಾಗಿ ರೂಪಿಸುತ್ತಿವೆ. ಆದರೆ ಎಲ್ಲಿ ಜ್ಞಾನ ಕೊನೆಗೊಳ್ಳುತ್ತದೆ ಇಲ್ಲವೆ ಕೌಶಲಗಳು ಪ್ರಾರಂಭವಾಗುತ್ತವೆ ಎನ್ನುವುದು ಯಾರೂ ಕೇಳಿಕೊಳ್ಳದಿರುವ ಹಾಗೂ ಸ್ಪಷ್ಟ ಉತ್ತರ ದೊರಕದ ಪ್ರಶ್ನೆ. 

ಕೌಶಲಗಳನ್ನೂ ಯಾಕೆ ಪಠ್ಯಕ್ರಮದೊಳಗೆ ಸೇರಿಸಲಾಗುತ್ತಿಲ್ಲ ಎಂದರೆ ಅದಕ್ಕೂ ಉತ್ತರ ದೊರಕುತ್ತಿಲ್ಲ. ಖಾಸಗಿ ವಲಯದವರು ನಿರೀಕ್ಷಿಸುವ ಕೌಶಲಗಳ ಅಭಾವ ನಮ್ಮ ಪದವೀಧರರಲ್ಲಿದೆ ಎನ್ನುವುದು ನಿಜವೆ. ಆದರೆ ಕೌಶಲಗಳನ್ನು ಕಲಿಸುತ್ತಿಲ್ಲ ಎನ್ನುವುದು ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುರಿಗಳ ಬಹುದೊಡ್ಡ ಸಮಸ್ಯೆಯಲ್ಲ, ಟೀಕೆಯೂ ಅಲ್ಲ. ನಮ್ಮ ಸಮಸ್ಯೆಯಿರುವುದು ಬೇರೆಡೆ. ನಮ್ಮ ಪದವೀಧರರು ಕಲಿಯುತ್ತಿರುವ ಮುಖ್ಯ ವಿಷಯಗಳನ್ನೇ ನಾವು ಸರಿಯಾಗಿ ಕಲಿಸುತ್ತಿಲ್ಲ. ಈ ಮಾತು ಭಾಷೆ, ಸಾಹಿತ್ಯ, ಸಮಾಜ ವಿಜ್ಞಾನ ಮತ್ತು ವಿಜ್ಞಾನ-ತಂತ್ರಜ್ಞಾನಗಳೆಲ್ಲವಕ್ಕೂ ಸತ್ಯ. ಅಂದರೆ ವಾಸ್ತವದಲ್ಲಿ ನಮ್ಮ ಶೈಕ್ಷಣಿಕ ಗುರಿಗಳನ್ನು ವಿಮರ್ಶಿಸಲು ನಾವು ಆಯಾ ಅಧ್ಯಯನಶಿಸ್ತು ಮತ್ತು ಅದರ ಜ್ಞಾನ ವ್ಯಾಪ್ತಿಯನ್ನು ಯಾವ ಪ್ರಮಾಣದಲ್ಲಿ ಕಲಿಸುತ್ತಿದ್ದೇವೆ ಎನ್ನುವುದನ್ನೇ ನೋಡಿ.

ಸಮಾಜ ವಿಜ್ಞಾನಗಳು ಮತ್ತು ಮಾನವಿಕ ಶಾಸ್ತ್ರಗಳ ವಿಷಯಗಳಲ್ಲಂತೂ ಕೆಲವು ಚಕಿತಗೊಳಿಸುವ, ಗಾಬರಿಯುಂಟು ಮಾಡುವ ಸತ್ಯಗಳು ಹೊರಬರುತ್ತವೆ. ನಾನು ಬೋಧಿಸುವ ಇತಿಹಾಸವನ್ನು ಉದಾಹರಣೆಯಾಗಿ ಪರಿಗಣಿಸೋಣ. ನಾವು ಇಂದು ಕಾಲೇಜು- ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ ಇತಿಹಾಸವನ್ನು ಮತ್ತು ಸಂಶೋಧಕರು ಪ್ರಕಟಿಸುವ ಹೆಚ್ಚಿನ ಕೃತಿಗಳನ್ನು ಇತಿಹಾಸ ಜ್ಞಾನಶಿಸ್ತಿನ ಅಂಗ ಎಂದು ಹೊರಗಿನವರು ಯಾರೂ ಪರಿಗಣಿಸುವುದಿಲ್ಲ. ನಾನು ಇಲ್ಲಿ ನಾವು ಬೇರೆಯವರಿಗಿಂತ ಹಿಂದೆ ಇದ್ದೇವೆ ಎಂದು ಹೇಳುತ್ತಿಲ್ಲ. ಬದಲಿಗೆ ಐತಿಹಾಸಿಕ ಸತ್ಯದ ಸ್ವರೂಪವೇನು ಇಲ್ಲವೆ ಐತಿಹಾಸಿಕ ಜ್ಞಾನದ ಪ್ರಮಾಣಗಳೇನು ಎನ್ನುವ ಪ್ರಶ್ನೆಗಳಿಗೆ ಜಾಗತಿಕವಾಗಿ ನಡೆಯುತ್ತಿರುವ ಚರ್ಚೆಗಳಿಗೆ ಸಂಪೂರ್ಣ ಹೊರತಾಗಿ ನಮ್ಮ ಬೋಧನೆ ಮತ್ತು

ಸಂಶೋಧನೆಗಳು ನಡೆಯುತ್ತಿವೆ ಎಂದು ವಾದಿಸುತ್ತಿದ್ದೇನೆ. ನಾವಿಂದು ಇತಿಹಾಸವೆಂದು ಕಲಿಸುತ್ತಿರುವ ವಿಷಯ ಇತಿಹಾಸವಲ್ಲ ಎನ್ನಲು ಹಿಂಜರಿಯಬೇಕಿಲ್ಲ. ಸರಿಯಾಗಿ ಇತಿಹಾಸ ಕಲಿಸುವ ಪಠ್ಯಕ್ರಮದಲ್ಲಿ ವಿಮರ್ಶಾತ್ಮಕ-ತರ್ಕಬದ್ಧ ಚಿಂತನೆ, ಬರವಣಿಗೆ, ಕಂಪ್ಯೂಟರ್-ಅಂತರ್ಜಾಲ ಬಳಕೆಗಳಂತಹ ಹತ್ತಾರು ಕೌಶಲಗಳೂ ಇರುತ್ತವೆ. ಆದರೆ ಇಂದು ಜ್ಞಾನ-ಕೌಶಲ ಎರಡನ್ನೂ ನಾವಿಂದು ಕಲಿಸುತ್ತಿಲ್ಲ. ಈ ಮಾತು ಎಲ್ಲ ಸಮಾಜ ವಿಜ್ಞಾನಗಳಿಗೂ, ಮಾನವಿಕ ಶಾಸ್ತ್ರಗಳಿಗೂ ವಿಸ್ತರಿಸಬಹುದಾದ ಸತ್ಯ. ಹಾಗಾದರೆ ನಾವು ಕಲಿಸುತ್ತಿರುವುದಾದರೂ ಏನು ಹಾಗೂ ಅದರ ಉಪಯುಕ್ತತೆ- ಪ್ರಸ್ತುತತೆಗಳೇನು? ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳಲ್ಲಿ ನನ್ನ ಮೇಲಿನ ಹೇಳಿಕೆಯನ್ನು ಸ್ವಲ್ಪ ಬದಲಿಸಬೇಕು.

ಈ ಅಧ್ಯಯನ ಶಿಸ್ತುಗಳ ಸಂದರ್ಭದಲ್ಲಿ ನಮ್ಮ ಮತ್ತು ಹೊರಗಿನವರ ನಡುವಿನ ಅಂತರ ಹೆಚ್ಚಿಲ್ಲ ಎನ್ನುವುದು ನಿಜ. ಭೌತಶಾಸ್ತ್ರದ ಮೂಲಭೂತ ತತ್ವಗಳು ಎಲ್ಲೆಡೆಯೂ ಒಂದೇ ಆಗಿರುತ್ತವೆ. ಹಾಗಾಗಿ ಈ ವಿಷಯಗಳಲ್ಲಿನ ಬೋಧನೆ-ಸಂಶೋಧನೆ ಜಾಗತಿಕ ಪ್ರವೃತ್ತಿಗಳಿಂದ ತುಂಬ ಭಿನ್ನವಾಗಿಲ್ಲ. ಇದಕ್ಕೆ ಸಾಕ್ಷಿಯಾಗಿ ಕರ್ನಾಟಕದ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸುವ ಗುಣಮಟ್ಟದ ಸಂಶೋಧನೆಗಳನ್ನೇ ಪರಿಗಣಿಸಿ. ಈ ಮಟ್ಟದ ಪ್ರಾಥಮಿಕ ಸಾಮರ್ಥ್ಯವೂ ಸಮಾಜ ವಿಜ್ಞಾನಗಳ ಸಂಶೋಧಕರಲ್ಲಿಲ್ಲ.

ಆದರೆ ವಿಜ್ಞಾನ- ತಂತ್ರಜ್ಞಾನಗಳಲ್ಲಿಯೂ ಗಂಭೀರ ಸಮಸ್ಯೆಗಳಿವೆ. ಇವುಗಳ ಬೋಧನೆ- ಸಂಶೋಧನೆಗಳಲ್ಲಿ ತೀವ್ರತೆ, ಸಮಾಜಮುಖಿ ಗುಣಗಳು ಮೊದಲಿನಿಂದಲೂ ಕಡಿಮೆಯಿದೆ. ಹಾಗಾಗಿ ಅವುಗಳ ಪ್ರಸ್ತುತತೆಯನ್ನು ನಾವು ಮತ್ತೆ ಚಿಂತಿಸಬೇಕಾದ ಅವಶ್ಯಕತೆಯಿದೆ. ಜಾಗತಿಕ ಮಟ್ಟದ ಮೂಲಭೂತ ಸೌಕರ್ಯಗಳನ್ನು ನಮಗೆ ಒದಗಿಸಲು ಸಂಪನ್ಮೂಲಗಳು ದೊರಕದಿರಬಹುದು. ಆದರೆ ನಮ್ಮ ಶೈಕ್ಷಣಿಕ ಗುರಿಗಳನ್ನು ನಿಯಮಿತವಾಗಿ ಪುನರ್ ರಚನೆ ಮಾಡಿಕೊಳ್ಳಲು ಇರುವ ಸಮಸ್ಯೆಯಾದರೂ ಏನು? ನೂತನ ಸಚಿವರು ಗಮನಿಸಲೇಬೇಕಾದ ತುರ್ತಿನ ಪ್ರಶ್ನೆಯಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT