ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಪವರ್‌ಬ್ಯಾಂಕ್‌ಗಳು: ಒಂದು ದುಬಾರಿ, ಇನ್ನೊಂದು ಅಗ್ಗ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ನೀವು ಸ್ಮಾರ್ಟ್‌ಫೋನ್ ಬಳಸುವವರಾದಲ್ಲಿ ಕೆಲವೊಮ್ಮೆ ಸಾಯಂಕಾಲದ ಹೊತ್ತಿಗೆ ಚಾರ್ಜ್ ಮುಗಿದಿರುತ್ತದೆ ಹಾಗೂ ಚಾರ್ಜ್ ಮಾಡಲು ನಿಮ್ಮ ಕೈಯಲ್ಲಿ ಚಾರ್ಜರ್ ಇಲ್ಲ ಅಥವಾ ಚಾರ್ಜ್ ಪಾಯಿಂಟ್ ಸಿಗುವುದಿಲ್ಲ. ಹಳ್ಳಿ ಕಡೆ ಹೋದಾಗ, ಚಾರಣಕ್ಕೆ ಹೋದಾಗ, ವಿದ್ಯುತ್ ಸಂಪರ್ಕವೂ ಇರುವುದಿಲ್ಲ. ಇಂತಹ ಸಂದರ್ಭಗಳಿಗೆ ಬೇಕು ಹೆಚ್ಚಿಗೆ ಪವರ್‌ಬ್ಯಾಂಕ್. ಇವುಗಳಲ್ಲಿ ರೀಚಾರ್ಜೇಬಲ್ ಬ್ಯಾಟರಿ ಇರುತ್ತದೆ.
ಯುಎಸ್‌ಬಿ ಮೂಲಕ ಇವುಗಳಿಂದ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಚಾರ್ಜ್ ಮಾಡಬಹುದು.

ಮಾರುಕಟ್ಟೆಯಲ್ಲಿ ದೊರೆಯುವ ಹಲವು ಶಕ್ತಿಯ ಪವರ್‌ಬ್ಯಾಂಕ್‌ಗಳಲ್ಲಿ ನಿಮಗೆ ಯಾವುದು ಸೂಕ್ತ ಎಂದು ತಿಳಿಯುವುದು ಹೇಗೆ? ಮೊತ್ತ ಮೊದಲನೆಯದಾಗಿ ನಿಮ್ಮ ಗ್ಯಾಜೆಟ್‌ನ (ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಇತ್ಯಾದಿ) ಬ್ಯಾಟರಿ ಶಕ್ತಿ ಎಷ್ಟು ಎಂಬುದನ್ನು ಪತ್ತೆಹಚ್ಚಿ. ಇತ್ತೀಚೆಗೆ ದೊರೆಯುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಶಕ್ತಿ ಸುಮಾರು 1800 ರಿಂದ 3000 mAh ಇರುತ್ತದೆ.

ಇನ್ನೂ ಒಂದು ವಿಷಯ ಪತ್ತೆ ಹಚ್ಚಬಹುದು. ಅದೆಂದರೆ ನಿಮ್ಮ ಸ್ಮಾರ್ಟ್‌ಫೋನ್ ಜೊತೆ ಬಂದ ಚಾರ್ಜರ್‌ನ ಮೇಲೆ ಬರೆದ ಶಕ್ತಿ. ಸಾಮಾನ್ಯವಾಗಿ ಇದು 5V ಮತ್ತು 1A ಇರುತ್ತದೆ. ಅಂದರೆ ನಿಮಗೆ ಬೇಕಾದ ಪವರ್‌ಬ್ಯಾಂಕ್‌ ಕನಿಷ್ಠ 3000mAh ಮತ್ತು 1A ಇರತಕ್ಕದ್ದು. ನಿಮ್ಮ ಸ್ಮಾರ್ಟ್‌ ಫೋನಿನ ಬ್ಯಾಟರಿ 2600 mAh ಇದ್ದಲ್ಲಿ ನೀವು ಕೊಂಡ ಪವರ್‌ಬ್ಯಾಂಕ್ 5200 mAh ಆಗಿದ್ದಲ್ಲಿ ನೀವು ಅದನ್ನು ಬಳಸಿ ನಿಮ್ಮ ಫೋನನ್ನು ಎರಡು ಸಲ ಚಾರ್ಜ್ ಮಾಡಬಹುದು.  

ಈ ಸಲ ಎರಡು ಪವರ್‌ಬ್ಯಾಂಕ್‌ಗಳ ಕಡೆ ನಮ್ಮ ವಿಮರ್ಶಾನೋಟ ಬೀರೋಣ. ಅವುಗಳೆಂದರೆ ಶಿಯೋಮಿ ಕಂಪೆನಿಯ 5200 mAh ಶಕ್ತಿಯ ಎಂಐ ಪವರ್‌ ಬ್ಯಾಂಕ್ ಮತ್ತು ಎಪಿಸಿ ಕಂಪೆನಿಯ 5000 mAh ಶಕ್ತಿಯ ಪವರ್‌ಬ್ಯಾಂಕ್. ಅವುಗಳ ಗುಣವೈಶಿಷ್ಟ್ಯಗಳನ್ನು ಕೋಷ್ಟಕ ರೂಪದಲ್ಲಿ ನೀಡಲಾಗಿದೆ.

ಎರಡರಲ್ಲೂ ಕೆಲವು ಸಾಮ್ಯತೆಗಳಿವೆ. ಅವುಗಳೆಂದರೆ ಎಲ್‌ಇಡಿ, ಆನ್/ಆಫ್ ಬಟನ್ ಮತ್ತು ಪವರ್‌ಬ್ಯಾಂಕ್ ಅನ್ನು ಚಾರ್ಜ್ ಮಾಡಲು ಮೈಕ್ರೊ ಯುಎಸ್‌ಬಿ ಕಿಂಡಿ.  ಶಿಯೋಮಿಯ ಎಂಐ ಹಲವು ಬಣ್ಣಗಳಲ್ಲಿ ಲಭ್ಯ. ಅಲ್ಯೂಮಿನಿಯಂ ದೇಹ ಗಟ್ಟಿಯಾಗಿದೆ. ಕೆಳಗೆ ಬಿದ್ದರೂ ಸುಲಭದಲ್ಲಿ ಹಾಳಾಗಲಾರದು. ಕೈಯಲ್ಲಿ ಹಿಡಿಯುವ ಅನುಭವ ಚೆನ್ನಾಗಿದೆ. ಬದಿಗಳಲ್ಲಿ ವೃತ್ತಾಕಾರದಲ್ಲಿದೆ. ಮೇಲ್ಭಾಗದಲ್ಲಿ ಆನ್/ಆಫ್ ಬಟನ್ ಮತ್ತು ಯುಎಸ್‌ಬಿ ಕಿಂಡಿಗಳಿವೆ.

ಮೈಕ್ರೊ ಯುಎಸ್‌ಬಿ ಕಿಂಡಿ ಎಂಐ ಪವರ್‌ಬ್ಯಾಂಕ್ ಅನ್ನು ಚಾರ್ಜ್ ಮಾಡಲು ಮತ್ತು ಯುಎಸ್‌ಬಿ ಕಿಂಡಿ ಪವರ್‌ ಬ್ಯಾಂಕ್ ಅನ್ನು ಬಳಸಿ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಚಾರ್ಜ್ ಮಾಡಲು. ನನ್ನಲ್ಲಿರುವ 3000mAh ಬ್ಯಾಟರಿಯುಳ್ಳ ಒನ್‌ಪ್ಲಸ್ ಫೋನನ್ನು ಒಂದು ಸಲ ಪೂರ್ತಿಯಾಗಿ ಮತ್ತು ಎರಡನೇ ಸಲ ಸುಮಾರು 70% ಚಾರ್ಜ್ ಮಾಡಲು ಸಾಧ್ಯವಾಯಿತು. ಒನ್‌ಪ್ಲಸ್‌ನ ಚಾರ್ಜರ್ 2.1A ಶಕ್ತಿಯದು. ಈ ಪವರ್‌ಬ್ಯಾಂಕ್‌ನ ಔಟ್‌ಪುಟ್ 1.5A ಮಾತ್ರ. ಆದುದರಿಂದ ಇದು ನಿಧಾನವಾಗಿ ಚಾರ್ಜ್ ಮಾಡುತ್ತದೆ.

ಎಪಿಸಿಯ ಪವರ್‌ಬ್ಯಾಂಕ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ. ದೇಹ ಪ್ಲಾಸ್ಟಿಕ್ಕನ ದ್ದಾಗಿದೆ. ಕೆಳಗೆ ಬಿದ್ದರೆ ಹಾಳಾಗಲಾರದು ಎಂಬ ಭರವಸೆ ನೀಡುವಂತಿಲ್ಲ. ಬಲಭಾಗದಲ್ಲಿ ಆನ್/ಆಫ್ ಬಟನ್ ಇದೆ. ಮೇಲ್ಭಾಗದಲ್ಲಿ ಒಂದು ಮೈಕ್ರೊ ಯುಎಸ್‌ಬಿ ಕಿಂಡಿ ಮತ್ತು ಎರಡು ಯುಎಸ್‌ಬಿ ಕಿಂಡಿಗಳಿವೆ. ಮೈಕ್ರೊಯುಎಸ್‌ಬಿ ಕಿಂಡಿ ಈ ಪವರ್‌ಬ್ಯಾಂಕ್ ಅನ್ನು ಚಾರ್ಜ್ ಮಾಡಲು.

ಪವರ್‌ಬ್ಯಾಂಕ್ ಅನ್ನು ಬಳಸಿ ಕಡಿಮೆ ಶಕ್ತಿಯ ಫೋನ್ ಅನ್ನು ಚಾರ್ಜ್ ಮಾಡಲು 1A ನ ಒಂದು ಯುಎಸ್‌ಬಿ ಕಿಂಡಿ ಮತ್ತು ಹೆಚ್ಚು ಶಕ್ತಿಯ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಚಾರ್ಜ್ ಮಾಡಲು 2.4A ನ ಇನ್ನೊಂದು ಯುಎಸ್‌ಬಿ ಕಿಂಡಿಗಳಿವೆ. ಎರಡೂ ಯುಎಸ್‌ಬಿ ಕಿಂಡಿಗಳನ್ನು ಏಕಕಾಲದಲ್ಲಿ ಬಳಸಿ ಎರಡು ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದು. 2.4A ಕಿಂಡಿ ಬಳಸಿ ಒನ್‌ಪ್ಲಸ್ ಫೋನ್ ಅನ್ನು ಚಾರ್ಜ್ ಮಾಡಿದಾಗ ಎಂಐಗಿಂತ ವೇಗವಾಗಿ ಚಾರ್ಜ್ ಮಾಡಿತು.

ಈ ಚಾರ್ಜರ್ ಕೂಡ ಒನ್‌ಪ್ಲಸ್ ಫೋನನ್ನು ಮೊದಲನೇ  ಸಲ ಪೂರ್ತಿಯಾಗಿ ಮತ್ತು ಎರಡನೇ ಸಲ ಸುಮಾರು 60% ಚಾರ್ಜ್ ಮಾಡಿತು. ಈ ಪವರ್‌ಬ್ಯಾಂಕ್‌ನಲ್ಲಿ ಅಧಿಕ ಶಕ್ತಿಯನ್ನು ಬೇಡುವ ಟ್ಯಾಬ್ಲೆಟ್ ಅನ್ನು ಚಾರ್ಜ್ ಮಾಡಲು 2.4Aನ ಕಿಂಡಿಯನ್ನೇನೋ ನೀಡಿದ್ದಾರೆ. ಅದರೆ ಟ್ಯಾಬ್ಲೆಟ್‌ಗಳ ಬ್ಯಾಟರಿ 5000 mAhಗಿಂತ ಜಾಸ್ತಿ ಇರುತ್ತದೆ.

ಅಂದರೆ ಟ್ಯಾಬ್ಲೆಟ್‌ ಅನ್ನು ಪೂರ್ತಿಯಗಿ ಚಾರ್ಜ್ ಮಾಡಲು ಸಾಧ್ಯವಿಲ್ಲ. ಒಂದು ಉತ್ತಮ ಸೌಲಭ್ಯವೆಂದರೆ ಎರಡು ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದು ಎಂಬುದು. ಒಟ್ಟಿನಲ್ಲಿ ಹೇಳುವುದಾದರೆ ಶಿಯೋಮಿ ಯವರು ಅತಿ ಕಡಿಮೆ ಬೆಲೆಗೆ ಒಂದು ಉತ್ತಮ ಉತ್ಪನ್ನ ನೀಡಿದ್ದಾರೆ. ಎಪಿಸಿ ತುಂಬ ಪ್ರಸಿದ್ಧವಾದ ಬ್ರ್ಯಾಂಡ್. ಸಹಜವಾಗಿಯೇ ಉತ್ಪನ್ನ ಚೆನ್ನಾಗಿದೆ. ಎರಡು ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದು. ಆದರೆ ದುಬಾರಿ ಎನ್ನಬಹುದು. 

ವಾರದ ಆಪ್
ಐರೆಫ್
ಮೊಬೈಲ್ ಫೋನ್ ಸೇವೆ ನೀಡುವ ಕಂಪೆನಿಗಳು ಹಲವಾರಿವೆ. ಪ್ರತಿ ಕಂಪೆನಿಯೂ ನಿಮಗೆ ಹಲವು ಆಯ್ಕೆಗಳನ್ನು  ನೀಡುತ್ತಿವೆ. ಬೇರೆ ಬೇರೆ ಸಮಯದಲ್ಲಿ ಮಾತನಾಡಲು ಬೇರೆ ಬೇರೆ ಪ್ಲಾನ್‌ಗಳಿವೆ. ಎಸ್‌ಟಿಡಿ, ಐಎಸ್‌ಡಿಗಳಿಗೂ ಹಲವು ಪ್ಲಾನ್‌ಗಳಿವೆ. ಜೊತೆಗೆ ಅಂತರಜಾಲ ಸಂಪರ್ಕ ಸೇವೆಗೂ ಹಲವು ಆಯ್ಕೆಗಳಿವೆ.  ಒಂದು ಕಂಪೆನಿಯ ಸೇವೆಯಲ್ಲೇ ಇಷ್ಟೆಲ್ಲ ಆಯ್ಕೆಗಳಿವೆ.  ಇಂಥ ಹಲವು ಕಂಪೆನಿಗಳ ಹಲವು ಪ್ಲಾನ್‌ಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಇವುಗಳನ್ನೆಲ್ಲ ತಿಳಿಯುವುದು ಹೇಗೆ?

ನಮಗೆ ಯಾವುದು ಸೂಕ್ತ ಎಂದು ತಿಳಿಯುವುದು ಹೇಗೆ? ಈ ಪ್ರಶ್ನೆಗೆ ಉತ್ತರ ರೂಪವಾಗಿ ಐರೆಫ್ (iReff )  ಕಿರುತಂತ್ರಾಂಶ ಬಂದಿದೆ. ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಇದನ್ನು ಹುಡುಕಿ ಹಾಕಿಕೊಳ್ಳಿ. ಕಂಪೆನಿಗಳು ಪ್ಲಾನ್ ಬದಲಿಸಿದಂತೆಲ್ಲ ಈ ಕಿರುತಂತ್ರಾಂಶ ತನ್ನಲ್ಲಿರುವ ಮಾಹಿತಿಯನ್ನು ನವೀಕರಿಸಿಕೊಳ್ಳುತ್ತದೆ.

ಗ್ಯಾಜೆಟ್ ಸುದ್ದಿ
ಸ್ಮಾರ್ಟ್‌ಫೋನ್ ಬಳಸಿ ಕಣ್ಣು ಪರೀಕ್ಷೆ
ಸ್ಮಾರ್ಟ್‌ಫೋನ್‌ಗೆ ಹಲವು ನಮೂನೆಯ ಜೋಡಣೆಗಳ ಮೂಲಕ ಹಲವು ಹೊಸ ಹೊಸ ಸಾಧ್ಯತೆಗಳ ಸುದ್ದಿ ಬರುತ್ತಲೇ ಇವೆ. ಉದಾಹರಣೆಗೆ ಸ್ಮಾರ್ಟ್‌ಫೋನ್‌ಗೆ ಸೂಕ್ತ ಜೋಡಣೆಯ ಮೂಲಕ ರಕ್ತ ಪರೀಕ್ಷೆ. ಈಗ ಬಂದ ಸುದ್ದಿ ಪ್ರಕಾರ ಸ್ಮಾರ್ಟ್‌ಫೋನ್ ಮೂಲಕ ಕಣ್ಣು ಪರೀಕ್ಷೆ ನಡೆಸಬಹುದಾಗಿದೆ. ಕಣ್ಣು ಪರೀಕ್ಷೆ ಮಾಡಲು ಈಗ ಎಲ್ಲ ವೈದ್ಯರೂ ಗಣಕೀಕೃತ ಸಾಧನ ಬಳಸುವುದನ್ನು ನೀವು ಗಮನಿಸಿರಬಹುದು. ಈಗ ಸ್ಮಾರ್ಟ್‌ಫೋನ್‌ಗೆ ಜೋಡಿಸಬಹುದಾದ ಅಂತಹ ಸಾಧನದ ಆವಿಷ್ಕಾರ ಆಗಿದೆ. ಸದ್ಯಕ್ಕೆ ಇದು ಅಮೆರಿಕದಲ್ಲಿ ಮಾತ್ರ ಲಭ್ಯ.

ಗ್ಯಾಜೆಟ್ ತರ್ಲೆ
ಅಲಿಯಾ ಭಟ್‌: ಎಲ್ಲಿಗೆ ಹೋಗ್ತಿದ್ದೀರಿ?
ಪೊಲೀಸರು: ಲಾಠಿಚಾರ್ಜ್‌ ಮಾಡೋಕೆ.
ಅಲಿಯಾ ಭಟ್‌: ಹೌದಾ. ಹಾಗಾದ್ರೆ ಚಾರ್ಜರ್‌ ತಗೊಂಡ್ಹೋಗಿ.

ಗ್ಯಾಜೆಟ್ ಸಲಹೆ
ಮಿಥನ್ ಹೊಸಮನೆಯವರ ಪ್ರಶ್ನೆ: ಎರಡು ಸಿಮ್ ಹಾಕಬಹುದಾದ ಫೋನಿನಲ್ಲಿ ‘GSM+WCDMA’ ಎಂದು ಬರೆದಿದ್ದರೆ ಅದರಲ್ಲಿ ಎರಡು ಜಿಎಸ್‌ಎಂ ಸಿಮ್ ಹಾಕಬಹುದೇ?
ಉ: ಹಾಕಬಹುದು. GSM+WCDMA ಎಂಬುದನ್ನು 2ಜಿ ಮತ್ತು 3ಜಿ ಎಂದು ಅರ್ಥ ಮಾಡಿಕೊಳ್ಳಬಹುದು. 3ಜಿ ಸಿಮ್ ಹಾಕಬಹುದಾದ ಜಾಗದಲ್ಲಿ 2ಜಿ ಸಿಮ್ ಹಾಕಬಹುದು. ಆದರೆ 2ಜಿ ಮಾತ್ರ ಸೌಲಭ್ಯವಿರುವಲ್ಲಿ 3ಜಿ ಸಿಮ್ ಬಳಸುವಂತಿಲ್ಲ.

ಕಂಪೆನಿ - ಶಿಯೋಮಿ (Xiaomi) - ಎಪಿಸಿ (APC)   
ಮಾದರಿ - ಎಂಐ (Mi) - ಎಂ5ಬಿಕೆ-ಐಎನ್ (M5BK-IN)   
ಶಕ್ತಿ - 5200 mAh - 5000 mAh   
ದೇಹ- ‌ಅಲ್ಯೂಮಿನಿಯಂ-  ಪ್ಲಾಸ್ಟಿಕ್   
ಯುಎಸ್‌ಬಿ ಕಿಂಡಿ(ಔಟ್‌ಪುಟ್) ಒಂದು  - (1.5 A)-  ಎರಡು (2.4 A) ಮತ್ತು (1 A)   
ಗಾತ್ರ - (ಮಿ.ಮೀ.) 90 x 55 x 21 - 107.5 x 64.4 x 14.4   
ಬೆಲೆ - ₹599 - ₹2999 (ನಿಗದಿತ)
 (₹1500 ರಿಂದ ₹2500 (ಮಾರುಕಟ್ಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT