ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷಿಯಾ ಪವರ್‌ಬ್ಯಾಂಕ್ ಎಪಿ5200ಸಿ : ಪವರ್ ಇಲ್ಲದ ಬ್ಯಾಂಕ್

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಏಷಿಯಾ ಪವರ್‌ಬ್ಯಾಂಕ್ ಎಪಿ5200ಸಿ : ಪವರ್ ಇಲ್ಲದ ಬ್ಯಾಂಕ್

ಈ ಸ್ಮಾರ್ಟ್‌ಫೋನ್‌ಗಳು ಇದ್ದಾವಲ್ಲ, ಅವು ಒಂದು ದಿನ ಪವರ್ ಇಟ್ಟುಕೊಂಡರೆ ಅದೇ ಹೆಚ್ಚು. ಸಾಯಂಕಾಲ ಇನ್ನೊಮ್ಮೆ ಚಾರ್ಜ್ ಮಾಡಬೇಕಾಗುತ್ತದೆ. ನೀವು ಸ್ಮಾರ್ಟ್‌ಫೋನ್ ಬಳಸುವವರಾದಲ್ಲಿ ಕೆಲವೊಮ್ಮೆ ಸಾಯಂಕಾಲದ ಹೊತ್ತಿಗೆ ಚಾರ್ಜ್ ಮುಗಿದಿರುತ್ತದೆ ಹಾಗೂ ಚಾರ್ಜ್ ಮಾಡಲು ನಿಮ್ಮ ಕೈಯಲ್ಲಿ ಚಾರ್ಜರ್ ಇಲ್ಲ ಅಥವಾ ಚಾರ್ಜ್ ಪಾಯಿಂಟ್ ಸಿಕ್ಕಿಲ್ಲ. ಇಂತಹ ಸಂದರ್ಭಗಳಿಗೆ ಬೇಕು ಹೆಚ್ಚಿಗೆ ಪವರ್‌ಬ್ಯಾಂಕ್. ಇವುಗಳಲ್ಲಿ ರೀಚಾರ್ಜೆಬಲ್ ಬ್ಯಾಟರಿ ಇರುತ್ತದೆ. ಯುಎಸ್‌ಬಿ ಮೂಲಕ ಇವುಗಳಿಂದ ನಿಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಎಂಪಿ3 ಪ್ಲೇಯರ್ ಅನ್ನು ಚಾರ್ಜ್ ಮಾಡಬಹುದು.  

ಪವರ್‌ಬ್ಯಾಂಕ್ ಕೊಳ್ಳುವುದು ಹೇಗೆ?
ಈ ಪವರ್‌ಬ್ಯಾಂಕ್‌ಗಳು ಹಲವು ಶಕ್ತಿಗಳಲ್ಲಿ ದೊರೆಯುತ್ತವೆ. ನಿಮಗೆ ಎಂತಹದು ಬೇಕು ಎಂದು ತಿಳಿಯುವುದು ಹೇಗೆ?
ಮೊತ್ತಮೊದಲನೆಯದಾಗಿ ನಿಮ್ಮ ಗ್ಯಾಜೆಟ್‌ನ (ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಇತ್ಯಾದಿ) ಬ್ಯಾಟರಿ ಶಕ್ತಿ ಎಷ್ಟು ಎಂಬುದನ್ನು ಪತ್ತೆಹಚ್ಚಿ. ಇದು ಬ್ಯಾಟರಿ ಮೇಲೆ ಬರೆದಿರುತ್ತದೆ ಹಾಗೂ ಗ್ಯಾಜೆಟ್ ಜೊತೆ ಬಂದ ಮ್ಯಾನ್ಯುಯಲ್ ಅಥವಾ ಕಂಪೆನಿಯ ಜಾಲತಾಣದಲ್ಲಿ ದೊರೆಯುತ್ತದೆ. ಇತ್ತೀಚೆಗೆ ದೊರೆಯು­ತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಶಕ್ತಿ ಸುಮಾರು 1800 ರಿಂದ 3000 mAh ಇರುತ್ತದೆ. ಇನ್ನೂ ಒಂದು ವಿಷಯ ಪತ್ತೆ ಹಚ್ಚಬಹುದು.

ಅದೆಂದರೆ ನಿಮ್ಮ ಸ್ಮಾರ್ಟ್‌ಫೋನ್ ಜೊತೆ ಬಂದ ಚಾರ್ಜರ್‌ನ ಮೇಲೆ ಬರೆದ ಶಕ್ತಿ. ಸಾಮಾನ್ಯವಾಗಿ ಇದು 5V ಮತ್ತು 1A ಇರುತ್ತದೆ. ಅಂದರೆ ನಿಮಗೆ ಬೇಕಾದ ಪವರ್‌ಬ್ಯಾಂಕ್‌ಕನಿಷ್ಠ 3000mAh ಮತ್ತು 1A ಇರತಕ್ಕದ್ದು. ನಿಮ್ಮ ಸ್ಮಾರ್ಟ್‌ಫೋನಿನ ಬ್ಯಾಟರಿ 2300 mAh ಇದ್ದಲ್ಲಿ ನೀವು ಕೊಂಡ ಪವರ್‌ಬ್ಯಾಂಕ್ 5200 mAh ಆಗಿದ್ದಲ್ಲಿ ನೀವು ಅದನ್ನು ಬಳಸಿ ನಿಮ್ಮ ಫೋನನ್ನು ಎರಡು ಸಲ ಚಾರ್ಜ್ ಮಾಡಬಹುದು. ನಂತರ ಪವರ್‌ಬ್ಯಾಂಕನ್ನು ರೀಚಾರ್ಜ್ ಮಾಡಬೇಕಾ­ಗು ತ್ತದೆ. ಬಹುತೇಕ ಪವರ್‌ಬ್ಯಾಂಕ್ ಜೊತೆ ಯುಎಸ್‌ಬಿ ಕೇಬಲ್ ನೀಡಿರುತ್ತಾರೆ. ಇದು ಎರಡು ಕೆಲಸಗಳನ್ನು ಮಾಡುತ್ತದೆ –ಪವರ್‌ಬ್ಯಾಂಕನ್ನು ಚಾರ್ಜ್ ಮಾಡುವುದು ಮತ್ತು ಪವರ್‌ಬ್ಯಾಂಕನ್ನು ಬಳಸಿ ಫೋನನ್ನು ಚಾರ್ಜ್ ಮಾಡುವುದು.

ಇದೇ ಅಂಕಣದಲ್ಲಿ ತುಂಬ ಹಿಂದೆ Cooler Master Choiix Charger C-2021-K1S0 ಎಂಬ ಪವರ್‌ಬ್ಯಾಂಕ್ ವಿಮರ್ಶೆ ಪ್ರಕಟವಾಗಿತ್ತು. ಅದು 5600 mAh ಶಕ್ತಿಯದಾಗಿದ್ದು ಈಗಲೂ ನನ್ನಲ್ಲಿದೆ ಮತ್ತು ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ನಮ್ಮಲ್ಲಿ ಸ್ಯಾಮ್‌ಸಂಗ್ ಕಂಪೆನಿಯ 9000 mAh ಶಕ್ತಿಯ ಒಂದು ಪವರ್‌ಬ್ಯಾಂಕ್ (Samsung EEB-EI1CWEGINU) ಇತ್ತು, ಅದೂ ಚೆನ್ನಾಗಿಯೇ ಇತ್ತು. ಆದರೆ ಅದು ಕಳುವಾಗಿ ಹೋಯಿತು. ಈಗ ಮತ್ತೊಂದು ಪವರ್‌ಬ್ಯಾಂಕ್ ಕಡೆ ಗಮನ ಹರಿಸೋಣ.

ಏಷಿಯಾ ಪವರ್‌ಬ್ಯಾಂಕ್ ಎಪಿ5200ಸಿ
ಇದು 5200 mAh ಶಕ್ತಿಯದಾಗಿದ್ದು ಚಾರ್ಜಿಂಗ್ 5V, 1A ಆಗಿದೆ. ಒಂದು ಮೈಕ್ರೋ ಯುಎಸ್‌ಬಿ ಕಿಂಡಿ ಇದೆ. ಇದನ್ನು ಯುಎಸ್‌ಬಿ ಕೇಬಲ್ ಮೂಲಕ ನಿಮ್ಮಲ್ಲಿರುವ ಯುಎಸ್‌ಬಿ ಚಾರ್ಜರ್ ಅಥವಾ ಗಣಕಕ್ಕೆ ಜೋಡಿಸಿ ಚಾರ್ಜ್ ಮಾಡಬಹುದು. ಪೂರ್ತಿ ಚಾರ್ಜ್ ಆಗಲು 6-8 ಗಂಟೆ ಬೇಕು. ಗಾತ್ರ 21 x 45 x 96 ಮಿ.ಮೀ. ತೂಕ 120 ಗ್ರಾಂ. ಇದನ್ನು ಚಾರ್ಜ್ ಮಾಡಲು ಚಾರ್ಜರ್ ನೀಡಿಲ್ಲ. ಇನ್ನೊಂದು ಯುಎಸ್‌ಬಿ ಕಿಂಡಿ ಇದೆ. ಇದರ ಮೂಲಕ ನಿಮ್ಮ ಫೋನನ್ನು ಚಾರ್ಜ್ ಮಾಡಬಹುದು. ಇದರಲ್ಲಿರುವ ಒಂದು ವಿಶೇಷ ಸೌಲಭ್ಯವೆಂದರೆ ಎಲ್‌ಇಡಿ ಬಲ್ಬ್ ಟಾರ್ಚ್. ಅಂದರೆ ಹಳ್ಳಿ ಕಡೆ ಅಥವಾ ಪೇಟೆಯಲ್ಲೂ ವಿದ್ಯುತ್ ಇಲ್ಲದಾಗ ಇದನ್ನು ಟಾರ್ಚ್ ಮಾದರಿಯಲ್ಲಿ ಬಳಸಬಹುದು.

ಇತ್ತೀಚೆಗೆ ಭಾರತದ ಉತ್ಪನ್ನ ಹೇಳಿಕೊಂಡು ಚೀನಾ ದೇಶದಲ್ಲಿ ತಯಾರಾದ ಹಲವು ಉತ್ಪನ್ನಗಳು ಭಾರತದ ಮಾರುಕಟ್ಟೆಯಲ್ಲಿ ತುಂಬಿವೆ. ಇದೂ ಅದೇ ಜಾತಿಗೆ ಸೇರಿದ್ದು. ಚೀನಾದಲ್ಲಿ ತಯಾರಾದ ಮಾತ್ರಕ್ಕೆ ಕಳಪೆ ಗುಣಮಟ್ಟದ್ದಾಗಿರಬೇಕೆಂದೇನೂ ಇಲ್ಲ. ಕ್ಯಾನನ್, ನಿಕಾನ್ ಕ್ಯಾಮೆರಾಗಳು, ಲೆನೊವೊ ಲ್ಯಾಪ್‌ಟಾಪ್‌ಗಳು, ಐಫೋನ್‌ಗಳು ಎಲ್ಲ ಚೀನಾದಲ್ಲೇ ತಯಾರಾಗುವುದು. ಆದರೆ ನಾವು ಚೀನಾದ ಉತ್ಪನ್ನ ಎಂದು ಅಂಗಡಿಗಳಲ್ಲಿ ಕೊಳ್ಳುವ ಬಹುತೇಕ ಉತ್ಪನ್ನಗಳು (ಕಡಿಮೆ ಬೆಲೆಯ ಫೋನ್, ಚಾರ್ಜರ್, ಇತ್ಯಾದಿ) ಕಳಪೆ ಗುಣಮಟ್ಟದ್ದಾಗಿರುತ್ತವೆ.

ಈ ಚಾರ್ಜರ್ ಅದೇ ಜಾತಿಯದು. ಅದನ್ನು ಆನ್ ಆಫ್ ಮಾಡಲು ನೀಡಿರುವ ಬಟನ್ ಒಳಗೆ ಹೋಗಿತ್ತು. ಅದನ್ನು ಒತ್ತಬೇಕಾದರೆ ನಿಮ್ಮ ಬೆರಳಲ್ಲಿ ಉಗುರು ಇರುವುದು ಅತೀ ಅವಶ್ಯ. ಅಷ್ಟು ಮಾತ್ರವಲ್ಲ ಅದನ್ನು ಒತ್ತುವಾಗ ಕವಚದ ಒಳಗಿರುವ ಯಂತ್ರ ಅತ್ತಿತ್ತ ಅಲ್ಲಾಡುವುದು ಅನುಭವಕ್ಕೆ ಬರುತ್ತಿತ್ತು. ಅಂದರೆ ಇದರ ರಚನೆ ಏನೇನೂ ಚೆನ್ನಾಗಿಲ್ಲ ಎಂದಾಯಿತು.

ಇದರ ಜೊತೆ ನೀಡಿರುವ ಒಂದು ಪುಟದ ಚಿಕ್ಕ ಮ್ಯಾನ್ಯುಯಲ್‌ನಲ್ಲಿ ಅದರ ಎಲ್‌ಇಡಿ ಟಾರ್ಚನ್ನು ಆನ್ ಮಾಡಿ ಬಳಸುವುದು ಹೇಗೆ ಎಂಬ ಬಗ್ಗೆ ಮಾಹಿತಿಯೇ ಇರಲಿಲ್ಲ. ನಾನು ಸ್ವಲ್ಪ ಸರ್ಕಸ್ ಮಾಡಿ ಕೊನೆಗೂ ಅದನ್ನು ಪತ್ತೆಹಚ್ಚಿದೆ. ಒಟ್ಟಿನಲ್ಲಿ ಇದು ಒಂದು ಕಳಪೆ ಉತ್ಪನ್ನ ಎನ್ನಬಹುದು.

ವಾರದ ಆಪ್
ಇಂಡಿಯನ್ ಮೇಝ್ 

ಇಂಡಿಯನ್ ಮೇಝ್ (indian maze) ಎಲ್ಲ ಭಾರತೀಯರಿಗೂ ಗೊತ್ತಿರುವ ಆಟದ ಆಂಡ್ರಾಯಿಡ್ ಆವೃತ್ತಿ. ಒಂದರೊಳಗೊಂದು ವೃತ್ತದ ಮಾದರಿಯಲ್ಲಿರುವ ಗೋಡೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಚಿಕ್ಕ ಕಿಂಡಿಯಿರುತ್ತದೆ. ಮೂರರಿಂದ ಐದರ ತನಕ ಗೋಲಿಗಳಿರುತ್ತವೆ. ಈ ಆಟದ ಸಾಮಾನನ್ನು ನಮಗೆ ಬೇಕಾದ ಕಡೆಗೆ ವಾಲಿಸಿ ಗೋಲಿಗಳನ್ನು ಕಿಂಡಿಗಳ ಮೂಲಕ ಒಳಗಿನ ವೃತ್ತಕ್ಕೆ ಅಲ್ಲಿಂದ ಅದರೊಳಗಿನ ವೃತ್ತಕ್ಕೆ ಸರಿಸಬೇಕು. ಹಾಗೆ ಮಾಡುತ್ತ ಕೊನೆಗೆ ಎಲ್ಲಕ್ಕಿಂತ ಒಳಗಿನ ವೃತ್ತದಲ್ಲಿ ಎಲ್ಲ ಗೋಲಿಗಳ ಸೇರ್ಪಡೆಯಾಗಬೇಕು. ಈಗ ಈ ಆಟ ನಿಮ್ಮ ಆಂಡ್ರಾಯಿಡ್ ಫೋನಿಗೆ ಲಭ್ಯವಿದೆ. ಉಚಿತ ಆವೃತ್ತಿಯಲ್ಲಿ ಪರದೆಯ ಕೆಳಗಿನ ಸ್ವಲ್ಪ ಭಾಗದಲ್ಲಿ ಜಾಹೀರಾತು ಬರುತ್ತಿರುತ್ತದೆ. ಈ ಜಾಹೀರಾತನ್ನು ಹೋಗಲಾಡಿಸಬೇಕಾದರೆ ನೀವು ಹಣ ಕೊಟ್ಟು ಆಟವನ್ನು ಕೊಳ್ಳಬೇಕು. ಈ ಆಟದಲ್ಲಿ ಕ್ಲಿಷ್ಟತೆಗೆ ಅನುಸಾರವಾಗಿ ಹಲವು ಹಂತಗಳಿವೆ. ಆಡಿದರೆ ಆಡುತ್ತಲೇ ಇರಬೇಕು ಅನ್ನಿಸುವ ಆಟವಿದು.

ಗ್ಯಾಜೆಟ್ ಸುದ್ದಿ

ಗರ್ಭದಲ್ಲಿರುವ ಮಗುವಿಗೆ ಸಂಗೀತ
ಸುಭದ್ರೆಯ ಹೊಟ್ಟೆಯಲ್ಲಿದ್ದಾಗಲೇ ಚಕ್ರವ್ಯೂಹವನ್ನು ಭೇದಿಸುವ ವಿವರಗಳನ್ನು ಅಭಿಮನ್ಯು ಶ್ರೀಕೃಷ್ಣನಿಂದ ತಿಳಿದುಕೊಂಡ ಕಥೆ ಮಹಾಭಾರತದಲ್ಲಿದೆ. ಗರ್ಭದಲ್ಲಿರುವಾಗಲೇ ಮಗುವಿಗೆ ಸಂಗೀತವನ್ನು ಕೇಳಿಸಿ ಅದರ ಮೂಲಕ ಮಗುವಿನ ಮಾನಸಿಕ ಬೆಳವಣಿಗೆಗೆ ಪೂರಕವಾಗುವಂತಹ ಗ್ಯಾಜೆಟ್ ಈಗ ತಯಾರಾಗಿದೆ. ಇದು ಹೊಟ್ಟೆಗೆ ಕಟ್ಟಿಕೊಳ್ಳುವ ಒಂದು ಬೆಲ್ಟ್ ರೂಪದಲ್ಲಿದ್ದು, ಅದರಲ್ಲಿ ನಾಲ್ಕು ಸ್ಪೀಕರುಗಳನ್ನು ಅಳವಡಿ ಸಲಾಗಿದೆ. ನಿಮ್ಮ ಗಣಕದಿಂದ ಅಥವಾ ಎಂಪಿ3 ಪ್ಲೇಯರ್‌ನಿಂದ ಇದರಲ್ಲಿ ಹಾಡುಗಳನ್ನು ಮತ್ತು ಸಂಗೀತವನ್ನು ವರ್ಗಾಯಿಸಿ ಪ್ಲೇ ಮಾಡಬಹುದು. ಮಗು ಹೊಟ್ಟೆಯೊಳಗಿದ್ದುಕೊಂಡೇ ದೇಹದ ಮೂಲಕ ಸಂವಹನವಾಗುವ ಸಂಗೀತವನ್ನು ಆಲಿಸಿ ಬೆಳೆಯುತ್ತದೆ. ಮಕ್ಕಳ ಮೆದುಳಿನ ಬೆಳವಣಿಗೆಗೆ ಸಂಗೀತ ಸಹಾಯಕಾರಿ ಎಂಬುದು ಹಲವು ವೈಜ್ಞಾನಿಕ ಸಂಶೋಧನೆಗಳಿಂದ ತಿಳಿದುಬಂದಿದೆ.

ಗ್ಯಾಜೆಟ್ ಸಲಹೆ
ಪ್ರದೀಪರ ಪ್ರಶ್ನೆ: ವಾಟ್ಸ್‌ಆಪ್ ಸಂದೇಶಗಳನ್ನು ಓದುವುದು ಮತ್ತು ಸಂದೇಶ ಕಳುಹಿಸುವುದು –ಇವುಗಳನ್ನು ಗಣಕದಿಂದ ಮಾಡುವುದು ಹೇಗೆ? ಅದಕ್ಕೆ ಸೂಕ್ತ ತಂತ್ರಾಂಶ ಇದೆಯೇ?

ಉ: ಇದು ಸಾಧ್ಯವಿಲ್ಲ. ಗಣಕಕ್ಕೆ ವಾಟ್ಸ್‌ಆಪ್ ತಂತ್ರಾಂಶ ಇಲ್ಲ. ಅಂತಹ ತಂತ್ರಾಂಶ ಇದೆ, ಅದನ್ನು ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಎಂದು ಹೇಳುವ ಇಮೈಲ್‌ಗಳು ತುಂಬ ಚಾಲ್ತಿಯಲ್ಲಿವೆ. ಅದನ್ನು ನಂಬಿ ಕ್ಲಿಕ್ ಮಾಡಿದರೆ ನಿಮ್ಮ ಗಣಕಕ್ಕೆ ಪೋಕರಿ ತಂತ್ರಾಂಶಗಳು ಡೌನ್‌ಲೋಡ್ ಆಗುತ್ತವೆ. ಅವುಗಳನ್ನೆಲ್ಲ ನಂಬಬೇಡಿ. ಅದೇ ರೀತಿ ಫೇಸ್‌ಬುಕ್‌ಗೂ ವಾಟ್ಸ್‌ಆಪ್ ಆಪ್ ಇದೆ ಎಂದು ನಂಬಿಸುವ ಸಂದೇಶ ಬಂದರೆ ಅದರಲ್ಲಿ ನೀಡಿರುವ ಕೊಂಡಿ ಮೇಲೆ ಕ್ಲಿಕ್ ಮಾಡಬೇಡಿ. ಮೊಬೈಲ್ ಮತ್ತು ಗಣಕ ಎರಡರಲ್ಲೂ ಕೆಲಸ ಮಾಡುವ ವಾಟ್ಸ್‌ಆಪ್ ಮಾದರಿಯ ಸವಲತ್ತು ಬೇಕಿದ್ದರೆ ಈ ಹಿಂದೆ ಇದೇ ಅಂಕಣದಲ್ಲಿ ನೀಡಿದ್ದ ಟೆಲಿಗ್ರಾಂ ಬಳಸಿ.

ಗ್ಯಾಜೆಟ್ ತರ್ಲೆ
ಮದುವೆಗೆ ಮೊದಲು ಪ್ರೇಮಿಗಳಾಗಿದ್ದಾಗ – ಲವ್ ಬರ್ಡ್ಸ್.
ಮದುವೆಯ ನಂತರ ದಿನಾ ಜಗಳವಾಡುವಾಗ – ಆ್ಯಂಗ್ರಿ ಬರ್ಡ್ಸ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT