ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಳವಳಿಯ ಕಟ್ಟಾಳು ದೇಜಗೌ

Last Updated 2 ಜೂನ್ 2016, 19:35 IST
ಅಕ್ಷರ ಗಾತ್ರ

ಸುಮಾರು 28 ವರ್ಷಗಳ ಹಿಂದಿನ ಮಾತು. ಮೈಸೂರಿನ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಅಲ್ಲಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದೆ. ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಬೇಕೆಂದು ಪ್ರೊ. ದೇಜಗೌ ಅವರನ್ನು ಆಹ್ವಾನಿಸಿದೆ. ಅವರು ಸಂತೋಷದಿಂದ ಬರಲೊಪ್ಪಿದರು.

ನನ್ನ ಪರಿಚಯ ಮಾಡಿಕೊಳ್ಳುವಾಗ, ನನ್ನ ತಂದೆ ಅವರ ವಿದ್ಯಾರ್ಥಿಯಾಗಿದ್ದುದನ್ನು ನೆನಪಿಸಿದ್ದು ಬಹುಶಃ ಅವರು ನಮ್ಮ ಆಹ್ವಾನವನ್ನು ಮನ್ನಿಸಲು ಕಾರಣವಾಗಿರಬಹುದು.

ಕಾಲೇಜಿನಿಂದ ನೀಡಿದ್ದ ಅಧಿಕೃತ ಆಮಂತ್ರಣ ಪತ್ರವನ್ನು ಅವರಿಗೆ ನೀಡಿದೆ. ಇಂಗ್ಲಿಷಿನಲ್ಲಿದ್ದ ಆ ಪತ್ರವನ್ನು ನೋಡಿದ ಕೂಡಲೆ ದೇಜಗೌ ಅವರಿಗೆ ಇನ್ನಿಲ್ಲದ ಸಿಟ್ಟುಬಂದಿತು.

‘ನನ್ನ ಶಿಷ್ಯನ ಮಗ ಎನ್ನುತ್ತೀಯ. ನಿನ್ನ ತಂದೆ ಕನ್ನಡದ ಕೆಲಸ ಮಾಡುತ್ತಾರೆ.  ಆದರೆ ನಿನ್ನ ಆಮಂತ್ರಣ ಪತ್ರ ನೋಡಿದರೆ ಇಂಗ್ಲಿಷಿನಲ್ಲಿದೆ. ನಾನು ನಿಮ್ಮ ಕಾಲೇಜಿಗೆ ಬರುವುದಿಲ್ಲ, ಹೋಗು’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರು.

ನನಗೆ ಏನೂ ತೋಚಲಿಲ್ಲ. ಅವರ ಕ್ಷಮೆ ಕೇಳಿ ನೇರವಾಗಿ ಕಾಲೇಜಿಗೆ ಬಂದು, ನಮ್ಮ ಪ್ರಾಂಶುಪಾಲರಿಗೆ ನಡೆದದ್ದನ್ನು ತಿಳಿಸಿದೆ. ಅವರು ಮತ್ತು ನಾನು ತಕ್ಷಣವೇ ದೇಜಗೌ ಅವರ ಮನೆಗೆ ಮತ್ತೆ ಹೋದೆವು. ಪ್ರಾಂಶುಪಾಲರೂ ಕ್ಷಮೆ ಕೇಳಿ, ಇನ್ನು ಮುಂದೆ ಕಾಲೇಜಿನ ಇಂತಹ ಅಧಿಕೃತ ಆಮಂತ್ರಣಗಳನ್ನು ಕನ್ನಡದಲ್ಲಿಯೆ ಕಳುಹಿಸುವುದಾಗಿ ವಚನ ನೀಡಿದರು.

ಇದರಿಂದ ಸಮಾಧಾನಗೊಂಡ ದೇಜಗೌ ನಮ್ಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕನ್ನಡ ಚಳವಳಿಯ ಹಿನ್ನೆಲೆಯಲ್ಲಿಯೇ ಬಾಲ್ಯವನ್ನು ಕಳೆದಿದ್ದ, ಕನ್ನಡ ಚಿಂತನೆಯ ಬೌದ್ಧಿಕ ಆಶಯಗಳನ್ನು ಪ್ರಜ್ಞಾಪೂರ್ವಕವಾಗಿ ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ನನ್ನಂತಹವರಿಗೂ ನಾವು ಎಡವಿದಾಗ ನಮ್ಮ ಕನ್ನಡ ಪ್ರಜ್ಞೆಯನ್ನು ಎಚ್ಚರಿಸುವ ಹಿರಿಯರಾಗಿದ್ದವರು ದೇಜಗೌ. ಮೈಸೂರಿನ ಸಾಹಿತ್ಯಕ ಮತ್ತು ಶೈಕ್ಷಣಿಕ ಪರಿಸರಗಳಲ್ಲಿ ಕನ್ನಡದ ಬಹುಮುಖ್ಯ ಕಾರ್ಯಕರ್ತರಲ್ಲೊಬ್ಬರಾಗಿ ಕಳೆದ ಆರು ದಶಕಗಳಿಂದ ತಮ್ಮ ಛಾಪನ್ನು ದೇಜಗೌ ಮೂಡಿಸಿದ್ದರು.

ಸೋಮವಾರ (30-05-2016) ಸಂಜೆ ನಿಧನರಾದಾಗ ಡಾ. ದೇ.ಜವರೇಗೌಡರಿಗೆ ಅಧಿಕೃತ ಸರ್ಕಾರಿ ದಾಖಲೆಗಳ ಪ್ರಕಾರ ತೊಂಬತ್ತೆಂಟು ವರ್ಷಗಳು. ಅವರೇ ಹಲವು ಬಾರಿ ಹೇಳಿಕೊಂಡಂತೆ ಅವರ ಜನ್ಮದಿನ ಅಧಿಕೃತವಾಗಿ ಯಾರಿಗೂ ತಿಳಿದಿರಲಿಲ್ಲ. ನೂರರ ಸನಿಹದಲ್ಲಿದ್ದರು. ಕನ್ನಡ ಕಟ್ಟುವುದರಲ್ಲಿ ತೊಡಗಿಸಿಕೊಂಡು, ಸಾರ್ಥಕವಾದ ಬದುಕನ್ನು ಅವರು ನಡೆಸಿದರು. ಬರಹಗಾರನಾಗಿ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಹತ್ತಾರು ಸಾವಿರ ಪುಟಗಳನ್ನು ಬರೆದರು. ದಕ್ಷ ಆಡಳಿತಗಾರನಾಗಿ ಮೈಸೂರು ವಿಶ್ವವಿದ್ಯಾಲಯವೂ ಸೇರಿದಂತೆ ಹಲವಾರು ಸಂಸ್ಥೆಗಳನ್ನು ರೂಪಿಸಿದರು. ಕನ್ನಡ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

ಸೋಜಿಗವೆಂದರೆ ಸಾಹಿತಿಯಾಗಿ ಮತ್ತು ಕನ್ನಡದ ಕಾರ್ಯಕರ್ತನಾಗಿ ದೇಜಗೌ ಅವರ ಬದುಕು ರೂಪುಗೊಂಡದ್ದು ಆಕಸ್ಮಿಕವಾಗಿಯೆ. ಶಾಲೆಯ ಕೊಠಡಿಯೊಳಗೆ ಏನಾಗುತ್ತಿದೆ ಎಂದು ಕುತೂಹಲದಿಂದ ಇಣುಕಿ ನೋಡಿದ ಕುರಿ ಕಾಯುತ್ತಿದ್ದ ಬಾಲಕ ಅಧಿಕೃತವಾಗಿ ಶಾಲೆ ಸೇರಿದ್ದು ತುಂಬ ತಡವಾಗಿ. ವಿದ್ಯಾಭ್ಯಾಸ ಮುಂದುವರೆಸಲು ದೇಜಗೌ ಹೋರಾಟವನ್ನೇ ನಡೆಸಬೇಕಾಯಿತು.

ನಂತರದಲ್ಲಿ ಅವರಿಗೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕುವೆಂಪು ಅವರ ವಿದ್ಯಾರ್ಥಿಯಾಗುವ ಅವಕಾಶ ದೊರಕಿತು. ಮುಂದೆ ಸರ್ಕಾರಿ ಅಧಿಕಾರಿಯಾಗುವ, ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರೊಡನೆ ಕೆಲಸ ಮಾಡುವ ಅವಕಾಶಗಳು ದೊರಕಿದಾಗ, ಅಧ್ಯಾಪಕ ವೃತ್ತಿಯನ್ನು ಮತ್ತು ಕುವೆಂಪು ಅವರ ಒಡನಾಟವನ್ನು ದೇಜಗೌ ಬಿಡಲಿಲ್ಲ. ಇಂತಹ ಆಹ್ವಾನಗಳು ಬಂದಾಗ ಕುವೆಂಪು ಅವರು ‘ನನ್ನನ್ನು ಬಿಟ್ಟು ಹೋಗುತ್ತೀರಾ’ ಎಂದು ಕೇಳುತ್ತಿದ್ದುದನ್ನು ಅವರು ಆಗಾಗ ನೆನಪಿಸಿಕೊಳ್ಳುತ್ತಿದ್ದರು.

ಹೀಗೆ ಕುವೆಂಪು ವಿದ್ಯಾರ್ಥಿಯಾಗಿದ್ದ ದೇಜಗೌ ಕುವೆಂಪು ಶಿಷ್ಯತ್ವವನ್ನು ಸ್ವೀಕರಿಸಿದರು. 1950ರ ದಶಕದಲ್ಲಿ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ ಸ್ಥಾನವೂ ಸೇರಿದಂತೆ ಹಲವಾರು ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸುವಾಗ, ದೇಜಗೌ ಅವರ ನೆರವಿಗೆ ಇದ್ದವರು. ಕನ್ನಡವನ್ನು ಶಿಕ್ಷಣದ ಮತ್ತು ಜ್ಞಾನದ ಭಾಷೆಯಾಗಿ ರೂಪಿಸಬೇಕೆಂಬ ಕುವೆಂಪು ಅವರ ಬಹುಮುಖ್ಯ ಗುರಿಯನ್ನು ಸಾಕಾರಗೊಳಿಸಲು ಶ್ರಮಿಸಿದವರ ಪಟ್ಟಿಯಲ್ಲಿ ದೇಜಗೌ ಹೆಸರು ಮೊದಲನೆಯದು.

ಕುವೆಂಪು ಅವರ ಜೊತೆಗಿನ ತಮ್ಮ ಒಡನಾಟವನ್ನು ಬಳಸಿಕೊಂಡು ತಮ್ಮ ಪ್ರಭಾವ ಮತ್ತು ಅಧಿಕಾರಗಳನ್ನು ದೇಜಗೌ ಹೆಚ್ಚಿಸಿಕೊಂಡರು ಎಂದು ದೇಜಗೌ ಅವರ ಟೀಕಾಕಾರರು ಕೆಲವೊಮ್ಮೆ ಹೇಳುವುದುಂಟು. ಸಾಹಿತ್ಯಲೋಕದಲ್ಲಿ ನವ್ಯ ವಿಮರ್ಶಕರು ಕುವೆಂಪು ಸಾಹಿತ್ಯವನ್ನು ಕಟುವಾಗಿ ವಿಮರ್ಶಿಸಿದಾಗ, ಮೈಸೂರಿನ ದೇಜಗೌ ನೇತೃತ್ವದ ಗುಂಪಿನಿಂದ ಸಮರ್ಥ ಪ್ರತಿಕ್ರಿಯೆ ಬರಲಿಲ್ಲ ಎಂದು ಹೇಳುವವರೂ ಇದ್ದಾರೆ. ಅಲ್ಲದೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರತಿಭಾವಂತರನ್ನು ಅವರು ಬೆಳೆಸಲಿಲ್ಲ ಎಂಬ ಆರೋಪವೂ ಕೆಲವೊಮ್ಮೆ ಕೇಳಿಬರುತ್ತದೆ.

ಈ ಆರೋಪಗಳಲ್ಲಿ ಸ್ವಲ್ಪ ಸತ್ಯವೂ ಇದೆ. ಆದರೆ ಇಂತಹ ಆರೋಪಗಳು ಬಹುಶಃ ಪ್ರೊ. ಜಿ.ಎಸ್.ಶಿವರುದ್ರಪ್ಪ ಅವರೊಬ್ಬರನ್ನು ಬಿಟ್ಟು ಸಾರಸ್ವತಲೋಕದ ಬಹುತೇಕ ಎಲ್ಲ ಗಣ್ಯರ ಮೇಲೂ ಇರುವಂತಹವು. ಈ ಆರೋಪಗಳ ಹಿನ್ನೆಲೆಯಲ್ಲಿಯೆ ದೇಜಗೌ ಅವರ ವೈಚಾರಿಕ ಮತ್ತು ಸಾಹಿತ್ಯಕ ಸಂವೇದನೆಗಳ ಸ್ವರೂಪವೇನು, ಅವರ ಕನ್ನಡ ಕಟ್ಟುವ ಕಾರ್ಯಸೂಚಿಯ ಆದ್ಯತೆಗಳೇನು ಎನ್ನುವುದನ್ನೂ ನಾವು ನಿರ್ಣಯಿಸಬಹುದು.

ಗಮನಿಸಿ. ಆಧುನಿಕ ಕನ್ನಡ ಬೌದ್ಧಿಕ ಪರಂಪರೆಗಳ ಮೇಲೆ ಪ್ರಭಾವ ಬೀರಿದ 20ನೆಯ ಶತಮಾನದ ಮುಖ್ಯ ಸಿದ್ಧಾಂತಗಳ ಇಲ್ಲವೇ ಚಿಂತಕರ ಪ್ರಭಾವ ದೇಜಗೌ ಅವರ ಮೇಲೆ ಆಗಲಿಲ್ಲ. ಅಂದರೆ ಗಾಂಧಿವಾದ, ಸಮಾಜವಾದ ಇಲ್ಲವೆ ಬಲಪಂಥೀಯ ಸಿದ್ಧಾಂತಗಳಿಂದ ದೇಜಗೌ ಸಂವೇದನೆ ಮತ್ತು ಚಿಂತನೆ ರೂಪುಗೊಳ್ಳಲಿಲ್ಲ. ದೇಜಗೌ, ಕುವೆಂಪು ಚಿಂತನೆ ಪ್ರಭಾವದಲ್ಲಿ ಬೆಳೆದವರು.

ಅವರ ಸಾಹಿತ್ಯ ಸಂವೇದನೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದ ವಿದ್ಯಾರ್ಥಿಯಾಗಿ ಅವರು ಪಡೆದ ತರಬೇತಿಯಿಂದ ರೂಪುಗೊಂಡದ್ದು. ಆದರೂ ಕುವೆಂಪು ಅವರಂತೆ ಸ್ವಂತಿಕೆಯಿರುವ ಒರಿಜಿನಲ್ ಚಿಂತಕ-ದಾರ್ಶನಿಕರಾಗಿ ಬೆಳೆಯುವ ಶಕ್ತಿ ದೇಜಗೌ ಅವರಿಗಿರಲಿಲ್ಲ ಎಂದರೆ ತಪ್ಪಾಗಲಾರದು. ಅಂತಹ ಸಾಮರ್ಥ್ಯವಿದ್ದವರು ಕನ್ನಡ ಸಾರಸ್ವತ ಲೋಕದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ.

ಹಾಗಾಗಿ ದೇಜಗೌ ಅವರಿಗೆ ತಮ್ಮ ಕಾಲದ ದೊಡ್ಡ ಸಾಹಿತ್ಯಕ ಚಳವಳಿಗಳಾದ ನವ್ಯ ಮತ್ತು ದಲಿತ-ಬಂಡಾಯ ಪಂಥಗಳಿಗೆ ಪ್ರತಿಕ್ರಿಯಿಸಲಾಗಲಿಲ್ಲ. ಒಂದೆಡೆ ಇದನ್ನು ಅವರ ಮಿತಿಯೆಂದು ನೋಡಬಹುದಾದರೂ ಮತ್ತೊಂದೆಡೆ ಅವರ ಆದ್ಯತೆಗಳು ಬೇರೆಯವೇ ಆಗಿದ್ದವು ಎನ್ನುವುದನ್ನು ಸಹ ನಾವು ಗುರುತಿಸಬೇಕು. ತಮ್ಮ ಆದ್ಯತೆಗಳನ್ನು ರೂಪಿಸಿಕೊಳ್ಳುವಾಗ ದೇಜಗೌ ತಮ್ಮ ಗುರುಗಳಾದ ಕುವೆಂಪು ಅವರ ಮೇಲ್ಪಂಕ್ತಿಯನ್ನು ಕನ್ನಡವನ್ನು ಕಟ್ಟುವ ಕ್ಷೇತ್ರದಲ್ಲಿ ಮಾತ್ರ ಬಹುಮುಖ್ಯವಾಗಿ ಅನುಸರಿಸಿದರು.

1960ರ ದಶಕದುದ್ದಕ್ಕೂ ಮತ್ತು 1970ರ ದಶಕದ ಪ್ರಾರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಹಲವಾರು ಜವಾಬ್ದಾರಿಯ ಸ್ಥಾನಗಳನ್ನು ನಿರ್ವಹಿಸುವಾಗ ಕನ್ನಡವನ್ನು ಶಿಕ್ಷಣದ ಮತ್ತು ಜ್ಞಾನದ ಭಾಷೆಯಾಗಿ ರೂಪಿಸುವ ಕೆಲಸವನ್ನು ಅವರು ಮಾಡಿದರು. ಇದು ದೇಜಗೌ ಅವರ ನಿಜವಾದ ಮತ್ತು ಬಹುಮುಖ್ಯವಾದ ಕೊಡುಗೆ ಎಂದು ಹೇಳಲೇಬೇಕು.

ಕನ್ನಡವು ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಧ್ಯಮವಾಗಬೇಕು ಎಂಬ ಕನಸನ್ನು ಕಂಡವರು ಕುವೆಂಪು. ಅಪಾರ ವಿರೋಧದ ನಡುವೆಯೂ ಆ ಗುರಿಯನ್ನು ಸಾಕಾರಗೊಳಿಸಲು ಅಗತ್ಯ ಆಡಳಿತಾತ್ಮಕ ಮಂಜೂರಾತಿಗಳನ್ನು ಪಡೆಯಲು ಅವರು ಹೆಣಗಿದರು. ಇದಕ್ಕೆ ಪೂರಕವಾಗಿ ಕನ್ನಡ ಜ್ಞಾನದ ಭಾಷೆಯಾಗಿ ಬೆಳೆಯಬೇಕೆಂದು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಮರುನಿರ್ಮಾಣ ಮಾಡಿದರು.

ಕುವೆಂಪು ಅವರ ಈ ಆಶಯಗಳು ಮತ್ತು ಯೋಜನೆಗಳನ್ನು ಯೋಜಿತ ರೂಪದಲ್ಲಿ ದೇಜಗೌ ಅನುಷ್ಠಾನಗೊಳಿಸಿದರು. ಅವರು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಮತ್ತು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಪಾಶ್ಚಿಮಾತ್ಯ ಮತ್ತು ಭಾರತೀಯ ಚಿಂತನೆಗಳು ಕನ್ನಡದಲ್ಲಿ ಮೂಲಕೃತಿಗಳ ಅನುವಾದಗಳು ಮತ್ತು ಸ್ವತಂತ್ರ ಕೃತಿಗಳ ರಚನೆಯ ಮೂಲಕ ಹೊರಬಂದವು.

ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಕನ್ನಡ ಅಧ್ಯಯನ ಸಂಸ್ಥೆಯಾಗಿ ಕಟ್ಟಿದ್ದು ದೇಜಗೌ ಅವರ ಅತ್ಯಂತ ಮುಖ್ಯ ಸಾಧನೆ. ಒಂದೇ ಸೂರಿನಲ್ಲಿ ಸಾಹಿತ್ಯ, ಜಾನಪದ, ಹಸ್ತಪ್ರತಿಶಾಸ್ತ್ರ, ಶಾಸನಶಾಸ್ತ್ರ, ಇತಿಹಾಸ, ಭಾಷಾಶಾಸ್ತ್ರ, ಅನುವಾದ ಇವುಗಳನ್ನೆಲ್ಲ ತಂದು ಕನ್ನಡ ಅಧ್ಯಯನ ಸಂಸ್ಥೆಯೇ ಒಂದು ವಿಶ್ವವಿದ್ಯಾಲಯವೇನೊ ಎನ್ನುವಂತೆ ಮಾಡಿದರು. ಆಗ ಅವರು ತೋರಿಸಿದ ಸಾಂಸ್ಥಿಕ ಪರಿಕಲ್ಪನೆ (ಇನ್‌ಸ್ಟಿಟ್ಯೂಶನಲ್ ಇಮ್ಯಾಜಿನೇಶನ್) ಇಂದಿಗೂ ಅನುಕರಣೀಯ.

ಇಲ್ಲಿನ ಅಧ್ಯಯನ, ಸಂಶೋಧನೆ ಮತ್ತು ಬೋಧನೆಗಳ ಲಾಭ ಕೇವಲ ಉನ್ನತ ಶಿಕ್ಷಣ ಪಡೆಯುವವರಿಗೆ ಮಾತ್ರ ಆಗಬಾರದು, ಸಾಮಾನ್ಯ ಜನರಿಗೂ ಆಗಬೇಕು ಎಂದು ವಿಶ್ವಕೋಶ ಪ್ರಕಟಣೆಯ ಯೋಜನೆಗಳನ್ನು ರೂಪಿಸಿದರು. ಸರ್ಕಾರದ ನೆರವನ್ನು, ಅನುದಾನವನ್ನು ತಂದರು. ಹೀಗೆ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪಂಡಿತ-ಸಾಮಾನ್ಯರೆಲ್ಲರಿಗೂ ಅಗತ್ಯವಿರುವ ಕೃತಿಗಳ ರಚನೆ, ಪ್ರಕಟಣೆಗಳಿಗೆ ಕಾರಣಕರ್ತರಾದರು.

ಪ್ರತಿ ವಿಷಯಕ್ಕೂ ಬೇರೆಯದೇ ಆದ ವಿಶ್ವವಿದ್ಯಾಲಯ ಬೇಕು ಎಂದು ವಾದಿಸುವ ಇಂದಿನ ದಿನಗಳಲ್ಲಿ ಬೇರೆಬೇರೆ ಜ್ಞಾನಶಿಸ್ತುಗಳಿಗೆ ಸೇರಿದ, ವಿಭಿನ್ನ ಪರಿಣತಿಯ ವಿದ್ವಾಂಸರುಗಳು ಒಟ್ಟಿಗೆ ಕೆಲಸ ಮಾಡಬೇಕು ಎನ್ನುವ ಮಾದರಿ ದೇಜಗೌ ಕೊಡುಗೆ.

ಬರಹಗಾರನಾಗಿ ದೇಜಗೌ ಸಾಧನೆ ಸಾಮಾನ್ಯವಾದುದೇನಲ್ಲ. ಕನ್ನಡ ಗದ್ಯವನ್ನು ಅವರು ರೂಢಿಸಿಕೊಂಡ ರೀತಿ ಅಧ್ಯಯನಯೋಗ್ಯವಾದುದು. ಹಲವಾರು ಪ್ರಕಾರಗಳಲ್ಲಿ ದೇಜಗೌ ಕೃತಿರಚನೆ ಮಾಡಿದ್ದರೂ ನಾನಿಲ್ಲಿ ವಿಶೇಷವಾಗಿ ಗುರುತಿಸಲು ಇಚ್ಛಿಸುವುದು ಎರಡು ಮುಖ್ಯ ಕ್ಷೇತ್ರಗಳನ್ನು: ಜೀವನಚರಿತ್ರೆ ಮತ್ತು ಅನುವಾದ.

ಲಿಂಕನ್, ಅಂಬೇಡ್ಕರ್, ಮಾರ್ಟಿನ್‌ ಲೂಥರ್ ಕಿಂಗ್, ನಿಜಲಿಂಗಪ್ಪ ಇಂತಹ ಮಹನೀಯರ ಬಗ್ಗೆ ನಲವತ್ತಕ್ಕೂ ಹೆಚ್ಚು ಜೀವನಚರಿತ್ರೆಗಳನ್ನು ರಚಿಸಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಅವರ ಬಹುಮುಖ್ಯ ಸಾಧನೆ ಟಾಲ್ಸ್‌ಟಾಯ್‌ ಕೃತಿಗಳನ್ನು ಕನ್ನಡಕ್ಕೆ ತಂದದ್ದು. ಈ ಕೃತಿಗಳ ಮೂಲಕ ಹೊರಗಿನ ಪ್ರಪಂಚವೊಂದನ್ನು ಅನ್ವೇಷಿಸಲು ನನ್ನಂತಹ ಲಕ್ಷಾಂತರ ಓದುಗರಿಗೆ ಸಾಧ್ಯವಾಯಿತು ಎಂಬುದನ್ನು ಇಂದು ಸ್ಮರಿಸಿಕೊಳ್ಳಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT