ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಕಣಿವೆಗೆ ಸಿಗದ ಅಭಿವೃದ್ಧಿ ಭಾಗ್ಯ

Last Updated 16 ಜೂನ್ 2018, 9:12 IST
ಅಕ್ಷರ ಗಾತ್ರ

ಪ್ರಕೃತಿ ಸೌಂದರ್ಯದ ದೇಗುಲ ಕಾಶ್ಮೀರ. ಬೆಟ್ಟ–ಗುಡ್ಡಗಳು, ಗಿರಿ– ಕಂದರಗಳು, ನದಿ– ತೊರೆಗಳು, ಸಮೃದ್ಧ ಹಸಿರು ಈ ಕಣಿವೆಯನ್ನು ಭೂಮಿ ಮೇಲಿನ ಸ್ವರ್ಗವಾಗಿಸಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುವ ಸ್ವರ್ಗಕ್ಕೀಗ ಕಿಚ್ಚು ಹೊತ್ತಿಕೊಂಡಿದೆ. ಮದ್ದು, ಗುಂಡುಗಳ ಸದ್ದು ಅನುರಣಿಸುತ್ತಿದೆ. ದೇಶ, ವಿದೇಶಗಳ ಪ್ರವಾಸಿಗರಿಂದ ನಳನಳಿಸ­ಬೇಕಾದ ಗಡಿ ರಾಜ್ಯದಲ್ಲಿ ಭಯ, ಆತಂಕ ಹಿಂಸಾಚಾರ ಮಡುಗಟ್ಟಿದೆ.

ಜಮ್ಮು– ಕಾಶ್ಮೀರದ ಆರ್ಥಿಕತೆ ನಿಂತಿರುವುದೇ ಪ್ರವಾಸೋದ್ಯಮದ ಮೇಲೆ. ಈ ಉದ್ಯಮ ಪ್ರತ್ಯಕ್ಷ­ವಾಗಿ ಮತ್ತು ಪರೋಕ್ಷವಾಗಿ ಶೇ 75ರಷ್ಟು ಜನರ ಹೊಟ್ಟೆ ತುಂಬಿಸುತ್ತಿದೆ. ಟ್ರಾವೆಲ್ಸ್, ಹೋಟೆಲ್‌, ಕರಕುಶಲ ಉದ್ಯಮ, ರೇಷ್ಮೆ– ಕೈಮಗ್ಗ ಬಟ್ಟೆ ವ್ಯಾಪಾರ ಬಹುತೇಕರ ಆದಾಯ ಮೂಲ. ಆದರೆ, ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ಸಂಘರ್ಷದಿಂದ ಕಣಿವೆ ಜನರ ಆದಾಯ ಮೂಲಕ್ಕೂ ಕತ್ತರಿ ಬಿದ್ದಿದೆ.

ಮೂರು ತಿಂಗಳ ಹಿಂದೆ ಅಪ್ಪಳಿಸಿದ ಪ್ರವಾಹ­ದಿಂದ ಕಾಶ್ಮೀರಿಗಳ ಬದುಕು ಸಂಪೂರ್ಣ ಅತಂತ್ರ­ವಾಗಿದೆ. ಪ್ರವಾಸೋದ್ಯಮ ನಂಬಿರುವ ಜನ ಕಂಗಾ­ಲಾಗಿದ್ದಾರೆ. ಬಹುತೇಕರಿಗೆ ಈ ಕೆಲಸ ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ಅನೇಕರಿಗೆ ಹುಡುಕಿ­ದರೂ ಬೇರೆ ಕೆಲಸ ಸಿಗುವುದಿಲ್ಲ. ಸೀಮಿತ ಪ್ರಮಾ­ಣ­ದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಎಲ್ಲ ಕೈಗಳಿಗೂ ದುಡಿಮೆ ಕೊಡುವ ಸ್ಥಿತಿಯಲ್ಲಿಲ್ಲ.

ಹೊಟ್ಟೆ ಹೊರೆಯಲು ಪರದಾಡುವ ಕಾಶ್ಮೀರಿ­ಗಳು, ಸಿಗುವ ಪ್ರತಿಯೊಂದು ಅವಕಾಶವನ್ನೂ ಬಿಡದೆ ಬಾಚಿಕೊಳ್ಳುತ್ತಿದ್ದಾರೆ. ದುಡಿಮೆಗಾಗಿ ಕಾದು ಕೂರುವವರು, ಹೊರಗಿನಿಂದ ಬರುವ ಜನರಿಗೆ ಗಂಟು ಬೀಳುತ್ತಾರೆ. ‘ಹೋಟೆಲ್‌ ರೂಂ ಬೇಕೆ, ದೋಣಿ ವಿಹಾರ ಮಾಡುವಿರಾ, ಕಾಶ್ಮೀರಿ ಶಾಲ್‌ ಸಾರ್’ ಎಂದು ಗೋಗರೆಯುತ್ತಾರೆ. ಹಿಂದೆ ಹಿಂದೆಯೇ ಹಿಂಬಾಲಿಸುತ್ತಾರೆ. ಅವರಿಂದ ಬಿಡಿಸಿಕೊಂಡು ಬರುವುದೇ ಕಷ್ಟ.
ಕಳೆದ ವಾರ ಶ್ರೀನಗರದ ‘ದಾಲ್‌ ಲೇಕ್‌’ ಬಳಿ ನಡೆದು ಹೋಗುವಾಗ 75 ವರ್ಷದ ಹಿರಿಯ­ರೊಬ್ಬರು ಹಿಂದೆ ಬಂದರು. ದೋಣಿ ವಿಹಾರ ಮಾಡುವಂತೆ ದುಂಬಾಲು ಬಿದ್ದರು. ‘ಬೇರೆಯ­ವರು  500 ರೂಪಾಯಿ ಚಾರ್ಜ್‌ ಮಾಡು­ತ್ತಾರೆ. ಬರೀ 200 ರೂಪಾಯಿ ಕೊಡಿ ಸಾಕು’ ಎಂದು ಪೀಡಿಸಿದರು. ‘ಈಗ ಬೇಡ ಸಂಜೆ ಅಥವಾ ನಾಳೆ ಬರುವೆ’ ಎಂದು ನೆವ ಹೇಳಿದರೂ ಬಿಡಲಿಲ್ಲ. ‘ಎಷ್ಟು ಗಂಟೆಗೆ ಬರುತ್ತೀರಿ?’ ಎಂದು ಪೀಡಿಸಿದರು. ಹೀಗೆಯೇ ಮಾತಾಡಿಕೊಂಡು ಸುಮಾರು ಒಂದು ಕಿ.ಮೀ. ಸಾಗಿದೆವು. ಕೊನೆಗೆ ಅದೇ ರಸ್ತೆಯಲ್ಲಿದ್ದ ಸರ್ಕಾರಿ ಕೈಮಗ್ಗ ಮಳಿಗೆಯ ನೌಕರರೊಬ್ಬರು ನೆರವಿಗೆ ಬಂದರು. ಅವರಿಂದ ಬಿಡಿಸಿ ಕಳುಹಿಸಿದರು.

ಆ ಹಿರಿಯರ ಹೆಸರು ಗುಲಾಂ ಅಹ್ಮದ್‌. ಮಗನೊಂದಿಗೆ ಸೇರಿ ಪ್ರವಾಸಿಗರಿಗೆ ದೋಣಿ ವಿಹಾರ ಮಾಡಿಸುತ್ತಾರೆ. ಕೆಲವು ದಿನಗಳಿಂದ ಪ್ರವಾಸಿಗರಿಲ್ಲದೆ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ನಿತ್ಯದ ಕೂಳಿಗೂ ಅವರಿಗೆ ಕಷ್ಟವಿದೆ. ಕಣಿವೆಯಲ್ಲಿ ಯಾರನ್ನೇ ಮಾತಾಡಿಸಿದರೂ ತಮ್ಮ ಬವಣೆ­ಯನ್ನು ಬಿಚ್ಚಿಡುತ್ತಾರೆ. ಕಾಶ್ಮೀರ ಸುತ್ತು ಹಾಕಿ­ದರೆ, ಜನರ ಬದುಕು ನೆಮ್ಮದಿಯಿಂದ ಇಲ್ಲ ಎಂಬ ಸತ್ಯ ಮನವರಿಕೆ ಆಗುತ್ತದೆ.
ಹತ್ತು ವರ್ಷದ ಹಿಂದೆ ಕಣಿವೆಯ ಜನಸಂಖ್ಯೆ 1.10 ಕೋಟಿ. ಈಗ ಅದು 1.30 ಕೋಟಿ ದಾಟಿದೆ. ಬಡತನ, ನಿರುದ್ಯೋಗ ದೊಡ್ಡ ಸಮಸ್ಯೆ. ಬಹುತೇಕರು ಓದಿರುವುದು ಪಿಯುಸಿವರೆಗೆ ಮಾತ್ರ. ಪದವಿ, ಸ್ನಾತಕೋತ್ತರ ಪದವಿ ಓದಿದ­ವರೂ ಅಲ್ಲಲ್ಲಿ ಇದ್ದಾರೆ. ಅವರಿಗೂ ಕೆಲಸವಿಲ್ಲ. ಅಜ್ಜ, ಅಪ್ಪನಿಂದ ಬಂದ ವ್ಯಾಪಾರ, ವಹಿವಾಟು ನೋಡಿಕೊಳ್ಳುತ್ತಿದ್ದಾರೆ.

ಕಾಶ್ಮೀರಕ್ಕೂ ಕರ್ನಾಟಕಕ್ಕೂ ನಿಕಟ ಸಂಬಂಧ­ವಿದೆ. ಕಾಶ್ಮೀರದ ಯಾವುದೇ ಊರಿಗೆ ಹೋದರೂ ಕರ್ನಾಟಕದಲ್ಲಿ ಓದಿರುವ ಒಬ್ಬರಾದರೂ ಸಿಗುತ್ತಾರೆ. ಕರ್ನಾಟಕದಲ್ಲಿ ಕಳೆದ ದಿನಗಳನ್ನು ಅವರು ಮೆಲುಕು ಹಾಕುತ್ತಾರೆ. ಅನೇಕ ವರ್ಷ ಕಳೆದರೂ ಮರೆಯದೆ ಜೋಪಾನ ಮಾಡಿಕೊಂಡು ಬಂದಿರುವ ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ.

ಕರ್ನಾಟಕ ನೋಡಿದವರು ಬೆಂಗಳೂರಿನ ಅಭಿ­ವೃದ್ಧಿ ಜತೆ ಕಾಶ್ಮೀರದ ಪ್ರಗತಿ ಹೋಲಿಕೆ ಮಾಡು­ತ್ತಾರೆ. ‘ನೋಡಿ ಬೆಂಗಳೂರು ಎಷ್ಟೊಂದು ಮುಂದು­ವರಿದಿದೆ. ಎಷ್ಟೊಂದು ಹೊಸ ಕಂಪೆನಿ­ಗಳು ಬಂದಿವೆ. ಹೊಸ ಉದ್ಯಮಗಳು ತಲೆ ಎತ್ತಿವೆ. ಕಾಶ್ಮೀರ ಆ ಮಟ್ಟಕ್ಕೆ ಬೆಳೆಯಲು ಇನ್ನೆಷ್ಟು ವರ್ಷ ಬೇಕು?’ ಎಂಬ ಪ್ರಶ್ನೆ ಮುಂದಿಡುತ್ತಾರೆ.

ಹಲವು ದಶಕಗಳ ಕಾಲ ಜಮ್ಮು–ಕಾಶ್ಮೀರ­ವನ್ನು ಆಳಿರುವ ಶೇಖ್‌ ಅಬ್ದುಲ್ಲಾ ಕುಟುಂಬ ಏನೇನೂ ಅಭಿವೃದ್ಧಿ ಮಾಡಿಲ್ಲ ಎನ್ನುವ ಗೊಣ­ಗಾಟಕ್ಕೆ ಲೆಕ್ಕವಿಲ್ಲ. ಅಬ್ದುಲ್ಲಾ ಕುಟುಂಬದ ಮೂರು ಪೀಳಿಗೆಯ ನಾಯಕರನ್ನು ಜನ ಕಂಡಿ­ದ್ದಾರೆ. ಅಬ್ದುಲ್ಲಾ ಕುಟುಂಬವನ್ನು ಅಧಿಕಾರ­ದಿಂದ ಹೊರಗಿಡಲು ಆಲೋಚನೆ ಮಾಡಿದಂತೆ ಕಾಣುತ್ತಿದೆ.

ಕಣಿವೆ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸು­ತ್ತಿದೆ. ಕಾಶ್ಮೀರದಲ್ಲಿ ಪಿಡಿಪಿ, ಜಮ್ಮುವಿನಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾಗುತ್ತಿದೆ. ತಿಮವಾಗಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ. ಒಂದೇ ಪಕ್ಷದ ಸರ್ಕಾರ ರಚನೆ ಆಗುವುದೇ ಅಥವಾ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದೇ ಎಂದು ಖಚಿತ­ವಾಗಿ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ರಾಜಕೀಯ ನಾಯಕರ ಅಂದಾಜಿಗೂ ಸಿಗುತ್ತಿಲ್ಲ.

ಭ್ರಷ್ಟಾಚಾರದಲ್ಲಿ ಕಾಶ್ಮೀರ ಮುಂಚೂಣಿ­ಯಲ್ಲಿದೆ. ಅಭಿವೃದ್ಧಿಯಲ್ಲಿ ಕೊನೆ ಸಾಲಿನಲ್ಲಿದೆ. ಕೆಲವು ವರ್ಷಗಳ ಹಿಂದೆ ಭ್ರಷ್ಟಾಚಾರವೆಂದರೆ ಬಿಹಾರ ಕಡೆ ನೋಡಲಾಗುತ್ತಿತ್ತು. ಈಗ ಕಾಲ ಬದ­ಲಾಗಿದೆ. ಕಾಶ್ಮೀರದ ಈಗಿನ ಪರಿಸ್ಥಿತಿಗೆ ರಾಜ­ಕಾರಣಿಗಳೇ ಕಾರಣ. ಕೇಂದ್ರ, ರಾಜ್ಯ ಸರ್ಕಾರ ಮನಸ್ಸು ಮಾಡಿದ್ದರೆ ಕಣಿವೆಯಲ್ಲಿ ಯಾವಾ­ಗಲೋ ಅಭಿವೃದ್ಧಿ ಆಗುತ್ತಿತ್ತು. ಕೈಗಳಿಗೆ ಉದ್ಯೋಗ ಸಿಗುತ್ತಿತ್ತು. ಪ್ರತ್ಯೇಕತೆ ಬಗ್ಗೆ ಆಲೋ­ಚನೆ ಮಾಡಲು ಯಾರಿಗೂ ಪುರಸತ್ತು ಇರು­ತ್ತಿ­ರಲಿಲ್ಲ. ಅರ್ಧಕ್ಕೆ ಓದುಬಿಟ್ಟ ಹುಡುಗರು ಅಥವಾ ಉದ್ಯೋಗ ಸಿಗದ ಯುವಕರು ಹಾದಿ ತಪ್ಪುತ್ತಿರ­ಲಿಲ್ಲ. ಕೈಯಲ್ಲಿ ಶಸ್ತ್ರ ಹಿಡಿಯುತ್ತಿರಲಿಲ್ಲ. ‘ಪಾಕಿ­ಸ್ತಾನ್‌ ಜಿಂದಾಬಾದ್‌’ ಎಂದು  ಕೂಗುತ್ತಿರಲಿಲ್ಲ ಎಂದು ಹಿರಿಯ ತಲೆಮಾರಿನ ಅನೇಕರು ಭಾವಿಸಿದ್ದಾರೆ.

ಕಣಿವೆ ಅಭಿವೃದ್ಧಿ ಕುರಿತು ತಲೆಕೆಡಿಸಿಕೊಳ್ಳಲು ಸರ್ಕಾರಕ್ಕೆ ಇನ್ನೂ ಕಾಲ ಮಿಂಚಿಲ್ಲ. ಕಾಶ್ಮೀರದಲ್ಲಿ ತುರ್ತಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು. ಶಾಲಾ– ಕಾಲೇಜು, ವಿಶ್ವವಿದ್ಯಾಲಯ, ಆಸ್ಪತ್ರೆ­ಗಳು, ವಿಮಾನ ನಿಲ್ದಾಣ, ಬಸ್‌ ಮತ್ತು ರೈಲು ನಿಲ್ದಾಣ ಕಟ್ಟಬೇಕು. ರಸ್ತೆಗಳು, ಮೇಲ್ಸೇತುವೆ, ಉದ್ಯಾನ ಆಗಬೇಕು. ಕುಡಿಯುವ ನೀರು, ವಿದ್ಯುತ್‌ ಸಮಸ್ಯೆಗಳಿಗೆ ಪರಿಹಾರ ದೊರೆಯ­ಬೇಕು.
ಖಾಸಗಿ ವಲಯದ ಕಂಪೆನಿಗಳು ಬರದಿದ್ದರೆ, ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳಾದರೂ ಸ್ಥಾಪನೆ ಆಗಬೇಕು ಎಂದು ಜನ ನಿರೀಕ್ಷಿಸಿದ್ದಾರೆ. ನಿರ್ದಿಷ್ಟ ಕಾಲಮಿತಿಯೊಳಗೆ ಕಾಶ್ಮೀರ ಅಭಿವೃದ್ಧಿ ಆಗಬೇಕಾಗಿದೆ. ಇದಾದರೆ ಹಾದಿ ತಪ್ಪಿದ ಯುವಕರನ್ನು ಮುಖ್ಯ ವಾಹಿನಿಗೆ ವಾಪಸ್‌ ಕರೆ­ತರಲು ಸಾಧ್ಯವಾಗಬಹುದು.

ಕಾಶ್ಮೀರದ ಅಭಿವೃದ್ಧಿಗೆ ಸಂವಿಧಾನದ 370ನೇ ಕಲಂ ಅಡ್ಡಿಯಾಗಿದೆ ಎಂಬ ವಾದವನ್ನು ಕಾಶ್ಮೀರಿ­ಗಳು ಒಪ್ಪಲು ತಯಾರಿಲ್ಲ. ಜಮ್ಮುವಿನಲ್ಲೂ ಈ ಕಲಂ ಜಾರಿಯಲ್ಲಿದೆ. ಅಲ್ಲಿ ಹೇಗೆ ಉದ್ಯಮಗಳು, ಕಂಪೆನಿಗಳು ಬಂದಿವೆ ಎನ್ನುವುದು ಉತ್ತರ ಸಿಗದ ಪ್ರಶ್ನೆ.

ಹೊರಗಿನವರು ಕಾಶ್ಮೀರದಲ್ಲಿ ಆಸ್ತಿಪಾಸ್ತಿ, ಜಮೀನು ಖರೀದಿ ಮಾಡಲು ಸಂವಿಧಾನದ 370ನೇ ಕಲಂ ಅವಕಾಶ ಕೊಡುವುದಿಲ್ಲ. ಇದರಿಂದ ಉದ್ಯಮಿಗಳು ಬಂಡವಾಳ ಹೂಡಿಕೆಗೆ ಮುಂದೆ ಬರುತ್ತಿಲ್ಲವೆನ್ನುವುದು ಸ್ವಲ್ಪಮಟ್ಟಿಗೆ ಸತ್ಯ. ಆದರೆ, ಅದೇ ಅಂತಿಮ ಸತ್ಯವಲ್ಲ. ಗುತ್ತಿಗೆಯಲ್ಲಿ ಜಮೀನು ಹಿಡಿಯುವುದಕ್ಕೆ; ಸರ್ಕಾರದ ಭೂಮಿ­ಯಲ್ಲಿ ಉದ್ದಿಮೆ ಸ್ಥಾಪಿಸುವುದಕ್ಕೆ ಯಾವ ಅಭ್ಯಂತರವೂ ಇಲ್ಲ. ಕಣಿವೆಯಲ್ಲಿರುವುದು ಕಾನೂನು– ಸುವ್ಯವಸ್ಥೆ ಸಮಸ್ಯೆ. ಭಯೋತ್ಪಾದ­ಕರ ಉಪಟಳ. ಹಿಂಸೆ ಕೊನೆ­ಗೊಂಡು, ಶಾಂತಿ ನೆಲೆಸುವವರೆಗೆ ಯಾವುದೇ ಕಂಪೆನಿಗಳೂ ಬರು­ವು­ದಿಲ್ಲ. ಶಾಂತಿ ಇಲ್ಲದ ರಾಜ್ಯದಲ್ಲಿ ಉದ್ಯಮಗಳು ಬರಬೇಕೆಂದು ಬಯಸುವುದಾದರೂ ಹೇಗೆ?

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿ­ಧಾನದ 370ನೇ ಕಲಂ ರದ್ದು ಮಾಡಿಬಿಡುತ್ತದೆ ಎಂಬ ಭಯ ಕಾಶ್ಮೀರಿಗಳಲ್ಲಿದೆ.
ಕಾಶ್ಮೀರದ ಅಸ್ತಿತ್ವ ಉಳಿದಿರುವುದೇ 370ನೇ ಕಲಂನಿಂದಾಗಿ. ಅದು ರದ್ದಾದರೆ ಕಾಶ್ಮೀರ ಹತ್ತರೊಳಗೆ ಹನ್ನೊಂದನೇ ರಾಜ್ಯವಾಗಲಿದೆ ಎನ್ನುವ ಅಂಜಿಕೆಯಿದೆ.

ಕಾಶ್ಮೀರ ಭಾರತದಲ್ಲಿ ವಿಲೀನವಾಗಿ ಆರು ದಶಕಗಳು ಕಳೆದಿವೆ. ಭಾರತವನ್ನು ಒಪ್ಪಿಕೊಳ್ಳಲು ಕಾಶ್ಮೀರಿಗಳಿಗಿನ್ನೂ ಸಾಧ್ಯವಾಗಿಲ್ಲ. ಎರಡೂ ಕಡೆ ಸಣ್ಣದೊಂದು ಅನುಮಾನ– ಅಪನಂಬಿಕೆ ಉಳಿದು­ಕೊಂಡಿದೆ. ಅದನ್ನು ಪರಿಹಾರ ಮಾಡುವ ಪ್ರಯತ್ನ ಇದುವರೆಗೂ ನಡೆದಿಲ್ಲ. ಕಾಶ್ಮೀರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಏಕೋ ಕೇಂದ್ರ ಸರ್ಕಾರ ಮಾಡಲೇ ಇಲ್ಲ. ಉಳಿದ ರಾಜ್ಯ­ಗಳವರೂ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳ­ಬೇಕು. ಕಾಶ್ಮೀರದ ಎಲ್ಲರೂ ಭಾರತ ವಿರೋಧಿ ಭಾವನೆ ಬೆಳೆಸಿಕೊಂಡಿಲ್ಲ.

‘ನಾವೂ ಹಿಂದುಸ್ತಾನಿಗಳು ಎಂದು ಹೇಳಿ­ಕೊಳ್ಳುವ ಬಹಳಷ್ಟು ಜನ ಕಾಶ್ಮೀರದಲ್ಲಿದ್ದಾರೆ. ನಮಗೂ ಈ ದೇಶದ ಬಗ್ಗೆ ಪ್ರೀತಿ– ಗೌರವವಿದೆ. ಎಲ್ಲೋ, ಯಾವಾಗಲೋ ತಪ್ಪಾಗಿರಬಹುದು. ಆದರೆ, ಹಿಂದುಸ್ತಾನದಂಥ ಶ್ರೇಷ್ಠ ಪ್ರಜಾಪ್ರಭುತ್ವ ಜಗತ್ತಿನ ಯಾವ ಭಾಗದಲ್ಲೂ ಸಿಗುವುದಿಲ್ಲ. ಇಲ್ಲಿರುವ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ. ಎಲ್ಲ ಜಾತಿ, ಧರ್ಮ ಮತ್ತು ಸಮುದಾಯಗಳಿಗೂ ಬದುಕಲು ಸಮಾನ ಅವಕಾಶವಿದೆ’ ಎಂದು ಹೇಳುವವ­ರಿ­ದ್ದಾರೆ. ‘ನಮಗೆ ಹಿಂದುಸ್ತಾನವೂ ಅಷ್ಟೇ, ಪಾಕಿ­ಸ್ತಾ­ನವೂ ಅಷ್ಟೇ’ ಎಂದು ಪ್ರತಿಪಾದಿಸುವ ಇನ್ನೊಂದು ಗುಂಪೂ ಇದೆ.

ಕಾಶ್ಮೀರಿಗಳೆಲ್ಲರೂ ಪ್ರತ್ಯೇಕ ಕಾಶ್ಮೀರದ ಕುರಿತು ಮಾತನಾಡುವುದಿಲ್ಲ. ಪ್ರತ್ಯೇಕ ಕಾಶ್ಮೀರದ ಮಾತ­ನಾಡುವವರು ಚುನಾವಣೆಗಳನ್ನು ಒಪ್ಪಿಕೊಳ್ಳುವು­ದಿಲ್ಲ. ಚುನಾವಣೆ ಬಗ್ಗೆ ನಂಬಿಕೆ ಇಲ್ಲವೆಂದು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಭಾರತ ಪರ ನಿಲುವು ಹೊಂದಿದವರು ‘ಆಜಾದಿ ಅಂತಿಮ ಅರ್ಥ ಅಭಿವೃದ್ಧಿ. ಕಾಶ್ಮೀರ ಅಭಿವೃದ್ಧಿ ಆಗಿ ಪ್ರತಿ­ಯೊಬ್ಬರ ಬದುಕು ಉತ್ತಮವಾದರೆ ಅದೇ ನಿಜವಾದ ಸ್ವಾತಂತ್ರ್ಯ. ಅಂಥ ಸ್ವಾತಂತ್ರ್ಯ ನಮ್ಮ ಕನಸು’ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಕಾಶ್ಮೀರ­ದಲ್ಲಿ, ಭಯೋತ್ಪಾದಕರು ಮತ್ತು ಮಿಲಿಟರಿ ನಡುವೆ ಸಿಲುಕಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳೂ ಬೇಕಾದಷ್ಟು ನಡೆದಿವೆ. ಅಮಾಯಕರ ಜೀವ ಹರಣ ಮಾಡುವಂಥ ಕ್ರಮಗಳಿಗೆ ಸರ್ಕಾರ ಕಡಿ­ವಾಣ ಹಾಕಲೇಬೇಕು. ಭದ್ರತಾಪಡೆಗಳಿಗೂ ಹೊಣೆ­ಗಾರಿಕೆ ನಿಗದಿಪಡಿಸಬೇಕು. ಕಣಿವೆ ಜನರಲ್ಲಿ ಪ್ರೀತಿ– ವಿಶ್ವಾಸ ಅರಳಿಸುವ ಕೆಲಸಗಳು ಆಗಬೇಕು. ಕಾಶ್ಮೀರ ಜನರ ವಿಶ್ವಾಸ ಗಳಿಕೆಗೆ ಮುಂದಿನ ಒಂದು ದಶಕದ ಕಾಲಮಿತಿ ಹಾಕಿಕೊಳ್ಳಬೇಕು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT