ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಕು ಡೇರಿಗಳಿಗೆ ಎ2 ಹಾಲಿನ ಏಟು

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

‘ಅಲ್ಲಾರೀ, ನೀವು ಆರೋಗ್ಯವಂತರಾಗಿದ್ದರೆ ದೇಶದ ಜಿಡಿಪಿ ಏರೋದೇ ಇಲ್ಲ ಗೊತ್ತಾ? ಜಿಡಿಪಿ ಜಾಸ್ತಿಯಾಗಬೇಕು ಅಂದ್ರೆ ನೀವು ಕಾಯಿಲೆ ಬೀಳಬೇಕು. ಬೀಳ್ತಾ ಇರಬೇಕು. ಆಸ್ಪತ್ರೆಗಳ ಸಂಖ್ಯೆ ಹೆಚ್ಚಬೇಕು; ಅಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಬೇಕು; ಡಯಾಗ್ನೋಸ್ಟಿಕ್ ಲ್ಯಾಬ್‌ಗಳ ಸಂಖ್ಯೆ ಹೆಚ್ಚಾಗಬೇಕು; ಔಷಧ ಉತ್ಪಾದನೆ ಘಟಕಗಳ ಸಂಖ್ಯೆ ಹೆಚ್ಚಾಗಬೇಕು. ಅವೆಲ್ಲವೂ ಜಿಡಿಪಿಯನ್ನು ಮೇಲಕ್ಕೆ ಏರಿಸ್ತವೆ ಗೊತ್ತಾ?’

-ಬದನವಾಳು ಸಮಾವೇಶದಲ್ಲಿ ಈ ವಿಚಾರ ಪ್ರಕಟವಾಗುತ್ತಿದ್ದಾಗಲೇ ಅತ್ತ ಷಿಕಾಗೊದಿಂದ ವಿಶೇಷ ವಾರ್ತೆಯೊಂದು ಬರತೊಡಗಿತ್ತು. ಭಾರತದಲ್ಲಿ ಭಾರೀ ಚುರುಕಾಗಿ ಜಿಡಿಪಿ ಏರುತ್ತಿದ್ದು, ಅದು ಎಷ್ಟರಮಟ್ಟಿಗೆ ನಿಜ ಎಂಬುದರ ಪರಿಶೀಲನೆಗೆಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಪ್ರತಿನಿಧಿಗಳು ದಿಲ್ಲಿಗೆ ಬರಲಿದ್ದಾರೆ ಎಂಬ ವಾರ್ತೆ ಅದಾಗಿತ್ತು.

ಭಾರತ ಇದೀಗ ಜಗತ್ತಿನಲ್ಲೇ ಅತಿ ವೇಗದ ಜಿಡಿಪಿ (ರಾಷ್ಟ್ರದ ನಿವ್ವಳ ಆಂತರಿಕ ಉತ್ಪನ್ನ) ಏರಿಕೆಯನ್ನು ಸಾಧಿಸಿದ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಪಡೆಯಹೊರಟಿದೆ. ಮೂರು ವರ್ಷಗಳ ಹಿಂದೆ ಜಿಡಿಪಿ ವಾರ್ಷಿಕ ಏರಿಕೆ ಶೇ 4.7 ಇದ್ದುದು, 5ರ ಮನೆಯನ್ನು ದಾಟಿ, ಇದೀಗ 6.9ಕ್ಕೆ ಏರಿದೆ. ಈ ವರ್ಷದ ಕೊನೆಯಲ್ಲಿ ಅದು ಇನ್ನೂ ಮೇಲಕ್ಕೇರಿ 7.5ನ್ನೂ ದಾಟಿ 2016ರಲ್ಲಿ ಚೀನಾವನ್ನೂ ಹಿಂದಿಕ್ಕುವ ಸಾಧ್ಯತೆ ಇದೆ. ಈ ಏರಿಕೆಯಲ್ಲಿ ಸತ್ಯಾಂಶವಿದ್ದರೆ ಐಎಂಎಫ್ ತಂಡದಿಂದ ಸದ್ಯದಲ್ಲೇ ನಮಗೆ ಶಾಭಾಸ್‌ಗಿರಿ ಸಿಗಲಿದೆ.

ಆದರೆ ಸಾಮಾನ್ಯನ ಬದುಕಿನ ಗುಣಮಟ್ಟಕ್ಕೂ ಈ ಜಿಡಿಪಿಗೂ ತಾಳಮೇಳವೇ ಇಲ್ಲವಲ್ಲ? ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ ತೀರಾ ಕೆಳಗೆ, ಅಂದರೆ 135ನೇ ಸ್ಥಾನದಲ್ಲಿದೆ. ಒಟ್ಟೂ 78 ದೇಶಗಳ ‘ಜಾಗತಿಕ ಹಸಿವೆ ಸೂಚ್ಯಂಕ’ದಲ್ಲೂ ನಮ್ಮ ದೇಶದ ಶ್ರೇಯಾಂಕ 57ರಷ್ಟು ಕೆಳಕ್ಕಿದೆ. ಇಥಿಯೋಪಿಯಾ, ಘಾನಾ, ರುವಾಂಡಾಗಳಿಗಿಂತ ಕೆಳಗಿನ ಸ್ಥಾನದಲ್ಲಿ ನಾವಿದ್ದೇವೆ. ಆದರೂ ಜಿಡಿಪಿಯ ಏರಿಕೆಯನ್ನಷ್ಟೇ ನಮ್ಮ ರಾಷ್ಟ್ರೀಯ ವಕ್ತಾರರು ಹೆಮ್ಮೆಯಿಂದ ಠೇಂಕರಿಸುತ್ತಾರೆ. ಅರ್ಥತಜ್ಞರ ವಿಶ್ಲೇಷಣೆಯಲ್ಲಿ ಇಂಥ ವಿರೋಧಾಭಾಸ ಇರುವುದರಿಂದಲೇ ತುಂಬ ಹಿಂದೆ ಥಾಮಸ್ ಕಾರ್ಲೈಲ್ ಎಂಬಾತ ಅರ್ಥಶಾಸ್ತ್ರವನ್ನು ‘ವಿಷಣ್ಣ ವಿಜ್ಞಾನ’ (ಡಿಸ್ಮಲ್ ಸೈನ್ಸ್) ಎಂದು ಕರೆದಿದ್ದನೆಂದು ಕಾಣುತ್ತದೆ.

ಜಿಡಿಪಿಗೂ ಸುಸ್ಥಿರ ಬದುಕಿಗೂ ಸಂಬಂಧ ಇಲ್ಲವೆಂಬುದಕ್ಕೆ ಇನ್ನೂ ಬಹಳಷ್ಟು ಉದಾಹರಣೆಗಳಿವೆ: ಒಂದು ಮರ ತಾನಾಗಿ ಬೆಳೆದು ನಿಂತಿದ್ದರೆ ಅದು ಜಿಡಿಪಿ ವೃದ್ಧಿಗೆ ಏನನ್ನೂ ಕೊಡಲಾರದು. ಮರವನ್ನು ಕತ್ತರಿಸಿ, ಸಾಮಿಲ್ಲಿಗೆ ಸಾಗಿಸಿ, ಸೀಳಿ, ಹಲಗೆ, ಕಪಾಟು ಮಾಡಿ ವಾರ್ನಿಶ್ ಹಚ್ಚುತ್ತಿದ್ದರೆ ಆಗ ಅಷ್ಟೊಂದು ಜನರ ಮಧ್ಯೆ ಹಣದ ಚಲಾವಣೆಯಾಗುತ್ತದೆ. ಅದರಿಂದ ಜಿಡಿಪಿ ಏರುತ್ತದೆ. ತನ್ನ ಪಾಡಿಗೆ ಆ ಮರ ಆಮ್ಲಜನಕವನ್ನೊ ಹಣ್ಣುಹಂಪಲನ್ನೊ ಆಸರೆಯನ್ನೊ ನೀಡುತ್ತ ಸಮೃದ್ಧಿಯ, ನೆಮ್ಮದಿಯ ಮಳೆಗರೆಯುತ್ತಿದ್ದರೆ ಅದರಿಂದ ಜಿಡಿಪಿಗೆ ಏನೂ ಕೊಡುಗೆ ಇರುವುದಿಲ್ಲ. ಅಷ್ಟೇ ಅಲ್ಲ, ಆ ಮರವನ್ನು ಕಡಿದ ಮೇಲೆ ನಿಸರ್ಗಕ್ಕಾಗುವ ಹಾನಿಯ ವಜಾ ವ್ಯವಸ್ಥೆಯೂ ಜಿಡಿಪಿ ಲೆಕ್ಕಾಚಾರದಲ್ಲಿಲ್ಲ.

ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಿದಷ್ಟೂ ಜಿಡಿಪಿ ಏರುತ್ತದೆ; ಬರಗಾಲ ಬಂದು ನೀರಿನ ಟ್ಯಾಂಕರ್‌ಗಳ ಸಂಖ್ಯೆ ಹೆಚ್ಚಿದಷ್ಟೂ ಅದು ಏರುತ್ತದೆ. ಅತಿವೃಷ್ಟಿ, ಚಂಡಮಾರುತ, ಭೂಕುಸಿತ, ಸಾಂಕ್ರಾಮಿಕ ರೋಗದಿಂದಲೂ ಅದು ಏರುತ್ತದೆ. ಸಮಾಜದಲ್ಲಿ ಪ್ರಕ್ಷುಬ್ಧತೆ ಹೆಚ್ಚಾಗಿ ಕಳವು, ಕೊಲೆ, ಸುಲಿಗೆ ಅಪರಾಧ ಸಂಖ್ಯೆ ಏರಿದಷ್ಟೂ (ಅಂದರೆ ಜೈಲುಗಳ ನಿರ್ಮಾಣ ಹೆಚ್ಚಿದಷ್ಟೂ) ಜಿಡಿಪಿ ಹೆಚ್ಚುತ್ತದೆ; ಕೌಟುಂಬಿಕ ಕಲಹ, ವಿಚ್ಛೇದನ, ಅನಾಥಾಲಯ, ವೃದ್ಧಾಶ್ರಮಗಳ ಸಂಖ್ಯೆ ಏರಿದಂತೆಲ್ಲ ಅದೂ ಏರುತ್ತದೆ. ಹೆಮ್ಮೆ ಪಡಬೇಕಾದ ಸಂಗತಿಯೆ ಇದು?

ಅನಾರೋಗ್ಯಕ್ಕೂ ಜಿಡಿಪಿಗೂ ಇರುವ ಸಂಬಂಧ ನೋಡಿ: ಈಚಿನ ವರ್ಷಗಳಲ್ಲಿ ಜಿಡಿಪಿಯ ಏರುಗತಿಗೆ ತಕ್ಕಂತೆ ಹೃದ್ರೋಗಿಗಳ ಹಾಗೂ ಮಧುಮೇಹಿಗಳ ಸಂಖ್ಯೆಯೂ ಏರುತ್ತಿದೆ. ಇವೆರಡು ರೋಗಗಳ ಮಟ್ಟಿಗೆ ಜಗತ್ತಿನಲ್ಲಿ ನಂಬರ್ 1 ಸ್ಥಾನಕ್ಕೆ ಏರಿನಿಂತ ನಮ್ಮ ದೇಶ ಇದೀಗ ಯಕೃತ್ತು ಮತ್ತು ಮೂತ್ರಪಿಂಡ ಕಾಯಿಲೆಗಳ ವಿಷಯದಲ್ಲೂ ಏಕಮೇವಾದ್ವಿತೀಯ ಎನ್ನಿಸಿಕೊಳ್ಳುತ್ತಿದೆ. ವಿಷಣ್ಣ ವಿಜ್ಞಾನದ ಸೂತ್ರಗಳನ್ನೇ ಹಿಡಿದು ಹೊರಟರೆ, ಹೋಟೆಲ್, ಬೇಕರಿ, ಮದ್ಯದ ಅಂಗಡಿಗಳ ಸಂಖ್ಯೆ ಏರಿಕೆಗೂ ಜಿಡಿಪಿಗೂ ನೇರಾನೇರ ಸಂಬಂಧ ಕಲ್ಪಿಸಲು ಸಾಧ್ಯವಿದೆ. ಬೇಕಿದ್ದರೆ ವಾಹನಗಳ ಸಂಖ್ಯೆಯನ್ನೂ ಹೋಲಿಕೆಗೆ ಸೇರಿಸಿಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳು ಹೆಚ್ಚಾಗಿದ್ದರಿಂದಲೇ ರೋಗಿಗಳ ಸಂಖ್ಯೆ ಹೆಚ್ಚಾಯಿತೆಂದು ವಾದಿಸಲಿಕ್ಕೂ ಸಾಧ್ಯವಿದೆ. ಹೆಸರಾಂತ ಆರೋಗ್ಯ ಚಿಂತಕ ಡಾ. ಬಿ.ಎಂ.ಹೆಗ್ಡೆಯವರು ಅದಕ್ಕೂ ಒಂದು ನಿದರ್ಶನ ನೀಡುತ್ತಾರೆ: ವಿಮಾನ ನಿಲ್ದಾಣದ ಬಳಿಯ ದೊಡ್ಡ ಭಿತ್ತಿಫಲಕದಲ್ಲಿ ‘ಬೆಂಗಳೂರಿನ ಪ್ರತಿ ನಾಲ್ಕನೆಯ ವ್ಯಕ್ತಿ ರಕ್ತದ ಅತಿ ಒತ್ತಡದಿಂದ ಬಳಲುತ್ತಿದ್ದಾನೆ’ ಎಂಬ ಹೇಳಿಕೆ ಕಣ್ಣಿಗೆ ಬಿತ್ತೆಂದುಕೊಳ್ಳಿ. ಅದನ್ನು ಓದುತ್ತಲೇ, ಆ ನಾಲ್ಕನೆಯ ವ್ಯಕ್ತಿ ತಾನೇ ಇರಬಹುದೆ ಎಂಬ ಚಿಂತೆ ಬಾಧಿಸಿ, ಕ್ಲಿನಿಕ್ಕಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಹೊರಬೀಳುವ ವೇಳೆಗೆ ನಿಜಕ್ಕೂ ಆತನ ಬಿ.ಪಿ ಏರಿರುತ್ತದೆ. ಹೊಸ ಗಿರಾಕಿ ಸಿಕ್ಕನೆಂದು ಕ್ಲಿನಿಕ್ ಸಿಬ್ಬಂದಿ ಹಾಲುಖೋವಾ ಹಂಚಬೇಕೆ?

ಹುಷಾರಾಗಿರಿ, ನಮ್ಮ ಅನೇಕ ಕಾಯಿಲೆಗಳ ಮೂಲಬೇರು ಹಾಲಿನಲ್ಲೇ ಇದೆಯೆಂಬ ಹೊಸ ಸಂಗತಿಗೆ ಈಗೀಗ ಚಾಲನೆ ಸಿಗುತ್ತಿದೆ. ಮಿಶ್ರತಳಿ ಹಸುಗಳಿಂದ ಪೂರೈಕೆಯಾಗುವ ಹಾಲಿನಲ್ಲಿ ಎ1 ಎಂಬ ಅನಾರೋಗ್ಯಕರ ಅಂಶ ಇರುತ್ತದೆ ಎಂಬುದನ್ನು ನಮ್ಮ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನ ಸಂಸ್ಥೆಯ (ಕರ್ನಾಲ್) ವಿಜ್ಞಾನಿಗಳು ಒತ್ತಿ ಹೇಳತೊಡಗಿದ್ದಾರೆ. ಎಮ್ಮೆ ಮತ್ತು ದೇಸೀ ಹಸುಗಳ ಹಾಲಿನಲ್ಲಿ ಮಾತ್ರ ಆರೋಗ್ಯವನ್ನು ಕಾಪಾಡುವ ಎ2 ಎಂಬ ಅಂಶವಿದೆ ಎಂಬುದು ಗೊತ್ತಾಗಿದೆ. ಈಚೀಚೆಗೆ ಎಲ್ಲೆಡೆ ಮಿಶ್ರತಳಿ ಹಸು ಸಾಕಾಣಿಕೆಯೇ ಹೆಚ್ಚಾಗಿದ್ದರಿಂದ ಆರೋಗ್ಯ ವ್ಯವಸ್ಥೆ ಹದಗೆಡುತ್ತಿದೆ ಎಂದು ಡೇರಿ ತಜ್ಞರು ಹೇಳತೊಡಗಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳಲ್ಲಿ ಈಗೀಗ ಎ2 ಹಾಲಿಗೆ ಪ್ರಾಧಾನ್ಯ ಸಿಗತೊಡಗಿದೆ.

ಹಾಲಿನ ಗುಣಮಟ್ಟ ಕಳಪೆ ಇದ್ದರೆ ಮೊಸರು, ಬೆಣ್ಣೆ, ತುಪ್ಪಗಳಷ್ಟೇ ಅಲ್ಲ, ಖೋವಾ, ಚೀಸ್, ಐಸ್‌ಕ್ರೀಮ್, ಚಾಕೊಲೇಟ್ ಎಲ್ಲವುಗಳ ಗುಣಮಟ್ಟ ಇಳಿಯುತ್ತದೆ. ಸಾಲದ್ದಕ್ಕೆ ಅವುಗಳಲ್ಲಿ ಅಜಿನೊಮೊಟೊ, ವೆನಿಲ್ಲಾ, ಸ್ಟ್ರಾಬೆರಿಗಳ ಕೃತಕ ಸುಗಂಧ, ಬಣ್ಣಗಳನ್ನು ಸೇರಿಸುತ್ತಾರೆ. ನಮ್ಮ  ಬಹಳಷ್ಟು ಡೇರಿಗಳಲ್ಲಿ ಲ್ಯಾಕ್ಟೊಮೀಟರನ್ನು ಹಾಲಿನಲ್ಲಿ ಅದ್ದಿ ಮೇಲೆತ್ತಿ ಸಾಂದ್ರತೆ ನೋಡುವುದನ್ನು ಬಿಟ್ಟರೆ ಹಾಲಿನ ಬೇರೆ ಗುಣಗಳ ಪರೀಕ್ಷೆ ಎಂದಾದರೂ ನಡೆದರೆ ಹೇಳಿ. ಹಸುಗಳಿಗೆ ಲಸಿಕೆ, ಹಾರ್ಮೋನು, ಆ್ಯಂಟಿಬಯಾಟಿಕ್ ನೀಡಿದ ಇಂತಿಷ್ಟು ದಿನ ಹಾಲು ಹಿಂಡಿ ಚೆಲ್ಲಬೇಕೆಂಬ ನಿಯಮವಿದ್ದರೂ ಯಾರೂ ಪಾಲಿಸುತ್ತಿಲ್ಲ. ಮೇವಿನ ಮೂಲಕ ಬರುವ ವಿಷಗಳ ಪತ್ತೆ ವಿಧಾನ ಗೊತ್ತಿಲ್ಲ. ಹಾಲಿನ ಸಾಂದ್ರತೆ ಹೆಚ್ಚಿಸಲೆಂದು ಯೂರಿಯಾ, ಸುಣ್ಣ, ಬೈಕಾರ್ಬ್, ಹಿಟ್ಟಿನ ಗಂಜಿ ಸೇರಿಸಿದ್ದರೆ ಪರೀಕ್ಷೆ ಇಲ್ಲ. ಚೀನಾದಲ್ಲಿ ಹಾಲಿಗೆ ಮೆಲಮೈನ್ ಸೇರಿಸಿದ್ದರಿಂದ ಒಂದೇ ಬಾರಿಗೆ 54 ಸಾವಿರ ಮಕ್ಕಳು ಆಸ್ಪತ್ರೆಗೆ ಸೇರುವಂತಾಗಿ 2008ರಲ್ಲಿ ರಾಷ್ಟ್ರೀಯ ದುರಂತವಾಗಿತ್ತು. ನಮ್ಮಲ್ಲಿ ಚಿಕ್ಕಚಿಕ್ಕ ಲಕ್ಷಾಂತರ ಘಟನೆಗಳು ನಡೆಯುತ್ತಿದ್ದರೆ ಗೊತ್ತೂ ಆಗುವುದಿಲ್ಲ. ಜಿಡಿಪಿ ಮಾತ್ರ ಏರುತ್ತದೆ.

ಎ1 ಮತ್ತು ಎ2 ಹಾಲಿಗೆ ಮತ್ತೆ ಬರೋಣ: ಹಾಲಿನಲ್ಲಿ ಶೇ 87 ನೀರು ಮತ್ತು ಇನ್ನುಳಿದಂತೆ ಕೊಬ್ಬು, ಶರ್ಕರಪಿಷ್ಟ ಮತ್ತು ಪ್ರೊಟೀನು ಇರುತ್ತದೆ. ಪ್ರೊಟೀನಿನಲ್ಲಿ ಬೀಟಾ ಕೆಸೀನ್ ಎಂಬ ಅಂಶವೇ ಪ್ರಮುಖವಾಗಿರುತ್ತದೆ. ಅದರಲ್ಲೂ ಅನೇಕ ವಿಧಗಳಿವೆಯೆಂದು ಗೊತ್ತಾದಮೇಲೆ ಪಶ್ಚಿಮದ ವಿಜ್ಞಾನಿಗಳು ಒಂದೊಂದಕ್ಕೂ ಗುರುತಿನ ಸಂಖ್ಯೆ ಕೊಡುತ್ತಾ ಹೋದರು. ತಮ್ಮದೇ ದೇಶದ ಹೋಲ್‌ಸ್ಟೀನ್ ಮತ್ತು ಇತರ ಕೆಲವು ಹಸು ತಳಿಗಳ ಹಾಲಿನಲ್ಲಿ ಗುರುತಿಸಿದ ಬೀಟಾ ಕೆಸೀನ್‌ಗೆ ‘ಎ1’ ಎಂದರು. ಇನ್ನುಳಿದ ಆಫ್ರಿಕಾ, ಭಾರತೀಯ ಮೂಲದ ತಳಿಗಳ ಹಾಲಿನಲ್ಲಿರುವುದನ್ನು ‘ಎ2’ (ಎ ಟೂ) ಎಂದು ಕರೆದರು. ನ್ಯೂಜಿಲೆಂಡಿನ ಆಕ್ಲೆಂಡ್ ವಿ.ವಿಯ ಶಿಶು ಆರೋಗ್ಯ ವಿಜ್ಞಾನಿ ಬಾಬ್ ಎಲಿಯೆಟ್ ಎಂಬಾತ ಅಲ್ಲಿನ ಅನಿವಾಸಿ ಮಕ್ಕಳಲ್ಲಿ ಮಧುಮೇಹ ಹೆಚ್ಚಿಗೆ ಇರುವುದನ್ನು ಗಮನಿಸಿ, ಅವು ಕುಡಿಯುವ ಹಾಲಿನ ಮೂಲವನ್ನು ಹುಡುಕುತ್ತ ಹೋದ. ಎ1 ಹಾಲಿನ ಸೇವನೆಯಿಂದ ಮಕ್ಕಳಿಗೆ ಬಾಲ್ಯದಲ್ಲೇ ಸಕ್ಕರೆ ಕಾಯಿಲೆ ಬರುತ್ತದೆಂದು ವಾದಿಸಿದ. ಅಷ್ಟೇ ಅಲ್ಲ, 20 ದೇಶಗಳಲ್ಲಿ ಹೃದ್ರೋಗ ಮತ್ತು ಸಕ್ಕರೆ ಕಾಯಿಲೆಗಳ ಹೆಚ್ಚಳಕ್ಕೂ ಎ1 ಹಾಲಿಗೂ ನೇರ ಸಂಬಂಧ ಇದೆಯೆಂದು ಘೋಷಿಸಿದ. ಇಲಿಗಳಿಗೆ ಎರಡೂ ಬಗೆಯ ಹಾಲುಗಳನ್ನು ಕುಡಿಸಿ, ಅವಕ್ಕೂ ಎ1 ಹಾಲು ಅಪಾಯಕಾರಿ ಎಂದು ತೋರಿಸುವ ನಾನಾ ಸಂಶೋಧನೆಗಳು ನಡೆದವು. ಅವನ್ನೆಲ್ಲ ಆಧರಿಸಿ ಡೇರಿ ವಿಜ್ಞಾನಿ ಕೇತ್ ವುಡ್‌ಫೋರ್ಡ್ ಎಂಬಾತ ‘ಹಾಲಿನಲ್ಲಿ ಯಮದೂತ’ ಹೆಸರಿನ ಪುಸ್ತಕವನ್ನೇ ಬರೆದ. 

ಸರಿ, ಡೇರಿ ಉದ್ಯಮಕ್ಕೆ ಹೊಸ ಕೋಡು ಮೂಡಿತು. ನ್ಯೂಜಿಲೆಂಡ್‌ನಲ್ಲೇ ‘ಎ2 ಕಾರ್ಪೊರೇಶನ್’ ಹೆಸರಿನ ಕಂಪೆನಿ ತಲೆ ಎತ್ತಿತು. ಯಾವ ತಳಿಯ ಹಸುಗಳು ಎ1, ಯಾವ ತಳಿಯವು ಎ2 ಹಾಲು ಸ್ರವಿಸುತ್ತವೆ ಎಂಬುದನ್ನು ಪರೀಕ್ಷೆ ಮಾಡುವ ವಿಧಾನವನ್ನೇ ಅದು ಪೇಟೆಂಟ್ ಮಾಡಿಕೊಂಡಿತು. ಎ2 ಹಾಲೇ ಶ್ರೇಷ್ಠವೆಂದು ತೋರಿಸಬಲ್ಲ ಸಂಶೋಧನೆಗೆ ಧನಸಹಾಯ ನೀಡತೊಡಗಿತು. ಪಶ್ಚಿಮದ ವಿಜ್ಞಾನಿಗಳು ತಕರಾರು ತೆಗೆದರು. ಹಸುಗಳ ಪ್ರೊಟೀನಿನಲ್ಲಿ ಎ1, ಎ2 ಎಂಬ ವರ್ಗ ಇರುವುದು ನಿಜವಾದರೂ ಆರೋಗ್ಯದ ದೃಷ್ಟಿಯಿಂದ ಅವೆರಡೂ ಒಂದೇನೇ ಎಂದರು. ದಾವೆ ಹೂಡಿದರು. ಆದರೂ ಬ್ರಿಟನ್ ಮತ್ತು ಐರ್ಲ್ಯಾಂಡ್‌ಗಳಲ್ಲಿ ಎ2 ಹಾಲಿಗೆ ಗಿರಾಕಿಗಳು ಹೆಚ್ಚತೊಡಗಿದರು. ಈ ನಡುವೆ ಎ1 ಹಾಲಿನಲ್ಲಿ ಅಪಾಯಕಾರಿ ಅಂಶ ಇರುವುದು ನಿಜವೆಂದು ಭಾರತದ ವಿಜ್ಞಾನಿಗಳ ಸಂಶೋಧನಾ ವರದಿಯನ್ನು ಯುರೋಪಿಯನ್ ನ್ಯೂಟ್ರಿಶನ್ ಜರ್ನಲ್ ಪ್ರಕಟಿಸಿತು.  ಭಾರತ ಉಪಖಂಡದ ಒಂಗೋಲ್, ಸಾಹೀವಾಲ್, ರೆಡ್ ಸಿಂಧಿ, ಥಾರ್ಪಾರ್ಕರ್, ಗಿರ್, ಕಾಂಕ್ರೇಜ್ ತಳಿಗಳಿಂದ ಹಿಡಿದು ನಮ್ಮ ಮಲೆನಾಡು ಗಿಡ್ಡದವರೆಗೆ ಎಲ್ಲ 22 ದೇಸೀ ತಳಿಗಳೂ, ಎಮ್ಮೆಗಳೂ ಎ2 ಹಾಲನ್ನೇ ಸ್ರವಿಸುತ್ತಿದ್ದು, ಅದನ್ನು ಸೇವಿಸುತ್ತಿದ್ದರೆ ಹೃದ್ರೋಗ, ಮಧುಮೇಹ, ಆಸ್ತಮಾ, ಅಲರ್ಜಿ, ಬೊಜ್ಜು ಮುಂತಾದ ಕಾಯಿಲೆಗಳಿಂದ ದೂರವಿರಲು ಸಾಧ್ಯವೆಂದು ಕರ್ನಾಲ್ ಮೂಲಗಳು ತಿಳಿಸಿದವು. ದೇಶದ ಅಲ್ಲಲ್ಲಿ ಎ2 ಹಾಲಿನ ಉತ್ಪಾದನೆ ಹಾಗೂ ಮಾರಾಟ ಇದೀಗ ಆರಂಭವಾಗುತ್ತಿದೆ.

ಎ1 ಹಾಲು ಕಳಪೆ ಎಂಬ ಸಂಗತಿ ವಿವಾದಾತ್ಮಕ ಇರಬಹುದು. ಮಾರ್ಕೆಟಿಂಗ್ ಮೋಡಿಯೂ ಇರಬಹುದು. ಆದರೆ ಎ2 ಹಾಲೇ ಶ್ರೇಷ್ಠ ಎನ್ನುವಲ್ಲಿ ನಮಗೆ ಅನೇಕ ಲಾಭಗಳಿವೆ: ದೇಸೀ ತಳಿಗಳ ಸಂರಕ್ಷಣೆಗೆ, ಹಾಲಿಗೆ ಬೇಡಿಕೆ ಹೆಚ್ಚಬಹುದು. ಅವಕ್ಕೆ ಅಷ್ಟೊಂದು ಕೃತಕ ಮೇವು, ಲಸಿಕೆ, ಆ್ಯಂಟಿಬಯಾಟಿಕ್ ಬೇಕಾಗುವುದಿಲ್ಲ- ಹಾಗಾಗಿ ಆರೋಗ್ಯವಂತ ಹಾಲೇ ಸಿಕ್ಕೀತು. ಆದರೆ ಉತ್ಪಾದನೆ ಕಡಿಮೆ ಇರುವುದರಿಂದ ಹಾಲು ದುಬಾರಿಯಾಗುತ್ತದೆ. ಅನುಕೂಲಸ್ಥರೇನೊ ದುಪ್ಪಟ್ಟು ಬೆಲೆ ಕೊಟ್ಟು ಎ2 ಹಾಲು ಕುಡಿದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂದುಕೊಳ್ಳೋಣ. ಆದರೆ ಕೆಳವರ್ಗದವರು ಈಗಿನ ಎ1 ಡೇರಿ ಹಾಲನ್ನೇ ಕುಡಿಯುತ್ತ, ಅದರೊಂದಿಗೆ ಬರಬಹುದಾದ ಎಲ್ಲ ಬಗೆಯ ಕಾಯಿಲೆಗಳೊಂದಿಗೆ ಏಗುತ್ತ ಡುಮ್ಮರಾಗಬೇಕು. ಜಿಡಿಪಿಯನ್ನೂ ಮೇಲಕ್ಕೇರಿಸಬೇಕು.
ಆಗಲೂ ಭಾರತ ಒಂದು ರೀತಿಯಲ್ಲಿ ಅಮೆರಿಕವೇ ಆಗಿರುತ್ತದೆ. ಏಕೆಂದರೆ ಅಲ್ಲೂ ಹೆಚ್ಚಿನದಾಗಿ ಕಳಪೆ ಆಹಾರ ಸೇವಿಸುವ ಕೆಳವರ್ಗದ ಜನರಲ್ಲೇ ಬೊಜ್ಜು ಬೆಳೆದಿರುತ್ತದೆ.   
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT