ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳುಬಾಕರ ನಾಡಿನಲ್ಲಿ ಹೊಟ್ಟೆಬಾಕರ ವ್ಯಾಧಿಗಳು

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಭಾರತ-ಪಾಕಿಸ್ತಾನದ ಗಡಿ ಘರ್ಷಣೆಯನ್ನು ಕೊಂಚ ಬದಿಗಿಡಿ. ಅಮೆರಿಕ ತನ್ನದೇ ಪ್ರಜೆಗಳ ಬೊಜ್ಜಿನ ಮೇಲೆ ಯುದ್ಧ ಸಾರಿದೆ. ನ್ಯೂಯಾರ್ಕ್ ನಗರದಲ್ಲಿ ಈ ವಾರದಿಂದ ಸಕ್ಕರೆ ಅಂಶವಿರುವ ಪಾನೀಯಗಳನ್ನು ನಿಷೇಧಿಸಲಾಗುತ್ತಿದೆ. ಹೊಟೆಲ್- ರೆಸ್ಟುರಾಗಳಲ್ಲಿ, ಸಿನಿಮಾ ಮಂದಿರಗಳಲ್ಲಿ ಹಾಗೂ ಕ್ರೀಡಾಂಗಣಗಳಲ್ಲಿ ದೊಡ್ಡ ದೊಡ್ಡ ಬಾಟಲಿ ಅಥವಾ ಪೇಪರ್ ಕಪ್‌ಗಳಲ್ಲಿ ಕೋಲಾ ಪೇಯಗಳನ್ನೊ, ಕಿತ್ತಳೆ ಅಥವಾ ಸೇಬು ರಸವನ್ನೊ ಮಾರುವಂತಿಲ್ಲ. ತತ್ತರಿಸಿದ ಕೋಲಾ ಕಂಪನಿಗಳು ಪ್ರತಿತಂತ್ರ ಹೂಡುತ್ತಿವೆ.

ಬೊಜ್ಜು ಅಲ್ಲಿ ಸಾಂಕ್ರಾಮಿಕ ರೂಪದಲ್ಲಿ ನಿಧಾನವಾಗಿ ಇಡೀ ದೇಶವನ್ನು ಆಕ್ರಮಿಸುತ್ತಿದೆ. ದೊಡ್ಡವರ ಮಾತು ಹಾಗಿರಲಿ,ಶಾಲೆಗೆ ಹೋಗುವ ಮಕ್ಕಳೂ ಡುಮ್ಮ ಆಗುತ್ತಿದ್ದಾರೆ. ಹನ್ನೊಂದು ವರ್ಷಗಳ ಹಿಂದೆ ಅಮೆರಿಕದಲ್ಲಿ ಬೊಜ್ಜುಬೇಬಿಗಳ ಸಂಖ್ಯೆ 60 ಲಕ್ಷ ಇತ್ತು. ಈ ಒಂದು ದಶಕದಲ್ಲಿ ಡುಮ್ಮ ಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಈಗ ಅಲ್ಲಿ ಎರಡು ಕೋಟಿ ಮಕ್ಕಳು ಸ್ಥೂಲಕಾಯದವರಾಗಿದ್ದಾರೆ.

ತೂಕ ಇಳಿಸುವುದೇ ದೇಶದ ಪ್ರಥಮ ಆದ್ಯತೆ ಎಂಬಂತೆ, ನಾನಾ ಕಂಪನಿಗಳ ದಲ್ಲಾಳಿಗಳು, ಖಾಸಗಿ ವಿಜ್ಞಾನಿಗಳು, ಸ್ವಯಂತಜ್ಞರು ದಿನ ಬೆಳಗಾದರೆ ಹೊಸ ಹೊಸ ಡಯಟ್ ತಂತ್ರಗಳನ್ನು, ಔಷಧಗಳನ್ನು, ಕಸರತ್ತುಗಳನ್ನು, ಯಂತ್ರಗಳನ್ನು, ಗ್ರಂಥಗಳನ್ನು, ಜಾಹೀರಾತುಗಳನ್ನು ಸೃಷ್ಟಿಸುತ್ತಿದ್ದಾರೆ. ಸರ್ಕಾರಿ ಆರೋಗ್ಯ ಇಲಾಖೆ ಅತ್ತ ಬೊಜ್ಜು ಕರಗಿಸುವ ಸಮರದಲ್ಲೂ ಭಾಗಿಯಾಗಬೇಕು. ಇತ್ತ ಬೊಜ್ಜು ಕರಗಿಸಲೆಂದು ಬರುವ ತರಾವರಿ ಕಳಪೆ, ನಕಲಿ ತಂತ್ರಗಳ ಮೇಲೂ ಯುದ್ಧ ಸಾರಬೇಕು. ಮಾಧ್ಯಮಗಳಿಗಂತೂ ಸದಾ ಸುಗ್ಗಿ. ತೂಕ ಇಳಿಸುವ ಯಾವ ಔಷಧವನ್ನು ಇಂದು ನಿಷೇಧಿಸಲಾಯಿತು, ಯಾವ ಹೊಸ ತಂತ್ರಕ್ಕೆ ಲೈಸೆನ್ಸ್ ಸಿಕ್ಕಿತು ಎಂಬುದೇ ಟಿವಿ ಚಾನೆಲ್‌ಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಮತ್ತೆ ಮತ್ತೆ ಬರುವ ಚರ್ಚೆಯ ವಿಷಯಗಳಾಗುತ್ತವೆ.

ಅಮೆರಿಕದ ಕೊಳ್ಳುಬಾಕ ಸಂಸ್ಕೃತಿ ಎಲ್ಲೆಲ್ಲಿ  ಹಬ್ಬುತ್ತಿದೆಯೊ ಅಲ್ಲೆಲ್ಲ ಬೊಜ್ಜು ರವಾನೆಯಾಗುತ್ತಿದೆ. ಬ್ರಝಿಲ್, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಇಂಡಿಯಾ, ಇಂಡೊನೇಷ್ಯ, ಚೀನಾ, ಇವೆಲ್ಲ ದೇಶಗಳಲ್ಲಿ ದಢೂತಿ ಸಂತಾನಗಳ ಸೃಷ್ಟಿಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈಚಿನ (ಡಿಸೆಂಬರ್ 2012) ವರದಿಯ ಪ್ರಕಾರ, ಜಗತ್ತಿನಾದ್ಯಂತ ಕಳೆದ 20 ವರ್ಷಗಳಲ್ಲಿ ದಡೂತಿ ಜನರ ಸಂಖ್ಯೆ ಶೇಕಡಾ 80ರಷ್ಟು ಹೆಚ್ಚಾಗಿದೆ. ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಎಲ್ಲ ದೇಶಗಳಲ್ಲೂ ಬೊಜ್ಜು ಜೊತೆಜೊತೆಯಾಗಿ ಸಾಗಿ ಬರುತ್ತಿದೆ.

ಬೊಜ್ಜು ಎಂಬುದು ಕಾಯಿಲೆ ಅಲ್ಲ. ಆದರೆ ನಾನಾ ಬಗೆಯ ಕಾಯಿಲೆಗಳಿಗೆ ಆಶ್ರಯತಾಣವಾಗುತ್ತದೆ. ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ರಕ್ತನಾಳಗಳಲ್ಲಿ ಕೊಲೆಸ್ಟೆರಾಲ್ ಶೇಖರಣೆ ಹಾಗೂ ಹೃದಯ ಸಂಬಂಧಿ ರೋಗಗಳು ನಿಧಾನಕ್ಕೆ ಅಮರಿಕೊಳ್ಳುತ್ತವೆ. ಇವೇ ತುಸು ವಿಸ್ತರಣೆಯಾಗುತ್ತ ಯಕೃತ್ತಿನ ಊತ, ಮೂತ್ರಪಿಂಡದ ಕಾಯಿಲೆ, ಗರ್ಭಾಶಯದ ಗಂಟುಗಳು ಕಾಣಿಸಿಕೊಳ್ಳುತ್ತವೆ. ಆಮೇಲೆ ತೂಕಸಂಬಂಧಿ ತೊಂದರೆಗಳು -ಅಂದರೆ ಸಂದುನೋವು, ಮೂಳೆ ಸವೆತ, ಪಿತ್ತಕೋಶದ ಕಲ್ಲುಗಳು, ನಿದ್ರಾಹೀನತೆ, ಖಿನ್ನತೆ ಮುಂತಾದ ನಂಟುಜಡ್ಡುಗಳು ಶರೀರದಲ್ಲಿ ಮನೆಮಾಡುತ್ತವೆ. ವರ್ಷವರ್ಷವೂ ರೋಗಪರೀಕ್ಷೆಯ ವೆಚ್ಚ, ಆಸ್ಪತ್ರೆ ವೆಚ್ಚ, ಔಷಧ ವೆಚ್ಚ ಹೆಚ್ಚುತ್ತ ಹೋಗುತ್ತದೆ.

ಆರಂಭದಲ್ಲಿ ಕಾಯಿಲೆಯ ಲಕ್ಷಣಗಳನ್ನು ಕಡೆಗಣಿಸಿದರೆ, ಅಥವಾ ಶುಶ್ರೂಷೆಯನ್ನು ಮುಂದೂಡುತ್ತ ಹೋದರೆ ಅಂಧತ್ವ ಬಂದೀತೆಂದೂ ಲಕ್ವ ಹೊಡೆದೀತೆಂದೂ ವೈದ್ಯರು ಎಚ್ಚರಿಕೆ ನೀಡುತ್ತಾರೆ. ಈಗಲೂ ನೀವು ದಿಗಿಲುಗೊಳ್ಳದಿದ್ದರೆ, ಕೆಲವು ಬಗೆಯ ಕ್ಯಾನ್ಸರ್‌ಗಳು ಸ್ಥೂಲಕಾಯದವರಿಗೇ ಆದ್ಯತೆಯ ಮೇರೆಗೆ ಬರುತ್ತವೆ ಎಂತಲೂ ಹೇಳುತ್ತಾರೆ. ಅಮೆರಿಕದಲ್ಲಿ ಕಳೆದ ಮೂರು ದಶಕಗಳಿಂದ ಇವೆಲ್ಲವೂ ಏರುಮುಖದಲ್ಲಿವೆ. ಮೊದಮೊದಲು ಮಧ್ಯವಯಸ್ಸನ್ನು ದಾಟಿದ ಮೇಲಷ್ಟೇ ಕಾಣಿಸಿಕೊಳ್ಳುತ್ತಿದ್ದ ರೋಗಗಳು ಈಗ ಎಳೆಯರನ್ನೂ ಕಾಡತೊಡಗಿವೆ. ಐದು ವರ್ಷದ ಮಕ್ಕಳನ್ನೂ ಅಮರಿಕೊಳ್ಳುತ್ತಿವೆ. ಅಲ್ಲಿ, ಆರು ತಿಂಗಳ ಶಿಶುಗಳಿಗೂ ಬೊಜ್ಜು ಸಾಂಕ್ರಾಮಿಕವೆಂಬಂತೆ ಹಬ್ಬುತ್ತಿದೆ  ಎನ್ನುತ್ತಾರೆ, ಆಹಾರ ಸಮಸ್ಯೆಗಳ ಬಗ್ಗೆ ಅನೇಕ ಗ್ರಂಥಗಳನ್ನು ಬರೆದ ರಾಬರ್ಟ್ ಲೂಸ್ಟಿಗ್.

ನಾಗರಿಕತೆಯ ವಿಕಾಸದ ಈ ದೀರ್ಘಾವಧಿಯಲ್ಲಿ ಯಾವುದೇ ಹಂತದಲ್ಲಿ ಯಾವುದೇ ಸಮಾಜದಲ್ಲಿ ಮನುಷ್ಯ ದೇಹಕ್ಕೆ ಇಷ್ಟೆಲ್ಲ ರಗಳೆಗಳು ಒಟ್ಟೊಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇವು ವಂಶ ಪಾರಂಪರ‌್ಯದ ರೋಗವಲ್ಲ; ಬೇರೆಯವರ ಸಂಪರ್ಕದಿಂದಾಗಿ ಬರುವುದಿಲ್ಲ; ಯಾವುದೇ ರೋಗಾಣು, ವೈರಾಣುಗಳು ಇದಕ್ಕೆ ನೇರ ಕಾರಣವಾಗುವುದಿಲ್ಲ. ನಮ್ಮ ಬದುಕಿನ ವಿಧಾನದಿಂದಾಗಿಯೇ ಬರುವ ಇಂಥ ಕಾಯಿಲೆಗಳಿಗೆ `ಲೈಫ್‌ಸ್ಟೈಲ್ ಡಿಸೀಸ್' ಎನ್ನುತ್ತಾರೆ. ಆಧುನಿಕ ಬದುಕಿನಲ್ಲಿ ನಮ್ಮ ದೇಹಕ್ಕೆ ಒಳಸುರಿ ಜಾಸ್ತಿ ಆಗುತ್ತಿದೆ. ನಿಸರ್ಗದಿಂದ ದೂರವಾಗಿ ಕೃತಕ ಪರಿಸರದಲ್ಲಿ, ಸೂರ್ಯನಿಂದ ಮರೆಯಾಗಿ ಬದುಕುತ್ತಿದ್ದೇವೆ. ಕೃತಕ ಕೆಮಿಕಲ್‌ಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಶರೀರಕ್ಕೆ ಸೇರ್ಪಡೆ ಆಗುತ್ತಿವೆ. ಅದೇ ವೇಳೆಗೆ ಬೆವರಿನ ಹೊರಸುರಿ ಕಡಿಮೆ ಆಗುತ್ತಿದೆ. ದೇಹಕ್ಕೆ ತಕ್ಕಷ್ಟು ವ್ಯಾಯಾಮ ಸಿಗುತ್ತಿಲ್ಲ.

ಬೊಜ್ಜನ್ನು `ದೇಹದ್ರವ್ಯ ಸೂಚ್ಯಂಕ'  (ಬಾಡಿ ಮಾಸ್ ಇಂಡೆಕ್ಸ್ -ಬಿಎಮ್‌ಐ) ಎಂಬ ಸರಳ ಲೆಕ್ಕದಿಂದ ನಿರ್ಧರಿಸುತ್ತಾರೆ.ಮೆಟ್ರಿಕ್ ಮಾಪನದಲ್ಲಿ, ಅಂದರೆ ಕಿಲೊಗ್ರಾಮ್ ಮತ್ತು ಮೀಟರ್‌ಗಳಲ್ಲಿ ನಿಮ್ಮ ತೂಕ ಮತ್ತು ಎತ್ತರ ಎಷ್ಟಿದೆ ನೋಡಿ. ಎತ್ತರವನ್ನು ಅದೇ ಸಂಖ್ಯೆಯಿಂದ ಒಮ್ಮೆ ಗುಣಿಸಿ ಬರುವ ಫಲಿತಾಂಶದಿಂದ ನಿಮ್ಮ ತೂಕವನ್ನು ಭಾಗಾಕಾರ ಮಾಡಿ. ಉದಾಹರಣೆಗೆ ನಿಮ್ಮ ತೂಕ 64 ಕಿಲೊಗ್ರಾಮ್ ತೂಕ ಇದ್ದು, ಎತ್ತರ 1.6 ಮೀಟರ್ ಇದ್ದರೆ 64ನ್ನು 1.6ರ ವರ್ಗದಿಂದ ಭಾಗಿಸಿ. ಅಂದರೆ  64/2.56= 25. ಇದು ನಿಮ್ಮ ಸೂಚ್ಯಂಕ. ಅದು 25ಕ್ಕಿಂತ ಕಡಿಮೆ ಇದ್ದರೆ ಒಳ್ಳೆಯದು.18ಕ್ಕಿಂತ ಕಡಿಮೆ ಇದ್ದರೆ ನೀವು ಸಣಕಲು ವ್ಯಕ್ತಿ. ನಿಮ್ಮದು 25ರಿಂದ ಮೇಲೆ 30ರವರೆಗೆ ಇದ್ದರೆ ಸ್ಥೂಲ ಕಾಯ ಎನ್ನಬಹುದು. 30ಕ್ಕಿಂತ ಜಾಸ್ತಿ ಇದ್ದರೆ ಅದು ಬೊಜ್ಜು.

ಭಾರತದಲ್ಲೂ ಬಿಎಮ್‌ಐ 30 ಮೀರಿದವರ ಸಂಖ್ಯೆ ವರ್ಷವರ್ಷಕ್ಕೆ ಏರುತ್ತಿದೆ. `ಒಬೆಸಿಟಿ ಫೌಂಡೇಶನ್ ಇಂಡಿಯಾ' ಎಂಬ ಸಂಸ್ಥೆಯ ಪ್ರಕಾರ ಬೊಜ್ಜು ಬೆಳೆಸಿಕೊಂಡವರ ಸಂಖ್ಯೆ ನಮ್ಮಲ್ಲಿ ಮೂರು ಕೋಟಿ ದಾಟುತ್ತಿದೆ.ಬೊಜ್ಜು ನಿಯಂತ್ರಣದ  `ಬೇರಿಯಾಟ್ರಿಕ್' ಸರ್ಜರಿ ಪ್ರಕರಣ ಹೆಚ್ಚುತ್ತಿದೆ. ಈ ದೇಶದ ವ್ಯಂಗ್ಯ ಏನೆಂದರೆ ಇಲ್ಲಿ ಹಸಿದವರ, ಅರೆಹೊಟ್ಟೆಯಲ್ಲಿ ಮಲಗುವವರ ಸಂಖ್ಯೆಯೂ ಜಾಸ್ತಿ ಇದೆ. ಜಾಸ್ತಿ ಎಷ್ಟೆಂದರೆ ಜಗತ್ತಿನ ಇತರೆಲ್ಲ ದೇಶಗಳಲ್ಲಿ ಹಸಿದವರ ಒಟ್ಟೂ ಸಂಖ್ಯೆಗಿಂತ ನಮ್ಮ ದೇಶದಲ್ಲಿನ ಹಸಿದವರ ಸಂಖ್ಯೆ ಜಾಸ್ತಿ ಇದೆ.

ಈಗಂತೂ ಜಗತ್ತಿನ ಅತಿ ಹೆಚ್ಚು ಸಂಖ್ಯೆಯ ಮಧುಮೇಹಿ ರೋಗಿಗಳೂ ನಮ್ಮಲ್ಲೆೀ ಇದ್ದಾರೆ. ಸರ್ಕಾರಿ ಆರೋಗ್ಯ ವ್ಯವಸ್ಥೆ ಯಾರ ಕಡೆ ಹೆಚ್ಚಿನ ಗಮನ ಕೊಡಬೇಕು? ಅಮೆರಿಕದಲ್ಲೇನೊ ಹಸಿವೆ ಸಂಬಂಧಿ ಕಾಯಿಲೆಗಳಿಗೆ ಮಾಡುವ ವೆಚ್ಚಕ್ಕಿಂತ ದಢೂತಿಯವರ ಕಾಯಿಲೆಗಳ ನಿರ್ವಹಣೆಗೇ ಸರ್ಕಾರದ ಹೆಚ್ಚಿನ ಹಣ ವ್ಯಯವಾಗುತ್ತಿದೆ. ನಮ್ಮಲ್ಲಿ ಸದ್ಯಕ್ಕೇನೂ ಹೀಗಾಗುತ್ತಿಲ್ಲ. ಆದರೆ  ಹಸಿದವರು  ಎತ್ತರದ ಸ್ಥಾನಗಳಲ್ಲೂ ಇರುತ್ತಾರೆ. ಉತ್ತರ ಪ್ರದೇಶದಲ್ಲಿ ಬಡವರ ಆರೋಗ್ಯ ರಕ್ಷಣೆಗಾಗಿ ಮೀಸಲಿಟ್ಟ ಹಣವನ್ನು ನುಂಗಲು ಹೋಗಿ ಸಿಕ್ಕಿಬಿದ್ದ ಅಧಿಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರನ್ನೆಲ್ಲ  `ಹಸಿದವರು' ಎಂಬ ಪಟ್ಟಿಯಲ್ಲಿ ಸೇರಿಸೋಣವೆ? ಯಾವ ತನಿಖೆಗೂ ಸಿಕ್ಕಬೀಳದಂತೆ ಸಾರ್ವಜನಿಕ ಹಣವನ್ನು `ನುಂಗುತ್ತ' ಹೊಟ್ಟೆ ಬೆಳೆಸಿಕೊಂಡವರಿಗಾಗಿ ಸರ್ಕಾರ ಮತ್ತಷ್ಟು ಹಣವನ್ನು ವ್ಯಯಿಸಬೇಕಾದ ಪ್ರಸಂಗ ಬಂದೀತೆ?

ಈಗಾಗಲೇ ಆ ಪ್ರಸಂಗ ಬಂದಂತಿದೆ. ಭಾರತದ 21 ರಾಜ್ಯಗಳ ಆಯ್ದ ನೂರು ಕೇಂದ್ರಗಳಲ್ಲಿ ಬೊಜ್ಜು ನಿಯಂತ್ರಣದ  `ರಾಷ್ಟ್ರೀಯ ಕಾರ‌್ಯಕ್ರಮ' ಎರಡು ವರ್ಷಗಳಿಂದ ಜಾರಿಯಲ್ಲಿದೆ. ಬದುಕಿನ ವಿಧಾನಕ್ಕೆ ಸಂಬಂಧಿಸಿದ ಮಧುಮೇಹ, ಹೃದ್ರೋಗ, ಲಕ್ವ ಮತ್ತು ಕ್ಯಾನ್ಸರ್‌ಗಳ ನಿರ್ವಹಣೆಗೆಂದು ಜಿಲ್ಲಾ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹಣ ಹರಿದು ಬರುತ್ತಿದೆ. ಅದರ ಫಲಾನುಭವಿಗಳು ಯಾರೇ ಇರಲಿ, ಅವರು ಹೊಟ್ಟೆ ತುಂಬಿದವರೇ ಇರಬೇಕು.

ಬೊಜ್ಜಿಗೂ ಸೋಡಾ ಮಿಶ್ರಿತ ಸಿಹಿಪೇಯಕ್ಕೂ ನೇರ ಸಂಬಂಧ ಇದೆಯೆಂದು ಪಶ್ಚಿಮ ದೇಶಗಳ ಎಲ್ಲ ಸಂಶೋಧನೆಗಳೂ ಹೇಳುತ್ತವೆ. ನಮ್ಮಲ್ಲಿ ಸಕ್ಕರೆ, ಖೋವಾ, ತುಪ್ಪದ ಬಳಕೆ ತೀರ ಹೆಚ್ಚುತ್ತಿದೆ. ಹಬ್ಬ ಹರಿದಿನ ಹಾಗಿರಲಿ, ಜೈಲಿನಿಂದ ದಡೂತಿಗಳು ಹೊರಬರುವಾಗಲೂ ಸಿಹಿಹಂಚುವ ಪ್ರವೃತ್ತಿ ಹೆಚ್ಚುತ್ತಿದೆ.ಹೊಟೆಲ್‌ಗಳಲ್ಲಿ ಮಾಲ್‌ಗಳಲ್ಲಿ, ಮದುವೆಗಳಲ್ಲಿ ಐಸ್‌ಕ್ರೀಮ್, ಬರ್ಗರ್ ಮತ್ತು ಸೋಡಾ ಮಿಶ್ರಿತ ಕೋಲಾ ಪೇಯಗಳ ಬಳಕೆ ಹೆಚ್ಚುತ್ತಿದೆ. ಪೀಟ್ಸಾ-ಬರ್ಗರ್‌ಗಳಲ್ಲಿ, ಕೆಚಪ್‌ಗಳಲ್ಲಿ, ಗೋಬಿ ಮಂಚೂರಿ, ಕುರ್ಕುರೆಗಳಲ್ಲಿ ಬಳಕೆಯಾಗುವ ರೂಪಾಂತರಿ ಖಾದ್ಯತೈಲಗಳು (ಟ್ರಾನ್ಸ್‌ಫ್ಯಾಟ್), ಅಜಿನೊಮೊಟೊ, ಉಪ್ಪು-ಸಕ್ಕರೆ, ಕೃತಕ ಬಣ್ಣಗಳ ಗುಣಮಟ್ಟ ಪರೀಕ್ಷೆಯಂತೂ ಕಟ್ಟುನಿಟ್ಟಾಗಿ ನಮ್ಮಲ್ಲಿ ನಡೆಯುತ್ತಿಲ್ಲ.

ಈಗೀಗ ಆಹಾರ  ಉತ್ಪಾದನೆ  ಎಂಬುದು ಹೊಲಗಳಿಂದ ಹೊರಟು ಫ್ಯಾಕ್ಟರಿಗಳನ್ನು ಹೊಕ್ಕು ಹೊರಬರುವ ಪದಾರ್ಥಗಳೇ ಆಗಿವೆ. ಹೊಲಗಳಲ್ಲೂ ಡೇರಿ ಉದ್ಯಮಗಳಲ್ಲೂ ನಾನಾ ಕೆಮಿಕಲ್‌ಗಳ ಬಳಕೆ ಹೆಚ್ಚಾಗುತ್ತಿದೆ. `ಸಿಂಧನೂರಿನಲ್ಲಿ ಭತ್ತಕ್ಕೆ ದಾಳಿ ಮಾಡುವ ಜಿಗಿಹುಳುಗಳನ್ನು ನಿಯಂತ್ರಿಸಲು ಬಳಸುವ ದ್ರಾವಣಗಳಲ್ಲಿ ಅದೆಷ್ಟು ತೀವ್ರ ವಿಷ ಇರುತ್ತವೆಂದರೆ, ಸಿಂಪಡನೆಯ ಸಂದರ್ಭಗಳಲ್ಲಿ ರೈತರು ಮುನ್ನೆಚ್ಚರಿಕೆಯ ರೂಪದಲ್ಲಿ ಡಾಕ್ಟರ್‌ಗಳನ್ನೂ ಕರೆಸಿಕೊಳ್ಳುತ್ತಾರೆ' ಎಂದು ಕೃಷಿ ಪತ್ರಕರ್ತ ಶ್ರೀಪಡ್ರೆ ಹೇಳುತ್ತಾರೆ.

ರೈತರಿಂದ ಅಂಥ ಮಲಿನ ಧಾನ್ಯಗಳನ್ನು ಅಗ್ಗದ ಬೆಲೆಗೆ ಖರೀದಿಸಿ, ಅದಕ್ಕೆ ಏನೆಲ್ಲ ಪಾಲಿಶ್ ಕೊಟ್ಟು, ಬಣ್ಣ ಹಾಕಿ, ರುಚಿವರ್ಧಕಗಳನ್ನೂ ಸಂರಕ್ಷಕಗಳನ್ನೂ ಸೇರಿಸಿ, ಸಿದ್ಧರೂಪದಲ್ಲಿ ಹೊಟೇಲ್, ಬೇಕರಿ ಮತ್ತು ಬಳಕೆದಾರರ ಬಾಗಿಲಿಗೆ ತಲುಪಿಸುವ ಬಿಸಿನೆಸ್ ಜೋರಾಗಿದೆ. ಇತ್ತ ಕೃಷಿಕನೂ ಕೃಶನಾಗುತ್ತ, ಅತ್ತ ಬಳಕೆದಾರನೂ ಆಸ್ಪತ್ರೆಗಳಿಗೆ ಹಣ ಸುರಿಯುತ್ತ ಒಟ್ಟಾರೆಯಾಗಿ  `ಅಭಿವೃದ್ಧಿ'  ತೇರನ್ನು ಮುನ್ನಡೆಸುತ್ತಿದ್ದೇವೆ. ನ್ಯೂಯಾರ್ಕಿನಲ್ಲಿ ಪೇಯಗಳಿಗೆ ಮುಟ್ಟುಗೋಲು ಹಾಕುವ ಸಂದರ್ಭದಲ್ಲಿ ನಾವು ಗುಟ್ಕಾ ಅಂಗಡಿಗಳಲ್ಲೂ ವೈನ್ ಮಾರುವ ಯೋಜನೆ ಹಾಕುತ್ತೇವೆ.

ಈಚಿನ ಈ ವ್ಯಂಗ್ಯವನ್ನು ನೋಡಿ: ಅಮೆರಿಕದ ಡೀನ್ ಕೇಮೆನ್ ಎಂಬ ಸಂಶೋಧಕ ನಿರ್ಮಿಸಿದ `ಸೆಗ್‌ವೇ' ಹೆಸರಿನ ಉರುಳುಮಣೆಯ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಎರಡು ಗಾಲಿಗಳ ಈ ಮಣೆಯ ಮೇಲೆ ನಿಂತು ಸಲೀಸಾಗಿ ಸಪಾಟು ನೆಲದಲ್ಲಿ ಎಲ್ಲೆಂದರಲ್ಲಿ ಸಾಗಿ ಹೋಗಬಹುದು. ಮನುಷ್ಯನ ನಡೆದಾಡುವ ಕಷ್ಟವನ್ನೂ ನಿವಾರಿಸಿದ ಈ ಅದ್ಭುತ ಯಂತ್ರ ಹೇಗೆ ದೇಶದ ಬೊಜ್ಜನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬ ಟೀಕೆ ಆಗಾಗ ಬರುತ್ತಿತ್ತು.

ಈಚೆಗೆ ಅದೇ ಕೇಮೆನ್ ಮಹಾಶಯ ಬೊಜ್ಜು ಇಳಿಸುವ ಸರಳ ಸಾಧನವೊಂದನ್ನು ನಿರ್ಮಿಸಿ ಪೇಟೆಂಟ್ ಪಡೆದಿದ್ದಾನೆ (ಇದೀಗಷ್ಟೆ ಬಿಡುಗಡೆಯಾದ ಅಜ್ಟಿಛಿ ಅಜಿಠಿ ಹೆಸರಿನ ಈ ಸಾಧನದ ಚಮತ್ಕಾರವನ್ನು ಯೂಟ್ಯೂಬ್‌ನಲ್ಲಿ ನೋಡಬಹುದು). ಹೊಟ್ಟೆಬಾಕರ ಜಠರಕ್ಕೆ ಸಣ್ಣ ಸರ್ಜರಿ ಮಾಡಿ, ಒಂದು ಕೊಳವೆ ತೂರಿಸಿ, ಅದು ಕಿಬ್ಬೊಟ್ಟೆಯ ಪಕ್ಕದಲ್ಲಿ ಹೊರಕ್ಕೆ ಇಣುಕುವಂತೆ ಮಾಡಿರುತ್ತಾರೆ. ಭರ್ಜರಿ ಊಟದ ನಂತರ ಶೌಚಾಲಯಕ್ಕೆ ಹೋಗಿ ಕಿಬ್ಬೊಟ್ಟೆಯ ಕೊಳವೆಯ ಬಾಯಿ ತೆರೆದು ಕೇಮೆನ್ ರೂಪಿಸಿದ ಪಂಪನ್ನು ಜೋಡಿಸಿ ಬಟನ್ ಒತ್ತಿದರೆ ಸಾಕು, ಉಂಡಿದ್ದರ ಶೇಕಡಾ 30 ಭಾಗ ನೇರವಾಗಿ ಹೊರಕ್ಕೆ ಬಂದು ಲ್ಯಾಟ್ರಿನ್‌ಗೆ ಹೋಗುತ್ತದೆ.

ಈ ಸಾಧನ ನಮ್ಮ ದೇಶದಲ್ಲೂ ಬಳಕೆಗೆ ಬಂದಿದ್ದಾದರೆ ಅರೆಹೊಟ್ಟೆಯಲ್ಲಿ ಮಲಗುವವರ ಸಂಖ್ಯೆ ಹಠಾತ್ ಇಮ್ಮಡಿಯಾದೀತು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT