ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆ ಎಂಬ ಪಿಡುಗು

Last Updated 14 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಒಂದೆರಡು ವರ್ಷಗಳ ಕೆಳಗೆ ಪ್ರತಿಷ್ಠಿತ `ಟೈಮ್ಸ'  ಪತ್ರಿಕೆಯ ಮುಖಪುಟದಲ್ಲಿ ಒಬ್ಬ ವ್ಯಕ್ತಿಯ ಮುಖ ಮುದ್ರಿಸಿದ್ದರು. ಅದು ತುಂಬ ನೋವಿನಿಂದ, ಸಿಂಡರಿಸಿಕೊಂಡ ಮುಖ. ಅದರ ಕೆಳಗೆ ದಪ್ಪ ಅಕ್ಷರಗಳಲ್ಲಿ ಬರೆದಿತ್ತು.  ಈ ಖಿನ್ನತೆಯಿಂದ ಪಾರಾಗಲು ನೀವು ಏನು ಮಾಡುತ್ತೀರಿ? ನಾನು ಆ ಪತ್ರಿಕೆಯ ಅಗ್ರ ಲೇಖನ ಓದಿದೆ. ಅದೊಂದು ವಿಸ್ತಾರವಾದ ಲೇಖನ. ಅದರಲ್ಲಿ ಪ್ರಪಂಚದಾದ್ಯಂತ ಅತಿ ಹೆಚ್ಚು ಜನರನ್ನು ಕಾಡುವ ಸಮಸ್ಯೆಯೆಂದರೆ ಖಿನ್ನತೆ, ಅದರಿಂದ ಪಾರಾಗುವ ವಿಧಾನಗಳನ್ನು ತಿಳಿಯದೇ ಜನ ಒದ್ದಾಡುತ್ತಿದ್ದಾರೆ ಎಂದು ವಿವರಿಸಲಾಗಿತ್ತು.

ನಮ್ಮ ದಿನಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಗಮನಿಸಿದರೆ ಈ ಮಾತು ಸತ್ಯ ಎನ್ನಿಸದಿರದು. ನಾನು ಕೇಳಿದ ಆಟದ ಸಾಮಾನನ್ನು ತಂದೆ ಕೊಡಿಸಲಿಲ್ಲವೆಂದು ಮಗುವಿಗೆ ಖಿನ್ನತೆ, ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಅಂಕಗಳು ಬಂದಿಲ್ಲವೆಂದು ಶಾಲಾ ವಿದ್ಯಾರ್ಥಿಗೆ ಖಿನ್ನತೆ, ತಾನು ಬಯಸಿದ್ದ ಕೋರ್ಸ್, ಕಾಲೇಜು ದೊರೆಯಲಿಲ್ಲವೆಂದು ಕಾಲೇಜು ವಿದ್ಯಾರ್ಥಿಗೆ, ಪ್ರೀತಿಸಿದ್ದ ಹುಡುಗಿ ಸರಿಯಾಗಿ ಪ್ರತಿಕ್ರಿಯಿಸಲಿಲ್ಲವೆಂದು ತರುಣನಿಗೆ, ಕೆಲಸದಲ್ಲಿ ಬಡ್ತಿ ಸಿಗಲಿಲ್ಲವೆಂದೋ ಸಂಬಳ ಕಡಿಮೆಯಾಯಿತೆಂದೋ, ಕೆಲಸ ಹೋಗಬಹುದೆಂದೋ ನೌಕರಿ ಮಾಡುವವರಿಗೆ, ಕಂಪನಿಗೆ ಹಣಕಾಸು ಮುಗ್ಗಟ್ಟು ಕಂಡಿತೆಂದು ಕಂಪನಿಯ ಮಾಲೀಕರಿಗೆ, ತಾವು ಹೇಗೋ ಕಷ್ಟಪಟ್ಟು ಗಳಿಸಿದ ಶಾಸಕರ ಹುದ್ದೆ ಅಥವಾ ಸಚಿವ ಸ್ಥಾನ ಕರಗಿಹೋಗುತ್ತದಲ್ಲ ಎಂದು ಜನ ನಾಯಕರಿಗೆ, ಹೀಗೆ ಖಿನ್ನತೆ ಯಾರನ್ನೂ ಬಿಡುತ್ತಿಲ್ಲ.

ನನಗೆ ಇದುವರೆಗೂ ಈ ಸಮಸ್ಯೆ ಕಾಡಿಲ್ಲವಾದ್ದರಿಂದ ಈ ರೋಗದ ಮೂಲಕಾರಣವೇನು ಎಂದು ತಿಳಿಯಲು ನನ್ನ ಮನಶಾಸ್ತ್ರಜ್ಞ ಸ್ನೇಹಿತರನ್ನು ಕಂಡು ಕೇಳಿದೆ. ಅವರು ಹೇಳಿದ ಮಾತು ನನ್ನನ್ನು ದಂಗು ಬಡಿಸಿತು, ಬೆಳಕು ತೋರಿಸಿತು. ಅವರು ಹೇಳಿದರು, `ಈ ಖಿನ್ನತೆ ಕೇವಲ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ್ದಲ್ಲ.

ಹಾಗೆ ನೋಡಿದರೆ ಖಿನ್ನತೆಗೆ ಒಳಗಾಗುವವರಲ್ಲಿ ಬಡವರಿಗಿಂತ ಉಳ್ಳವರೇ ಹೆಚ್ಚು. ತೀರ ಬಡವರಿಗೆ ಬದುಕೇ ಒಂದು ಯುದ್ಧವಾಗಿರುವಾಗ ಖಿನ್ನತೆ ಹೊಂದಲು ಅವರಿಗೆ ಪುರುಸೊತ್ತಿಲ್ಲ. ಇದು ಹಣದ ಸಮಸ್ಯೆಯಲ್ಲ. ಮುಖ್ಯವಾಗಿ ಮೌಲ್ಯದ ಸಮಸ್ಯೆ. ನಮ್ಮ ಜನರಿಗೆ ಇಂದು ಜೀವನಕ್ಕೊಂದು ಸರಿಯಾಗಿ ಗುರಿ ಆರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಆರಿಸಿಕೊಂಡರೂ ಆ ಗುರಿ ನನ್ನ ಸ್ವಂತದ ಆಯ್ಕೆಯೋ ಇಲ್ಲ, ಮತ್ತೊಬ್ಬರ ಅಪೇಕ್ಷೆಯೋ ಎಂದು ತಿಳಿದಿಲ್ಲ. ಆರಿಸಿಕೊಂಡ ಗುರಿ ನನ್ನ ಶಕ್ತಿಗಳ ಮಿತಿಯಲ್ಲಿ ಇದೆಯೋ ಅಥವಾ ದೂರದಲ್ಲಿ ಸುಂದರವಾಗಿ ಕಾಣುವ ಮರಿಚಿಕೆಯೋ ಎಂಬುದು ಸ್ಪಷ್ಟವಿಲ್ಲ'.


ಹಾಗಾದರೆ ಇದಕ್ಕೆ ಪರಿಹಾರವೇನು  ನಾನು ಕೇಳಿದೆ.  ಇದಕ್ಕೊಂದೇ ಪರಿಹಾರ. ನಾವು ನಮ್ಮದೇ ಆದ, ನಮ್ಮ ಶಕ್ತಿಗಳ ಪೂರ್ತಿ ಅರಿವಿನಿಂದ ಕಂಡುಕೊಂಡ ಸುಂದರವಾದ ಕನಸು. ಆ ಕನಸಿನ ಸಾಕಾರಕ್ಕಾಗಿ ಏಕಮನಸ್ಸಿನ ಪ್ರಯತ್ನ. ಈ ಪ್ರಯತ್ನದಲ್ಲಿ ಬರಬಹುದಾದ ಸಣ್ಣಪುಟ್ಟ ಸೋಲುಗಳಿಗೆ ಮನಗೊಡದೇ ಗುರಿಯತ್ತ ಪ್ರಗತಿ. ಇದು ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಪ್ರಾರಂಭಿಸಬೇಕಾದ ಕೆಲಸ. ಪಾಲಕರು, ಶಿಕ್ಷಕರು ಇಬ್ಬರೂ ಜೊತೆಗೂಡಿ ಮಗುವಿನ ಮನಸ್ಸಿನಲ್ಲಿ ಈ ಚಿಂತನೆ, ಆತ್ಮವಿಶ್ವಾಸ ತುಂಬಿದರೆ, ಖಿನ್ನತೆ ನಮ್ಮನ್ನು ಕಾಡಲಾರದು'  ಎಂದವರು ಸಮಾಜಾಯಿಷಿ ನೀಡಿದರು.

ನಮ್ಮ ಈ ಸುಂದರ ಪ್ರಪಂಚದ ಸುಂದರ ಭವಿಷ್ಯಕ್ಕೆ ಹಿರಿಯರಾದ ನಾವೆಲ್ಲ ಕಿರಿಯರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಜವಾಬ್ದಾರಿ ಮಾತ್ರವಲ್ಲ, ಕರ್ತವ್ಯ ಕೂಡ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT