ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತೆ ಕುಗ್ಗಿಸುವ ರಾಜಕೀಯ ನಾಯಕರ ಭಾಷೆ

Last Updated 29 ಜುಲೈ 2013, 19:59 IST
ಅಕ್ಷರ ಗಾತ್ರ

ಸಾರ್ವಜನಿಕ ಬದುಕಿನಲ್ಲಿ ರಾಜಕೀಯದ ವಾಗ್ವಾದಗಳ ಗುಣಮಟ್ಟ ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದೆ ಎಂಬುದು ಎಲ್ಲರಿಗೂ ತಿಳಿದದ್ದೆ. ಅದರಲ್ಲೂ ಅನೇಕ ಹಿರಿಯ ರಾಜಕಾರಣಿಗಳ ಭಾಷಾ ಪ್ರಯೋಗಗಳು ಮಹಿಳೆಯ ಘನತೆಗೆ ಧಕ್ಕೆ ತರುವಂತಿರುವುದು ದುರದೃಷ್ಟಕರ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಉಸ್ತುವಾರಿ ಹೊತ್ತಿರುವ  ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು ಕಳೆದ ವಾರ ಬಳಸಿದ ನುಡಿಗಟ್ಟೊಂದು ವಿವಾದ ಸೃಷ್ಟಿಸಿದೆ.

ಮಧ್ಯಪ್ರದೇಶದ ಮಂದ್‌ಸೌರ್‌ನ ಕಾಂಗ್ರೆಸ್ ಸಂಸತ್ ಸದಸ್ಯೆ ಮೀನಾಕ್ಷಿ ನಟರಾಜನ್ ಅವರನ್ನು ಶ್ಲಾಘಿಸುತ್ತಾ,  `ನಮ್ಮ ಎಂಪಿ ಮೀನಾಕ್ಷಿ ನಟರಾಜನ್ ಗಾಂಧಿವಾದಿ, ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿ. ಕ್ಷೇತ್ರದಲ್ಲಿ ಚೆನ್ನಾಗಿ ತಿರುಗಾಡುತ್ತಾರೆ. ನಾನು ರಾಜಕಾರಣದಲ್ಲಿ ಅನುಭವಿ ಅಕ್ಕಸಾಲಿಯಾಗಿ ಯಾರು ಏನು ಎಂದು ಅಳೆಯಬಲ್ಲೆ. ಮೀನಾಕ್ಷಿ `ಸೌ ಪ್ರತಿಶತ್ ಟಂಚ್ ಮಾಲ್ ಹೈ' ಎಂದಾಗ ಸಭೆಯಲ್ಲಿ  ನಗೆಯ ಬುಗ್ಗೆ ಎದ್ದಿತ್ತು. ಭೋಜ್‌ಪುರಿ ಭಾಷೆಯ `ಟಂಚ್ ಮಾಲ್' ನುಡಿಗಟ್ಟನ್ನು ಅನುವಾದ ಮಾಡಿದಲ್ಲಿ ಸ್ಥೂಲವಾಗಿ ಅದು ಹೊರಡಿಸುವ ಅರ್ಥ `100% ಸೆಕ್ಸಿ ಮಹಿಳೆ'

ವ್ಯಕ್ತಿತ್ವದ ಘನತೆಯನ್ನು ಕುಗ್ಗಿಸುವಂತಹ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ನಂತರ ಕಾಂಗ್ರೆಸ್ ಹೆಣಗಾಡಬೇಕಾಯಿತು. `ಟಂಚ್' ಎಂದರೆ  `100% ಶುದ್ಧ' ಎಂದರ್ಥ. `ಮೀನಾಕ್ಷಿ ಅಪರಂಜಿಯಂತೆ' ಎಂದು ಹೇಳಲು ಬಳಸಿದ ಪದ ಎಂದು ದಿಗ್ವಿಜಯ ಸಿಂಗ್ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. `ಆಡುಮಾತಿನಲ್ಲಿ ಬಳಕೆಯಲ್ಲಿರುವ ಈ ಪದದ ಅರ್ಥವನ್ನು ಸಂದರ್ಭದಲ್ಲಿಟ್ಟು ಗ್ರಹಿಸಬೇಕಷ್ಟೇ. ಅದರಲ್ಲಿ ತಪ್ಪೇನೂ ಇಲ್ಲ' ಎಂದು ಮೀನಾಕ್ಷಿ ಅವರೂ ಸಮರ್ಥಿಸಿಕೊಳ್ಳುವ ಮೂಲಕ ಅಧಿಕಾರ ಹಾಗೂ ಲಿಂಗ ರಾಜಕಾರಣದ ಶ್ರೇಣೀಕೃತ ವ್ಯವಸ್ಥೆಯೊಳಗಿನ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸಿದ್ದಾರೆ.

ಈ ಸಮರ್ಥನೆಗಳಿಂದ ವಿವಾದವೇನೋ ತಣ್ಣಗಾಗಿರಬಹುದು. ಆದರೆ ಭಾರತೀಯ ಪುರುಷ ರಾಜಕಾರಣಿಗಳಲ್ಲಿ  ಅಂತರ್ಗತವಾಗಿರುವ ಹೆಣ್ಣಿನ ಕುರಿತಾದ ಮನೋಭಾವಗಳಿಗೆ ಈ ಮಾತುಗಳು ಮತ್ತೊಮ್ಮೆ ಕನ್ನಡಿ ಹಿಡಿದಿದೆ ಅಷ್ಟೆ.  ಹೆಣ್ಣಿನ ಕುರಿತಾದ ಹೊಗಳಿಕೆಯ ಮಾತುಗಳೂ, ಆಕೆಯನ್ನು ಭೋಗದ ವಸ್ತುವಾಗಿ (ಆಬ್ಜೆಕ್ಟಿಫಿಕೇಷನ್) ಕಾಣುವ ಮನಸ್ಸುಗಳನ್ನೇ ಅನಾವರಣಗೊಳಿಸುತ್ತಿರುವುದು ಇದೇ ಮೊದಲನೆಯದೇನಲ್ಲ.
ರಾಷ್ಟ್ರೀಯ ಪಕ್ಷದ ಸಂಸತ್ ಸದಸ್ಯೆಯನ್ನು `ಮಾಲು' ಎಂದು ಹೇಗೆ ಕರೆಯಲು ಸಾಧ್ಯ? ಮಹಿಳೆಯನ್ನು ತಾಯಿ, ತಂಗಿ, ಪತ್ನಿ, ಪುತ್ರಿ, ಪ್ರೇಯಸಿ ಅಥವಾ ಲೈಂಗಿಕ ವಸ್ತುವಿನಂತಹ ಪಾತ್ರಗಳಲ್ಲದೆ `ವ್ಯಕ್ತಿ'ಯಾಗಿ ಪರಿಗಣಿಸಲು ನಮ್ಮ ರಾಜಕಾರಣಿಗಳಿಗೆ ಏಕೆ ಸಾಧ್ಯವಾಗುವುದಿಲ್ಲ? ಸೌಂದರ್ಯ, `ಶೃಂಗಾರ'ಗಳಾಚೆಗೆ ಹೆಣ್ಣಿನ `ವ್ಯಕ್ತಿತ್ವ'ವನ್ನು ಪರಿಭಾವಿಸುವ ಮನಸ್ಸುಗಳು ಎಲ್ಲಿ? ಎಂಬ ಪ್ರಶ್ನೆಗಳು ಮೂಡುತ್ತವೆ.


ಈ ಹಿಂದೆಯೂ ದಿಗ್ವಿಜಯ ಸಿಂಗ್ ಅವರು ಟ್ವೀಟ್ ಮಾಡಿದ್ದ ಮಾತುಗಳು ಟೀಕೆಗಳಿಗೆ ಕಾರಣವಾಗಿದ್ದವು. `ಅರವಿಂದ ಕೇಜ್ರಿವಾಲ್ ಅವರು ರಾಖಿ ಸಾವಂತ್‌ಳಂತೆ. ಇಬ್ಬರೂ ಬಯಲುಗೊಳಿಸಲು ಯತ್ನಿಸುತ್ತಾರೆ. ಆದರೆ ಏನೂ ಪ್ರಯೋಜನವಿಲ್ಲ'. ಹೆಣ್ಣಿನ ಕುರಿತಾಗಿ ಈ ಬಗೆಯ ಹಗುರ ಮಾತುಗಳು ಇದೇ ಮೊದಲನೆಯದಲ್ಲ ಅಥವಾ ಕಡೆಯದೂ ಅಲ್ಲ ಎಂಬಂತಾಗಿ ಬಿಟ್ಟಿದೆ. ಪುರುಷ ಪ್ರಾಧಾನ್ಯವನ್ನು, ಮಹಿಳೆಯ ಕೀಳರಿಮೆಯನ್ನು ಪೋಷಿಸುವಂತಹ ಭಾಷೆ ಇದು. ಇದನ್ನೇ `ಸೆಕ್ಸಿಸ್ಟ್' ಭಾಷೆ ಎನ್ನುವುದು. ಬದುಕಿನ ಹಲವು ವಲಯಗಳಲ್ಲಿ ಪುರುಷ ಪ್ರಾಧಾನ್ಯದ ದೋಷಪೂರ್ಣ ಗ್ರಹಿಕೆಗಳನ್ನು `ಸೆಕ್ಸಿಸ್ಟ್' ಭಾಷಾ ಪ್ರಯೋಗಗಳು ಪ್ರತಿನಿಧಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹೀಗೆ `ಸೆಕ್ಸಿಸ್ಟ್' ಮಾತುಗಳನ್ನಾಡಿದ ರಾಜಕಾರಣಿಗಳ ದೊಡ್ಡ ಪಟ್ಟಿಯೇ ಸಿಕ್ಕುತ್ತದೆ.

ಹೇಮಾ ಮಾಲಿನಿಯ ಕೆನ್ನೆಗಳಷ್ಟು ಮೃದುವಾಗಿ ಬಿಹಾರದ ರಸ್ತೆಗಳನ್ನು ನಿರ್ಮಿಸುವ ಭರವಸೆಯನ್ನು ನೀಡಿದ್ದ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಮಾತುಗಳನ್ನು ಮರೆಯುವುದು ಸಾಧ್ಯವೆ?  ನಗರಗಳ ತುಂಡುಗೂದಲಿನ (`ಬಾಬ್ ಕಟೀ ಔರತೇ') ಶ್ರೀಮಂತ ಮಹಿಳೆಯರಿಗಷ್ಟೇ ಈ ಮಸೂದೆಯಿಂದ ಲಾಭವಾಗುತ್ತದೆ ಎಂದು ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ವಿರೋಧಿಸಿದ್ದ ಜನತಾ ದಳ (ಸಂಯುಕ್ತ) ಅಧ್ಯಕ್ಷ ಶರದ್ ಯಾದವ್ ಅವರು, ಇತ್ತೀಚೆಗೆ  ಭೋಪಾಲ್‌ನಲ್ಲಿ ತಮ್ಮ ಪಕ್ಷದ ಕಚೇರಿಯಲ್ಲಿ ವರದಿಗಾರ್ತಿಯೊಬ್ಬರನ್ನು `ಬ್ಯೂಟಿಫುಲ್' ಎಂದು ಕರೆಯುವ ಮೂಲಕ ದಿಗ್ಭ್ರಮೆ ಮೂಡಿಸಿದ್ದರು.

ಯಾದವ್ ಅವರು ಸಂಸತ್‌ನಲ್ಲಿ ಎರಡು ವಿಭಿನ್ನ ಸಂದರ್ಭಗಳಲ್ಲಿ ಮಧ್ಯಪ್ರದೇಶ ಹಾಗೂ ಬಿಹಾರಗಳನ್ನು ಪ್ರತಿನಿಧಿಸಿದ್ದರಿಂದ `ಯಾವುದನ್ನು ಇಷ್ಟ ಪಡುತ್ತೀರಿ' ಎಂದು ಪ್ರಶ್ನೆ ಕೇಳಿದ್ದ ವರದಿಗಾರ್ತಿಗೆ `ಇಡೀ ರಾಷ್ಟ್ರವೇ ಸುಂದರ' ಎನ್ನುತ್ತಾ ನಂತರ `ನೀವೂ ತುಂಬಾ ಸುಂದರಿ' ಎಂದು ಹೇಳಿ ಅನಿರೀಕ್ಷಿತ ಆಘಾತ ನೀಡಿದ್ದರು. ಉತ್ತರ ಪ್ರದೇಶದ ಖಾದಿ ಮತ್ತು ಗ್ರಾಮೋದ್ಯೋಗ ಸಚಿವ ರಾಜಾರಾಂ ಪಾಂಡೆ ಅವರು ಬಹಿರಂಗ ಸಭೆಯಲ್ಲಿ ಸುಲ್ತಾನ್‌ಪುರದ ಮಹಿಳಾ ಜಿಲ್ಲಾಧಿಕಾರಿಯ ಸೌಂದರ್ಯವನ್ನು ಈ ವರ್ಷದ ಫೆಬ್ರುವರಿಯಲ್ಲಿ ಹೊಗಳಿದ್ದು ಸುದ್ದಿಯಾಗಿತ್ತು.  `ಎರಡನೇ ಬಾರಿಗೆ ಸುಲ್ತಾನ್‌ಪುರದ ಉಸ್ತುವಾರಿ ಸಚಿವನಾಗಿದ್ದೇನೆ.

ಪ್ರತಿ ಬಾರಿಯೂ ಸುಂದರ ಮಹಿಳಾ ಡಿ.ಸಿಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ಹಿಂದೆ ಕಾಮಿನಿ ಚೌಹಾನ್ ರತನ್ ಅವರು ಡಿ.ಸಿ ಆಗಿದ್ದಾಗ ಅವರ ಸೌಂದರ್ಯಕ್ಕೆ ಸರಿಸಾಟಿಯಾಗುವವರು ಬೇರೆ ಯಾರೂ ಇಲ್ಲ ಎಂದು ಭಾವಿಸಿದ್ದೆ. ಆದರೆ ಹೊಸ ಡಿ.ಸಿ ಅಧಿಕಾರ ವಹಿಸಿಕೊಂಡ ಮೇಲೆ ಇವರು ಇನ್ನೂ ಹೆಚ್ಚು ಸುಂದರಿ ಎಂದು ತಿಳಿಯಿತು. ಜೊತೆಗೆ ಇವರು ಮೃದುಭಾಷಿ. ಅಷ್ಟೇ ಅಲ್ಲ ಒಳ್ಳೆಯ ಆಡಳಿತಗಾರ್ತಿ ಕೂಡ' ಎಂದು ಬಹಿರಂಗ ಸಭೆಯಲ್ಲಿ ಹೇಳಿದಾಗ ಇರಿಸುಮುರಿಸು ಅನುಭವಿಸಿದ ಜಿಲ್ಲಾಧಿಕಾರಿ ಕೆ. ಧನಲಕ್ಷ್ಮಿ ತಮ್ಮ ಭಾವನೆಯನ್ನು ತೋರಗೊಡದೆ ಮುಖಮುಚ್ಚಿಕೊಂಡರು ಎಂಬುದಾಗಿ ವರದಿಯಾಗಿತ್ತು.

ಹೆಣ್ಣಿನ ಸೌಂದರ್ಯ ಕುರಿತಾದ ಲಹರಿ ನಮ್ಮ ರಾಜಕಾರಣಿಗಳನ್ನು ಯಾವ ಮಟ್ಟಿಗೆ ಆವರಿಸಿಕೊಂಡಿರುತ್ತದೆ ಎಂಬುದಕ್ಕೆ ಇದು ದ್ಯೋತಕ. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆ ವಿರುದ್ಧದ ಹೋರಾಟ ತಾರಕದಲ್ಲಿದ್ದಾಗ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಜೆ.ಎಚ್. ಪಟೇಲ್. `ವಿಶ್ವ ಸುಂದರಿ ಪ್ರದರ್ಶನ ನೋಡಬೇಕೆಂದು ಈ ಪ್ರತಿಭಟನಾಕಾರರಿಗೆ ಯಾರೂ ಒತ್ತಾಯಿಸುತ್ತಿಲ್ಲ. ಸೌಂದರ್ಯವನ್ನು ಮೆಚ್ಚುವವರು ಹೋಗಿ ನೋಡುತ್ತಾರೆ. ಈ ಸ್ಪರ್ಧೆ ವಿರೋಧಿಸುತ್ತಿರುವ ಹೆಚ್ಚಿನವರು ದೃಷ್ಟಿ ಮಂಕಾಗುತ್ತಿರುವ ವಯಸ್ಸಾದವರು' ಎಂದು ಆಗ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಿದ್ದರು.

ಕೇಂದ್ರ ಸಚಿವ ವಯಲಾರ್ ರವಿ ಅವರು ಪತ್ರಕರ್ತೆಯೊಬ್ಬರ ಜೊತೆ ಅನುಚಿತ ನುಡಿಗಳನ್ನಾಡಿ ನಂತರ ಕ್ಷಮೆ ಕೇಳಿದ್ದೂ ಸೂಕ್ಷ್ಮತೆಯ ಕೊರತೆಯನ್ನು ಧ್ವನಿಸುತ್ತದೆ. 40 ದಿನಗಳಲ್ಲಿ 42 ವ್ಯಕ್ತಿಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಒಳಗೊಳ್ಳುವ ಕೇರಳದ ಸೂರ್ಯನೆಲ್ಲಿ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ಕೇಳಿದ ಪ್ರಶ್ನೆಗೆ ವಯಲಾರ್ ರವಿ ಉತ್ತರಿಸಿದ್ದು ಹೀಗೆ: `ಕುರಿಯನ್ ವಿರುದ್ಧ ನಿಮಗೇನಾದರೂ ವೈಯಕ್ತಿಕವಾದದ್ದು ಇದೆಯೆ? ನನಗೆ ಗೊತ್ತು, `ನಿಮಗೇನೋ ಇದೆ. ಹಿಂದೆ ಎಂದಾದರೂ ನಿಮ್ಮ ಮತ್ತು ಅವರ ನಡುವೆ ಏನಾದರೂ ನಡೆದಿದೆಯೆ?' ಎಂದು ಪತ್ರಕರ್ತೆಗೆ ಕೇಳಿದ್ದ ಸಚಿವ ಮರುದಿನ ಕ್ಷಮೆ ಕೋರಿದ್ದರು.

ರಾಜ್ಯಸಭೆಯಲ್ಲಿ ಜನಾಂಗೀಯ ಹಿಂಸಾಚಾರ ಕುರಿತ ಚರ್ಚೆಯ ವೇಳೆ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು  ಸಮಾಜವಾದಿ ಪಕ್ಷದ ಎಂಪಿ ಜಯಾ ಬಚ್ಚನ್‌ಗೆ ತಿಳಿಹೇಳಿದ್ದ ಮಾತುಗಳಿವು: `ಕಿವಿಗೊಟ್ಟು ಕೇಳಿ ತಂಗಿ. ಇದು ಫಿಲ್ಮಿ ಸಬ್ಜೆಕ್ಟ್ ಅಲ್ಲ. ಗಂಭೀರ ವಿಚಾರ'.  ಹಿಂದಿಯಲ್ಲಿ ಮಾತನಾಡುವುದಕ್ಕಾಗಿ ಮಹಾರಾಷ್ಟ್ರಿಗರು ತನ್ನನ್ನು ಕ್ಷಮಿಸಬೇಕೆಂದು ಜಯಾ ಬಚ್ಚನ್ ಕೇಳಿಕೊಂಡಾಗ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್) ನಾಯಕ ರಾಜ್ ಠಾಕ್ರೆ ಜಯಾ ಬಚ್ಚನ್ ಕುರಿತು ಹೇಳಿದ್ದ ಮಾತುಗಳಿವು: `ಗುಡ್ಡಿಗೆ ವಯಸ್ಸಾಯಿತು. ಆದರೆ ವಯಸ್ಸಿನೊಂದಿಗೆ ಬುದ್ಧಿ ಬಲಿಯಲಿಲ್ಲ'.

ಬಿಜೆಪಿ  ಎಂಪಿ ಸ್ಮೃತಿ ಇರಾನಿಗೆ  ಕಾಂಗ್ರೆಸ್ ಎಂಪಿ ಸಂಜಯ್ ನಿರುಪಮ್ ಹೇಳಿದ್ದ ಮಾತುಗಳಂತೂ ನಿಕೃಷ್ಟ ಮಟ್ಟದ ಕೀಳು ಅಭಿರುಚಿಗೆ ಸಾಕ್ಷಿ. `ರಾಜಕೀಯಕ್ಕೆ ಬಂದು ನಾಲ್ಕು ದಿನವಾಗಿಲ್ಲ. ಟಿ.ವಿಯಲ್ಲಿ ಸೊಂಟ ಕುಣಿಸುತ್ತಿದ್ದಿರಿ. ಈಗ ರಾಜಕೀಯ ವಿಶ್ಲೇಷಕರಾಗಿಬಿಟ್ಟಿರಾ?'
ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರವಂತೂ ಅನೇಕ ರೀತಿಗಳಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ಮಹಿಳೆಯರ ಕುರಿತಾಗಿ ನಾಲಿಗೆ ಹರಿಯಬಿಟ್ಟಿದ್ದು ಹಳೆಯ ಕತೆ.

`ಕಣ್ಣಲ್ಲೇ ಆಹ್ವಾನ ನೀಡುವಂತೆ ನೋಡುವವರೆಗೆ ಯಾವ ಮಹಿಳೆಗೂ ಯಾವ ಪುರುಷನೂ ಕಿರುಕುಳ ನೀಡುವುದಿಲ್ಲ' ಎಂದು  ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ  ಸತ್ಯದೇವ ಕಟಾರೆ,  ಭಿಂಡ್ ಜಿಲ್ಲೆಯಲ್ಲಿ ಈ ವರ್ಷ ಏಪ್ರಿಲ್‌ನಲ್ಲಿ ನಡೆದ  ಕಾಂಗ್ರೆಸ್ ರ‌್ಯಾಲಿಯಲ್ಲಿ ಹೇಳಿದ್ದರು.
ರಾಷ್ಟ್ರಪತಿ ಅವರ ಪುತ್ರ ಹಾಗೂ ಕಾಂಗ್ರೆಸ್ ಸಂಸತ್ ಸದಸ್ಯ ಅಭಿಜಿತ್ ಮುಖರ್ಜಿಯಂತೂ  ನೆರಿಗೆ ಬಿದ್ದ ಮುಖಕ್ಕೆ ಬಣ್ಣಹಚ್ಚಿದ ಮಹಿಳೆಯರು ಡಿಸ್ಕೊಥೆಕ್‌ಗೆ ಹೋಗಿ ನಂತರ ತಮ್ಮ ಆಕ್ರೋಶ ವ್ಯಕ್ತಪಡಿಸಲು ಇಂಡಿಯಾ ಗೇಟ್ ಬಳಿ ಬರುತ್ತಾರೆ ಎಂದು ದೆಹಲಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಪ್ರತಿಭಟನಾಕಾರರ ವಿರುದ್ಧ ಭಾರಿ ಕ್ಷುಲ್ಲಕವಾಗಿ ಮಾತನಾಡಿದ್ದರು. ನಿರೂಪಿಸುತ್ತಾ ಹೋದರೆ  ಇಂತಹ ಮಾತುಗಳ ಉದಾಹರಣೆಗಳು ಮುಗಿಯುವುದೇ ಇಲ್ಲ.

ಈ ಪ್ರವೃತ್ತಿ ಭಾರತವಷ್ಟೇ ಅಲ್ಲ ಮುಂದುವರಿದ ರಾಷ್ಟ್ರಗಳಲ್ಲೂ ಇದೆ. ಅಮೆರಿಕದ ಅತ್ಯಂತ ರೂಪವತಿ ಅಟಾರ್ನಿ ಜನರಲ್ ಎಂದು ಕ್ಯಾಲಿಫೋರ್ನಿಯಾದ ಕಮಲಾ ಹ್ಯಾರಿಸ್ ಅವರ ಸೌಂದರ್ಯವನ್ನು ಹೊಗಳಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ನಂತರ ಆ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದರು. ಈ ಹೇಳಿಕೆ ಸೃಷ್ಟಿಸಿದ ಗೊಂದಲಕ್ಕಾಗಿ ಕಮಲಾ ಅವರಿಗೆ ಕರೆ ಮಾಡಿ ಕ್ಷಮೆ ಕೋರಿದ್ದರು. ಅವರ ವೃತ್ತಿಪರ ಸಾಧನೆಗಳು ಹಾಗೂ ಸಾಮರ್ಥ್ಯಗಳನ್ನು ಕುಗ್ಗಿಸುವಂತಹ ಉದ್ದೇಶ ತಮ್ಮದಾಗಿರಲಿಲ್ಲ ಎಂಬುದನ್ನು ನಂತರ ಒಬಾಮ ಸ್ಪಷ್ಟಪಡಿಸಿದ್ದರು.

ನಮ್ಮ ನಡಾವಳಿಗಳಲ್ಲಿ, ನಮ್ಮ ಮಾತುಕತೆಗಳಲ್ಲಿ ಹಾಗೂ ಭಾಷೆಯೊಳಗೆ ಶತಶತಮಾನಗಳಿಂದ ಜಡ್ಡುಗಟ್ಟಿರುವ ಲಿಂಗತ್ವ ಪೂರ್ವಗ್ರಹಗಳನ್ನು ಮೆಟ್ಟಿ ನಿಲ್ಲುವುದು ಹೇಗೆ? ಎಂಬುದೇ ಇಂದಿನ ಸವಾಲು. ಲಿಂಗ ತಾರತಮ್ಯ ಧ್ವನಿಸದ ಮಾತುಗಾರಿಕೆ ಸಾಧ್ಯವಾಗಿಸುವುದು ಹೇಗೆ? ಕಾಲ ಕ್ರಮೇಣ ತನ್ನಿಂದ ತಾನೇ ಇದು ಸರಿಯಾಗುತ್ತದೆಯೆ? ಅಥವಾ ಅದಕ್ಕೆ ನಾವೇ ಪ್ರಜ್ಞಾಪೂರ್ವಕವಾದ ಪ್ರಯತ್ನಗಳನ್ನು ಹಾಕುವುದು ಅಗತ್ಯವೆ? ಈ ನಿಟ್ಟಿನಲ್ಲಿ ಅಮೆರಿಕದ ವಾಷಿಂಗ್ಟನ್ ಸ್ಟೇಟ್ ಕೈಗೊಂಡ ರೀತಿಯ ಕ್ರಮ ಕೈಗೊಳ್ಳುವುದು ಅಗತ್ಯವೆ?

ಇತ್ತೀಚೆಗಷ್ಟೇ ವಾಷಿಂಗ್ಟನ್ ರಾಜ್ಯ  ತನ್ನ ಕಾನೂನು ಪುಸ್ತಕಗಳಲ್ಲಿ 40,000 ಪದಗಳನ್ನು ಬದಲಾಯಿಸಿದೆ.  ಉದಾಹರಣೆಗೆ  `ಹಿಸ್' ಎಂಬ ಪದ ಈಗ `ಹಿಸ್  ಅಂಡ್ ಹರ್ಸ್‌' ಆಗುತ್ತದೆ.  `ಫ್ರೆಶ್‌ಮನ್' ಎಂಬುದು `ಫಸ್ಟ್ ಯಿಯರ್ ಸ್ಟೂಡೆಂಟ್' ಆಗುತ್ತದೆ.  `ಫಿಶರ್‌ಮನ್' `ಫಿಶರ್' ಆಗುತ್ತದೆ. `ಕ್ಲರ್ಜಿಮನ್' `ಕ್ಲರ್ಜಿ' ಆಗುತ್ತದೆ.  `ಸಿಗ್ನಲ್‌ಮನ್' ಎಂಬುದು `ಸಿಗ್ನಲ್ ಆಪರೇಟರ್' ಆಗುತ್ತದೆ.  ರಾಯಿಟರ್ಸ್ ವರದಿಯ ಪ್ರಕಾರ, ಅಮೆರಿಕದ ಇತರ ಒಂಬತ್ತು ರಾಜ್ಯಗಳು ಲಿಂಗತ್ವ ನಿರಪೇಕ್ಷ ಭಾಷೆಯನ್ನು ಕಾನೂನಿನಲ್ಲಿ ಅಳವಡಿಸಲು ಚಿಂತಿಸುತ್ತಿವೆ. ಕಳೆದ ವರ್ಷ ಅಧಿಕೃತ ದಾಖಲೆಗಳಲ್ಲಿ ಮೆಡೆಮೋಯ್ಸೆಲ್ (mademoiselle) ಪದವನ್ನು  ಫ್ರಾನ್ಸ್ ನಿಷೇಧಿಸಿತ್ತು.

ಫ್ರೆಂಚ್ ಅಧಿಕಾರಿಗಳ ಪ್ರಕಾರ, ಮಿಸ್ (ಕುಮಾರಿ) ಎಂಬ ಅರ್ಥ ನೀಡುವ ಈ ಪದ ಮಹಿಳೆಯರ ವೈವಾಹಿಕ ಸ್ಥಾನಮಾನವನ್ನು ಸೂಚಿಸುತ್ತದೆ.  ಈ ಬಗೆಗಂತೂ ನಮ್ಮಲ್ಲಿ ಯಾವುದೇ ಸಂವೇದನಾಶೀಲತೆಯೂ ವ್ಯಕ್ತವಾಗುವುದಿಲ್ಲ. ಮಹಿಳೆಯರು ವಿವಾಹಿತರೇ ಅಲ್ಲವೇ ಎಂಬುದನ್ನು ಧ್ವನಿಸುವ ಪದಗಳ ಬಳಕೆಗೆ ಮೂಲ ಕಾರಣ ಪಿತೃಪ್ರಧಾನ ಸಂಸ್ಕೃತಿ.  ವಿವಾಹಿತನಾಗಿರಲಿ, ಅವಿವಾಹಿತನಾಗಿರಲಿ ಪುರುಷನಿಗೆ ಗೌರವಸೂಚಕವಾಗಿ ಅವರ ಹೆಸರಿನ ಮುಂಚೆ ಶ್ರೀ ಪದ ಬಳಸಲಾಗುತ್ತದೆ.

ಆದರೆ ಮಹಿಳೆಗೆ ಮಾತ್ರ ಆಕೆಯ ವೈವಾಹಿಕ ಸ್ಥಾನಮಾನ ನಿರ್ದೇಶಿಸುವ  ಶ್ರೀಮತಿ ಹಾಗೂ ಕುಮಾರಿ ಪದ ಪ್ರಯೋಗ ಉಳಿಸಿಕೊಳ್ಳಲಾಗಿದೆ. ಉದಾಹರಣೆಗೆ ಕುಮಾರಿ ಜಯಲಲಿತಾ ಎಂಬಂತಹ ಪದ ಪ್ರಯೋಗ. ಕಿಶೋರ ಪ್ರಾಯವನ್ನು ದಾಟಿದ್ದರೂ ಮಹಿಳೆಯರ ವೈವಾಹಿಕ ಸ್ಥಾನಮಾನವನ್ನು ನಿರ್ದೇಶಿಸುವ ಇಂತಹ ಪದ ಪ್ರಯೋಗಗಳು ವಿಚಿತ್ರವಾಗಿ ಕೇಳಿಸುತ್ತವಷ್ಟೇ ಅಲ್ಲ, ವ್ಯಕ್ತಿತ್ವವನ್ನೂ ಹಗುರಗೊಳಿಸಿದಂತೆನಿಸುತ್ತದೆ.

`ನೈಸ್' ವಿವಾದದ ಹಿನ್ನೆಲೆಯಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಹಿಂದಿನ ಮುಖ್ಯಮಂತ್ರಿ  ಎಚ್. ಡಿ. ಕುಮಾರಸ್ವಾಮಿ ಅವರು `ನಾನೇನು ಬಳೆ ತೊಟ್ಟು ಸೋಮಾರಿಯಾಗಿ ಕುಳಿತಿಲ್ಲ'  ಎಂದು ಹೇಳಿದ್ದರು. ಬಳೆ ತೊಟ್ಟ ಹೆಣ್ಣು ಸಾಮರ್ಥ್ಯವಿಲ್ಲದವಳು ಎಂಬಂತಹ ಅರ್ಥವನ್ನು ಧ್ವನಿಸುವ ಇಂತಹ ಮಾತುಗಳು ಗಂಡು ಹೆಣ್ಣನ್ನು ಸಮಾನ ನೆಲೆಯಲ್ಲಿ ಕಾಣುವ ಪ್ರಜಾಪ್ರಭುತ್ವದಲ್ಲಿ ಎಷ್ಟರ ಮಟ್ಟಿಗೆ ಸರಿ?

ಹಾಗೆಯೇ ರಾಜ್ಯದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಮಹಿಳಾ ಅಧಿಕಾರಿಗಳನ್ನು `ಏನಮ್ಮಾ', `ಗೊತ್ತಲ್ಲಮ್ಮ' ಎಂಬಂತಹ ಪದಗಳಿಂದ ಸಂಬೋಧಿಸಿ ನಿರ್ದೇಶನಗಳನ್ನು ನೀಡಿದ್ದು ಪತ್ರಿಕಾ ವರದಿಗಳಲ್ಲಿವೆ. ಮಹಿಳೆ ಕುರಿತಂತೆ ಅನುಗ್ರಹಪೂರ್ವಕ (ಪ್ಯಾಟ್ರನೈಸಿಂಗ್) ಧೋರಣೆಯನ್ನು ಬಿಂಬಿಸುವ ಈ ಭಾಷೆಯ ಮೂಲ ಪಿತೃ ಪ್ರಧಾನ ಸಂಸ್ಕೃತಿ.

ಮಾತೆಂಬುದು ಮನಸ್ಸಿನ ಕಿಟಕಿ. ಈ ಬಗ್ಗೆ ನಮ್ಮ ರಾಜಕೀಯ ಪ್ರಭುಗಳು ಗಂಭೀರವಾಗಿ ಚಿಂತಿಸಬೇಕು. ಮಹಿಳೆ ವಿರುದ್ಧದ ಪೂರ್ವಗ್ರಹವನ್ನು ಬಿಂಬಿಸುವ `ಸೆಕ್ಸಿಸ್ಟ್' ಭಾಷೆಯನ್ನು ದೋಷ ಎಂಬುದಾಗಿ ಗುರುತಿಸುವ ಪ್ರಜ್ಞೆ ಸರ್ವವ್ಯಾಪಿಯಾಗಬೇಕು. ಭಾಷೆ ಚಿಂತನೆಯನ್ನು ರೂಪಿಸುವುದಲ್ಲದೆ ನಡಾವಳಿಯನ್ನೂ ರೂಪಿಸುತ್ತದೆ.  ಹೆಣ್ಣಿನ ವಿರುದ್ಧ ಹಿಂಸೆಯ ಸ್ವರೂಪಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆರೋಗ್ಯವಂತ ಸಮಾಜಕ್ಕಾಗಿ ರಾಜಕೀಯ ಪರಿಭಾಷೆಗಳಲ್ಲಿ, ರಾಜಕೀಯ ನಾಯಕರ ಮಾತುಗಳಲ್ಲಿ ಲಿಂಗತ್ವ ಸಂವೇದನಾಶೀಲತೆ ಮೂಡುವುದು ಅತ್ಯಗತ್ಯ.

ನಿಮ್ಮ ಅನಿಸಿಕೆ ತಿಳಿಸಿ:   editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT