ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳು ದಾಟಲಾಗದ ಡಿಜಿಟಲ್ ಕಂದಕ

Last Updated 13 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಡಿಜಿಟಲ್ ಡಿವೈಡ್ ಅಥವಾ ವಿದ್ಯುನ್ಮಾನ ಕಂದಕದ ಕುರಿತ ಚರ್ಚೆ ಎಂದರೆ ಅದು ಹಳ್ಳಿಗಳಿಗೆ ಇಂಟರ್ನೆಟ್ ತಲುಪಿಸುವುದು, ಭಾರತೀಯ ಭಾಷೆಗಳಲ್ಲೇ ಕಂಪ್ಯೂಟರ್ ಬಳಸುವಂತೆ ಮಾಡುವುದು, ಇಂಟರ್ನೆಟ್ ಆಧಾರಿತ ಸೇವೆಗಳನ್ನು ಟಿ.ವಿ. ಅಥವಾ ಮೊಬೈಲ್ ಫೋನ್ ಬಳಸಿದಷ್ಟೇ ಸುಲಭವಾಗುವಂತೆ ಮಾಡುವಂಥ ವಿಚಾರಗಳ ಚರ್ಚೆ ಎಂಬಂತಾಗಿದೆ. ಇದರ ಮಧ್ಯೆ ಆಡಳಿತ ನೀತಿಗೆ ಸಂಬಂಧಿಸಿದ ಕೆಲವು ವಿಚಾರಗಳೂ ಬಂದು ಹೋಗುವುದುಂಟು. ಅವೆಲ್ಲವೂ ಜನರ ಕಂಪ್ಯೂಟರ್ ಸಾಕ್ಷರತೆಯನ್ನು ಹೆಚ್ಚಿಸುವುದಕ್ಕೆ ಸರ್ಕಾರ ಏನು ಮಾಡಬೇಕು ಎಂಬುದಕ್ಕೆ ಸೀಮಿತವಾಗಿರುತ್ತವೆ.

ಈ ಚರ್ಚೆಗಳಲ್ಲಿ ಅತ್ಯಂತ ಅವಶ್ಯವಾಗಿ ಇರಬೇಕಾಗಿದ್ದ ಆದರೆ ಈಗ ಎಲ್ಲರೂ ಮರೆತುಬಿಟ್ಟಿರುವ ಅತಿ ಮುಖ್ಯವಾದ ವಿದ್ಯುನ್ಮಾನ ಕಂದಕವೊಂದಿದೆ. ಅದು ರಾಜಕೀಯಕ್ಕೆ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಹೌದು, ನಮ್ಮ ಜನಪ್ರತಿನಿಧಿಗಳಿನ್ನೂ ವಿದ್ಯುನ್ಮಾನ ಕಂದಕವನ್ನು ದಾಟಿಯೇ ಇಲ್ಲ ಎಂಬುದನ್ನು ಮರೆತೇ ವಿದ್ಯುನ್ಮಾನ ಕಂದಕವನ್ನು ಕಿರಿದಾಗಿಸುವ ಚರ್ಚೆಗಳು ನಡೆಯುತ್ತವೆ. ವಿಪರ್ಯಾಸದ ಸಂಗತಿ ಎಂದರೆ ಈ ವಿಚಾರವನ್ನು ಸ್ವತಃ ರಾಜಕಾರಣಿಗಳೂ ಅರಿತಿಲ್ಲ.

ಪ್ರಧಾನ ಮಂತ್ರಿಯೇ ಟ್ವಿಟ್ಟರ್‌ನಲ್ಲಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳು ಫೇಸ್‌ಬುಕ್‌ ಪೇಜ್ ಹೊಂದಿದ್ದಾರೆ. ಹಾಗೆಯೇ ಅನೇಕಾನೇಕ ಮಂತ್ರಿಗಳು ತಮ್ಮ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಸಕ್ರಿಯರಾಗಿದ್ದ ಮಾತ್ರಕ್ಕೆ ರಾಜಕಾರಣಿಗಳು ವಿದ್ಯುನ್ಮಾನ ಕಂದಕವನ್ನು ಯಶಸ್ವಿಯಾಗಿ ದಾಟಿಬಿಟ್ಟಿದ್ದಾರೆ ಎನ್ನಲು ಸಾಧ್ಯವಿಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಅನಾವರಣಗೊಂಡ ಸಂಗತಿಗಳನ್ನೊಮ್ಮೆ ಸೂಕ್ಷ್ಮವಾಗಿ ನೋಡಿದರೆ ಜನಪ್ರತಿನಿಧಿಗಳು ಹೇಗೆ ಡಿಜಿಟಲ್ ಕಂದಕದ ಆಚೆ ಬದಿಯಲ್ಲೇ ಇದ್ದಾರೆ ಎಂಬುದು ತಿಳಿಯುತ್ತದೆ.

ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಯನ್ನೇ ನೋಡೋಣ. ನರೇಂದ್ರ ಮೋದಿಯವರು ಸಿಲಿಕಾನ್ ವ್ಯಾಲಿಯಲ್ಲಿ ವಿಶ್ವದ ತಂತ್ರಜ್ಞಾನ ದೈತ್ಯರನ್ನು ಭೇಟಿ ಮಾಡುತ್ತಿದ್ದ ಹೊತ್ತಿನಲ್ಲಿ ಅಂಕಿತ್ ಫಾದಿಯಾ ಎಂಬ ತಥಾಕಥಿತ ಹ್ಯಾಕರ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ‘ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆಯ ರಾಯಭಾರಿಗಳಲ್ಲಿ ಒಬ್ಬನಾಗುವ ಗೌರವ ದೊರೆತಿದೆ.

ಇದಕ್ಕೆ ಕೃತಜ್ಞ’ ಎಂಬ ಸ್ಟೇಟಸ್ ಹಾಕಿದರು. ಇದರ ಹಿಂದೆಯೇ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಕಟಕಿಗಳು ಆರಂಭವಾದವು. ‘ಅಂಕಿತ್ ಫಾದಿಯಾ ಪ್ರಧಾನಿ ಕಚೇರಿಯನ್ನೇ ಹ್ಯಾಕ್ ಮಾಡಿ ತಮ್ಮನ್ನು ನೇಮಿಸಿಕೊಂಡಿರಬಹುದು.... ಈ ನೇಮಕಾತಿ ಜೋಕ್ ಎನಿಸಿಕೊಳ್ಳುವುದಕ್ಕೂ ಅರ್ಹವಲ್ಲ’ ಒಂದು ಒಬ್ಬರು ಹೇಳಿದರೆ ’ಅಂಕಿತ್  ಫಾದಿಯಾ ನೇತೃತ್ವ ಡಿಜಿಟಲ್ ಇಂಡಿಯಾ ಅಂದರೆ 14.4ಕೆ.ಬಿ ವೇಗದ ಮೋಡೆಮ್ ಮತ್ತು ಕ್ಲೌಡ್ ಸ್ಟೋರೇಜ್ ಎಂದರೆ ಮೋಡಗಳಲ್ಲಿ ದತ್ತಾಂಶವನ್ನು ಸಂಗ್ರಹಿಸುವುದು ಎಂದು ನಂಬಿದ ತಜ್ಞ ಎಂದರ್ಥ’ ಎಂದು ಇನ್ನೊಬ್ಬರು ಕಮೆಂಟಿಸಿದರು.

ಟೀಕೆಗಳ ಸುರಿಮಳೆ ಆರಂಭವಾದುದರ ಹಿಂದೆಯೇ ಸರ್ಕಾರದ ಸ್ಪಷ್ಟೀಕರಣ ಬಂತು. ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋದ ವೆಬ್‌ಸೈಟ್‌ ‘ಇಂತಹ ಯಾವುದೇ ರಾಯಭಾರಿಗಳನ್ನು ನೇಮಿಸಲಾಗಿಲ್ಲ’ ಎಂದು ಹೇಳಿತು. ಆದರೆ ಈ ಸ್ಪಷ್ಟೀಕರಣ ಪ್ರಕಟವಾದ ಒಂದು ಗಂಟೆಯ ನಂತರ ಅದನ್ನು ತೆಗೆದು ಹಾಕಲಾಯಿತು. ಸಂಜೆಯ ವೇಳೆಗೆ ಪ್ರಕಟವಾದ ಮತ್ತೊಂದು ಅಧಿಕೃತ ಪ್ರತಿಕ್ರಿಯೆಯಲ್ಲಿ ‘ಅಂಕಿತ್ ಫಾದಿಯಾ ಸೇರಿದಂತೆ ನಾಲ್ವರನ್ನು ಡಿಜಿಟಲ್ ಇಂಡಿಯಾ ಯೋಜನೆಯ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ’ ಎಂಬ ಸ್ಪಷ್ಟೀಕರಣವಿತ್ತು.

ಇಲ್ಲಿರುವ ಸಂಗತಿ ಒಬ್ಬ ವ್ಯಕ್ತಿಯನ್ನು ನಿರ್ದಿಷ್ಟ ಯೋಜನೆಯೊಂದರ ರಾಯಭಾರಿಯನ್ನಾಗಿ ನೇಮಿಸಲಾಗಿತ್ತೇ ಅಥವಾ ಇಲ್ಲವೇ ಎಂಬುದಷ್ಟೇ ಅಲ್ಲ. ಆ ವ್ಯಕ್ತಿ ಈ ಹುದ್ದೆಗೆ ಅರ್ಹನೇ ಎಂಬ ಪ್ರಶ್ನೆ ಮುಖ್ಯವಾದುದು. ಅಂಕಿತ್ ಫಾದಿಯಾ ಹೆಸರು ಮೊದಲು ಸುದ್ದಿ ಮಾಧ್ಯಮಗಳಲ್ಲಿ ಕಂಡುಬಂದದ್ದು ಕಂಪ್ಯೂಟರ್ ಜಗತ್ತಿನ ಬಾಲಪ್ರತಿಭೆ ಎಂಬ ಕಾರಣಕ್ಕೆ. ಹದಿನೇಳು ವರ್ಷಗಳ ಹಿಂದೆ ಅಂಕಿತ್ ಫಾದಿಯಾ ಹೇಳಿದ್ದನ್ನೇ ನಂಬಿ ಮಾಧ್ಯಮಗಳು ಈತನೊಬ್ಬ ಪ್ರತಿಭೆ ಎಂದೇ ಜಗತ್ತಿಗೆ ಪರಿಚಯಿಸಿದವು.

ಆದರೆ ನಿಧಾನವಾಗಿ ಈ ತಥಾಕಥಿತ ಹ್ಯಾಕರ್ ಹೇಳಿದ ಸಂಗತಿಗಳ ವಾಸ್ತವ ಅನಾವರಣಗೊಂಡಿತು. ಅಂಕಿತ್ ಫಾದಿಯಾ ಹೇಳುವಂತೆ ಅವರು 13 ವರ್ಷದ ಬಾಲಕನಿರುವಾಗಲೇ ‘ಚಿಪ್’ ಎಂಬ ಕಂಪ್ಯೂಟರ್ ಸಂಬಂಧೀ ನಿಯತಕಾಲಿಕದ ಭಾರತೀಯ ಆವೃತ್ತಿಯ ವೆಬ್‌ಸೈಟ್‌ ಅನ್ನು ಅನಧಿಕೃತವಾಗಿ ಪ್ರವೇಶಿಸಿ ಅದನ್ನು ವಿರೂಪಗೊಳಿಸಿದ್ದರಂತೆ. ಹೀಗೆ ಮಾಡಿದ್ದೆ ಎಂದು ಅಂಕಿತ್ ಹೇಳುವ ಅವಧಿಯಲ್ಲೇ ನಿಯತಕಾಲಿಕದ ಸಂಪಾದಕರಾಗಿದ್ದ ಚಾರ್ಲ್ಸ್ ಅಸ್ಸಿಸಿ ಇಂಥದ್ದು ಸಂಭವಿಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ವ್ಯಂಗ್ಯ ತುಂಬಿದ ಭಾಷೆಯಲ್ಲಿ ಅವರು 2013ರಲ್ಲಿ ‘ಫೋರ್ಬ್ಸ್’ ನಿಯತಕಾಲಿಕದಲ್ಲಿ ಬರೆದ ಲೇಖನ (goo.gl/qAB8mN) ಅಂಕಿತ್ ಫಾದಿಯಾ ಎಂಬ ತಥಾಕಥಿತ ಹ್ಯಾಕರ್‌ನ ನಿಜ ಸ್ವರೂಪವನ್ನು ಬಿಚ್ಚಿಟ್ಟಿದೆ. ಅಂಕಿತ್ ಫಾದಿಯಾ ಪುಸ್ತಕಗಳಿಗಾಗಿ ನಡೆಸಿರುವ ಕೃತಿಚೌರ್ಯದಿಂದ ಆರಂಭಿಸಿ ಅನೇಕಾನೇಕ ಸಂಗತಿಗಳ ಕುರಿತು ಇಂಟರ್ನೆಟ್‌ನಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗಿನ ಮಾಹಿತಿ ಒಮ್ಮೆ ಗೂಗಲಿಸಿದರೆ ಕಾಣಿಸುತ್ತದೆ. ತಾನೊಬ್ಬ ‘ನೈತಿಕ ಹ್ಯಾಕರ್’ ಎಂದು ಬಡಾಯಿ ಕೊಚ್ಚಿಕೊಳ್ಳುವ ಇವರ ವೆಬ್‌ಸೈಟ್ ಅನ್ನೇ ಹ್ಯಾಕ್ ಮಾಡಿ ಭದ್ರತೆಯ ಕುರಿತಂತೆ ಈ ವ್ಯಕ್ತಿಗೆ ಯಾವ ಅರಿವೂ ಇಲ್ಲ ಎಂಬುದನ್ನೂ ನಿಜವಾದ ಹ್ಯಾಕರ್‌ಗಳು ಸಾಬೀತು ಮಾಡಿಬಿಟ್ಟಿದ್ದಾರೆ.

ಈ ಎಲ್ಲವುಗಳಿಗೂ ಕಿರೀಟವಿಟ್ಟಂತೆ ಡೆಫ್‌ಕಾನ್ (DEF CON) ಎಂಬ ಪ್ರತಿಷ್ಠಿತ ಹ್ಯಾಕರ್‌ಗಳ ಸಮ್ಮೇಳನ ಅಂಕಿತ್ ಫಾದಿಯಾಗೆ 2012ರಲ್ಲಿ ‘ವರ್ಷದ ಹುಸಿತಜ್ಞ’ ಎಂಬ ‘ಬಿರುದು’ ನೀಡಿತ್ತು. ಇಷ್ಟಾಗಿಯೂ ಈ ವ್ಯಕ್ತಿ ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯೊಂದರ ಗೌರವಾನ್ವಿತ ರಾಯಭಾರಿ! ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆನ್‌ಲೈನ್ ಸಂವಹನದಲ್ಲಿ ಬಳಸಲಾಗುವ ಎನ್ಕ್ರಿಪ್ಷನ್ ಅಥವಾ ಸಂದೇಶವನ್ನು ಕಳುಹಿಸುವಾಗ ಬಳಸಲಾಗುವ ಭದ್ರತಾ ತಂತ್ರಜ್ಞಾನ ಹೇಗಿರಬೇಕು ಎಂಬುದಕ್ಕೆ ಸಂಬಂಧಿಸಿದ ನೀತಿ ಕರಡೊಂದನ್ನು ಪ್ರಕಟಿಸಿತು.

ಇದರಲ್ಲಿದ್ದ ಒಂದು ಅಂಶ ಭಾರೀ ವಿವಾದಕ್ಕೆ ಕಾರಣವಾಯಿತು. ವಾಟ್ಸ್ ಆ್ಯಪ್, ವೈಬರ್ ಮುಂತಾದ ಸವಲತ್ತುಗಳು ಮತ್ತು ಇ–ಮೇಲ್ ಬಳಸಿ ನಡೆಸುವ 90 ದಿನಗಳ ಕಾಲ ಸಂಗ್ರಹಿಸಿಟ್ಟುಕೊಳ್ಳುವ ಹೊಣೆಯನ್ನು ಬಳಕೆದಾರರ ಮೇಲೆ ಹೊರಿಸಲಾಗಿತ್ತು. ಸರ್ಕಾರ ಈ ಸಂದೇಶಗಳನ್ನು ಕೇಳಿದಾಗ ಒದಗಿಸದೇ ಇದ್ದರೆ ಜೈಲು ವಾಸದಂಥ ಶಿಕ್ಷೆಗಳನ್ನೂ ಈ ನೀತಿ ಪ್ರಸ್ತಾಪಿಸಿತ್ತು. ಅತ್ಯಂತ ಅಪ್ರಾಯೋಗಿಕವಾದ ಈ ತಥಾಕಥಿತ ‘ನೀತಿ’ಗೆ ಸಹಜವಾಗಿಯೇ ಭಾರೀ ವಿರೋಧ ವ್ಯಕ್ತವಾಯಿತು. ಸ್ವತಃ ಮಾಹಿತಿ ತಂತ್ರಜ್ಞಾನ ಸಚಿವರೇ ಮಧ್ಯಪ್ರವೇಶಿಸಿ ಕರಡನ್ನು ಹಿಂದಕ್ಕೆ ಪಡೆಯುವಂತೆ ನೋಡಿಕೊಂಡರು.

ಈ ಎರಡೂ ಘಟನೆಗಳು ಜನಪ್ರತಿನಿಧಿಗಳು ಡಿಜಿಟಲ್ ಕಂದಕದ ಯಾವ ಬದಿಯಲ್ಲಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಅಂಕಿತ್ ಫಾದಿಯಾ ಎಂಬ ‘ಹುಸಿ ತಜ್ಞ’ ಬಿರುದಾಂಕಿತ ವ್ಯಕ್ತಿಯನ್ನು ಮಹತ್ವಾಕಾಂಕ್ಷೆಯ ಯೋಜನೆಯೊಂದರ ರಾಯಭಾರಿಯನ್ನಾಗಿ ಮಾಡುವ ನಿರ್ಧಾರವನ್ನು ಯಾವ ಚತುರ ರಾಜಕಾರಣಿಯೂ ಕೈಗೊಳ್ಳುವಂಥದ್ದಲ್ಲ. ಸಾಮಾನ್ಯ ಜನರು ತಾವು ನಡೆಸುವ ಎಲ್ಲಾ ವಿದ್ಯುನ್ಮಾನ ಸಂವಹನಗಳನ್ನೂ 90 ದಿನಗಳ ಕಾಲ ಕಾದಿರಿಸಿಕೊಂಡು ಸರ್ಕಾರ ಕೇಳಿದಾಗ ಅದನ್ನು ಹಾಜರು ಪಡಿಸಬೇಕೆಂಬ ಕಾನೂನೊಂದನ್ನು ಪ್ರಜಾಪ್ರಭುತ್ವವಿರುವ ದೇಶವೊಂದರಲ್ಲಿ ಜಾರಿಗೆ ತರಬೇಕೆಂದು ಯಾವ ರಾಜಕಾರಣಿಯೂ ಆತ ಎಷ್ಟೇ ಮೂರ್ಖನಾಗಿದ್ದರೂ ಬಹಿರಂಗವಾಗಿ ಹೇಳುವುದಕ್ಕೆ ಭಯ ಪಡುವುದಂತೂ ಸತ್ಯ. ಅಂಥದ್ದರಲ್ಲಿ ಇದೆಲ್ಲಾ ಹೇಗೆ ಸಂಭವಿಸಿತು?

ಈ ಪ್ರಶ್ನೆಗೆ ದೊರೆಯುವ ಉತ್ತರ ಒಂದೇ. ರಾಜಕಾರಣಕ್ಕಿನ್ನೂ ವಿದ್ಯುನ್ಮಾನ ಕಂದಕವನ್ನು ದಾಟಲು ಸಾಧ್ಯವಾಗಿಲ್ಲ. ರಾಜಕಾರಣಕ್ಕೆ ಇರುವ ‘ಸಾಮಾನ್ಯ ಜ್ಞಾನ’ ಅಥವಾ ರಾಜಕಾರಣಿಗಳು ಹೊಂದಿರುವ ‘ದೇಸೀ ಜ್ಞಾನ’ದ ಪರಿಧಿಯೊಳಕ್ಕೆ ಡಿಜಿಟಲ್ ಜಗತ್ತಿನ್ನೂ ಪ್ರವೇಶ ಪಡೆದಿಲ್ಲ. ಪರಿಣಾಮವಾಗಿ ಟ್ವೀಟ್ ಮಾಡುವ ಪ್ರಧಾನಿಗಳಾದಿಯಾಗಿ ಎಲ್ಲರೂ ಡಿಜಿಟಲ್ ವಿಚಾರದಲ್ಲಿ ಅಧಿಕಾರಿಗಳನ್ನೇ ನಂಬುತ್ತಿದ್ದಾರೆ. ಅಧಿಕಾರಶಾಹಿ ಎಲ್ಲವನ್ನೂ ನಿಯಂತ್ರಣದ ದೃಷ್ಟಿಕೋನದಲ್ಲಿ ನೋಡುತ್ತದೆಯೇ ಹೊರತು ರಾಜಕಾರಣಿಗಳಂತೆ ಜನಕಲ್ಯಾಣದ ದೃಷ್ಟಿಕೋನದಲ್ಲಲ್ಲ. ಉಳಿದೆಲ್ಲಾ ನೀತಿಗಳ ಸಂದರ್ಭದಲ್ಲಿ ರಾಜಕಾರಣಿಗಳ ‘ದೇಸಿ ಜ್ಞಾನ’ ಕೆಲಸ ಮಾಡುತ್ತಿರುವುದರಿಂದ ಅಧಿಕಾರಶಾಹಿಯ ‘ನಿಯಂತ್ರಣ ಮೋಹ’ಕ್ಕೆ ಕಡಿವಾಣವಿರುತ್ತದೆ.

ಡಿಜಿಟಲ್ ಸಂಗತಿಗಳ ವಿಚಾರದಲ್ಲಿ ಅಧಿಕಾರಶಾಹಿಯದ್ದೇ ಕೊನೆಯ ಮಾತಾಗುತ್ತಿರುವಂತಿದೆ. ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ ಬಂದಿರುವ ಡಿಜಿಟಲ್ ಜಗತ್ತಿಗೆ ಸಂಬಂಧಿಸಿದ ನೀತಿ ನಿರೂಪಣೆಯ ಸಂದರ್ಭದಲ್ಲೆಲ್ಲಾ ಪ್ರಜಾಸತ್ತಾತ್ಮಕ ನಿಲುವಿನ ಕೊರತೆ ಕಾಣಿಸುತ್ತಿದೆ. ಇದಕ್ಕೆ ಎಡ–ಬಲದ ವ್ಯತ್ಯಾಸವೇನೂ ಇಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ ರೂಪುಗೊಂಡದ್ದು ವಾಜಪೇಯಿಯವರ ಕಾಲದಲ್ಲಿ. ಆಗಲೂ ಅದು ಸಾಕಷ್ಟು ಸಂಸದೀಯ ಚರ್ಚೆಗೆ ಒಳಪಡದೆಯೇ ಜಾರಿಯಾಗಿತ್ತು. 

ಅದಕ್ಕೆ ಅಪಾಯಕಾರಿ ತಿದ್ದುಪಡಿಗಳೆಲ್ಲಾ ಬಂದದ್ದು ಯುಪಿಎ ಅವಧಿಯಲ್ಲಿ. ಆಗಲೂ ಅದರ ಬಗ್ಗೆ ಸಂಸದೀಯ ಚರ್ಚೆಗಳು ನಡೆದದ್ದು ಬಹಳ ಕಡಿಮೆ. ಡಿಜಿಟಲ್ ವ್ಯವಹಾರಕ್ಕೆ ಸಂಬಂಧಿಸಿದ ನೀತಿಗಳನ್ನು ರಾಜಕಾರಣಿಗಳು ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ಮುಖ್ಯ ಕಾರಣ ಅವರೆಲ್ಲರೂ ಡಿಜಿಟಲ್ ಕಂದಕವನ್ನು ದಾಟದೇ ಇರುವುದು. ಅವರು ಈ ಕಂದಕವನ್ನು ದಾಟುವ ತನಕವೂ ಡಿಜಿಟಲ್ ತಂತ್ರಜ್ಞಾನ ಸಂಬಂಧೀ ನೀತಿ ನಿರೂಪಣೆಯಲ್ಲಿ ‘ದೊಡ್ಡಣ್ಣ’ ಮನೋಭಾವ ಇಲ್ಲದಂತಾಗಲು ಸಾಧ್ಯವಿಲ್ಲ ಎಂಬುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT