ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಬತ್ತಿ ಬರಿದಾದರೆ ಹುಡುಕೋಣವೆ ಮರೀಚಿಕೆ?

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

`ನೀರನ್ನು ಸೃಷ್ಟಿಸಲು ಯಾರಿಂದಲಾದರೂ ಸಾಧ್ಯವಾದರೆ ಅಂಥ ವ್ಯಕ್ತಿಗೆ ಏಕಕಾಲಕ್ಕೆ ಎರಡೆರಡು ನೊಬೆಲ್ ಪುರಸ್ಕಾರ ಸಿಗಬೇಕು: ಒಂದು ವಿಶ್ವ ಶಾಂತಿಯ ನೊಬೆಲ್; ಇನ್ನೊಂದು ವಿಜ್ಞಾನದ ನೊಬೆಲ್' ಎಂದು ತುಂಬ ಹಿಂದೆ ಜಾನ್ ಎಫ್ ಕೆನೆಡಿ ಹೇಳಿದ್ದು ನಮಗೆ ಈಗ ನೆನಪಾಗಬೇಕು. ಕಳೆದ ವಾರವಿಡೀ ವಿಧಾನಸೌಧದ ಕಡತಗಳಲ್ಲಿ ನೀರನ್ನು ಸೃಷ್ಟಿಸಲು ಏನೆಲ್ಲ ಸರ್ಕಸ್ ನಡೆಯಿತು. ಏಕೆಂದರೆ ನಮ್ಮ ರಾಜ್ಯದಲ್ಲಿ ಕುಡಿಯಲು ಬಳಸಿದ ನೀರು ಎಷ್ಟೆಂಬುದನ್ನು ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ತುರ್ತಾಗಿ ತಿಳಿಸಬೇಕಿತ್ತು.

ಬಜೆಟ್ ಮುಂಚಿನ ದಿನಗಳಲ್ಲಿ ಸಾಮಾನ್ಯವಾಗಿ ನೀರಿನ ಕುಡಿತದ ಲೆಕ್ಕಾಚಾರಕ್ಕಿಂತ ಬೇರೆ ಬಗೆಯ ಕುಡಿತಗಳ ಲವಾಜಮೆಯೇ ಮುಖ್ಯವಾಗುತ್ತದೆ. ಅಬಕಾರಿ ಇಲಾಖೆಯ ಆದಾಯವೇ ಬಜೆಟ್ ಗಾತ್ರವನ್ನು ನಿರ್ಧರಿಸುವಲ್ಲಿ  ಪ್ರಮುಖ ಪಾತ್ರವಹಿಸುತ್ತಿದೆ ವಿನಾ ಕುಡಿಯುವ ನೀರಿನ ಲೆಕ್ಕಾಚಾರಕ್ಕೆ ಆದ್ಯತೆ ಇರಲೇ ಇಲ್ಲ. ಈಗ ಹಠಾತ್ತಾಗಿ ನೀರಿನ ವ್ಯವಹಾರ ನೋಡಿಕೊಳ್ಳುವ ನೂರಾರು ಅಧಿಕಾರಿಗಳು ಎದ್ದುಬಿದ್ದು, ನೀರಿನ ಉಸ್ತುವಾರಿ ಹೊತ್ತ ಹತ್ತಾರು ಇಲಾಖೆಗಳನ್ನು ಸಂಪರ್ಕಿಸಿ, ವೇಳೆಗೆ ಸರಿಯಾಗಿ ಸುಪ್ರೀಮ್ ಕೋರ್ಟ್‌ಗೆ ಲೆಕ್ಕ ಒಪ್ಪಿಸಿದ್ದಕ್ಕೆ ಶಾಭಾಸ್ ಎನ್ನೋಣ.

2013ನೇ ಇಸವಿಯನ್ನು `ಅಂತಾರಾಷ್ಟ್ರೀಯ ಜಲ ಸಹಕಾರದ ವರ್ಷ' ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ನೀರಿನ ವಿಷಯದಲ್ಲಿ ಸಹಕಾರಕ್ಕಿಂತ ಹೆಚ್ಚಾಗಿ ಕಚ್ಚಾಟಗಳೇ ಹಿಂದೆಲ್ಲ ಹಾಸುಹೊಕ್ಕಾಗಿದ್ದವು.   ನೀರನ್ನೇ ಆಯುಧವನ್ನಾಗಿ ಝಳಪಿಸಿದವರು, ನೀರನ್ನೇ ಆತ್ಮರಕ್ಷಣೆಗಾಗಿ ಬಳಸಿದವರು, ನೀರಿನ ಮೂಲಕ್ಕೇ ಬಾಂಬ್ ಹಾಕಿದವರು ಚರಿತ್ರೆಯ ಪುಟಗಳನ್ನು ತುಂಬಿದ್ದಾರೆ. ಕೆನ್ಯಾ ದೇಶದ ಹಳ್ಳಿಯೊಂದಕ್ಕೆ 2000ದಲ್ಲಿ ನೀರನ್ನು ಪೂರೈಸಲೆಂದು ಟ್ಯಾಂಕರ್ ಕಳಿಸಿದಾಗ ಕಾಡಿನಲ್ಲಿ ಬಾಯಾರಿ ಕೂತಿದ್ದ ಕೋತಿಗಳೇ ದಂಡೆತ್ತಿ ಬಂದು  ಮುತ್ತಿಗೆ ಹಾಕಿ ಪಾಪ, ಹೆಣಗಳಾಗಿ ಬಿದ್ದವು. ನಮ್ಮ ಶರೀರದ ಶೇ.70 ಭಾಗದಲ್ಲಿ ನೀರೇ ತುಂಬಿಕೊಂಡಿದ್ದರೂ ಅದು ಇತರರ ಪಾಲಿಗೆ ಪನ್ನೀರಾಗುವ ಬದಲು ಕಣ್ಣೀರಾಗಿದ್ದೇ ಹೆಚ್ಚು.

ಅವೆಲ್ಲ ಮಾನವ ಕೇಂದ್ರಿತ ಲೆಕ್ಕಾಚಾರಗಳಾದವು. ಜಗತ್ತಿನಲ್ಲಿ ಬೇರೆ ಜೀವಿಗಳೂ ಬದುಕಬೇಕು ಎಂಬುದನ್ನು ಮರೆಯಬಾರದು ಎಂತಲೇ ಪ್ರತಿ ವರ್ಷ ಫೆಬ್ರುವರಿ 2ರಂದು  `ವಿಶ್ವ ಜೌಗುಭೂಮಿ ದಿನ' ವನ್ನು ಆಚರಿಸಲಾಗುತ್ತಿದೆ.

ಜೌಗು ಭೂಮಿ (ವೆಟ್‌ಲ್ಯಾಂಡ್ಸ್ ಅಥವಾ ತರಿ ಭೂಮಿ) ಎಂದರೆ ಸದಾಕಾಲ ನೀರು ನಿಂತಿರುವ ತಾಣ. ಕೆರೆ, ಸರೋವರ, ಅಳಿವೆ, ಕೃತಕ ಜಲಾಶಯ ಇವೆಲ್ಲವೂ ತರಿ ಭೂಮಿಯ ವ್ಯಾಪ್ತಿಯಲ್ಲಿ ಬರುತ್ತವೆ. ಕೆರೆ ಎಂದಾಕ್ಷಣ ನಮಗೆ ಬರೀ ನೀರು ಗೋಚರಿಸುತ್ತದೆ. ಅದಲ್ಲ; ಅದನ್ನು ಅದ್ಭುತ `ಜೀವ ತಿಜೋರಿ' ಎಂದೇ ಬಣ್ಣಿಸಬಹುದು. ಅಲ್ಲಿ ಮೀನು, ಕಪ್ಪೆ, ಆಮೆ, ನೀರೊಳ್ಳೆ ಹಾವು, ಲೆಕ್ಕವಿಲ್ಲದಷ್ಟು ಬಗೆಯ ಕೀಟಗಳು, ಸಿಂಪಿಗಳು, ಶೀಗಡಿಗಳು ಬದುಕಿರುತ್ತವೆ. ಆ ನೀರನ್ನು, ಅಲ್ಲಿನ ಜೀವಿಗಳನ್ನು ಆಧರಿಸಿ ಇತರ ಎಷ್ಟೋ ಬಗೆಯ ಪಕ್ಷಿ-ಪ್ರಾಣಿ ಮತ್ತು ಸಸ್ಯ ಸಂಕುಲಗಳು ಜೀವಿಸುತ್ತವೆ.

ಅತಿ ಹೆಚ್ಚು ಜೀವಿವೈವಿಧ್ಯವನ್ನು ಪೋಷಿಸುವ ಜೌಗುಭೂಮಿಯನ್ನು ಅಂತಾರಾಷ್ಟ್ರೀಯ ಮಾನದಂಡದಲ್ಲಿ `ರಾಮ್‌ಸಾರ್ ಸೈಟ್' ಎನ್ನುತ್ತಾರೆ. ಜೌಗುತಾಣಗಳ ಸಂರಕ್ಷಣೆ ಕುರಿತು 1971ರ ಫೆಬ್ರುವರಿ 2ರಂದು ಇರಾನಿನ ರಾಮ್‌ಸಾರ್ ಎಂಬಲ್ಲಿ ಜಾಗತಿಕ ಸಮ್ಮೇಳನ ನಡೆದಿತ್ತು. ವಿಶ್ವಸಂಸ್ಥೆಯ ನೇತೃತ್ವದ ಆ ಸಮಾವೇಶದ ನಂತರ ಭಾರತವೂ ಸೇರಿದಂತೆ 160 ರಾಷ್ಟ್ರಗಳು ತಂತಮ್ಮ ತರಿಭೂಮಿಯನ್ನು ಸಂರಕ್ಷಿಸುವುದಾಗಿ ಸಹಿ ಹಾಕಿದವು (ಅಂದಹಾಗೆ, ರಾಮ್ ಸರ್ ಎಂದರೆ  `ರಾಮನ ಸರೋವರ'.

ಇಂಡೊ-ಆರ್ಯನ್ ಪ್ರಭಾವ ಹಿಂದೆ ಮಧ್ಯಪ್ರಾಚ್ಯದವರೆಗೂ ವಿಸ್ತರಿಸಿತ್ತು ಎಂಬುದನ್ನು ಇದು ಸಂಕೇತಿಸುತ್ತದೆ). ಗರಿಷ್ಠ ಸಂಖ್ಯೆಯ ಜೀವಿಗಳನ್ನು ಪೋಷಿಸುವ ಜಲಾಶಯಗಳನ್ನು `ರಾಮಸಾರ್ ಸೈಟ್' ಎಂದು ಘೋಷಿಸುವ ಬಗ್ಗೆ ಅಂದು ಒಪ್ಪಂದವೂ ಏರ್ಪಟ್ಟು, ಮಾನದಂಡಗಳನ್ನು ನಿಗದಿ ಮಾಡಲಾಯಿತು. ಹಾಗೆ ಘೋಷಿತವಾದ ಜಲನಿಧಿಗೆ ಅಂತಾರಾಷ್ಟ್ಟ್ರೀಯ ಮನ್ನಣೆ ಸಿಗುತ್ತದೆ; ಅದರ ನಿರಂತರ ಸಂರಕ್ಷಣೆಗೆ (ಅಗತ್ಯ ಬಿದ್ದರೆ) ಹಣಕಾಸಿನ ನೆರವೂ ಸಿಗುತ್ತದೆ. ಸಹಜವಾಗಿ ಅದೊಂದು ಪ್ರವಾಸೀ ಆಕರ್ಷಣೆಯಾಗಿ ನಾಡಿನ ಜೀವಪ್ರೀತಿಯ ದ್ಯೋತಕವಾಗಿ, ಪೀಳಿಗೆಯಿಂದ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸಬೇಕಾದ ಹೆಮ್ಮೆಯ ತಾಣವಾಗಿ ಉಳಿಯುತ್ತದೆ. ಉಳಿಯಬೇಕು.   

ಜಗತ್ತಿನಲ್ಲಿ ಇದುವರೆಗೆ ಒಟ್ಟೂ 1950 ಜಲಾಶಯಗಳಿಗೆ `ರಾಮ್‌ಸರ್ ಸೈಟ್' ಎಂಬ ಹಣೆಪಟ್ಟಿ ನೀಡಲಾಗಿದೆ. ನಾವದನ್ನು `ರಾಮ ಸರೋವರ'  ಎನ್ನಬಹುದು. ಇಂಗ್ಲೆಂಡಿನಂಥ ಪುಟ್ಟ ರಾಷ್ಟ್ರದಲ್ಲಿ 168 ತಾಣಗಳಿವೆ. ಭಾರತದಂಥ ಬೃಹತ್ ರಾಷ್ಟ್ರದಲ್ಲಿ ಕೇವಲ 25 ಜಲಾಶಯಗಳು `ರಾ ಸರೋವರ'  ಎಂಬ ಅಭಿಧಾನಕ್ಕೆ ಪಾತ್ರವಾಗಿವೆ. ಕೇರಳದ ಅಷ್ಟಮುಡಿ ಕೆರೆ, ಒಡಿಶಾದ ಚಿಲಿಕಾ ಸರೋವರ, ಆಂಧ್ರಪ್ರದೇಶದ ಕೊಲ್ಲೇರು ಜಲಾಶಯ, ತಮಿಳು ನಾಡಿನ ಕಾವೇರಿ ಡೆಲ್ಟಾ ಬಳಿಯ ವೇದಾರಣ್ಯಂ ಪಕ್ಷಿಧಾಮ, ಗಂಗಾನದಿಯ ಬ್ರಿಜ್‌ಘಾಟ್, ರಾಜಸ್ತಾನದ ಸಂಭರ್ ಮುಂತಾದವು ಈ ಪಟ್ಟಿಯಲ್ಲಿ ಬರುತ್ತವೆ. ಕೇರಳದಲ್ಲಿ ನಾಲ್ಕು ಜಲಾಶಯಗಳಿಗೆ ಈ ಮುಕುಟ ಸಿಕ್ಕಿದೆ. ಕರ್ನಾಟಕದಲ್ಲಿ ಒಂದೂ ಇಲ್ಲ!
ರಾಷ್ಟ್ರದ ಹೆಮ್ಮೆಯ ಸಂಕೇತಗಳನ್ನು ಜಾಗತಿಕ ಮಟ್ಟದಲ್ಲಿ ಮೇಲೆತ್ತಿ ತೋರಿಸುವಲ್ಲಿ ನಾವು ತೀರಾ ಹಿಂದಿದ್ದೇವೆ.

ಗಣರಾಜ್ಯ ಪರೇಡ್‌ನಲ್ಲಿ ವಿಧ್ವಂಸಕ ಮಿಲಿಟರಿ ಶಸ್ತ್ರಾಭರಣಗಳನ್ನು ಝಳಪಿಸಿ ಮೆರೆಯುವ ನಾವು ನೊಬೆಲ್ ಪಾರಿತೋಷಕದ ಅಥವಾ ಒಲಿಂಪಿಕ್ ಮೆಡಲ್‌ಗಳ ವಿಷಯ ಬಂದಾಗ ನಿರ್ವಿಣ್ಣರಾಗುತ್ತೇವೆ. ಸುಭದ್ರ ಮಾನವ ಸಾಮ್ರೋಜ್ಯವನ್ನು ನಿರ್ಮಿಸುವಲ್ಲಿ ನಾವಿನ್ನೂ ಪಳಗಿಲ್ಲ ಎಂದುಕೊಳ್ಳೋಣ. ಆದರೆ ನಮ್ಮ ನಿಸರ್ಗ ಸಾಮ್ರೋಜ್ಯ ತುಂಬಾ ಕಟ್ಟುಮಸ್ತಾಗಿತ್ತು. ಬ್ರಿಟಿಷರು ಅದನ್ನು ಎಷ್ಟೇ ದೋಚಿದ್ದರೂ, ನೀರನ್ನೇನೂ ಸಾಗಿಸಲಿಲ್ಲ. ಮಲೇರಿಯಾ ಹಾವಳಿ ತಡೆಗಟ್ಟಲೆಂದು ಮಲೆನಾಡಿನ ಅನೇಕ ಜೌಗುಭೂಮಿಯನ್ನು ಖಾಲಿ ಮಾಡಿಸಿದ್ದರು ನಿಜ. ಆದರೆ ಅನೇಕ ಜಲಾಶಯಗಳನ್ನೂ ನಿರ್ಮಿಸಿದ್ದರು. ಜಲಸಂರಕ್ಷಣೆಗೆ ಕಟ್ಟುಪಾಡುಗಳನ್ನು ವಿಧಿಸಿದ್ದರು. ಐವತ್ತು ವರ್ಷಗಳಲ್ಲಿ ಈ ನಿಸರ್ಗ ಸಾಮ್ರೋಜ್ಯ ಹೇಳತೀರದಷ್ಟು ಶಿಥಿಲವಾಗಿದೆ. ಪಾರಂಪರಿಕ ಜಲತೊಟ್ಟಿಗಳನ್ನಂತೂ ದಿನಕ್ಕೊಂದೊಂದರಂತೆ ಕಳೆದುಕೊಳ್ಳುತ್ತಿದ್ದೇವೆ.

ಹಾಗೆ ನೋಡಿದರೆ ನಮ್ಮ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆಯಬಹುದಾದ ಅನೇಕ  ಜಲಾಶಯಗಳಿವೆ. ಗದಗದ ಬಳಿಯ ಮಾಗಡಿ ಕೆರೆ, ಹಾವೇರಿ ಬಳಿಯ ಹೇಗೇರು ಜಲಾಶಯ, ದಾವಣಗೆರೆಯ ಸೂಳೆಕೆರೆ, ಬಿಳಿಗಿರಿ ರಂಗನ ಬೆಟ್ಟದ ಬಳಿಯ ಗುಂಡಾಲು ಕೆರೆ, ಅಘನಾಶಿನಿ ಅಳಿವೆ, ಬೆಂಗಳೂರಿನ ಜಕ್ಕೂರು ಕೆರೆ ಇವೆಲ್ಲಕ್ಕೂ  `ರಾಮ ಸರೋವರ'  ಎನ್ನಿಸಿಕೊಳ್ಳುವ ಅರ್ಹತೆ ಇದೆ;  ಆದರೆ ಅವಕ್ಕೆ ಮಾನ್ಯತೆ ದೊರಕಿಸಿಕೊಳ್ಳಬೇಕಾದ ಇಚ್ಛಾಶಕ್ತಿ ನಮ್ಮಲ್ಲಿಲ್ಲ  ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಪಕ್ಷಿತಜ್ಞ ಡಾ. ಹರೀಶ್ ಭಟ್.

ನಮ್ಮ ಆಡಳಿತ ಯಂತ್ರವನ್ನು ಬಳಸಿ, ಕರ್ನಾಟಕದ ಈ ಜಲಾಶಯಗಳಲ್ಲಿ ಏನೆಲ್ಲ ವಿಶೇಷಗಳಿವೆ ಎಂಬುದರ ಪಟ್ಟಿಯನ್ನು ತಯಾರಿಸಿ, ಭಾರತೀಯ ವನ್ಯರಕ್ಷಣಾ ಸದಸ್ಯ ಸಂಸ್ಥೆಗಳ ಮುಂದಿಟ್ಟು ಅವರ ಮೂಲಕ ಯುನೆಸ್ಕೊ ತಜ್ಞರ ಮನವೊಲಿಸಬೇಕು. ಅಕ್ಕಪಕ್ಕದ ರಾಜ್ಯಗಳೆಲ್ಲ ಈ ಕೆಲಸವನ್ನು ಎಂದೋ ಮಾಡಿವೆ. ನಮಗೆ ಮಾತ್ರ ಇಂಥ ವಿಷಯಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಶಾಶ್ವತ ಬರಗಾಲ ಬಂದಂತಿದೆ. ಹೇಳಿಕೇಳಿ, ನಮ್ಮ ಅರಣ್ಯಗಳಿಗೆ  ವಿಶ್ವ ಪರಂಪರೆಯ  ಮಾನ್ಯತೆ ನೀಡುವ ಪ್ರಶ್ನೆ ಬಂದಾಗ ವಿಧಾನ ಸಭೆಯಲ್ಲಿ ತುಸುವೂ ಚರ್ಚೆ ನಡೆಸದೆ  `ನಮಗದು ಬೇಡ'  ಎಂದು ಒಂದೇ ವಾಕ್ಯದಲ್ಲಿ ತೀರ್ಮಾನ ಕೈಗೊಂಡ ಸರ್ಕಾರ ನಮ್ಮದು. ನಿಸರ್ಗ ಸಂಪತ್ತನ್ನು ಒತ್ತುವರಿ ಮಾಡಿಕೊಳ್ಳುವ ಪ್ರಚಂಡರ ಮಧ್ಯೆ ನಾಡಿನ ವನ್ಯಪ್ರೇಮಿಗಳು, ಪಕ್ಷಿತಜ್ಞರು ಹಾಗೂ ಜಲಸಂರಕ್ಷಕರ ದನಿ ಅಡಗಿ ಹೋಗುತ್ತಿದೆ.

ತರಿಭೂಮಿಯ, ಜೌಗುಮಂಡಲದ ಮಹತ್ವ ಕೇವಲ ಪ್ರಾಣಿಪಕ್ಷಿಗಳಿಗೆ ಸೀಮಿತವಾಗಿಲ್ಲ. ಅತಿವೃಷ್ಟಿಯ ದಿನಗಳಲ್ಲಿ ನೆರೆಹಾವಳಿ ತಡೆಗಟ್ಟಿ, ಬೇಸಿಗೆಯಿಡೀ ಅಂತರ್ಜಲವನ್ನು ಅವು ಕಾಪಾಡಿಕೊಳ್ಳುತ್ತವೆ. ಹೂಳನ್ನು ತಡೆಹಿಡಿದು ಜೀವಪೋಷಕ ಅಂಶಗಳನ್ನು ದಾಸ್ತಾನು ಮಾಡುತ್ತವೆ. ನೀರಾವರಿಗೆ, ಮೀನುಗಾರಿಕೆಗೆ, ಕುಡಿಯುವ ನೀರಿಗೆ ಆಧಾರವಾಗಿ ಪ್ರವಾಸಿಗಳನ್ನು ಕೈಬೀಸಿ ಕರೆಯಬೇಕಿದ್ದ ನಮ್ಮ ಜಲಾಶಯಗಳೆಲ್ಲ ತೀರ ದುಃಸ್ಥಿತಿಯಲ್ಲಿವೆ. ಕೃಷಿ ರಸಾಯನಗಳ ಹಾವಳಿುಂದಾಗಿ ಹೇರಳ ಕಳೆ ಬೆಳೆಸಿಕೊಂಡು ದುರ್ನಾತ ಸೂಸುವ ಕೆಸರು ಕೊಳೆಮಡುಗಳಾಗಿವೆ.

ಕಂಡಕಂಡಲ್ಲಿ ಕೊಳವೆಬಾವಿ ಕೊರೆದಿದ್ದರ ಪರಿಣಾಮವಾಗಿ ಕೆರೆಗಳು ಬತ್ತಿಹೋಗಿವೆ.  ಹಾವಳಿಯಿಂದಾಗಿ ಒಣಗಿ ನಿಂತಿವೆ. ನಗರಗಳ ಆಸುಪಾಸಿನ ಕೆರೆಗಳಂತೂ ಕೈಗಾರಿಕಾ ತ್ಯಾಜ್ಯಗಳ, ಆಸ್ಪತ್ರೆ ಕೊಳಕುಗಳ ಹಾಗೂ ಚರಂಡಿದ್ರವ್ಯಗಳ ರೊಚ್ಚೆಗುಂಡಿಗಳಾಗಿವೆ.

ರಾಮಸರ್ ಕತೆ ಹೇಗೂ ಇರಲಿ, ಸಾಮಾನ್ಯ ಕೆರೆ ಕಟ್ಟೆಗಳ ಮಹತ್ವವನ್ನು ಪಂಚಾಯ್ತಿ ಮಟ್ಟದಲ್ಲಿ ಜನರಿಗೆ ಅಥವಾ ಶಾಲಾ ಮಕ್ಕಳಿಗೆ ತಿಳಿಸಲು ಸರ್ಕಾರಿ ಮಾಧ್ಯಮಗಳಲ್ಲಿ ಒಂದು ಕಿರುಪುಸ್ತಕ ಇಲ್ಲ, ಕರಪತ್ರ ಇಲ್ಲ, ಭಿತ್ತಿಪತ್ರ ಇಲ್ಲ, ಅನಕ್ಷರಸ್ಥರಿಗಾಗಿ ಒಂದು ವಿಡಿಯೊ ಇಲ್ಲ. ಕೆರೆಗಳತ್ತ ಒಂದು ಜಾಥಾ ಇಲ್ಲ, ಮಾನವ ಸರಪಳಿ ಇಲ್ಲ.

`ಜೌಗುಭೂಮಿ ದಿನಾಚರಣೆ'ಗೆ ಇನ್ನಾದರೂ ಮಹತ್ವ ನೀಡಬೇಕು. ಪ್ರತಿ ಪಂಚಾಯ್ತಿಯಲ್ಲಿ, ಪ್ರತಿ ಪ್ರೌಢಶಾಲೆಯಲ್ಲಿ,  ತರಿಭೂಮಿಯ ಜೀವಿವೈವಿಧ್ಯ ಸಮೀಕ್ಷೆ ನಡೆಯಬೇಕು. ಮೂರು ವರ್ಷಗಳಿಗೊಮ್ಮೆ ಹೂಳೆತ್ತುವ ಕೆಲಸವನ್ನು ಜನರೇ ಯುದ್ಧದೋಪಾದಿ ಅಲ್ಲದಿದ್ದರೂ ಹಬ್ಬದೋಪಾದಿ ಕೈಗೆತ್ತಿಕೊಳ್ಳುವಂತೆ ಪ್ರೇರಣೆ ನೀಡಬೇಕು. ಚುನಾವಣೆಗೆ ಸಜ್ಜಾಗುತ್ತಿರುವ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಜಲಮೂಲಗಳ ರಕ್ಷಣೆಗಾಗಿ ಏನು ಮಾಡಲಿದ್ದೇವೆ ಎಂಬುದನ್ನು ತಿಳಿಸಬೇಕು. ಅಧಿಕಾರದ ಗದ್ದುಗೆ ಸಿಗದಿದ್ದರೆ ಪ್ರಣಾಳಿಕೆಗೇ ತರ್ಪಣ ಕೊಡುವ ಬದಲು ಜಲಸಂಘಟನೆಯ ಕೆಲಸವನ್ನು ಜಾರಿಯಲ್ಲಿಡಬೇಕು.

ಬರಲಿರುವ ಜಲಕ್ಷಾಮದಲ್ಲಿ ಬೆಂಗಳೂರಿಗೆ ಬದಲೀ ನೀರನ್ನು ಎಲ್ಲಿಂದ ತರೋಣವೆಂಬ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆಯುತ್ತಿದೆ. ರಾಜಧಾನಿಗೆ ನೀರನ್ನು ಜಾಸ್ತಿ ತಂದಷ್ಟೂ ಜಾಸ್ತಿ ಜನರು ಇಲ್ಲಿಗೇ ವಲಸೆ ಬರುತ್ತಾರೆ.  `ಬೆಂಗಳೂರಿನ ಚಿಂತೆ ಬಿಡ್ರೀ, ಇಲ್ಲಿನ ಧನಿಕರು ಬಾಟಲಿ ನೀರನ್ನಾದರೂ ಕುಡಿದು ಬದುಕಬಹುದು. ತೀರಾ ಬಿಸಿ ತಟ್ಟಿದರೆ ತ್ಯಾಜ್ಯ ನೀರನ್ನಾದರೂ ಮರುಬಳಕೆ ಮಾಡಿ ಬಳಸಬಹುದು. ಆದರೆ ಸಣ್ಣ ಪಟ್ಟಣಗಳ ಜನರು, ಹಳ್ಳಿಯ ಜನರು ಎಲ್ಲಿ ಹೋಗಬೇಕು? ಅವರ ಬೇಡಿಕೆಗೆ ಆದ್ಯತೆ ಕೊಡೋಣ; ವಲಸೆಗೆ ಮಿತಿ ಹಾಕೋಣ'  ಎಂದು ನಿವೃತ್ತ ಅಭಿವೃದ್ಧಿ ಆಯುಕ್ತ ಚಿರಂಜೀವಿ ಸಿಂಗ್ ಈಚೆಗೆ ಹೇಳಿದ್ದರು. ಅದು ನಿಜವೂ ಹೌದು, ಇಲ್ಲೇ ಬೀಡುಬಿಟ್ಟ ಉನ್ನತ ಅಧಿಕಾರಿಗಳ ಗಮನವನ್ನು ಹಳ್ಳಿಗಳತ್ತ ತಿರುಗಿಸುವುದು ಅಷ್ಟೇ ಕಷ್ಟವೂ ಹೌದು.

ನಾವು ಎಷ್ಟು ನೀರನ್ನು ಕುಡಿದಿದ್ದೇವೆ ಎಂಬ ಲೆಕ್ಕವನ್ನು ಭಲೇ ಚುರುಕಾಗಿ ನಮ್ಮ ಅಧಿಕಾರಿಗಳು ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಆದರೆ ಹೇಗೆ ಕುಡಿದಿದ್ದೇವೆ ಎಂಬುದಕ್ಕೆ ಅವರಲ್ಲಿ ಲೆಕ್ಕವಿಲ್ಲ. ಕುಡಿಯುವ ನೀರಿನ ಜೋರು ಜೆಟ್ ಹಾಯಿಸುತ್ತ ದೊಡ್ಡವರ ಲಕ್ಷುರಿ ಕಾರುಗಳನ್ನು, ಹಸುರು ಹುಲ್ಲುಹಾಸನ್ನು ತೋಯಿಸಿ ತೊಳೆಯುವ ಚಿತ್ರ ಒಂದೆಡೆ; ಸೈಕಲ್ಲುಗಳಿಗೆ ಕೊಳಕು ಕೆರೆನೀರಿನ ಬಿಂದಿಗೆಗಳನ್ನು ಕಟ್ಟಿ ತರುವವರು ಇನ್ನೊಂದು ಕಡೆ. ಫ್ಲೋರೈಡ್, ಆರ್ಸೆನಿಕ್ ವಿಷಭರಿತ ನೀರನ್ನೇ ಅನಿವಾರ್ಯವಾಗಿ ಕುಡಿಯಬೇಕಾದ ಟೊಂಕ ಬಾಗಿದ ಯುವಕರು ಮತ್ತೊಂದು ಕಡೆ. ಹೊಸ ನೀರನ್ನು ವಿಜ್ಞಾನಿಗಳು ಸೃಷ್ಟಿಸಲಾರರು ನಿಜ. ಆದರೆ ಹಳೆ ನೀರಿನ ಮರುಬಳಕೆಗೆ ಅವರು ಸೂಚಿಸುವ ಮಾರ್ಗೋಪಾಯಗಳನ್ನಾದರೂ ಜಾರಿಗೆ ತರಬೇಡವೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT