ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ ಶಾಲೆ: ಅರ್ಥಹೀನ ತಕರಾರು

Last Updated 11 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕರ್ನಾಟಕದ ರಾಜ್ಯ ವಿಶ್ವವಿದ್ಯಾಲಯಗಳಿಗೆ ವಿಶ್ವ ದರ್ಜೆಯ ಶಿಕ್ಷಣ ನೀಡಬಲ್ಲ ಮತ್ತು ಮೌಲಿಕ ಸಂಶೋಧನೆಗೆ ಅನುವು ಮಾಡಿಕೊಡುವ ವಿಭಾಗವನ್ನಾಗಲಿ ಅಥವಾ ಸ್ವಾಯತ್ತ ಸಂಸ್ಥೆಯನ್ನಾಗಲಿ ಕಟ್ಟುವ ಸಾಮರ್ಥ್ಯವಿದೆಯೇ? 1000 ದಿನಗಳನ್ನು ಪೂರೈಸಿರುವ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಉನ್ನತ ಶಿಕ್ಷಣ ಕ್ಷೇತ್ರವನ್ನು ಹೇಗೆ ನಿಭಾಯಿಸುತ್ತಿದೆ ಎಂದು ಕೇಳಿಕೊಳ್ಳಲೂ ಇದೊಂದು ಅವಕಾಶ.

ಈ ಪ್ರಶ್ನೆಯನ್ನು ಎತ್ತಲು ಇಂದಿನ ಸಂದರ್ಭವೆಂದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೀತಾರಾಮ್ ಜಿಂದಾಲ್‌ರ ಹೆಸರಿನಲ್ಲಿ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸುವ ಕುರಿತಾದ ವಿವಾದ. ಈ ಉದ್ದೇಶಕ್ಕಾಗಿ ಜಿಂದಾಲ್ ಫೌಂಡೇಶನ್ ₹ 150 ಕೋಟಿಗಳನ್ನು ವೆಚ್ಚ ಮಾಡಿ, ಮೂಲಸೌಕರ್ಯಗಳನ್ನು ಸೃಷ್ಟಿಸಲು ಒಪ್ಪಿತ್ತು. ಜಿಂದಾಲ್ ಅರ್ಥಶಾಸ್ತ್ರ ಸಂಸ್ಥೆಯ ಸ್ಥಾಪನೆಯ ಪ್ರಸ್ತಾವ ಹೊಸದೇನಲ್ಲ. 2011ರಿಂದಲೇ ಚರ್ಚಿತವಾಗುತ್ತಿದೆ ಮತ್ತು ಹಿಂದೆಯೂ ವಿವಾದಕ್ಕೊಳಗಾಗಿತ್ತು. ಕಳೆದ ವರ್ಷ ಮತ್ತೆ ಚಾಲನೆ ಪಡೆದ ಪ್ರಸ್ತಾವ, 2015ರ ಅಕ್ಟೋಬರ್‌ನಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಒಪ್ಪಿಗೆಯನ್ನೂ ಪಡೆದಾಗಿತ್ತು. ಆದರೆ ಪುನಃ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜಿಂದಾಲ್ ಫೌಂಡೇಶನ್ ತನ್ನ ಪ್ರಸ್ತಾವವನ್ನು ವಾಪಸು ಪಡೆದಿದೆ.

ಬೆಂಗಳೂರು ವಿಶ್ವವಿದ್ಯಾಲಯವು ಜಿಂದಾಲ್ ಫೌಂಡೇಶನ್ ಜೊತೆಗೆ ಮಾಡಿಕೊಂಡ ಒಡಂಬಡಿಕೆಯು ಅರ್ಥಶಾಸ್ತ್ರ ವಿಭಾಗವನ್ನು ಮೇಲ್ದರ್ಜೆಗೇರಿಸಲು ಮೂಲ ಸೌಕರ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಬಹುಶಃ ವಿಭಾಗವೊಂದಕ್ಕೆ ಸೌಕರ್ಯ ಒದಗಿಸುವುದಷ್ಟೇ ಈ ಯೋಜನೆಯ ಉದ್ದೇಶವಾಗಿದ್ದರೆ ಯಾವ ವಿವಾದವೂ ಸೃಷ್ಟಿಯಾಗುತ್ತಿರಲಿಲ್ಲವೇನೊ. ಆದರೆ ಅರ್ಥಶಾಸ್ತ್ರ ವಿಭಾಗವನ್ನು ಉನ್ನತೀಕರಿಸಿ, ಜಿಂದಾಲ್ ಸ್ಕೂಲ್‌ ಆಫ್‌ ಎಕನಾಮಿಕ್ಸ್ (ಅರ್ಥಶಾಸ್ತ್ರ ಶಾಲೆ) ಅನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯೂ ಈ ಯೋಜನೆಯ ಹಿಂದಿದೆ. ಇದಕ್ಕೆ ಮಾದರಿಯಾಗಿ ಲಂಡನ್ ಸ್ಕೂಲ್ ಆಫ್‌ ಎಕನಾಮಿಕ್ಸ್ (ಎಲ್.ಎಸ್.ಇ.) ಅನ್ನು ಆಗಾಗ್ಗೆ ಪ್ರಸ್ತಾಪಿಸಲಾಗಿದ್ದರೂ, ಹೆಚ್ಚು ಪ್ರಸ್ತುತವಾದ ಮಾದರಿ ದೆಹಲಿ ವಿಶ್ವವಿದ್ಯಾಲಯದ ಅಂಗವಾಗಿರುವ ದೆಹಲಿ ಸ್ಕೂಲ್ ಆಫ್‌ ಎಕನಾಮಿಕ್ಸ್ (ಡಿ.ಎಸ್.ಇ) ಎಂದು ನನಗನ್ನಿಸುತ್ತದೆ. ಯಾಕೆಂದರೆ 1895ರಲ್ಲಿ ಸ್ಥಾಪಿತವಾದ ಎಲ್.ಎಸ್.ಇ. ಸುಮಾರು 10,600 ವಿದ್ಯಾರ್ಥಿಗಳು (ಇವರ ಪೈಕಿ ಶೇ 70ರಷ್ಟು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು), 26 ವಿಭಾಗಗಳು ಮತ್ತು ಸುಮಾರು ₹ 3000 ಕೋಟಿ ವಾರ್ಷಿಕ ಆದಾಯವಿರುವ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯ. ಸಮಾಜವಿಜ್ಞಾನಗಳ ಅಂತರಶಿಸ್ತೀಯ ಅಧ್ಯಯನಕ್ಕೆ ಹೆಸರುವಾಸಿಯಾದುದು.

ದೆಹಲಿ ಸ್ಕೂಲ್ ಸಹ ಎಲ್.ಎಸ್.ಇ.ಯ ಮಾದರಿಯನ್ನು ಅನುಸರಿಸಿ 1949ರಲ್ಲಿ ಸ್ಥಾಪಿತವಾದ ಸಂಸ್ಥೆ. ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಸ್ವತಂತ್ರ ಭಾರತದ ಹೊಸ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸಲು ಅಗತ್ಯವಾದ ಜ್ಞಾನ, ತಂತ್ರಜ್ಞಾನ ಮತ್ತು ನೈಪುಣ್ಯ ಸೃಷ್ಟಿಸುವ ಸಂಸ್ಥೆಗಳನ್ನು ಕಟ್ಟುವ ಗುರಿಯನ್ನು ಹೊಂದಿದ್ದವರು. ಅದರ ಅಂಗವಾಗಿಯೇ ಹುಟ್ಟುಹಾಕಿದ ಐಐಟಿ, ಐಐಎಮ್‌ಗಳಂತಹ ಸಂಸ್ಥೆಗಳ ಸಾಲಿಗೆ ದೆಹಲಿ ಸ್ಕೂಲ್ ಸಹ ಸೇರುತ್ತದೆ. ವಿ.ಕೆ.ಆರ್.ವಿ. ರಾವ್ ಸ್ಥಾಪಿಸಿದ ದೆಹಲಿ ಸ್ಕೂಲಿನಲ್ಲಿ ಅಮರ್ತ್ಯ ಸೆನ್, ಜಗದೀಶ್ ಭಗವತಿ, ಮನಮೋಹನ್ ಸಿಂಗ್, ಕೌಶಿಕ್ ಬಸು ಮತ್ತಿತರ ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಬೋಧಿಸಿದ್ದಾರೆ. ಅರ್ಥಶಾಸ್ತ್ರ ವಿಭಾಗದ ಜೊತೆಗೆ ಎಂ.ಎನ್.ಶ್ರೀನಿವಾಸ್, ಆಂದ್ರೆ ಬೆತೆ ಮತ್ತಿತರರು ಇದ್ದ ಸಮಾಜಶಾಸ್ತ್ರ ವಿಭಾಗ, ಭೂಗೋಳಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರವಿಭಾಗಗಳೂ ಇವೆ. ದೆಹಲಿ ಸ್ಕೂಲನ್ನು ನಾನಿಲ್ಲಿ ಪ್ರಸ್ತಾಪಿಸಲು ಕಾರಣವೆಂದರೆ ಅದು ದೆಹಲಿ ವಿಶ್ವವಿದ್ಯಾಲಯದ ಚೌಕಟ್ಟಿನೊಳಗೆ ಒಂದು ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಕಳೆದ 66 ವರ್ಷಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡಿರುವ ಈ ಸಂಸ್ಥೆ ಅಂತರಶಿಸ್ತೀಯ ಅಧ್ಯಯನಕ್ಕೆ ಮಹತ್ವ ನೀಡುತ್ತದೆ. ಹಾಗಾಗಿ ಜಿಂದಾಲ್ ಯೋಜನೆಗೆ ಇದೊಂದು ಅನುಕರಣೀಯ ಮಾದರಿ.

ಜಿಂದಾಲ್ ಯೋಜನೆ ಅನುಷ್ಠಾನ ಸಂಬಂಧಿತ ಕ್ಲಿಷ್ಟತೆಗಳನ್ನು ಎರಡು ನೆಲೆಗಳಲ್ಲಿ ನೋಡಬಹುದು. ಮೊದಲಿಗೆ, ಈ ಯೋಜನೆಯ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಕೆಲವು ಸದಸ್ಯರು ತಕರಾರು ಎತ್ತಿದ್ದಾರೆ. ಜಿಂದಾಲ್ ಸ್ಕೂಲ್ ವಿಶ್ವವಿದ್ಯಾಲಯದೊಳಗೆ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಅಸಮಾಧಾನವಿದೆ. ವಿಶ್ವವಿದ್ಯಾಲಯವು ಮಾಡಿಕೊಂಡಿರುವ ಒಡಂಬಡಿಕೆಯ ಕೆಲವು ಕರಾರುಗಳನ್ನು ಪ್ರಶ್ನಿಸಲಾಗಿದೆ. ಉದಾಹರಣೆಗೆ, ಜಿಂದಾಲ್ ಫೌಂಡೇಶನ್ ಈ ಶಾಲೆಗಾಗಿ ನಿರ್ಮಿಸಲಾಗುವ ಹೊಸ ಕಟ್ಟಡದ ನಿರ್ಮಾಣದ ಉಸ್ತುವಾರಿ ವಹಿಸಲು ಉತ್ಸುಕವಾಗಿತ್ತು. ವಾಸ್ತುಶಿಲ್ಪಿಗಳ ಮತ್ತು ಗುತ್ತಿಗೆದಾರರ ಆಯ್ಕೆ, ಹಣ ಬಿಡುಗಡೆ ಇತ್ಯಾದಿ ಜವಾಬ್ದಾರಿಗಳನ್ನು ತಾನೇ ವಹಿಸಿಕೊಂಡು, ಕಟ್ಟಡ ನಿರ್ಮಾಣವಾದ ನಂತರ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸುವುದಾಗಿ ಫೌಂಡೇಶನ್ ತಿಳಿಸಿತ್ತು. ಜೊತೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಐವರು ವಿದ್ಯಾರ್ಥಿನಿಯರಿಗೆ ಅವಕಾಶ ನೀಡಬೇಕೆಂದು ಕೇಳಿದ್ದ ಫೌಂಡೇಶನ್ ಅವರ ಖರ್ಚು-ವೆಚ್ಚ ನಿರ್ವಹಿಸಲು ಸಿದ್ಧವಿತ್ತು. ಜೊತೆಗೆ ಜಿಂದಾಲ್ ಶಾಲೆಯ ಆಡಳಿತ ಮಂಡಳಿಯಲ್ಲಿ ಫೌಂಡೇಶನ್ ನೇಮಿಸಿದ ಸದಸ್ಯರೊಬ್ಬರಿರಬೇಕೆಂದು ಕರಾರಿತ್ತು. ಒಡಂಬಡಿಕೆಯ ಕರಾರುಗಳು ವಿಶ್ವವಿದ್ಯಾಲಯದ ಸ್ವಾಯತ್ತತೆಗೆ ಧಕ್ಕೆ ತರುತ್ತಿವೆ ಎಂದು ಈ ಯೋಜನೆಯ ಟೀಕಾಕಾರರು ವಾದಿಸುತ್ತಾರೆ. ಈ ವಿರೋಧದ ಹಿನ್ನೆಲೆಯಲ್ಲಿ ಜಿಂದಾಲ್ ಫೌಂಡೇಶನ್ ತನ್ನ ಯೋಜನೆಯನ್ನು ಕೈಬಿಟ್ಟಿದೆ. ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ಈ ಯೋಜನೆಯ ಪರವಾಗಿದ್ದರೂ ಜಿಂದಾಲ್ ಶಾಲೆ ಸ್ಥಾಪನೆಯಾಗುವ ಬಗ್ಗೆ ಅನುಮಾನಗಳಿವೆ.

ಜಿಂದಾಲ್ ಒಡಂಬಡಿಕೆಯ ಕುರಿತಾದ ಈ ತಕರಾರುಗಳನ್ನು ಹೇಗೆ ನೋಡಬೇಕು? ಜಿಂದಾಲ್ ಫೌಂಡೇಶನ್ ತನ್ನ ದತ್ತಿಯನ್ನು ಯಾವುದೇ ಷರತ್ತನ್ನು ಹಾಕದೇ ನೀಡಬೇಕು ಎನ್ನುವಂತೆ ಟೀಕಾಕಾರರು ಹೇಳುತ್ತಿರುವಂತಿದೆ. ಯೋಜನೆಯ ವಿರೋಧಿಗಳು ಖಾಸಗಿ ಸಹಭಾಗಿತ್ವದ ವಿರುದ್ಧ ತತ್ವಬದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎನಿಸುತ್ತಿಲ್ಲ. ವಿಶ್ವವಿದ್ಯಾಲಯ ತನ್ನ ಸ್ವಾಯತ್ತತೆ ಕಳೆದುಕೊಳ್ಳುತ್ತಿದೆ ಎಂಬ ಮಾತೂ ಅರ್ಥಹೀನ. ಏಕೆಂದರೆ ಜಿಂದಾಲ್ ಶಾಲೆ ಸ್ವಾಯತ್ತ ಸಂಸ್ಥೆಯಾಗಿ, ಉತ್ಕೃಷ್ಟ ಬೌದ್ಧಿಕ ಕೇಂದ್ರವಾಗಿ ಹೊರಹೊಮ್ಮಿದರೆ ಬೆಂಗಳೂರು ವಿಶ್ವವಿದ್ಯಾಲಯಕ್ಕೇನು ನಷ್ಟ? ಮಿಗಿಲಾಗಿ ವಿಶ್ವವಿದ್ಯಾಲಯದ ಸ್ವಾಯತ್ತತೆಯ ಜೊತೆಗೆ ಅದಕ್ಕಿಂತ ಮುಖ್ಯವಾದುದು ಅದರೊಳಗಿರುವ ವಿವಿಧ ವಿಭಾಗಗಳ ಮತ್ತು ಬೋಧಕ ವರ್ಗದವರ ಸ್ವಾಯತ್ತತೆ. ಅದರ ಬಗ್ಗೆ ಮಾತನಾಡಿದ ಯಾವುದೇ ಸಿಂಡಿಕೇಟ್ ಸದಸ್ಯರನ್ನೂ ನಾನು ಕಂಡಿಲ್ಲ. ಶ್ರೇಣೀಕೃತ ವ್ಯವಸ್ಥೆಯೇ ಪ್ರಧಾನವಾಗಿರುವ ಇಂದಿನ ವಿಶ್ವವಿದ್ಯಾಲಯಗಳಲ್ಲಿ, ಪ್ರಜಾಸತ್ತಾತ್ಮಕ ನಡವಳಿಕೆಗಳು ಮತ್ತು ನಿಜವಾದ ಸ್ವಾಯತ್ತತೆಯೇ ಮರೆಯಾಗಿರುವಂತಹುದು.

ಕ್ಷುಲ್ಲಕ ತಕರಾರುಗಳಿಂದ ಈ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದ್ದರೂ ನನ್ನ ಆಸಕ್ತಿಯಿದ್ದುದು ನಾನು ಅಂಕಣದ ಪ್ರಾರಂಭದಲ್ಲಿ ಕೇಳಿದ ಪ್ರಶ್ನೆಯ ಹಿನ್ನೆಲೆಯಲ್ಲಿ ನಮ್ಮ ಚರ್ಚೆಯನ್ನು ವಿಸ್ತರಿಸಬೇಕೆಂದು. ಒಂದು ವೇಳೆ ಈ ಯೋಜನೆ ಮುಂದುವರಿದು ಕಟ್ಟಡ ನಿರ್ಮಾಣಗೊಂಡು, ಹೊಸ ಜಿಂದಾಲ್ ಅರ್ಥಶಾಸ್ತ್ರ ಶಾಲೆ ಅಸ್ತಿತ್ವಕ್ಕೆ ಬಂದರೆ, ಒಂದು ವಿಶ್ವಮಟ್ಟದ ಸಂಸ್ಥೆಯನ್ನು ಕಟ್ಟಲು ರೂಪಿಸಬೇಕಾಗುವ ಶೈಕ್ಷಣಿಕ ಮತ್ತು ಬೌದ್ಧಿಕ ಯೋಜನೆಗಳಾವುವು? ಮಾಡಬೇಕಾಗುವ ಬದಲಾವಣೆಗಳೇನು? ಇದು ನಾನಿಲ್ಲಿ ಚರ್ಚಿಸಬಯಸುವ ಎರಡನೆಯ ಮತ್ತು ನಿಜವಾಗಿಯೂ ಸಂಕೀರ್ಣವಾದ ಅಂಶ. 

ಸರಳ ಸತ್ಯವೆಂದರೆ ಈಗಿರುವ ಬೋಧಕವರ್ಗ ಮತ್ತು ಪಠ್ಯಕ್ರಮಗಳನ್ನೇ ಉಳಿಸಿಕೊಂಡು ವಿಶ್ವದರ್ಜೆಯ ಶಿಕ್ಷಣ ಕೊಡುವುದು ಅಸಾಧ್ಯದ ಮಾತು. ಪ್ರೊ. ನಂಜುಂಡಪ್ಪ ಅಥವಾ ಪ್ರೊ.ವೆಂಕಟಗಿರಿ ಗೌಡರಂತಹವರು ಈ ವಿಭಾಗಗಳಲ್ಲಿಲ್ಲ. ಇದು ಬೆಂಗಳೂರು ವಿಶ್ವವಿದ್ಯಾಲಯದ ಒಂದು ವಿಭಾಗಕ್ಕೆ ಸೀಮಿತವಾದ ಮಾತಲ್ಲ, ಬದಲಿಗೆ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಸಾಮಾಜಿಕ ಮತ್ತು ಮಾನವಿಕ ವಿಜ್ಞಾನಗಳಿಗೆ ಅನ್ವಯವಾಗುವ ವಿಚಾರ. ಇದಕ್ಕೆ
ಕಾರಣ ಕೂಡ ಎಲ್ಲರಿಗೂ ತಿಳಿದಿರುವುದೇ. ಕಳೆದ ನಾಲ್ಕು ದಶಕಗಳಲ್ಲಿ ಜಾಗತಿಕವಾಗಿ ಉತ್ಪನ್ನವಾಗುತ್ತಿರುವ ಹೊಸ ಜ್ಞಾನಕ್ಕೆ ನಾವು ತೆರೆದುಕೊಂಡಿಲ್ಲ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮತ್ತು ಬೋಧನೆ ಮಾಡಿರುವವರನ್ನು ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಕರೆತರುತ್ತಿಲ್ಲ. ಉದಾಹರಣೆಗೆ ದೆಹಲಿ ಸ್ಕೂಲ್‌ನ ಅರ್ಥಶಾಸ್ತ್ರ ವಿಭಾಗದ ಬೋಧಕವರ್ಗವನ್ನು ಗಮನಿಸಿ. 23 ಮಂದಿ ಪ್ರಾಧ್ಯಾಪಕರ ಪೈಕಿ 15  ಜನರು ಅಮೆರಿಕ ಇಲ್ಲವೇ ಯುರೋಪಿನಲ್ಲಿ  ಹಾಗೂ 5 ಮಂದಿ ಪ್ರತಿಷ್ಠಿತ  ಜೆ.ಎನ್.ಯು.ನ ಅರ್ಥಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ಮಾಡಿದವರು. ಕರ್ನಾಟಕದ ಯಾವ ವಿಶ್ವವಿದ್ಯಾಲಯದ ಯಾವುದೇ ವಿಭಾಗದ ಬಗ್ಗೆ ಈ ಮಾತು ಹೇಳಲಾಗುವುದಿಲ್ಲ. ಹಾಗಾಗಿಯೇ ನಮ್ಮ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಬೌದ್ಧಿಕ ಚಟುವಟಿಕೆಗಳು ಕೇವಲ ಹಿಂದುಳಿದಿಲ್ಲ. ಬದಲಿಗೆ ತಮ್ಮ ಕ್ಷೇತ್ರಗಳಲ್ಲಿಯೇ ಹೊರ ಜಗತ್ತಿನಲ್ಲಿ ಏನಾಗುತ್ತಿದೆಯೋ ಅದಕ್ಕೆ ಯಾವುದೇ ಸಂಬಂಧವೂ ಇಲ್ಲದಂತೆ ನಡೆಯುತ್ತಿವೆ.

ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಅದಕ್ಕೆ ಸದಸ್ಯರನ್ನು ನೇಮಿಸುವ ಸರ್ಕಾರ ತನ್ನ ಗಮನವನ್ನು ಹರಿಸಬೇಕಾಗಿದ್ದುದು ಇಂತಹ ಬಿಕ್ಕಟ್ಟಿನ ವಾಸ್ತವದತ್ತ. ಹೊಸಸೌಕರ್ಯಗಳನ್ನು ಮತ್ತು ಸ್ವಾಯತ್ತತೆಯನ್ನು ಕೊಡುವಾಗ, ಅದನ್ನು ಜವಾಬ್ದಾರಿಯಿಂದ ನಿರ್ವಹಿಸಬಲ್ಲ ವೃತ್ತಿಪರರನ್ನೂ ಕರೆತರಬೇಕಾಗುತ್ತದೆ. ಜಿಂದಾಲ್ ಶಾಲೆ ಯೋಜನೆ ಅನುಷ್ಠಾನಗೊಂಡಿದ್ದರೆ ಅಂತಹ ಒಂದು ಪ್ರಯೋಗ ಅನಿವಾರ್ಯವಾಗುತ್ತಿತ್ತು. ಎಲ್.ಎಸ್.ಇ. ಮಾದರಿಯಲ್ಲಿ ಸಂಸ್ಥೆ ಕಟ್ಟಬೇಕೆನ್ನುವ ಆಶಯ ಹೊಂದಿದ್ದರೆ ಮಾತ್ರ ಸಾಲದು. ಅಲ್ಲಿನಂತೆ ಜಗತ್ತಿನೆಲ್ಲೆಡೆಯಿಂದ ವಿದ್ಯಾರ್ಥಿಗಳನ್ನು, ಪ್ರಾಧ್ಯಾಪಕರನ್ನು ಕರೆತರುವ ಛಲವಿರಬೇಕು. ಅಲ್ಲಿರುವಂತಹ ಜಗತ್ತಿನಲ್ಲಿಯೇ ಅತ್ಯುತ್ತಮವಾದ ಸಮಾಜವಿಜ್ಞಾನಗಳ ಗ್ರಂಥಾಲಯವನ್ನು ಕಟ್ಟುವ ಹಟವಿರಬೇಕು. ಕೇವಲ ಅರ್ಥಶಾಸ್ತ್ರ ಮಾತ್ರವಲ್ಲ, ನಮ್ಮ ಇಂದಿನ ಜಾಗತಿಕ ಅರ್ಥವ್ಯವಸ್ಥೆಯನ್ನು ಅರಿಯಲು ಅಗತ್ಯವಿರುವ ಅಂತರಶಿಸ್ತೀಯ ಅಧ್ಯಯನದ ಬಗ್ಗೆ ಬದ್ಧತೆಯಿರಬೇಕು. ಹಾಗಾದಾಗ ಮಾತ್ರ ಹೊಸ ಚಿಂತನೆ, ಹೊಸ ತಾತ್ವಿಕತೆ ಹುಟ್ಟುತ್ತದೆ. ಇಂದು ವಿಶ್ವವಿದ್ಯಾಲಯಗಳು ತಮ್ಮ ಹೆಸರಿಗೆ ತಕ್ಕಂತೆ ಇಲ್ಲದೆ, ತಮ್ಮ ವ್ಯಾಪ್ತಿಗೆ ಬರುವ ಮೂರು ಜಿಲ್ಲೆಗಳ ಸಾಮಾಜಿಕ ಮತ್ತು ರಾಜಕೀಯ ಪ್ರಭಾವಕ್ಕೆ ಒಳಗಾಗುವ ಸಂಸ್ಥೆಗಳಾಗಿವೆ. ಇದನ್ನು ಸರಿಪಡಿಸುವುದು ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT