ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ವಲಸಿಗರು ಮತ್ತು ಮೂಲ ನಿವಾಸಿಗಳ ಸಂಘರ್ಷ

Last Updated 28 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಇತ್ತೀಚಿನ ಯಾವುದೇ ಲೋಕಭಿರಾಮದ ಮಾತುಕತೆಯಲ್ಲಿ ಒಂದಲ್ಲಾ ಒಂದು ಹಂತದಲ್ಲಿ ತಮ್ಮ ಮಕ್ಕಳ ‘ಡಿಜಿಟಲ್ ತಜ್ಞತೆ’ಯ ಮಾತು ಬಂದೇ ಬರುತ್ತದೆ. ‘ಹೊಸ ಫೋನ್ ಖರೀದಿಸಿದೆ. ಅದರಲ್ಲಿ ಇರುವ ವಿಷಯವೆಲ್ಲಾ ಅವನಿಗೆ/ಅವಳಿಗೆ ಗೊತ್ತು. ನಾನು ಮ್ಯಾನ್ಯುಯಲ್‌ನಲ್ಲಿ ಪುಟ ಹುಡುಕುತ್ತಿದ್ದರೆ ಅವನು/ಳು ಮಾಡಬೇಕಾಗಿರುವುದನ್ನು ಮಾಡಿ ಆಗಿರುತ್ತದೆ’. ಈ ಮಾತುಕತೆಯಲ್ಲಿ ಬರುತ್ತಿರುವ ಮಕ್ಕಳೇನೂ ಕಾಲೇಜು ಕಲಿಯುತ್ತಿರುವವರಲ್ಲ. ಇವರೆಲ್ಲಾ ಪೂರ್ವ ಪ್ರಾಥಮಿಕ ಹಂತದಲ್ಲಿಯೋ ಅಥವಾ ಪ್ರಾಥಮಿಕ ಹಂತದಲ್ಲಿಯೋ ಇರುವವರು. ಇವರ ಶಕ್ತಿ ಎಷ್ಟರ ಮಟ್ಟಿಗಿರುತ್ತದೆಯೆಂದರೆ ಮನೆಯಲ್ಲಿ ಅಜ್ಜ ಅಥವಾ ಅಜ್ಜಿ ಇದ್ದರೆ ಅವರಿಗೆ ಮೊಬೈಲ್ ಫೋನ್ ಬಳಕೆಯನ್ನು ಕಲಿಸುವುದೇ ಇವರು. ಅನೇಕ ಸಂದರ್ಭದಲ್ಲಿ ಅಜ್ಜ ಅಥವಾ ಅಜ್ಜಿಯ ಮೊಬೈಲ್‌ ಫೋನ್‌ನ ನಿರ್ವಹಣೆ ಇವರದ್ದೇ ಆಗಿರುತ್ತದೆ. 

ಸ್ಮಾರ್ಟ್ ಫೋನ್‌ಗಳ ಮಟ್ಟಿಗಿಂತೂ ಅಪ್ಪ–ಅಮ್ಮಂದಿರಿಗಿಂತ ಇವರೇ ಸ್ಮಾರ್ಟ್. ಪಾಲಕರಿಗೆ ಗೊತ್ತಿಲ್ಲದೆಯೇ ಗೇಮ್‌ಗಳು ಫೋನ್ ಸೇರಿರುತ್ತವೆ. ಅಷ್ಟೇ ಅಲ್ಲ ಅವುಗಳಲ್ಲಿ ಈ ಪುಟಾಣಿಗಳು ಚೆನ್ನಾಗಿ ಪಳಗಿರುತ್ತಾರೆ.

ಇದೇನು ಕೇವಲ ಭಾರತಕ್ಕೆ ಸೀಮಿತವಾದ ಸಂಗತಿ ಅಲ್ಲ. ನಮಗಿಂತ ಮೊದಲೇ ಸಂಪರ್ಕ ಕ್ರಾಂತಿಯ ಫಲಗಳನ್ನು ಅನುಭವಿಸಿರುವ ದೇಶಗಳ ಮಕ್ಕಳಲ್ಲೂ ಇಂಥದ್ದೇ ಪ್ರವೃತ್ತಿ ಇದೆ. ಕಳೆದ ವರ್ಷ ಅಮೆರಿಕದಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶಗಳು ಕುತೂಹಲಕಾರಿಯಾಗಿವೆ. ನಮ್ಮ ದೃಷ್ಟಿಯಲ್ಲಿ ಅಮೆರಿಕ ನಮಗಿಂತ ಮೊದಲೇ ಡಿಜಿಟಲ್ ಯುಗಕ್ಕೆ ತೆರೆದುಕೊಂಡ ದೇಶ. ಆದರೆ ಅಲ್ಲಿನ ತಂದೆ–ತಾಯಿಗಳಲ್ಲಿ ಸಾಮಾಜಿಕ ಜಾಲ ತಾಣದ ಖಾತೆಗಳನ್ನು ರೂಪಿಸಿಕೊಳ್ಳುವಾಗ ಮಕ್ಕಳ ಸಲಹೆ ಪಡೆಯುವವರ ಪ್ರಮಾಣ ಶೇಕಡಾ 71. ಇದು ಕೇವಲ ಸಾಮಾಜಿಕ ಜಾಲ ತಾಣಕ್ಕೆ ಸಂಬಂಧಿಸಿದ ಮಾತ್ರ ವಿಚಾರವಲ್ಲ. ಇದು ವೈಯಕ್ತಿಕ ಗ್ಯಾಜೆಟ್‌ಗಳ ಬಳಕೆಗೆ ಸಂಬಂಧಿಸಿದಂತೆಯೂ ನಿಜವೇ.

ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಬಳಸಲಾಗುವ ಸಾಮಾನ್ಯ ಸಾಫ್ಟ್‌ವೇರ್‌ಗಳಿಂದ ಆರಂಭಿಸಿ ಮೊಬೈಲ್, ಟ್ಯಾಬ್‌ಗಳಂಥ ಗ್ಯಾಜೆಟ್‌ಗಳ ಸಾಫ್ಟ್‌ವೇರ್‌ಗಳ ತನಕದ ಎಲ್ಲವನ್ನೂ ಸಾಮಾನ್ಯ ಬಳಕೆದಾರರಿಗೆ ಅನುಕೂಲವಾಗುವಂತೆಯೇ ರೂಪಿಸಲಾಗುತ್ತಿದೆ. ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನೋ ಅಥವಾ ಮಕ್ಕಳು ಸುಲಭದಲ್ಲಿ ಬಳಸಲು ಸಾಧ್ಯವಾಗುವಂಥದ್ದೇನನ್ನೂ ನೀಡಿಲ್ಲ. ಆದರೂ ಮಕ್ಕಳೇಕೆ ಇವುಗಳನ್ನು ತಮ್ಮ ಹಿರಿಯರಿಗಿಂತ ಲೀಲಾಜಾಲವಾಗಿ ಬಳಸುತ್ತಾರೆ? ಇದಕ್ಕೆ ಮಕ್ಕಳ ನಡವಳಿಕೆಯನ್ನು ಅಭ್ಯಸಿಸಿರುವವರು ಕಂಡು ಕೊಂಡಿರುವ ಒಂದು ಉತ್ತರ ‘ಮಕ್ಕಳು ಇವುಗಳನ್ನು ಮಕ್ತ ಮನಸ್ಸಿನಿಂದ ಅರಿಯಲು ಪ್ರಯತ್ನಿಸುತ್ತಾರೆ!’

ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ತಂತ್ರಜ್ಞರಲ್ಲದ ಕಂಪ್ಯೂಟರ್ ಬಳಕೆದಾರರನ್ನು ಗಮನಿಸಬೇಕು. ಇವರ ಕಂಪ್ಯೂಟರ್ ಬಳಕೆ ಎಂಬುದು ಇಂಟರ್‌ನೆಟ್‌ನಿಂದ ಯಾವುದಾದರೂ ಮಾಹಿತಿಯನ್ನು ಪಡೆಯುವುದು, ಇ–ಮೇಲ್ ಬಳಸುವುದು, ದಾಖಲೆಗಳನ್ನು ಸಿದ್ಧಪಡಿಸುವುದು, ಛಾಯಾಚಿತ್ರಗಳನ್ನು ಸಂಗ್ರಹಿಸುವುದು ಅಥವಾ ಅವುಗಳನ್ನು ಉತ್ತಪಡಿಸಲು ಪ್ರಯತ್ನಿಸುವುದು ಇಂಥ ಕೆಲವೇ ಕೆಲವು ಕ್ರಿಯೆಗಳಿಗೆ ಸೀಮಿತವಾಗಿರುತ್ತದೆ. ಆದ್ದರಿಂದ ಒಂದು ಸಣ್ಣ ಸಮಸ್ಯೆ ಎದುರಾದರೂ ಈ ಬಳಕೆದಾರರು ‘ತಜ್ಞ’ರ ನೆರವು ಪಡೆಯಲು ಧಾವಿಸುತ್ತಾರೆ. ಇವರು ಮೊಬೈಲ್ ಫೋನ್ ಬಳಕೆಯ ಸಂದರ್ಭದಲ್ಲಿ ಮಾಡುವುದೂ ಇದನ್ನೇ. ಜೇಬಿನಲ್ಲೇ ಸ್ಮಾರ್ಟ್ ಫೋನ್ ಇಟ್ಟುಕೊಂಡು ಇ–ಮೇಲ್ ಚೆಕ್ ಮಾಡುವುದಕ್ಕಾಗಿ ಕಂಪ್ಯೂಟರ್ ಹುಡುಕುವವರ ಸಂಖ್ಯೆ ಸಣ್ಣದೇನೂ ಇಲ್ಲ.

ಮಕ್ಕಳಿಗೆ ಇಂಥ ಸಮಸ್ಯೆಗಳಿಲ್ಲ. ಅವರ ಮಟ್ಟಿಗೆ ಎಲ್ಲಾ ಗ್ಯಾಜೆಟ್‌ಗಳೂ ಒಂದು ಆಟಿಕೆ. ಹಿರಿಯರಂತೆ ಏನಾದರೂ ಸಮಸ್ಯೆ ಎದುರಾದರೆ ಮ್ಯಾನ್ಯುಯಲ್ ಓದುವ ಅಥವಾ ಗೊತ್ತಿರುವವರನ್ನು ಕೇಳುವುದು ಅವರಿಗೆ ಸಾಧ್ಯವಿಲ್ಲ. ಆಚೀಚೆ ನೋಡಿ, ಅಲ್ಲಿರುವ ವಿವಿಧ ಮೆನುಗಳನ್ನು ಒತ್ತಿ ಏನೋ ಒಂದನ್ನು ಕಂಡುಕೊಳ್ಳುತ್ತಾರೆ. ಒಮ್ಮೆ ಇಂಥದ್ದನ್ನು ಕಂಡುಕೊಂಡರೆಂದರೆ ಅದರ ತರ್ಕವೂ ಅವರಿಗೆ ಕರಗತವಾಗುತ್ತದೆ. ಇಷ್ಟಕ್ಕೂ ಎಲ್ಲಾ ಸಾಫ್ಟ್‌ವೇರ್‌ಗಳು ಹೆಚ್ಚೂ ಕಡಿಮೆ ಒಂದೇ ಬಗೆಯ ತರ್ಕವನ್ನು ಬಳಸಿರುತ್ತವೆ. ಆದ್ದರಿಂದ ಅವರು ಕೆಲವೇ ದಿನಗಳಲ್ಲಿ ‘ತಜ್ಞ’ರಾಗಿಬಿಡುತ್ತಾರೆ.

ಡಿಜಿಟಲ್ ತಂತ್ರಜ್ಞಾನದಲ್ಲಿ ಮಕ್ಕಳು ಪಡೆಯುವ ತಜ್ಞತೆ ಬೇರೊಂದು ಬಗೆಯ ಸಮಸ್ಯೆಗೂ ಕಾರಣವಾಗುತ್ತದೆ. ಅಂದು ಸಂವಹನದ ಸಮಸ್ಯೆ. ಅಮೆರಿಕ ಮತ್ತು ಯೂರೋಪ್‌ನಲ್ಲಿ ಸಂಪೂರ್ಣ ಡಿಜಿಟಲ್ ತಂತ್ರಜ್ಞಾನದ ಜೊತೆಗೇ ಬೆಳೆದು ವಯಸ್ಕರಾಗಿರುವ ಒಂದು ತಲೆಮಾರಿದೆ. ಇವರ ಭಾಷೆ, ಸಂಸ್ಕೃತಿಗಳೆಲ್ಲವೂ ಭಿನ್ನ. ಜಗತ್ತನ್ನು ಇವರು ನೋಡುವ ಬಗೆಯ ಭಿನ್ನ. ಇವರನ್ನು ಶಾಲೆಯಲ್ಲಿ ಸಂಬಾಳಿಸುವುದು ಹೇಗೆ ಎಂಬುದು ಅಮೆರಿಕಕ್ಕೆ ಒಂದು ತಲೆನೋವಾಗಿದೆ. ಹೊಸ ತಲೆಮಾರಿನ ಅಧ್ಯಾಪಕರು ಇದನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿಕೊಂಡಿದ್ದಾರೆ.

ಈ ಸಮಸ್ಯೆಯ ಕುರಿತಂತೆ ಮೊದಲು ವಿವರವಾಗಿ ಬರೆದದ್ದು ಯೇಲ್ ವಿಶ್ವವಿದ್ಯಾಲಯದ ಮಾರ್ಕ್ ಪ್ರೆನ್‌ಸ್ಕಿ. 2001ರಲ್ಲಿ ಪ್ರಕಟವಾದ ಈತನ ‘Digital Natives, Digital Immigrants’ ಪ್ರಬಂಧ ಡಿಜಿಟಲ್ ವಲಸಿಗರು ಮತ್ತು ಡಿಜಿಟಲ್ ಮೂಲನಿವಾಸಿಗಳು ಎಂಬ ಪರಿಕಲ್ಪನೆಗಳನ್ನು ಮುಂದಿಟ್ಟಿತು. ಈತ ಹೇಳುವ ಡಿಜಿಟಲ್ ವಲಸಿಗರ ಸಂಖ್ಯೆ ಸದ್ಯಕ್ಕೆ ಭಾರತದಲ್ಲಿ ದೊಡ್ಡದು. ಭಾರತದ ಡಿಜಿಟಲ್ ಮೂಲನಿವಾಸಿಗಳಲ್ಲಿ ಹೆಚ್ಚಿನವರಿನ್ನೂ ತಮ್ಮ ಶೈಶವದಲ್ಲೂ ಕೌಮಾರ್ಯದ ಆರಂಭದಲ್ಲೂ ಇದ್ದಾರೆ. ಇವರು ಹದಿಹರೆಯಕ್ಕೆ ಬರುವ ಹೊತ್ತಿಗೆ ಅಮೆರಿಕ ಮತ್ತು ಯೂರೋಪ್‌ಗಳು ಅನುಭವಿಸಿದ ಸಮಸ್ಯೆ ಏನೆಂಬುದು ನಮಗೂ ಅರ್ಥವಾಗಬಹುದು. ಅಥವಾ ಎಲ್ಲ ಬಗೆಯ ಆಧುನಿಕತೆಯನ್ನೂ ತನ್ನದೆ ಆದ ರೀತಿಯಲ್ಲಿ ಅರಗಿಸಿಕೊಂಡ ಭಾರತ ಇದನ್ನೂ ಬೇರೊಂದು ಬಗೆಯಲ್ಲಿ ನಿರ್ವಹಿಸಬಹುದು.

ಮಕ್ಕಳು ಡಿಜಿಟಲ್ ತಂತ್ರಜ್ಞಾನವನ್ನು ಬೇಗ ಅರಿತುಕೊಳ್ಳುವುದು ಹೇಗೆ ಎಂಬುದಕ್ಕೆ ಪ್ರೆನ್‌ಸ್ಕಿಯ ಪರಿಕಲ್ಪನೆಯಲ್ಲಿ ಕೆಲ ಉತ್ತರಗಳಿವೆ. ಈಗಿನ ಮಕ್ಕಳು ಡಿಜಿಟಲ್ ಮೂಲ ನಿವಾಸಿಗಳು. ಅವರು ಹುಟ್ಟುವ ಹೊತ್ತಿಗಾಗಲೇ ಇಂಟರ್‌ನೆಟ್ ಇತ್ತು. ಮೊಬೈಲ್ ಫೋನ್ ಇತ್ತು. ಸ್ಮಾರ್ಟ್ ಬಂದಿತ್ತು. ಸ್ಮಾರ್ಟ್ ಟಿ.ವಿ.ಯೂ ಬಂದಿರುವ ಕಾಲವಿದು. ಸರಳವಾಗಿ ಹೇಳುವುದಾದರೆ ಇವರೆಲ್ಲರೂ ಡಿಜಿಟಲ್ ಸಾಧನಗಳ ಮಧ್ಯೆಯೇ ಬೆಳೆಯುತ್ತಿರುವವರು. ಹಾಗಾಗಿ ಅದನ್ನು ಕಲಿಯುವುದು ಅವರಿಗೆ ಸುಲಭ. ಅವರ ತಂದೆ–ತಾಯಿ ಕ್ರಿಕೆಟ್‌ನ ನಿಯಮಗಳನ್ನು ಕಲಿತಷ್ಟೇ ಸಹಜವಾಗಿ ಅವರು ಆ್ಯಂಗ್ರಿ ಬರ್ಡ್‌ನ ನಿಯಮಗಳನ್ನು ಕಲಿಯುತ್ತಿದ್ದಾರೆ.

ಈ ಮಕ್ಕಳ ತಂದೆ–ತಾಯಿಗಳೆಲ್ಲರೂ ಡಿಜಿಟಲ್ ವಲಸಿಗರು. ಇವರಿಗೆ ಎಲ್ಲಾ ವಲಸಿಗರಿಗೆ ಇರುವ ಸಮಸ್ಯೆ ಇದ್ದೇ ಇದೆ. ವಲಸಿಗರು ಸ್ಥಳೀಯ ಸಂಸ್ಕೃತಿಯನ್ನು ನಿಧಾನವಾಗಿ ಮತ್ತು ಪ್ರಜ್ಞಾಪೂರ್ವಕ­ವಾಗಿ ತಮ್ಮದಾಗಿಸಿಕೊಳ್ಳ ಬೇಕಾಗುತ್ತದೆ. ಸ್ಥಳೀಯ ಭಾಷೆಯನ್ನೂ ಅಷ್ಟೇ ಪ್ರಜ್ಞಾಪೂರ್ವಕವಾಗಿ ಕಲಿಯಬೇಕಾಗುತ್ತದೆ. ಎಷ್ಟೇ ಎಚ್ಚರಿಕೆಯಿಂದ ಕಲಿತರೂ ಮಾತನಾಡುವಾಗ ಆ್ಯಕ್ಸೆಂಟ್ ಉಳಿದು­ಕೊಂಡೇ ಇರುತ್ತದೆ.

ಇದಕ್ಕೆ ಅಪವಾದ­ವೆನಿಸುವಂಥ ಕೆಲವರಿರಬಹುದಷ್ಟೇ. ಆದ್ದರಿಂದ ಇವರು ಡಿಜಿಟಲ್ ಸಂಸ್ಕೃತಿಯನ್ನು ಎಷ್ಟೇ ತಮ್ಮದಾಗಿಸಿಕೊಂಡರೂ ಆಗಲೇ ರೂಢಿಯಾಗಿಬಿಟ್ಟಿದ್ದ ಅನಲಾಗ್ ಜಗತ್ತಿನ ಪರ್ಯಾಯವಾಗಿಯೇ ಇದನ್ನು ಕಾಣುತ್ತಿರುತ್ತಾರೆ. ಕಿಸೆಯಲ್ಲಿ ಅತ್ಯುತ್ತಮವಾದ ಬಹುಬಳಕೆ ಸಾಧ್ಯವಿರುವ ಸ್ಮಾರ್ಟ್ ಫೋನ್ ಇದ್ದರೂ ಇ–ಪುಸ್ತಕ ಖರೀದಿಸಲು ಮುಂದಾಗುವುದಿಲ್ಲ. ‘ಫೋನಿರುವುದು ಮಾತನಾಡುವುದಕ್ಕೆ. ಪುಸ್ತಕ ಓದುವುದಕ್ಕಲ್ಲ’ ಎಂದ ತರ್ಕದ ಜೊತೆಗೆ ಮುಂದುವರಿಯುತ್ತಾರೆ. ಇಂಥವರನ್ನು ಒಲಿಸಿ­ಕೊಳ್ಳುವುದಕ್ಕಾಗಿ ಇ–ಬುಕ್ ರೀಡರ್‌ಗಳು ಮುದ್ರಿತ ಪುಸ್ತಕದ ಮಾದರಿಯನ್ನೇ ಅನೇಕ ಬಗೆಯಲ್ಲಿ ನಕಲು ಮಾಡಿವೆ. ಉದಾಹರಣೆಗೆ ಪುಟ ಮಗುಚಿಕೊಳ್ಳುವ ಬಗೆ. ಪುಟ ಸಂಖ್ಯೆ ಇತ್ಯಾದಿಗಳೆಲ್ಲವೂ ಇದರ ಫಲವೇ. ವಾಸ್ತವದಲ್ಲಿ ಇ–ಬುಕ್‌ನ ಸಂದರ್ಭದಲ್ಲಿ ಪುಟ ಸಂಖ್ಯೆ ಎಂಬುದಕ್ಕೆ ಅರ್ಥವೇ ಇಲ್ಲ. ನಾವು ಓದಲು ಬಳಸುವ ಪರದೆಯ ಗಾತ್ರಕ್ಕೆ ಅನುಗುಣವಾಗಿ ಪುಟ ಸಂಖ್ಯೆ ನಿರ್ಧಾರವಾಗುತ್ತದೆ. ಈ ಸಂಖ್ಯೆಯನ್ನು ಎಲ್ಲಾದರೂ ಉಲ್ಲೇಖಿಸಲು ಬರುವುದಿಲ್ಲ. ಆದರೂ ಇದು ಡಿಜಿಟಲ್ ವಲಸಿಗರಿಗೆ ಬೇಕು.

ಡಿಜಿಟಲ್ ಮೂಲ ನಿವಾಸಿಗಳು ಮತ್ತು ವಲಸಿಗರ ನಡುವಣ ಸಂಘರ್ಷ ಮೊದಲ ಸಂಘರ್ಷದ ವೇದಿಕೆ ಶಾಲೆಗಳು. ಏಕೆಂದರೆ ಇಲ್ಲಿ ಕಲಿಸುವ ಅಧ್ಯಾಪಕರೆಲ್ಲರೂ ಡಿಜಿಟಲ್ ವಲಸಿಗರಾಗಿರುತ್ತಾರೆ. ಕಲಿಯಲು ಬಂದಿರುವ ವಿದ್ಯಾರ್ಥಿಗಳೆಲ್ಲಾ ಡಿಜಿಟಲ್ ಮೂಲ ನಿವಾಸಿಗಳು. ವಲಸಿಗರ ಬೋಧನಾ ಮಾದರಿಗಳು ಮೂಲ ನಿವಾಸಿಗಳ ಮಟ್ಟಿಗೆ ಅಪ್ರಸ್ತುತವಾಗಿರುತ್ತವೆ.

ಶಾಲೆಯಲ್ಲಿ ಮೊಬೈಲ್ ಬಳಕೆ ನಿಷೇಧ ಎಂಬುದೆಲ್ಲಾ ಆರಂಭದ ದಿನಗಳಲ್ಲಿ ಸಾಧ್ಯ. ಪಠ್ಯ ಪುಸ್ತಕಗಳನ್ನೆಲ್ಲಾ ಟ್ಯಾಬ್‌ನಲ್ಲಿ ಇಟ್ಟುಕೊಳ್ಳಬೇಕಾದ ಸಂದರ್ಭದಲ್ಲಿ ಇಂಥ ನಿಷೇಧಗಳಿಗೆ ಅರ್ಥವಿರುವುದಿಲ್ಲ. ಗೂಗಲ್ ನೀಡುವ ಉತ್ತರಕ್ಕಿಂತ ಭಿನ್ನವಾದುದನ್ನು ಹೇಳಿಕೊಡುವುದಕ್ಕೆ ಡಿಜಿಟಲ್ ವಲಸಿಗ ಸಮುದಾಯಕ್ಕೆ ಸೇರಿದ ಶಿಕ್ಷಕರು ತಿಣುಕಾಡಬೇಕಾಗುತ್ತದೆ. ಅಮೆರಿಕದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಇಂಥದ್ದೊಂದು ಸಮಸ್ಯೆಯನ್ನು ಈಗಾಗಲೇ ಎದುರಿಸಿ ತರಗತಿ ಕಲಿಕೆ–ಬೋಧನೆಯ ಪರಿಕಲ್ಪನೆಯನ್ನೇ ಬದಲಾಯಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿದೆ. ನಮ್ಮ ಭವಿಷ್ಯವೂ ಇದಕ್ಕೆ ಭಿನ್ನವೇನೂ ಅಲ್ಲ. ನಾವು ಅದನ್ನು ಹೇಗೆ ಎದುರಿಸುತ್ತೇವೆಂಬುದು ಕಾದು ನೋಡಬೇಕಾದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT